ADVERTISEMENT

ಪ್ರಜಾವಾಣಿ ಒಳನೋಟ: ಬರಡಾಗುತ್ತಿದೆ ಕರುನಾಡಿನ ಮಣ್ಣು! 2050ಕ್ಕೆ ಶೇ 80 ಸವಕಳಿ!

ಕರ್ನಾಟಕ ರಾಜ್ಯದಲ್ಲಿ ಶೇಕಡ 36.29ರಷ್ಟು (69.6 ಲಕ್ಷ ಹೆಕ್ಟೇರ್‌) ಭೂಮಿಯಲ್ಲಿ ಮಣ್ಣಿನ ಫಲವತ್ತತೆ ನಾಶ ವಾಗಿದ್ದು ಬರಡು ಭೂಮಿಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ..

ಎ.ಎಂ.ಸುರೇಶ
Published 22 ಅಕ್ಟೋಬರ್ 2023, 0:32 IST
Last Updated 22 ಅಕ್ಟೋಬರ್ 2023, 0:32 IST
<div class="paragraphs"><p>ಬರಡಾದ ಭೂಮಿಯಲ್ಲಿ ತೆಂಗು ಬೆಳೆ!</p></div>

ಬರಡಾದ ಭೂಮಿಯಲ್ಲಿ ತೆಂಗು ಬೆಳೆ!

   

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಶೇಕಡ 36.29ರಷ್ಟು (69.6 ಲಕ್ಷ ಹೆಕ್ಟೇರ್‌) ಭೂಮಿಯಲ್ಲಿ ಮಣ್ಣಿನ ಫಲವತ್ತತೆ ನಾಶ ವಾಗಿದ್ದು ಬರಡು ಭೂಮಿಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ನೀರಾವರಿ ಪ್ರದೇಶದಲ್ಲಿ ಅಷ್ಟೇ ಅಲ್ಲದೆ ಜಲಾನಯನ ಪ್ರದೇಶದಲ್ಲೂ ಕಳೆದ ಒಂದು ದಶಕದಿಂದ ಮಣ್ಣಿನ ಫಲವತ್ತತೆ ನಿರಂತರವಾಗಿ ಕುಸಿಯುತ್ತಿದೆ. ಕೃಷಿ ಉತ್ಪಾದನೆಯ ದೃಷ್ಟಿಯಲ್ಲಿ ಇದು ಆತಂಕಕಾರಿ ಬೆಳವಣಿಗೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಈ ಪ್ರಕ್ರಿಯೆ ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗ ನಡೆಸಿದ ಮಣ್ಣಿನ ಫಲವತ್ತತೆ ಕುರಿತ ಜಾಗತಿಕ ಸಮೀಕ್ಷಾ ವರದಿ ಪ್ರಕಾರ ಜಗತ್ತಿನ ಶೇ 33ರಷ್ಟು ಭೂಮಿ ಫಲವತ್ತತೆ ಕಳೆದುಕೊಂಡಿದೆ.

ADVERTISEMENT

ಅತಿಯಾದ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ಸಕಾಲದಲ್ಲಿ ಸಾವಯವ ಗೊಬ್ಬರ ನೀಡದೆ ಇರುವುದರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಅಲ್ಲದೆ ಭಾರಿ ಮಳೆ ಮತ್ತು ದಿಢೀರ್‌ ಪ್ರವಾಹದಿಂದಾಗಿ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಭೂಮಿ ಸವಕಳಾಗುತ್ತಿರುವುದು ಇಸ್ರೊದ ಸ್ಪೇಸ್‌ ಅಪ್ಲಿಕೇಷನ್‌ ಸೆಂಟರ್‌ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.

ಭೂಮಿಯ ಆರು ಇಂಚು ದಪ್ಪದ ಮೇಲ್ಮಣ್ಣು ಅತ್ಯಂತ ಫಲವ ತ್ತತೆ ಹೊಂದಿದ್ದು, ಬೆಳೆಗೆ ಬೇಕಾದ ಎಲ್ಲ ಪೋಷಕಾಂಶ ಗಳನ್ನು ಹೊಂದಿರುತ್ತದೆ. ಆದರೆ, ನಿರಂತರವಾಗಿ ನೀರು ನಿಲ್ಲಿಸುವುದು, ಯಾವಾಗಲೂ ಒಂದೇ ಬೆಳೆಯನ್ನೇ ಬೆಳೆಯುವುದು, ಸರಿಯಾದ ವಿಧಾನದಲ್ಲಿ ಉಳುಮೆ ಮಾಡದಿರುವುದು ಇತ್ಯಾದಿಗ ಳಿಂದಾಗಿ ಮಣ್ಣಿನ ಸವಕಳಿ ಉಂಟಾಗುತ್ತಿದೆ. ಈಗಾಗಲೇ ಭೂಮಿಯ ಮೂರನೇ ಒಂದರಷ್ಟು ಪ್ರದೇಶ ಸವಕಳಿಯಾಗಿದ್ದು, 2050ರ ವೇಳೆಗೆ ಈ ಪ್ರಮಾಣ ಶೇ 80ಕ್ಕೆ ತಲುಪಬಹುದು ಎಂಬ ಆಘಾತಕಾರಿ ಮಾಹಿತಿಯನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗ ಬಹಿರಂಗಪಡಿಸಿದೆ.

‘ಫಲವತ್ತಾದ ಮಣ್ಣು, ಅದಕ್ಕೆ ಕೇವಲ ರಾಸಾಯನಿಕಗಳನ್ನು ನೀಡುವುದು ಮತ್ತು ನೀರು ಪೂರೈಕೆಯು ಆಹಾರ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಕಾಲಕ್ರಮೇಣ, ಮಣ್ಣು ಅದರ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತಿರುವುದು ಎಲ್ಲೆಡೆ ಗೋಚರಿಸುತ್ತಿದೆ. ಈ ಅಪಾಯ ಹಿಂದಿಗಿಂತಲೂ ಈಗ ತೀವ್ರವಾಗಿದೆ‘ ಎನ್ನುತ್ತಾರೆ ಜಿಕೆವಿಕೆಯ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ವಿಭಾಗದ ಪ್ರಾಧ್ಯಾಪಕ ಸತೀಶ್‌.

ಸಕಲ ಜೀವರಾಶಿಗಳಿಗೆ ಮಣ್ಣು ಅತ್ಯಂತ ಮುಖ್ಯವಾದುದು. ಇದರ ಫಲವತ್ತತೆ ಕಾಪಾಡಲು ಸಾವಯವ ಗೊಬ್ಬರ ಹೆಚ್ಚಿಸಿ, ಕೀಟನಾಶಕಗಳ ಬಳಕೆ ಕಡಿಮೆ ಮಾಡಬೇಕು. ಅಲ್ಲದೆ, ಮಣ್ಣಿನ ಪರೀಕ್ಷೆ ನಡೆಸಿ, ಅದಕ್ಕೆ ಅನುಗುಣವಾಗಿ ರಸಗೊಬ್ಬರ ನೀಡಬೇಕು. ಇದಕ್ಕಾಗಿಯೇ ಪ್ರತಿ ಜಿಲ್ಲೆಯಲ್ಲಿ ಮಣ್ಣಿನ ಆರೋಗ್ಯ ಕೇಂದ್ರಗಳಿವೆ. ಮಣ್ಣಿನ ತಪಾಸಣೆ ನಡೆಸಿ ರೈತರಿಗೆ ಹೆಲ್ತ್‌ಕಾರ್ಡ್‌ ನೀಡುವ ಯೋಜನೆ 2014ರಿಂದಲೇ ಜಾರಿಯಲ್ಲಿದೆ. ಆದರೆ, ಈ ಕಾರ್ಯ ಪರಿಣಾಮಕಾರಿಯಾಗಿ ಆಗುತ್ತಿಲ್ಲ.

’ಮಣ್ಣಿಗೆ ಯಾವ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡಬೇಕು ಎಂದು ರೈತರಿಗೆ ತಿಳಿಸಬೇಕು. ಆದರೆ, ಕೆಳ ಹಂತದಲ್ಲಿ ಈ ಕಾರ್ಯ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಬಹಳಷ್ಟು ರೈತರಿಗೆ ಮಣ್ಣು ಪರೀಕ್ಷೆ ಬಗ್ಗೆ ಮಾಹಿತಿಯೇ ಎಲ್ಲ‘ ಎನ್ನುತ್ತಾರೆ ಸಾಯಿಲ್‌ ಟ್ರಸ್ಟ್‌ನ ಪಿ.ಶ್ರೀನಿವಾಸ್‌.

ಮಣ್ಣಿನ ಪರೀಕ್ಷೆಗೆ ಆರು ಗಂಟೆ ಸಮಯಾವಕಾಶ ಬೇಕಾಗುತ್ತದೆ. ಆದರೆ ಇದನ್ನು ತರಾತುರಿಯಲ್ಲಿ ಕೇವಲ 2–3 ಗಂಟೆಯಲ್ಲಿ ಮಾಡುತ್ತಾರೆ. ಅಲ್ಲದೆ ಪ್ರಯೋಗಾಲಯಗಳಲ್ಲಿ ಅಗತ್ಯವಾದ ಉಪಕರಣಗಳು, ಪರಿಣತಿ ಪಡೆದ ಸಿಬ್ಬಂದಿ ಇಲ್ಲ. ಮಣ್ಣಿನ ಆರೋಗ್ಯ, ಸಾವಯವ ಅಂಶಗಳ ಪ್ರಮಾಣದ ಬಗ್ಗೆ ರೈತರಿಗೆ ನಿಖರವಾದ ಮಾಹಿತಿ ನೀಡುವ ಕೆಲಸ ವೈಜ್ಞಾನಿಕವಾಗಿ ಆಗುತ್ತಿಲ್ಲ ಎಂಬುದು ಶ್ರೀನಿವಾಸ್‌ ಅವರ ಅಸಮಾಧಾನ.

ರಾಜ್ಯದಲ್ಲಿನ ಒಟ್ಟು 190.50 ಲಕ್ಷ ಹೆಕ್ಟೇರ್‌ ಪೈಕಿ 40.32 ಲಕ್ಷ ಹೆಕ್ಟೇರ್‌ ಭೂಮಿ ನೀರಾವರಿ ಪ್ರದೇಶವಾಗಿದ್ದರೆ, 129.70 ಲಕ್ಷ ಹೆಕ್ಟೇರ್‌ ಜಲಾನಯನ ಪ್ರದೇಶವಾಗಿದೆ. ಉಳಿದ ಪ್ರದೇಶ ಅರಣ್ಯ, ರಸ್ತೆಗಳು, ಜನವಸತಿ ಇತ್ಯಾದಿಗೆ ಸೇರಿದ್ದಾಗಿದೆ. ಕಾವೇರಿ ನೀರಾವರಿ ನಿಗಮ, ಕೃಷ್ಣಾ ಭಾಗ್ಯಜಲನಿಗಮ, ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಮಣ್ಣಿನ ಸವಕಳಿ ಸಮಸ್ಯೆ ಇದೆ. ಕೆಲವು ಕಡೆ ಜಾಸ್ತಿ ಇರಬಹುದು, ಕೆಲವು ಕಡೆ ಕಡಿಮೆ ಇರಬಹುದು. ಸಮಸ್ಯೆಯಂತೂ ಇದ್ದೇ ಇದೆ ಎನ್ನುತ್ತಾರೆ ಅಧಿಕಾರಿಗಳು.

ವಿವಿಧ ಜಲಾನಯನ ಯೋಜನೆಗಳಡಿ ಸುಮಾರು 73.25 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲಾಗಿದೆ. 9.52 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಣ್ಣಿನ ಸಂರಕ್ಷಣೆಯ ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ. ಇನ್ನುಳಿದ 46.93 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಕಾರ್ಯಕ್ರಮ ರೂಪಿಸಬೇಕಾಗಿದೆ. ಅನುದಾನದ ಕೊರತೆಯಿಂದಾಗಿ ಈ ಕಾರ್ಯ ಇನ್ನೂ ಸಾಧ್ಯವಾಗಿಲ್ಲ.

ಕಬ್ಬು ಕಟಾವಿನ ಸಂದರ್ಭ

ಕುಸಿದ ಇಳುವರಿ

ಮಣ್ಣಿನಲ್ಲಿ ಪ್ರಮುಖವಾಗಿ ಸಾವಯವ ಅಂಶ ಕಡಿಮೆಯಾಗುತ್ತಿರುವುದರಿಂದ ಬೆಳೆಗಳ ಇಳುವರಿ  ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮಣ್ಣು ಪೋಷಕಾಂಶವನ್ನು ಕಳೆದುಕೊಳ್ಳುವ ಮುನ್ನ ಒಂದು ಎಕರೆ ಪ್ರದೇಶದಲ್ಲಿ ಸರಾಸರಿ 30 ಕ್ವಿಂಟಲ್‌ ಇಳುವರಿ ಬರುತ್ತಿದ್ದರೆ, ಈಗ ಅದೇ ಭೂಮಿಯಲ್ಲಿ 10ರಿಂದ 15 ಕ್ವಿಂಟಲ್‌ ಮಾತ್ರ ಇಳುವರಿ ಬರುತ್ತಿದೆ.

‘ನಮಗೆ 4 ಎಕರೆ ಜಮೀನು ಇದೆ. 10 ವರ್ಷಗಳಿಂದ ಜಮೀನಿನಲ್ಲಿ ಸವಳು ಜಾಸ್ತಿಯಾಗಿದ್ದು, ಇಳುವರಿ ಕಡಿಮೆಯಾಗಿದೆ. ಮೊದಲು ಕಬ್ಬಿನ ಇಳುವರಿ ಸರಾಸರಿ 65 ಟನ್‌ ಇತ್ತು, ಸವಕಳಿಯ ನಂತರ ಇಳುವರಿ 35 ಟನ್‌ಗೆ ಇಳಿದಿದೆ‘ ಎನ್ನುತ್ತಾರೆ ಬಾಗಲಕೋಟೆ ಜಿಲ್ಲೆ ಚಿಕ್ಕಾಲಗುಂಡಿ ಬೆಳೆಗಾರ ಪೀರ್‌ಸಾಬ್‌ ಬುಡ್ನೇಶಿ.

ಸಾವಯವದಲ್ಲಿ ಸತು ಬಹಳ ಮುಖ್ಯವಾದ ಪೋಷಕಾಂಶ. ಇತರ ಪೋಷಕಾಂಶಗಳಾದ ಕಬ್ಬಿಣ, ತಾಮ್ರ, ಮ್ಯಾಂಗನೀಸ್‌, ಬೋರಾನ್‌, ಕ್ಲೋರಿನ್‌ ಪೋಷಕಾಂಶ ಬೆಳೆಯ ಇಳುವರಿಗೆ ಪರಿಣಾಮಕಾರಿಯಾಗಿವೆ. ಇವುಗಳ ಬಳಕೆಯಿಂದ ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಂದ ಆಗುವ ಹಾನಿಯನ್ನು ತಡೆಯಬಹುದು. ಆದರೆ, ಈ ಬಗ್ಗೆ ರೈತರಿಗೆ ಮಾಹಿತಿಯ ಕೊರತೆ ಇದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಬೆಳೆಗೆ ಹೆಚ್ಚು ನೀರು ಬೇಡುವ ಕಬ್ಬು, ಭತ್ತ ಮುಂತಾದ ಬೆಳೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದಾಗಿ, ಇಲ್ಲಿನ ಶೇ 59ಕ್ಕೂ ಹೆಚ್ಚು ಪ್ರದೇಶದ ಮಣ್ಣಿನಲ್ಲಿ ಹೆಚ್ಚಿನ ಲವಣಾಂಶ ಇರುವುದು, ಕೇಂದ್ರ ಸರ್ಕಾರದ ರಾಷ್ಟ್ರೀಯ ಮಣ್ಣು ಸರ್ವೇಕ್ಷಣಾ ಮತ್ತು ಭೂಬಳಕೆ ಯೋಜನಾ ಸಂಸ್ಥೆಯ (ಎನ್‌ಬಿಎಸ್‌ಎಸ್‌) ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಪತ್ತೆಯಾಗಿದೆ. ಈ ಸಮಸ್ಯೆಯಿಂದ ಇಡೀ ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರ್ಷಿಕ ₹850 ಕೋಟಿಗೂ ಹೆಚ್ಚು ಆರ್ಥಿಕ ನಷ್ಟವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಎನ್‌ಬಿಎಸ್‌ಎಸ್‌ ಸಂಸ್ಥೆಯು 2014ರಿಂದ 2019ರ ಅವಧಿಯಲ್ಲಿ ಏಳು ಜಿಲ್ಲೆಗಳ 11 ತಾಲ್ಲೂಕುಗಳ 14.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಅಧ್ಯಯನ ವರದಿ ಸಿದ್ಧಪಡಿಸಿದೆ. ಸಸ್ಯ ಸಂಪತ್ತು ಕುಸಿದಿರುವುದು, ಹವಾಮಾನ ಬದಲಾವಣೆಯಿಂದಾಗಿ ದಿಢೀರ್‌ ಪ್ರವಾಹ ಮತ್ತು ಒಂದೇ ದಿನ ಅತಿ ಹೆಚ್ಚು ಮಳೆ ಬೀಳುವುದು ಮುಂತಾದ ನೈಸರ್ಗಿಕ ಕಾರಣಗಳು ಮಣ್ಣು ಸವಕಳಿಗೆ ಪ್ರಮುಖವಾಗಿರುವುದು ಅಧ್ಯಯನದಿಂದ ತಿಳಿದು ಬಂದಿದೆ.

’ಮಣ್ಣಿಗೆ ಜೀವ ತುಂಬುವುದು ಸಾವಯವ ಅಂಶ. ಮಣ್ಣಿನ ರಚನೆಯೂ ಆರೋಗ್ಯವಾಗಿರಬೇಕು. ಆಗ ಮಾತ್ರ ಬೆಳೆಗಳಿಗೆ ಅಗತ್ಯವಿರುವ ಉತ್ತಮ ಪೋಷಕಾಂಶಗಳು ದೊರೆಯಲು ಸಾಧ್ಯ. ಮಣ್ಣಿನಲ್ಲಿ ಸಾವಯವ ಅಂಶ 0.5ಕ್ಕಿಂತಲೂ ಹೆಚ್ಚು ಇರಬೇಕು. 0.5 ಅಂಶಕ್ಕಿಂತ ಕಡಿಮೆ ಇದ್ದರೆ ಮಣ್ಣು ಸತ್ವಹೀನವಾಗುತ್ತದೆ ಅಥವಾ ಮರಳಾಗುತ್ತದೆ‘ ಎನ್ನುತ್ತಾರೆ ಎನ್‌ಬಿಎಸ್‌ಎಸ್‌ ಪ್ರಧಾನ ವಿಜ್ಞಾನಿ ರಾಜೇಂದ್ರ ಹೆಗಡೆ.

ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಡಿಎಪಿ ರಸಗೊಬ್ಬರ ಹೆಚ್ಚು ಬಳಕೆಯಾಗುತ್ತದೆ. ಕಪ್ಪು ಮಣ್ಣು ಹೆಚ್ಚು ಇರುವ ಉತ್ತರ ಕರ್ನಾಟಕದಲ್ಲಿ ಜಿಂಕ್‌ ಮತ್ತು ಕಬ್ಬಿಣ ಅಂಶ ಹೆಚ್ಚಿಗೆ ಇದೆ. ಇಲ್ಲಿ ಬೆಳೆಗಳಿಗೆ ಲಘು ಪೋಷಕಾಂಶಗಳು ಅತ್ಯಗತ್ಯ. ಈ ಪೋಷಕಾಂಶಗಳ ಕೊರತೆಯಾದರೂ ಅದೇ ಮುಖ್ಯ ಸಮಸ್ಯೆಯಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು. ಇದೀಗ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಬೋರಾನ್‌ ಕೊರತೆ ಕಂಡು ಬಂದಿದೆ. ದಕ್ಷಿಣ ಕರ್ನಾಟಕದ ಕೆಂಪು ಮಣ್ಣಿನಲ್ಲಿ ಶೇ 96ರಷ್ಟು ಬೋರಾನ್‌ ಕೊರತೆ ಇದೆ.

ನೀರಾವರಿ ಪ್ರದೇಶಗಳಲ್ಲಿ ಬೆಳೆಗಳಿಗೆ ಹೆಚ್ಚು ನೀರು ಬಳಸುವುದು ಸಾಮಾನ್ಯ. ಮಣ್ಣಿಗೆ ನೀರು ಎಷ್ಟು ಇಂಗಿಸುವ ಶಕ್ತಿ ಇದೆಯೋ ಅಷ್ಟು ಮಾತ್ರ ಕೊಡಬೇಕು. ಆದರೆ, ಅವೈಜ್ಞಾನಿಕ ಪದ್ಧತಿಗಳಿಂದ ಹೆಚ್ಚು ನೀರು ಹರಿಸುವುದರಿಂದ ಮಣ್ಣಿನಲ್ಲಿ ಜವಳು, ಸವಕಳಿ ಮತ್ತು ಲವಣಾಂಶ ಹೆಚ್ಚುತ್ತದೆ. ಹವಾಮಾನ ಬದಲಾವಣೆ
ಯಿಂದಲೂ ಮಣ್ಣು ಮರಳು ರೂಪ ಪಡೆಯುವುದು ಮುಂದುವರಿಯುತ್ತಿದೆ.  ಒಂದೇ ರೀತಿಯ ಬೆಳೆ ಪದ್ಧತಿಯನ್ನು ಹಲವು ವರ್ಷಗಳಿಂದ ಅನುಸರಿಸುತ್ತಿರುವುದು ಸವಕಳಿಗೆ ಕಾರಣವಾಗಿದೆ. ಕಪ್ಪು ಮಣ್ಣಿನ ಪ್ರದೇಶದಲ್ಲಿ ಸವಕಳಿ ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

’1950ರಲ್ಲಿ ಸಾರಜನಕ ಕೊರತೆ ಮಾತ್ರವೇ ಕಂಡು ಬಂದಿತ್ತು. ಈಗ ಹಲವು ಪೋಷಕಾಂಶಗಳ ಕೊರತೆ ಕಂಡು ಬಂದಿದೆ. ನೀರಾವರಿ ಪ್ರದೇಶಗಳಲ್ಲಿ ಲವಣಾಂಶ ಹೆಚ್ಚುತ್ತಿದೆ. ಭತ್ತದ ಗದ್ದೆಗಳಲ್ಲಿ ನಿರಂತರವಾಗಿ ನೀರು ನಿಲ್ಲಿಸುವುದು ಇದಕ್ಕೆ ಮುಖ್ಯ ಕಾರಣ. ಹೀಗಾಗಿ, ರೈತರು ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಕಾಲಕ್ಕೆ ತಕ್ಕಂತೆ ಕೃಷಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು‘ ಎನ್ನುತ್ತಾರೆ ಪ್ರಾಧ್ಯಾಪಕ ಸತೀಶ್‌.

ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಭೂ ಚೇತನ ಯೋಜನೆಯಡಿಯಲ್ಲಿ ರಾಜ್ಯದ 16 ಜಿಲ್ಲೆಗಳಲ್ಲಿ 12.79 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಸ
ಲಾಗಿತ್ತು. 2009ರಿಂದ 2018ರವರೆಗೆ ಈ ಯೋಜನೆ ಜಾರಿಯಲ್ಲಿತ್ತು. ಒಟ್ಟು 1.04 ಕೋಟಿ ಫಲಾನುಭವಿಗಳು ಯೋಜನೆ ಪ್ರಯೋಜನ ಪಡೆದಿದ್ದರು. ಆದರೆ, ಯೋಜನೆಯ ಅವಧಿ ಮುಗಿದ ಬಳಿಕ ಮರುಜಾರಿಗೊಳಿಸಲು ರಾಜ್ಯ ಸರ್ಕಾರ ಆಸಕ್ತಿ ತೋರಿಸಲಿಲ್ಲ.

ಪರ್ಯಾಯ ಬೆಳೆಗಳತ್ತ ಯೋಚನೆ

ಬರಗಾಲ ಪೀಡಿತ ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿಯು ಅತಿಯಾದ ರಾಸಾಯನಿಕಗಳ ಬಳಕೆ, ಬೆಳೆಗಳಿಗೆ ಸದಾ ನೀರು ನಿಲ್ಲಿಸುವ ಕ್ರಮದಿಂದಾಗಿ ತನ್ನ ಫಲವತ್ತತೆಯನ್ನು ಕಳೆದುಕೊಂಡು ಬರಡಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಒಟ್ಟು 5,41,953 ಹೆಕ್ಟೇರ್‌ ಬಿತ್ತನೆ ಪ್ರದೇಶ ಇದೆ. ಇಲ್ಲೂ ಸಹ ಭತ್ತಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಒಟ್ಟಾರೆ 1,70,363 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ.

ಮಳೆಯಾಶ್ರಿತ ಕೃಷಿ ಪ್ರದೇಶವಾಗಿದ್ದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ 1953ರಲ್ಲಿ ಜಲಾಶಯ ನಿರ್ಮಿಸಿದ ನಂತರ ಬಹುತೇಕ ರೈತರು ಭತ್ತವನ್ನೇ ಬೆಳೆಯುತ್ತಿದ್ದಾರೆ. ಕಾಲುವೆ ಅಂಚಿನಲ್ಲಿ ಶೇ 8ರಷ್ಟು ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯಲು ಅವಕಾಶ ಇದೆ. ಆದರೆ, ಕಾಲುವೆ ಪಕ್ಕದ ಶೇಕಡ 44ರಷ್ಟು ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಎಡದಂಡೆ ಕಾಲುವೆಯ 3.20 ಲಕ್ಷ ಹೆಕ್ಟೇರ್‌ ಪ್ರದೇಶದ ಪೈಕಿ ಬೆಳೆ 1 ಲಕ್ಷ ಹೆಕ್ಟೇರ್‌ ಭೂಮಿ ಸವಳಾಗಿದೆ.

‘ಮಣ್ಣಿನ ಫಲವತ್ತತೆ ಕಡಿಮೆಯಾಗಲು ರಾಸಾಯನಿಕ ಗೊಬ್ಬರಗಳ ಬಳಕೆ ಒಂದೇ ಕಾರಣ ಅಲ್ಲ. ರೈತರು ಸಾಂಪ್ರದಾಯಿಕ ಪದ್ಧತಿಯಲ್ಲಿ ಕೃಷಿ ಮಾಡುವುದನ್ನು ನಿಲ್ಲಿಸಿದ್ದಾರೆ. ಸರಿಯಾಗಿ ಮಣ್ಣು ಪರೀಕ್ಷೆ ಮಾಡಿಸದೇ ಮನಸೋ ಇಚ್ಛೆ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ನೀಡುವ ಸಲಹೆಗಳನ್ನು ರೈತರು ಗಂಭೀರವಾಗಿ ಪರಿಗಣಿ
ಸುತ್ತಿಲ್ಲ. ಮಳೆ ಬಂದ ತಕ್ಷಣ ಮತ್ತೆ ತಮ್ಮದೇ ನಿರ್ಧಾರ ಮಾಡುತ್ತಾರೆ. ಈ ಎಲ್ಲ ಅಂಶಗಳು ಭೂಮಿಯ ಫಲವತ್ತತೆ ಹಾಳಾಗಲು ಕಾರಣವಾಗಿದೆ’ ಎಂದು ರಾಯಚೂರು ಕೃಷಿ ವಿ.ವಿ. ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಅಣ್ಣನಗೌಡ ವಿ.ಕರೇಗೌಡರ ವಿವರಿಸುತ್ತಾರೆ.

‘ಶಹಾಪುರ ತಾಲ್ಲೂಕಿನಲ್ಲಿ ರೈತರು ಹೆಚ್ಚಾಗಿ ವಾಣಿಜ್ಯ ಬೆಳೆಯಾದ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ಹಲವು ವರ್ಷಗಳಿಂದ ಬೆಳೆಯುತ್ತಾ ಬರುತ್ತಿದ್ದಾರೆ. ಇದರಿಂದ ಭೂಮಿಯಲ್ಲಿ ಸತ್ವ ಕಡಿಮೆಯಾಗು
ವುದರ ಜತೆಗೆ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ರೈತರು ಪರ್ಯಾಯ ಬೆಳೆ ಬೆಳೆಯಬೇಕು’ ಎನ್ನುತ್ತಾರೆ ಶಹಾಪುರದ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಕೃಷಿ ವಿಜ್ಞಾನಿ ಡಾ.ದಯಾನಂದ ಹೊನ್ನಾಳೆ.

ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸುವ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು, ರಾಜ್ಯದ ಎಲ್ಲೆಡೆ ಮಣ್ಣಿನ ಪರೀಕ್ಷೆ ಮಾಡುವ ಮೂಲಕ ರೈತರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಹಿತಿ ಒದಗಿಸುವ ಕೆಲಸ ತ್ವರಿತವಾಗಿ ಆಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

ಕಾವೇರಿ ಅಚ್ಚುಕಟ್ಟು: 8 ಸಾವಿರ ಹೆಕ್ಟೇರ್‌ ಪ್ರದೇಶ ರಸಹೀನ

ಕೃಷಿ ಭೂಮಿಯಲ್ಲಿ ದೀರ್ಘಕಾಲದವರೆಗೆ ನೀರು ನಿಲ್ಲುವಂತೆ ಮಾಡಿ, ರಾಸಾಯನಿಕ ಗೊಬ್ಬರ ಹಾಕಿ ಬೆಳೆ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದೆ. ಅವೈಜ್ಞಾನಿಕವಾಗಿ ನೀರು ಕಟ್ಟುವುದರಿಂದಲೇ ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 8 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಸವಕಳಿಯಾಗಿದೆ.

ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ ಜಿಲ್ಲಾ ವ್ಯಾಪ್ತಿಯನ್ನೊಳಗೊಂಡ ಅಚ್ಚುಕಟ್ಟು ಪ್ರದೇಶದಲ್ಲಿ 2013ರಲ್ಲಿ ನಡೆದ ಅಧ್ಯಯನದಲ್ಲಿ 5 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಸವಕಳಿಯಾಗಿತ್ತು. ಈಚೆಗೆ ನಡೆದ ಅಧ್ಯಯನದಲ್ಲಿ ಸವಕಳಿ ಪ್ರದೇಶ 8 ಸಾವಿರ ಹೆಕ್ಟೇರ್‌ಗೆ ಏರಿಕೆಯಾಗಿದೆ. ಯೂರಿಯಾ, ಡಿಎಪಿ, 10–26–26 ರಸಗೊಬ್ಬರ ಬಳಕೆಯೇ ಸವಕಳಿಗೆ ಮುಖ್ಯ ಕಾರಣ ಎನ್ನುತ್ತಾರೆ ಮಣ್ಣಿನ ತಜ್ಞರು.

ಒಟ್ಟು ಸವಕಳಿ ಪ್ರದೇಶದಲ್ಲಿ 200 ಹೆಕ್ಟೇರ್‌ ಪ್ರದೇಶ ಯಾವುದೇ ಬೆಳೆ ಬೆಳೆಯಲಾಗದಷ್ಟು ರಸಹೀನಗೊಂಡಿದೆ. ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲೇ ಈ ಪ್ರದೇಶ ಹೆಚ್ಚು ಕಂಡು ಬಂದಿದೆ. ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ತಾಲ್ಲೂಕು ವ್ಯಾಪ್ತಿಯಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ಹರಿವು ಹೆಚ್ಚಾಗಿದ್ದು ಮಣ್ಣಿನ ಮೇಲ್ಪದರ ಹಾಳಾಗಿರುವುದು ಅಧ್ಯಯನದಿಂದ ಕಂಡುಬಂದಿದೆ.

ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ (ವಿ.ಸಿ.ಫಾರಂ ಕೃಷಿ ವಿಜ್ಞಾನ ಕೇಂದ್ರ, ಮಂಡ್ಯ) ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಅಧ್ಯಯನ ನಡೆದಿದ್ದು ಭೂಮಿಯ ಎರಡೂವರೆ ಅಡಿ ಮೇಲ್ಪದರ ಸವಳು– ಜವಳಾಗಿರುವುದು ಕಂಡುಬಂದಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ರಂಜಕಾಂಶ ಹೆಚ್ಚಾಗಿದ್ದು ಮಣ್ಣಿನ ಫಲವತ್ತತೆ ಹಾಳಾಗಿದೆ.

‘ಹೆಚ್ಚು ನೀರಿನ ಹರಿವು, ನೀರಿನ ಕಟ್ಟುವಿಕೆಯಿಂದಾಗಿ ಮಣ್ಣಿನ ಕಣಗಳು ಛಿದ್ರಗೊಳ್ಳುತ್ತಿವೆ. ನೀರಿನ ಜೊತೆಗೆ ರಾಸಾಯನಿಕ ಗೊಬ್ಬರ ಬೆರೆತು ಭೂಮಿಯ ಮೇಲ್ಪದರ ಹಾಳಾಗುತ್ತಿದೆ’ ಎನ್ನುತ್ತಾರೆ ವಿ.ಸಿ ಫಾರಂ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ತಜ್ಞೆ ಡಾ.ಅತೀಫಾ ಮುನಾವರಿ.

–––––––

ಫಲವತ್ತತೆ ಹಾಳಾದ ಪ್ರದೇಶ

  • ಕಾವೇರಿ ಅಚ್ಚುಕಟ್ಟು 8 ಸಾವಿರ ಹೆಕ್ಟೆರ್

  • ತುಂಗಭದ್ರಾ ಎಡದಂಡೆ 1 ಲಕ್ಷ ಹೆಕ್ಟೆರ್

  • ತುಂಗಭದ್ರಾ ಬಲದಂಡೆ 29,938 ಹೆಕ್ಟೆರ್

  • ಕೃಷ್ಣಾ ಅಚ್ಚುಕಟ್ಟು 1,07,483 ಹೆಕ್ಟೆರ್

ಅಭಿಪ್ರಾಯಗಳು...

ರೈತರ ಆದಾಯ ದ್ವಿಗುಣಕ್ಕೆ ಮಣ್ಣು ಸಂರಕ್ಷಣೆ ಅಗತ್ಯ: ಮಣ್ಣಿನ ಸವಕಳಿ ತಪ್ಪಿಸಲು ಸರ್ಕಾರ ರೂಪಿಸಿರುವ ಯೋಜನೆಗಳು ಯಶಸ್ವಿಯಾಗಿದ್ದರೂ ಸ್ಥಿರತೆಯನ್ನು ಕಾಪಾಡಿಕೊಳ್ಳಲು ವಿಫಲವಾಗಿವೆ. ನಿರಂತರವಾಗಿ ಮಣ್ಣು ಸಂರಕ್ಷಣೆಯ ಬಗ್ಗೆ ಕಾಳಜಿವಹಿಸದಿರುವುದೇ ಇದಕ್ಕೆ ಮುಖ್ಯ ಕಾರಣ. ಭೂಚೇತನ ಸೇರಿದಂತೆ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ವಿಶ್ವಬ್ಯಾಂಕ್‌ ಅನುದಾನದ ಅಡಿಯಲ್ಲೂ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಗಳು ಖಂಡಿತವಾಗಿ ಯಶಸ್ಸು ಸಾಧಿಸಿವೆ. ಆದರೆ, ಯಾವುದಾದರೂ ಒಂದು ಯೋಜನೆ ಸ್ಥಗಿತವಾದ ನಂತರ ಮತ್ತೆ ಯಥಾಸ್ಥಿತಿಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ, ಮೂಲ ಉದ್ದೇಶವೇ ಈಡೇರುತ್ತಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಯಲ್ಲಿ ಮಣ್ಣು ಸಂರಕ್ಷಣೆಯೇ ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ. ಹಲವು ರೈತರು ಸರ್ಕಾರದ ಯಾವುದೇ ರೀತಿಯ ನೆರವು ಇಲ್ಲದೆ ಮಣ್ಣು ಸಂರಕ್ಷಣೆಗೆ ಕಾಳಜಿವಹಿಸುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಇನ್ನು ಕೆಲವರು ಸರ್ಕಾರದ ಮೇಲೆಯೇ ಅವಲಂಬನೆಯಾಗಿ ನಿರ್ಲಕ್ಷ್ಯ ವಹಿಸುತ್ತಾರೆ.
ಡಾ. ಸತೀಶ್‌, ಪ್ರಾಧ್ಯಾಪಕ. ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ವಿಭಾಗ, ಜಿಕೆವಿಕೆ
ಮಣ್ಣಿನ ಸವಕಳಿ ತಪ್ಪಿಸಲು ಸರ್ಕಾರ ರೂಪಿಸಿರುವ ಯೋಜನೆಗಳು ಯಶಸ್ವಿಯಾಗಿದ್ದರೂ ಸ್ಥಿರತೆಯನ್ನು ಕಾಪಾಡಿಕೊಳ್ಳಲು ವಿಫಲವಾಗಿವೆ. ನಿರಂತರವಾಗಿ ಮಣ್ಣು ಸಂರಕ್ಷಣೆಯ ಬಗ್ಗೆ ಕಾಳಜಿವಹಿಸದಿರುವುದೇ ಇದಕ್ಕೆ ಮುಖ್ಯ ಕಾರಣ. ಭೂಚೇತನ ಸೇರಿದಂತೆ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ವಿಶ್ವಬ್ಯಾಂಕ್‌ ಅನುದಾನದ ಅಡಿಯಲ್ಲೂ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆಗಳು ಖಂಡಿತವಾಗಿ ಯಶಸ್ಸು ಸಾಧಿಸಿವೆ. ಆದರೆ, ಯಾವುದಾದರೂ ಒಂದು ಯೋಜನೆ ಸ್ಥಗಿತವಾದ ನಂತರ ಮತ್ತೆ ಯಥಾಸ್ಥಿತಿಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ, ಮೂಲ ಉದ್ದೇಶವೇ ಈಡೇರುತ್ತಿಲ್ಲ. ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಯಲ್ಲಿ ಮಣ್ಣು ಸಂರಕ್ಷಣೆಯೇ ಪ್ರಮುಖ ಪಾತ್ರವಹಿಸುತ್ತದೆ. ಫಲವತ್ತಾದ ಮಣ್ಣು ಇದ್ದರೆ ಮಾತ್ರ ಬೆಳೆಗಳ ಇಳುವರಿ ಹೆಚ್ಚಲು ಸಾಧ್ಯ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ. ಹಲವು ರೈತರು ಸರ್ಕಾರದ ಯಾವುದೇ ರೀತಿಯ ನೆರವು ಇಲ್ಲದೆ ಮಣ್ಣು ಸಂರಕ್ಷಣೆಗೆ ಕಾಳಜಿವಹಿಸುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಇನ್ನು ಕೆಲವರು ಸರ್ಕಾರದ ಮೇಲೆಯೇ ಅವಲಂಬನೆಯಾಗಿ ನಿರ್ಲಕ್ಷ್ಯ ವಹಿಸುತ್ತಾರೆ.
– ಡಾ. ಸತೀಶ್‌.
ಹಿಂದಿನವರು ಭೂಮಿಗೆ ಸಗಣಿ, ಹಸಿರೆಲೆ ಗೊಬ್ಬರ ಹಾಕಿ ಗದ್ದೆಯನ್ನು ನಾಟಿಗೆ ಸಿದ್ಧಗೊಳಿಸುತ್ತಿದ್ದರು. ಈಗ ರಸಗೊಬ್ಬರ ಬಳಸುತ್ತಿರುವುದರಿಂದ ಭೂಮಿ ಸವಳು– ಜವಳು ಆಗಿದೆ. ಈಗಲೂ ಸಾವಯವ ಕೃಷಿ ಪದ್ದತಿ ಅನುಸರಿಸಿ ಭೂಮಿಯನ್ನು ಕಾಪಾಡಬೇಕು
ಸೋಮಶೇಖರ್‌, ಪ್ರಗತಿಪರ ರೈತ, ಹನಿಯಂಬಾಡಿ, ಮಂಡ್ಯ ತಾಲ್ಲೂಕು
‘ಹೆಚ್ಚಿನ ಇಳುವರಿ ಪಡೆಯುವ ಆಸೆಯಿಂದ ರಾಸಾಯನಿಕ ಬಳಕೆ ಹೆಚ್ಚಿಗೆ ಮಾಡಿದ್ದು ಇಂದಿನ ಪರಿಸ್ಥಿತಿಗೆ ಪ್ರಮುಖ ಕಾರಣ. ಈಗಲಾದರೂ ರೈತರು ಎಚ್ಚೆತ್ತುಕೊಳ್ಳದಿದ್ದರೆ ಭೂಮಿ ಬರಡಾಗುತ್ತದೆ. ಇದಕ್ಕೆ ಸಂಘಟಿತ ಪ್ರಯತ್ನ ನಡೆಯಬೇಕಿದೆ’
ಕೆ.ನಾಗೇಶ್ವರರಾವ್ ಮಲ್ಲದಗುಡ್ಡ, ರಾಯಚೂರು ಜಿಲ್ಲೆ ಕವಿತಾಳ ಸಮೀಪ ಮಲ್ಲದಗುಡ್ಡ
ಅತಿಯಾದ ರಾಸಾಯನಿಕ ಮತ್ತು ಕ್ರಿಮಿನಾಶಕ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿದೆ ಸಗಣಿ ಗೊಬ್ಬರ, ಎರೆಹುಳು ಗೊಬ್ಬರ, ಹಸಿರು ಎಲೆ ಮಲ್ಚಿಂಗ್ ಮತ್ತು ಪರ್ಯಾಯ ಬೆಳೆ ಬೆಳೆಯುವ ಮೂಲಕ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕಿದೆ
ವೆಂಕಟಪತಿ ಮಲ್ಲದಗುಡ್ಡ, ರಾಯಚೂರು ಜಿಲ್ಲೆ ಕವಿತಾಳ ಸಮೀಪ ಮಲ್ಲದಗುಡ್ಡ
ರೈತರು ಟ್ರ್ಯಾಕ್ಟರ್‌ ಮೂಲಕ ಭೂಮಿ ಉಳುಮೆ ಮಾಡಿಸುತ್ತಿರುವುದರಿಂದ ಮಣ್ಣು ಕಿತ್ತು ಗಾಳಿಗೆ ಹಾರಿ ಹೋಗಿ ಸವಕಳಿ ಹೆಚ್ಚಾಗುತ್ತಿದೆ. ಅತಿಯಾದ ರಸಗೊಬ್ಬರ ಬಳಕೆ, ಒಂದೇ ಬೆಳೆಗೆ ಮೀಸಲಾಗಿರುವುದು ಕೂಡ ಮಣ್ಣಿನ ಫಲವತ್ತತೆ ಕಡಿಮೆಯಾಗಲು ಕಾರಣ. ಸಜ್ಜೆ, ಮೆಕ್ಕೆಜೋಳ ಬೆಳೆಗಳಲ್ಲಿ ತೆನೆ ಮಾತ್ರ ತೆಗೆದುಕೊಂಡು ಉಳಿದ ಭಾಗವನ್ನು ರೂಟರಿಂಗ್ ಮಾಡಿಸಿದಾಗ ಮಣ್ಣಿನಲ್ಲಿ ಸೇರಿ ಮಳೆಯಾದಾಗ, ಇಲ್ಲವೆ ನೀರು ಹರಿಸಿದಾಗ ತೇವಾಂಶ ಹಿರಿಕೊಂಡು ಮಣ್ಣುಕೊಚ್ಚಿ ಹೋಗದಂತೆ ತಡೆಯುತ್ತದೆ.
ಪಾಮಣ್ಣ ನಾಯಕ, ಹೊಸಳ್ಳಿ, ಗಂಗಾವತಿ ತಾಲ್ಲೂಕು
ಮಣ್ಣಿನ ಸವಕಳಿ ಅನಾದಿ ಕಾಲದಿಂದಲೂ ಆಗುತ್ತಿದ್ದು ಈಗ ಪ್ರಮಾಣ ಹೆಚ್ಚಾಗಿದೆ. ಮಣ್ಣು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಚ್ಚಿ ಹೋಗಿ ಸವಕಳಿ ಉಂಟಾಗುತ್ತಿದೆ. ಮಣ್ಣಿನ ಮೇಲಿನ ಒಂದು ಇಂಚು ಫಲವತ್ತಾದ ಪದರ ಸಂಗ್ರಹವಾಗಲು ವೈಜ್ಞಾನಿಕವಾಗಿ 200 ವರ್ಷಗಳ ಸಮಯ ಬೇಕು. ಈ ಹಿಂದೆ ಕುಂಟೆ, ಎತ್ತಿನ ಕರದಿಂದ ಭೂಮಿ ಉಳುಮೆ ಮಾಡಿದರೆ ಎರಡು ಇಂಚು ಮಣ್ಣು ಕಿತ್ತಿ ಅಲ್ಲಿಯೇ ಉಳಿಯುತ್ತಿತ್ತು. ಮಣ್ಣಿನ ಸವಕಳಿ ತಪ್ಪುತ್ತಿತ್ತು. ಈಗ ಹೆಚ್ಚಾಗುತ್ತಿದೆ.
ಶ್ರೀನಾಥ್‌ ತೂನಾ, ರೈತ, ಮುಸಲಾಪುರ, ಕೊಪ್ಪಳ ಜಿಲ್ಲೆ

ಮೂರು ಹಂತದಲ್ಲಿ ಮಣ್ಣ ಸವಕಳಿ

ಬೆಳಗಾವಿ ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಮಣ್ಣು ಸವಕಳಿ ಆಗುತ್ತದೆ. ಕಪ್ಪು ಬಣ್ಣದ ಆಳವಾದ ಮಣ್ಣು ಹೆಚ್ಚಿದ್ದಲ್ಲಿ ಸವಕಳಿ ಪ್ರಮಾಣ ಹೆಚ್ಚು. ಈ ಮಣ್ಣಿನಲ್ಲಿ ಮಳೆ ನೀರು ಇಂಗುವ ಪ್ರಮಾಣ ಕಡಿಮೆಯಾದ್ದರಿಂದ ಬೇಗ ಹರಿದು, ಸವಕಳಿ ಉಂಟಾಗುತ್ತದೆ.

ಬೆಳಗಾವಿ ಜಿಲ್ಲೆಯ ಗೋಕಾಕ, ಸವದತ್ತಿ, ರಾಮದುರ್ಗ ತಾಲ್ಲೂಕುಗಳಲ್ಲಿ ಇದು ಹೆಚ್ಚು. ಇಲ್ಲಿ ಮಳೆಯ ತೀವ್ರತೆ ಹೆಚ್ಚು. ಹೀಗಾಗಿ, ಮಣ್ಣು ಸವಕಳಿ ಉಂಟಾಗುತ್ತದೆ. ಬೈಲಹೊಂಗಲ, ಹುಕ್ಕೇರಿ, ಬೆಳಗಾವಿ ತಾಲ್ಲೂಕುಗಳಲ್ಲಿ ಮಳೆ ದಿನಗಳು ಹೆಚ್ಚಿದ್ದರೂ ಮಳೆಯ ತೀವ್ರತೆ ಕಡಿಮೆ. ಹೀಗಾಗಿ, ಇಲ್ಲಿ ಸವಕಳಿ ಪ್ರಮಾಣ ತೀರ ಕಡಿಮೆ ಇದೆ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ವಿಷಯ ತಜ್ಞ ಸಿ.ಐ. ಹೂಗಾಟ.

ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ ತಾಲ್ಲೂಕುಗಳಲ್ಲಿ ಕೃಷ್ಣಾ ಹಾಗೂ ಅದರ ಉಪನದಿಗಳ ಪ್ರವಾಹ ಪದೇಪದೇ ಉಂಟಾಗುವುದರಿಂದ ಅಲ್ಲಿ ಸವಕಳಿ ನಿರಂತರ ಇರುತ್ತದೆ. ಜಿಲ್ಲೆಯಲ್ಲಿ ಇಳಿಜಾರು ಪ್ರದೇಶ ಕಡಿಮೆ ಇದೆ. ಹೀಗಾಗಿ, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಣ್ಣು ಸವಕಳಿ ಪ್ರಮಾಣ ಕಡಿಮೆ ಇದೆ.

-------

ಪೂರಕ ಮಾಹಿತಿ ಒದಗಿಸಿದವರು

ಸಚ್ಚಿದಾನಂದ ಕುರಗುಂದ, ಎಂ.ಜಿ. ಬಾಲಕೃಷ್ಣ, ಯೋಗೇಶ್‌ ಮಾರೇನಹಳ್ಳಿ, ಬಿ.ಜೆ.ಧನ್ಯಪ್ರಸಾದ್‌,  ಮನೋಜಕುಮಾರ್‌ ಗುದ್ದಿ, ಚಂದ್ರಕಾಂತ ಮಸಾನಿ, ಬಿ.ಜಿ. ಪ್ರವೀಣಕುಮಾರ್‌, ಪ್ರಮೋದ

*****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.