ADVERTISEMENT

ಒಳನೋಟ: ಸಂಕಷ್ಟಕ್ಕೆ ಹಾಪ್‌ಕಾಮ್ಸ್ ಏದುಸಿರು– ಮಾರುಕಟ್ಟೆಗೆ ಹೊಂದದ ವ್ಯಾಪಾರ ಶೈಲಿ

ಕೋವಿಡ್‌ ಅವಧಿ ಹೊರತುಪಡಿಸಿ ನಿರಂತರ ನಷ್ಟ

ಕೆ.ಎಸ್.ಸುನಿಲ್
Published 11 ಫೆಬ್ರುವರಿ 2023, 20:54 IST
Last Updated 11 ಫೆಬ್ರುವರಿ 2023, 20:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಗುಣಮಟ್ಟದ, ತಾಜಾ ಹಣ್ಣು, ತರಕಾರಿಗಳನ್ನು ಗ್ರಾಹಕರಿಗೆಪೂರೈಸುವ ಹಾಗೂ ಮಧ್ಯವರ್ತಿಗಳಿಂದ ಮುಕ್ತ ವಾದ ಮಾರುಕಟ್ಟೆ ಒದಗಿಸುವ ಮಹತ್ವದ ಉದ್ದೇಶದಿಂದ ಸ್ಥಾಪನೆಗೊಂಡ ಹಾಪ್‌ ಕಾಮ್ಸ್‌ (ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ) ದಶಕಗಳ ಕಾಲ ವಹಿವಾಟು ನಡೆಸಿದ ನಂತರವೂ ಆರ್ಥಿಕ ನಷ್ಟ, ಸಿಬ್ಬಂದಿ, ಸೌಲಭ್ಯಗಳ ಕೊರತೆ, ಖಾಸಗಿ ಪೈಪೋಟಿ ಎದುರಿಸಲಾಗದೆ ಬಳಲುತ್ತಿದೆ. ಸಂಸ್ಥೆಯ ಸ್ಥಾಪನೆಯ ಉದ್ದೇಶಗಳೇ ಕಾರ್ಯಗತವಾಗುತ್ತಿಲ್ಲ.

ತೋಟಗಾರಿಕಾ ಪಿತಾಮಹ ಎನಿಸಿರುವ ಎಂ.ಎಚ್. ಮರೀಗೌಡ ಅವರ ದೂರದೃಷ್ಟಿಯ ಫಲವಾಗಿ ಸಂಸ್ಥೆ ಆರಂಭ ವಾಯಿತು. ದ್ರಾಕ್ಷಿ ಬೆಳೆಗೆ ಮಾರುಕಟ್ಟೆ ಕಲ್ಪಿಸಬೇಕು ಎಂಬ ದೃಷ್ಟಿಯಿಂದ 1959ರಲ್ಲಿ ದ್ರಾಕ್ಷಿ ಬೆಳೆಗಾರರ ಸಹಕಾರಿ ಸಂಘ ಆರಂಭವಾಯಿತು. ಇದು ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡು 1965ರಿಂದ ಹಣ್ಣು, ತರಕಾರಿ ವಹಿವಾಟು ಆರಂಭಿಸಿತು.1986–87ರಿಂದ ಹಾಪ್‌ಕಾಮ್ಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ರಾಜ್ಯದಲ್ಲಿ ಅಂದಾಜು 8 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸರಾಸರಿ 1.5 ಕೋಟಿ ಟನ್‌ ಹಣ್ಣು, ತರಕಾರಿ ಬೆಳೆಯಲಾಗುತ್ತಿದೆ. ಈ ಪೈಕಿ ಶೇ 50 ರಿಂದ 60 ರಷ್ಟು ರಾಜ್ಯದಲ್ಲೇ ಬಳಕೆ ಆಗುತ್ತಿದೆ. ಉಳಿದದ್ದು ನೆರೆ ರಾಜ್ಯಗಳಿಗೆ ಪೂರೈಕೆ ಆಗುತ್ತಿದೆ. ಎಪಿಎಂಸಿ ಜತೆಗೆ, ಹಾಪ್‌ಕಾಮ್ಸ್ ಮಳಿಗೆ, ಸೂಪರ್ ಮಾರ್ಕೆಟ್‌ಗಳು, ಅಸಂಘಟಿತ ವಲಯಗಳಲ್ಲಿಯೂ ಉತ್ಪನ್ನಗಳ ಮಾರಾಟ ಮಾಡಲಾಗುತ್ತಿದೆ. ಬೆಳೆಗಾರರಿಂದ ಬೆಂಗಳೂರು ಹಾಪ್‌ಕಾಮ್ಸ್‌ ನಿತ್ಯ ಸರಾಸರಿ 40 ಟನ್‌ ಹಣ್ಣು, ತರಕಾರಿ ಖರೀದಿಸುತ್ತಿದೆ.

ADVERTISEMENT

ಒಂದನೇ ಪುಟದಿಂದ..

ಮುಕ್ತ ಮಾರುಕಟ್ಟೆಯಿಂದ ಎದುರಾಗಿರುವ ಸ್ಪರ್ಧೆಗೆ ಅನುಗುಣವಾಗಿ ತನ್ನ ವಹಿವಾಟು ಶೈಲಿಯನ್ನು ಪರಿಷ್ಕರಿಸಿಕೊಳ್ಳದ ಕಾರಣ ಖಾಸಗಿ ಕಂಪನಿಗಳ ಪೈಪೋಟಿಯೂ ಹೊಡೆತ ನೀಡಿದೆ. ಪರಿಣಾಮ, ನಾಲ್ಕು ಜಿಲ್ಲೆಗಳ ವ್ಯಾಪ್ತಿ ಒಳಗೊಂಡ ಬೆಂಗಳೂರು ಹಾಪ್‌ಕಾಮ್ಸ್ ಸೇರಿದಂತೆ ಬಹುತೇಕ ಜಿಲ್ಲಾ ಹಾಪ್‌ಕಾಮ್ಸ್‌ಗಳೂ ನಷ್ಟದಲ್ಲಿವೆ.

ಚಟುವಟಿಕೆಗಳು ವಿಸ್ತರಣೆ ಆಗದಿರುವುದು, ಉತ್ಪನ್ನಗಳ ದಾಸ್ತಾನಿಗೆ ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ನಿರಾಸಕ್ತಿ, ಮಾರುಕಟ್ಟೆ ಏರಿಳಿತಗಳ ಅಸಮರ್ಪಕ ನಿರ್ವಹಣೆ, ವ್ಯವಸ್ಥಿತ ಪೂರೈಕೆ ಜಾಲ ರೂಪಿಸದೇ ಇರುವುದು, ಕೌಶಲರಹಿತ ಸಿಬ್ಬಂದಿ ಹಾಪ್‌ಕಾಮ್ಸ್ ಏಳಿಗೆಗೆ ಪೆಟ್ಟು ನೀಡಿದೆ.

ಕಾರ್ಪೊರೇಟ್‌ ಶೈಲಿಯ ಖಾಸಗಿ ಕಂಪನಿಗಳಲ್ಲಿ ಗುರುತಿಸಿದ ರೈತರಿಂದ ಖಾಸಗಿಯವರು ತ್ವರಿತವಾಗಿ ಹಣ್ಣು, ತರಕಾರಿ ಖರೀದಿಸುತ್ತಾರೆ. ಖರೀದಿಸುವ ಪ್ರಮಾಣಕ್ಕೆ ಮಿತಿ ಇಲ್ಲ. ತಕ್ಷಣ ನಗದು ಪಾವತಿ ಆಗಲಿದೆ. ಈ ಅಂತರವೇ ಹಾಪ್‌ಕಾಮ್ಸ್‌ಗೆ ಹಿನ್ನಡೆಯಾಗಿದೆ. ಹಾಪ್‌ಕಾಮ್ಸ್‌ ರೈತಸ್ನೇಹಿ ಅಲ್ಲ ಎಂಬ ಭಾವನೆ ಬೆಳೆಗಾರರಲ್ಲಿ ಬೇರೂರಿದೆ.

ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿ ಒಳ ಗೊಂಡು ಒಂದು ಹಾಪ್‌ಕಾಮ್ಸ್ ಸಂಸ್ಥೆ ಇದೆ. ಉಳಿದಂತೆ 23 ಜಿಲ್ಲೆಗಳಲ್ಲಿ ತಲಾ ಒಂದು ಹಾಪ್‌ಕಾಮ್ಸ್ ಕಾರ್ಯನಿರ್ವಹಿಸುತ್ತಿವೆ.

ವಾರ್ಷಿಕ ₹ 100 ಕೋಟಿ ವಹಿವಾಟು ನಡೆಸುವ ಬೆಂಗಳೂರು ಹಾಪ್‌ಕಾಮ್ಸ್‌ 2020–21 ಮತ್ತು 2021–22ರಲ್ಲಿ ಕ್ರಮವಾಗಿ ₹ 2.63 ಕೋಟಿ, ₹ 3.35 ಕೋಟಿ ನಷ್ಟ ಅನುಭವಿಸಿದೆ. ಜಿಲ್ಲಾ ಮಟ್ಟದ ಹಾಪ್‌ಕಾಮ್ಸ್‌ಗಳ ಸ್ಥಿತಿಯೂ ಭಿನ್ನವಾಗಿಲ್ಲ. 2020–21 ಮತ್ತು 2021–22ರಲ್ಲಿ ಕ್ರಮವಾಗಿ ₹ 1.08 ಕೋಟಿ ಮತ್ತು ₹ 83 ಲಕ್ಷ ನಷ್ಟವನ್ನು ಜಿಲ್ಲಾ ಹಾಪ್‌ಕಾಮ್ಸ್‌ಗಳು ಅನುಭವಿಸಿದೆ.

ಎರಡು ವರ್ಷಗಳ ಹಿಂದೆ ಬೆಂಗಳೂರು ವ್ಯಾಪ್ತಿಯಲ್ಲಿ 316, ಜಿಲ್ಲೆಗಳಲ್ಲಿ 262 ಹಾಪ್‌ಕಾಮ್ಸ್‌ ಮಳಿಗೆ ಇದ್ದವು. ನಷ್ಟ, ಮೂಲಸೌಲಭ್ಯ ಕೊರತೆಯಿಂದ ಮಳಿಗೆಗಳ ಸಂಖ್ಯೆ ಕ್ರಮವಾಗಿ ಬೆಂಗಳೂರಿನಲ್ಲಿ 209, ಜಿಲ್ಲೆಗಳಲ್ಲಿ 218ಕ್ಕೆ ಕುಸಿದಿದೆ.

ರಿಲಯನ್ಸ್ ಫ್ರೆಷ್‌, ಮೋರ್‌ ಮುಂತಾದ ಖಾಸಗಿ ಕಂಪನಿಗಳು ಆಕರ್ಷಕ ಮಳಿಗೆಗಳನ್ನು ರೂಪಿಸಿ, ವಾರಾಂತ್ಯದ ರಿಯಾಯಿತಿ ಹೆಸರಿನಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ. ಜಮೀನುಗಳಿಗೆ ತೆರಳಿ ರೈತರಿಂದ ನೇರವಾಗಿ ಹಣ್ಣು, ತರಕಾರಿಗಳನ್ನು ಖರೀದಿಸುತ್ತಿವೆ. ಹಾಪ್‌ಕಾಮ್ಸ್‌ ಇಂಥ ಪ್ರಯತ್ನಕ್ಕೆ ಕೈ ಹಾಕಿಲ್ಲ. ಗ್ರಾಹಕರ ಮನೆಗೇ ತಾಜಾ ಹಣ್ಣು, ತರಕಾರಿಗಳನ್ನು ತಲುಪಿಸಲು ಹಾಪ್‌ಕಾಮ್ಸ್‌ ಆರಂಭಿಸಿದ್ದ ಆನ್‌ಲೈನ್ ಸೇವೆಯೂ ಸ್ಥಗಿತಗೊಂಡಿದೆ.

ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ಬೆಂಗಳೂರು ಹಾಪ್‌ಕಾಮ್ಸ್ ಆರಂಭಿಸಿದ್ದ ಆಧುನಿಕ ಮಳಿಗೆ ‘ಹಾರ್ಟಿ ಬಜಾರ್’ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ, ಕಸ್ತೂರಿ ನಗರ, ಸದಾಶಿವ ನಗರದಲ್ಲಿ ಹಾರ್ಟಿ ಬಜಾರ್ ನಷ್ಟದಲ್ಲಿವೆ. ಇನ್ನೊಂದೆಡೆ ಸಂಸ್ಥೆ ಸಿಬ್ಬಂದಿ ಸ್ನೇಹಿಯಾಗಿಯೂ ಉಳಿದಿಲ್ಲ. ನಿವೃತ್ತ ಸಿಬ್ಬಂದಿಗೆ ಆರ್ಥಿಕ ಸೌಲಭ್ಯ ಒದಗಿಸಲೂ ಸಂಘದಲ್ಲಿ ನಿಧಿ ಇಲ್ಲ. 150 ನಿವೃತ್ತ ನೌಕರರಿಗೆ ₹ 5 ಕೋಟಿ ಪಾವತಿಸಲೂ ಆಗದಷ್ಟು ಸಂಕಷ್ಟದಲ್ಲಿದೆ. ಸಮಾಧಾನದ ಸಂಗತಿ ಎಂದರೆ ಕೋವಿಡ್‌ ಅವಧಿಯಲ್ಲಿ ಉತ್ತಮ ವಹಿವಾಟು ನಡೆಸಿ ಒಂದಷ್ಟು ಲಾಭ ಗಳಿಸಿದೆ.

‘ಅಲ್ಪಾವಧಿಯಲ್ಲಿ ಹಾಳಾಗುವ ಹಾಲನ್ನು ಸಂಸ್ಕರಿಸಿ, ಮಾರಾಟ ಮಾಡಿ ಹಾಲು ಒಕ್ಕೂಟಗಳು ಲಾಭಗಳಿಸುತ್ತವೆ. ನಾಲ್ಕೈದು ದಿನ ಉಳಿಯುವ ತರಕಾರಿ, ಹಣ್ಣಿನಿಂದ ಲಾಭ ಗಳಿಕೆ ಸಾಧ್ಯವಿಲ್ಲವೇ? ಚುನಾಯಿತ ಸಂಸ್ಥೆ, ಅಧಿಕಾರಿಗಳ ನಿರಾಸಕ್ತಿಯಿಂದ ಹಾಪ್‌ಕಾಮ್ಸ್‌ಗಳು ರೈತ ಸ್ನೇಹಿಯಾಗಿಲ್ಲ. ಕೋವಿಡ್‌ ಸಮಯದಲ್ಲಿ ಹಾಪ್‌ಕಾಮ್ಸ್‌ ಬಿಟ್ಟು ಬೇರೆಲ್ಲಾ ಅಂಗಡಿಗಳು ಮುಚ್ಚಿದ್ದವು. ಆಗ ಕೋಟ್ಯಂತರ ರೂಪಾಯಿ ಲಾಭ ಬಂತು. ಅವೆಲ್ಲಾ ಎಲ್ಲಿಗೆ ಹೋಯಿತು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ’ ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದರು.

ಖರೀದಿ, ಕಾರ್ಯವೈಖರಿ ಹೇಗೆ?: ₹ 500 ಶುಲ್ಕ ಪಾವತಿಸಿ ಹಾಪ್‌ಕಾಮ್ಸ್‌ ಸದಸ್ಯತ್ವ ಪಡೆಯಬೇಕು. ನೋಂದಾಯಿತ ಸದಸ್ಯರಿಂದ ಬೇಡಿಕೆಗೆ ಅನುಗುಣವಾಗಿ ಸಂಸ್ಥೆ ಹಣ್ಣು, ತರಕಾರಿಗಳನ್ನು ಖರೀದಿಸುತ್ತದೆ. ತರಕಾರಿ, ಹಣ್ಣುಗಳ ಗುಣಮಟ್ಟ, ಗಾತ್ರ ಹಾಗೂ ಬಣ್ಣವನ್ನು ಆಧರಿಸಿ ವರ್ಗೀಕರಣ ಮಾಡಲಾಗುತ್ತದೆ, ಇದೇ ಆಧಾರದಲ್ಲಿ ದರವು ನಿಗದಿಯಾಗುತ್ತದೆ. ಸದಸ್ಯರಾಗದಿದ್ದರೆ ಸಂಸ್ಥೆಯು ಖರೀದಿ ಮಾಡುವುದಿಲ್ಲ.

ಇದೀಗ ನಷ್ಟದಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆಗಳನ್ನು ಖಾಸಗಿಯವರಿಗೆ ಫ್ರ್ಯಾಂಚೈಸಿ ನೀಡಲಾಗುತ್ತಿದೆ. ಸಂಸ್ಥೆ, ವ್ಯಕ್ತಿಗಳು ಫ್ರ್ಯಾಂಚೈಸಿ ಪಡೆಯಬಹುದು. ಇದಕ್ಕಾಗಿ ₹ 1 ಲಕ್ಷ ಠೇವಣಿ ಇಡಬೇಕು. ಪ್ರತಿ ತಿಂಗಳು ₹1 ಲಕ್ಷ ಮೊತ್ತದ ತರಕಾರಿ, ಹಣ್ಣುಗಳನ್ನು ಖರೀದಿಸುವುದು ಕಡ್ಡಾಯ. ಲಾಭಾಂಶದಲ್ಲಿ ಹಂಚಿಕೆ ಪದ್ಧತಿ ಇರುತ್ತದೆ.

‘ಬಹುತೇಕ ಹಾಪ್‌ಕಾಮ್ಸ್‌ಗಳಲ್ಲಿ ಗುತ್ತಿಗೆ ನೌಕರರು ಇದ್ದಾರೆ. ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ. ಚುನಾಯಿತ ಸಹಕಾರ ಸಂಘಗಳು ರಾಜಕಾರಣದಲ್ಲಿ ಮುಳುಗಿರುವ ಕಾರಣ ಸಂಸ್ಥೆ ರೈತಸ್ನೇಹಿಯಾಗಿಲ್ಲ. ಸರ್ಕಾರ ಬಿಡುಗಡೆ ಮಾಡುವ ಹಣಕ್ಕೆ ಸರಿಯಾಗಿ ಲೆಕ್ಕ ಕೇಳದ ಕಾರಣ ಹಾಪ್‌ಕಾಮ್ಸ್‌ ನಷ್ಟ ಹೊಂದುತ್ತಿವೆ’ ಎನ್ನುತ್ತಾರೆ ಹಾಪ್‌ಕಾಮ್ಸ್ ಮಾಜಿ ನಿರ್ದೇಶಕ ವಿಜಯ್‌ಕುಮಾರ್.

ಸುಧಾರಣೆಗೆ ಏನು ಮಾಡಬೇಕು?: ಹಾಪ್‌ಕಾಮ್ಸ್ ಅನ್ನು ಲಾಭದ ಹಾದಿಗೆ ತರಬೇಕಾದರೆ, ‘ಮಳಿಗೆಗಳಲ್ಲಿ ತರಕಾರಿ, ಹಣ್ಣುಗಳನ್ನು ದೀರ್ಘಕಾಲ ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು. ಸಾರಿಗೆ ವೆಚ್ಚ ಉಳಿಸಲು ವಾರಕ್ಕೆ ಬೇಕಾಗುವಷ್ಟು ಹಣ್ಣು, ತರಕಾರಿ ದಾಸ್ತಾನು ಇರುವಂತೆ ಕ್ರಮವಹಿಸಬೇಕು, ತೋಟಗಾರಿಕೆ ಬೆಳೆಗಾರರಿಗೆ ಸದಸ್ಯತ್ವ ನೀಡುವ ಮೂಲಕ ಸದಸ್ಯರ ಸಂಖ್ಯೆ ಹೆಚ್ಚಿಸಬೇಕು, ಕೋಲ್ಡ್‌ ಸ್ಟೋರೇಜ್‌ಗಳ ನಿರ್ಮಾಣ, ಮಳಿಗೆ ಹಾಗೂ ಸಂಗ್ರಹಣಾ ಕೇಂದ್ರದ ಉನ್ನತೀಕರಣವಾಗಬೇಕು. ‘ಹಾಪ್‌ಕಾಮ್ಸ್‌ ನಮ್ಮದು’ ಎಂಬ ಭಾವನೆ ಬೆಳೆಸಬೇಕು’ ಎನ್ನುತ್ತಾರೆ ಹಾಪ್‌ಕಾಮ್ಸ್‌ನ ನಿವೃತ್ತ ಅಧಿಕಾರಿಯೊಬ್ಬರು.

ಶೈತ್ಯಾಗಾರಗಳ ಕೊರತೆ: ದರ ಕುಸಿದಾಗ ಲಭ್ಯವಿರುವ ತರಕಾರಿ, ಹಣ್ಣು ದಾಸ್ತಾನು ಮಾಡಿ, ಶೇಖರಿಸಿ ನಂತರ ಬೆಲೆ ಏರಿಕೆ ಅಥವಾ ಸ್ಥಿರತೆ ಕಾಯ್ದುಕೊಂಡಾಗ ಮಾರಲು ಶೈತ್ಯಾಗಾರಗಳ ಅಗತ್ಯವಿದೆ. ಸದ್ಯ ರಾಜಧಾನಿ ಸೇರಿದಂತೆ ಜಿಲ್ಲಾ ಹಾಪ್‌ಕಾಮ್ಸ್‌ಗಳಲ್ಲಿ ಇಂತಹ ವ್ಯವಸ್ಥೆ ಇಲ್ಲ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ಸಣ್ಣ ಪ್ರಮಾಣದ ಕೋಲ್ಡ್‌ ಸ್ಟೋರೇಜ್‌ ಮಾತ್ರವೇ ಕಾರ್ಯನಿರ್ವಹಿಸುತ್ತಿದೆ.

‘ಮೂರು ಟನ್‌ ದಾಸ್ತಾನು ಸಾಮರ್ಥ್ಯದ ಕೋಲ್ಡ್‌ ಸ್ಟೋರೇಜ್ ಸ್ಥಾಪಿಸಲು ಅಂದಾಜು ₹ 5 ಲಕ್ಷ (ಜಾಗ ಹೊರತುಪಡಿಸಿ) ಅಗತ್ಯ. ಘಟಕ ಸ್ಥಾಪಿಸುವ ಕುರಿತಂತೆ ಹಲವು ವರ್ಷಗಳಿಂದ ಮನವಿ ಮಾಡಿದ್ದರೂ ಸರ್ಕಾರ ಸ್ಪಂದಿಸಿಲ್ಲ’ ಎಂಬುದು ಕೆಎಚ್ಎಫ್‌ ಅಧ್ಯಕ್ಷ ಬಿ.ಡಿ.ಭೂಕಾಂತ್‌ ಅವರ ಆರೋಪ. ಆದರೆ ‘ಜಿಲ್ಲಾ ಹಾಪ್‌ಕಾಮ್ಸ್‌ಗಳಲ್ಲಿ ವಹಿವಾಟು ಕಡಿಮೆ ಇದೆ. ಕೋಲ್ಡ್‌ ಸ್ಟೋರೇಜ್‌ಗಳ ಸ್ಥಾಪನೆ ಕಾರ್ಯಸಾಧುವಲ್ಲ. ಸಣ್ಣ ಫ್ರಿಜ್‌ ನೀಡಿದರೆ ಸಾಕು’ ಎನ್ನುತ್ತಾರೆ ಕೆಎಚ್‌ಎಫ್‌ ವ್ಯವಸ್ಥಾಪಕ ನಿರ್ದೇಶಕಿ ಎಚ್.ಎನ್.ಹೇಮಾ.

ಕೆಎಂಎಫ್ ಮಾದರಿ ಅಭಿವೃದ್ಧಿಪಡಿಸಿ: ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಪ್‌ಕಾಮ್ಸ್‌ಗಳನ್ನು ಕೆಎಂಎಫ್‌ ಮಾದರಿಯಲ್ಲಿಯೇ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿತ್ತು. ನಂತರ ಬಂದ ಸರ್ಕಾರ ಈ ಯೋಜನೆಯ ಅನುಷ್ಠಾನಕ್ಕೆ ಅಷ್ಟು ಆಸಕ್ತಿ ವಹಿಸಲಿಲ್ಲ ಎನ್ನುತ್ತಾರೆ ಹಾಸನ ಹಾಲು ಒಕ್ಕೂಟ ಅಧ್ಯಕ್ಷ
ಎಚ್.ಡಿ.ರೇವಣ್ಣ.

‘ಹಾಸನ, ರಾಮನಗರ, ವಿಜಯಪುರ ಸೇರಿದಂತೆ ನಾಲ್ಕು ಕಡೆ ದೊಡ್ಡ ಮಾರುಕಟ್ಟೆ ನಿರ್ಮಿಸಲು ₹ 500 ಕೋಟಿ ಮಂಜೂರು ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಸಂಸ್ಥೆ ಸಿಬ್ಬಂದಿಯೇ ನೇರವಾಗಿ ಹಳ್ಳಿಗಳಿಗೆ ತೆರಳಿ ತರಕಾರಿ, ಹಣ್ಣು ಖರೀದಿಸಬೇಕು ಎನ್ನುವುದು ಇದರ ಭಾಗವಾಗಿತ್ತು. ಬೆಳೆಗಳಿಗೂ ಉತ್ತಮ ದರ ನೀಡುವುದು, ಬೆಳೆಗಾರರು ಮಾರುಕಟ್ಟೆಗೆ ಅಲೆಯುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿತ್ತು. ಈ ದೊಡ್ಡ ಮಾರುಕಟ್ಟೆಗಳಿಂದ ಹಣ್ಣು, ತರಕಾರಿಗಳನ್ನು ಜಿಲ್ಲಾ ಕೇಂದ್ರಗಳಿಗೆ ಮತ್ತು ಹೊರ ರಾಜ್ಯಗಳಿಗೆ ಪೂರೈಸುವ ಚಿಂತನೆಯಿತ್ತು. ಬೇಡಿಕೆ ಆಧರಿಸಿ ಉತ್ಪನ್ನಗಳ ರಫ್ತು ಚಿಂತನೆಯೂ ಇತ್ತು. ಆದರೆ ಇದು ಕಾರ್ಯಗತವಾಗಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ಹಾಲಿಗೆ ಸಬ್ಸಿಡಿ ನೀಡುತ್ತಿರುವಂತೆಯೇ ಹಣ್ಣು, ತರಕಾರಿ ಬೆಳೆಗಾರರಿಗೂ ಕೆ.ಜಿ. ಗೆ ಇಂತಿಷ್ಟು ಮೊತ್ತವನ್ನು ಸಬ್ಸಿಡಿ ನೀಡಿದರೆ ಅನುಕೂಲ. ನಗರ ಮತ್ತು ಪಟ್ಟಣಗಳು ವೇಗವಾಗಿ ಬೆಳೆಯುತ್ತಿರುವುದರಿಂದ ಕೃಷಿ ಜಮೀನು ಉಳಿಯುವುದಿಲ್ಲ. ಇಂತಹ ಸ್ಥಿತಿಯಲ್ಲಿ ಸರ್ಕಾರ ಬೆಳೆಗಾರರ ಹಿತಾಸಕ್ತಿ ಬಗ್ಗೆಯೂ ಚಿಂತನೆ ಮಾಡಬೇಕು’ ಎಂದರು.

‘ಹಾಪ್‌ಕಾಮ್ಸ್‌ಗಳು ಬೇಡಿಕೆಗಿಂತ ಹೆಚ್ಚು ಉತ್ಪನ್ನ ಬಂದರೆ ಖರೀದಿಸುವುದಿಲ್ಲ. ಕೆಲ ತರಕಾರಿ ಹಣ್ಣನ್ನು ಯಾರು ಕೇಳುವುದೇ ಇಲ್ಲ. ವಾಪಸ್‌ ಕಳುಹಿಸುತ್ತಾರೆ. ಚಿಲ್ಲರೆ ಮಾರಾಟ ಮಾಡುವಾಗ ತೂಕದಲ್ಲಿ ಏರುಪೇರಾಗುತ್ತದೆ ಎಂಬ ನೆಪ ಹೇಳುತ್ತಾರೆ. ಸರಿಯಾದ ಸಮಯಕ್ಕೆ ಬಿಲ್‌ ಸಿಗುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ತರಕಾರಿ ಮಾರಿದರೆ ಹಣಕ್ಕೆ ವಾರಗಟ್ಟಲೇ ಕಾಯಬೇಕು’ ಎಂದು ಆರೋಪಿಸುತ್ತಾರೆ ಗೌರಿಬಿದನೂರು ತಾಲ್ಲೂಕಿನ ಗುಟ್ಟೇನಹಳ್ಳಿ ರೈತ ಲಕ್ಷ್ಮೀನಾರಾಯಣ.

‘ಖಾಸಗಿ ಕಂಪನಿಗಳು ಬೇಕೆಂದಾಗ ದರ ತಗ್ಗಿಸುತ್ತವೆ. ನಮಗೆ ಅಂತಹ ಅವಕಾಶ ಇಲ್ಲ. ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುವವರೂ ಹಾಪ್‌ಕಾಮ್ಸ್‌ ದರಕ್ಕಿಂತ ಕಡಿಮೆಗೆ ನೀಡುತ್ತಾರೆ. ವಿವಿಧೆಡೆ ಹಾಪ್‌ಕಾಮ್ಸ್ ಮಳಿಗೆ ತೆರೆಯಲು ಜಾಗದ ಕೊರತೆ ಇದೆ. ಹಾರ್ಟಿ ಬಜಾರ್‌ಗಳು ಸೂಪರ್ ಮಾರ್ಕೆಟ್‌ ರೀತಿ ಕಾರ್ಯನಿರ್ವಹಿಸುತ್ತಿವೆ. ತಾಜಾ ಹಣ್ಣು, ತರಕಾರಿಗಳು, ಸಂಬಾರ ಪದಾರ್ಥಗಳು, ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರಲಾಗುತ್ತಿತ್ತು. ಆರಂಭದಲ್ಲಿ ಉತ್ತಮ ಸ್ಪಂದನೆ ದೊರಕಿತು. ಈಗ ನಷ್ಟದ ಕಾರಣ ಒಂದು ಮಳಿಗೆ ಬಂದ್ ಆಗಿದೆ’ ಎನ್ನುತ್ತಾರೆ ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಉಮೇಶ್‌ ಎಸ್.ಮಿರ್ಜಿ.

‘ಮಳಿಗೆಗಳಲ್ಲಿ ದೈನಂದಿನ ದರಪಟ್ಟಿಯನ್ನು ಸಾರ್ವಜನಿಕ ವಾಗಿ ಪ್ರಕಟಿಸಬೇಕು. ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸಲು ಕೋಡ್ ಕೆಟಲಿಸ್ಟ್‌ ಸಂಸ್ಥೆ ಜತೆ ಒಪ್ಪಂದವಾಗಿತ್ತು. ಆಡಳಿತಾತ್ಮಕ ಕಾರಣದಿಂದ ಈ ಸಂಸ್ಥೆಯ ಆನ್‌ಲೈನ್ ಸೇವೆ ಯನ್ನು ರದ್ದುಗೊಳಿಸಲಾಗಿದೆ. ಯಾವುದಾದರೂ ಸಂಸ್ಥೆ ಮುಂದೆ ಬಂದರೆ ಮತ್ತೆ ಆನ್‌ಲೈನ್‌ ಸೇವೆ ಆರಂಭಿಸಲಾಗುವುದು’ ಎಂದರು.

‘ಮದುವೆ, ನಾಮಕರಣ, ನಿಶ್ಚಿತಾರ್ಥ, ವಿವಿಧ ಶುಭ ಸಮಾರಂಭಗಳಿಗೆ ಹಾಪ್‌ಕಾಮ್ಸ್ ವತಿಯಿಂದಲೇ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ.
ಶೇ 10ರಷ್ಟು ರಿಯಾಯಿತಿ ಸಹ ಸಿಗಲಿದೆ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಉತ್ಪನ್ನಗಳನ್ನು ಸಂಸ್ಥೆಯ ವಾಹನದಲ್ಲೇ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರೆ ಬೇರೆ ಜಿಲ್ಲೆಗಳಿಗೂ ಬೆಂಗಳೂರಿನಿಂದ ಉತ್ಪನ್ನಗಳನ್ನು ತಲುಪಿಸಲಾಗುವುದು’ ಎಂದು ಬೆಂಗಳೂರು ಹಾಪ್‌ಕಾಮ್ಸ್‌ ಅಧ್ಯಕ್ಷ ಎನ್.ದೇವರಾಜ್ ತಿಳಿಸಿದರು.

ತೋಟಗಾರಿಕಾ ಬೆಳೆಗಾರರಿಗೆ ಮಾರುಕಟ್ಟೆಯ ಬಲ ನೀಡಬೇಕಾಗಿದ್ದ ಮತ್ತು ಗ್ರಾಹಕರಿಗೆ ತಾಜಾ ಹಣ್ಣು, ತರಕಾರಿ ಪೂರೈಸಬೇಕಾಗಿದ್ದ ಹಾಪ್‌ಕಾಮ್ಸ್‌ ನಷ್ಟದ ಹಾದಿಯಲ್ಲಿ ಮುಂದುವರಿದರೆ ಮಾರಾಟ ಮಳಿಗೆಗಳಿಗೆ ಬೀಗ ಹಾಕುವ ಕಾಲ ದೂರವಿಲ್ಲ. ರೈತರು ಮತ್ತು ಗ್ರಾಹಕರ ನಡುವಿನ ಸಂಪರ್ಕ ಕೊಂಡಿಯೊಂದು ಕಡಿದುಹೋಗುವ ಆತಂಕವೂ ಇದೆ.

––––––

ಬೆಂಗಳೂರು ವ್ಯಾಪ್ತಿಯ ಹಾಪ್‌ಕಾಮ್ಸ್ ವಿವರ

7,724
ನೋಂದಾಯಿತ ಸದಸ್ಯರು

209
ಒಟ್ಟು ಮಳಿಗೆಗಳು

₹ 100 ಕೋಟಿ
ವಾರ್ಷಿಕ ವಹಿವಾಟು

14 ಸಾವಿರ ಟನ್
ವಾರ್ಷಿಕ ಹಣ್ಣು, ತರಕಾರಿ ಖರೀದಿ


––––––––––––––––––––––––––
ಜಿಲ್ಲಾ ಹಾಪ್‌ಕಾಮ್ಸ್‌ಗಳ ವಿವರ


23 ‌
ಜಿಲ್ಲಾ ಮಟ್ಟದ ಹಾಪ್‌ಕಾಮ್ಸ್‌ಗಳು

218
ಒಟ್ಟು ಮಳಿಗೆಗಳು

28,336
ಒಟ್ಟು ಸದಸ್ಯರು

7 ಸಾವಿರ ಟನ್
ವಾರ್ಷಿಕ ಹಣ್ಣು, ತರಕಾರಿ ಖರೀದಿ

ನಷ್ಟದಲ್ಲಿ ಬಹುತೇಕ ಹಾಪ್‌ಕಾಮ್ಸ್‌ಗಳು

ಜಿಲ್ಲಾ ಮಟ್ಟದ 23 ಹಾಪ್‌ಕಾಮ್ಸ್‌ಗಳ ಪೈಕಿ ಶಿವಮೊಗ್ಗ, ಮೈಸೂರು, ಕೊಡಗು ಹೊರತುಪಡಿಸಿ ಉಳಿದವು ನಷ್ಟದಲ್ಲಿವೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಅಡಿ ಕಾರ್ಯನಿರ್ವಹಿಸುವ ವಸತಿನಿಲಯಗಳು, ಆರೋಗ್ಯ ಇಲಾಖೆ ಆಸ್ಪತ್ರೆಗಳು ಹಾಗೂ ಜೈಲುಗಳಿಗೆ ಸಂಸ್ಥೆ ಮೂಲಕ ತರಕಾರಿ, ಹಣ್ಣುಗಳ ಪೂರೈಕೆಯಾಗಬೇಕು. ಶಾಸಕರ ಅನುದಾನದಲ್ಲಿ ಹಾಪ್‌ಕಾಮ್ಸ್‌ ಮಳಿಗೆ ನಿರ್ಮಿಸಿ ಸ್ಥಳೀಯವಾಗಿ ಮಾರುಕಟ್ಟೆ ವಿಸ್ತರಿಸಬೇಕು. ಸಂಸ್ಥೆಯ ಪುನಃಶ್ಚೇತನಕ್ಕಾಗಿ ಸಿ.ಎಂ ಬಸವರಾಜ ಬೊಮ್ಮಾಯಿ ₹ 12 ಕೋಟಿ ದುಡಿಯುವ ಬಂಡವಾಳ ಮಂಜೂರು ಮಾಡಿದ್ದಾರೆ. ಬಡ್ಡಿ ವಿಧಿಸದಿರಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ.

ಬಿ.ಡಿ.ಭೂಕಾಂತ್‌, ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳ (ಕೆಎಚ್‌ಎಫ್) ಅಧ್ಯಕ್ಷ

––––

ಬೆಳೆ ಪ್ರದೇಶದ ವಿವರ

3.98 ಲಕ್ಷ ಹೆಕ್ಟೇರ್
ರಾಜ್ಯದಲ್ಲಿ ಹಣ್ಣಿನ ಬೆಳೆ ಪ್ರದೇಶ

70.83 ಲಕ್ಷ ಟನ್
ವಾರ್ಷಿಕ ಉತ್ಪಾದನೆ

4.41 ಲಕ್ಷ ಹೆಕ್ಟೇರ್
ತರಕಾರಿ ಬೆಳೆಯುವ ಪ್ರದೇಶ

87.77 ಲಕ್ಷ ಟನ್
ವಾರ್ಷಿಕ ಉತ್ಪಾದನೆ

ಮಡಿಕೇರಿ: ಹೈಟೆಕ್‌ ಮಳಿಗೆ

ಮಡಿಕೇರಿ ಬಸ್‌ ನಿಲ್ದಾಣ ಸಮೀಪ ಕೆಎಚ್‌ಎಫ್ ನಿಂದ ₹ 1.56 ಕೋಟಿ ವೆಚ್ಚದಲ್ಲಿ ಹೈಟೆಕ್‌ ಹಾಪ್‌ಕಾಮ್ಸ್‌ ಮಳಿಗೆ ನಿರ್ಮಿಸಲಾಗಿದೆ. ಇಲ್ಲಿ ಭರ್ಜರಿ ವ್ಯಾಪಾರವಾಗುತ್ತಿದೆ. ಹಣ್ಣು, ತರಕಾರಿ ಜೊತೆಗೆ ಸಂಬಾರ ಪದಾರ್ಥಗಳು, ಸ್ಥಳೀಯವಾಗಿ ತಯಾರಿಸಿದ ವೈನ್‌, ತಂಪು ಪಾನೀಯ ಮಾರಲಾಗುತ್ತಿದೆ.

‘ಸದ್ಯ ಹಣ್ಣು, ತರಕಾರಿ, ವೈನ್, ಹಣ್ಣಿನ ಜ್ಯೂಸ್‌, ಒಣ ಶುಂಠಿ, ಮೆಣಸು, ಏಲಕ್ಕಿ, ಚಕ್ಕೆ, ಲವಂಗ ಮಾರಲಾಗುತ್ತಿದೆ. ಸ್ಥಳೀಯವಾಗಿ ಬೆಳೆಯುವ ಸೊಪ್ಪು, ತರಕಾರಿಗಳ ಜತೆಗೆ ಮೈಸೂರು ಎಪಿಎಂಸಿಯಿಂದ ಹಣ್ಣು, ತರಕಾರಿ ತರಿಸಿ ಮಾರಾಟ ಮಾಡಲಾಗುತ್ತಿದೆ. ದಿನಕ್ಕೆ ₹ 75 ಸಾವಿರದಿಂದ ₹ 1 ಲಕ್ಷವರೆಗೂ ವ್ಯಾಪಾರವಾದರೆ, ವಾರಾಂತ್ಯದಲ್ಲಿ ₹ 1.5 ಲಕ್ಷ ವ್ಯಾಪಾರವಾಗಲಿದೆ‘ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಪ್ರಮೋದ್ ತಿಳಿಸಿದರು.

––––––

ರೈತ–ಗ್ರಾಹಕ ಸ್ನೇಹಿ ಆಗಲಿ

ಹಾಪ್‌ಕಾಮ್ಸ್ ಮಳಿಗೆಗಳಿಗೆ ಮೊದಲು ಮೂಲಸೌಲಭ್ಯ ಕಲ್ಪಿಸಬೇಕು. ಕಡಿಮೆ ವೆಚ್ಚದಲ್ಲೂ ಕೋಲ್ಡ್ ಸ್ಟೋರೇಜ್‌ ಸ್ಥಾಪನೆ ಮಾಡಬಹುದು. ಸಂಸ್ಥೆಯಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ತೋರಿಸಲಾಗುತ್ತಿದೆ. ಸಂಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ಗ್ರಾಹಕರ ಸೆಳೆಯಲು ಖಾಸಗಿ ಕಂಪನಿಗಳಂತೆ ಮಳಿಗೆಗಳನ್ನು ಆಕರ್ಷಕವಾಗಿ ರೂಪಿಸಬೇಕು. ರೈತ ಮತ್ತು ಗ್ರಾಹಕ ಸ್ನೇಹಿ ಹಾಪ್‌ಕಾಮ್ಸ್ ಮಾಡಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು.

ಬಡಗಲಪುರ ನಾಗೇಂದ್ರ, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ

ಉತ್ತಮ ಬೆಲೆ ಸಿಗಲಿ

ತೋಟಗಾರಿಕಾ ಸಹಕಾರ ಸಂಘಗಳು ಮತ್ತು ಹಾಪ್‌ಕಾಮ್ಸ್‌ಗಳು ರೈತರ ಜೀವನಾಡಿಗಳು. ಖಾಸಗಿ ಕಂಪನಿಗಳ ಪೈಪೋಟಿ ನಡುವೆ ಗ್ರಾಹಕರ ಮನೆ ಬಾಗಿಲಿಗೆ ತೋಟಗಾರಿಕಾ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆ ರೂಪಿಸಬೇಕು. ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ಉತ್ತಮ ಬೆಲೆ ಸಿಗಬೇಕು.

ಜಿ.ಟಿ. ದೇವೇಗೌಡ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ

ಬೆಳೆಗಾರರ ಸಹಾಯಕ್ಕೆ ನಿಲ್ಲಬೇಕು

ಸಾಲ ಮಾಡಿ ಬೆಳೆ ಬೆಳೆಯುತ್ತವೆ. ಕಟಾವಿನ ಸಮಯದಲ್ಲಿ ಉತ್ತಮ ದರ ಸಿಗದಿದ್ದರೆ ಸಾಲದ ಹೊರೆ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಹಾಪ್‌ಕಾಮ್ಸ್ ಬೆಳೆಗಾರರ ಸಹಕಾರಕ್ಕೆ ನಿಲ್ಲಬೇಕು.

ಬಸವರಾಜ್,ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ರೈತ

₹ 25 ಕೋಟಿ ದುಡಿಯುವ ಬಂಡವಾಳ ನೀಡಲಿ

ಹಾಪ್‌ಕಾಮ್ಸ್‌ಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಸಂಸ್ಥೆ ಬಲವರ್ಧನೆಗೆ ಸರ್ಕಾರ ಬಡ್ಡಿರಹಿತವಾಗಿ ₹ 25 ಕೋಟಿ ದುಡಿಯುವ ಬಂಡವಾಳ ನೀಡಬೇಕು. ಕೋಲ್ಡ್‌ ಸ್ಟೋರೇಜ್‌ಗಳ ಬದಲು ಫ್ರಿಜ್ ನೀಡಿದರೂ ಸಾಕು. ಮುಂದಿನ ದಿನಗಳಲ್ಲಿ ಮಳಿಗೆಗಳಲ್ಲಿ ನೀರಾ ಕೋಲ್ಡ್ ಕಾಫಿ ಮಾರಲಾಗುವುದು. ನಷ್ಟದಲ್ಲಿರುವ ಮಳಿಗೆ ಮೇಲ್ದರ್ಜೇಗೇರಿಸುವ ಸಂಬಂಧ ಕರ್ನಾಟಕ ಆಯಿಲ್‌ ಫೆಡರೇಷನ್ ಜತೆ ಒ‍ಪ್ಪಂದ ಆಗಿದ್ದು, ಮಳಿಗೆಗಳಿಗೆ ಪೇಂಟ್‌ ಮಾಡಿಕೊಡುತ್ತಿದ್ದಾರೆ. ಫೆಡರೇಷನ್‌ನ ಆಯಿಲ್‌, ಮೇಟಿರಿಯಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

ಎನ್.ದೇವರಾಜ್, ಬೆಂಗಳೂರು ಹಾಪ್‌ಕಾಮ್ಸ್ ಅಧ್ಯಕ್ಷ

ಬಾಳೆ ಖರೀದಿಸದ ಹಾಪ್‌ಕಾಮ್ಸ್‌‌

ಶಿವಮೊಗ್ಗದ ಮಂಡಿಗೆ ಬಾಳೆ ತೆಗೆದುಕೊಂಡು ಹೋದಾಗ ಮಧ್ಯವರ್ತಿಗಳು ಕಡಿಮೆ ದರಕ್ಕೆ ಕೇಳಿದರು. ಈಗಲೇ ಸಾಕಷ್ಟು ಸಂಗ್ರಹವಿದೆ ಎಂದು ಹೇಳಿ ಹಾಪ್‌ಕಾಮ್ಸ್‌ನವರು ಕೈಚೆಲ್ಲಿದರು. ಕೊನೆಗೆ ಕೂಲಿ ವೆಚ್ಚ, ವಾಹನದ ಬಾಡಿಗೆಯೂ ದಕ್ಕಲಿಲ್ಲ. ರೈತರು ಬೆಳೆದ ಉತ್ಪನ್ನಗಳನ್ನು ಅವರ ತೋಟಗಳಿಗೆ ಹೋಗಿ ಖರೀದಿಸುವ ಮೂಲಕ ಮಾರುಕಟ್ಟೆಯಲ್ಲಿ ಅವರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು.

ದಾನಶೇಖರ್, ಬಾಳೆ ಬೆಳೆಗಾರ, ಸೊರಬ

––––––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.