ಹುಬ್ಬಳ್ಳಿ: ಬಟ್ಟಿಬರಿ, ಔಷಧಿ, ಗಂಟ್‌ಮೂಟಿ ಕಟ್ಕೊಂಡ್ ಕುರಿ, ಮ್ಯಾಕಿಗಳ ಸಂಗಟ ಹೊಂಟ ಬಿಡ್ತೀವ್ರಿ. ಹೆಗಲ ಮ್ಯಾಲೆ ಕಂಬಳಿ, ಕೈಯಾಗ್ ಉದ್ದ ಕೋಲು, ತಪ್ಪಲ ಕೊಯ್ಯಾಕ ಕೋತ ಹಿಡ್ಕೊಂಡು ಹೊಂಟ್ರ 8–10 ತಿಂಗಳ್ ಮ್ಯಾಲ ಮನೀಗ್ ಬರೊದ್. ಮಳಿ, ಚಳಿ, ಗಾಳಿ, ಬಿಸಿಲಿದ್ರೇನಂತ್ ನಮಗೇನ್ ಆಗಂಗಿಲ್ರಿ. ಇರಾಕ್, ಮಲಗಾಕ್, ಅಡಗಿ ಮಾಡಾಕ್ ಜಾಗ ಬೇಕ್ ನೋಡ್ರಿ. ಅಲ್ಲೇ ಉಳಿದ್‌ಬಿಡ್ತೀವಿ. ನಮಗೇನ್ರಿ ಆಕಾಶವೇ ಚಾದರ್, ಭೂಮಿನಾ ಹಾಸಗಿ. ಒಂದ್ ಕಡಿ ಇರೋ ಮಂದಿ ಅಲ್ರಿ ನಾವ್...’
ಇದು ಕುರಿಗಾಹಿಗಳ ಬದುಕಿನ ಸಂಕ್ಷಿಪ್ತ ಚಿತ್ರಣ. ಹೆದ್ದಾರಿ ಬದಿ, ಕಾಡುಮೇಡು, ಜಮೀನುಗಳಲ್ಲಿ ಕುರಿ ಹಿಂಡು ಕಂಡರೆ, ಸಮೀಪದಲ್ಲಿ ಅಲೆಮಾರಿ ಕುರುಬರು ಇದ್ದಾರೆಂದೇ ಅರ್ಥ. ಅವರೊಂದಿಗೆ ಹರಟುತ್ತ ಅರ್ಧ ದಿನ ಕಳೆದರೂ ಸಾಕು, ‘ಹೊಸ ಜಗತ್ತು’ ಅನಾವರಣಗೊಳ್ಳುತ್ತದೆ. ಎಲ್ಲರೂ ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರದತ್ತ ಮುನ್ನುಗ್ಗಿ ಅದೇನೋ ಸಾಧಿಸುವ ಪೈಪೋಟಿಯಲ್ಲಿದ್ದರೆ, ಕುರಿಗಾಹಿಗಳು ಮಾತ್ರ ‘ನಮ್ಮ ಪಾಲಿಗೆ ಕುರಿಗಳೇ ಜಗತ್ತು. ಅಷ್ಟು ಸಾಕು’ ಎನ್ನುತ್ತಾರೆ.
ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ದಾವಣಗೆರೆ, ಬೆಳಗಾವಿ, ಬಾಗಲಕೋಟೆ ಅಲ್ಲದೇ ಆಂಧ್ರ ಪ್ರದೇಶದ ಕುರಿಗಾಹಿಗಳು ಅಲ್ಲಲ್ಲಿ ಹೆಚ್ಚು ಕಾಣಸಿಗುತ್ತಾರೆ. ಕುರಿಗಳ ಹಿಂಡಿನೊಂದಿಗೆ ಬೆರಳೆಣಿಕೆಯಷ್ಟು ಮೇಕೆ, ಒಂದೆರಡು ನಾಯಿ, ಕುದುರೆ ಮತ್ತು ಕತ್ತೆ ಇರುತ್ತವೆ. ಬೇಕಾದ ವಸ್ತು, ಸರಂಜಾಮು ಹೊರಲು ಕುದುರೆ, ಕತ್ತೆಗಳು ‘ಸಾಥ್’ ಕೊಟ್ಟರೆ, ಕುರಿ, ಮೇಕೆಗಳ ಕಾವಲಿಗೆ ನಾಯಿಗಳು ಬೇಕು. ಇವೆಲ್ಲದರ ಮೇಲೆ ನಿಗಾ ಇಡಲು ಕುರಿಗಾಹಿಗಳು ಸದಾ ಎಚ್ಚರದಿಂದ ಇರಬೇಕು.
ಮುಖ್ಯವಾಹಿನಿಯಲ್ಲಿ ಬೆರೆಯಲು ಹಲವು ಅವಕಾಶಗಳಿದ್ದರೂ ಪಾರಂಪರಗತವಾಗಿ ಬಂದಿರುವ ಕುರಿ ಸಾಕಣೆಯನ್ನೇ ನೆಚ್ಚಿಕೊಂಡಿರುವ ಕುರಿಗಾಹಿಗಳ ಪಾಲಿಗೆ ‘ಕುರಿಗಳೇ ಜೀವಾಳ’. ಕುರಿಗಳನ್ನು ಬೇಟೆಯಾಡಲು ಬರುವ ಚಿರತೆ, ತೋಳದಂತಹ ಕಾಡುಪ್ರಾಣಿಗಳು ತಮ್ಮ ಪೂರ್ವಜರು ಎಂಬ ನಂಬಿಕೆ ಅವರದ್ದು. ಅವು ಬೇಟೆಯಾಡಿ ಕುರಿಗಳನ್ನು ಒಯ್ದರೆ, ಪೂರ್ವಜರು ತಮ್ಮ ಪಾಲು ಪಡೆದರು ಎಂದು ಸಮಾಧಾನ ಪಡುತ್ತಾರೆ ಹೊರತು, ಯಾರಿಗೂ ಶಪಿಸಲ್ಲ.
ಮೇವು ಅರಸಿ ಕೆಲವರು ಊರು ಬಿಟ್ಟರೆ, ಹುಟ್ಟೂರಿಗೆ ಮರಳುವುದು ಗಣೇಶ ಹಬ್ಬಕ್ಕೆ. ನಂತರದ 4 ತಿಂಗಳು ಎಲ್ಲಿಯೂ ಕದಲಲ್ಲ. ಕುಟುಂಬ ನಿರ್ವಹಣೆ, ಖರ್ಚ–ವೆಚ್ಚ ಎಲ್ಲದ್ದಕ್ಕೂ ಮನೆಯ ಹೆಣ್ಣುಮಕ್ಕಳೇ ಹೊಣೆ. ಮನೆಯಲ್ಲಿ ಏನೇ ದೊಡ್ಡ ಸಮಸ್ಯೆಯಾದರೆ, ದೂರದ ಊರಿನಲ್ಲಿ ಕುರಿ ಮೇಯಿಸುವ ಮನೆಯ ಯಜಮಾನನಿಗೆ ತಕ್ಷಣವೇ ಮೊಬೈಲ್ ಕರೆ ಹೋಗುತ್ತದೆ. ಯಜಮಾನನ ಬಳಿ ದ್ವಿಚಕ್ರ ವಾಹನವಿದ್ದರೆ ಅದರಲ್ಲಿ, ಇಲ್ಲದಿದ್ದರೆ ಸಿಕ್ಕಿದ ಲಾರಿ, ಬಸ್, ಸರಕು ಸಾಗಣೆ ವಾಹನವನ್ನೇರಿ ಆತ ಮನೆಗೆ ಹಾಜರ್. ಎಲ್ಲವನ್ನೂ ಬಗೆಹರಿಸಿದ ಬಳಿಕವೇ ಕಾಯಕಕ್ಕೆ ಮರಳುವುದು.
ಮಳೆಯಾದರಂತೂ ಕುರಿಗಳು ಮತ್ತು ಕುರಿಗಾಹಿಗಳ ಪಡಿಪಾಟಲು ಹೇಳತೀರದು. ವಿಶಾಲ ಜಮೀನು ಇಲ್ಲವೇ ಬಯಲು ಆಶ್ರಯಿಸುವ ಕುರಿಗಾಹಿಗಳಿಗೆ ಸ್ವಯಂ ಆಸರೆ ಕಂಡುಕೊಳ್ಳಲು ಮತ್ತು ಕುರಿಗಳಿಗೆ ರಕ್ಷಣೆ ನೀಡಲು ಆಗುವುದಿಲ್ಲ. ಸಿಡಿಲಿನ ಹೊಡೆತಕ್ಕೆ ಸಾವು ನೋವು ಸಂಭವಿಸುತ್ತದೆ. ರೈಲ್ವೆ ಹಳಿ ದಾಟುವಾಗ ಅಥವಾ ಹೆದ್ದಾರಿಗಳಲ್ಲಿ ಸಾಗುವಾಗ ಅಪಘಾತಕ್ಕೀಡಾಗಿ ಹಿಂಡುಗಟ್ಟಲೇ ಕುರಿ, ಮೇಕೆಗಳು ಸಾವನ್ನಪ್ಪುತ್ತವೆ. ನಷ್ಟಕ್ಕೆ ಸಾಕಷ್ಟು ಸಲ ಪರಿಹಾರ ಸಿಗಲ್ಲ. ಅದನ್ನು ಪಡೆಯುವ ವಿಧಾನವೂ ಅವರಿಗೆ ಗೊತ್ತಿರಲ್ಲ. ಒಂದು ವೇಳೆ ಗೊತ್ತಿದ್ದರೂ ಅಗತ್ಯ ದಾಖಲೆಪತ್ರ ಇರಲ್ಲ. ಜೊತೆಗೆ ಅನಕ್ಷರತೆ ಸಮಸ್ಯೆ. ಈ ಎಲ್ಲದರಿಂದ ಅವರಿಗೆ ಸುಲಭವಾಗಿ ಪರಿಹಾರ ದಕ್ಕುವುದಿಲ್ಲ.
ಕುರಿಗಳಿಗೆ ಸಾಂಕ್ರಾಮಿಕ ಕಾಯಿಲೆಗಳೂ ಕಾಡುತ್ತವೆ. ಎಲ್ಲಾ ಕುರಿಗಳನ್ನು ಸಮೀಪದ ಪಶುವೈದ್ಯಕೀಯ ಆಸ್ಪತ್ರೆಗೆ ಒಯ್ಯಲು ಅಥವಾ ಪಶುವೈದ್ಯರನ್ನು ಕರೆ ತರಲು ಆಗಲ್ಲ. ಅದಕ್ಕೆ ಕುರಿ ಮೇಯಿಸುವವರು ಯಾವಾಗಲೂ ತಮ್ಮೊಂದಿಗೆ ಎಲ್ಲಾ ಪ್ರಕಾರದ ನಾಟಿ ಔಷಧಿಗಳನ್ನು ಇಟ್ಟುಕೊಂಡಿರುತ್ತಾರೆ. ರೋಗದ ಲಕ್ಷಣ ಅಥವಾ ಸುಳಿವು ಗೊತ್ತಾದ ಕೂಡಲೇ ಔಷಧೋಪಚಾರಕ್ಕೆ ಸಿದ್ಧರಾಗುತ್ತಾರೆ.
ಸ್ವತಃ ಕುರಿಗಾಹಿಗಳಿಗೆ ಜ್ವರ, ಶೀತ ಅಥವಾ ಬೇರೆ ರೀತಿಯ ಅನಾರೋಗ್ಯ ಸಮಸ್ಯೆ ಕಾಡಿದರೂ ಸಮೀಪದ ಆಸ್ಪತ್ರೆಗೆ ಹೋಗಲು ಬಯಸಲ್ಲ. ಮನೆಯಿಂದ ಗಂಟುಮೂಟೆಯಲ್ಲಿ ಕಟ್ಟಿಕೊಂಡು ಬಂದ ಡಬ್ಬಿ ಅಥವಾ ಚೀಟಿಯಲ್ಲಿನ ಔಷಧಿ ಸೇವಿಸಿ, ಗುಣಮುಖರಾಗುತ್ತಾರೆ. ಎಷ್ಟೋ ಸಂದರ್ಭಗಳಲ್ಲಿ ತಾವು ನೆಲೆ ನಿಂತ ಊರಿನವರಿಗೂ ಅದೇ ಔಷಧಿಯನ್ನು ಕೊಡುತ್ತಾರೆ. ಯಾರಾದರೂ ಅವರ ಬಳಿ ತೆರಳಿ ಆಸಕ್ತಿಯಿಂದ ಔಷಧಿಯ ಜ್ಞಾನ ಪಡೆಯಲು ಇಚ್ಛಿಸಿದ್ದರೆ, ‘ಪೂರ್ವಜರಿಂದ ಕಲಿತಿದ್ದನ್ನು ನಿಮಗೆ ಹೇಗೆ ಹೇಳಲು ಸಾಧ್ಯ’ ಎಂದು ಹೇಳಿ ಸ್ಪಷ್ಟವಾಗಿ ನಿರಾಕರಿಸುತ್ತಾರೆ.
ಕುರಿಗಾಹಿಗಳು ಅಷ್ಟು ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಇದಕ್ಕೆ ಕಾರಣಗಳು ಹಲವು. ಅವುಗಳಲ್ಲಿ ಕುರಿಗಳ ಕಳ್ಳತನವೂ ಒಂದು. ಕುರಿ ಹಿಂಡನ್ನು ಬೆನ್ನತ್ತಿ ಬರುವ ಕಳ್ಳರು, ಮತ್ತು ಬರಿಸುವ ಪಾನೀಯ ಅಥವಾ ಆಹಾರ ನೀಡಿ, ಕುರಿಗಾಹಿಗಳ ಎಚ್ಚರ ತಪ್ಪಿಸುತ್ತಾರೆ. ನಂತರ 20 ರಿಂದ 30 ಕುರಿ, ಟಗರು ಕಳವು ಮಾಡಿ, ವಾಹನಗಳಲ್ಲಿ ಪರಾರಿ ಆಗುತ್ತಾರೆ. ಕುರಿಗಳ ಬೆಲೆ ₹ 10 ಸಾವಿರದವರೆಗೆ ಇದ್ದರೆ, ಟಗರಿನ ಬೆಲೆ ₹ 30 ಸಾವಿರ ಆಸುಪಾಸಿನಲ್ಲಿದೆ. ಏಕಕಾಲಕ್ಕೆ ಕೆಲವಷ್ಟು ಕಾಣೆ ಅಥವಾ ಕಳ್ಳತನವಾದರೆ, ಲಕ್ಷಾಂತರ ರೂಪಾಯಿ ನಷ್ಟವಾಗುತ್ತದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ ಭಾಗದಲ್ಲಿ ಕಬ್ಬು ಹೆಚ್ಚು ಬೆಳೆಯುವ ಮತ್ತು ನೀರಾವರಿ ಪ್ರದೇಶದಲ್ಲಿ ‘ಸಂಚಾರಿ ಕುರುಬರು’ ಇದ್ದಾರೆ. ಅವರಿಗೆ ಇರುವ ಇನ್ನೊಂದು ಹೆಸರು ‘ಬಾಗಿ ಕುರುಬರು’. ಜಾತ್ರೆ, ಮದುವೆ, ಬಂಧು–ಬಳಗದ ಶುಭಕಾರ್ಯಕ್ಕೆ ಮನೆಗೆ ಬರುವ ಅವರು ಉಳಿದ ದಿನಗಳಲ್ಲಿ ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳತ್ತ ಪ್ರಯಾಣ ಬೆಳೆಸುತ್ತಾರೆ. ಸವದತ್ತಿ, ಬೈಲಹೊಂಗಲ, ರಾಮದುರ್ಗ ತಾಲ್ಲೂಕುಗಳ ಕುರಿಗಾಹಿಗಳು ತಮ್ಮೂರು ಮತ್ತು ಅಕ್ಕಪಕ್ಕದ ಜಮೀನುಗಳಲ್ಲಿ ಮಾತ್ರ ಕುರಿ ಮೇಯಿಸುತ್ತಾರೆ. ಅವರು ತಮ್ಮೊಂದಿಗೆ ಮಕ್ಕಳನ್ನೂ ಕರೆದೊಯ್ಯುತ್ತಾರೆ. ಹೀಗಾಗಿ ಹಲವು ಸಂದರ್ಭಗಳಲ್ಲಿ ಮಕ್ಕಳಿಗೆ ಸಮರ್ಪಕ ಶಿಕ್ಷಣ ಸಿಗುವುದಿಲ್ಲ. ‘ಕುರಿಗಾಹಿಗಳ ಮಕ್ಕಳಿಗೆಂದೇ ಶೈಕ್ಷಣಿಕವಾಗಿ ನಿರ್ದಿಷ್ಟ ಯೋಜನೆಗಳಿಲ್ಲ. ಅಲೆಮಾರಿ, ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸಿಗುವ ಶೈಕ್ಷಣಿಕ ಸೌಲಭ್ಯಗಳೂ ಕುರಿಗಾಹಿಗಳ ಮಕ್ಕಳಿಗೂ ಇವೆ. ಕುರಿಗಾಹಿಗಳು ಮೇಯಿಸುತ್ತ ಅಲ್ಲಿ ತಂಗುವ ಆಯಾ ಪ್ರದೇಶದ ಶಾಲೆಗಳಲ್ಲಿ ಅವರ ಮಕ್ಕಳು ಓದಬಹುದು. ಅವರಿಗೆ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಊಟ ಇರುತ್ತದೆ’ ಎಂದು ಚಿತ್ರದುರ್ಗ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್ ಹೇಳುತ್ತಾರೆ.
‘ಹಿಂದುಳಿದ ವರ್ಗಗಳ ವಸತಿ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ ಅಲೆಮಾರಿ ಸಮುದಾಯಗಳ ವಸತಿ ಶಾಲೆಗಳಲ್ಲಿ ಕುರಿಗಾಹಿಗಳ ಮಕ್ಕಳು ಶಿಕ್ಷಣ ಪಡೆಯಬಹುದು. ಆದರೆ, ಒಂದೇ ಕಡೆ ನೆಲೆ ನಿಲ್ಲದ ಕಾರಣ ಅವರನ್ನು ಶಾಲೆಗೆ ಕರೆತಂದರೂ, ಅಷ್ಟೇ ಬೇಗ ವಾಪಸ್ ಹೋಗುತ್ತಾರೆ’ ಎಂಬ ಬೇಸರ ಅವರದ್ದು.
ವಲಸೆ ಕುಟುಂಬದ ಜೊತೆಗೆ ಊರಿನಿಂದ ಊರಿಗೆ ಹೋಗುವ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ‘ಟೆಂಟ್ ಶಾಲೆ’ ರೂಪಿಸಲಾಗಿದೆ. ಕಟ್ಟಡ ಕಾಮಗಾರಿ, ರೈತರ ಬೆಳೆ ಕಟಾವು ಮತ್ತಿತರ ಕಾರ್ಯಕ್ಕೆ ವಲಸೆ ಬರುವ ಪೋಷಕರ ಮಕ್ಕಳೂ ಟೆಂಟ್ ಶಾಲೆಗಳಲ್ಲಿ ಕಲಿಯಬಹುದು. ಕುರಿಗಾಹಿಗಳ ಮಕ್ಕಳೂ ಇಲ್ಲಿ ಶಿಕ್ಷಣ ಪಡೆಯಬಹುದು. ಆದರೆ, ಈ ಸೌಲಭ್ಯಗಳಿಂದ ಕಾರಿಗಾಹಿಗಳ ಬಹುತೇಕ ಮಕ್ಕಳು ವಂಚಿತರಾಗಿದ್ದಾರೆ.
ಕುರಿಗಾಹಿಗಳ ಆರಾಧ್ಯದೈವ ಬೀರೇಶ್ವರ, ರೇವಣಸಿದ್ಧೇಶ್ವರ, ಮಾಳಿಂಗರಾಯ ಮತ್ತು ಅಮೋಘಸಿದ್ಧ. ದೇವರ ಜಾತ್ರೆಗಳನ್ನು ಅದ್ಧೂರಿಯಾಗಿ ಆಚರಿಸುವ ಅವರಿಗೆ ಡೊಳ್ಳಿನ ಪದ, ಗಾಯನದ ಬಗ್ಗೆ ಹೆಚ್ಚು ಆಸಕ್ತಿ. ಹಬ್ಬದ ಸಂದರ್ಭದಲ್ಲಿ ದೂರದ ಊರುಗಳಲ್ಲಿ ನೆಲೆಸಿರುವ ನೆಂಟರು ಎಲ್ಲರೂ ಒಂದು ಕಡೆ ಸೇರುತ್ತಾರೆ. ಒಂದೆರಡು ದಿನ ಜೊತೆಗಿದ್ದು, ತಮ್ಮೂರುಗಳಿಗೆ ವಾಪಸ್ ಆಗುತ್ತಾರೆ.
‘ಕುರಿಗಳು ನೂರಿರಲಿ, ಸಾವಿರ ಇರಲಿ, ಯಾವುದಕ್ಕೂ ಕೊರತೆ, ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ದಿನಕ್ಕೆ 10 ರಿಂದ 20 ಕಿ.ಮೀ. ನಡೆಯುತ್ತೇವೆ. ಊರೂರು ಅಲೆದು, ಬೆಟ್ಟ–ಗುಡ್ಡಗಳನ್ನೇರಿ ಕುರಿಗಳನ್ನು ಮೇಯಿಸುತ್ತೇವೆ. ದಾರಿಯುದ್ದಕ್ಕೂ ಕಲ್ಲು, ಮುಳ್ಳು ಕಂಟಿಗಳಿಂದ ಗಾಯವಾಗುತ್ತದೆ. ಅದಕ್ಕೆ ಕಾಲಲ್ಲಿ ಯಾವಾಗಲೂ ‘ಕೊಲ್ಹಾಪುರಿ ಚಪ್ಪಲಿ’ ಇರುತ್ತದೆ. ಅದು ದೀರ್ಘ ಕಾಲ ಬಾಳಿಕೆಗೆ ಬರುತ್ತದೆ ಮತ್ತು ದೇಹದ ಉಷ್ಣತೆಯೂ ಕಾಯ್ದುಕೊಳ್ಳುತ್ತದೆ. ನಮ್ಮ ಹಿರಿಯರು ಇದನ್ನೇ ನಂಬಿದ್ದರು’ ಎಂದು ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಗಳತಗಾದ ಹಾಲಪ್ಪ ಪಿಸುತ್ರೆ ಹೇಳುತ್ತಾರೆ.
ನಡೆಯಲು ಆಯಾಸಪಡದ ಕುರಿಗಾಹಿಗಳು ಇತ್ತೀಚಿನ ದಿನಗಳಲ್ಲಿ ಮೇವು ಮತ್ತು ನೀರಿಗೆ ಪರಿತಪಿಸುವಂತಾಗಿದೆ. ಬಹುತೇಕ ಕಡೆ ಕೆರೆಕುಂಟೆ ಬತ್ತಿದ್ದು, ನೀರಿಗಾಗಿ ರೈತರನ್ನು ಬೇಡಬೇಕಾದ ಪರಿಸ್ಥಿತಿ ಇದೆ. ಕೊಳವೆಬಾವಿ ನೀರು ಸಾಕಾಗುವುದಿಲ್ಲ. ಮೇವು ಇಲ್ಲದೇ ಮೇಯಿಸಲು ಆಗುವುದಿಲ್ಲ. ಹಾಗಂತ, ಈ ಕುಲಕಸಬು ಬಿಡಲು ಅವರು ಸಿದ್ಧರಿಲ್ಲ. ‘ಕುರಿ ಮೇಯಿಸುವುದು, ಸಾಕುವುದು ಬಿಟ್ಟರೆ ನಮಗೆ ಬೇರೆ ಕೆಲಸ ಗೊತ್ತಿಲ್ಲ. ಓದು–ಬರಹ ಕಲಿತಿಲ್ಲ. ಎಷ್ಟು ದಿನ ಆಗುತ್ತೋ, ಅಷ್ಟು ದಿನ ಕುರಿಗಳನ್ನೇ ನಂಬಿ ಬದುಕುತ್ತೀವಿ’ ಎನ್ನುತ್ತಾರೆ ಚಿಕ್ಕೋಡಿಯ ಕುರಿಗಾಹಿಗಳಾದ ಸಿದ್ದಪ್ಪ ದತ್ತವಾಡೆ ಮತ್ತು ಅಜಿತ ಡಂಗೇರಿ
ಆಂಧ್ರಪ್ರದೇಶದ ಸತ್ಯಸಾಯಿ, ಅನಂತರಪುರ ಜಿಲ್ಲೆಯ ಕುರಿಗಾಹಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮತ್ತು ಚಿಂತಾಮಣಿ ತಾಲ್ಲೂಕಿನ ಗಡಿಗ್ರಾಮಗಳಲ್ಲಿ ಮೇವು ಇರುವ ಜಮೀನಿನಲ್ಲಿ ಬೀಡು ಬಿಡುತ್ತಾರೆ. ಕುರಿಗಳಿಗೆ ಮೇವು, ಜಮೀನು ಮಾಲೀಕರಿಗೆ ಕುರಿಗೊಬ್ಬರ ಸಿಗುತ್ತದೆ. ಅದು ತುಂಬಾ ಫಲವತ್ತಾದ ಕಾರಣ ಜಮೀನು ಮಾಲೀಕರು ಹಣ ಇಲ್ಲವೇ ಬೇರೆ ಆಹಾರ ಸಾಮಗ್ರಿ ಕೊಡುತ್ತಾರೆ. ‘ಕುರಿಗಳಿಗೆ ಮೇವು ಸಿಕ್ಕಿತು’ ಎಂಬ ಖುಷಿ ಕುರಿಗಾಹಿಗಿದ್ದರೆ, ‘ಒಳ್ಳೆಯ ಕುರಿಗೊಬ್ಬರದಿಂದ ಕೃಷಿ ಚಟುವಟಿಕೆ ಮಾಡಬಹುದು’ ಎಂಬ ನಿರಾಳಭಾವ ಜಮೀನು ಮಾಲೀಕರದ್ದು.
‘ಎಲ್ಲಾ ಕಡೆ ಜಮೀನು ಮಾಲೀಕರು ಒಂದೇ ರೀತಿ ಇರುವುದಿಲ್ಲ. ಕೆಲ ಕಡೆ ಬೆಳೆ ಕಡೆ ಬರಬೇಡಿ ಎಂದು ತಡೆಯುತ್ತಾರೆ. ಕೆಲವೊಮ್ಮೆ ನಿಂದಿಸಿ, ಅವಮಾನಿಸುತ್ತಾರೆ. ಜಮೀನು ಸಮೀಪದ ಕೆರೆ, ಕುಂಟೆ ಬಳಸಲು ಅವಕಾಶ ಕೊಡಲ್ಲ. ಕೊಳವೆಬಾವಿಯ ನೀರನ್ನೂ ಕೊಡಲು ನಿರಾಕರಿಸುತ್ತಾರೆ. ನೀರು ಸಿಗದ ಕಾರಣ ಎಷ್ಟೋ ಸಲ ನಿತ್ಯದ ಕ್ರಿಯಾಕರ್ಮ, ಸ್ನಾನಕ್ಕೆ ತೊಂದರೆ ಆಗುತ್ತದೆ. ಆದರೆ, ನೂರು–ಸಾವಿರಾರು ಕುರಿಗಳಿಗೆ ಕರೆ ಅಥವಾ ಹೊಂಡ ಬೇಕು. ಅವುಗಳಿಗೆ ನೀರು ಕುಡಿಸುವವರೆಗೆ ನಮಗೆ ಸಮಾಧಾನವಾಗಲ್ಲ’ ಎಂದು ಆಂಧ್ರಪ್ರದೇಶದ ಪ್ರಸಾದ ಮತ್ತು ಮಲ್ಲಿಕಾರ್ಜುನ ಸಂಕಷ್ಟ ತೋಡಿಕೊಳ್ಳುತ್ತಾರೆ.
ರಾಜ್ಯದ ಬಹುತೇಕ ಕಡೆ ಗೋಮಾಳದ ಪ್ರಮಾಣ ಕಡಿಮೆ ಆಗುತ್ತಿರುವುದು ಕುರಿಗಾಹಿಗಳ ಕಸುಬಿಗೆ ದೊಡ್ಡ ಪೆಟ್ಟು ನೀಡಿದೆ. ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಭಾಗದ ಗೊಲ್ಲ ಮತ್ತು ಕುರುಬ ಸಮುದಾಯ ಸೇರಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳು ಕುರಿ ಸಾಕಾಣಿಕೆಯನ್ನೇ ಬದುಕಿಗೆ ನೆಚ್ಚಿಕೊಂಡಿವೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ, ತಳಕು, ಪರಶುರಾಂಪುರ, ತುರುವನೂರು ಹೋಬಳಿಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕುರಿಗಳ ಸಾಕಾಣಿಕೆ ನಡೆಯುತಿತ್ತು.
ಆದರೆ, 2009 ರಿಂದ 2011ರಲ್ಲಿ ನಾಯಕನಹಟ್ಟಿ ಹೋಬಳಿಯ ವರವುಕಾವಲಿನ ಸುಮಾರು 11,000 ಎಕರೆ ಭೂಮಿಯನ್ನು ವಿಜ್ಞಾನ ಸಂಸ್ಥೆಗೆ ಹಾಗೂ 4,500 ಹೆಚ್ಚು ಎಕರೆ ಪ್ರದೇಶವನ್ನು ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ನೀಡಿದ್ದು, ಕುರಿ ಸಾಕಾಣಿಕೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಾವಲು ಪ್ರದೇಶದಲ್ಲಿ ಮೇವಿನ ಸಮಸ್ಯೆ, ಸಾಮಾಜಿಕ ಅರಣ್ಯಕ್ಕೆ ನಿರ್ಬಂಧ, ಕುರಿ ಸಂವರ್ಧನ ಕೇಂದ್ರದ ನಿಷ್ಕ್ರಿಯತೆಯು ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿವೆ.
ಬರ ಪರಿಣಾಮ ಈ ಬಾರಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹಿಂಡು ಕುರಿಗಳೊಂದಿಗೆ ಬೆಳಗಾವಿ, ವಿಜಯಪುರ ಜಿಲ್ಲೆಯ ಬಹುತೇಕ ಕುರಿಗಾಹಿಗಳು ಹೋಗಿಲ್ಲ. ಒಂದೆಡೆ ಹಸಿರು ಮೇವು ಸಿಗುತ್ತಿಲ್ಲ, ಮತ್ತೊಂದೆಡೆ ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಹರಿಯುವ ಭೀಮಾ ನದಿ ಬತ್ತಿದೆ. ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ಪಾತ್ರ ಬರಿದಾಗಿದೆ. ಪ್ರತಿ ವರ್ಷ ಕುರಿಗಾಹಿಗಳು 100ರಿಂದ 500 ಕುರಿಗಳ ಹಿಂಡಿನೊಂದಿಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮೇವು ಇರುವಲ್ಲಿ ಬೀಡುಬಿಡುತ್ತಿದ್ದರು. ಸತತ ಎರಡು ವರ್ಷಗಳಿಂದ ಬರ ಆವರಿಸಿದ್ದು, ಕುರಿಗಾಹಿಗಳು ಪರಿತಪಿಸುತ್ತಿದ್ದಾರೆ.
‘ಮೊದಲೆಲ್ಲ ಯಥೇಚ್ಛವಾಗಿ ಗೋಮಾಳ, ಹುಲ್ಲುಗಾವಲು ಪ್ರದೇಶ ಇರುತ್ತಿದ್ದವು. ಒತ್ತುವರಿಯಿಂದ ಗೋಮಾಳ ಹಂತಹಂತವಾಗಿ ಮಾಯ ಆಗುತ್ತಿವೆ. ವಸತಿ, ಕೈಗಾರಿಕಾ ಯೋಜನೆ, ರಿಯಲ್ ಎಸ್ಟೇಟ್ ಮುಂತಾದ ಕಾರಣಗಳಿಗೆ ಗೋಮಾಳ ಬಳಕೆಯಾಗುತ್ತಿದೆ. ಹೀಗಾಗಿ ಮೇವಿನ ಸಮಸ್ಯೆ ಹೆಚ್ಚಾಗಿದೆ’ ಎಂದು ಕುರಿಗಾಹಿಗಳು ಹೇಳುತ್ತಾರೆ.
ವಲಸೆ ಕುರಿಗಾಹಿಗಳಿಗೆಂದೇ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದಿಂದ ಪರಿಕರ ಕಿಟ್ ಕೊಡಲಾಗುತ್ತದೆ. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಅವರಿಗೆ ವಿತರಿಸಲಾಗುತ್ತದೆ. ಪರಿಕರ ಕಿಟ್‌ನಲ್ಲಿ ಸಂಚಾರಿ ಟೆಂಟ್, ಸೋಲಾರ್ ಟಾರ್ಚ್, ರೇನ್‌ಕೋಟ್ ಮತ್ತು ರಬ್ಬರ್ ಫ್ಲೋರ್ ಮ್ಯಾಟ್ ಇರುತ್ತದೆ. ‘ನಿಗಮದಲ್ಲಿ ನೋಂದಣಿ ಆದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ವಲಸೆ ಕುರಿಗಾರರಿಗೆ ಪರಿಕರ ಕಿಟ್ ನೀಡುತ್ತೇವೆ’ ಎನ್ನುತ್ತಾರೆ ನಿಗಮದ ಉಪನಿರ್ದೇಶಕ ಡಾ. ಸಿ.ಬಿ.ಸುರೇಶ.
ರಾಜ್ಯ ಸರ್ಕಾರದ ‘ಅನುಗ್ರಹ’ ಯೋಜನೆಯಡಿ 1.34 ಲಕ್ಷ ಪ್ರಕರಣಗಳಿಗೆ ಸಂಬಂಧಪಟ್ಟಂತೆ ₹65.34 ಕೋಟಿ ಪರಿಹಾರ ಧನ ಬಿಡುಗಡೆ ಆಗಬೇಕಿತ್ತು. 2021–22ನೇ ಸಾಲಿನಲ್ಲಿ 30,449 ಪ್ರಕರಣಗಳಿಗೆ ಸಂಬಂಧಿಸಿದಂತೆ ₹14.93 ಕೋಟಿ ಮತ್ತು 2022–23ನೇ ಸಾಲಿನಲ್ಲಿ 1.03 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದಂತೆ ₹50.41 ಕೋಟಿ ಪರಿಹಾರ ಧನ ಕುರಿಗಾಹಿಗಳಿಗೆ ಸಿಗಬೇಕಿತ್ತು. ಆದರೆ, ವಿತರಣಾ ಪ್ರಕ್ರಿಯೆ ತುಂಬಾ ನಿಧಾನಗತಿಯಲ್ಲಿ ಸಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ನೈಸರ್ಗಿಕ ವಿಪತ್ತು, ಅಪಘಾತ ಅಥವಾ ಕಾಯಿಲೆಗಳಿಂದ ಕುರಿ–ಮೇಕೆಗಳು ಮೃತಪಟ್ಟರೆ, ಕುರಿಗಾಹಿಗಳಿಗೆ ಕಾಡುವ ಆರ್ಥಿಕ ಸಮಸ್ಯೆ ಕೊಂಚ ನಿವಾರಿಸಲೆಂದೇ ರಾಜ್ಯ ಸರ್ಕಾರವು ‘ಅನುಗ್ರಹ’ ಯೋಜನೆ ಜಾರಿಗೊಳಿಸಿದೆ. 6 ತಿಂಗಳ ಮೇಲ್ಪಟ್ಟ ಕುರಿ ಅಥವಾ ಮೇಕೆ ಸಾವನ್ನಪ್ಪಿದರೆ ₹ 5 ಸಾವಿರ, 3 ಅಥವಾ 6 ತಿಂಗಳ ವಯಸ್ಸಿನ ಒಳಗಿನ ಕುರಿಮರಿ ಅಥವಾ ಮೇಕೆ ಮರಿ ಸತ್ತರೆ, ₹ 3,500 ಪರಿಹಾರ ಸಿಗುತ್ತದೆ. ಅದನ್ನು ಪಡೆಯಲು ಪಶುವೈದ್ಯರಿಂದ ದೃಢೀಕರಣ ಪ್ರಮಾಣಪತ್ರ, ಕುರಿ ಅಥವಾ ಮೇಕೆಗಳ ಮರಣೋತ್ತರ ಪರೀಕ್ಷೆ ವರದಿ ಸೇರಿ ಇತರ ದಾಖಲೆಪತ್ರಗಳು ಇರಬೇಕು.
‘ವಲಸೆ ಕುರಿಗಾಹಿಗಳ ಬದುಕು ಸುಧಾರಣೆಗೆಂದೇ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳಿವೆ. ಕುರಿಗಳಿಗೆ ನಿರಂತರ ಆರ್ಥಿಕ ನೆರವು ಮತ್ತು ಸೌಲಭ್ಯಗಳನ್ನು ಕಲ್ಪಿಸುತ್ತೇವೆ’ ಎನ್ನುತ್ತಾರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಧಾರವಾಡ ಜಿಲ್ಲೆಯ ಉಪನಿರ್ದೇಶಕ ಡಾ. ರವಿ ಎಸ್.ಸಾಲಿಗೌಡರ್.
ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಆಯಾ ಜಿಲ್ಲೆಗಳ ಕುರಿಗಾಹಿಗಳು ಮತ್ತು ಅವರ ಬಳಿಯಿರುವ ಕುರಿ, ಮೇಕೆಗಳು ಮತ್ತು ಇನ್ನಿತರ ಜಾನುವಾರುಗಳ ಬಗ್ಗೆ ಮಾಹಿತಿ ಇರುತ್ತದೆ. ಹೀಗಾಗಿ ಸೌಲಭ್ಯ, ನೆರವು ಒದಗಿಸಲು ಕಷ್ಟವಾಗಲ್ಲ. ಸಾಂಕ್ರಾಮಿಕ ಕಾಯಿಲೆ ಅಥವಾ ದುರ್ಘಟನೆಯಲ್ಲಿ ಕುರಿಗಳು ಸಾವನ್ನಪ್ಪಿದರೂ ಲೆಕ್ಕ ಸಿಗುತ್ತದೆ. ಕುರಿಗಾಹಿಗಳ ಬೇಡಿಕೆ ಅನುಸಾರ ಇಲಾಖೆಯು ಕ್ರಮ ಕೈಗೊಳ್ಳುತ್ತದೆ ಎಂದು ಹೇಳುವರು.
ಆದರೆ ಸರ್ಕಾರದ ನೆರವು ಸಕಾಲಿಕವಾಗಿ ದೊರಕಿದ್ದರೆ ಅನಕ್ಷರಸ್ಥರಾದ ಕುರಿಗಾಹಿಗಳ ಬದುಕು ಹಸನಾಗಬೇಕಿತ್ತು. ವಿವಿಧ ಇಲಾಖೆಗಳು ಎಷ್ಟೋ ನೆರವು ನೀಡುತ್ತಿದ್ದೇವೆ ಎಂದು ಹೇಳಿಕೊಂಡರೂ ಶತಶತಮಾನಗಳಿಂದ ಇವರ ಬದುಕಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸರಳವಲ್ಲದ ಕಾನೂನು ಮತ್ತು ದಾಖಲೆಗಳ ಸಂಕೋಲೆಯಲ್ಲಿ ಯಾವ ನೆರವಿನ ಹಸ್ತವೂ ಈ ಸರಳಜೀವಿಗಳಿಗೆ ಸಿಗುತ್ತಿಲ್ಲ. ನೆರವಿಗಾಗಿ ಇವರು ಇಲಾಖೆಗಳತ್ತು ತಿರುಗುವ ಬದಲು ಇಲಾಖೆಗಳೇ ಅವರತ್ತ ತಿರುಗಿನೋಡಿದರೆ ಕುರಿಗಾಹಿಗಳ ಬದುಕು ಅದೆಷ್ಟೋ ಸುಧಾರಿಸುತ್ತದೆ.
ಊರಿನಿಂದ ಊರಿಗೆ ಹೋಗಿ ಮೇಯುವ ಕುರಿಗಳಿಗೆ ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಇರುತ್ತದೆ. ಅಲ್ಲದೇ ಕುರಿಗಾಹಿಗಳು ಪಶುವೈದ್ಯರಿಂದ ಲಸಿಕೆ ಹಾಕಿಸಿರುತ್ತಾರೆ. ಹೀಗಾಗಿ ಅವುಗಳ ಆರೋಗ್ಯ ಸುಸ್ಥಿತಿಯಲ್ಲಿ ಇರುತ್ತದೆಡಾ. ಯಲ್ಲಪ್ಪ ಇಂಗಳೆಪಶುವೈದ್ಯಾಧಿಕಾರಿ, ಆಳಂದ, ಕಲಬುರಗಿ ಜಿಲ್ಲೆ
ಗೋಮಾಳ ಒತ್ತುವರಿ ತೆರವಿಗೆ ಮತ್ತು ಹುಲ್ಲುಗಾವಲು ಅಭಿವೃದ್ಧಿಗೆ ಮಾಡುವಂತೆ ಸರ್ಕಾರವನ್ನು ಕೋರಿದ್ದೇವೆ. ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಅವಕಾಶ ನೀಡಬೇಕುದೇವೇಂದ್ರ ಮರತೂರ, ಅಧ್ಯಕ್ಷ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
ಕುರಿಗಾಹಿಗಳ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಕುರುಬ ಸಮಾಜ ಸಂಘಟನೆಗಳ ಒಕ್ಕೂಟದಿಂದ 2022ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಕುರಿಗಾಹಿಗಳ ರಕ್ಷಣೆಗೆ ಕಾಯ್ದೆ ರೂಪಿಸುವುದರ ಜೊತೆಗೆ ಕೆಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗಿತ್ತು. ಸರ್ಕಾರದಿಂದ ಈವರೆಗೆ ಭರವಸೆ ಹೊರತುಪಡಿಸಿ ಮತ್ತೇನೂ ಸಿಕ್ಕಿಲ್ಲ ಎಂಬ ಬೇಸರ ಕುರಿಗಾಹಿಗಳದ್ದು
l ಕುರಿಗಳ್ಳರು, ವನ್ಯಜೀವಿಗಳಿಂದ ಪ್ರಾಣಕ್ಕೆ ಅಪಾಯವಿದ್ದು, ಆತ್ಮರಕ್ಷಣೆಗೆ ಬಂದೂಕು ನೀಡಬೇಕು
l ಅಲೆಮಾರಿ ಕುರಿಗಾಹಿಗಳಿಗೆ ಆರ್ಥಿಕ ನೆರವು ನೀಡಲು ಕ್ರಮ ಸರ್ಕಾರ ಕ್ರಮ ಕೈಗೊಳ್ಳಬೇಕು
l ಕೆಎಂಎಫ್ ಹಾಲು ಉತ್ಪನ್ನ ಮಾದರಿಯಲ್ಲೇ ಕುರಿ ಮಾಂಸ ಮಾರಾಟಕ್ಕೆ ಸರ್ಕಾರ ಮುಂದಾಬೇಕು
l ಬಾಕಿಯುಳಿದ ಪರಿಹಾರ ಮೊತ್ತವನ್ನು ಕುರಿಗಾಹಿಗಳಿಗೆ ವಿಳಂಬ ಮಾಡದೇ ಬೇಗ ನೀಡಬೇಕು
l ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳು ಕುರಿಗಾಹಿಗಳ ಸಭೆ ನಡೆಸಿ, ಸಮಸ್ಯೆ ಪರಿಹರಿಸಬೇಕು
l ಕುರಿಗಾಹಿಗಳ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಆದ್ಯತೆ ನೀಡಬೇಕು
l ಅವಘಡ ಸಂಭವಿಸಿದಾಗ, ಕುರಿಗಾಹಿಗಳಿಗೆ ನೆರವಾಗಲು ಶಾಶ್ವತ ಪರಿಹಾರ ನಿಧಿ ಸ್ಥಾಪಿಸಬೇಕು
l ಅನುಗ್ರಹ ಪರಿಹಾರ ಯೋಜನೆ ಮೊತ್ತವನ್ನು ₹ 5 ಸಾವಿರದಿಂದ ₹ 10 ಸಾವಿರಕ್ಕೆ ಏರಿಕೆ ಮಾಡಬೇಕು
l ಕುರಿಗಳ ಆರೋಗ್ಯ ದೃಷ್ಟಿಯಿಂದ ನಿಯಮಿತವಾಗಿ ಲಸಿಕೆ ಪೂರೈಸಲು ಕ್ರಮ ಕೈಗೊಳ್ಳಬೇಕು
ಕುರಿಗಳ ತುಪ್ಪಳದಿಂದ ಸಿದ್ಧವಾಗುವ ಕಂಬಳಿಗಳನ್ನು ಕುರಿಗಾಹಿಗಳು ಅಷ್ಟೇ ಅಲ್ಲ, ಜನಸಾಮಾನ್ಯರು ಬಳಸುತ್ತಾರೆ. ಕೆಲವರು ಹೊದಿಕೆಯಾಗಿ ಬಳಸಿದರೆ, ಇನ್ನೂ ಕೆಲವರು ಮನೆ, ಕಟ್ಟಡದ ಅಂದಚೆಂದಕ್ಕೆ ಮತ್ತು ನೆನಪಿಗಾಗಿ ಇಟ್ಟುಕೊಳ್ಳುತ್ತಾರೆ. ದೇವರ ಗದ್ದುಗೆಗೂ ಕಂಬಳಿ ಸಲ್ಲಿಕೆಯಾಗುತ್ತದೆ. ಎಂಥದ್ದೇ ಥರಗುಟ್ಟುವ ಚಳಿ, ತಂಪಾಗಿಸುವ ಮಳೆಯಿರಲಿ, ಕಂಬಳಿ ಬೆಚ್ಚನೆಯ ಅನುಭೂತಿ ನೀಡುತ್ತದೆ. ಹೊಲ, ಗದ್ದೆ, ತೋಟಗಳಲ್ಲಿ ಕೆಲಸ ಮಾಡುವ ಕೃಷಿಕರು, ಕೂಲಿಕಾರ್ಮಿಕರು, ಮಧ್ಯಮ ವರ್ಗದ ಜನರಿಗೂ ಸೇರಿ ಹಲವರಿಗೆ ಕಂಬಳಿ ಅಚ್ಚುಮೆಚ್ಚು.
ಕುರಿಗಾಹಿಗಳ ಕೈಯಲ್ಲಿರುವ ಉದ್ದ ಕೋಲು ಒಂದರ್ಥದಲ್ಲಿ ಉರುಗೋಲು. ಬೇಗಬೇಗನೇ ಹೆಜ್ಜೆ ಹಾಕಲು, ಗಿಡಮರಗಳಲ್ಲಿನ ಸೊಪ್ಪು ಕೊಯ್ಯಲು, ಕುರಿಗಳನ್ನು ಬೆದರಿಸಲು, ಶಬ್ದ ಮಾಡಿ ಕುರಿಗಳನ್ನು ಕರೆತರಲು, ಕೋಲಿನ ಒಂದು ತುದಿಯಲ್ಲಿ ಪುಟ್ಟ ಮೂಟೆ ಕಟ್ಟಿಕೊಳ್ಳಲು ಹೀಗೆ ಹಲವು ರೀತಿ ಸದ್ಬಳಕೆ ಆಗುತ್ತದೆ. ಹೀಗಾಗಿ ಅವರಿಗೆ ಕಂಬಳಿ ಮತ್ತು ಉದ್ದನೆಯ ಕೋಲು ಆಪ್ತ ಸಂಗಾತಿಗಳು
ಪೂರಕ ಮಾಹಿತಿ: ಹರಿಶಂಕರ್ ಆರ್, ಇಮಾಮ್ ಹುಸೇನ್ ಗೂಡುನವರ, ಜಿ.ಬಿ.ನಾಗರಾಜ, ಸಿದ್ದು ಆರ್.ಜಿ ಹಳ್ಳಿ, ಮನೋಜಕುಮಾರ್ ಗುದ್ದಿ, ರಾಮಮೂರ್ತಿ.ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.