ADVERTISEMENT

ಒಳನೋಟ| ಅಕ್ರಮ ಗಣಿಗಾರಿಕೆಗೂ ರಾಜಕಾರಣಕ್ಕೆ ನಿಕಟ ನಂಟು

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 18:22 IST
Last Updated 24 ಜುಲೈ 2021, 18:22 IST
   

ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೂ, ರಾಜಕಾರಣಕ್ಕೂ ನಿಕಟ ನಂಟು. ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಮಾಜಿ ಸಚಿವರಾದ ಜಿ. ಜನಾರ್ದನ ರೆಡ್ಡಿ, ಸಚಿವ ಆನಂದ್‌ ಸಿಂಗ್‌, ಶಾಸಕ ಬಿ. ನಾಗೇಂದ್ರ, ಮಾಜಿ ಶಾಸಕ ಸುರೇಶ್‌ ಬಾಬು ಸೇರಿದಂತೆ ಹಲವರು ಬಂಧನಕ್ಕೊಳಗಾಗಿದ್ದರು.

ಮಾಜಿ ಸಚಿವ ಸಂತೋಷ್‌ ಲಾಡ್, ಮಾಜಿ ಶಾಸಕ ಅನಿಲ್‌ ಲಾಡ್, ಬಳ್ಳಾರಿಯ ರೆಡ್ಡಿ ಸಹೋದರರು, ಸಚಿವ ವಿ. ಸೋಮಣ್ಣ ಕುಟುಂಬ ಸೇರಿದಂತೆ ಮಾಜಿ ಸಚಿವರು, ಶಾಸಕರು ಸೇರಿದಂತೆ ಹಲವು ರಾಜಕಾರಣಿಗಳ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣಗಳಿವೆ.

ಕಲ್ಲು ಗಣಿಗಾರಿಕೆಯಲ್ಲೂ ರಾಜಕಾರಣಿಗಳ ದೊಡ್ಡ ದಂಡೇ ಇದೆ. ಬೃಹತ್‌ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಸಿರುವುದಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ‘ಕನಕಪುರದ ಬಂಡೆ’ ಎಂಬ ಅಡ್ಡ ಹೆಸರು ಅಂಟಿಕೊಂಡಿದೆ. ಸಂಸದ ಡಿ.ಕೆ.ಸುರೇಶ್‌, ಮಾಲೂರು ಶಾಸಕ ಕೆ.ವೈ.ನಂಜೇಗೌಡ ವಿರುದ್ಧವೂ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಆರೋಪಗಳಿವೆ.

ADVERTISEMENT

ಮಾಜಿ ಪ್ರಧಾನಿ ಕುಟುಂಬದ ಬೆಂಬಲ!

ಮೇಲುಕೋಟೆ ವನ್ಯಜೀವಿ ವಲಯದಲ್ಲಿ ಜೆಡಿಎಸ್‌ನ ಮುಖಂಡ ಎಚ್‌.ಟಿ. ಮಂಜು ನಡೆಸುತ್ತಿರುವ ಕ್ರಷರ್‌ ಸ್ಥಗಿತಗೊಳಿಸಲು ಮಂಡ್ಯ ಜಿಲ್ಲಾಡಳಿತ ಕಳೆದ ವರ್ಷ ಆದೇಶ ಹೊರಡಿಸಿತ್ತು. ಅದನ್ನು ವಿರೋಧಿಸಿ, ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮುಂದಾಗಿದ್ದರು.

ಈಗ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಸಂಸದೆ ಸುಮಲತಾ ಅಂಬರೀಷ್‌ ಆಗ್ರಹಿಸುತ್ತಿದ್ದಾರೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರು ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ಬೆಂಬಲಕ್ಕೆ ನಿಂತಿರುವುದು ಚರ್ಚೆಗೆ ಎಡೆಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.