ADVERTISEMENT

ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮ ಭೂಕಬಳಿಕೆ; ಅಧಿಕಾರಿಗಳು ಶಾಮೀಲು

ನಕಲಿ ದಾಖಲೆ ಸೃಷ್ಟಿಸಿ ಲೂಟಿ

ಕೆ.ಎಸ್.ಸುನಿಲ್
Published 25 ಆಗಸ್ಟ್ 2019, 1:37 IST
Last Updated 25 ಆಗಸ್ಟ್ 2019, 1:37 IST
   

ಹಾಸನ: ಮಲೆನಾಡು ಸೇರಿದಂತೆ ಬಯಲು ಸೀಮೆಯ ನಾಲ್ಕು ಜಿಲ್ಲೆಗಳ ಜೀವನಾಡಿಯಾಗಿರುವ ಹೇಮೆಯ ಒಡಲಿನಿಂದ, ಈಗ ಭೂ ಕಬಳಿಕೆಯ ಕಮಟು ವಾಸನೆ ಜೋರಾಗಿ ಹೊರಸೂಸುತ್ತಿದೆ.

ಹೇಮಾವತಿ ಜಲಾಶಯ ಯೋಜನೆ ಗಾಗಿ ಭೂಮಿ ಕಳೆದುಕೊಂಡರ ಹೆಸರಿನಲ್ಲಿರುವ ‘ಮುಳುಗಡೆ ಸಂತ್ರಸ್ತರ ಪ್ರಮಾಣಪತ್ರ’ ಬಳಸಿ, ಉಳ್ಳವರು ಭೂಮಿಯನ್ನು ಕಬಳಿಸುವ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ.

ADVERTISEMENT

ಈ ಯೋಜನೆಗಾಗಿ 1970–71ರಲ್ಲಿ ಆಲೂರು, ಸಕಲೇಶಪುರ, ಹಾಸನದ ರೈತರು ಭೂಮಿ ಕಳೆದುಕೊಂಡಿದ್ದರು. ಇವರಿಗೆ ಸೋಮವಾರಪೇಟೆ, ಚಿಕ್ಕಮಗಳೂರು, ಆಲೂರು, ಸಕಲೇಶಪುರ, ಅರಕಲಗೂಡು, ಹಾಸನ, ಚನ್ನರಾಯಪಟ್ಟಣ, ಕೆ.ಆರ್‌.ಪೇಟೆ ತಾಲ್ಲೂಕುಗಳಲ್ಲಿ ಬದಲಿ ಭೂಮಿಯನ್ನು ಮೀಸಲು ಇಡಲಾಗಿತ್ತು.

ಸಂತ್ರಸ್ತರ ಮುಳುಗಡೆ ಪ್ರಮಾಣಪತ್ರಗಳನ್ನು ಉಳ್ಳವರು ಖರೀದಿಸಿ, ಭೂಮಿ ಕಬಳಿಸಿದ್ದಾರೆ. ಅಷ್ಟೇ ಅಲ್ಲ; 40 ವರ್ಷದ ಹಿಂದೆ ಭೂಮಿ ಕಳೆದುಕೊಂಡ ಸಂತ್ರಸ್ತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಮಂಜೂರು ಮಾಡಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಸಂತ್ರಸ್ತರಿಗೆ ಅಲ್ಪ ಆರ್ಥಿಕ ಪರಿಹಾರ ಮತ್ತು ಒಂದು ಮುಳುಗಡೆ ಪ್ರಮಾಣ ಪತ್ರಕ್ಕೆ ನಾಲ್ಕು ಎಕರೆ ಬದಲಿ ಭೂಮಿ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿತ್ತು.

ವಂಚನೆ ಸ್ವರೂಪ

ಪ್ರಭಾವ ಹಾಗೂ ಆರ್ಥಿಕ ಶಕ್ತಿ ಇದ್ದವರು ಭೂಮಿ ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಇಲ್ಲದವರು ಕಚೇರಿಗೆ ಅಲೆದು ಹೈರಾಣಾದರು. ಅವರ ಪ್ರಯತ್ನಗಳು ಫಲ ನೀಡಲಿಲ್ಲ. ಬೇಸತ್ತ ನೂರಾರು ಸಂತ್ರಸ್ತರು ಪ್ರಮಾಣಪತ್ರಗಳನ್ನು ಹಾಗೆಯೇ ಇರಿಸಿಕೊಂಡಿದ್ದರು. ಈ ವಿಷಯ ಕೆಲ ಪ್ರಭಾವಿಗಳಿಗೆ ಗೊತ್ತಾಯಿತು. ಅವರು, ಭೂಸ್ವಾಧೀನಾಧಿಕಾರಿ ಕಚೇರಿ ಅಧಿಕಾರಿ ಸಿಬ್ಬಂದಿಯೊಂದಿಗೆ ಶಾಮೀಲಾಗಿ, ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಭೂಮಿ ಮಂಜೂರು ಮಾಡಿಸುವ ಮಾರ್ಗ ಕಂಡುಕೊಂಡರು. ಒಂದು ದಶಕದಿಂದ ಈಚೆಗೆ ಇದನ್ನೇ ದಂಧೆಯಾಗಿಸಿಕೊಂಡು ಕೋಟ್ಯಂತರ ಮೌಲ್ಯದ ಭೂಮಿ ಲಪಟಾಯಿಸುತ್ತಿದ್ದಾರೆ.

ಮುಳುಗಡೆ ಪ್ರಮಾಣಪತ್ರ ಇದ್ದ ವರನ್ನು ಸಂಪರ್ಕಿಸಿ ಮುಂಗಡವಾಗಿ ಸ್ವಲ್ಪ ಹಣ ನೀಡಿ ಕ್ರಯ ಕರಾರು ಮಾಡಿಕೊಳ್ಳುತ್ತಾರೆ. ಭೂಮಿ ಮಂಜೂರು ಮಾಡಿಸಿ, ಸಂತ್ರಸ್ತರ ಹೆಸರಿಗೆ ಖಾತೆಯಾಗುತ್ತಿದ್ದಂತೆ ಅವರೊಂದಿಗೆ ಮಾಡಿಕೊಂಡ ಒಪ್ಪಂದಂತೆ ಕ್ರಯ ನೋಂದಣಿ ಮಾಡಿಸಿಕೊಂಡಿದ್ದಾರೆ. ಹೀಗೆ ದುಬಾರಿ ಬೆಲೆ ಭೂಮಿಯನ್ನು ಕಡಿಮೆ ಬೆಲೆಯಲ್ಲಿ ಲಪಟಾಯಿಸಿದ್ದಾರೆ. ಒಂದೇ ಪ್ರಮಾಣಪತ್ರಕ್ಕೆ ಎರಡೆ ರಡು ಬಾರಿ ಭೂಮಿ ಮಂಜೂರು ಮಾಡಿಸಿರುವುದು, ಮುಳುಗಡೆ ನಕಲಿ ಪ್ರಮಾಣ ಪತ್ರ ಸೃಷ್ಟಿಸಿ ಅದಕ್ಕೂ ಭೂಮಿ ಮಂಜೂರು ಮಾಡಿಸಿರುವ ಆರೋಪಗಳೂ ಕೇಳಿ ಬಂದಿವೆ.

ಮುಳುಗಡೆ ಸಂತ್ರಸ್ತರಿಗೆ ಚನ್ನರಾಯಪಟ್ಟಣದ ಆಲ್ಫೋನ್ಸ್‌ ನಗರದಲ್ಲಿ ಪುನರ್ವಸತಿ ಕಲ್ಪಿಸಿರುವುದು.

ವ್ಯವಸ್ಥಿತ ಜಾಲ

2012 ರಿಂದ ಸಂತ್ರಸ್ತರ ಹೆಸರಿನಲ್ಲಿ ಭೂಮಿ ಲೂಟಿ ವ್ಯಾಪಕಗೊಂಡಿದೆ. ಈ ಅವಧಿಯಲ್ಲಿ ಅರ್ಜಿ ಸಲ್ಲಿಕೆ ಸಂಖ್ಯೆಯೂ ಹೆಚ್ಚಾಯಿತು. ಮಧ್ಯವರ್ತಿಗಳು ಹುಟ್ಟಿಕೊಂಡರು. ಅಸಲಿ ಸಂತ್ರಸ್ತರ ಬದಲು ಸ್ಥಳೀಯರೂ ಅರ್ಜಿ ಸಲ್ಲಿಸಲು ಆರಂಭಿಸಿದರು. ಎಚ್ಆರ್‌ಪಿ (ಹೇಮಾವತಿ ಜಲಾಶಯ ಯೋಜನೆ) ಭೂಮಿ ಒತ್ತುವರಿ ಮಾಡಿ ಕೊಂಡಿದ್ದವರು ಮಂಜೂರಾತಿಗೆ ಅರ್ಜಿ ಸಲ್ಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.

ಅಧಿಕಾರಿಗಳ ಪ್ರಕಾರ ಎರಡು ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಲಪಟಾಯಿಸಿದ್ದು, ಮಾರುಕಟ್ಟೆ ಮೌಲ್ಯ ನೂರಾರು ಕೋಟಿ ಮೀರುತ್ತದೆ. ಈ ಅಕ್ರಮದಲ್ಲಿ ತಾಲ್ಲೂಕು ಕಚೇರಿ ಸಿಬ್ಬಂದಿ, ಹೇಮಾವತಿ ಭೂಸ್ವಾಧೀನಾಧಿಕಾರಿ ಕಚೇರಿ, ಎಚ್‌ಆರ್‌ಪಿ ಜಮೀನು ಒತ್ತುವರಿದಾರರು, ಮಧ್ಯವರ್ತಿಗಳು ಶಾಮೀಲಾಗಿದ್ದಾರೆ. ಈ ಮಧ್ಯೆ, ಕೆಲ ಸಂತ್ರಸ್ತರು ಬೇರೆಡೆ ನೆಲೆಸಿದ್ದ ಕಾರಣ ಭೂಮಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಇದನ್ನು ಗಮನಿಸಿದ್ದ ಕೆಲವರು ತಾವೇ ‘ವಾರಸುದಾರರು’ ಎಂದು ಮಂಜೂರಾತಿ ಆದೇಶ ಪಡೆದು ಖಾತೆ ಮಾಡಿಸಿಕೊಂಡಿರುವ ನಿದರ್ಶನಗಳೂ ಇವೆ.

ಈ ಜಮೀನು ಮಾರಾಟಕ್ಕೆ ‘ಪರಭಾರೆ ನಿಷೇಧ’ ಇಲ್ಲದಿರುವುದೇ ದಂಧೆ ರೂಪ ಪಡೆಯಲು ಕಾರಣ. ಮಂಜೂರಾದ ತಕ್ಷಣವೇ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ. ಶೇ 80ರಷ್ಟು ಭೂಮಿ ಇಂತಹ ಪ್ರಕರಣಗಳಲ್ಲೇ ಬಿಕರಿ ಮೂಲಕ ಕೈಬದಲಾಗಿದೆ. ಹೀಗೆ ಮಂಜೂರಾದ ಜಮೀನನ್ನು ಮಾರಾಟ ಮಾಡಿದ್ದರೂ ಸಂತ್ರಸ್ತರ ವಾರಸುದಾರರು ಎಂದು ಭೂಮಂಜೂರಾತಿಗಾಗಿ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಮತ್ತೆ ಅರ್ಜಿ ಸಲ್ಲಿಸಿ, ಜಮೀನು ಪಡೆದುಕೊಂಡಿರುವ ನಿದರ್ಶನಗಳಿವೆ. ಈಗಲೂ ಇಂಥ ಅರ್ಜಿ ಸಲ್ಲಿಕೆಯಾಗುತ್ತಲೇ ಇವೆ.

ಅಧಿಕಾರಿಗಳು ಯೋಜನೆಗಾಗಿ ಭೂಮಿ ಕಳೆದುಕೊಂಡವರ ಪಟ್ಟಿ ಮಾಡಲಿಲ್ಲ. ಸಮರ್ಪಕವಾಗಿ ಕಡತ ನಿರ್ವಹಣೆ ಮಾಡದ ಕಾರಣ ಯಾರು ಎಷ್ಟು ಬಾರಿ ಸಾಗುವಳಿ ಚೀಟಿ ಪಡೆದಿದ್ದಾರೆ? ಯಾರು ಪಡೆದುಕೊಂಡಿಲ್ಲ ಎಂಬ ಮಾಹಿತಿ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲೇ ಇಲ್ಲ. ಮತ್ತೊಂದೆಡೆ, ಭೂಮಿ ಪಡೆಯಲು ಸಂತ್ರಸ್ತರಿಗೆ ಕಾಲಮಿತಿಯನ್ನು ಹಾಕಲಿಲ್ಲ. ಹೀಗಾಗಿ, ಈ ಭೂಕಬಳಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.

ಅಕ್ರಂ ಪಾಷಾ

ಹೀಗಾಗಿ, ಇಡೀ ಪ್ರಕರಣದ ಸಮಗ್ರ ತನಿಖೆಗೆ ಹಾಸನ, ಸಕಲೇಶಪುರ ಉಪವಿಭಾಗಾಧಿಕಾರಿ ಮತ್ತು ಹೇಮಾವತಿ ಜಲಾಶಯದ ವಿಶೇಷ ಭೂಸ್ವಾಧೀನಾಧಿಕಾರಿ ಒಳಗೊಂಡ ತಂಡವನ್ನು ಜಿಲ್ಲಾಧಿಕಾರಿ ರಚಿಸಿದ್ದಾರೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲು ಸಾಧ್ಯವೇ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

* ಇಬ್ಬರು ಭೂಸ್ವಾಧೀನಾಧಿಕಾರಿಗಳು ಸಂತ್ರಸ್ತರಲ್ಲದವರಿಗೆ ಭೂಮಿ ಮಂಜೂರು ಮಾಡಿದ್ದಾರೆ ಎಂಬ ಆರೋಪ ಇದೆ. ಉದಾಹರಣೆಗೆ

ಅಧಿಕಾರಿಯೊಬ್ಬ 100 ಕಡತಕ್ಕೆ ಸಹಿ ಮಾಡಿದ್ದರೆ, ತಹಶೀಲ್ದಾರ್‌ ಬಳಿ 200 ಕಡತ ಬರುತ್ತಿತ್ತು. ಹೀಗಾಗಿ, ಖಾತೆ ಮಾಡುವುದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಪ್ರಕರಣದ ತನಿಖೆ ನಡೆಸಲು ಹಾಸನ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿದೆ. ಇನ್ನೂ ಅಂತಿಮ ವರದಿ ಬಂದಿಲ್ಲ. ಇನ್ನು ಮುಂದೆ ಭೂಮಿ ಮಂಜೂರಾಗಿರುವುದನ್ನು ಆನ್‌ಲೈನ್‌ನಲ್ಲಿ ತೋರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

–ಅಕ್ರಂ ಪಾಷ, ಜಿಲ್ಲಾಧಿಕಾರಿ, ಹಾಸನ

ಮರಿ ಜೋಸೆಫ್‌

* ಶೆಟ್ಟಿಹಳ್ಳಿಯ ಸರ್ವೆ ನಂ.28/7, 28/8 ರಲ್ಲಿ ಎರಡು ಎಕರೆ ಜಮೀನು ಮುಳುಗಡೆಯಾಗಿದೆ. ಮುಳುಗಡೆ ಸರ್ಟಿಫಿಕೇಟ್‌ ಪಡೆದುಕೊಂಡರೂ ಈವರೆಗೆ ಬದಲಿ ಭೂಮಿ ಮಂಜೂರು ಮಾಡಿಲ್ಲ. ಹತ್ತು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಮತ್ತು ದಲ್ಲಾಳಿಗಳ ಹಾವಳಿಯಿಂದ ನೈಜ ಸಂತ್ರಸ್ತರಿಗೆ ಭೂಮಿಯೇ ಸಿಗುತ್ತಿಲ್ಲ. ಒಂದು ಸರ್ಟಿಫಿಕೇಟ್‌ನಲ್ಲಿ ಒಬ್ಬರೇ ಎರಡು, ಮೂರು ಬಾರಿ ಭೂಮಿ ಮಂಜೂರು ಮಾಡಿಸಿಕೊಂಡಿರುವ ಉದಾಹರಣೆ ಇದೆ. ಎಚ್ಆರ್‌ಪಿ ಯೋಜನೆಗಾಗಿ ಮೀಸಲಿಟ್ಟ 82 ಸಾವಿರ ಹೆಕ್ಟೇರ್‌ ಪೈಕಿ 32 ಸಾವಿರ ಹೆಕ್ಟೇರ್‌ ಮಂಜೂರಾಗಿದೆಯೆಂದು ಹಿಂದಿನ ಜಿಲ್ಲಾಧಿಕಾರಿ ಎಸ್‌ಸಿ, ಎಸ್‌ಟಿ ಸಭೆಯಲ್ಲಿ ಹೇಳಿದ್ದಾರೆ. ಉಳಿದ 50 ಸಾವಿರ ಹೆಕ್ಟೇರ್‌ ಹಂಚಿಕೆ ಆಗಿಲ್ಲ. ಆ ಭೂಮಿ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮಾಹಿತಿ ನೀಡುವುದಿಲ್ಲ. ಸರ್ವೆ ನಂಬರ್‌ಗಳ ಬಗ್ಗೆ ಮಾಹಿತಿ ಪಡೆಯಬೇಕಾದರೂ ಕನಿಷ್ಠ ₹ 10 ಸಾವಿರ ಲಂಚ ಕೊಡಬೇಕು.

–ಮರಿ ಜೋಸೆಫ್‌, ಸಂತ್ರಸ್ತ, ಶೆಟ್ಟಿಹಳ್ಳಿ

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.