ಬೆಂಗಳೂರು: ಗ್ರಾಹಕರ ಮನಸ್ಸನ್ನು ತಂಪು ಮಾಡುವ ಒಂದೇ ಒಂದು ಎಳನೀರು ರೈತನ ವರಮಾನದ ದಿಕ್ಕನ್ನು ನಿರ್ಧರಿಸುತ್ತದೆ. ಅರಳಿ ಮರದ ಕೆಳಗೆ ಕೊಬ್ಬರಿಯ ಬೆಲೆ ನಿಗದಿಯಾಗುತ್ತದೆ. ಬೆಳೆಗಾರರು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಕೆ.ಜಿ.ಗಟ್ಟಲೆ ರೇಷ್ಮೆಗೂಡುಗಳು ಮಂಗಮಾಯ. ದಲ್ಲಾಳಿಗಳಿಂದಾಗಿ ರೈತರ ಪಾಲಿಗೆ ಬ್ಯಾಡಗಿ ಮೆಣಸಿನಕಾಯಿ ಮತ್ತಷ್ಟು ಖಾರವಾಗಿದೆ!
ಕೃಷಿ ಮಾರುಕಟ್ಟೆಗಳಲ್ಲಿ ದಲ್ಲಾಳಿ ಗಳು ನಿರ್ಮಿಸಿರುವ ‘ಚಕ್ರವ್ಯೂಹ’ದಲ್ಲಿ ಅನ್ನದಾತರು ನಲುಗುತ್ತಿರುವ ಪರಿ ಇದು. ಅಧಿಕಾರಿಗಳ ಕೃಪಾಕಟಾಕ್ಷದಿಂದ ರಾಜಾರೋಷವಾಗಿ ರೈತರ ಸುಲಿಗೆ ನಡೆಯುತ್ತಿದೆ. ರಾಜ್ಯ ಸರ್ಕಾರ ಜಾರಿಗೆ ತಂದ ‘ಇ–ಮಂಡಿ’ಯಂತಹ ವ್ಯವಸ್ಥೆಗಳೂ ದಲ್ಲಾಳಿಗಳ ಕಬಂಧಬಾಹುವಿನಿಂದ ರೈತರನ್ನು ಮುಕ್ತಗೊಳಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:ಮೆಣಸಿನಕಾಯಿಗೂ 3 ಪರ್ಸೆಂಟ್ ಕಮಿಷನ್ !
ಹೆಸರಿಗೆ ತಿಪಟೂರು ಏಷ್ಯಾದ ಅತೀ ದೊಡ್ಡ ಕೊಬ್ಬರಿ ಮಾರುಕಟ್ಟೆ. ಆದರೆ, ಅಲ್ಲಿ ಕೊಬ್ಬರಿ ಬೆಲೆ ನಿಗದಿಯಾಗುವುದು ಸಣ್ಣ ಅರಳಿ ಮರದ ಕೆಳಗೆ. ಅದು ಸಹ ಮಧ್ಯಾಹ್ನದ ಬಿಸಿಲಿನಲ್ಲಿ. ರವಾನೆದಾರರ ಕಡೆಯ ವ್ಯಕ್ತಿ ಏಜೆಂಟರ ಕಿವಿಯಲ್ಲಿ ಪಿಸುಗುಡುವ ಮಾತೇ ಅಲ್ಲಿ ವೇದವಾಕ್ಯ. ಮಂಡ್ಯದ ಮದ್ದೂರು ಮಾರುಕಟ್ಟೆಯಲ್ಲಿ ಸಾವಿರಾರು ಎಳನೀರು ಗಳ ಬೆಲೆಯನ್ನು ಒಂದೇ ಒಂದು ಎಳನೀರು ನಿರ್ಧರಿಸುತ್ತದೆ. ಅದು ಸಹ ಗೇಟ್ ಪಕ್ಕದಲ್ಲಿ. ಮಧ್ಯವರ್ತಿ ಕೊಟ್ಟ ಚೀಟಿಯೇ ಫೈನಲ್. ಬೆಳೆಗಾರರು ಅದೇ ದರಕ್ಕೆ ಎಳನೀರು ಮಾರಾಟ ಮಾಡದೆ ಅನ್ಯ ಮಾರ್ಗವೇ ಇಲ್ಲ.
ಬ್ಯಾಡಗಿಯಲ್ಲಿ ರೈತರ ಮೆಣಸಿನ ಕಾಯಿಗೆ ಇ– ಟೆಂಡರಿಂಗ್ ಮೂಲಕ ದಲ್ಲಾಳಿಗಳು ದರ ಘೋಷಿಸುತ್ತಾರೆ. ರೈತರು ಲಾರಿ ಬಾಡಿಗೆ, ಹಮಾಲಿ ಸೇರಿದಂತೆ ವಿವಿಧ ಖರ್ಚಿಗಾಗಿ ದಲ್ಲಾಳಿ ಗಳಿಂದ ‘ಮುಂಗಡ’ ಪಡೆದಿ ರುತ್ತಾರೆ. ದಲ್ಲಾಳಿಗಳು ಶೇ 3ರಷ್ಟು ಕಮಿಷನ್ ಹಾಗೂ ಮುಂಗಡ ಮುರಿದುಕೊಂಡೇ ರೈತರಿಗೆ ಹಣ ಪಾವತಿಸುತ್ತಾರೆ.
ಇದನ್ನೂ ಓದಿ:ಕಳಪೆ ಅಡಿಕೆ ಮಿಶ್ರಣ: ಅಧಿಕಾರಿಗಳ ಮೌನ
ಯಾಮಾರಿಸುವ ಪೋಡಿ ಗ್ಯಾಂಗ್: ಬೆಂಗಳೂರಿನಲ್ಲಿ ತಮ್ಮ ಉತ್ಪನ್ನಕ್ಕೆ ‘ರಾಜ ಬೆಲೆ’ ಸಿಗುತ್ತದೆ ಎಂಬ ಕಾರಣಕ್ಕೆ ರೈತರು ನೂರಾರು ಕಿ.ಮೀ. ದೂರದಿಂದ ಬರುತ್ತಾರೆ. ಸಾಮಾನ್ಯವಾಗಿ ಸರಕು ಬೆಂಗಳೂರಿಗೆ ತಲುಪುವಾಗ ಮಧ್ಯರಾತ್ರಿ ಅಥವಾ ಮುಂಜಾನೆ ಆಗಿರುತ್ತದೆ. ಆದಷ್ಟು ಬೇಗ ಸರಕು ಮಾರಾಟ ಮಾಡಿ ಗರಿಗರಿ ನೋಟುಗಳನ್ನು ಎಣಿಸುವ ಉಮೇದಿನಲ್ಲಿ ಅನ್ನದಾತರು ಇರುತ್ತಾರೆ. ಇಂತಹ ವೇಳೆಯಲ್ಲಿ ಎಪಿಎಂಸಿಯ ಗೇಟ್‌ನ ಹತ್ತಿರದಲ್ಲೇ ‘ಪೋಡಿ ಗ್ಯಾಂಗ್’ನವರು ಪ್ರತ್ಯಕ್ಷರಾಗುತ್ತಾರೆ. ಮಂಡಿಯ ವ್ಯಾಪಾರಿಗಳ ಬಗ್ಗೆ ಕಥೆಗಳನ್ನು ಹೇಳಿ ರೈತರು ಗಲಿಬಿಲಿಗೊ ಳ್ಳುವಂತೆ ಮಾಡುತ್ತಾರೆ. ತಮ್ಮ ನೆಚ್ಚಿನ ವ್ಯಾಪಾರಿಯಲ್ಲೇ ಸರಕು ಬಿಕರಿಯಾ ಗುವಂತೆ ನೋಡಿಕೊಳ್ಳುತ್ತಾರೆ. ರೈತರು ನೂರು ರೂಪಾಯಿಯ ಸರಕನ್ನು ಐವತ್ತು ರೂಪಾಯಿ ಕೊಟ್ಟು ಹೋಗುತ್ತಾರೆ. ಇದಕ್ಕೆ ಪ್ರತಿಯಾಗಿ ಗ್ಯಾಂಗ್‌ನ ಸದಸ್ಯರಿಗೆ ವ್ಯಾಪಾರಿಗಳು ₹500ರಿಂದ ₹1,500 ವರೆಗೆ ಭಕ್ಷೀಸು ನೀಡುತ್ತಾರೆ. ಈ ದಲ್ಲಾಳಿಗಳು ಮಾತಿನ ಜಾಣ್ಮೆಯಿಂದಲೇ ನಿತ್ಯ ಸಾವಿರಾರು ರೂಪಾಯಿ ಜೇಬಿಗಿಳಿಸಿಕೊಳ್ಳುತ್ತಾರೆ.
ಇದನ್ನೂ ಓದಿ:ಬೆಂಬಲ ಬೆಲೆಯಡಿ ಲಾಭದ ಕೊಯ್ಲು
ರೈತರ ‘ಮೂಡ್’ ನೋಡಿಕೊಂಡು ವ್ಯವಹರಿಸುವ ದಲ್ಲಾಳಿಗಳ ಇನ್ನೊಂದು ಗುಂಪು ಇದೆ. ಈ ದಲ್ಲಾಳಿಗಳು ಮಂಡಿಗೆ ನಿಯಮಿತವಾಗಿ ಬರುವ ರೈತರ ಸುದ್ದಿಗೆ ಹೋಗುವುದಿಲ್ಲ. ಹೊಸಬರು ಬಂದ ಕೂಡಲೇ ಅವರು ಮುಗಿಬೀಳುತ್ತಾರೆ. ಅವರ ‘ಇಷ್ಟ’ಗಳನ್ನು ಅರಿತು ‘ಸಮಾರಾಧನೆ’ ಏರ್ಪಡಿಸುತ್ತಾರೆ. ಅಮಲಿನಲ್ಲಿ ತೇಲುವ ಹವ್ಯಾಸ ಇದೆ ಎಂದು ಗೊತ್ತಾದರೆ ಅದಕ್ಕೂ ವ್ಯವಸ್ಥೆ ಮಾಡುತ್ತಾರೆ. ಮಾಂಸಪ್ರಿಯರಾಗಿದ್ದರೆ ಆ ಸೇವೆಯೂ ಸಿಗುತ್ತದೆ. ರೈತರು ಖುಷಿಯ ಪರಾಕಾಷ್ಠೆಗೆ ತಲುಪಿದಾಗ ದಲ್ಲಾಳಿಗಳು ವ್ಯವಹಾರ ಕುದುರಿಸುತ್ತಾರೆ. ದಲ್ಲಾಳಿಯ ಮಾತೇ ಅಂತಿಮ. ರೈತರು ಗೋಣು ಆಡಿಸಬೇಕಷ್ಟೇ. ಕೊನೆಗೆ ಚಿಕ್ಕಾಸಿಗೆ ತಮ್ಮ ಕೃಷಿ ಉತ್ಪನ್ನ ಮಾರಿ ಹೋಗುತ್ತಾರೆ.
ಮುಂಗಡ ಕೊಟ್ಟು ಕಿತ್ತುಕೊಳ್ಳುವರು
ಅಡಿಕೆಯಲ್ಲಿ ವರ್ಷಕ್ಕೆ ಒಮ್ಮೆ ಫಸಲು ಕೈಗೆ ಬರುತ್ತದೆ. ಗೊಬ್ಬರ, ಔಷಧ ಸಿಂಪಡಣೆ ಮತ್ತಿತರ ಕಾರ್ಯಗಳಿಗೆ ರೈತರು ವ್ಯಾಪಾರಿಗಳಿಂದ ‘ಮುಂಗಡ’ ಹಣ ಪಡೆಯುತ್ತಾರೆ. ಈ ಸಾಲಕ್ಕೆ ಬಡ್ಡಿಯೇನೂ ಇರುವುದಿಲ್ಲ. ಸರಕನ್ನು ತಮಗೇ ಕೊಡಬೇಕು ಎಂಬ ಷರತ್ತನ್ನು ವ್ಯಾಪಾರಿಗಳು ವಿಧಿಸುತ್ತಾರೆ. ಅಡಿಕೆ ಕೊಯಿಲು ಆರಂಭವಾಗುತ್ತಿದ್ದಂತೆ ವ್ಯಾಪಾರಿಗಳು ರಗಳೆ ಶುರು ಮಾಡುತ್ತಾರೆ. ಕೃಷಿಕ ಗಡಿಬಿಡಿಯಲ್ಲಿ ಅಡಿಕೆ ಮಾರಬೇಕಾದ ಸ್ಥಿತಿ ನಿರ್ಮಾಣ ಮಾಡುತ್ತಾರೆ. ‘ಕೈಬರಹದ ವ್ಯಾಪಾರಿ’ಗಳ ಕರಾಮತ್ತು ಇನ್ನೊಂದು ಬಗೆಯದು.
ಲಂಚದಿಂದ ಹೈರಾಣಾದರು
ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾಟ ಒಂದೆಡೆಯಾದರೆ, ಅಲ್ಲಿನ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಸುಲಿಗೆ ಇನ್ನೊಂದು ಬಗೆಯದು. ಮಾರುಕಟ್ಟೆಗೆ ಪ್ರವೇಶಿಸಲು ಗೇಟ್ ಪಾಸ್ ನೀಡಲು ಅಲ್ಲಿನ ಸಿಬ್ಬಂದಿ ಸತಾಯಿಸುತ್ತಾರೆ. ‘ದಕ್ಷಿಣೆ’ ಕೊಟ್ಟು ಸಂತೃಪ್ತಿಪಡಿಸಿದರಷ್ಟೇ ಸರಾಗವಾಗಿ ಪ್ರವೇಶ ಸಿಗುತ್ತದೆ. ₹50ರಿಂದ ₹100ವರೆಗೆ ವಸೂಲಿ ಮಾಡುತ್ತಾರೆ. ಆ ವಸೂಲಿಯೇ ಹತ್ತಿಪ್ಪತ್ತು ಸಾವಿರ ರೂಪಾಯಿ ದಾಟುತ್ತದೆ. ಈ ಮೊತ್ತವನ್ನು ನೌಕರರು ಶ್ರೇಣಿಗೆ ಅನುಗುಣವಾಗಿ ಹಂಚಿಕೊಳ್ಳುತ್ತಾರೆ. ಮೇಲಧಿಕಾರಿಗಳಿಗೆ ಲಂಚ ಕೊಟ್ಟು ಗೇಟು ಕಾಯುವ ಕೆಲಸ ಹಾಕಿಸಿಕೊಳ್ಳುವ ಸಿಬ್ಬಂದಿಯೂ ಇದ್ದಾರೆ.
ಇವನ್ನೂ ಓದಿ
ಒಳಒಪ್ಪಂದದ ಏಟು: ಹೊರಗೇ ವಹಿವಾಟು
ಕೊಬ್ಬರಿ: ಅರಳಿ ಮರದ ಕೆಳಗೆ ಪಿಸುಗುಡುವ ಬೆಲೆ!
ಹೊರ ಭಾಗದ ರೈತರೇ ಇಲ್ಲಿ ಟಾರ್ಗೆಟ್!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.