ಕೊಪ್ಪಳ:ಜಿಲ್ಲೆಯಲ್ಲಿ ಅಧಿಕೃತವಾಗಿ 150ಕ್ಕೂ ಹೆಚ್ಚು ಅಕ್ಕಿ ಗಿರಣಿಗಳು ಇವೆ. ಕೆಲ ಅಕ್ಕಿ ಗಿರಣಿ ಮಾಲೀಕರು ಹಲವು ವರ್ಷಗಳಿಂದ ಪಡಿತರ ಅಕ್ಕಿಯನ್ನು ಖರೀದಿಸಿ, ಅವುಗಳನ್ನು ಪಾಲಿಶ್ ಮಾಡಿ ಮಾರುವ ಅಕ್ರಮಕ್ಕೆ ಇಳಿದಿದ್ದಾರೆ. ಜನವರಿ ತಿಂಗಳಲ್ಲಿ ಜಿಲ್ಲಾಧಿಕಾರಿಗಳೇ ತೆರಳಿ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಈ ಅಕ್ರಮದ ಜಾಲಕ್ಕೆ ಪೆಟ್ಟು ಬಿದ್ದಿದೆ.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಕ್ಕಿ ಗಿರಣಿಗಳಲ್ಲಿಯೂ ಅಕ್ರಮ ನಡೆದಿರುವ ಆರೋಪಗಳಿವೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿ ಮತ್ತು ಜನರಿಂದ ಕೆ.ಜಿ.ಗೆ ₹ 10ರ ದರದಲ್ಲಿ ಖರೀದಿಸಿ ಅವುಗಳನ್ನು ಕೆ.ಜಿ.ಗೆ ₹ 35ರಿಂದ ₹ 40ರವರೆಗೆ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಮಾರಲಾಗುತ್ತಿದೆ.
ಭತ್ತದ ಕಣಜಗಳೆಂದೇ ಹೆಸರಾದ ಗಂಗಾವತಿ, ಕಾರಟಗಿ, ಕೊಪ್ಪಳ ತಾಲ್ಲೂಕುಗಳಲ್ಲಿ ಸೋನಾ ಮಸೂರಿ, ಕಾವೇರಿ, ಆರ್‌ಎನ್‌ಆರ್ ತಳಿ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ವಿದೇಶಕ್ಕೂ ರಫ್ತಾಗುತ್ತಿದೆ.
ನಕಲಿ ಬ್ರ್ಯಾಂಡ್: ಈಚೆಗೆಗಂಗಾವತಿಯ ರಾಣಾಪ್ರತಾಪ್ ಸಿಂಗ್ ವೃತ್ತದಲ್ಲಿರುವ ಅಕ್ಕಿ ಗಿರಣಿಯ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಪ್ರಸಿದ್ಧ ಬ್ರ್ಯಾಂಡ್‌ಗಳ ನಕಲಿ ಅಕ್ಕಿ ಪ್ಯಾಕೆಟ್ ತಯಾರಿಸಿ ಮಾರಾಟ ಮತ್ತು ಸಂಗ್ರಹ ಮಾಡಿದ್ದ ಆರೋಪದ ಮೇಲೆ ಗಿರಣಿ ಬಂದ್ ಮಾಡಿಸಿ, 4,911 ಚೀಲ ಅಕ್ಕಿ ವಶಕ್ಕೆ ಪಡೆದಿದ್ದರು.
‘ಪ್ರಸಿದ್ಧ ಬ್ರ್ಯಾಂಡ್‌ಗಳ ಅಕ್ಕಿ ಚೀಲಗಳ ಮಾದರಿಯಲ್ಲೇ ಸ್ಥಳೀಯ ಅಕ್ಕಿಯನ್ನು ತುಂಬಿ ಹೆಚ್ಚಿನ ಬೆಲೆಗೆ ಮಾರುವ ಉದ್ದೇಶದಿಂದ ಹೀಗೆ ಸಂಗ್ರಹಿಸುವ ಜಾಲ ಇದೆ. ನೈಜ ಬ್ರ್ಯಾಂಡ್ ಕಂಪನಿಯವರು ದೂರು ದಾಖಲಿಸಬೇಕು. ಆಗ ಮಾತ್ರ ಅಕ್ರಮ ತಡೆಯಲುಹೆಚ್ಚಿನ ಬಲ ಬರುತ್ತದೆ' ಎನ್ನುತ್ತಾರೆ ಅಧಿಕಾರಿಗಳು.
‘ಅಕ್ರಮ ಮಾಡದೇ ಹೋದರೆ ಅಕ್ಕಿ ಗಿರಣಿ ನಡೆಸುವುದೇ ಕಷ್ಟವಾಗುತ್ತಿದೆ. ಹಾಗೆಂದು ಎಲ್ಲರೂ ಅಕ್ರಮ ಮಾಡುವುದಿಲ್ಲ. ಗುಣಮಟ್ಟ ಕಾಪಾಡಿಕೊಂಡಿರುವ ಉದ್ಯಮಗಳು ಇವೆ. ಕೆಲ ಬೆರಳೆಣಿಕೆಯ ದಂಧೆಕೋರರಿಂದ ಪದೇ ಪದೇ ಇಂತಹ ಘಟನೆಗಳು ನಡೆಯುತ್ತವೆ. ಅಂತಹ ಕೃತ್ಯಗಳಿಗೆ ಸಂಪೂರ್ಣ ತಡೆ ಹಾಕಬೇಕು’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಉದ್ಯಮಿಯೊಬ್ಬರು.
ಅಕ್ಕಿ ಗಿರಣಿಗಳ ಮೂಲಕ ಜಿಲ್ಲೆಯ ವಾಣಿಜ್ಯ ವಹಿವಾಟಿಗೆ ಬಲ ಬಂದಿದೆ. ಆದರೆ, ಅವು ಕೂಡ ಮೂಲಸೌಕರ್ಯ, ಕಾರ್ಮಿಕರ ಕೊರತೆ ಸೇರಿದಂತೆ ನಾನಾರೀತಿಯ ಸಮಸ್ಯೆ ಎದುರಿಸುತ್ತಿವೆ.
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿಯೂ ಅಕ್ಕಿ ಗಿರಣಿಗಳಿವೆ. ಅವೂಗಳ ಸಮಸ್ಯೆಗಳೂ ಭಿನ್ನವಾಗಿಲ್ಲ.
ಅಸಹಾಯಕ ಸ್ಥಿತಿಯಲ್ಲಿ ಎಪಿಎಂಸಿ
ಭತ್ತವನ್ನು ಬೆಳೆದ ರೈತರು ಈ ಮೊದಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮೂಲಕ ಮಾರುತ್ತಿದ್ದರು. ಈಗ ಹೊಸ ಎಪಿಎಂಸಿ ಕಾಯ್ದೆ ಜಾರಿಯ ನಂತರ ಅವರು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು.
ತಮಿಳುನಾಡು ಸೇರಿದಂತೆ ಹೊರರಾಜ್ಯದ ಕೆಲ ವ್ಯಾಪಾರಿಗಳು ಭತ್ತ ಕಟಾವಿನ ನಂತರ ಒಕ್ಕಲು ಮಾಡಿದ ಅಕ್ಕಿಯನ್ನು ಜಮೀನುಗಳಲ್ಲಿಯೇ ಖರೀದಿಸಿ ಲಾರಿ ಮೂಲಕ ತುಂಬಿಕೊಂಡು ಹೋಗುತ್ತಿದ್ದಾರೆ.
‘ಈ ಮೊದಲು ಎಪಿಎಂಸಿ ಮೂಲಕ ಭತ್ತ ಖರೀದಿ, ವಹಿವಾಟು ನಡೆಯುತ್ತಿತ್ತು. ಕೊಪ್ಪಳ ಜಿಲ್ಲೆಯ ಐದು ಎಪಿಎಂಸಿಗಳಲ್ಲಿ ವಾರ್ಷಿಕ ₹ 20 ಕೋಟಿಗೂ ಹೆಚ್ಚು ಲಾಭವಿತ್ತು. ಈಗ ರೈತರು ಎಪಿಎಂಸಿ ಹೊರಗೆ ಮಾರುವುದರಿಂದ ನಮಗೆ ಯಾವುದೇ ರೀತಿಯ ಸೆಸ್ ಬರುತ್ತಿಲ್ಲ’ ಎನ್ನುತ್ತಾರೆ ಕೊಪ್ಪಳ ಎಪಿಎಂಸಿಯ ಅಧಿಕಾರಿಶ್ಯಾಮ್ ಪವಾರ್.
ಅಕ್ಕಿ ಗಿರಣಿಗೆ ಬೇಕಿದೆ ಕಾಯಕಲ್ಪ
ಅಕ್ಕಿ ಗಿರಣಿ ಮಾಲೀಕರಿಗೂ ಅನೇಕ ಸಮಸ್ಯೆಗಳಿವೆ. ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ, ಭತ್ತ ಖರೀದಿ ಮತ್ತು ಅಕ್ಕಿ ಮಾರಾಟಕ್ಕೆ ವ್ಯವಸ್ಥೆ, ಅಗ್ಗದ ದರದಲ್ಲಿ ರೈಲಿನಲ್ಲಿ ಅಕ್ಕಿ ಸಾಗಣೆಗೆ ವ್ಯವಸ್ಥೆ ಆಗಬೇಕಿದೆ. ಕಾರ್ಮಿಕರ ಸಮಸ್ಯೆಯೂ ಇದೆ. ಇದಕ್ಕಾಗಿ ಹೊರರಾಜ್ಯದ ಕಾರ್ಮಿಕರನ್ನೇ ಹೆಚ್ಚಾಗಿ ಅವಲಂಬಿಸಿದ್ದೇವೆ.
ಗಂಗಾವತಿ ಮತ್ತು ಸುತ್ತಲಿನ ಅಕ್ಕಿ ಗಿರಣಿಗಳಿಗೆ ಅವಶ್ಯವಿರುವ ಮೂಲಸೌಕರ್ಯ, ಸಬ್ಸಿಡಿ ನೀಡಬೇಕು. ಇಲ್ಲಿ ಬೆಳೆಯುವ ಭತ್ತವನ್ನು ಮಾರುಕಟ್ಟೆ ದರದಲ್ಲಿ ಖರೀದಿಸಿ ಇಲ್ಲಿನ ಗಿರಣಿಗಳಿಗೆ ನೀಡಿ, ಅವುಗಳನ್ನು ವಿದೇಶಕ್ಕೂ ರಫ್ತು ಮಾಡುವ ಅವಕಾಶ ಕಲ್ಪಿಸಬೇಕು. ರೈತ ಮತ್ತು ಉದ್ದಿಮೆದಾರರಿಗೂ ಹಾನಿ ಆಗದಂತೆ ಯೋಜನೆಗಳನ್ನು ಸರ್ಕಾರ ಘೋಷಿಸಿದರೆ ಒಳ್ಳೆಯದು.
-ಪರಣ್ಣ ಮುನವಳ್ಳಿ, ಗಂಗಾವತಿ ಶಾಸಕ ಮತ್ತು ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ
**
ಭತ್ತ ಬೆಳೆಯುವ ರೈತರಿಗೂ ಹಲವು ಸಮಸ್ಯೆಗಳಿವೆ. ಸುವ್ಯವಸ್ಥಿತ ಮಾರುಕಟ್ಟೆಯಿರದ ಕಾರಣ ತೋಚಿದ ಕಡೆ ಮಾರಬೇಕಿದೆ.ಇದರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚು.
-ದೊಡ್ಡಪ್ಪ ದೇಸಾಯಿ, ಭತ್ತ ಬೆಳೆಗಾರ
*
ಭತ್ತ ಖರೀದಿ ಕೇಂದ್ರ ಆರಂಭಿಸಿದ್ದರೂ ರೈತರು ಭತ್ತವನ್ನು ನೀಡುತ್ತಿಲ್ಲ. ಹೆಚ್ಚಿನ ಬೆಲೆಗೆ ವ್ಯಾಪಾರಿಗಳಿಗೆ ಮಾರುತ್ತಾರೆ. ಇದರಿಂದ ಅಕ್ಕಿ ಗಿರಣಿಗಳಿಗೂ ಸಾಕಷ್ಟು ಭತ್ತ ದೊರೆಯುವುದಿಲ್ಲ. ಅಲ್ಲದೆ ವ್ಯಾಪಾರಿಗಳಿಂದ ರೈತರಿಗೆ ಮೋಸವಾಗುತ್ತದೆ. ಖರೀದಿ ಕೇಂದ್ರಗಳಿಗೆ ಮಾರಿದರೆ, ವಾರದಲ್ಲಿಯೇ ಹಣ ಪಾವತಿ ಮಾಡಲಾಗುತ್ತದೆ.
-ಗಂಗಪ್ಪ, ಸಹಾಯಕ ನಿರ್ದೇಶಕ (ಪ್ರಭಾರ), ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.