ADVERTISEMENT

ಒಳನೋಟ: ಜನಪ್ರಿಯತೆ ಜತೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಏರಿಕೆ!

ಸತೀಶ ಬೆಳ್ಳಕ್ಕಿ
Published 25 ಡಿಸೆಂಬರ್ 2021, 19:45 IST
Last Updated 25 ಡಿಸೆಂಬರ್ 2021, 19:45 IST
ಗದುಗಿನ ನಾಗಾವಿ ಬಳಿ ಇರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ
ಗದುಗಿನ ನಾಗಾವಿ ಬಳಿ ಇರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ   

ರಾಜ್ಯದಲ್ಲಿರುವ ಐದು ವಿಶೇಷ ವಿಶ್ವವಿದ್ಯಾಲಯಗಳು ಭ್ರಷ್ಟಾಚಾರ ಮತ್ತು ದುರಾಡಳಿತದ ನೆರಳಿನಲ್ಲಿ ತಮ್ಮ ಘನ ಉದ್ದೇಶವನ್ನೇ ಮರೆತಂತಿವೆ. ಈ ವಿಶ್ವವಿದ್ಯಾಲಯಗಳ ಕಾಯಕಲ್ಪ ಆಗಬೇಕಿರುವುದು ಹೇಗೆ? ಇವುಗಳನ್ನು ಮತ್ತೆ ಪ್ರವರ್ಧಮಾನಕ್ಕೆ ತರಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಪ್ರಶ್ನೆಗಳನ್ನು ‘ಪ್ರಜಾವಾಣಿ’ಯು ತಜ್ಞರ ಮುಂದಿರಿಸಿತು. ಸಮಸ್ಯೆಗಳ ಸುಳಿಯನ್ನು ಎಲ್ಲಿಂದ ಬಿಡಿಸಬೇಕು ಎಂಬುದಕ್ಕೆ ಪರಿಣತರು ಇಲ್ಲಿ ಉತ್ತರಿಸಿದ್ದಾರೆ. ಪ್ರತಿ ವಿಶ್ವವಿದ್ಯಾಲಯದಲ್ಲಿಯೂ ಕಾಯಂ ಬೋಧಕರ ನೇಮಕಾತಿಗೆ ಕ್ರಮ ಕೈಗೊಂಡರೆ ನಿರೀಕ್ಷಿತ ಫಲ ಸಿಗುತ್ತದೆ ಎಂಬುದು ಎಲ್ಲರ ಒಕ್ಕೊರಲಿನ ಮಾತು. ಜೊತೆಗೆ ಕೆಲವು ಸಕಾರಾತ್ಮಕ ಸಲಹೆಗಳೂ ಇಲ್ಲಿವೆ. ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವಾಗ ಇರುವ ಉತ್ಸಾಹ, ಅವುಗಳನ್ನು ಬೆಳೆಸುವವರೆಗೂ, ಅವು ಸ್ವಾಯತ್ತವಾಗಿ ಬೆಳೆಯುವವರೆಗೂ ಪೋಷಿಸುವಷ್ಟು ಇದ್ದರೆ, ಅಭಿವೃದ್ಧಿ ಸುಸ್ಥಿರವಾಗುತ್ತದೆ. ಇಲ್ಲದಿದ್ದಲ್ಲಿ ಕೆಲವೆಡೆ ಕೇವಲ ಕಟ್ಟಡ ಸಂಸ್ಕೃತಿಯೂ, ಇನ್ನೂ ಕೆಲವೆಡೆ ಕೇವಲ ಕಡತಗಳ ಸಂಸ್ಕೃತಿಯೂ ಬೆಳೆಯುತ್ತದೆ. ಪರಿಣತರು ಏನು ಹೇಳುತ್ತಾರೆ ಇಲ್ಲಿದೆ..

ಗದಗ: ಗ್ರಾಮೀಣ ಜನರ ಬದುಕಿನ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ, ಗ್ರಾಮೀಣ ಕೌಶಲಗಳನ್ನು ಕಲಿಸುವ ಉದ್ದೇಶದೊಂದಿಗೆ ಆರಂಭವಾದ ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯವು ಅದಕ್ಕೆ ತಕ್ಕದಾದ ಪಠ್ಯಕ್ರಮವನ್ನೂ ರಚಿಸಿ, ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತ ಬಂದಿದೆ.

ಗ್ರಾಮೀಣ ಜನರ ಉದ್ಯೋಗಗಳಾದ ಕೃಷಿ, ಪಶುಸಂಗೋಪನೆ, ಸಸ್ಯಪಾಲನೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಈ ಮೂಲಕ ವಿಶ್ವವಿದ್ಯಾಲಯದ ಉದ್ದೇಶವನ್ನು ಸಶಕ್ತಗೊಳಿಸುತ್ತಿದೆ. ಈ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಬಿತ್ತುವುದರಿಂದ ಬೆಳೆಯುವವರೆಗಿನ ಎಲ್ಲ ಪ್ರಕ್ರಿಯೆಯ ಅನುಭವ ಪಡೆದುಕೊಳ್ಳುತ್ತಿದ್ದಾರೆ.

ADVERTISEMENT

‘2021–22ನೇ ಸಾಲಿನ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಗಳನ್ನು ಕೂಡ ಆರಂಭಿಸಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ಗೆ ಸಂಬಂಧಿಸಿದ ಪಠ್ಯಕ್ರಮ ರಚಿಸಲಾಗಿದೆ. ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಗಣನೀಯವಾಗಿ ಹೆಚ್ಚುತ್ತಿರುವುದು ವಿಶ್ವವಿದ್ಯಾಲಯದ ಖ್ಯಾತಿ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ’ ಎನ್ನುತ್ತಾರೆ ಅವರು.

ವಿಶ್ವವಿದ್ಯಾಲಯದಲ್ಲಿ ಕಾಯಂ ಸಿಬ್ಬಂದಿ ಇಲ್ಲದ ಕಾರಣ ಸಂಶೋಧನಾ ಚಟುವಟಿಕೆಗಳು ನಡೆಯುತ್ತಿಲ್ಲ. ಗೆಸ್ಟ್‌ ಫ್ಯಾಕಲ್ಟಿಗೆ ಗೈಡ್‌ ಮಾಡುವ ಅವಕಾಶ ಇಲ್ಲದ ಕಾರಣ ಸಂಶೋಧನೆಯಲ್ಲಿ ಆಸಕ್ತಿ ಇದ್ದರೂ ಕೂಡ ತೊಡಗಿಸಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ ವಿದ್ಯಾರ್ಥಿಗಳು.

-ಎಚ್‌.ಕೆ.ಪಾಟೀಲ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ಗೆ ಸಂಬಂಧಿಸಿದಂತೆ ಇರುವ ದೇಶದ ಏಕೈಕ ವಿಶ್ವವಿದ್ಯಾಲಯ ಗದುಗಿನಲ್ಲಿದೆ. ಒಂದು ವಿಶ್ವವಿದ್ಯಾಲಯ ಆರಂಭವಾಗಿ ತುಂಬ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು ಇದರ ಹೆಗ್ಗಳಿಕೆ.

'ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ವಿಶ್ವವಿದ್ಯಾಲಯ ಸ್ಥಾಪನೆಯ ಕನಸುಗಾರ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಕೆ.ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಲ್ಲಿ ಅಪರೂಪದ ಕೋರ್ಸ್‌ಗಳು ಲಭ್ಯವಿದೆ.

ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ, 2021–22ನೇ ಸಾಲಿನಲ್ಲಿ ಪದವಿ ತರಗತಿಗಳನ್ನೂ ಆರಂಭಿಸಿದೆ.‘ಈ ವಿಶ್ವವಿದ್ಯಾಲಯದಲ್ಲಿ ಓದಿದವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಉದ್ಯೋಗ ಕಲ್ಪಿಸಬೇಕು ಎಂಬ ಬೇಡಿಕೆ ವಿದ್ಯಾರ್ಥಿಗಳಿಂದ ಕೇಳಿಬಂದಿದೆ. ಈ ಸಂಬಂಧ ಕಾನೂನು ಬದಲಾವಣೆ ಆಗಬೇಕು. ವಿಶ್ವವಿದ್ಯಾಲಯಕ್ಕೆ ಕಾಯಂ ಸಿಬ್ಬಂದಿ ನೇಮಕ ಹಾಗೂ ವಿದ್ಯಾರ್ಥಿಗಳಿಗೆ ಉದ್ಯೋಗ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ’ ಎಂದು ಅವರು ಹೇಳಿದರು.

ಆಗಬೇಕಿರುವುದು: ವಿಶ್ವವಿದ್ಯಾಲಯ ದಲ್ಲಿ ಕಾಯಂ ಸಿಬ್ಬಂದಿ ಇಲ್ಲದ ಕಾರಣ ಸಂಶೋಧನಾ ಚಟುವಟಿಕೆಗಳು ನಡೆಯುತ್ತಿಲ್ಲ. ಗೆಸ್ಟ್‌ ಫ್ಯಾಕಲ್ಟಿಗೆ ಮಾರ್ಗದರ್ಶನ ಮಾಡುವ ಅವಕಾಶ ಇಲ್ಲದ ಕಾರಣದಿಂದಾಗಿ ಸಂಶೋಧನಾಸಕ್ತ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಆದಕಾರಣ, ಸರ್ಕಾರ ತಕ್ಷಣವೇ ಕಾಯಂ ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸಬೇಕಿದೆ.

ಲಭ್ಯ ಇರುವ ಕೋರ್ಸ್‌ಗಳು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ನಿರ್ವಹಣೆ, ಸಾರ್ವಜನಿಕ ಆಡಳಿತ, ಅಭಿವೃದ್ಧಿ ಅರ್ಥಶಾಸ್ತ್ರ, ಸಮುದಾಯ ಅಭಿವೃದ್ಧಿ, ಸಮುದಾಯ ಆರೋಗ್ಯ, ಉದ್ಯಮಶೀಲತೆ, ಸಹಕಾರ ನಿರ್ವಹಣೆ, ಜಿಯೊಇನ್ಫರ್ಮಾಟಿಕ್ಸ್‌, ಆಹಾರ ಮತ್ತು ತಂತ್ರಜ್ಞಾನ, ಡೇಟಾ ಅನಾಲಿಟಿಕ್ಸ್‌, ಸಾರ್ವಜನಿಕ ಆರೋಗ್ಯ, ಗ್ರಾಮೀಣ ನಿರ್ವಹಣೆ/ ಕೃಷಿ ವ್ಯವಹಾರ ನಿರ್ವಹಣೆಗೆ ಸಂಬಂಧಿಸಿದ ಎಂ.ಎ, ಎಂಎಸ್‌ಡಬ್ಲ್ಯು, ಎಂ.ಕಾಂ, ಎಂ.ಎಸ್ಸಿ, ಎಂಪಿಎಸ್‌ ಹಾಗೂ ಎಂಬಿಎ ಕೋರ್ಸ್‌

*
ಇಲ್ಲಿ ಓದಿರುವವರು ಕೃಷಿಗೆ ಸಂಬಂಧಿಸಿದ ಉದ್ಯಮಗಳನ್ನು ಆರಂಭಿಸಿದ್ದಾರೆ. ಎನ್‌ಜಿಒಗಳಲ್ಲೂ ಕೆಲಸ ನಿರ್ವಹಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಉದ್ದೇಶ ಈಡೇರಿಕೆಯಲ್ಲಿ ಶೇ 100ರಷ್ಟು ಸಫಲತೆ ಸಾಧಿಸಿದ್ದೇವೆ.
-ಪ್ರೊ. ಬಸವರಾಜ ಲಕ್ಕಣ್ಣವರ, ಕುಲಸಚಿವರು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.