ADVERTISEMENT

ದಮನಿತರ ‘ಕೋಶ’ ರಚನೆಗೆ ಮೀನಾಮೇಷ

ಜಿಲ್ಲಾ ಸಭೆಗಳಿಗೆ ಹಿರಿಯ ಅಧಿಕಾರಿಗಳ ಗೈರು l ಇಲಾಖೆಗಳಲ್ಲಿ ಸಮನ್ವಯದ ಕೊರತೆ l

ಕೆ.ಎಸ್.ಸುನಿಲ್
Published 6 ಜುಲೈ 2019, 19:45 IST
Last Updated 6 ಜುಲೈ 2019, 19:45 IST
ಚಿತ್ರ: ಭಾವು ಪತ್ತಾರ
ಚಿತ್ರ: ಭಾವು ಪತ್ತಾರ   

ಹಾಸನ: ದಮನಿತ ಮಹಿಳೆಯರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ರಚಿಸಿರುವ ‘ಜಿಲ್ಲಾ ಮಟ್ಟದ ಕೋಶ‌’ಗಳ ಉದ್ದೇಶವೇ ಈಡೇರುತ್ತಿಲ್ಲ.

ಉದಾಸೀನತೆ, ನಾನಾ ನೆಪ ನೀಡಿ ಕೊಡಗು, ಮಂಡ್ಯ, ಬೆಳಗಾವಿ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಬೀದರ್‌, ಕಲಬುರ್ಗಿ, ರಾಯಚೂರು, ಬೆಂಗಳೂರು ನಗರ, ದಕ್ಷಿಣ ಕನ್ನಡ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ‘ಕೋಶ’ದ ಕಾರ್ಯನಿರ್ವಹಣೆ ಕುರಿತು ಈವರೆಗೆ ಒಂದೇ ಒಂದು ಸಭೆಯೂ ನಡೆದಿಲ್ಲ. ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಧಾರವಾಡ, ಯಾದಗಿರಿ, ಬಳ್ಳಾರಿ, ಕೊಪ್ಪಳ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಗದಗದಲ್ಲಿ ಮಾತ್ರ ಒಂದು ಸಭೆ ನಡೆದಿದೆ. ಆದರೆ ಅಲ್ಲಿ ಮುಖ್ಯ ವಿಷಯಗಳ ಚರ್ಚೆ ಆಗಿಲ್ಲ.

ಆದೇಶ ತಲುಪಿಲ್ಲ: ಲೈಂಗಿಕ ವೃತ್ತಿನಿರತರ ಸ್ಥಿತಿಗತಿ ಅಧ್ಯಯನ ಸಮಿತಿ ಸದಸ್ಯರನ್ನೇ ಜಿಲ್ಲಾ ಮಟ್ಟದ ಕೋಶದ ಸದಸ್ಯರನ್ನಾಗಿ ನೇಮಿಸಲಾಗಿದೆ. ಒಬ್ಬರಿಗೆ ಎರಡು, ಮೂರು ಇಲ್ಲವೇ ನಾಲ್ಕು ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಆದರೆ,ಯಾರಿಗೂ ಮಹಿಳಾ ಅಭಿವೃದ್ಧಿ ನಿಗಮದಿಂದ ನೇಮಕ ಆದೇಶ ಪತ್ರ ತಲುಪಿಲ್ಲ. ಅಲ್ಲದೇ ಪ್ರಯಾಣ, ವಾಸ್ತವ್ಯ, ಸಭಾ ಭತ್ಯೆ ಕುರಿತು ಮಾಹಿತಿಯೂ ಇಲ್ಲ. ಹಾಗಾಗಿ ಕೆಲ ಸದಸ್ಯರು ಇತರ ಜಿಲ್ಲೆಗಳ ಸಭೆಗಳಿಗೆ ಹಾಜರಾಗಿಲ್ಲ. ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ, ಮೂರು ತಿಂಗಳಿಗೊಮ್ಮೆ ನಡೆಯಬೇಕಿರುವ ಸಭೆಯೂ ನಿಯಮದ ಪ್ರಕಾರ ನಡೆಯುತ್ತಿಲ್ಲ.

ADVERTISEMENT

ಜಿಲ್ಲಾಧಿಕಾರಿ ಅಧ್ಯಕ್ಷತೆಯ ಈ ಸಭೆಗಳಿಗೆ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿದ್ದಾರೆ. ಆರು ತಿಂಗಳ ಹಿಂದೆ ಹಾಸನದಲ್ಲಿ ನಡೆದ ಮೊದಲ ಸಭೆಗೆ ಸ್ವತಃ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ಗೈರು ಹಾಜರಾಗಿದ್ದರು. ಶೋಷಿತ ಮಹಿಳೆಯರ ಬಗ್ಗೆ ಹಿರಿಯ ಅಧಿಕಾರಿಗಳು ಹೊಂದಿರುವ ಕಾಳಜಿಗೆ ಇದು ನಿದರ್ಶನ.

ಸಭೆಗೆ ಹಾಜರಾಗಿದ್ದ ಇತರೆ ಅಧಿಕಾರಿಗಳಿಗೆ ‘ಲೈಂಗಿಕ ದಮನಿತರ’ ವರದಿ ಬಗ್ಗೆ ಮಾಹಿತಿಯೇ ಇರಲಿಲ್ಲ. ಅವರ ಸಂಕಷ್ಟದ ತೀವ್ರತೆಯ ಬಗ್ಗೆಯೂ ಅರಿವಿಲ್ಲ. ಸಂತ್ರಸ್ತರಿಗೆ ಯಾವ ಯೋಜನೆ ಮತ್ತು ಕಾರ್ಯಕ್ರಮಗಳಿವೆ, (ಯಾವಕಾರ್ಯಕ್ರಮ ರೂಪಿಸಬಹುದು) ಎಂಬುದು ಗೊತ್ತಿಲ್ಲ. ಈ ಬಗ್ಗೆ ಕೆಲ ಅಧಿಕಾರಿಗಳನ್ನು ಮಾತನಾಡಿಸಿದಾಗ, ‘ಸಭೆಗೆ ಹಾಜರಾಗಲು ಪತ್ರ ಬಂದಿತ್ತು. ಹೋಗಿ ಬಂದಿದ್ದೇವೆ. ಲೈಂಗಿಕ ದಮನಿತರ ವರದಿ ಬಗ್ಗೆ ಮಾಹಿತಿ ಇಲ್ಲ. ಯಾವ ಯೋಜನೆಗಳಿವೆ ಎಂಬುದೂ ಗೊತ್ತಿಲ್ಲ. ‌ತಿಳಿದುಕೊಂಡು ಹೇಳುತ್ತೇವೆ’ ಎಂಬ ಉತ್ತರ ಬಂತು.

ಪ್ರತ್ಯೇಕ ಅನುದಾನ ಬೇಕು: ‘ಕೋಶ ರಚನೆ ನಡಾವಳಿಗಳು ಸಂಬಂಧಿಸಿದ ಇಲಾಖೆಗಳ ಸದಸ್ಯರಿಗೆ ತಲುಪಿಲ್ಲ. ಕಾರ್ಯಕ್ರಮ ಅನುಷ್ಠಾನಕ್ಕೆ ಸಿಬ್ಬಂದಿ ನೇಮಕ ಮಾಡಿಲ್ಲ, ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕರೊಬ್ಬರೇ ಎಲ್ಲವನ್ನೂ ನಿರ್ವಹಿಸಬೇಕು. ಇವರಿಗೆ ತಾಲ್ಲೂಕುಗಳ ಉಸ್ತುವಾರಿ ಸಹ ಇರುತ್ತದೆ. ಇಲಾಖೆಯ ಇತರ ಹುದ್ದೆಗಳಿಗೂ ಇವರನ್ನೇ ಪ್ರಭಾರ ನೇಮಿಸಿರುತ್ತಾರೆ. ನಿಗಮದ ಇತರೆ ಯೋಜನೆಗಳ ಅನುಷ್ಠಾನಗೊಳಿಸಲು ಇವರಿಗೆ ಸಮಯ ಸಾಲುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸಮಿತಿಯ ಸದಸ್ಯೆ ರೂಪ ಹಾಸನ.

‘ಸದಸ್ಯರಿಗೆ ಅಧಿಕಾರ ನೀಡಬೇಕು. ನಾಮಕಾವಾಸ್ತೆಗೆ ಹೋಗಿ ಬರುವುದಾದರೆ ಪ್ರಯೋಜನವಿಲ್ಲ. ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಯೋಜನೆ ಕಾರ್ಯರೂಪಕ್ಕೆ ತರಲು ಆಗುತ್ತಿಲ್ಲ ಮತ್ತು ದಮನಿತರಿಗೆ ಸಕಾಲಿಕ ನೆರವು ಸಿಗುತ್ತಿಲ್ಲ’ ಎಂದು ಸಮಿತಿಯ ಮತ್ತೊಬ್ಬ ಸದಸ್ಯ ಸ್ಟ್ಯಾನ್ಲಿ ಬೇಸರ ವ್ಯಕ್ತಪಡಿಸಿದರು.

1. ಅಧ್ಯಯನ ಸಮಿತಿ ವರದಿಯನ್ನು ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಕೊಡಬೇಕು.

2. ದಮನಿತರ ಬಗ್ಗೆ ಅರಿವು ಇಲ್ಲದ ಇತರ ಇಲಾಖೆಯವರು, ಸಭೆಯಲ್ಲಿ ಅತ್ಯಂತ ಹೀನಾಯವಾಗಿ ಮಾತನಾಡುವ ಕಾರಣ ವರದಿಯಲ್ಲಿನ ಮುಖ್ಯಾಂಶಗಳನ್ನಾದರೂ ಟಿಪ್ಪಣಿ ಮಾಡಿ ಎಲ್ಲ ಇಲಾಖೆಗಳಿಗೆ ಕಳುಹಿಸಬೇಕು.

3. ಜಿಲ್ಲಾ ಏಡ್ಸ್‌ ನಿಯಂತ್ರಣ ಮಂಡಳಿಯಡಿ ದಾಖಲಾದ ಲೈಂಗಿಕ ದಮನಿತರಲ್ಲಿ ಅಪ್ರಾಪ್ತರು, ಅಂಗವಿಕಲರು, ಎಚ್‌ಐವಿ ಸೋಂಕಿತರಿಗೆ ಪ್ರಥಮ ಆದ್ಯತೆ ಮೇರೆಗೆ ಪುನರ್ವಸತಿ ಕಲ್ಪಿಸಬೇಕು.

4. ಪ್ರತಿ ತಾಲ್ಲೂಕಿನಲ್ಲೂ ಸಂಘಟಿತರಾಗಿರುವ ಪ್ರತಿಯೊಬ್ಬ ದಮನಿತರನ್ನೂ ನಿಗದಿತ ಪ್ರಶ್ನೋತ್ತರಗಳ ಮೂಲಕ ಸರ್ವೆ ಮಾಡಬೇಕು. ಮೊದಲಿಗೆ ಸಂಕಷ್ಟದಲ್ಲಿರುವವರ ಆದ್ಯತಾ ಪಟ್ಟಿ ತಯಾರಿಸಿಕೊಳ್ಳಬೇಕು.

5. ಡ್ಯಾಪ್ಕೋ ಅಧೀನದಲ್ಲಿರುವ ನೆಟ್‌ವರ್ಕ್‌ ಸಂಸ್ಥೆಗಳು ಏಡ್ಸ್‌ ನಿಯಂತ್ರಣದ ಹೆಸರಿನಲ್ಲಿ ನಿರೋಧ್‌ಗಳನ್ನು (ಕಾಂಡೋಮ್‌) ದಮನಿತರ ಮೂಲಕ ಹಂಚಿಕೆ ಮಾಡಿಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ದಮನಿತ ಮಹಿಳೆಯರನ್ನು ವೇಶ್ಯಾವಾಟಿಕೆಯಿಂದ ಹೊರತರಲು ಸಾಧ್ಯವಿಲ್ಲ. ಎಲ್ಲ ಇಲಾಖೆಗಳಲ್ಲಿ ಮಹಿಳೆಯರಿಗೆ ಮೀಸಲಿಟ್ಟಿರುವ ಯೋಜನೆಗಳಲ್ಲಿ ದಮನಿತ ಮಹಿಳೆಯರನ್ನು ಫಲಾನುಭವಿಗಳನ್ನಾಗಿಸಲು ಶೇಕಡಾವಾರು ಪ್ರಮಾಣವನ್ನು ಉನ್ನತ ಹಂತದಲ್ಲಿಯೇ ನಿಗದಿಗೊಳಿಸಬೇಕು.

ನ್ಯಾಯಾಲಯದಲ್ಲೂ ಮುಜುಗರ

‘ಮೂರು ವರ್ಷದ ಹಿಂದೆ 9 ತರಗತಿ ವಿದ್ಯಾರ್ಥಿನಿ. ಶಾಲೆಯಿಂದ ಮರಳುವಾಗ ಆಟೊ ಚಾಲಕನ ಕಾಮತೃಷೆಗೆ ಬಲಿಯಾದೆ. ಘಟನೆ ಬಳಿಕ ಮನೆ ಬಿಟ್ಟೆ. ದೂರದ ಊರಿನಲ್ಲಿ ಆಸರೆ ಪಡೆದೆ. ಇದುವರೆಗೂ ನಯಾಪೈಸೆ ನೆರವು ಸಿಕ್ಕಿಲ್ಲ. ಅತ್ಯಾಚಾರ ಎಸಗಿದ ಪಾಪಿ, ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದು ಮತ್ತೆರೆಡು ಎಳೆಯ ಜೀವಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ. ಆತ ರಾಜಾರೋಷವಾಗಿ ತಿರುಗುತ್ತಾನೆ. ನಾನು ನ್ಯಾಯಾಲಯಕ್ಕೆ ಹೋಗುವಾಗಲೂ ಮುಜುಗರ ಪಟ್ಟುಕೊಳ್ಳಬೇಕಿದೆ. ನ್ಯಾಯಾಧೀಶರು ವಿಚಾರಣೆಗೆ ಕರೆಯುವ ತನಕವೂ ಹೊರಗೇ ನಿಂತು ಕಾಯಬೇಕಿದೆ. ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಶೈಕ್ಷಣಿಕ ವೆಚ್ಚ ಭರಿಸೋದು ಹೇಗೆ ಎಂಬುದೇ ತೋಚದಾಗಿದೆ. ಊರಿಗೆ ಮರಳಿದರೆ ಪಾಪಿಯ ಭಯ’ ಎಂದು ಹಾಸನ ಜಿಲ್ಲೆಯ ಕುಗ್ರಾಮದ ಯುವತಿ ತನ್ನ ದುರಂತ ಬದುಕಿನ ಬವಣೆ ಬಿಚ್ಚಿಟ್ಟರು.

ದಮನಿತೆಯರಿಗೆ ಇಷ್ಟು ಸಾಲದು

ದಮನಿತ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾರಿಗೆ ತಂದಿರುವ ಕೆಲವೊಂದು ಯೋಜನೆಗಳನ್ನು ಗೋಪ್ಯವಾಗಿಟ್ಟಿದ್ದೇವೆ. ಅದನ್ನು ಬಹಿರಂಗ ಮಾಡುವಂತಿಲ್ಲ. ಈ ಹೆಣ್ಣು ಮಕ್ಕಳಿಗೆ ಇಷ್ಟು ಸಾಲದು. ಅವರಿಗೆ ನಾವು ಮಾಡಬೇಕಿರುವುದು ಸಾಕಷ್ಟಿದೆ. ಲೈಂಗಿಕ ಸಂತ್ರಸ್ತರಿಗೆ ವಿವಿಧ ಯೋಜನೆಗಳಲ್ಲಿ ವರ್ಷಕ್ಕೆ ಸಾವಿರ ವಸತಿ ಕೊಡಲು ತೀರ್ಮಾನಿಸಿದ್ದೇವೆ. ಅದರಂತೆ 2018–19ರಲ್ಲಿ 887 ಮನೆ ನೀಡಲಾಗಿದೆ. ದಮನಿತರನ್ನು ಪ್ರತ್ಯೇಕಿಸದೇ ಮೀಸಲಾತಿ ನೀಡುವ ಮೂಲಕ ಈ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ನಗರದಲ್ಲೂ ಫ್ಲ್ಯಾಟ್‌ ನಿರ್ಮಿಸಿದ ಮೇಲೆ ಇಂಥ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ವಸತಿ ಹಂಚಿಕೆ ವಿಷಯದಲ್ಲಿ ತೊಂದರೆ ಇಲ್ಲ. ತೃತೀಯ ಲಿಂಗಿಗಳಿಗೂ ಸಾವಿರ ಮನೆ ನೀಡಲಾಗುವುದು.

ಎಲ್ಲಾ ಜಿಲ್ಲೆಗಳಲ್ಲಿ ದಮನಿತ ಮಹಿಳೆಯರ ಜಿಲ್ಲಾ ಕೋಶ ತೆರೆಯಲಾಗಿದೆ. ಕಂಪ್ಯೂಟರ್‌, ಟೈಲರಿಂಗ್‌ ತರಬೇತಿ ನೀಡಲಾಗುವುದು, ಆಹಾರ ಸಂಸ್ಕರಣೆಗೆ ಬಳಸಿಕೊಳ್ಳಲಾಗುವುದು. ಚೇತನಾ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ನೀಡುವ ಸಾಲವನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ ಏರಿಸಲಾಗಿದೆ. ಈ ಹಣದಿಂದ ಸ್ವತಂತ್ರವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಸಾಮಾನ್ಯ ಮಹಿಳೆಯರಿಗೂ ಇಷ್ಟೇ ಹಣ ನೀಡಲಾಗುವುದು. ಉದ್ಯೋಗಿನಿ ಯೋಜನೆಯಡಿ ಪ್ರತಿ ಜಿಲ್ಲೆಯಲ್ಲಿ ಐವರು ದಮನಿತರಿಗೆ ಸಾಲ ನೀಡಲಾಗುವುದು. ಚೇತನಾ ಯೋಜನೆಗೆ ₹ 8 ಕೋಟಿ, ಉದ್ಯೋಗಿನಿ ಯೋಜನೆಗೆ ₹ 10 ಕೋಟಿ, ಮಹಿಳಾ ಸಮೃದ್ಧಿ ಯೋಜನೆಗೆ ₹ 3 ಕೋಟಿ ಅನುದಾನ ನೋಡಲು ಕೋರಿದ್ದೇವೆ.

ಜಯಮಾಲಾ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ಅವೈಜ್ಞಾನಿಕವಾಗಿ ಜಾರಿ

‘ಚೇತನಾ’ ಯೋಜನೆಯಡಿ ಲೈಂಗಿಕ ಕಾರ್ಯಕರ್ತೆಯರಿಗೆ ಹಲವು ವರ್ಷಗಳಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಸ್ವಯಂ ಉದ್ಯೋಗಿಗಳನ್ನಾಗಿ ಮಾಡಲು ಈ ಮೊದಲು ಒಂದು ಸಾವಿರ ಮಂದಿಗೆ ₹ 25 ಸಾವಿರ ನೀಡಲಾಗುತಿತ್ತು. ಆದರೆ, ಅವರ ಸ್ಥಿತಿಗತಿಗಳ ವರದಿ ನೀಡಿದ ಮೇಲೆ ಅದನ್ನು 325 ಮಂದಿಗೆ ತಗ್ಗಿಸಲಾಯಿತು! ಸಂಖ್ಯೆಯನ್ನು ಹೆಚ್ಚಿಸುವ ಬದಲು ತಗ್ಗಿಸಿದ್ದು ದುರದೃಷ್ಟಕರ. ಅವೈಜ್ಞಾನಿಕವಾಗಿ ಯೋಜನೆ ಜಾರಿಗೆ ತರುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಲೈಂಗಿಕ ಶೋಷಿತರಿಗೆ 51 ಮಂದಿಗೆ ವಸತಿ ನೀಡಲಾಗಿದೆ ಎಂದು ಹೇಳುತ್ತಾರೆ. ಆದರೆ, ಒಬ್ಬರಿಗೂ ಸಿಕ್ಕಿಲ್ಲ. ರಾಜ್ಯದಲ್ಲಿ ನೋಂದಾಯಿತ 96,878 ಲೈಂಗಿಕ ದಮನಿತರು ಇದ್ದಾರೆ. ಬೇರೆ ಕೆಲಸ ನೀಡಿದರೆ ಮುಖ್ಯವಾಹಿನಿಗೆ ಬರಲು ಸುಮಾರು 72 ಸಾವಿರ ಮಂದಿ ಸಿದ್ಧರಿದ್ದಾರೆ. ಆದರೆ, ಅವರಿಗೆ ಇದುವರೆಗೆ ಪುನರ್ವಸತಿ ಕಲ್ಪಿಸಲು ಯಾರೂ ತಲೆಕೆಡಿಸಿಕೊಂಡಿಲ್ಲ. ಅನುದಾನವನ್ನೂ ತೆಗೆದಿಡುತ್ತಿಲ್ಲ. ದಮನಿತ ಮಹಿಳೆಯರ ಬಗ್ಗೆ ಅಧಿಕಾರಿಗಳಿಗೆ ಅರಿವೂ ಇಲ್ಲ. ಅಂಥವರನ್ನು ಗುರುತಿಸುವ ಕೆಲಸವನ್ನೂ ಮಾಡುತ್ತಿಲ್ಲ. ದಮನಿತರ ನೋಂದಣಿ, ಫಲಾನುಭವಿಗಳನ್ನು ಗುರುತಿಸುವಲ್ಲಿ ಲೋಪಗಳಾಗುತ್ತಿವೆ. ಇಲಾಖೆಗಳ ನಡುವೆ ಸಮನ್ವಯತೆ ಇಲ್ಲ.

ರೂಪ ಹಾಸನ,ಸದಸ್ಯೆ, ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ

ಬಿಡಿಗಾಸೂ ಸಿಕ್ಕಿಲ್ಲ

‘ನಾನೊಬ್ಬ ಅಂಗವಿಕಲ ಪದವೀಧರೆ. ವಂಚಕನೊಬ್ಬನಿಂದ ಅತ್ಯಾಚಾರಕ್ಕೀಡಾದೆ. ಹಿರಿಯರೆಲ್ಲರೂ ಮದುವೆ ಮಾಡಿಸಲು ಮುಂದಾದರು. ಆತ ನಿರಾಕರಿಸಿದ. ಕಳೆದ ಫೆಬ್ರುವರಿಯಲ್ಲಿ ಪೊಲೀಸರಿಗೆ ದೂರು ಕೊಟ್ಟೆ. ಪೊಲೀಸರು ರಾಜಿ ಸಂಧಾನಕ್ಕೆ ಮುಂದಾದರು. ಪೊಲೀಸರ ಹೆದರಿಕೆಗೆ ಆತ ಲಗ್ನವಾಗಲು ಮುಂದಾದ. ಆದರೆ, ನನಗೆ ಭಯವಾಯ್ತು. ಪ್ರಕರಣದಿಂದ ಪಾರಾಗಲು ಮದುವೆಯಾಗಿ, ಬಳಿಕ ಕೈಕೊಟ್ಟರೆ ಏನು ಎಂಬ ಪ್ರಶ್ನೆ ಕಾಡಿತು. ಹೀಗಾಗಿ, ಪ್ರಕರಣ ವಾಪಸ್‌ ಪಡೆಯಲಿಲ್ಲ. ನಾನೀಗ ಎಂಟು ತಿಂಗಳ ಗರ್ಭಿಣಿ. ಊರಲ್ಲಿ ಇರಲಾಗಲ್ಲ. ನಿತ್ಯವೂ ಖರ್ಚಿದೆ. ನನ್ನ–ಮಗುವಿನ ಆರೋಗ್ಯ ತಪಾಸಣೆ, ವೈದ್ಯಕೀಯ ವೆಚ್ಚವೂ ಸಾಕಷ್ಟಿದೆ. ಆದರೆ, ಇದುವರೆಗೂ ಬಿಡಿಗಾಸಿನ ಪರಿಹಾರ ಸಿಕ್ಕಿಲ್ಲ’ ಎಂದು ಕೊಡಗಿನ ಯುವತಿಯೊಬ್ಬಳು ಕಣ್ಣೀರಾದರು.

ಬದುಕಿಗಾಗಿ ಹೋರಾಟ

‘ನನ್ನದು ಬಡ ಕುಟುಂಬ. ತಂದೆ–ತಾಯಿಯಿಲ್ಲ. ಗಂಡನಿಂದ ಪರಿತ್ಯಕ್ತೆ. ಬದುಕಿನ ಬಂಡಿ ಸಾಗಿಸಲಿಕ್ಕಾಗಿ ಕುಗ್ರಾಮದಿಂದ ನಗರಕ್ಕೆ ಬಂದು ಸ್ಪಾ(ಮಸಾಜ್ ಸೆಂಟರ್‌) ಒಂದರಲ್ಲಿ ಕೆಲಸಕ್ಕೆ ಸೇರಿದೆ. ಕೆಲ ದಿನಗಳಲ್ಲೇ ಲೈಂಗಿಕ ಶೋಷಣೆಗೆ ತುತ್ತಾದೆ. ಖ್ಯಾತನಾಮರೂ ನನ್ನ ಅಳಲು ಆಲಿಸಲಿಲ್ಲ. ತಮ್ಮ ತೆವಲು ತೀರಿಸಿಕೊಂಡರು. ಈ ಸಾಲಿನಲ್ಲಿ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಗಳೂ ಇದ್ದರು. ಸ್ವಯಂ ಸೇವಾ ಸಂಸ್ಥೆಯ ನೆರವಿನಿಂದ ರಕ್ಷಣೆ ಪಡೆದು ನನಗಾದ ಅನ್ಯಾಯದ ವಿರುದ್ಧ ಪೊಲೀಸರಿಗೆ ದೂರು ಕೊಟ್ಟೆ. ಮಾಧ್ಯಮಗಳಲ್ಲಿ ವಿಷಯ ವಿಜೃಂಭಿಸಿದ್ದಷ್ಟೇ ಬಂತು; ನ್ಯಾಯ ಸಿಗಲಿಲ್ಲ. ಊರಿಗೆ ಮರಳುವ ಸ್ಥಿತಿಯಲ್ಲೂ ನಾನಿಲ್ಲ. ನನಗೆ ಚಿಕ್ಕಾಸಿನ ನೆರವೂ ಸಿಗದಾಗಿದೆ. ದೌರ್ಜನ್ಯ ಎಸಗಿದವರ ಸುದ್ದಿಯನ್ನು ಆಗಾಗ್ಗೆ ಪತ್ರಿಕೆಗಳಲ್ಲಿ ಓದುತ್ತಿರುತ್ತೇನೆ. ನನ್ನ ಮನಸ್ಸು ಮತ್ತೆ ಘಾಸಿಗೀಡಾಗುತ್ತದೆ. ಅದನ್ನು ಯಾರಿಗೂ ಹೇಳಲಾಗದು’ ಮಂಡ್ಯ ಜಿಲ್ಲೆಯ ಮಹಿಳೆ ತಮ್ಮ ಅಸಹಾಯಕ ಸ್ಥಿತಿಯನ್ನು ಬಿಡಿಸಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.