ಮೈಸೂರು: ರಾಜ್ಯದ ರಾಜಧಾನಿ ಸಮೀಪದ ರಾಮನಗರ ತಾಲ್ಲೂಕು ಕೇಂದ್ರದಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಹಾರೋಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚಿದ್ದು, ಪಾಳು ಬಿದ್ದಿದೆ. ಸ್ಥಳೀಯರು ಅಲ್ಲಿ ಮೇಕೆಗಳನ್ನು ಕಟ್ಟಿ ಹಾಕುತ್ತಿದ್ದಾರೆ!
ಸಾಂಸ್ಕೃತಿಕ ರಾಜಧಾನಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನ ಗ್ರಾಮೀಣ ಭಾಗದ 26 ಸರ್ಕಾರಿ ಶಾಲೆಗಳನ್ನು ಮುಚ್ಚ ಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕೊಂದರಲ್ಲೇ ಐದು ವರ್ಷಗಳಲ್ಲಿ 19 ಶಾಲೆಗಳನ್ನು ಮುಚ್ಚಲಾಗಿದೆ. ಆ ಪೈಕಿ ಕೆಲವು ಶಾಲೆಗಳಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರಿದ್ದರು. ಈಗ ವಿದ್ಯಾರ್ಥಿಗಳಿಲ್ಲ. ಬೈಲಹೊಂಗಲದಲ್ಲಿ 12 ಕೊಠಡಿಗಳಿದ್ದರೂ, ಉತ್ತಮ ಶಿಕ್ಷಕರಿಲ್ಲವೆಂಬ ಕಾರಣಕ್ಕೆ ಮಕ್ಕಳನ್ನು ಪೋಷಕರು ಸೇರಿಸಿಲ್ಲ.
ಮಲೆನಾಡಿನ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಉಂಡೇದಾಸರಹಳ್ಳಿ ಸರ್ಕಾರಿ ಶಾಲೆಯಲ್ಲಿ ಸುಸಜ್ಜಿತ ಕಟ್ಟಡ, ಶಿಕ್ಷಕಿ, ಅಡುಗೆ ಸಿಬ್ಬಂದಿ ಇದ್ದರೂ ವಿದ್ಯಾರ್ಥಿ ಗಳಿಲ್ಲದೆ ಮುಚ್ಚಲಾಗಿದೆ. ಅಲ್ಲಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ಖಾಸಗಿ ಶಾಲೆಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮಕ್ಕಳಿದ್ದಾರೆ.
ಹೀಗೆ, ರಾಜ್ಯದಲ್ಲಿ ಒಟ್ಟು 287 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಿವೆ. ಅವುಗಳ ಪೈಕಿ, ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕು ಮೋರಟಗಿಯಲ್ಲಿರುವ ಶಾಲೆ ಶತಮಾನ ಕಂಡಿದ್ದರೂ ವಿದ್ಯಾರ್ಥಿಗಳಿಲ್ಲ. ಕನ್ನಡ ಮಾಧ್ಯಮವಷ್ಟೇ ಅಲ್ಲದೆ, ಉರ್ದು, ತಮಿಳು, ತೆಲುಗು, ಮರಾಠಿ ಮಾಧ್ಯಮದ ಶಾಲೆಗಳನ್ನೂ ಮುಚ್ಚಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಅಂಥ ಹಲವು ಶಾಲೆಗಳಿವೆ. ಅದಷ್ಟೇ ಅಲ್ಲದೆ, ರಾಜ್ಯದಲ್ಲಿ ಮೂರು ವರ್ಷದಿಂದ ಖಾಸಗಿ ಶಾಲೆಗಳ ದಾಖಲಾತಿ ಸಂಖ್ಯೆ ಏರಿಕೆ ಕಂಡಿದ್ದರೆ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ. ಇದು, ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ದುಸ್ಥಿತಿಗೆ ಕನ್ನಡಿ ಹಿಡಿದಿದೆ.
ಸರ್ಕಾರಿ ಶಾಲೆಗೆ ಮಕ್ಕಳು ಬರಲಿ ಎಂದು ಬಿಸಿಯೂಟ, ಸಮವಸ್ತ್ರ, ಶೂ–ಸಾಕ್ಸ್, ಬ್ಯಾಗ್, ಹಾಲು ಮೊದಲಾದವುಗಳನ್ನು ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳುತ್ತದೆ. ‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂದು ಪ್ರತಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುಂಚೆಯೇ ಶಿಕ್ಷಕರು ಮನೆಯಿಂದ ಮನೆಗೆ ಅಲೆದಾಡುತ್ತಾ, ‘ದಾಖಲಾತಿ ಆಂದೋಲನ’ ನಡೆಸು ತ್ತಲೇ ಇದ್ದಾರೆ. ಫಲಿತಾಂಶ ಮಾತ್ರ ನೂರಾರು ಶಾಲೆಗಳಲ್ಲಿ ‘ಶೂನ್ಯ ದಾಖಲಾತಿ’.
ಈ ಶೈಕ್ಷಣಿಕ ವರ್ಷದಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳಿದ್ದಾರೆ.
ಇಂಥ ದುರ್ಗತಿ ಶಾಲೆಗಳಿಗೆ ಈ ವರ್ಷ ದಿಢೀರನೇ ಎದುರಾಗಿಲ್ಲ. ಮೂರ್ನಾಲ್ಕು ವರ್ಷಗಳಲ್ಲಿ ಈ ಬದಲಾವಣೆಯಾಗಿದೆ. ಒಂದರಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ ಕಂಡು ಬರುವ ಮುಂಚೆ ಎರಡು ಮತ್ತು ಮೂರನೇ ತರಗತಿಯಲ್ಲಿ ಮಕ್ಕಳಿಲ್ಲದ ಪರಿಸ್ಥಿತಿ ಎದುರಾದ ವರ್ಷವೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಚ್ಚೆತ್ತುಕೊಳ್ಳಲಿಲ್ಲವೇಕೆ ಎಂಬ ಪ್ರಶ್ನೆಯೂ ಮೂಡುತ್ತದೆ.
ಕಾರಣಗಳು ಹಲವು: ‘ಸರ್ಕಾರಿ ಶಾಲೆಗಳ ಈ ದುಸ್ಥಿತಿಗೆ ನೀವು ಗುರುತಿಸಿರುವ ಕಾರಣಗಳೇನು’ ಎಂದು ಕೇಳಿದರೆ, ಮೈಸೂರು ಹಾಗೂ ಬೆಳಗಾವಿ ಭಾಗದ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ‘ಪೋಷಕರ ವಲಸೆಯಿಂದ ಮಕ್ಕಳು ನಗರ, ಪಟ್ಟಣ ಸೇರಿದ್ದಾರೆ. ಜೊತೆಗೆ ಕೆಲವು ಹಳ್ಳಿಗಳಲ್ಲಿ ಒಂದನೇ ತರಗತಿಗೆ ಸೇರುವ ವಯಸ್ಸಿನ ಮಕ್ಕಳೇ ಇಲ್ಲ’ ಎಂಬ ಕಾರಣವನ್ನು ನೀಡುತ್ತಾರೆ.
ಆದರೆ, ‘ಅಂಥ ವಲಸೆ ಹೋದ ಕುಟುಂಬಗಳೆಷ್ಟು’ ಎಂಬ ಬಗ್ಗೆ ಅವರ ಬಳಿ ನಿಖರ ಅಂಕಿ ಅಂಶಗಳಿಲ್ಲ. ಆ ಬಗ್ಗೆ ಸಮೀಕ್ಷೆಯಾಗಲೀ, ಪರಿಸ್ಥಿತಿಯ ಕುರಿತು ಸ್ಥಳೀಯ ಆಡಳಿತ ಸಂಸ್ಥೆಗಳೊಂದಿಗೆ ಚರ್ಚೆಗಳಾಗಲೀ ನಡೆದಿಲ್ಲ.
ಶಾಲಾ ಶಿಕ್ಷಣ ವ್ಯವಸ್ಥೆಯ ಭಾಗೀದಾರರಾದ ಪೋಷಕರು, ಶಿಕ್ಷಕರು, ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳ ನಡುವೆ ಶೈಕ್ಷಣಿಕ ಸಂವಾದ ಸ್ಥಗಿತಗೊಂಡಿದೆ ಎಂಬುದಕ್ಕೂ ಇದು ಸಾಕ್ಷಿಯಂತೆ ಕಾಣುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಮಾತ್ರ ಇವರೆಲ್ಲರ ಬಾಂಧವ್ಯ ಗಟ್ಟಿಯಾಗಿದೆ ಎಂಬುದು, ಖಾಸಗಿ ಶಾಲೆಗಳಲ್ಲಿ ತುಂಬಿತುಳುಕುವ ಮಕ್ಕಳನ್ನು ನೋಡಿದರೆ ಗೊತ್ತಾಗುತ್ತದೆ.
‘ಮಕ್ಕಳಿಲ್ಲವೆಂದು ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಅಷ್ಟೇ. ಶಿಕ್ಷಕರನ್ನು, ಸಿಬ್ಬಂದಿಯನ್ನು ಹತ್ತಿರದ ಶಾಲೆಗೆ ನಿಯೋಜಿಸಲಾಗಿದೆ. ಮಕ್ಕಳು ಬಂದರೆ ಖಂಡಿತಾ ಮತ್ತೆ ಶಾಲೆ ಆರಂಭಿಸಲಾಗುವುದು. ನಿಯಮಗಳ ಪ್ರಕಾರ, ಈ ಶಾಲೆಗಳನ್ನು 3 ವರ್ಷ ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ ಪೋಷಕರು ಮುಂದೆ ಬಂದರೆ ಶಾಲೆಗೆ ಮಕ್ಕಳನ್ನು ದಾಖಲಿಸುವ ಪ್ರಯತ್ನ ನಡೆಯುತ್ತದೆ’ ಎಂಬುದು ಅಧಿಕಾರಿಗಳ ನಿರುಮ್ಮಳ ನುಡಿ.
‘ಸರ್ಕಾರಿ ಶಾಲೆಗೆ ಮಕ್ಕಳು ಬೇಕಾಗಿದ್ದಾರೆ’ ಎಂದು ಅವರು ಕಾಯುತ್ತಿದ್ದಾರೆ. ಶಾಲೆ ಮುಚ್ಚಿರುವ ಯಾವ ಊರಿಗೇ ಹೋದರೂ ಇದೇ ಸನ್ನಿವೇಶ. ತಲೆಮಾರುಗಳಿಗೆ ಪಾಠ ಹೇಳಿದ ಶಾಲೆಗಳು ಮಾತ್ರ ಒಂಟಿಯಾಗಿ ನಿಂತಿವೆ. ಪಾಳು ಬಿದ್ದಿವೆ.
ಅಧಿಕಾರಿಗಳ ಈ ಮಾತುಗಳಿಗಿಂತ ಭಿನ್ನವಾಗಿ ಪೋಷಕರ ವಾದ ಗಮನ ಸೆಳೆಯುತ್ತದೆ. ‘ಸೌಕರ್ಯವಿರಲಿ, ಇಲ್ಲದಿರಲಿ, ನಮಗೆ ಸರ್ಕಾರಿ ಶಾಲೆ ಬೇಡ’ ಎನ್ನುವ ಹೊಸ ಕಾಲಮಾನದ ಸುಶಿಕ್ಷಿತ ಪೋಷಕರ ನಡುವೆ, ‘ಸೌಕರ್ಯವಿದ್ದಿದ್ದರೆ ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸುತ್ತಿದ್ದೆವು’ ಎನ್ನುವ ಜಾಣ ಪೋಷಕರೂ ಕಾಣುತ್ತಾರೆ. ತಾವು ಓದುವಾಗ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಶಾಲೆಗಳು ಈಗ ಕಣ್ಣುಮುಚ್ಚುತ್ತಿರುವ ಬಗ್ಗೆ ಹಲವರಲ್ಲಿ ದಟ್ಟ ವಿಷಾದವೂ ಇದೆ. ಅಸಹಾಯಕತೆಯೂ ಇದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಕೇಂದ್ರದಿಂದ 8 ಕಿಮೀ ದೂರದಲ್ಲಿರುವ ಕಿರಿಸೊಡ್ಲು ಗ್ರಾಮದಲ್ಲಿ, ‘ಕಟ್ಟಡವಿದ್ದರೂ ಇಬ್ಬರು ಶಿಕ್ಷಕರ ನಡುವಿನ ಸಮನ್ವಯದ ಕೊರತೆ, ಅಶಿಸ್ತಿನ ಕಾರಣಕ್ಕೆ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದೆವು’ ಎನ್ನುತ್ತಾರೆ ಪೋಷಕರು. ‘ನಮ್ಮ ದೂರುಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಲಿಲ್ಲ’ ಎಂದೂ ಆರೋಪಿಸುತ್ತಾರೆ.
‘2–3 ವರ್ಷದಿಂದ ಮೂರ್ನಾಲ್ಕು ಮಕ್ಕಳಷ್ಟೇ ಇದ್ದರು. ಈ ವರ್ಷ ಯಾರೂ ಇಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಬಂದು ‘ಶಾಲೆ ಉಳಿಸಿಕೊಳ್ಳಿ’ ಎಂದರು. ‘ನಾವು ಹೇಗೆ ಉಳಿಸಿಕೊಳ್ಳುವುದು’ ಎಂಬುದು ಅವರ ಪ್ರಶ್ನೆ.
ಇಂಗ್ಲಿಷ್ ಮಾಧ್ಯಮ ವ್ಯಾಮೋಹ: ಶಾಲೆ ಮುಚ್ಚಿರುವ ಊರುಗಳಲ್ಲಿ ಇಂಗ್ಲಿಷ್ ಮಾಧ್ಯಮ ಅನಿವಾರ್ಯವೆಂಬ ಒತ್ತಾಸೆ, ಸೌಕರ್ಯಗಳ ಕೊರತೆಯೇ ಮುಂದೆ ಬರುತ್ತವೆ. ಆಯಾ ಶಾಲೆಗಳಲ್ಲಿ ಕೊರತೆಗಳನ್ನು ನೀಗಿಸುವಲ್ಲಿ ಕೈಗೊಂಡ ಕ್ರಮಗಳೇನು ಎಂಬ ಬಗ್ಗೆಯೂ ಇಲಾಖೆಯಲ್ಲಿ ನಿಖರ ಮಾಹಿತಿಗಳಿಲ್ಲ.
ಆರಂಭದಲ್ಲೇ ಉಲ್ಲೇಖವಾದ ರಾಮನಗರದ್ದು ಏಕಶಿಕ್ಷಕ ಶಾಲೆ. ‘ನಮ್ಮೂರ ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದರು. ಅವರಿಗೋ ನೂರೆಂಟು ಜವಾಬ್ದಾರಿ. ಈಗಿನ ಖಾಸಗಿ ಶಾಲೆಯಲ್ಲಿ ವಿಷಯವಾರು ಶಿಕ್ಷಕರು, ಪಿ.ಟಿ ಮೇಷ್ಟ್ರು ಇದ್ದಾರೆ. ಸೌಕರ್ಯವಿದೆ. ಪ್ರತಿ ಮಗುವಿನ ಕಲಿಕಾ ಪ್ರಗತಿ ಪರಿಶೀಲನೆಗೆ ಪ್ರತ್ಯೇಕ ವ್ಯವಸ್ಥೆ ಇದೆ. ನಮ್ಮೂರ ಶಾಲೆಯಲ್ಲೇ ಇವೆಲ್ಲ ಇದ್ದಿದ್ದರೆ, ನಾವ್ಯಾಕೆ ಡೊನೇಶನ್ ಕೊಟ್ಟು ಪ್ರೈವೇಟ್ ಶಾಲೆಗೆ ಸೇರಿಸುತ್ತಿದ್ದೆವು’ –ಪೋಷಕರ ಈ ಪ್ರಶ್ನೆ, ಸರ್ಕಾರಿ ಶಾಲೆಯ ‘ನಲಿ–ಕಲಿ’ ಪರಿಕಲ್ಪನೆಯನ್ನೇ ಅಣಕ ಮಾಡುವಂತಿದೆ.
‘ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕೆಂದು ನಿರ್ಧರಿಸುವುದು ಪೋಷಕರ ಹಕ್ಕು. ಅದನ್ನು ಕಸಿದುಕೊಳ್ಳಲಾಗದು’ ಎಂದೂ ಕೆಲವು ಅಧಿಕಾರಿಗಳು ಹೇಳುತ್ತಾರೆ. ಆದರೆ, ‘ಆ ಹಕ್ಕು ಚಲಾವಣೆಗೆ ಕಾರಣವಾದ ಪ್ರಮುಖ ಅಂಶಗಳೆಲ್ಲವೂ ನೇರವಾಗಿ ತಮ್ಮ ಇಲಾಖೆಗೇ ಸೇರುತ್ತವೆ’ ಎಂದು ಹೇಳುವುದನ್ನು ಮರೆಯುತ್ತಾರೆ.
ಮಕ್ಕಳು ಬಾರದಿರಲು ಆಯಾ ಪ್ರದೇಶಕ್ಕೆ ವಿಶಿಷ್ಟವಾದ ಕಾರಣಗಳೂ ಇರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಅಂಥ ಕಾರಣಗಳನ್ನು ಕೆಲವೆಡೆ ಪಟ್ಟಿ ಮಾಡಿದ್ದರೂ ಪರಿಹಾರ ಹುಡುಕುವ ಪ್ರಯತ್ನಗಳೂ ನಡೆದಿಲ್ಲ.
ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಕೆಲವು ಶಾಲೆಗಳನ್ನು ಗಮನಿಸಿದರೆ ಈ ಅಂಶ
ಸ್ಪಷ್ಟವಾಗುತ್ತದೆ. ‘ಕೆಲವು ಕಾಡಿನ ನಡುವೆ ಇವೆ. ಮಳೆಗಾಲದಲ್ಲಿ ಶಾಲೆಗೆ ಹೋಗಲು ದಾರಿಯೇ ಇಲ್ಲ. ಕೆಲವು ತೋಟದ ಶಾಲೆಗಳಿದ್ದು, ಅಲ್ಲಿಗೆ ಬಸ್ ಸೌಕರ್ಯವಿಲ್ಲ. ಅದೇ ಕಾರಣಕ್ಕೆ ಆ ಶಾಲೆಗಳಿಗೆ ಮಕ್ಕಳು ದಾಖಲಾಗಿಲ್ಲ’ ಎನ್ನುತ್ತಾರೆ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ್ ಹಂಚಾಟೆ. ವಿವಿಧ ಇಲಾಖೆಗಳ ಸಮನ್ವಯ ಸಾಧಿಸಿ ಈ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿದರೆ, ನಿರಾಶೆ ಎದುರಾಗುತ್ತದೆ.
ಪರಿಹಾರವೇನು?: ಶೂನ್ಯ ದಾಖಲಾತಿಯ ಸಮಸ್ಯೆಗೆ ಪರಿಹಾರವೇನು? ಎಂದರೆ, ‘ಹಳ್ಳಿಗಳ ಬಲವರ್ಧನೆ’ ಎನ್ನುತ್ತಾರೆ ನಂಜನಗೂಡು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ. ‘ಪೋಷಕರು ಹಳ್ಳಿಗಳನ್ನು ಬಿಟ್ಟು ಹೋಗಬಾರದು. ಇಲ್ಲಿಯೇ ಅವರ ಬದುಕು ಹಸನಾಗಿರಬೇಕು. ಆಗ ಅವರು ಇಲ್ಲಿಯೇ ಉಳಿಯುತ್ತಾರೆ. ಮಕ್ಕಳೂ ಹಳ್ಳಿಯ ಶಾಲೆಯಲ್ಲೇ ಓದುತ್ತಾರೆ’ ಎಂಬುದು ಅವರ ಪ್ರತಿಪಾದನೆ.
‘ಪ್ರಾಥಮಿಕ ಹಂತದ ಕಲಿಯುವ ವ್ಯವಸ್ಥೆ, ಅಂದರೆ, ಸರ್ಕಾರಿ ಶಾಲೆಗಳ ಉಳಿವು, ಹಳ್ಳಿಯ ಬಲವರ್ಧನೆಯನ್ನು ಅವಲಂಬಿಸಿದೆ’ ಎಂಬ ಅವರ ಮಾತು, ‘ವಲಸೆಯನ್ನು ಆಧರಿಸಿದ ಬದುಕು ತಪ್ಪಬೇಕು. ಹಳ್ಳಿಯ ಶಾಲೆಯಲ್ಲೇ ಹೊಸ ಕಾಲ ಬಯಸುವ ಎಲ್ಲ ಕಲಿಕೆಗಳಿಗೂ ಅವಕಾಶವಿರಬೇಕು’ ಎಂದು ಪ್ರತಿಪಾದಿಸುತ್ತದೆ.
‘ಸದ್ಯ, ಆ ಕಲಿಕೆಯ ಮಾದರಿಗಳನ್ನು ಖಾಸಗಿ ಶಾಲೆಗಳು ಕೊಡುತ್ತಿವೆ’ ಎಂಬ ಜನಪ್ರಿಯ ಹೇಳಿಕೆಯನ್ನು ವಿಶ್ಲೇಷಿಸಿದರೆ, ಈ ಅಭಿಪ್ರಾಯ ಪೂರ್ಣ ಸತ್ಯವಲ್ಲ ಎನಿಸುತ್ತದೆ. ಏಕೆಂದರೆ, ಬಹುತೇಕ ಖಾಸಗಿ ಶಾಲೆಗಳಲ್ಲಿ ತರಬೇತಿ ಪಡೆಯದ, ಅನುಭವವಿಲ್ಲದ ಶಿಕ್ಷಕರೇ ಹೆಚ್ಚು. ಚೆನ್ನಾಗಿರುವಂತೆ ಕಂಡರೂ, ಅಲ್ಲಿಯೂ ಹುಳುಕುಗಳಿವೆ ಎಂಬ ದೂರು, ಅಸಮಾಧಾನ ಪೋಷಕರಲ್ಲಿವೆ ಎನ್ನುವುದು ಹಲವರನ್ನು ಮಾತನಾಡಿಸಿದಾಗ ಅರಿವಾಗುತ್ತದೆ.
‘ಸೌಲಭ್ಯಗಳ ಸದ್ಬಳಕೆ’ ಕುರಿತು ಮಾತನಾಡುವ ಸರ್ಕಾರವು ಅಗತ್ಯವಿದ್ದ ಕಡೆ ಮುಚ್ಚಿದ ಶಾಲೆಗಳನ್ನು ತೆರೆಯುವ ದಾರಿಗಳ ಕಡೆಗೆ ಹೆಚ್ಚು ಗಮನ ಕೊಡಬೇಕಾಗಿದೆ. ಶೂನ್ಯ ದಾಖಲಾತಿಯುಳ್ಳ ಶಾಲೆಯ ಪರಿಸ್ಥಿತಿಯನ್ನು ಪ್ರತ್ಯೇಕವಾಗಿಯೇ ಅಧ್ಯಯನ ಮಾಡಿ, ಸಮಸ್ಯೆಗಳನ್ನು ಕಂಡು ಹಿಡಿದು ಪರಿಹರಿಸುವ ಪ್ರಯತ್ನವೂ ಶುರುವಾಗಬೇಕಾಗಿದೆ. ಅದಕ್ಕಾಗಿ ಶಾಲಾ ಶಿಕ್ಷಣ ವ್ಯವಸ್ಥೆಯ ಎಲ್ಲ ಭಾಗೀದಾರರನ್ನೂ ಒಳಗು ಮಾಡಿಕೊಳ್ಳುವುದು ಅತ್ಯವಶ್ಯ. ಇಲ್ಲದಿದ್ದರೆ, ಸರ್ಕಾರಿ ಶಾಲೆಗಳೇ ಕಾಣೆ ಯಾಗುವ ಪರಿಸ್ಥಿತಿಗೆ ದಾರಿಗಳು ತೆರೆದುಕೊಳ್ಳುತ್ತವೆ.
ಕಡ್ಡಾಯ ಶಿಕ್ಷಣ ಹಕ್ಕು(RTE) ಜಾರಿಗೆ ತಂದ ಬಳಿಕ ಖಾಸಗಿ ಶಾಲೆಗಳಿಗೆ ಶೇ 25 ರಷ್ಟು ವಿದ್ಯಾರ್ಥಿಗಳನ್ನು ಸರ್ಕಾರವೇ ಆಯ್ಕೆ ಮಾಡಿ ಶುಲ್ಕ ಪಾವತಿಸಿ ಪ್ರವೇಶಾತಿ ನೀಡುತ್ತಿತ್ತು. ಪರಿಣಾಮ, ಸರ್ಕಾರಿ ಶಾಲೆಗೆ ಬರುತ್ತಿದ್ದವರು ಉಚಿತವಾಗಿ ಖಾಸಗಿ ಶಾಲೆಗೆ ಹೋಗತೊಡಗಿದರು.
ಅದಕ್ಕೂ ಮೊದಲು ಖಾಸಗಿ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಯಿಂದ ಐದಾರು ಸಾವಿರ ರೂಪಾಯಿ ಶುಲ್ಕ ಪಡೆಯಲಾಗುತ್ತಿತ್ತು. ಆರ್‌ಟಿಇ ವಿದ್ಯಾರ್ಥಿಯ ಶುಲ್ಕ ಮಾತ್ರ ₹14 ಸಾವಿರ ಮೀರುತ್ತಿತ್ತು. ಅದನ್ನು ಸರ್ಕಾರ ವರ್ಷಕೊಮ್ಮೆ ಪಾವತಿಸುತ್ತಿತ್ತು. ಖಾಸಗಿ ಶಾಲೆಗಳ ಆರ್ಥಿಕ ಪ್ರಗತಿಗೂ ಅದು ದಾರಿ ಮಾಡಿತು. ಪಕ್ಕದಲ್ಲೇ ಸರ್ಕಾರಿ ಶಾಲೆಯಿದ್ದರೂ ಖಾಸಗಿ ಶಾಲೆಗೆ ಸರ್ಕಾರವೇ ಹಣ ನೀಡಿ ಕಳುಹಿಸುವಂತಾಯಿತು. ಈಗ ಆರ್‌ಟಿಇಗೆ ಮಕ್ಕಳ ಆಯ್ಕೆ ವಿಧಾನ ಬದಲಾಗಿದ್ದು, ಆಯ್ಕೆಯಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುವ ಕನಕಪುರ ತಾಲ್ಲೂಕಿನಲ್ಲಿ 13, ಮಾಗಡಿ 9, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ತಲಾ 6 ಶಾಲೆಗಳಿಗೆ ಬೀಗ ಬಿದ್ದಿದೆ. ತಲಾ 3 ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳೂ ಬಂದ್ ಆಗಿವೆ. ಕೆಲವು ವರ್ಷಗಳಿಂದ ಬೆರಳೆಣಿಕೆಯ ದಾಖಲಾತಿ ಕಂಡು, ಕಡೆಗೆ ಶೂನ್ಯ ತಲುಪಿವೆ.
ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದಂಥ ಮೂಲಸೌಕರ್ಯಗಳ ಕೊರತೆಯ ಸಮಸ್ಯೆ ಇಂದಿಗೂ ನೀಗಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲೇ ಹೈಕೋರ್ಟ್ ಈ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿತ್ತು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ, ಕಳೆದ ಅಕ್ಟೋಬರ್‌ನಲ್ಲೂ ಈ ಅಸಮಾಧಾನ ಮತ್ತೆ ಪ್ರಕಟವಾಗಿತ್ತು.
ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಅಗತ್ಯವಿರುವಷ್ಟು ಕೊಠಡಿ ನಿರ್ಮಾಣವೂ ನಡೆದಿಲ್ಲ. ಹಿಂದಿನ ಬಿಜೆಪಿ ಸರ್ಕಾರ ‘ವಿವೇಕ’ ಯೋಜನೆ ಅಡಿ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿತ್ತು. ನಂತರ, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಪಕ್ಕಕ್ಕೆ ಇಟ್ಟಿದ್ದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ನಿಧಿಯಡಿ ಕೊಠಡಿಗಳನ್ನು ನಿರ್ಮಿಸಲು ಪ್ರಸ್ತಾವ ಸಿದ್ಧಪಡಿಸಿದೆ. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಶಿಕ್ಷಕರ ‘ಅನ್ಯ ವೃತ್ತಿ–ಪ್ರವೃತ್ತಿ ಪ್ರೀತಿ’
‘ಸರ್ಕಾರಿ ಶಾಲೆ ಶಿಕ್ಷಕರು ತರಬೇತಿಯುಳ್ಳ, ಪ್ರತಿಭಾವಂತರಾದರೂ ಅವರಲ್ಲಿನ ಬದ್ಧತೆಯ ಕೊರತೆಯೂ ಆ ಶಾಲೆಗಳ ದುರ್ಗತಿಗೆ ಕಾರಣ’ ಎಂಬ ಆರೋಪಗಳೂ ಇವೆ.
‘ಗ್ರಾಮೀಣ ಭಾಗದ ಹಲವು ಶಿಕ್ಷಕರು ಕೃಷಿ, ತೋಟ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಗರ, ಪಟ್ಟಣ ಪ್ರದೇಶದಲ್ಲಿರುವವರಿಗೆ ಹಣಕಾಸು ವ್ಯವಹಾರ, ರಿಯಲ್ ಎಸ್ಟೇಟ್‌ನಂತ ಲಾಭದಾಯಕ ಕೆಲಸಗಳ ಮೇಲೆ ಕಣ್ಣು. ಇನ್ನೂ ಹಲವರು ತರಗತಿಗಳಿಗಿಂತಲೂ ವೃತ್ತಿ ಸಂಬಂಧಿತ ಸಂಘಟನೆಗಳಲ್ಲಿ ಹೆಚ್ಚು ಸಕ್ರಿಯರು. ಕೆಲವರಿಗೆ ರಾಜಕಾರಣಿಗಳ ನಂಟು. ಇಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅಧಿಕಾರಿಗಳಿಗೂ ಹಿಂಜರಿಕೆ. ಇಂಥ ಸನ್ನಿವೇಶದಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿ ಸ್ನೇಹಿ ಆಗುವುದಾದರೂ ಹೇಗೆ’ ಎಂಬುದು ಪೋಷಕರೊಬ್ಬರ ಪ್ರಶ್ನೆ.
‘ಕೆಲವು ಶಿಕ್ಷಕರು, ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಶಾಮೀಲಾಗಿರುವುದು ಕೂಡ ಸರ್ಕಾರಿ ಶಾಲೆಯ ದುಸ್ಥಿತಿಗೆ ಕಾರಣ. ಕೆಲವರು ಬೇನಾಮಿ ಹೆಸರುಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದೂ ಉಂಟು’ ಎಂಬ ಆರೋಪವೂ ಇದೆ.
ಬಂಟ್ವಾಳ ತಾಲ್ಲೂಕಿನ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ ಹೆಚ್ಚಿದೆ. 1ರಿಂದ 5ನೇ ತರಗತಿವರೆಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕ್ರಮವಾಗಿ 274 ಹಾಗೂ 504 ಮಕ್ಕಳಿದ್ದಾರೆ.
ಈ ಶಾಲೆಗೆ ಮಕ್ಕಳನ್ನು ದಾಖಲಿಸಲು ಪೋಷಕರು ಸಾಲುಗಟ್ಟಿ ನಿಲ್ಲುತ್ತಾರೆ. ರಾಜಕಾರಣಿಗಳು ಸೇರಿದಂತೆ ಪ್ರಭಾವಿಗಳ ಶಿಫಾರಸನ್ನೂ ತರುತ್ತಾರೆ. ಆ ಮಟ್ಟಿಗೆ ಶಾಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಖ್ಯಾತವಾಗಿದೆ. ಮಕ್ಕಳನ್ನು ಶಾಲೆಗೆ ಕರೆತರಲು ಎಸ್‌ಡಿಎಂಸಿ ಬಸ್ ವ್ಯವಸ್ಥೆಯನ್ನು ಮಾಡಿರುವುದು ವಿಶೇಷ.
ಸಮಾಧಾನಕರ ಸಂಗತಿ ಎಂದರೆ, ರಾಜ್ಯದ ಬಾಗಲಕೋಟೆ, ಬಳ್ಳಾರಿ, ಗದಗ ಮತ್ತು ಹಾವೇರಿ ಜಿಲ್ಲೆಯಲ್ಲಿ ಯಾವ ಶಾಲೆಯೂ ಶೂನ್ಯ ದಾಖಲಾತಿಯಿಂದ ಮುಚ್ಚಿಲ್ಲ.
ಸರ್ಕಾರಿ ಶಾಲೆಗಳಿಂದ ಹೊರಗುಳಿಯುವ ಮಕ್ಕಳು ಹಾಗೂ ಶೂನ್ಯ ದಾಖಲಾತಿ ಶಾಲೆಗಳಿರುವ ಪ್ರದೇಶದ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಲ್ಲ ಕಡೆಯೂ ಅಂತಹ ಸಮಸ್ಯೆ ಇಲ್ಲ. ಮಲೆನಾಡು ಸೇರಿದಂತೆ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಭಾಗಗಳಲ್ಲಿ ಇರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಕ್ರಮ ಕೈಗೊಳ್ಳಲಾಗುವುದು. ಕೆಪಿಎಸ್ ಶಾಲೆಗಳ ಆರಂಭದ ನಂತರ ಆ ಭಾಗಗಳಲ್ಲಿ ಮಕ್ಕಳ ದಾಖಲಾತಿಯಲ್ಲಿ ಏರಿಕೆಯಾಗಿದೆ. ಹಾಗಾಗಿ, ಕೆಪಿಎಸ್ ಸಂಖ್ಯೆಇನ್ನಷ್ಟು ಹೆಚ್ಚಿಸಲಾಗುವುದು. ಶಾಲಾ ಸೌಕರ್ಯಗಳ ಹೆಚ್ಚಳ ಮಾಡಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಲೆಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.-ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ
ನಾವು ಕಲಿಯುತ್ತಿದ್ದಾಗ ಮಕ್ಕಳಿದ್ದರು. ಈಗ ಸ್ವಂತ ಕಟ್ಟಡವಿದ್ದರೂ ಪಾಳು ಬಿದ್ದಿದೆ. ಪಾಲಕರ ವಿಶ್ವಾಸ ಗಳಿಸುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ.-ಈರಪ್ಪ ಕಾಡೇಶನವರ, ಹಳೆಯ ವಿದ್ಯಾರ್ಥಿ, ಸರ್ಕಾರಿ ಪ್ರಾಥಮಿಕ ಶಾಲೆ ನಂ–2, ಬೈಲಹೊಂಗಲ
ನಾವು ಇದೇ ಸರ್ಕಾರಿ ಶಾಲೆಯಲ್ಲಿ ಕಲಿತೆವು. ಈಗ ಮಕ್ಕಳಿಗೆ ಶ್ರದ್ದೆಯಿಂದ ಕಲಿಸುವ ಪ್ರಯತ್ನ ಕಡಿಮೆಯಾಗಿದೆ. ಶಾಲೆ ಬಿಕೋ ಎನ್ನುತ್ತಿದೆ.-ರಮೇಶ್, ಕಿರಿಸೊಡ್ಲು, ಹುಣಸೂರು ತಾಲ್ಲೂಕು
ಶಾಲೆಗಳನ್ನು ಮುಚ್ಚಬಾರದೆಂಬ ಉದ್ದೇಶದಿಂದ ಪಂಚಾಯಿತಿ ಮಟ್ಟದಲ್ಲಿ ಹೈಟೆಕ್ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದೇವೆ.-ಎಚ್.ಎ. ಇಕ್ಬಾಲ್ ಹುಸೇನ್, ಶಾಸಕ, ರಾಮನಗರ
ಪೂರಕ ಮಾಹಿತಿ: ಚಂದ್ರಹಾಸ ಹಿರೇಮಳಲಿ, ಓದೇಶ ಸಕಲೇಶಪುರ, ವಿಕ್ರಂ ಕಾಂತಿಕೆರೆ, ಸಂತೋಷ ಈ. ಚಿನಗುಡಿ, ಮನೋಜ್‌ಕುಮಾರ್ ಗುದ್ದಿ, ಬಸವರಾಜ ಸಂಪಳ್ಳಿ, ಜಿ.ಎಚ್.ವೆಂಕಟೇಶ್, ಜಿ.ಬಿ.ನಾಗರಾಜ್, ಅನಿತಾ ಎಚ್., ಶಿವಪ್ರಸಾದ್ ರೈ. ಎಚ್.ಎಸ್.ಸಚ್ಚಿತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.