ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಯುವಕ ನಾಗೇಂದ್ರಗೆ ಈಗ 30ರ ಹರೆಯ. ಕೃಷಿಯೇ ಉದ್ಯೋಗ. ಉತ್ತಮ ಆದಾಯವೂ ಇದೆ.
ಬಂಟ್ವಾಳ ತಾಲ್ಲೂಕಿನ ಯುವಕರೊಬ್ಬರಿಗೆ ಈಗ 33 ವರ್ಷ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಕೈತುಂಬಾ ಸಂಬಳ. ಊರಲ್ಲಿ ಬಿಡುವಿನಲ್ಲಿ ಕೃಷಿಯನ್ನೂ ಮಾಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಹೊಳಲು ಗ್ರಾಮದ ಯುವ ರೈತನಿಗೆ 30 ವರ್ಷ ದಾಟಿದೆ. ಕಬ್ಬಿನ ಗದ್ದೆಯಲ್ಲೇ ದಿನವಿಡೀ ಕೆಲಸ. ಸ್ಫುರದ್ರೂಪಿ. ಕೃಷಿ ಬಿಟ್ಟು ಬೇರೆ ಕೆಲಸವಿಲ್ಲ.
ಈ ಮೂವರ ಸಮಸ್ಯೆ ಒಂದೇ; ಹಲವು ವರ್ಷಗಳಿಂದ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದಾರೆ. ಆದರೆ, ಸಿಗುತ್ತಿಲ್ಲ. ಕೃಷಿಕ ಎಂಬುದು ಒಂದು ಕಾರಣ. ‘ಟೆಕ್ಕಿಯಾಗಿದ್ದರೂ ಊರಲ್ಲಿ ದ್ದಾರೆ’ ಎಂಬುದು ಇನ್ನೊಂದು ಕಾರಣ. ‘ಕೃಷಿ ಮಾಡುತ್ತಿದ್ದಾರೆ, ಮನೆ ಚಿಕ್ಕದು’ ಎಂಬುದು ಮತ್ತೊಂದು ಕಾರಣ.
ಇದು ಮೂವರ ಕಥೆಯಲ್ಲ; ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಮದುವೆಯ ಅವಕಾಶಕ್ಕಾಗಿ ಕಾಯುತ್ತಲೇ ಇರುವ ಯುವ ಕೃಷಿಕರು, ನಿರುದ್ಯೋಗಿಗಳು ಮತ್ತು ಕೆಲವು ಉದ್ಯೋಗಿಗಳ ಕಥೆ–ವ್ಯಥೆ.
ನಗರಗಳಲ್ಲಿ ವಾಸವಿರುವ ಚಿಕ್ಕ ಕೆಲಸ, ಕಡಿಮೆ ಸಂಬಳದ ಹುಡುಗರಿಗೆ ಸುಲಭವಾಗಿ ಹೆಣ್ಣು ಸಿಗುತ್ತಿವೆ. ಆದರೆ, ಹಳ್ಳಿಗಳಲ್ಲಿ ಮೂರ್ನಾಲ್ಕು ಎಕರೆ ಜಮೀನು, ಉತ್ತಮ ಸಂಪಾದನೆ ಇದ್ದರೂ ವಧು ಸಿಗುತ್ತಿಲ್ಲ. ಕೃಷಿ ಕಾರ್ಮಿ ಕರು, ಸ್ಥಳೀಯವಾಗಿ ಸಣ್ಣಪುಟ್ಟ ಕೆಲಸ ಮಾಡುವವರು, ಅಡುಗೆ, ವೈದಿಕ ವೃತ್ತಿ ಯವರಿಗೆ ಹೆಣ್ಣು ಕೊಡುವ ಮಾತೇ ಇಲ್ಲ.
ಇದು ಈಗ ಸಾಮಾಜಿಕ ಸಮಸ್ಯೆಯಾಗಿ ಬದಲಾಗಿದೆ. 2022ರ ನವೆಂಬರ್‌ನಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ನಡೆದಿದ್ದ ವಧು ವರರ ಸಮಾವೇಶವು ಈ ಗಂಭೀರ ಸಮಸ್ಯೆಯನ್ನು ತೆರೆದಿಟ್ಟಿತ್ತು. ಅಲ್ಲಿ 250 ವಧುಗಳು ನೋಂದಾಯಿಸಿದ್ದರೆ, ವರರು ಮತ್ತು ಅವರ ಸಂಬಂಧಿಕರು ಸೇರಿ 25 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು!
15 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಹೆಣ್ಣುಮಕ್ಕಳಿಗೆ ಗಂಡು ಹುಡುಕುವುದೇ ಪೋಷಕರಿಗೆ ಕಷ್ಟವಾಗಿತ್ತು. ಕೇಳಿದಷ್ಟು ವರದಕ್ಷಿಣೆ ನೀಡಲು ಸಿದ್ಧವಾಗಿದ್ದರೂ ವರ ಸಿಗುತ್ತಿರಲಿಲ್ಲ. ಈಗ ವರನ ಕಡೆಯವರು ‘ವಧು ದಕ್ಷಿಣೆ ಕೊಡುತ್ತೇವೆ’ ಎಂದರೂ ಹೆಣ್ಣು ಸಿಗುತ್ತಿಲ್ಲ!
ಕಾರಣಗಳೇನು?
‘ಶೈಕ್ಷಣಿಕ ಸ್ಥಿತಿಯಲ್ಲಾದ ಬದಲಾವಣೆ, ಓದುವ ಹಂತದಲ್ಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿದ್ದ ಪ್ರವೃತ್ತಿ ಕಡಿಮೆಯಾಗಿರುವುದು, ಹೆಣ್ಣುಮಕ್ಕಳು ಮತ್ತು ಪೋಷಕರ ನಿರೀಕ್ಷೆ ಹೆಚ್ಚಾಗಿರುವುದು, ಸ್ವತಂತ್ರವಾಗಿ ಬದುಕುವ ಹೆಣ್ಣುಮಕ್ಕಳ ಇರಾದೆ, ಕೆಲವು ಸಮುದಾಯಗಳಲ್ಲಿ ಲಿಂಗಾನುಪಾತದಲ್ಲಿನ ಅಸಮಾನತೆ, ಕೃಷಿಯಲ್ಲಿ ಆದಾಯವಿಲ್ಲ ಮತ್ತು ಕೃಷಿ ಕೆಲಸ ಕೀಳೆಂಬ ಭಾವನೆ, ಹಳ್ಳಿಗಳಲ್ಲಿ ಸೌಲಭ್ಯಗಳ ಕೊರತೆ, ಕೂಡು ಕುಟುಂಬದ ಬಗ್ಗೆ ನಿರ್ಲಕ್ಷ್ಯ ಧೋರಣೆ, ನಗರ ಪ್ರದೇಶಗಳಲ್ಲಿ ಬದುಕು ಸುಲಭ ಎಂಬ ಗ್ರಹಿಕೆ, ಅಂತರ್ಜಾತಿ ವಿವಾಹದ ಪರಿಕಲ್ಪನೆಗೆ ಸಮಾಜ ಸಂಪೂರ್ಣವಾಗಿ ತೆರೆದುಕೊಳ್ಳದಿರುವುದು ಪ್ರಮುಖ ಕಾರಣಗಳು’ ಎನ್ನುತ್ತಾರೆ ಸಮಾಜ ಶಾಸ್ತ್ರಜ್ಞರು.
ಈ ವಿಷಯದಲ್ಲಿ ಯುವಕರು, ಅವರ ಪೋಷಕರ ಅಭಿಪ್ರಾಯಗಳು ಹಾಗೂ ಹೆಣ್ಣು ಹೆತ್ತವರ ಅಭಿಪ್ರಾಯಗಳೂ ಸಂಪೂರ್ಣ ಭಿನ್ನ.
‘ನಾನೊಬ್ಬ ಯುವ ರೈತ. ಆಸ್ತಿ ಇದೆ. ಆದಾಯವಿದೆ. ಮೂರ್ನಾಲ್ಕು ವರ್ಷಗಳಿಂದ ಹೆಣ್ಣು ಹುಡುಕುತ್ತಿದ್ದೇನೆ. ರೈತನೆಂಬ ಒಂದೇ ಕಾರಣಕ್ಕೆ ಹೆಣ್ಣು ಕೊಡಲು ಯಾರೂ ಮುಂದೆ ಬಂದಿಲ್ಲ. ಸರ್ಕಾರಿ ನೌಕರನೇ ಬೇಕೆನ್ನುತ್ತಾರೆ. ದೇಶಕ್ಕೆ ಅನ್ನ ಹಾಕುವ ಯುವ ರೈತರನ್ನು ಅಸಡ್ಡೆಯಿಂದ ನೋಡುತ್ತಾರೆ...’ ಎಂಬುದು ಸಂತೇಮರಹಳ್ಳಿಯ ಯುವಕ ನಾಗೇಂದ್ರ ಅವರ ನೋವಿನ ನುಡಿ.
‘ಉತ್ತಮ ಭೂಮಿ ಹೊಂದಿದ ಕೃಷಿಕರು ಸಾಫ್ಟ್‌ವೇರ್ ಎಂಜಿನಿಯರ್‌ಗಿಂತಲೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಆದರೆ ಅವರ ಜೀವನಶೈಲಿ ಈಗಿನ ತಲೆಮಾರಿನ ಯುವತಿಯರಿಗೆ ಹೊಂದಿಕೆಯಾಗುತ್ತಿಲ್ಲ’ ಎಂಬುದು ರೈತ ಸಂಘ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಅವರ ಅಭಿಪ್ರಾಯ.
ಬಯಸುವುದು ತಪ್ಪೇ?
‘ಸರ್ಕಾರಿ ನೌಕರರಿಗೆ ಹೆಣ್ಣು ಮಕ್ಕಳನ್ನು ಕೊಟ್ಟು ಮದುವೆ ಮಾಡಬೇಕು ಎಂಬುದು ನಮ್ಮಾಸೆ. ರೈತ ಕುಟುಂಬಗಳ ಕಷ್ಟ ನೋಡಿದ್ದೇವೆ. ಈಗ ರೈತರು ಹೇಗಿರುತ್ತಾರೆ? ಸರ್ಕಾರಿ ನೌಕರಿ ಅಥವಾ ಇನ್ನಿತರ ಉದ್ಯೋಗಸ್ಥರು ಹೇಗಿರುತ್ತಾರೆಂಬುದು ಎಲ್ಲರಿಗೂ ಗೊತ್ತು. ನೌಕರಿಯಲ್ಲಿರುವವರಿಗೆ ಪ್ರತಿ ತಿಂಗಳು ಖಚಿತ ಆದಾಯವಿರುತ್ತದೆ. ಆದರೆ, ರೈತರದ್ದು ಹೇಳಲಾಗದು. ಬೆಳೆ ನಷ್ಟವಾದರೆ ತುಂಬಿಕೊಡುವವರು ಯಾರು? ನಮ್ಮ ಹೆಣ್ಣುಮಕ್ಕಳು ಮದುವೆಯಾದ ನಂತರ ಕಷ್ಟಪಡಬಾರದು ಎಂದು ಬಯಸುವುದು ತಪ್ಪೇ’ ಎಂದು ಪ್ರಶ್ನಿಸುತ್ತಾರೆ ಕೊಳ್ಳೇಗಾಲದ ಸತ್ತೇಗಾಲ ಗ್ರಾಮದ ರಾಜಮ್ಮ.
ವಿಚಿತ್ರ ಎಂದರೆ, ‘ಕೃಷಿ ಮಾಡುತ್ತಿರುವ ಮಗನಿಗೆ ವಧು ಸಿಗುತ್ತಿಲ್ಲ’ ಎಂದು ದುಃಖಿಸುವ ಪೋಷಕರೇ, ತಮ್ಮ ಮಗಳಿಗೆ ಮಾತ್ರ ‘ನಗರದಲ್ಲಿರುವ, ಕೈತುಂಬಾ ಸಂಬಳ ಸಿಗುವ ಅಳಿಯನೇ ಬೇಕು’ ಎಂದೇ ಬಯಸುತ್ತಾರೆ!
‘ನನ್ನ ಮಗಳನ್ನು ಯುವ ರೈತನಿಗೆ ಕೊಟ್ಟಿದ್ದೇನೆ. ಹೆಣ್ಣು ಹೆತ್ತವರು ಆದಾಯವನ್ನಷ್ಟೇ ನೋಡದೆ, ಸಮಗ್ರ ದೃಷ್ಟಿಕೋನದಿಂದ ಕಾಣಬೇಕು. ಹುಡುಗ ನಗರದಲ್ಲಿ ಕೆಲಸದಲ್ಲಿದ್ದಾನೆ ಎಂದುಕೊಂಡು ಹೆಣ್ಣು ಕೊಟ್ಟು ಸಮಸ್ಯೆಗೆ ಸಿಲುಕಿದ ಹಲವು ಪೋಷಕರಿದ್ದಾರೆ. ಘನತೆಯುತ ಜೀವನಕ್ಕೆ ಒಂದು ಎಕರೆ ಕೃಷಿ ಭೂಮಿ ಇದ್ದರೆ ಸಾಕು. ಆದರೆ, ವ್ಯವಸ್ಥಿತವಾಗಿ ಕೃಷಿ ಮಾಡಬೇಕು. ಹಳ್ಳಿಯಲ್ಲಿ ಈಗ ಸೌಲಭ್ಯಗಳಿವೆ. ಓದಿದವರೂ ಕೆಲಸ ಬಿಟ್ಟು ಕೃಷಿಗೆ ಮರಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಮಾಲಿನ್ಯ ಇಲ್ಲ. ಹೀಗಾಗಿ ಆರೋಗ್ಯ ಚೆನ್ನಾಗಿರುತ್ತದೆ. ನಗರ ಪ್ರದೇಶಗಳಲ್ಲಿ 40 ವರ್ಷಕ್ಕೆ ಕಾಯಿಲೆ ಬರುತ್ತದೆ. ರೋಗ ಬಂದ ಬಳಿಕ ಎಷ್ಟು ಆದಾಯ ಇದ್ದರೆ ಏನು ಪ್ರಯೋಜನ? ಇದೆಲ್ಲವನ್ನೂ ಪೋಷಕರು, ಹೆಣ್ಣುಮಕ್ಕಳು ಯೋಚನೆ ಮಾಡಬೇಕು’ ಎಂದು ಸಲಹೆ ನೀಡುತ್ತಾರೆ ಚಾಮರಾಜನಗರ ಜಿಲ್ಲೆಯ ರೈತ ಮುಖಂಡ ಹೊನ್ನೂರು ಪ್ರಕಾಶ್.
ಎಲ್ಲೆಲ್ಲೂ ಒಂದೇ ಸಮಸ್ಯೆ
ಹಳ್ಳಿಯ ಹುಡುಗರಿಗೆ ಹೆಣ್ಣು ಸಿಗದಿರುವ ಸಮಸ್ಯೆ ಒಂದೆರಡು ಜಿಲ್ಲೆಗಳಿಗೆ ಅಥವಾ ಒಂದೆರಡು ಜಾತಿಗಳಿಗೆ ಸೀಮಿತವಾಗಿಲ್ಲ. ಎಲ್ಲ ಜಿಲ್ಲೆಗಳಲ್ಲಿ, ಎಲ್ಲ ಸಮುದಾಯಗಳಲ್ಲಿದೆ. ಕೆಲವು ಕಡೆಗಳಲ್ಲಿ ಕಡಿಮೆ ಇರಬಹುದಷ್ಟೇ. ಕರಾವಳಿ, ಮಲೆನಾಡು ಭಾಗದ ಹವ್ಯಕರು ಸೇರಿದಂತೆ ಇತರ ಬ್ರಾಹ್ಮಣ ಸಮುದಾಯಗಳಲ್ಲಿ ಇದು ತೀವ್ರವಾಗಿದೆ. ಇತರೆ ಪ್ರಬಲ ಜಾತಿಗಳಲ್ಲೂ ಸಮಸ್ಯೆ ಕಡಿಮೆ ಏನಲ್ಲ. ಮಂಡ್ಯ, ಮೈಸೂರು ಭಾಗಗಳಲ್ಲೂ ಪರಿಸ್ಥಿತಿ ಗಂಭೀರವಾಗಿದೆ.
ಕೊಡಗು ಜಿಲ್ಲೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ರೈತರ ಮಕ್ಕಳಿರಲಿ, ಕಾಫಿ ತೋಟಗಳ ಮಾಲೀಕರ ಮಕ್ಕಳನ್ನು ಮದುವೆಯಾಗಲು ಹೆಚ್ಚಿನ ಹೆಣ್ಣುಮಕ್ಕಳು ಬಯಸುತ್ತಿಲ್ಲ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೂ ಹಳ್ಳಿಗಳಲ್ಲಿ ಇರುವ ವರರಿಗೆ ವಧುಗಳನ್ನು ಹುಡುಕಲು ಪೋಷಕರು ಪ್ರಯಾಸ ಪಡಬೇಕು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಇಬ್ಬರು ಸಹೋದರರು ‘ಮದುವೆ ಭಾಗ್ಯ’ ಯೋಜನೆ ಜಾರಿಗೆ ತರುತ್ತೇವೆ ಎಂದು ಪ್ರಚಾರ ನಡೆಸಿದ್ದರು! ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ರೈತರಿಗೆ ‘ಮದುವೆ’ ವಿಚಾರ ಕಗ್ಗಂಟಾದ ಸಮಸ್ಯೆ ಎಂಬುದನ್ನು ಆ ಪ್ರಣಾಳಿಕೆ ಸಾರಿ ಹೇಳಿತ್ತು. ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ ಹಲವು ಜಿಲ್ಲೆಗಳಲ್ಲಿ ನೂರಾರು ಎಕರೆ ಕೃಷಿ ಭೂಮಿಯ ಒಡೆಯರಾಗಿದ್ದರೂ ‘ರೈತ’ ಎಂಬ ಕಾರಣಕ್ಕೆ ವಧು ಸಿಗುತ್ತಿಲ್ಲ.
ವಲಸೆ, ಅನಾರೋಗ್ಯ
‘ನಗರ, ಪಟ್ಟಣಗಳಲ್ಲಿದ್ದರೆ ಮಾತ್ರ ಹೆಣ್ಣು ಸಿಗುತ್ತದೆ’ ಎಂಬ ಸನ್ನಿವೇಶವಿರುವುದರಿಂದ ಮನೆ ವ್ಯವಹಾರದಲ್ಲಿ ತೊಡಗಿರುವ ಯುವಕರು ಊರಲ್ಲಿ ಪೋಷಕರನ್ನು ಬಿಟ್ಟು ನಗರಗಳತ್ತ ಹೋಗುತ್ತಿದ್ದಾರೆ. ಕಡಿಮೆ ಸಂಬಳದ ಕೆಲಸಕ್ಕೆ ಸೇರುತ್ತಿದ್ದಾರೆ.
‘ಹಿಂದಿನ ಕಾಲದಲ್ಲಿ, ಗಂಡಿನ ಮನೆಯ ತಿಪ್ಪೆ– ಮೆದೆಯಲ್ಲಿನ ಹುಲ್ಲಿನ ರಾಶಿ ನೋಡಿ, ಅದೇ ಸಂಪತ್ತೆಂದು ಭಾವಿಸಿ ಹೆಣ್ಣು ಕೊಡುತ್ತಿದ್ದರು. ಈಗ ಹತ್ತಾರು ಎಕರೆ ಒಣಭೂಮಿ ಹೊಂದಿರುವ ಭಾಗಗಳ ಕುಟುಂಬಗಳಲ್ಲಿನ ಮಕ್ಕಳು ಹೊರ ಭಾಗಕ್ಕೆ ಉದ್ಯೋಗಕ್ಕೆ ಹೋಗುತ್ತಿದ್ದು, ಹಳ್ಳಿಗಳು ಹಿರಿಯರ ನಿರಾಶ್ರಿತ ಕೇಂದ್ರದಂತೆ, ಸ್ಮಶಾನದಂತೆ ಭಾಸವಾಗುತ್ತಿವೆ’ ಎಂದು ಮಂಡ್ಯದ ರೈತ ಮುಖಂಡ ಕೆ.ಬೋರಯ್ಯ ವಿಷಾದಿಸುತ್ತಾರೆ.
ಪ್ರತಿಷ್ಠೆಯ ಸಂಗತಿ: ’ರೈತರನ್ನು, ಅವರ ಮಕ್ಕಳನ್ನು ಅನುತ್ಪಾದಕ ವರ್ಗದವರಂತೆ ಕಾಣುತ್ತಿರುವುದರಿಂದ ರೈತರ ಮಕ್ಕಳಿಗೆ ಹುಡುಗಿ ಕೊಡಲು ಸಮಾಜ ಹಿಂದೇಟು ಹಾಕುತ್ತಿದೆ. ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳಿಂದ ತಪ್ಪಿಸಿಕೊಳ್ಳಬೇಕೆಂದರೆ ಸುಸ್ಥಿರ ಕೃಷಿ ಕಡೆ ಮುಖ ಮಾಡಬೇಕು’ ಎಂದು ಸಲಹೆ ನೀಡುತ್ತಾರೆ ಗುಲಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಖಾಯದ ಡೀನ್ ಪ್ರೊ.ಜಿ.ಶ್ರೀರಾಮುಲು.
ಬೇರೆ ಸಮುದಾಯದ ಹೆಣ್ಣು
ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ವಿವಿಧ ಸಮುದಾಯಗಳಲ್ಲಿ ನಡೆಯುತ್ತಿವೆ. ಜಾತಿಯ ಉಪ ಪಂಗಡಗಳ ನಡುವೆ ಸಂಬಂಧ ಏರ್ಪಡಿಸಿಕೊಳ್ಳಲಾಗುತ್ತಿದೆ. ಅಂತರ್ಜಾತಿ ವಿವಾಹಗಳಿಗೂ ಜಾತಿಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ.
ಕರಾವಳಿ, ಮಲೆನಾಡು ಭಾಗಗಳಲ್ಲಿ ಬ್ರಾಹ್ಮಣ ಸಮುದಾಯಗಳು ಒಳಪಂಗಡಗಳ ಗೋಡೆಗಳನ್ನು ಒಡೆದು, ‘ಯಾರಾದರೂ ಸರಿ, ಬ್ರಾಹ್ಮಣ ಸಮುದಾಯದ ಹೆಣ್ಣು ಸಿಕ್ಕರೆ ಆಗಬಹುದು’ ಎಂಬ ನಿಲುವಿಗೆ ಬಂದಿವೆ. ಹೀಗೆ ಒಂದಿಷ್ಟು ಮದುವೆಗಳು ನಡೆದಿವೆ. ಎಲ್ಲ ಸಮುದಾಯಗಳಲ್ಲೂ ಇದೇ ಸಮಸ್ಯೆ ಇರುವುದರಿಂದ ಬೇರೆ ಪರಿಹಾರ ಕಂಡುಕೊಳ್ಳಲು ಹೊರಟಿವೆ. ಕೆಲವು ಮಠಗಳು ಕೂಡ ಇದಕ್ಕೆ ಸಮ್ಮತಿ ಸೂಚಿಸಿವೆ.
ಉತ್ತರ ಪ್ರದೇಶ, ಈಶಾನ್ಯ ರಾಜ್ಯಗಳು, ಕಾಶ್ಮೀರಗಳಿಂದ ಬ್ರಾಹ್ಮಣ ಹೆಣ್ಣುಮಕ್ಕಳನ್ನು ಕರೆ ತಂದು ಇಲ್ಲಿನ ಯುವಕರಿಗೆ ಮದುವೆ ಮಾಡಿಸುವ ಪ್ರಯತ್ನ ನಡೆದಿವೆ. ಇಲ್ಲಿನ ಸಂಪ್ರದಾಯ, ಹವಾಗುಣಗಳಿಗೆ ಒಗ್ಗಿಕೊಳ್ಳಲು ಅಲ್ಲಿನ ಹುಡುಗಿಯರಿಗೆ ಸಾಧ್ಯವಾಗದೆ ಕೆಲವು ಮದುವೆಗಳು ಮುರಿದುಬಿದ್ದಿವೆ.
ಕಷ್ಟ, ಅಸಾಧ್ಯವೇನಲ್ಲ
‘ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಂದ ವಧು ಹುಡುಕುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಿದೆ. ನಾಲ್ಕು ಮದುವೆಗಳೂ ಆಗಿವೆ. ಈಗ ಮತ್ತೆ ಪ್ರಯತ್ನ ಆರಂಭವಾಗಿದೆ. ಒಂದೆರಡು ಸಭೆಗಳೂ ನಡೆದಿವೆ. ಅಲ್ಲಿಯವರನ್ನು ಸಂಪರ್ಕಿಸಿ, ಅವರ ವಿವರಗಳನ್ನು ಕಲೆ ಹಾಕಿ ವಧುವಿನ ಕಡೆಯವನ್ನು ಇಲ್ಲಿಗೆ ಕರೆತಂದು ಮಾತುಕತೆ ನಡೆಸುವುದು ಕಷ್ಟವೇ. ಆದರೆ, ಆಗದ ಕೆಲಸವೇನಲ್ಲ ’ ಎಂದು ಹೇಳುತ್ತಾರೆ ದಕ್ಷಿಣ ಕನ್ನಡ ಸುಳ್ಯದ ಹವ್ಯಕ ಮುಖಂಡ ಎಂ.ಜಿ.ಸತ್ಯನಾರಾಯಣ.
ಉತ್ತರ ಕರ್ನಾಟಕ ಭಾಗದಿಂದ ಲಿಂಗಾಯತ ಸಮುದಾಯದ ಯುವತಿಯರನ್ನು ತರುವ ಪ್ರಯತ್ನ ನಡೆಯುತ್ತಿದೆ. ಹಲವು ವಿವಾಹಗಳೂ ನಡೆದಿವೆ. ಮದುವೆಯಾದ ಕೆಲವು ಹೆಣ್ಣುಮಕ್ಕಳು ಸ್ಥಳೀಯ ಜೀವನ ಶೈಲಿ, ಭಾಷೆ, ಸಂಪ್ರದಾಯಗಳಿಗೆ ಒಗ್ಗಿಕೊಂಡು ಸುಖ ಜೀವನ ನಡೆಸುತ್ತಿದ್ದರೆ, ಇನ್ನೂ ಕೆಲವು ಮದುವೆಗಳು ಮುರಿದುಬಿದ್ದಿವೆ.
ಆಶ್ರಮಗಳಲ್ಲಿರುವ ಅನಾಥ ಹೆಣ್ಣುಮಕ್ಕಳನ್ನೂ ಮದುವೆಯಾಗುತ್ತಿದ್ದಾರೆ. ಉಡುಪಿ ಜಿಲ್ಲೆಯ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ತೀರಾ ಇತ್ತೀಚೆಗೆ ಕೃಷಿಕ ಮತ್ತು ಪುರೋಹಿತರೊಬ್ಬರು ಅನಾಥ ವಧುಗಳನ್ನು ಕೈಹಿಡಿದಿರುವುದು ಇದಕ್ಕೆ ತಾಜಾ ನಿದರ್ಶನ.
ದೇವರಿಗೆ ಮೊರೆ
ಹೆಣ್ಣು ಸಿಗದೆ ಬೇಸತ್ತ ಹಳೆ ಮೈಸೂರು ಭಾಗದ ಯುವಕರು ದೇವರಿಗೆ ಮೊರೆ ಹೋಗುತ್ತಿದ್ದಾರೆ. ಮಂಡ್ಯದ ಮಳವಳ್ಳಿ, ಮೈಸೂರು ಜಿಲ್ಲೆಯ ತಿ.ನರಸೀಪುರ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ 30 ವರ್ಷ ದಾಟಿದವರು ಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧ ದೇವಾಲಯಗಳಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ.
‘ಮದುವೆಯಾಗದ 40ರಿಂದ 50 ಮಂದಿ ಮಂಡ್ಯ ಜಿಲ್ಲೆಯ ಪ್ರತಿ ಊರಿನಲ್ಲೂ ಸಿಗುತ್ತಾರೆ. ಎಲ್ಲರಿಗೂ ಜಮೀನುಗಳಿವೆ. ಕೃಷಿಯಲ್ಲಿ ಆದಾಯವೂ ಚೆನ್ನಾಗಿದೆ. ಊರಲ್ಲಿದ್ದಾನೆಂದು ಹುಡುಗಿ ಸಿಗುತ್ತಿಲ್ಲ. ಬೇರೆ ದಾರಿ ಕಾಣದೆ ಹೆಣ್ಣು ಸಿಗಲಿ ಎಂದು ದೇವರ ಮೊರೆ ಹೋಗಿದ್ದೇವೆ. ಮಹದೇಶ್ವರ ಬೆಟ್ಟ, ಆದಿಚುಂಚನಗಿರಿಗೆ
ಪಾದಯಾತ್ರೆ ಹೋಗುತ್ತಿದ್ದೇವೆ. ಮದುವೆಗೆ ಹುಡುಗಿ ಸಿಗದ ನೂರಾರು ಯುವಕರು ನಮ್ಮೊಂದಿಗೆ ಬರುತ್ತಿದ್ದಾರೆ’ ಎಂದು ಮಳವಳ್ಳಿಯ ಅಖಿಲ ಕರ್ನಾಟಕ ಬ್ರಹ್ಮಚಾರಿಗಳ ಸಂಘದ ಸಂಸ್ಥಾಪಕ ಶಿವಪ್ರಸಾದ್ ಹೇಳಿದರು.
‘ಮಗಳು ಕಷ್ಟ ಪಡಬಾರದು. ಗಂಡನೊಂದಿಗೆ ಸುಖವಾಗಿರಬೇಕೆಂಬ ಕಾಳಜಿಯಿಂದ ಪೋಷಕರು ಹಳ್ಳಿಗಳಲ್ಲಿರುವವರಿಗೆ ಹೆಣ್ಣು ಕೊಡುತ್ತಿಲ್ಲ. ಕಾಳಜಿ ತಪ್ಪಲ್ಲ. ಆದರೆ, ಹಳ್ಳಿಗಳಲ್ಲೂ ಸೌಲಭ್ಯಗಳಿವೆ. ರಸ್ತೆ, ಇಂಟರ್‌ನೆಟ್ ಬಂದಿದೆ. ಮೊದಲಿನ ಕಷ್ಟ ಈಗಿಲ್ಲ. ಅದನ್ನೂ ಯೋಚಿಸಬೇಕು’ ಎನ್ನುತ್ತಾರೆ ಪಾದಯಾತ್ರೆ ಸಂಘಟಕ ಗುಂಡ್ಲುಪೇಟೆ ತಾಲ್ಲೂಕು ಕೋಡಹಳ್ಳಿಯ ಸಿದ್ದರಾಜು.
ಲಿಂಗಾನುಪಾತ ಕುಸಿತವೂ ಕಾರಣವೇ?
ಲಿಂಗಾನುಪಾತದಲ್ಲಿನ ಅಸಮಾನತೆ, ಹೆಣ್ಣುಭ್ರೂಣಹತ್ಯೆ ಈ ಸಮಸ್ಯೆಗೆ ಕಾರಣವೇ ಎಂಬ ಚರ್ಚೆಯೂ ನಡೆಯುತ್ತಿದೆ. ‘ಗಂಡು ಶ್ರೇಷ್ಠವೆನ್ನುತ್ತಾ, ಹೆಣ್ಣನ್ನು ಎರಡನೇ ದರ್ಜೆಯಲ್ಲಿರಿಸಿ ಘನತೆ ಕುಗ್ಗಿಸುವ ಪರಿಪಾಠ ಸಮಾಜದಲ್ಲಿದೆ. ಆರ್ಥಿಕತೆ ಮತ್ತು ಸಾಮಾಜಿಕತೆಯೊಂದಿಗೆ ಬೆಸೆದುಕೊಂಡಿರುವ ಈ ಶ್ರೇಷ್ಠತೆಯ ವ್ಯಸನ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸಕ್ಕೆ ಕಾರಣವಾಗಿದೆ. ಮುಂದುವರಿದ ಜಾತಿಗಳು ಸೇರಿದಂತೆ ಹಲವು ಸಮುದಾಯಗಳಲ್ಲಿ ಈ ಸಮಸ್ಯೆ ಇದೆ. ನಿರ್ಲಕ್ಷ್ಯ, ಹೆಣ್ಣುಭ್ರೂಣ ಹತ್ಯೆಯಂತಹ ಪ್ರಕರಣಗಳಿಂದ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂಬುದು ಸಮಾಜ ಶಾಸ್ತ್ರಜ್ಞರ ಅಭಿಮತ.
‘ಈ ಸಮಸ್ಯೆ ಬಗ್ಗೆ ರಾಜ್ಯದ ವಿವಿಗಳಲ್ಲಿ ಅಧ್ಯಯನ, ಸಂಶೋಧನೆಗಳು ನಡೆದಿಲ್ಲ. ಸಮಗ್ರವಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ಅವಶ್ಯತೆ ಇದೆ’ ಎಂದು ಪ್ರತಿಪಾದಿಸುತ್ತಾರೆ ಸಮಾಜಶಾಸ್ತ್ರಜ್ಞರು.
––––
ರೈತ ಸಂಘದಿಂದ ಅವಿವಾಹಿತ ಯುವ ರೈತರ ನೋಂದಣಿ: ಯುವ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ರೈತ ಸಂಘ, ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿ, ಅವಿವಾಹಿತ ಯುವ ರೈತರ ನೋಂದಣಿ ಆರಂಭಿಸಿದೆ. ಬೃಹತ್ ಸಮಾವೇಶವೊಂದನ್ನು ಶೀಘ್ರದಲ್ಲಿ ನಡೆಸಲಿದೆ. ‘ರೈತ ವರನನ್ನು ಮದುವೆಯಾಗುವ ವಧುವಿಗೆ ಸರ್ಕಾರದಿಂದ ₹ 5 ಲಕ್ಷ ಪ್ರೋತ್ಸಾಹಧನ ನೀಡಬೇಕು. ಸರ್ಕಾರಿ ಹಾಗೂ ಅರೆ ಸರ್ಕಾರಿ ಉದ್ಯೋಗಗಳಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಜಾರಿಗೊಳಿಸಬೇಕು. ಕೃಷಿ ಸಂಬಂಧಿಸಿದ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ರೈತರ ಮಕ್ಕಳಿಗೆ ‘ಮುದ್ರಾ’ ಯೋಜನೆ ಮಾದರಿಯಲ್ಲಿ ಬಡ್ಡಿ ರಹಿತ ಸಾಲ ನೀಡಬೇಕು. ಹೆಣ್ಣು ಮಕ್ಕಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಸಾಮೂಹಿಕ–ಸರಳ ವಿವಾಹವನ್ನು ಪ್ರೋತ್ಸಾಹಿಸಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಹೇಳುತ್ತಾರೆ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್. ಗೌಡ.ಬಡಗಲಪುರ ನಾಗೇಂದ್ರ ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್. ಗೌಡ
ಘನತೆಯಿಂದ ಕಾಣಬೇಕಿದೆ: ಹೆಣ್ಣು ಸಿಗದಿರುವುದಕ್ಕೆ ಲಿಂಗಾನುಪಾತದ ಕುಸಿತದ ಜತೆಗೆ, ಕೃಷಿ ಕೆಲಸಕ್ಕೆ ಘನತೆ ಇಲ್ಲದಿರು ವುದು, ಜಾತಿ ಪದ್ಧತಿ ಹಾಗೂ ವರ್ಗ ಭೇದವೂ ಕಾರಣ. ಅಂತರ್ಜಾತಿ ವಿವಾಹಕ್ಕೆ ಸಮುದಾಯಗಳು ತೆರೆದುಕೊಂಡಿಲ್ಲ. ಜಾತಿಗಳಲ್ಲಿರುವ ಉಪ ಪಂಗಡದ ವ್ಯತ್ಯಾಸವನ್ನೂ ಸಮಾಜ ಒಪ್ಪಿಕೊಳ್ಳುತ್ತಿಲ್ಲ. ಕೃಷಿ ಮಾಡುವ ಹೆಣ್ಣು –ಗಂಡನ್ನು ಘನತೆಯಿಂದ ನೋಡದಿರುವುದು ಸಮಸ್ಯೆಯ ಮೂಲ ಎನ್ನುತ್ತಾರೆ ಬೆಂಗಳೂರಿನ ವಿಎಚ್‌ಸಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೋಂ ಸೈನ್ಸ್‌ನ ಸಮಾಜ ಶಾಸ್ತ್ರ ಪ್ರಾಧ್ಯಾಪಕಬೆಂಗಳೂರಿನ ವಿಎಚ್‌ಸಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೋಂ ಸೈನ್ಸ್‌ನ ಸಮಾಜ ಶಾಸ್ತ್ರ ಪ್ರಾಧ್ಯಾಪಕ
ಮದುವೆಯಲ್ಲೂ ವಂಚನೆಯ ಜಾಲ..!
ಹೊರ ರಾಜ್ಯಗಳಿಂದ ವಧುಗಳನ್ನು ಕರೆತಂದು ಮದುವೆ ಮಾಡಿಸುವುದಕ್ಕೆ ಸಾವಿರಾರು ರೂಪಾಯಿ, ಕೆಲವೊಂದು ಬಾರಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಹೊರ ರಾಜ್ಯಗಳಿಗೆ ಹೋಗಿ ಬರುವುದಾದರೆ ಇನ್ನೂ ಹೆಚ್ಚು ಖರ್ಚಾಗುತ್ತದೆ.
ಗ್ರಾಮೀಣ ಕುಟುಂಬಗಳ ಅನಿವಾರ್ಯತೆಯನ್ನು ಬಂಡವಾಳವಾಗಿಸುವ ಕೆಲವರು, ಹೊರರಾಜ್ಯ ಹೊರ ಜಿಲ್ಲೆಗಳಿಂದ ಹೆಣ್ಣು ತಂದು ಮದುವೆ ಮಾಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದಾರೆ. ಇಂತಹ ಏಜೆಂಟರು ಅಲ್ಲಲ್ಲಿ ಸಿಗುತ್ತಾರೆ. ದೂರದ ಊರಿನಿಂದ ಹೆಣ್ಣುಮಕ್ಕಳನ್ನು ಕರೆತಂದು, ಹೋಟೆಲ್ ಅಥವಾ ಸಭಾಭವನದಲ್ಲಿ ವಧು– ವರರ ಸಮಾವೇಶ ನಡೆಸುತ್ತಾರೆ. ಸಂಬಂಧ ಕುದುರಿದರೆ, ಹುಡುಗನ ಕಡೆಯವರಿಂದ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದು ನಾಪತ್ತೆಯಾಗುತ್ತಾರೆ.
ಹೀಗೆ ವಂಚನೆಗೆ ಒಳಗಾದವರು ಹಲವರಿದ್ದಾರೆ. ಇಂಥ ಕೆಲವರು ಮಠಗಳ ಹೆಸರು ಬಳಸಿದ್ದೂ ಇದೆ. ‘ಜಮ್ಮು–ಕಾಶ್ಮೀರದ ಹೆಣ್ಣುಮಕ್ಕಳನ್ನು ಕರೆತಂದು ಮದುವೆ ಮಾಡಿಸುವ ಕಾರ್ಯಕ್ರಮವನ್ನು ನಮ್ಮ ಮಠದ ವತಿಯಿಂದ ಮಾಡಲಾಗುತ್ತಿಲ್ಲ’ ಎಂದು ರಾಮಚಂದ್ರಾಪುರ ಮಠ ಸ್ಪಷ್ಟನೆ ನೀಡುವ ಸ್ಥಿತಿಯೂ ಈಚೆಗೆ ನಿರ್ಮಾಣವಾಗಿತ್ತು.
ಇನ್ನೂ ಕೆಲವೆಡೆ ಮದುವೆ ನಡೆದು, ಮದುಮಗಳು ಕೆಲವೇ ದಿನಗಳಲ್ಲಿ ಮನೆಯ ಒಡವೆ– ಹಣದೊಂದಿಗೆ ಪರಾರಿಯಾದದ್ದೂ ಇದೆ. ಪ್ರತಿ ಹಳ್ಳಿಯಲ್ಲೂ ಇಂಥ ಒಂದೆರಡು ಪ್ರಕರಣಗಳು ಸಿಗುತ್ತವೆ.
ಪೂರಕ ಮಾಹಿತಿ: ಉದಯ ಯು., ಎಂ.ಮಹೇಶ, ಜಿತೇಂದ್ರ, ಕೆ.ಎಸ್.ಗಿರೀಶ, ಓದೇಶ ಸಕಲೇಶಪುರ, ಗಣಪತಿ ಹೆಗಡೆ, ಭೀಮಣ್ಣ ಬಾಲಯ್ಯ
**********
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.