ಮೈಸೂರು: ಜಾನುವಾರುಗಳಿಗೆ ಬರುವ ಕಾಲುಬಾಯಿಜ್ವರ ಸೇರಿದಂತೆ ಇತರೆ ಕಾಯಿಲೆಗಳಿಗೆ ಸರ್ಕಾರ ಹಾಗೂ ರೈತರ ನಿರ್ಲಕ್ಷ್ಯವೇ ಬಹುಮುಖ್ಯ ಕಾರಣ. ಲಸಿಕೆಯ ಮಹತ್ವದ ಜಾಗೃತಿ ರೈತರಲ್ಲಿ ಮೂಡದೇ ಇರುವುದರಿಂದ ಕಾಯಿಲೆ ಉಲ್ಬಣಗೊಳ್ಳುತ್ತಿದೆ.
ದೇಸಿ ತಳಿ ಹಸುಗಳಿಗೆ ಹೋಲಿಸಿದರೆ ಹೈಬ್ರಿಡ್ ತಳಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಹಾಗೂ ಕಾಯಿಲೆಗಳ ತೀವ್ರತೆ ಹೆಚ್ಚು. ಆದರೆ, ’ದೇಸಿ ಹಸುಗಳಿಗೆ ಕಾಯಿಲೆ ಬರುವುದಿಲ್ಲ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ’ ಎಂದು ಬಹುತೇಕ ಪಶುವೈದ್ಯ ತಜ್ಞರು ಹೇಳುತ್ತಾರೆ.
‘ರೋಗನಿರೋಧಕ ಶಕ್ತಿ ದೇಸಿ ಹಸುಗಳಲ್ಲಿ ಹೆಚ್ಚಿದ್ದು, ಹೈಬ್ರಿಡ್ ತಳಿಗಳಾದ ಜರ್ಸಿ, ಎಚ್.ಎಫ್ ಹಾಗೂ ರೆಡ್ ಡೇನ್ ತಳಿಗಳಲ್ಲಿ ಕಡಿಮೆ ಇರುತ್ತದೆ. ಕಾಯಿಲೆ ಹರಡಲು ಆರಂಭವಾದರೆ ಎಲ್ಲ ಬಗೆಯ ತಳಿಗಳ ಜಾನುವಾರುಗಳಿಗೂ ರೋಗ ಬರುತ್ತವೆ. ಆದರೆ, ತೀವ್ರತೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು’ ಎಂದು ಪಶುವೈದ್ಯ ಡಾ.ವೈ.ಡಿ.ರಾಜಣ್ಣ ತಿಳಿಸಿದರು.
‘ಉತ್ತರಪ್ರದೇಶದಲ್ಲಿರುವ ಭಾರತೀಯ ಪಶು ವೈದ್ಯ ಸಂಶೋಧನಾ ಸಂಸ್ಥೆಯು ವರ್ಷಕ್ಕೆ ನಾಲ್ಕು ಬಾರಿ ಲಸಿಕೆ ನೀಡುವುದರಿಂದ ಕಾಲುಬಾಯಿ ಜ್ವರವನ್ನು ನಿರ್ಮೂಲನೆ ಮಾಡಬಹುದು ಎಂದು ಸರ್ಕಾರಕ್ಕೆ ಸಲಹೆ ನೀಡಿದೆ. ಆದರೆ, ಸರ್ಕಾರ ಕನಿಷ್ಠ ಮೂರು ಬಾರಿಯಾದರೂ ನೀಡಬೇಕಿತ್ತು. ಸದ್ಯ, ನೀಡುತ್ತಿರುವುದು ಎರಡು ಬಾರಿ ಮಾತ್ರ’ ಎಂದು ಹಿರಿಯ ಪಶುವೈದ್ಯ ಹಾಗೂ ಪಶು ಆಹಾರ ತಜ್ಞ ಡಾ.ಚನ್ನೇಗೌಡ ಬೇಸರ ವ್ಯಕ್ತಪಡಿಸಿದರು.
‘ಮಾರುಕಟ್ಟೆಯಲ್ಲಿ ಲಸಿಕೆಯ ದರ ಕೇವಲ ₹ 10 ಇದೆ. ರೈತರು ಸ್ವತಃ ಹಣ ನೀಡಿ ಹಸುಗಳಿಗೆ ಲಸಿಕೆ ಕೊಡಿಸಬಹುದು. ಆದರೆ, ಜಾಗೃತಿಯ ಕೊರತೆ ಇರುವುದರಿಂದ ರೈತರು ಲಸಿಕೆ ಕೊಡಿಸುತ್ತಿಲ್ಲ’ ಎಂದು ಅವರು ಹೇಳಿದರು.
ರೈತರ ಓಡಾಟ ಹಾಗೂ ಪಶು ಸಾಗಣೆ ಹೆಚ್ಚುತ್ತಿರುವುದೂ ಪಶು ರೋಗಗಳ ವ್ಯಾಪಕ ಹರಡುವಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಮೈಸೂರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ತಿಮ್ಮಯ್ಯ.
‘ಒಬ್ಬ ರೈತ ಬೆಳಿಗ್ಗೆ ತನ್ನ ಕೊಟ್ಟಿಗೆಯಲ್ಲಿ ಕೆಲಸ ಮಾಡಿ ಮಧ್ಯಾಹ್ನ ಬೇರೆ ಊರಿಗೆ ಹೋಗಿ, ಅಲ್ಲಿ ಹಸುಗಳನ್ನು ಮೈದಡವಿ ಹಾಗೆಯೇ ಸಂಜೆ ಬಂದು ತನ್ನ ಕೊಟ್ಟಿಗೆಯಲ್ಲಿ ಕೆಲಸ ಮಾಡುವುದರಿಂದಲೂ ಸೋಂಕುಗಳು ಹರಡುವ ಸಂಭವ ಹೆಚ್ಚಿರುತ್ತವೆ. ಜತೆಗೆ, ಹಸುಗಳನ್ನು ಸರಿಯಾಗಿ ಪರಿಶೀಲಿಸದೇ ಬೇರೆ ಬೇರೆ ಕಡೆಗಳಿಂದ ಖರೀದಿಸಿ ತರುವುದರಿಂದಲೂ ಸೋಂಕು ಒಂದು ಊರಿನಿಂದ ಮತ್ತೊಂದು ಊರಿಗೆ ಹರಡುತ್ತದೆ’ ಎಂದು ಅವರು ವಿಶ್ಲೇಷಿಸಿದರು.
ಹೈಬ್ರಿಡ್ ತಳಿಗಳಿಂದ ಆಗಷ್ಟೇ ಲಾಭ
‘ಹೈಬ್ರಿಡ್ ತಳಿಗಳಿಂದ ದೊರಕುವ ಲಾಭ ತಾತ್ಕಾಲಿಕ. ಕೆಲವೇ ಕೆಲವು ವರ್ಷಗಳಲ್ಲಿ, ರಾಸುಗಳು ಸಾವನ್ನಪ್ಪುತ್ತವೆ ಇಲ್ಲವೇ ರೋಗಗಳು ಹೆಚ್ಚಾಗಿ ನಷ್ಟ ಸಂಭವಿಸುತ್ತದೆ. ಅದಕ್ಕೆ ಪ್ರಮುಖ ಕಾರಣ ಪಶು ವೈದ್ಯರ ಕೊರತೆ’ ಎಂದು ಬೆಳಗಾವಿ ಜಿಲ್ಲೆಯ ಸಂಕೋನಟ್ಟಿ ಗ್ರಾಮದ ಹೈನುಗಾರಿಕೆ ರೈತ ಮುತ್ತಣ್ಣ ಹೇಳುತ್ತಾರೆ.
ವರ್ಷವಿಡೀ ಜಾನುವಾರುಗಳಿಗೆ ರೋಗ
‘ಹೈಬ್ರಿಡ್ ತಳಿಗಳನ್ನು ಸಾಕುವ ಮೊದಲೇ ಕಾಲುಬಾಯಿ ರೋಗ ಇತ್ತು. ದೇಸಿ ತಳಿಗಳಲ್ಲಿ ಫೆಬ್ರುವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ, ತೀವ್ರತೆ ಕಡಿಮೆ ಇರುತ್ತಿತ್ತು. ಬದಲಾದ ಆಹಾರ ಪದ್ಧತಿ ಮತ್ತು ವಾತಾವರಣದ ವ್ಯತ್ಯಾಸದಿಂದ
ಜಾನುವಾರುಗಳಲ್ಲಿ ವರ್ಷಪೂರ್ತಿ ರೋಗಗಳು ಕಾಣಿಸಿಕೊಳ್ಳುತ್ತಿವೆ. ರೋಗ ಇರುವ ಒಂದು ಜಾನುವಾರನ್ನು ಗ್ರಾಮಕ್ಕೆ ತಂದರೆ, ಊರಿನ ಎಲ್ಲಾ ಜಾನುವಾರಿಗೂ ಸೋಂಕು ತಗುಲುತ್ತಿದೆ. ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಲಸಿಕೆಯನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ’ ಎಂದು ಹಾಸನ ಜಿಲ್ಲೆಯ ಹೈನುಗಾರ ಸಂತೋಷ್ ವಿಷಾದಿಸಿದರು.
ಇವುಗಳನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.