ADVERTISEMENT

ಒಳನೋಟ: ಈಗಲೂ ಸಮುದಾಯ ಭವನವೇ ಆಸರೆ!

ಎಂ.ಮಹೇಶ
Published 3 ಜುಲೈ 2021, 21:09 IST
Last Updated 3 ಜುಲೈ 2021, 21:09 IST
ಕೃಷ್ಣಾ ನದಿ ಪ್ರವಾಹದಿಂದ ಮನೆ ಕಳೆದುಕೊಂಡ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಮಲ್ಲಿಕಾರ್ಜುನ ಕುರಳೆ ಕುಟುಂಬ ಸಮುದಾಯ ಭವನದಲ್ಲಿ ವಾಸವಿದೆ. ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಕೃಷ್ಣಾ ನದಿ ಪ್ರವಾಹದಿಂದ ಮನೆ ಕಳೆದುಕೊಂಡ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಮಲ್ಲಿಕಾರ್ಜುನ ಕುರಳೆ ಕುಟುಂಬ ಸಮುದಾಯ ಭವನದಲ್ಲಿ ವಾಸವಿದೆ. ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದಲ್ಲಿ 2019ರಲ್ಲಿ ಕೃಷ್ಣಾ ನದಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದ ಎರಡು ಕುಟುಂಬಗಳು ಈಗಲೂ ಸಮುದಾಯ ಭವನದಲ್ಲೇ ಜೀವನ ಸಾಗಿಸುತ್ತಿವೆ.

ಮಲ್ಲಿಕಾರ್ಜುನ ಧನಪಾಲ ಕುರಳೆ ಮತ್ತು ಸಹೋದರನ ಕುಟುಂಬದವರು ಸಮಾಜ ಕಲ್ಯಾಣ ಇಲಾಖೆಯ ಸಮುದಾಯ ಭವನದ ಮೊದಲ ಮಹಡಿಯ ಸಭಾಂಗಣದಲ್ಲಿ ಸೀರೆ ಮತ್ತು ಹೊದಿಕೆಗಳನ್ನು ಅಡ್ಡಕಟ್ಟಿ ವಾಸ ಮಾಡುತ್ತಿದ್ದಾರೆ. ಮಕ್ಕಳು ಸೇರಿ ಆರು ಮಂದಿ ಇಲ್ಲಿದ್ದಾರೆ. ನೆರೆ ಬಂದು ಎರಡು ವರ್ಷ ಕಳೆದಿದ್ದರೂ ಸ್ವಂತ ಸೂರು ಕನಸಾಗಿಯೇ ಉಳಿದಿದೆ. ಕೂಲಿಯನ್ನೇ ನಂಬಿರುವ ಇವರಿಗೆ ಮನೆ ಕಟ್ಟಿಕೊಳ್ಳುವಷ್ಟು ಆರ್ಥಿಕ ಚೈತನ್ಯ ಇಲ್ಲ.

‘ಹೊಳೆ ಬಂದಾಗ ನಮ್ಮ ಹೆಂಚಿನ ಮನೆ ಬಿದ್ದುಹೋಯಿತು. ಆಗಿನಿಂದಲೂ ಇಲ್ಲೇ ಇದ್ದೇವೆ. ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಈವರೆಗೂ ಪರಿಹಾರ ಸಿಕ್ಕಿಲ್ಲ. ಶೌಚಕ್ಕೆ ಬಯಲನ್ನೇ ಆಶ್ರಯಿಸಿಕೊಳ್ಳಬೇಕಾದ ಸ್ಥಿತಿ ಇದೆ. ತಾತ್ಕಾಲಿಕ ಪರಿಹಾರವಾಗಿ ನೀಡಿದ ₹ 10ಸಾವಿರವಷ್ಟೆ ಸಿಕ್ಕಿದೆ. ಪಡಿತರ ಚೀಟಿ, ಉತಾರ ಮೊದಲಾದ ದಾಖಲೆಗಳಿಲ್ಲವಾದ್ದರಿಂದ ಪರಿಹಾರ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಮನೆ ಬಿದ್ದಿರುವುದು ಕಣ್ಮುಂದೆಯೇ ಇದ್ದರೂ ಪರಿಹಾರಕ್ಕೆ ಪರಿಗಣಿಸುತ್ತಿಲ್ಲ’ ಎಂದು ಮಲ್ಲಿಕಾರ್ಜುನ ಅಳಲು ತೋಡಿಕೊಂಡರು.

ADVERTISEMENT

‘ನಮ್ಮ ಅಪ್ಪ–ಅಮ್ಮ ಇಲ್ಲಿದ್ದಾಗಲೇ ನಿಧನರಾದರು. 15 ದಿನಗಳಲ್ಲಿ ಭವನದಿಂದ ಖಾಲಿ ಮಾಡುವಂತೆ ಸ್ಥಳೀಯರೇ ಗಡುವು ನೀಡಿದ್ದಾರೆ. ಎಲ್ಲಿ‌ಗೆ ಹೋಗಬೇಕು ಎಂದು ತಿಳಿಯುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

’ಮನೆ ಕಳೆದುಕೊಂಡ ಗ್ರಾಮದ 500ಕ್ಕೂ ಹೆಚ್ಚಿನ ಕುಟುಂಬಕ್ಕೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಅವರೆಲ್ಲರ ಹೆಸರುಗಳು ಪಟ್ಟಿಯಿಂದ ಡಿಲೀಟ್ ಆಗಿವೆ ಎಂಬ ಕಾರಣ ಹೇಳಲಾಗುತ್ತಿದೆ. ಸರ್ಕಾರ ಇತ್ತ ಗಮನಹರಿಸಿ ಅವರಿಗೆ ಪರಿಹಾರ ದೊರಕಿಸಿಕೊಡಬೇಕು’ ಎಂದು ಮುಖಂಡ ರಾಘವೇಂದ್ರ ಲಂಬುಗೋಳ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.