ವಿಕ್ರಂ ಕಾಂತಿಕೆರೆ
ಮಂಗಳೂರು: ಇದು ನಡೆದದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಕಡಬದ ರಾಕೇಶ್ (ಹೆಸರು ಬದಲಿಸಲಾಗಿದೆ), ಪಕ್ಕದ ತಾಲ್ಲೂಕಿನ ಗ್ರಾಮವೊಂದರಲ್ಲಿ ಖರೀದಿಸಿದ 60 ಸೆಂಟ್ ಜಾಗದ ಪೈಕಿ 5 ಸೆಂಟ್‌ನಲ್ಲಿ ಮನೆ ನಿರ್ಮಿಸುವ ಉದ್ದೇಶದಿಂದ ಭೂಪರಿವರ್ತನೆಗಾಗಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿ ಮಾಹಿತಿ ತಿಳಿದುಕೊಳ್ಳಲು ಉಪನೋಂದಣಾಧಿಕಾರಿ ಕಚೇರಿಗೆ ತೆರಳಿದ ಅವರು ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯ ಬಗ್ಗೆ ಕೇಳಿ ಸುಸ್ತಾಗಿದ್ದರು. ಪ್ರತಿ ಬಾರಿ ಕಿಲೊಮೀಟರ್‌ಗಟ್ಟಲೆ ಓಡಾಡಿ ಕೆಲಸ ಮಾಡಿಸಿಕೊಳ್ಳುವುದು ಕಷ್ಟ ಎಂದು ತಿಳಿದು ಮಧ್ಯವರ್ತಿಗೆ ಕೆಲಸ ವಹಿಸಿದ್ದರು. ಆರಂಭಿಕ ಶುಲ್ಕ ₹ 2 ಸಾವಿರ ಕೊಟ್ಟು, ಸರ್ವೆಯರ್ ಬಂದಾಗ ಅವರಿಗೂ ₹ 2 ಸಾವಿರ ಕೊಟ್ಟರು. ಪಿಡಿಒ ಬಳಿಯಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಂಡಾಯಿತು. ಅಲ್ಲಿಯ ವರೆಗೆ ಎಲ್ಲ ಕೆಲಸ ಸೂಸೂತ್ರವಾಗಿ ನಡೆದಿತ್ತು. ಆದರೆ ಭೂಪರಿವರ್ತನೆ ಕಾರ್ಯ ಪೂರ್ಣಗೊಳ್ಳಲು ಐದು ತಿಂಗಳು ಬೇಕಾಯಿತು. ಮೊದಲು ಪಾವತಿಸಿದ ₹ 4 ಸಾವಿರವಲ್ಲದೆ ಪ್ರಮಾಣಪತ್ರ ಪಡೆದುಕೊಳ್ಳಲು ₹ 10 ಸಾವಿರ ಕೊಡಬೇಕು ಎಂದು ಏಜೆಂಟ್ ಹೇಳಿದಾಗ ರಾಕೇಶ್‌ಗೆ ತಲೆ ಸುತ್ತು ಬಂದಂತಾಗಿತ್ತು.
ಮತ್ತೊಂದು ಪ್ರಸಂಗ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಲಗಲದ್ದಿ ಗ್ರಾಮದ್ದು. ಅಲ್ಲಿನ ಅನ್ನಪೂರ್ಣಮ್ಮ ಅವರಿಗೆ ವೃದ್ಧಾಪ್ಯ ವೇತನ ಸಿಗುತ್ತದೆ. ‘ಮನೆಬಾಗಿಲಿಗೆ ಮಾಸಾಶನ’ ಯೋಜನೆಯಡಿ ಅಂಚೆ ಇಲಾಖೆ ಸಿಬ್ಬಂದಿ ಪ್ರತಿ ತಿಂಗಳು ಮನೆ ಬಾಗಿಲಿಗೆ ಬರುತ್ತಾರೆ. ಬೆರಳಚ್ಚು ಪಡೆದುಕೊಳ್ಳುತ್ತಾರೆ. ಆದರೆ ಹಣ ನೀಡುವ ಸಂದರ್ಭದಲ್ಲಿ ಅಂತರ್ಜಾಲದ ತೊಂದರೆ, ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಬಹುತೇಕ ಸಂದರ್ಭದಲ್ಲಿ ಅಂಚೆ ಕಚೇರಿಗೆ ನಡೆದುಕೊಂಡು ಹೋಗಿಯೇ ಹಣ ಪಡೆದುಕೊಳ್ಳುವುದು ಅನಿವಾರ್ಯ ಆಗುತ್ತದೆ.
ಬೀದರ್ ಜಿಲ್ಲೆ ಔರಾದ್ ತಾಲ್ಲೂಕು ಎಕಲಾರ ಗ್ರಾಮದ ಲೀಲಾವತಿ ಅವರು ವೃದ್ಧಾಪ್ಯ ವೇತನಕ್ಕಾಗಿ ಮೊಮ್ಮಗನ ಮೊಬೈಲ್ ಫೋನ್ ಮೂಲಕ ಸಹಾಯವಾಣಿಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಂಡಿದ್ದರೂ ಪಿಂಚಣಿ ಸಿಕ್ಕಿರಲಿಲ್ಲ. ಕೊನೆಗೆ ತಹಶೀಲ್ದಾರ್ ಕಚೇರಿಗೇ ಹೋಗಿ ಅರ್ಜಿ ಹಾಕಿದ ನಂತರ ಮಾಸಾಶನ ಮಂಜೂರಾಗಿತ್ತು. ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿರುವ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕು ನಿವಾಸಿ, ಭಾರತ ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಘಟಕದ ಕಾರ್ಯದರ್ಶಿ ಜಾಫರ್ ಷರೀಫ್ ಅವರಿಗೆ ಮಾಸಾಶನ ತಲುಪದೇ ಕಾರಣದಿಂದ ಔಷಧ ಖರೀದಿಗೂ ಪರದಾಟ ನಿಂತಿಲ್ಲ.
ಸುಮಾರು ಒಂದು ಸಾವಿರ ರೂಪಾಯಿ ವೆಚ್ಚ ಮಾಡಿ ಕೇವಲ 15 ದಿನದಲ್ಲಿ ಸಿಗಬೇಕಾಗಿದ್ದ ಭೂಪರಿವರ್ತನೆ ಪ್ರಮಾಣಪತ್ರ ಕೈಸೇರಲು ಕಡಬದ ರಾಕೇಶ್ ಐದು ತಿಂಗಳು ಕಾಯಬೇಕಾಯಿತು. ‘ಸಕಾಲ ತಂತ್ರಾಂಶದಲ್ಲಿ ತೊಂದರೆ ಇಲ್ಲ, ಸುಸೂತ್ರವಾಗಿ ಎಲ್ಲವೂ ನಡೆಯದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿಯಿಂದ ನೋಟಿಸ್ ಬರುತ್ತದೆ’ ಎಂದು ತಾಲ್ಲೂಕು ಪಂಚಾಯಿತಿಯ ಅಧಿಕಾರಿಗಳು ಹೇಳುತ್ತಿದ್ದರೂ ಗಡಿ ಭಾಗದ ಅನ್ನಪೂರ್ಣಮ್ಮ ಅವರು ಅಂಚೆ ಕಚೇರಿಗೆ ಅಲೆಯುವುದು ತಪ್ಪಿಲ್ಲ. ಲೀಲಾವತಿ ಅವರು ತಹಶೀಲ್ದಾರ್ ಕಚೇರಿಗೇ ಹೋಗಬೇಕಾಯಿತು.
ಭೂ ಪರಿವರ್ತನೆ, ಆಸ್ತಿ ಖರೀದಿ–ಮಾರಾಟ, ವಿಧವಾ–ವೃದ್ಧಾಪ್ಯ ವೇತನ ವಿತರಣೆ ಮುಂತಾದ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಮತ್ತು ಹಣದ ‘ವ್ಯವಹಾರ’ಕ್ಕೆ ಕಡಿವಾಣ ಹಾಕಲು ಕೈಗೊಂಡಿರುವ ಸುಧಾರಣಾ ಕಾರ್ಯಗಳ ಬಗ್ಗೆ ಹಿಂದಿನ ಸರ್ಕಾರದ ಕಂದಾಯ ಸಚಿವರು ಪದೇ ಪದೇ ಪ್ರಸ್ತಾಪಿಸುತ್ತಿದ್ದ ಸಂದರ್ಭದಲ್ಲೇ ಇಂಥ ವಿಳಂಬ, ಹಣದ ವ್ಯವಹಾರ ಪ್ರಕರಣಗಳು ನಡೆಯುತ್ತಿದ್ದವು. ಸರ್ಕಾರದ ನಾಯಕತ್ವ ಬದಲಾದರೂ ಅವ್ಯವಸ್ಥೆ ಈಗಲೂ ಮುಂದುವರಿದಿವೆ ಎಂಬುದಕ್ಕೆ ಇವೆಲ್ಲವೂ ಕಣ್ಣಮುಂದಿರುವ ನಿದರ್ಶನಗಳು.
ಸುಲಭವಾಗಿ ನಡೆಯಬೇಕಾಗಿರುವ ಉಪನೋಂದಣಾಧಿಕಾರಿ ಕಚೇರಿ ಕೆಲಸಗಳು ಕ್ಲಿಷ್ಟವಾಗಲು ಸರ್ವರ್ ಡೌನ್, ಸಾಫ್ಟ್‌ವೇರ್‌ನಲ್ಲಿ ತೊಂದರೆ, ಸರ್ವೆಯರ್, ಗ್ರಾಮ ಲೆಕ್ಕಿಗರಿಗೆ ಕೆಲಸದ ಒತ್ತಡ ಮುಂತಾದ ನೆಪಗಳನ್ನು ಹೇಳುತ್ತಿದ್ದರೂ ‘ಸಂದಾಯ’ಕ್ಕೆ ಪ್ರೇರಣೆ ನೀಡುವುದೇ ಈ ‘ವರಸೆ’ಗಳ ಹಿಂದಿನ ಉದ್ದೇಶ ಎಂಬುದು ಕಂದಾಯ ಇಲಾಖೆಯ ಕಚೇರಿಗಳಿಗೆ ಓಡಾಡುವ ಬಹುತೇಕರ ಅನಿಸಿಕೆ. ಲಂಚದ ದಾಹ ಮತ್ತು ಮಧ್ಯವರ್ತಿಗಳಿಗೆ ಅನುಕೂಲ ಮಾಡಿಕೊಡುವ ‘ಅಜೆಂಡಾ’ಗಳನ್ನು ಯಶಸ್ವಿಗೊಳಿಸುವುದಕ್ಕಾಗಿ ಸಮಸ್ಯೆಗಳು ಇದ್ದರೇನೆ ಒಳ್ಳೆಯದು ಎಂಬ ಭಾವನೆ ಅನೇಕ ಅಧಿಕಾರಿಗಳಲ್ಲಿ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಡಳಿತ ಸುಧಾರಣೆಯ ಭಾಗವಾಗಿ ಜಾರಿಗೆ ಬಂದಿರುವ ಕಾವೇರಿ 2.0 ತಂತ್ರಾಂಶದ ಮೇಲೆ ಅಧಿಕಾರಿಗಳು ಭರವಸೆ ಇರಿಸಿಕೊಂಡಿದ್ದಾರೆ. ಆದರೆ ಅದನ್ನು ವಿರೋಧಿಸುವ ಲಾಬಿಯೂ ಆರಂಭವಾಗಿದ್ದು ಅದರ ಹಿಂದೆಯೂ ಕುತ್ಸಿತ ಮನಸ್ಸುಗಳು ಇವೆ ಎಂಬ ಆರೋಪ ಇದೆ.
ವಿಧವಾ–ವೃದ್ಧಾಪ್ಯ ವೇತನ ವಿತರಣೆ ಸುಲಭ ಮಾಡಲು ಕೈಗೊಂಡ ಕ್ರಮಗಳು ಪ್ರಚಾರದ ಕೊರತೆಯಿಂದ ಗಡಿಭಾಗ ಮತ್ತು ಬಹುತೇಕ ಗ್ರಾಮೀಣ ಪ‍್ರದೇಶಗಳಲ್ಲಿ ಫಲಾನುಭವಿಗಳ ‘ಮನೆಬಾಗಿಲಿಗೆ’ ತಲುಪಿಲ್ಲ. ಕಾಡುವ ಸರ್ವರ್ ಸಮಸ್ಯೆಯಿಂದಾಗಿ ಕೆಲವು ಕಡೆಗಳಲ್ಲಿ ವೃದ್ಧರು ಕಚೇರಿಗಳಿಗೆ ಅಲೆದಾಡಲೇಬೇಕಾಗಿದೆ.
ಕೈಗಾರಿಕೆಗಳಿಗೆ ಉತ್ತೇಜನ ನೀಡುವುದಕ್ಕಾಗಿ 2020ನೇ ಇಸವಿಯಲ್ಲಿ ಭೂಪರಿವರ್ತನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರ ಮುಂದಾಗಿತ್ತು. ಸ್ವಂತ ಜಾಗ ಇದ್ದೂ ಬಾಡಿಗೆ ಕಟ್ಟಡಗಳಲ್ಲಿ ಕೈಗಾರಿಕೆಗಳನ್ನು ನಡೆಸುತ್ತಿದ್ದವರು ಇದನ್ನು ಕೇಳಿ ಖುಷಿಗೊಂಡರು. ಅರ್ಜಿ ಸಲ್ಲಿಸಿ ಕಾಯುವುದು ಕೊನೆಯಾಗಲಿದೆ ಎಂಬ ಭರವಸೆ ಮೂಡಿತ್ತು. ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರೋತ್ಸಾಹಿಸುವುದಕ್ಕಾಗಿ ಕೃಷಿಭೂಮಿಯನ್ನು ಕೃಷಿಯೇತರ ಅವಶ್ಯಕತೆಗಳಿಗಾಗಿ ಬಳಸುವ ಕಾರ್ಯವನ್ನು ಸರಳಗೊಳಿಸಲು 2021ರಲ್ಲಿ ಸರ್ಕಾರ ಮುಂದಾಗಿತ್ತು. ಭೂಪರಿವರ್ತನೆಯನ್ನು ಮೂರೇ ದಿನಗಳಲ್ಲಿ ಮಾಡಿಕೊಡಲಾಗುವುದು ಎಂದು 2022ರಲ್ಲಿ ಘೋಷಿಸಲಾಯಿತು. ಭೂಮಿ ಖರೀದಿ ಪ್ರಕ್ರಿಯೆ ಸುಲಭ ಮಾಡುವುದಕ್ಕಾಗಿ ಕರ್ನಾಟಕ ಭೂಸುಧಾರಣೆ ಕಾಯ್ದೆ 1961ರ ಕಲಂ 79–ಎ ಮತ್ತು 79–ಬಿಯನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಇದು ಉತ್ತಮ ಮಾರ್ಗ ಎಂದು ಹೇಳಿತು.
ಇದ್ಯಾವುದರಿಂದಲೂ ಏಜೆಂಟರ ‘ಕಾಟ’ವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎಂಬುದು ಉಪನೋಂದಣಾಧಿಕಾರಿ ಕಚೇರಿ ಸುತ್ತ ಸುತ್ತು ಹಾಕಿದರೆ ಖಾತರಿಯಾಗುತ್ತದೆ. ‘ಪ್ರಜಾವಾಣಿ‘ ವರದಿಗಾರರು ತೆರಳಿದ ನಗರಗಳ ತಾಲ್ಲೂಕು ಪಂಚಾಯಿತಿ ಕಚೇರಿಯ ಹೊರಗೆ ಐವತ್ತಕ್ಕೂ ಹೆಚ್ಚು ಏಜೆಂಟರು ‘ಗ್ರಾಹಕ’ರನ್ನು ಸೆಳೆಯಲು ಕಾಯುತ್ತಿದ್ದರು. ಗ್ರಾಮೀಣ ಭಾಗದಲ್ಲೂ ಈ ಪಿಡುಗು ಇದೆ. ‘ಸಿಸಿಟಿವಿ ಕ್ಯಾಮೆರಾಗಳು ಇವೆ. ಲೋಕಾಯುಕ್ತ ಸಂಸ್ಥೆ ಇದೆ. ಆದರೂ ಲಂಚ ಮತ್ತು ಏಜೆಂಟರ ಕಾಟ ತಡೆಯಲು ಆಗಲಿಲ್ಲ. ಹಣ ಕೊಟ್ಟರೇನೇ ಕೆಲಸ ಆಗುವುದು ಎನ್ನುವ ನಂಬಿಕೆ, ಹಣ ತೆಗೆದುಕೊಳ್ಳದವರ ಮೇಲೆಯೇ ಅಪನಂಬಿಕೆ ಮೂಡುವಷ್ಟು ವ್ಯವಸ್ಥೆ ಕೆಟ್ಟುಹೋಗಿದೆ. ಬ್ರೋಕರ್‌ಗಳಿಗೆ ರಾಜಕೀಯ ಪಕ್ಷದವರ ಕೃಪೆ ಇರುತ್ತದೆ. ಕಂದಾಯ ಇಲಾಖೆಯ ಯಾವುದೇ ಕೆಲಸಕ್ಕೂ ದಾಖಲೆಗಳು ಸಮರ್ಪಕವಾಗಿರಬೇಕು ಎಂದು ಹೇಳಿದರೆ ನಮ್ಮ ಮೇಲೆಯೇ ಆರೋಪ ಮಾಡುತ್ತಾರೆ, ವರ್ಗಾವಣೆ ಬೆದರಿಕೆಯ ತಂತ್ರ ಪ್ರಯೋಗಿಸುತ್ತಾರೆ. ಕೆಲವೊಮ್ಮೆ ನಮ್ಮ ಕಾಲ ಮೇಲೆ ನಾವೇ ಕಲ್ಲು ಹೊತ್ತುಹಾಕುವುದು ಬೇಡ ಎಂದುಕೊಂಡು ಏಜೆಂಟರಿಗೆ ಮಣೆ ಹಾಕುವುದು ಅನಿವಾರ್ಯ ಆಗುತ್ತದೆ’ ಎಂದು ಹೆಸರು ಬಹಿರಂಗ ಮಾಡಬಾರದು ಎಂದು ಮನವಿ ಮಾಡಿದ ದಕ್ಷಿಣ ಕನ್ನಡದ ತಾಲ್ಲೂಕೊಂದರ ಉಪ ತಹಶೀಲ್ದಾರ್ ಹೇಳುತ್ತಾರೆ.
ಕಾವೇರಿ 2.0ಗೆ ಯಾಕೆ ವಿರೋಧ?
ಆಸ್ತಿ ನೋಂದಣಿಗೆ ಸಂಬಂಧಿಸಿದ ‘ಟೋಕನ್’ ಸ್ವತಃ ಪಡೆದುಕೊಳ್ಳಲು ಸಾರ್ವಜನಿಕರಿಗೆ ಅನುಕೂಲ ಒದಗಿಸುವ ಕಾವೇರಿ 2.0 ತಂತ್ರಾಂಶ ಅಳವಡಿಕೆ ಕಾರ್ಯ ರಾಜ್ಯದಲ್ಲಿ ಪೂರ್ಣಗೊಂಡಿದೆ. ಫೆಬ್ರುವರಿ ಆರಂಭದಲ್ಲಿ ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ಆರಂಭಗೊಂಡ ಅಭಿಯಾನ ಜೂನ್ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮತ್ತು ಸುಳ್ಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅಳವಡಿಸುವುದರೊಂದಿಗೆ ಮುಕ್ತಾಯ ಕಂಡಿದೆ. ಈಗಾಗಲೇ ಈ ತಂತ್ರಾಂಶಕ್ಕೆ ವಿರೋಧವೂ ಆರಂಭವಾಗಿದೆ ಎಂದು ಹೆಸರು ಪ್ರಕಟಪಡಿಸಬಾರದು ಎಂಬ ಷರತ್ತಿನೊಂದಿಗೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಕಾವೇರಿ 2.0 ತಂತ್ರಾಂಶದ ಪ್ರಾಯೋಗಿಕ ಹಂತದಲ್ಲಿ ಇದ್ದ ಸಮಸ್ಯೆಗಳ ಪೈಕಿ ಶೇಕಡ 90ರಷ್ಟನ್ನು ಬಗೆಹರಿಸಲಾಗಿದೆ. ಸದ್ಯ ಹಣ ಪಾವತಿಗೆ ಮಾತ್ರ ಸಮಸ್ಯೆ ಆಗುತ್ತಿದೆ. ಇದಕ್ಕೆ ಕಾರಣ ಕಾವೇರಿಯೋ ಅಥವಾ ಖಜಾನೆ ಇಲಾಖೆಯ ತಂತ್ರಾಂಶವೋ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸದ್ಯ ಈ ಸಮಸ್ಯೆಯನ್ನೇ ಏಜೆಂಟರು ಬಂಡವಾಳ ಮಾಡಿಕೊಂಡಿದ್ದಾರೆ’ ಎಂದು ಅಧಿಕಾರಿ ಹೇಳಿದರು.
ಆಸ್ತಿ ನೋಂದಣಿಯಲ್ಲಿ ಟೋಕನ್ ಪಡೆಯುವಲ್ಲಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ಕೆಲವು ಕಡೆಗಳಲ್ಲಿ ಏಜೆಂಟರು ಮತ್ತು ದಸ್ತಾವೇಜು ಬರಹಗಾರರು ಉಪನೋಂದಣಾಧಿಕಾರಿಯನ್ನು ತಮ್ಮ ಬಲೆಗೆ ಬೀಳಿಸಿಕೊಂಡು, ತಮಗೆ ಮಾತ್ರ ಟೋಕನ್ ಸುಲಭವಾಗಿ ಸಿಗುವಂತೆ ಮಾಡುತ್ತಿದ್ದರು. ಹೀಗಾಗಿ ಏಜೆಂಟರ ಮೂಲಕ ಹೋದರೆ ಮಾತ್ರ ಆಸ್ತಿ ನೋಂದಣಿ ಮಾಡಲು ಸಾಧ್ಯ ಎಂಬಂತಾಗಿತ್ತು. ಕಾವೇರಿ 2.0ದಲ್ಲಿ ಸಾರ್ವಜನಿಕರು ನೇರವಾಗಿ ಮತ್ತು ಸುಲಭವಾಗಿ ಟೋಕನ್ ಪಡೆದುಕೊಳ್ಳಬಹುದು. ಇದಕ್ಕಾಗಿ ‘ಪಬ್ಲಿಕ್ ಎಂಟ್ರಿ’ ಅವಕಾಶ ಒದಗಿಸಲಾಗಿದೆ. ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಆಗಾಗ ಪರಿಶೀಲಿಸಿಕೊಳ್ಳಬಹುದು. ಹೀಗಾಗಿ ಈ ತಂತ್ರಾಂಶ ಬಳಕೆಯಲ್ಲಿ ಅರ್ಜಿದಾರರೇ ‘ರಾಜ’ರಾಗಿರುತ್ತಾರೆ. ಕಾವೇರಿ 1.0ದಲ್ಲಿ ಕಂಪ್ಯೂಟರ್ ಆಪರೇಟರ್‌ಗೆ ಮಹತ್ವವಿತ್ತು. ಈಗ ಅವರ ಕಾರ್ಯ ಗೌಣವಾಗಿದೆ. ಇದು ಏಜೆಂಟರನ್ನು ರೊಚ್ಚಿಗೇಳುವಂತೆ ಮಾಡಿದೆ.
‘ಸೇಲ್ ಡೀಡ್ ತಯಾರಿಸಲು ಎಷ್ಟು ಹಣ ವೆಚ್ಚವಾಗುತ್ತದೆ ಎಂದು ಮಾರಾಟಗಾರ ಮತ್ತು ಖರೀದಿದಾರರಿಗೆ ತಿಳಿಯದಂತೆ ಏಜೆಂಟರು ‘ವ್ಯವಹಾರ’ ಮಾಡುತ್ತಿದ್ದರು. ಈಗ ಆನ್‌ಲೈನ್ ಮೂಲಕ ಹಣ ಸಂದಾಯ ಮಾಡುವುದರಿಂದ ಇದರ ಪ್ರಮಾಣ ಸ್ಪಷ್ಟವಾಗಿ ತಿಳಿಯುತ್ತದೆ’ ಹೀಗಾಗಿ ಲೂಟಿ ಮಾಡಲು ಏಜೆಂಟರಿಗೆ ಅವಕಾಶ ಇಲ್ಲ. ಇದು ಕೂಡ ಅವರನ್ನು ಕೆರಳಿಸಿದೆ’ ಎನ್ನುತ್ತಾರೆ ಕಚೇರಿಯೊಂದರ ಸಿಬ್ಬಂದಿ.
ಕಾವೇರಿಯೂ ಸರ್ವ ಸ್ವತಂತ್ರವಲ್ಲ: ಕಾವೇರಿ 2.0 ತಂತ್ರಾಂಶ ಒಂದರಿಂದಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ ತಂತ್ರಾಂಶಗಳನ್ನು ಇದು ಅವಲಂಬಿಸಿದೆ. ಈ ಇಲಾಖೆಗಳಿಂದ ಮಾಹಿತಿ ಬರುವುದು ವಿಳಂಬವಾದರೆ ನೋಂದಣಿಯೂ ತಡವಾಗುವ ಸಾಧ್ಯತೆ ಇದೆ ಎನ್ನುವುದು ಪತ್ರ ಬರಹಗಾರರ ಅಭಿಪ್ರಾಯ. ಹೀಗಾಗಿ ಸುಧಾರಿತ ಕಾವೇರಿ ಜಾರಿ ನಂತರವೂ ತಾಂತ್ರಿಕ ತೊಂದರೆ ತಪ್ಪಿದ್ದಲ್ಲ ಎಂಬ ಆತಂಕವಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕಾವೇರಿ 2.0 ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸುತ್ತಿದ್ದು ನೋಂದಣಿ ಮಾಡಿಸಿಕೊಳ್ಳುವವರಿಗೂ ಇಲಾಖೆಯ ಸಿಬ್ಬಂದಿಗೂ ತಲೆ ನೋವುಂಟುಮಾಡಿದೆ. ಹೊಸ ತಂತ್ರಾಂಶ ಅಳವಡಿಕೆ ಮಾಡಿದ ನಂತರವೂ ನೋಂದಣಿ ಕಾರ್ಯ ತಡವಾಗುತ್ತಿದೆ ಎಂಬ ಆರೋಪಗಳು ಇಲ್ಲಿ ಕೇಳಿಬಂದಿವೆ. ಸಂಯೋಜನೆಯಾಗಿರುವ ಆಸ್ತಿ ವಿವರ ಈಗ ಸರಿಯಾಗಿ ತೋರಿಸುತ್ತಿಲ್ಲ. ಜಿಲ್ಲೆಯ ಹಲವು ಊರುಗಳ ಹೆಸರೇ ಇದರಲ್ಲಿ ದಾಖಲಾಗಿಲ್ಲ ಎಂದು ಜನರು ದೂರುತ್ತಿದ್ದಾರೆ.
ಪಿಂಚಣಿಗಾಗಿ ತಪ್ಪದ ಅಲೆದಾಟ: ‘ಮನೆ ಬಾಗಿಲಿಗೆ ಮಾಸಾಶನ’ ಯೋಜನೆಯು ಫಲಾನುಭವಿಗಳ ಪಾಲಿಗೆ 72 ಗಂಟೆಯೊಳಗೆ ಪಿಂಚಣಿ ಮಂಜೂರಾತಿ ಪಡೆದುಕೊಳ್ಳುವ ಹಾದಿಯನ್ನು ಸುಗಮಗೊಳಿಸಿದೆ. ಆದರೆ ಹಳ್ಳಿ ಹಾಗೂ ಗಡಿಭಾಗಗಳಲ್ಲಿ ಪ್ರಚಾರ ಮಾಡದೇ ಇರುವುದರಿಂದ ಪಿಂಚಣಿಗಾಗಿ ಜನರ ಅಲೆದಾಟ ತಪ್ಪಿಲ್ಲ.
ಉಡುಪಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 2019ರಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ ಯೋಜನೆ ಯಶಸ್ವಿಯಾಗಿದ್ದರಿಂದ 2022ರಲ್ಲಿ ರಾಜ್ಯದಾದ್ಯಂತ ವಿಸ್ತರಿಸಲಾಯಿತು. 72 ಗಂಟೆಯೊಳಗೆ ಪಿಂಚಣಿ ಮಂಜೂರು ಮಾಡಲು ಕಂದಾಯ ಇಲಾಖೆ ‘ಹಲೋ ಕಂದಾಯ ಸಚಿವರೇ’– ಶುಲ್ಕರಹಿತ ಸಹಾಯವಾಣಿ ಸೇವೆ (155245) ಆರಂಭಿಸಿದೆ. ಇದಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಿಕೊಂಡರೆ ಗ್ರಾಮ ಲೆಕ್ಕಾಧಿಕಾರಿ ಅರ್ಜಿದಾರರ ಮನೆ ಬಾಗಿಲಿಗೇ ಬಂದು ಫೋಟೊ ತೆಗೆದುಕೊಂಡು ಅಗತ್ಯ ದಾಖಲೆಗಳನ್ನು ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ದಾಖಲೆಗಳು ಸಮರ್ಪಕವಾಗಿದ್ದರೆ 72 ಗಂಟೆಯೊಳಗೆ ಪಿಂಚಣಿ ಮಂಜೂರು ಮಾಡಲಾಗುತ್ತದೆ.
‘ಮೂರು ವರ್ಷ ಅಲೆದಾಡಿದರೂ ನನಗೆ ಪಿಂಚಣಿ ಮಂಜೂರು ಆಗಿರಲಿಲ್ಲ. ಸಹಾಯವಾಣಿಗೆ ಕರೆ ಮಾಡಿದ ಬಳಿಕ ಈ ತಿಂಗಳಿನಿಂದ ಪಿಂಚಣಿ ಬರತೊಡಗಿದೆ’ ಎಂದು ಬೆಳಗಾವಿ ಜಿಲ್ಲೆಯ ನೇಗಿನಹಾಳ ಗ್ರಾಮದ ವೃದ್ಧೆ ಸಾತವ್ವ ವಾಲಿಕಾರ ಹೇಳಿದರು.
ಗಡಿ ಭಾಗದಲ್ಲಿ ಕಾಣದ ಯಶಸ್ಸು: ಈ ಯೋಜನೆಯು ಗಡಿಭಾಗದ ಹಳ್ಳಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವಡಗಾಂವ್ (ಡಿ)ನಲ್ಲಿ ಕಳೆದ ವರ್ಷ ಕಂದಾಯ ಸಚಿವರು ಗ್ರಾಮ ವಾಸ್ತವ್ಯ ಮಾಡಿ ಯೋಜನೆ ಘೋಷಿಸಿದ್ದರು. ಜಾಗೃತಿ ಮೂಡಿಸದೇ ಇರುವುದರಿಂದ ಗಡಿ ಭಾಗದಲ್ಲಿ ಇದು ಹೇಳಿಕೊಳ್ಳುವಷ್ಟು ಯಶಸ್ವಿಯಾಗಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನೌಕರರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸಹಾಯವಾಣಿ ಮೂಲಕ 1,700ಕ್ಕೂ ಅಧಿಕ ಜನರಿಗೆ ಪಿಂಚಣಿ ಮಂಜೂರು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲ್ಲೂಕಿನ ಗುಡ್ಡಗಾಡು ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಆ ಭಾಗದ ಜನ ಸಾಂಪ್ರದಾಯಿಕ ವಿಧಾನವನ್ನೇ ಅವಲಂಬಿಸುವಂತಾಗಿದೆ. ಸ್ಥಳ ಪರಿಶೀಲನೆಗೆ ಬರುವ ಗ್ರಾಮ ಲೆಕ್ಕಾಧಿಕಾರಿಗಳ ‘ಕೈಬಿಸಿ’ ಮಾಡಿದರೆ ಮಾತ್ರ ಕೆಲಸ ಸುಮಗವಾಗಿ ಆಗುತ್ತದೆ ಎಂಬ ದೂರುಗಳೂ ಇವೆ.
ನೂತನ ವ್ಯವಸ್ಥೆ ಆರಂಭಿಸಿದ ಬಳಿಕ ಕೋಲಾರ ಜಿಲ್ಲೆಯಲ್ಲಿ ನಾಡಕಚೇರಿಗೆ ಬಂದು ಪಿಂಚಣಿಗಾಗಿ ಅರ್ಜಿ ಕೊಡುವ ಸಂಖ್ಯೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ನಿತ್ಯ 25 ಜನರಿಗೆ ಮನೆ ಬಾಗಿಲಿಗೆ ಮಾಸಾಶನ ಆದೇಶ ತಲುಪಿಸಲಾಗುತ್ತಿದೆ. ಸರ್ವರ್ ಸಮಸ್ಯೆ, ಸಿಬ್ಬಂದಿ ಕೊರತೆಯಿಂದಾಗಿ ಈ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳೇ ಹೇಳುತ್ತಾರೆ.
‘ಗ್ರಾಮ ಲೆಕ್ಕಾಧಿಕಾರಿ ಮನೆಗೆ ಬಂದಾಗ ಅರ್ಜಿ ಸಲ್ಲಿಸಿರುವ ವ್ಯಕ್ತಿ ಇರುವುದೇ ಇಲ್ಲ. ಇದರಿಂದಾಗಿ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಈ ಯೋಜನೆಯಡಿ ಒಮ್ಮೆ ಅರ್ಜಿ ತಿರಸ್ಕರಿಸಿದರೆ, ಬಳಿಕ ನಾಡಕಚೇರಿಗೇ ಹೋಗಿ ಅರ್ಜಿ ಸಲ್ಲಿಸಬೇಕು. ಸಾಂಪ್ರದಾಯಿಕ ವ್ಯವಸ್ಥೆಯಡಿ ಪರಿಶೀಲಿಸಿ ಪಿಂಚಣಿ ಮಂಜೂರು ಮಾಡಲು ಕನಿಷ್ಠ 45 ದಿನಗಳು ಬೇಕಾಗುತ್ತವೆ’ ಎನ್ನುತ್ತಾರೆ ದಾವಣಗೆರೆ ಜಿಲ್ಲೆಯ ಸಾಮಾಜಿಕ ಭದ್ರತಾ ಶಾಖೆಯ ಸಹಾಯಕ ನಿರ್ದೇಶಕಿ ಪುಷ್ಪಾ.
₹2 ಕೋಟಿಗೆ ಬೇಡಿಕೆ ಇಟ್ಟು ಜೈಲು ಸೇರಿದ ಅಧಿಕಾರಿ
ಬೆಳಗಾವಿ: ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಕುಲವಳ್ಳಿ ಗುಡ್ಡದ ಸುಮಾರು 2900 ಎಕರೆ ಜಮೀನನ್ನು ರಾಜೇಂದ್ರ ಇನಾಮದಾರ ಅವರ ಕುಟುಂಬದವರ ಹೆಸರಿಗೆ ದಾಖಲಿಸಲು 2022ರಲ್ಲಿ ₹ 2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದ ತಹಶೀಲ್ದಾರ್ ಸೋಮಲಿಂಗಪ್ಪ ಹಲಗಿ ಹಾಗೂ ಗುಮಾಸ್ತ ಜಿ.ಪ್ರಸನ್ನ ಜೈಲು ಪಾಲಾಗಿದ್ದರು. ₹ 2 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಲಾಗಿತ್ತು.
ಜಮೀನು ಖರೀದಿಯ ನೋಂದಣಿ ಮಾಡಿಕೊಡಲು ಮಹಾರಾಷ್ಟ್ರದ ಇಚಲಕರಂಜಿಯ ರಾಜು ಪಾಚ್ಚಾಪುರೆ ಅವರಿಂದ ₹ 30 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದ ಚಿಕ್ಕೋಡಿ ಉಪನೋಂದಣಾಧಿಕಾರಿ ಜಿ.ಪಿ.ಶಿವರಾಜು ಈ ವರ್ಷದ ಜನವರಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಮತ್ತೊಂದು ಪ್ರಕರಣದಲ್ಲಿ ಜಮೀನುಗಳ ನಕ್ಷೆ ಅವಧಿ ವಿಸ್ತರಿಸಲು ಲಂಚ ಪಡೆಯುತ್ತಿದ್ದ ಚಿಕ್ಕೋಡಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಮೇಲ್ವಿಚಾರಕ ಸತೀಶ ಕಲ್ಯಾಣಶೆಟ್ಟಿ ಮೇ 19ರಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಆಸ್ತಿ ದಾಖಲಾತಿ ಬದಲಾವಣೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಖಾನಾಪುರ ತಾಲ್ಲೂಕಿನ ನಿಟ್ಟೂರಿನ ಪಿಡಿಒ ಗುಮಾಸ್ತ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದರು.
ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮ ಪಂಚಾಯಿತಿಯ ಗುಮಾಸ್ತರೊಬ್ಬರು ಆಸ್ತಿ ನೋಂದಣಿಗೆ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ‘ಬೆಳಗಾವಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆನ್‌ಲೈನ್ ಮೂಲಕ ಯಾವ ಕೆಲಸಕ್ಕೆ ಅರ್ಜಿ ಸಲ್ಲಿಸಿದರೂ ತಾಂತ್ರಿಕ ಕಾರಣ ಹೇಳಿ ವಿಳಂಬ ಮಾಡಲಾಗುತ್ತಿದೆ. ಏಜೆಂಟರ ಮೂಲಕ ಸಂಪರ್ಕಿಸಿದರೆ ಒಂದೇ ದಿನದಲ್ಲಿ ಕೆಲಸ ಆಗುತ್ತದೆ. ನಾನೇ ಲಂಚ ಕೊಟ್ಟಿದ್ದೇನೆ’ ಎಂದು ನಿವೇಶನ ಮಾರಾಟದ ನೋಂದಣಿಗಾಗಿ ಉಪನೋಂದಣಾಧಿಕಾರಿ ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ದಕ್ಷಿಣ ಕನ್ನಡಕ್ಕೆ ವರವಾದ ‘ವಿಳಂಬ’
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊನೆಯದಾಗಿ ಕಾವೇರಿ 2.0 ಅಳವಡಿಸಿರುವುದು ಇಲ್ಲಿನ ಸಿಬ್ಬಂದಿಗೆ ಅನುಕೂಲ ಆಗಿದೆ. ಅಡೆತಡೆಗಳಿಗೆ ಪರಿಹಾರ ಕಂಡುಕೊಂಡ ನಂತರ ಪರಿಪೂರ್ಣ ಉತ್ಪನ್ನ ಸಿಕ್ಕಿದಂತಾಗಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ನೂರ್ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮನೆಯಲ್ಲೇ ಕುಳಿತು ದಾಖಲೆಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಿರುವುದರಿಂದ ಕಚೇರಿಗಳಲ್ಲಿ ದಟ್ಟಣೆ ಕಡಿಮೆಯಾಗುತ್ತದೆ. ವೈಯಕ್ತಿಕ ಆಸ್ತಿಯ ಮಾಹಿತಿಯನ್ನು ಯಾರೂ ತಪ್ಪಾಗಿ ನಮೂದಿಸಲು ಸಾಧ್ಯವಿಲ್ಲದ ಕಾರಣ ಸರ್ಕಾರಕ್ಕೆ ಉತ್ತಮ ಪ್ರಮಾಣದ ರಾಜಸ್ವ ಬರಲಿದೆ’ ಎಂದು ನೂರ್ ಪಾಷಾ ಹೇಳಿದರು.
‘ಇದು ಜನಸ್ನೇಹಿ ತಂತ್ರಾಂಶ ಎಂದು ಕೆಲವೇ ದಿನಗಳಲ್ಲಿ ಸಾಬೀತಾಗಿದೆ. ಗೊಂದಲವಿಲ್ಲದೆ ಗಡಿಬಿಡಿ ಮಾಡಿಕೊಳ್ಳದೆ ಜನರು ನೋಂದಣಿ ಮಾಡಿಕೊಳ್ಳಬಹುದು. ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಮುದ್ರೆಯೊತ್ತುವುದೊಂದೇ ನಮ್ಮ ಕೆಲಸ’ ಎಂದು ಮಂಗಳೂರು ನಗರ ವಿಭಾಗದ ಹಿರಿಯ ಉಪನೋಂದಣಾಧಿಕಾರಿ ಕವಿತಾ ಪಿ.ಬಿ ಹೇಳಿದರು.
ಮಾಸಾಶನಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟ ತಕ್ಷಣ ಕೆ–2 ತಂತ್ರಾಂಶದ ಮೂಲಕ ಬೇಗ ಪರಿಹಾರ ಸಿಗುತ್ತಿದೆ. ಆಧಾರ್ ಲಿಂಕ್ ಆಗದಿರುವ ಖಾತೆಗಳಿದ್ದರೆ ಸಮಸ್ಯೆ ಆಗುತ್ತದೆ. ತಾಂತ್ರಿಕ ಅಥವಾ ಇನ್ನಿತರ ಸಮಸ್ಯೆ ಗಮನಕ್ಕೆ ತಂದರೆ ಅಧಿಕಾರಿಗಳು ಆದಷ್ಟು ಬೇಗ ಪರಿಹರಿಸಿ ಮಾಸಾಶನ ಸಿಗುವ ವ್ಯವಸ್ಥೆ ಮಾಡುತ್ತಾರೆ. ಈ ಮೊದಲಿನಂತೆ ಮಾಸಾಶನಕ್ಕೆ ಅಂಗವಿಕಲರು ಅಲೆದಾಡುವಂತಹ ಪರಿಸ್ಥಿತಿ ಇಲ್ಲ. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೂ ಬೇಗನೇ ಮಾಸಾಶನ ಮಂಜೂರಾಗುತ್ತದೆ.-ಹೊನ್ನಪ್ಪ ಗೂಳಪ್ಪನವರ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ರಾಯಚೂರು
ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಕ್ರಮ ವಹಿಸಿದೆ ಎಂದು ಹಿಂದಿನ ಕಂದಾಯ ಸಚಿವರು ಹೇಳಿಕೆ ನೀಡಿ ತಿಂಗಳುಗಳೇ ಕಳೆದಿವೆ. ಕಂದಾಯ ನಿರೀಕ್ಷಕರಿಂದ ವಿವಿಧ ಹಂತಗಳನ್ನು ದಾಟಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ತಲುಪಲು ಒಂದು ತಿಂಗಳು ಬೇಕು. ಏಕೆ ತಡ ಎಂದು ಕೇಳಿದರೆ ಅಧಿಕಾರಿಗಳು ಕಾರಣ ನೀಡಿ ಮತ್ತಷ್ಟು ವಿಳಂಬ ಮಾಡುತ್ತಾರೆ.–ಸೋಮಶೇಖರ್, ಕೂಡಲಕುಪ್ಪೆ, ಶ್ರೀರಂಗಪಟ್ಟಣ ತಾಲ್ಲೂಕು
ಮನೆ ಬಾಗಿಲಿಗೆ ಮಾಸಾಶನ ತಲುಪಿಸುವ ಪ್ರಾಯೋಗಿಕ ಯೋಜನೆಯನ್ನು ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಈ ವರೆಗೆ ಬಂದಿರುವ ಎಲ್ಲ ಅರ್ಜಿಗಳನ್ನು 72 ತಾಸುಗಳೊಳಗೆ ವಿಲೇವಾರಿ ಮಾಡಲಾಗಿದೆ.–ಡಾ.ಬಿ.ಎನ್.ವೀಣಾ, ಹೆಚ್ಚುವರಿ ಜಿಲ್ಲಾಧಿಕಾರಿ, ಉಡುಪಿ
ಪೂರಕ ಮಾಹಿತಿ: ಬ್ಯೂರೋಗಳಿಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.