ಮಂಗಳೂರು: ಬಿ.ಸಿ. ರೋಡ್‌ನಿಂದ ಪಡೀಲ್‌ವರೆಗಿನ ಹೆದ್ದಾರಿ ಹಾಗೂ ಪಡೀಲ್‌ನಿಂದ ನಂತೂರುವರೆಗಿನ ಬೈಪಾಸ್ ರಸ್ತೆ ಹಾಗೂ ನಂತೂರಿನಿಂದ ಸುರತ್ಕಲ್‌ವರೆಗಿನ 37.2 ಕಿ.ಮೀ ಉದ್ದದ ಹೆದ್ದಾರಿಯನ್ನು ನವಮಂಗಳೂರು ಬಂದರು ಸಂಪರ್ಕ ಯೋಜನೆಯಡಿ ₹ 181.50 ಕೋಟಿ ವೆಚ್ಚದಲ್ಲಿ ಚತುಷ್ಪಥವನ್ನಾಗಿ ಅಭಿವೃದ್ಧಿಪಡಿಸಲಾಗಿತ್ತು.
ಇದರಲ್ಲಿ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ (ಎನ್‌ಎಚ್ 73) 2013ರ ಡಿಸೆಂಬರ್‌ನಿಂದ ಹಾಗೂ ಸುರತ್ಕಲ್ ಟೋಲ್‌ಗೇಟ್‌ನಲ್ಲಿ 2015ರ ಡಿಸೆಂಬರ್‌ನಿಂದ ಸುಂಕ ಸಂಗ್ರಹಿಸಲಾಗುತ್ತಿದೆ. ಎನ್ಎಚ್‌ಎಐ ಮೂಲಗಳ ಪ್ರಕಾರ ಸುರತ್ಕಲ್ ಟೋಲ್‌ಗೇಟ್ ಒಂದರಲ್ಲೇ ನಿತ್ಯ ₹ 12 ಲಕ್ಷ ಹಾಗೂ ಬ್ರಹ್ಮರ ಕೂಟ್ಲು ಟೋಲ್‌ಗೇಟ್‌ನಿಂದ ನಿತ್ಯ₹ 5 ಲಕ್ಷ ಸಂಗ್ರಹವಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ 60 ಕಿ.ಮೀ. ವ್ಯಾಪ್ತಿಯಲ್ಲಿ ಒಂದಕ್ಕಿಂತೆ ಹೆಚ್ಚು ಟೋಲ್ ಕಾರ್ಯನಿರ್ವಹಿಸುವಂತಿಲ್ಲ. ಇದ್ದರೂ ಅವುಗಳನ್ನು ಮೂರು ತಿಂಗಳ ಒಳಗೆ ರದ್ದುಪಡಿಸುತ್ತೇವೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿ 2022ರ ಮೇ ತಿಂಗಳಿನಲ್ಲಿ ಭರವಸೆ ನೀಡಿದ್ದರು.
ಆದರೆ, ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿವರೆಗೆ ಕೇವಲ 42.8 ಕಿ.ಮೀ ದೂರದಲ್ಲಿ ಮೂರು ಟೋಲ್ ಗೇಟ್‌ಗಳಿವೆ (ಹೆಜಮಾಡಿ, ಸುರತ್ಕಲ್ ಹಾಗೂ ತಲಪಾಡಿ). ಒಂದು ಕಾರು 43.8 ಕಿ.ಮೀ ಹಾದು ಹೋಗುವಷ್ಟರಲ್ಲಿ ₹ 180 ಟೋಲ್ ಕಟ್ಟಬೇಕಾಗುತ್ತದೆ. ಸುರತ್ಕಲ್ ಟೋಲ್‌ಗೇಟ್‌ನಿಂದ ಹೆಜಮಾಡಿ ಟೋಲ್‌ಗೇಟ್‌ಗೆ ಕೇವಲ 11 ಕಿ.ಮೀ ದೂರವಿದೆ. ಸುರತ್ಕಲ್ ಟೋಲ್‌ಗೇಟ್‌ನಿಂದ ತಲಪಾಡಿ ಟೋಲ್‌ಗೇಟ್‌ಗೆ ಕೇವಲ 31 ಕಿ.ಮೀ ದೂರ ಇದೆ.
ಈ ಟೋಲ್ ಗೇಟ್ ರದ್ದುಪಡಿಸುವಂತೆ ಒತ್ತಾಯಿಸಿ 2016ರಿಂದ ಹೋರಾಟ ನಡೆಯುತ್ತಿದೆ. ಸ್ಥಳೀಯ ಮುಖಂಡರು ಪಕ್ಷಾತೀತವಾಗಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯನ್ನು ರಚಿಸಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಅ.18ರಂದು ಭಾರಿ ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರು ಸುರತ್ಕಲ್ ಟೋಲ್‌ಗೇಟ್‌ಗೆ ಮುತ್ತಿಗೆಹಾಕಿ ಕೆಲ ಕಾಲ ಟೋಲ್ ಸಂಗ್ರಹವನ್ನು ತಡೆದರು. ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಅ.28ರಿಂದ ಟೋಲ್‌ಗೇಟ್ ಬಳಿ ಅನಿರ್ದಿಷ್ಟಾವಧಿವರೆಗೆ ಅಹೋರಾತ್ರಿ ಧರಣಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.