ADVERTISEMENT

ಗ್ರಾಮಗಳ ಕಸ ವಿಲೇವಾರಿ ರಾಜ್ಯಕ್ಕೇ ಮಾದರಿ

ಚಂದ್ರಹಾಸ ಹಿರೇಮಳಲಿ
Published 23 ಜನವರಿ 2021, 19:47 IST
Last Updated 23 ಜನವರಿ 2021, 19:47 IST
ಹೊಳಲೂರಿನ ಸ್ವಚ್ಛ ಸಂಕೀರ್ಣ ಘಟಕ
ಹೊಳಲೂರಿನ ಸ್ವಚ್ಛ ಸಂಕೀರ್ಣ ಘಟಕ   

ಶಿವಮೊಗ್ಗ: ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕಸ ನಿರ್ವಹಣೆ ಪದ್ಧತಿ ರಾಜ್ಯಕ್ಕೇ ಮಾದರಿಯಾಗಿದೆ. ಎಲ್ಲ 269 ಪಂಚಾಯಿತಿಗಳಲ್ಲೂ ಸ್ವಚ್ಛ ಸಂಕೀರ್ಣ ಘಟಕ ಸ್ಥಾಪಿಸುವ ಮೂಲಕ ಘನತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ನಾಂದಿ ಹಾಡಿದೆ.

ಈಗಾಗಲೇ 50 ಪಂಚಾಯಿತಿಗಳಲ್ಲಿ ತಲಾ ₹ 20 ಲಕ್ಷ ವೆಚ್ಚದಲ್ಲಿ ಸ್ವಚ್ಛ ಸಂಕೀರ್ಣ ಘಟಕ ಸ್ಥಾಪಿಸಲಾಗಿದ್ದು, ವಾಹನ, ಕಸ ಸಂಗ್ರಹ ಪರಿಕರ ಖರೀದಿಸಲಾಗಿದೆ. ಉಳಿದ ಪಂಚಾಯಿತಿಗಳಲ್ಲಿ ಹಳೆಯ ಕಟ್ಟಡ, ತಾತ್ಕಾಲಿಕ ಶೆಡ್‌ಗಳಲ್ಲಿ ಕಸ ಸಂಗ್ರಹ, ವಿಂಗಡಣೆ ಕಾರ್ಯ ನಡೆಯುತ್ತಿದೆ. 10 ಪಂಚಾಯಿತಿಗಳಲ್ಲಿ ಎರೆಹುಳು ಗೊಬ್ಬರ ತಯಾರಿಸಲಾಗುತ್ತಿದೆ.

ಪ್ರತಿ ಪಂಚಾಯಿತಿಯಲ್ಲೂ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ವಾಹನದ ಜತೆ ಚಾಲಕ ಸೇರಿ ನಾಲ್ವರು ಸಿಬ್ಬಂದಿ ನಿಯೋಜಿಸಲಾಗಿದೆ. ಸಂಗ್ರಹಿಸಿದ ಕಸದಲ್ಲಿ ಪ್ಲಾಸ್ಟಿಕ್‌ ವಸ್ತುಗಳನ್ನು ಪ್ರತ್ಯೇಕಿಸಿ, ತಿಂಗಳಿಗೊಮ್ಮೆ ಮರುಬಳಕೆ ಸಾಮಗ್ರಿ ತಯಾರಿಕೆ ಉದ್ದೇಶಕ್ಕೆ ಮಾರಾಟ ಮಾಡಲಾಗುತ್ತಿದೆ. ಕೊಳೆಯುವ ಕಸವನ್ನು ಗೊಬ್ಬರಕ್ಕೆ ಬಳಸಲಾಗುತ್ತಿದೆ. ಅದರಿಂದ ಬರುವ ಹಣದಲ್ಲೇ ಸಿಬ್ಬಂದಿ ವೇತನ, ಇತರ ಖರ್ಚು ನಿಭಾಯಿಸಲಾಗುತ್ತಿದೆ.

ADVERTISEMENT

ಘಟಕಗಳ ಮುಂದಿನ ಕೈತೋಟ, ಬಳಸಿ ಬಿಸಾಡಿದ ಟೈರ್‌ ಮತ್ತಿತರ ಸಾಮಗ್ರಿಗಳಿಂದ ತಯಾರಿಸಲಾದ ಕುರ್ಚಿಗಳು ಮೊದಲ ನೋಟಕ್ಕೆ ಆಕರ್ಷಿಸುತ್ತವೆ. ಅನುಪಯುಕ್ತ ವಸ್ತುಗಳಿಂದ ವಿವಿಧ ರೂಪಕಗಳನ್ನು ತಯಾರಿಸಲಾಗುತ್ತಿದೆ.

ಕಸ ಸಂಗ್ರಹಕ್ಕೆ 27 ಎಕರೆ:ಶಿವಮೊಗ್ಗ ನಗರಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯವೂ 130 ಟನ್‌ ಕಸ ಸಂಗ್ರಹವಾಗುತ್ತದೆ. ಅದರಲ್ಲಿ ಸುಮಾರು 10 ಟನ್‌ ಗೊಬ್ಬರ ದೊರೆಯುತ್ತಿದೆ. ಉಳಿದ ತ್ಯಾಜ್ಯವನ್ನು ಅನುಪಿನಕಟ್ಟೆ ಬಳಿಯ 27.15 ಎಕರೆಯಲ್ಲಿ ಗುಂಡಿಗಳಿಗೆ ಸುರಿಯಲಾಗುತ್ತಿದೆ.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಘನತ್ಯಾಜ್ಯ ಬಳಸಿ ಗೊಬ್ಬರ ತಯಾರಿಸುವ ಘಟಕವನ್ನು 2015ರಲ್ಲಿ ಪಾಲಿಕೆಗೆ ನೀಡಿತ್ತು. ₹ 27 ಲಕ್ಷ ಮೌಲ್ಯದ ಮ್ಯಾಗ್ನೆಟಿಕ್ ಶಕ್ತಿಯ ಘಟಕವನ್ನು ಗೋಪಾಲಗೌಡ ಬಡಾವಣೆಯಲ್ಲಿ ಸ್ಥಾಪಿಸಲಾಗಿದೆ. ನಿತ್ಯವೂ 3ರಿಂದ 4 ಟನ್ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತಿದೆ.

ನಿತ್ಯ 450 ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದು, ಎಲ್ಲರಿಗೂ ಪಾಲಿಕೆ ಉಪಾಹಾರದ ವ್ಯವಸ್ಥೆ ಮಾಡುತ್ತಿದೆ. ರಾತ್ರಿ ಸ್ವಚ್ಛತಾ ಕಾರ್ಯಕ್ಕೂ ಅವಕಾಶ ಕಲ್ಪಿಸಲಾಗಿದೆ.

ಕಸವೊಂದು, ಕಸಬು ಹಲವು...

ಕೊಪ್ಪಳ: ತಾಲ್ಲೂಕಿನ ಹುಲಿಗಿ-ಹೊಸಳ್ಳಿ-ಹಿಟ್ನಾಳ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕ ಕಸ ಸಂಗ್ರಹ, ನಿರ್ವಹಣೆಗೆ ರಾಷ್ಟ್ರಮಟ್ಟದಲ್ಲಿಯೇ ಹೆಸರುವಾಸಿಯಾಗಿದೆ.

ಇಲ್ಲಿ ಕಸ ವಿಲೇವಾರಿ ಮಾತ್ರವಲ್ಲ ಗೋಶಾಲೆ, ನರ್ಸರಿ,ಎರೆಹುಳು ಗೊಬ್ಬರ, ಇಟ್ಟಿಗೆ, ಟಾರ್‌ ತಯಾರಿಕೆಯಂತಹ ಹಲವಾರು ಉಪಯುಕ್ತ ಕೆಲಸಗಳು ಏಕಕಾಲಕ್ಕೆ ನಡೆಯುತ್ತಿವೆ. ಎರಡು ಎಕರೆಯಲ್ಲಿರುವ ಘಟಕಕ್ಕೆ ಸುತ್ತಲಿನ ಏಳು ಹಳ್ಳಿಗಳ ಕಸ ತರಲಾಗುತ್ತದೆ. 150ಕ್ಕೂ ಹೆಚ್ಚು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಾರೆ.

ತ್ಯಾಜ್ಯ ಘಟಕದಲ್ಲಿ ಈಚೆಗೆ ಗೋಶಾಲೆ ಆರಂಭಿಸಲಾಗಿದ್ದು, ವಿವಿಧ ತಳಿಯ ಹಸುಗಳನ್ನು ಸಾಕಲಾಗಿದೆ. ಗಂಜಲು, ಸಗಣಿಯಿಂದ ಗೊಬ್ಬರ ತಯಾರಿಸಲಾಗುತ್ತಿದೆ.ನರ್ಸ‌ರಿ ಸಹ ಆರಂಭಿಸಲಾಗಿದ್ದು, ಅಲಂಕಾರಿಕ ಸಸ್ಯ, ಹೂವಿನ ಗಿಡ, ಔಷಧೀಯ ಸಸ್ಯಗಳ ಪೋಷಣೆ ಮತ್ತು ಮಾರಾಟದ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಮಣ್ಣು, ತರಕಾರಿಯಂತಹ ಹಸಿ ಕಸ ಬೇರ್ಪಡಿಸಿ ಎರೆಗೊಬ್ಬರ ಘಟಕಕ್ಕೆ ರವಾನಿಸಲಾಗುತ್ತದೆ. ಘನ ತ್ಯಾಜ್ಯವನ್ನು ಪುಡಿ ಮಾಡಿ ರಸ್ತೆಗೆ ಡಾಂಬರ್ ರೀತಿ ಬಳಸುವ ಪ್ಯಾಕೆಟ್ ಮಾಡಲಾಗುತ್ತದೆ. ಗಾಜು ಮುಂತಾದವನ್ನು ಮರುಬಳಕೆಗೆ ಕಳಿಸಲಾಗುತ್ತಿದೆ. ಅಂದಾಜು ₹ 3 ಕೋಟಿ ವೆಚ್ಚದಲ್ಲಿ ಆರಂಭವಾಗಿರುವ ಈ ಘಟಕ ₹ 10 ಕೋಟಿಯಷ್ಟು ವಹಿವಾಟು ನಡೆಸುತ್ತಿದ್ದು, ಲಾಭದಲ್ಲಿ ಸಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.