ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ನಡೆಸುವ ಭೂಸ್ವಾಧೀನ ಪ್ರಕ್ರಿಯೆಗಳಿಗೂ ಭೂಹಗರಣಗಳಿಗೂ ನಿಕಟ ನಂಟು.
ಯೋಜನೆಯೊಂದರ ಅನುಷ್ಠಾನದ ಮಾಹಿತಿ ಪಡೆಯುವ ಸರ್ಕಾರದ ಒಳಗಿನವರೇ ಸಂಚು ರೂಪಿಸಿ ರೈತರಿಂದ ಬಿಡಿಗಾಸಿಗೆ ಜಮೀನು ಖರೀದಿಸಿ, ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿ ಪರಿಹಾರದ ಮೊತ್ತ ಲೂಟಿ ಮಾಡುತ್ತಿರುವ ಹಗರಣಗಳು ದಶಕಗಳಿಂದಲೂ ನಡೆಯುತ್ತಿವೆ.
ಕೈಗಾರಿಕೆ, ವಸತಿ, ಲೋಕೋಪಯೋಗಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯ ಜವಾಬ್ದಾರಿ ಹೊಂದಿರುವ ಇಲಾಖೆಗಳು ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಜಮೀನು ಸ್ವಾಧೀನಪಡಿಸಿಕೊಳ್ಳುತ್ತವೆ. ನಗರಗಳ ವ್ಯಾಪ್ತಿನ ಅಥವಾ ಸುತ್ತಮುತ್ತ ಇಂತಹ ಯೋಜನೆಗಳು ಜಾರಿಯಾಗಲಿವೆ ಎಂಬುದು ತಿಳಿಯುತ್ತಿದ್ದಂತೆಯೇ ಅಖಾಡಕ್ಕೆ ಇಳಿಯುವ ವಂಚಕರ ಜಾಲ, ರೈತರಿಂದ ಕಡಿಮೆ ದರಕ್ಕೆ ಜಮೀನು ಖರೀದಿಸುತ್ತದೆ. ಕೆಲವೊಮ್ಮೆ ಮುಂಗಡ ನೀಡಿ ‘ಜಿಪಿಎ’ (ಕ್ರಯ ಕರಾರು) ಮಾಡಿಕೊಳ್ಳಲಾಗುತ್ತದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಸೇರಿದಂತೆ ಸರ್ಕಾರದ ಸಂಸ್ಥೆಗಳು ಅಥವಾ ಇಲಾಖೆಗಳು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುತ್ತಿದ್ದಂತೆಯೇ ಖರೀದಿ ದಾಖಲೆಗಳನ್ನು ಹಾಜರುಪಡಿಸಿ ಪರಿಹಾರ ರೈತರಿಗೆ ತಲುಪದಂತೆ ತಡೆಯಲಾಗುತ್ತದೆ. ‘ಜಿಪಿಎ’ಗಳನ್ನೂ ಬಳಸಿ ಪರಿಹಾರದ ಮೊತ್ತ ಕೊಳ್ಳೆ ಹೊಡೆದ ಹಲವು ಪ್ರಕರಣಗಳು ನಡೆದಿವೆ.
ಆಯಾ ಇಲಾಖೆಯ ಉಸ್ತುವಾರಿ ಹೊತ್ತ ಸಚಿವರ ಕಚೇರಿಗಳಿಗೂ ಈ ರೀತಿಯ ವಂಚನೆಗೂ ನಿಕಟ ನಂಟು ಇದೆ. ಸಚಿವರ ಕಚೇರಿಯ ಸಿಬ್ಬಂದಿ, ಬೆಂಬಲಿಗರೇ ರೈತರನ್ನು ಸಂಪರ್ಕಿಸಿ ಜಮೀನು ಖರೀದಿಸಿದ ಉದಾಹರಣೆಗಳಿವೆ. ನಂತರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಅಧಿಕಾರಿಗಳು ಶಾಮೀಲಾಗಿ ರೈತರಿಗೆ ಸೇರಬೇಕಾದ ಪರಿಹಾರವನ್ನು ಸದ್ದಿಲ್ಲದೇ ಕಬಳಿಸಿಬಿಡುತ್ತಾರೆ. ಹಲವು ಬಾರಿ ಸಚಿವರ ಕೃಪಾಕಟಾಕ್ಷದಲ್ಲೇ ಎಲ್ಲವೂ ನಡೆದಿದೆ.
ಇಟಾಸ್ಕಾ ಹಗರಣ: 2006ರಲ್ಲಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣಕ್ಕಾಗಿ ಬಂಡಿಕೊಡಿಗೆಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕೆಐಎಡಿಬಿಯಿಂದ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಗ ಇಟಾಸ್ಕಾ ಸಾಫ್ಟ್‌ವೇರ್ ಕಂಪನಿ 325 ಎಕರೆ ಜಮೀನು ಮಂಜೂರಾತಿಗೆ ಬೇಡಿಕೆ ಸಲ್ಲಿಸಿತ್ತು. ಆ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿದ್ದವರ ಕುಟುಂಬದ ಸದಸ್ಯರು ಮತ್ತು ಇತರ ಆರೋಪಿಗಳು ‘ಸಮ್ಮತಿಯ ಭೂಸ್ವಾಧೀನ’ದ ನೆಪದಲ್ಲಿ ರೈತರಿಂದ ಜಮೀನು ಖರೀದಿ ಒಪ್ಪಂದ ಮಾಡಿಕೊಂಡು, ಇಟಾಸ್ಕಾ ಕಂಪನಿಗಾಗಿ ಕೆಐಎಡಿಬಿಗೆ ನೀಡಿದ್ದರು.
ರೈತರಿಗೆ ನೀಡಬೇಕಿದ್ದ ₹ 87 ಕೋಟಿ ಪರಿಹಾರದ ಮೊತ್ತವನ್ನು ತಮ್ಮದೇ ಖಾತೆಗಳಿಗೆ ವರ್ಗಾಯಿಸಿಕೊಂಡು, ವಂಚಿಸಲಾಗಿತ್ತು. ನಂತರ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು. ಆಗ ಕೈಗಾರಿಕಾ ಸಚಿವರಾಗಿದ್ದ ರಾಜಕಾರಣಿ, ಅವರ ಮಗ ಸೇರಿದಂತೆ ಹಲವರನ್ನು ವರ್ಷಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು. ಈಗ ಪ್ರಕರಣ ನ್ಯಾಯಾಲಯದ ವಿಚಾರಣೆಯ ವಿವಿಧ ಹಂತಗಳಲ್ಲಿ ಬಾಕಿ ಇದೆ.
ಇಲವಾಲ ಕೆಎಚ್‌ಬಿ ಹಗರಣ: ಮೈಸೂರಿನ ಇಲವಾಲದಲ್ಲಿ ವಸತಿ ಬಡಾವಣೆ ನಿರ್ಮಿಸಲು ಜಮೀನು ಖರೀದಿಗೆ ಕೆಎಚ್‌ಬಿ 2008–09ರಲ್ಲಿ ಪ್ರಕ್ರಿಯೆ ಆರಂಭಿಸಿತ್ತು. ಪ್ರತಿ ಎಕರೆ ಜಮೀನನ್ನು ₹ 36.50 ಲಕ್ಷ ಪರಿಹಾರ ನೀಡಿ ಖರೀದಿಸಲು ತೀರ್ಮಾನಿಸಲಾಗಿತ್ತು.
ಈ ಸುಳಿವು ಪಡೆದ ವಂಚಕರ ಜಾಲ ಗುಂಗ್ರಾಲ್ ಛತ್ರ, ಕಲ್ಲೂರು ನಾಗನಹಳ್ಳಿ, ಯಲಚನಹಳ್ಳಿ ಗ್ರಾಮಗಳಲ್ಲಿ 81 ಎಕರೆ ಜಮೀನನ್ನು ರೈತರಿಂದ ಖರೀದಿಸಿತ್ತು. ಆಗ ಜಮೀನು ಮಾಲೀಕರಿಗೆ ಪ್ರತಿ ಎಕರೆಗೆ ಕೇವಲ ₹ 8 ಲಕ್ಷದಿಂದ ₹ 18 ಲಕ್ಷದವರೆಗೆ ಮಾತ್ರ ನೀಡಲಾಗಿತ್ತು. ಆದರೆ, ಕೆಎಚ್‌ಬಿಯಿಂದ ₹ 36.50 ಲಕ್ಷ ಪರಿಹಾರ ಪಡೆಯಲಾಗಿತ್ತು.
ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಲೋಕಾಯುಕ್ತ, ಹೆಚ್ಚಿನ ತನಿಖೆಗೆ ಶಿಫಾರಸು ಮಾಡಿ 2015ರಲ್ಲಿ ವರದಿ ನೀಡಿತ್ತು. 2017ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿ, ತನಿಖೆ ನಡೆಸಿತ್ತು. 2008–09ರಲ್ಲಿ ಸಚಿವರಾಗಿದ್ದ ಪ್ರಭಾವಿಯೊಬ್ಬರ ಬೆಂಬಲಿಗರು, ಆಗ ಗೃಹ ಮಂಡಳಿ ಅಧ್ಯಕ್ಷರಾಗಿದ್ದ ರಾಜಕಾರಣಿಯ ಕುಟುಂಬವೂ ಈ ಹಗರಣದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದು ಬಂದಿತ್ತು.
ಬೇನಾಮಿ ಹೆಸರಲ್ಲಿ ಖರೀದಿ: ‘ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್’ ಸ್ಥಾಪನೆಗಾಗಿ ನೆಲಮಂಗಲ ಸಮೀಪದ ತ್ಯಾಮಗೊಂಡ್ಲು ಬಳಿ 854 ಎಕರೆ 31 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಕೈಗಾರಿಕಾ ಇಲಾಖೆ 2020ರಲ್ಲಿ ಪ್ರಕ್ರಿಯೆ ಆರಂಭಿಸಿತ್ತು. ಅದರಲ್ಲಿ 610 ಎಕರೆ 34 ಗುಂಟೆ ರೈತರಿಗೆ ಸೇರಿದ್ದರೆ, 243 ಎಕರೆ 36 ಗುಂಟೆ ಸರ್ಕಾರಿ ಜಮೀನು ಇತ್ತು.
ಪ್ರತಿ ಎಕರೆಗೆ ₹ 1 ಕೋಟಿಯಷ್ಟು ಪರಿಹಾರ ನೀಡಲು ಪ್ರಸ್ತಾವ ಸಿದ್ಧವಾಗಿತ್ತು. ಈ ಯೋಜನೆಯ ಸುಳಿವು ಪಡೆದ ಪ್ರಭಾವಿ ವ್ಯಕ್ತಿಗಳು, ಅಧಿಕಾರಿಗಳು ಬೇನಾಮಿ ಹೆಸರಿನಲ್ಲಿ 350 ಎಕರೆ ಜಮೀನು ಖರೀದಿಸಿದ್ದರು. ಕೆಲವೇ ಲಕ್ಷಗಳಷ್ಟು ದರ ನೀಡಿ ರೈತರಿಂದ ಜಮೀನು ಖರೀದಿಸಿದ್ದ ಈ ಜಾಲ, ₹ 300 ಕೋಟಿ ಪರಿಹಾರ ಲೂಟಿಗೆ ಸಂಚು ನಡೆಸಿರುವ ಆರೋಪ ಕೇಳಿಬಂದಿತ್ತು. ಸರ್ಕಾರದ ಉನ್ನತ ಮಟ್ಟದಲ್ಲಿರುವವವರ ಕಡೆಗೂ ಸಂಶಯ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.