ಮೆರಿಟ್ ವಿದ್ಯಾರ್ಥಿಗಳನ್ನು ದಾಳವಾಗಿ ಬಳಸಿಕೊಂಡು ಸರ್ಕಾರಿ ವೈದ್ಯ ಕೋರ್ಸುಗಳ ಸೀಟುಗಳನ್ನು ಲಪಟಾಯಿಸುವ ದಂಧೆ ದಶಕಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಈ ಅಕ್ರಮ ಜಾಲದಲ್ಲಿ ಕೋಟ್ಯಂತರ ಮೊತ್ತದ ಕಪ್ಪುಹಣ ಕೈ ಬದಲಾಗುತ್ತಿದೆ. ನಿರ್ದಿಷ್ಟ ಪ್ರಕರಣಗಳ ಬೆನ್ನು ಹತ್ತಿ ಆದಾಯತೆರಿಗೆ ಇಲಾಖೆ ಇತ್ತೀಚೆಗೆ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವ ಬೆಳವಣಿಗೆಗಳ ಸುತ್ತ ಈ ವಾರದ ಒಳನೋಟ...
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ನಡೆಸಿರುವ ದಾಳಿ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ‘ಸೀಟ್ ಬ್ಲಾಕಿಂಗ್’ ರೂಪದಲ್ಲಿ ನಡೆಸುತ್ತಿರುವ ‘ವ್ಯಾಪಾರ’ ಮತ್ತು ಮೆರಿಟ್ ವಿದ್ಯಾರ್ಥಿಗಳ ಶೋಷಣೆಯನ್ನು ಜಗಜ್ಜಾಹೀರುಗೊಳಿಸಿದೆ.
ದಶಕಗಳಿಂದಲೂ ನಡೆಯುತ್ತಿರುವ ‘ಸೀಟ್ ಬ್ಲಾಕಿಂಗ್’ ದಂಧೆ ಬಗ್ಗೆ ಸರ್ಕಾರಗಳಿಗೆ ಮಾಹಿತಿ ಇದ್ದರೂ ಗೊತ್ತಿಲ್ಲದಂತೆ ವರ್ತಿಸುತ್ತಿವೆ. ಖಾಸಗಿ ಆಡಳಿತ ಮಂಡಳಿಗಳು ಮೆರಿಟ್ ವಿದ್ಯಾರ್ಥಿಗಳನ್ನೇ ದಾಳವಾಗಿ ಬಳಸಿ ಬೇರೊಬ್ಬ ಮೆರಿಟ್ ವಿದ್ಯಾರ್ಥಿಯ ಸೀಟು ಕಸಿದುಕೊಂಡು ‘ಹರಾಜು’ ಮೂಲಕ ಸೀಟು ವಿಕ್ರಯ ಮಾಡಿಕೊಳ್ಳುತ್ತಿವೆ.
ಕಳೆದ ಹಲವಾರು ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಸೀಟ್ ಬ್ಲಾಕಿಂಗ್ ದಂಧೆ ತೀವ್ರ ಚರ್ಚೆಗೆ ಗ್ರಾಸವಾಗಿರುವುದು ಮಾತ್ರ ರಾಜ್ಯದ ಎರಡು ಡೀಮ್ಡ್ ಮೆಡಿಕಲ್ ಯೂನಿವರ್ಸಿಟಿಗಳ ಮೇಲೆ ಐಟಿ ದಾಳಿ ನಡೆದ ನಂತರವಷ್ಟೇ. ಆದರೆ, ಈ ದಂಧೆ ದಶಕಗಳಿಂದ ತೆರೆಮರೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಲೇ ಇದೆ.
‘ಸೀಟ್ ಬ್ಲಾಕಿಂಗ್ ಅನ್ನೋ ಪದವೇ ಇಲ್ಲ, ಇದೊಂದು ಅಪರಾಧ ಮತ್ತು ವಂಚನೆ’, ಎನ್ನುತ್ತಾರೆ ಕರ್ನಾಟಕ ಹೈಕೊರ್ಟ್ ನ ನಿವೃತ್ತ ನ್ಯಾಯಮೂರ್ತಿ ಮತ್ತು ರಾಜ್ಯ ಸರ್ಕಾರ 2017ರಲ್ಲಿ ನೇಮಿಸಿದ್ದ ವೃತ್ತಿ ಶಿಕ್ಷಣ ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷರೂ ಆಗಿದ್ದ ನ್ಯಾ. ಡಿ.ವಿ. ಶೈಲೇಂದ್ರಕುಮಾರ್.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸೀಟ್ ಬ್ಲಾಕಿಂಗ್ ಆರೋಪ ಹೆಚ್ಚು ಕೇಳಿ ಬಂದಿರುವುದು ಕರ್ನಾಟಕದಲ್ಲೇ. ನಮ್ಮಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಿದಂತೆಲ್ಲಾ ವೈದ್ಯ ಸೀಟು ಬಯಸಿ ಬರುವ ಹೊರ ರಾಜ್ಯದ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗಿದೆ. ಮೂಲಗಳ ಪ್ರಕಾರ ರಾಜ್ಯದಲ್ಲಿ ಹೆಚ್ಚುತ್ತಿರುವ ವೈದ್ಯ ಸೀಟುಗಳ ಬೇಡಿಕೆಯೇ ಸೀಟ್ ಬ್ಲಾಕಿಂಗ್‌ನ ಮೂಲ...!
ಅಂಕಿ - ಸಂಖ್ಯೆಗಳನ್ನು ಗಮನಿಸಿ ದಾಗ, ವೈದ್ಯಕೀಯ ಕಾಲೇಜುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ, ಸರ್ಕಾರಿ ಕಾಲೇಜುಗಳಿಗಿಂತ ಖಾಸಗಿ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿರುವುದನ್ನು ಪರಿಶೀಲಿಸಿದರೆ ‘ಬ್ಲಾಕಿಂಗ್’ ಆರೋಪಗಳಿಗೆ ಪುಷ್ಟಿ ನೀಡುತ್ತಿವೆ.
ಸೀಟ್ ಬ್ಲಾಕಿಂಗ್ ಬಗ್ಗೆ ಅಧಿಕೃತವಾಗಿ ಯಾವುದೇ ವಿದ್ಯಾರ್ಥಿ-ಪೋಷಕರೂ ಇದುವರೆಗೆ ವೈದ್ಯಶಿಕ್ಷಣ ಇಲಾಖೆ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ದೂರು ದಾಖಲಿಸಿಲ್ಲ (ಪ್ರಧಾನಿ ಸಹಿತ ಅನೇಕರಿಗೆ ಪತ್ರ ಬರೆದು ದೂರು ನೀಡಿರುವ ನಿದರ್ಶನಗಳಿವೆ). ಅಧಿಕಾರಿಗಳ ಪ್ರಕಾರ ಅಧಿಕೃತವಾಗಿ ಸೀಟ್ ಬ್ಲಾಕಿಂಗ್ ಎಂದು ಹೇಳಲು ಸರ್ಕಾರದ ಬಳಿಯೂ ಯಾವುದೇ ದಾಖಲೆಗಳಿಲ್ಲ.
ಅಲ್ಲದೆ, ನ್ಯಾಯಾಲಯದ ತೀರ್ಪಿನ ಪ್ರಕಾರ ಕೊನೆಯ ಸುತ್ತಿನ ಸೀಟು ಹಂಚಿಕೆ ಬಳಿಕ ಉಳಿಯುವ ಸೀಟುಗಳನ್ನು (‘ಸ್ಟ್ರೇ’ ಸೀಟು) ತಮ್ಮ ಹಂತದಲ್ಲೇ ಭರ್ತಿ ಮಾಡಲು ಕಾಲೇಜು ಆಡಳಿತ ಮಂಡಳಿಗಳಿಗೆ ಅವಕಾಶವಿದೆ. ಆದರೆ, ಆ ಸೀಟುಗಳನ್ನು ಭರ್ತಿ ಮಾಡುವಾಗ ಖಾಸಗಿ ಕಾಲೇಜುಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳ ಪಟ್ಟಿ ಪಡೆದುಕೊಳ್ಳಬೇಕು.
‘ಆದರೆ ಹಲವು ಪ್ರಕರಣಗಳಲ್ಲಿ ಕಾಲೇಜು ಆಡಳಿತ ಮಂಡಳಿಯವರು ಸಮಯ ಅಭಾವದ ನೆಪವೊಡ್ಡಿ ಅವರ ಹಂತದಲ್ಲೇ ಖಾಲಿ ಉಳಿದ (ಸರೆಂಡರ್) ಸೀಟುಗಳನ್ನು ಭರ್ತಿ ಮಾಡಿಕೊಳ್ಳುತ್ತಾರೆ. ಮೇಲ್ನೋಟಕ್ಕೆ ಇದು ಬ್ಲಾಕಿಂಗ್ ಎಂದು ಕಂಡು ಬಂದರೂ, ಅದನ್ನು ದೃಢೀಕರಿಸಲು ಇಲಾಖೆ ಬಳಿ ಯಾವುದೇ ದಾಖಲೆಗಳೂ ಇರುವುದಿಲ್ಲ’ ಎನ್ನುತ್ತಾರೆ ವೈದ್ಯಕೀಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು.
ಇದನ್ನೂ ಓದಿ...ಒಳನೋಟ | ವೈದ್ಯಶಿಕ್ಷಣವನ್ನು ಹರಾಜಿಗಿಟ್ಟ ಖಾಸಗಿ ಸಂಸ್ಥೆಗಳು
ಅಧಿಕೃತವಾಗಿ ಬ್ಲಾಕಿಂಗ್ ಎಂದು ಹೇಳಲು ಸಾಧ್ಯವಿಲ್ಲವಾದರೂ, ಅಂದಾಜಿನ ಪ್ರಕಾರ ಪ್ರತಿ ವರ್ಷ ಇದು ಕೋಟಿಗಟ್ಟಲೆ (ಅ)ವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಬ್ಲಾಕ್ ಮಾಡಿರುವ ಸೀಟು ಪ್ರತಿ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಕಡಿಮೆ ಎಂದರೂ ₹60 ಲಕ್ಷದಿಂದ ಒಂದು ಕೋಟಿಗೂ ಅಧಿಕ ಮೊತ್ತಕ್ಕೆ ಬಿಕರಿಯಾಗುತ್ತವೆ. ದುರದೃಷ್ಟವಶಾತ್ ಈ ಬ್ಲಾಕಿಂಗ್ ದಂಧೆಗೆ ಬಲಿಯಾಗುತ್ತಿರುವವರು ಮೆರಿಟ್ ಸ್ಟೂಡೆಂಟ್ಸ್.
ದೇಶಾದ್ಯಂತ ಮೆಡಿಕಲ್ ಪ್ರವೇಶಕ್ಕೆ ಏಕರೂಪದ ಪರೀಕ್ಷೆ ನೀಟ್ ಜಾರಿಯಾಗಿದ್ದೇ ವೈದ್ಯ ಸೀಟು ಹಂಚಿಕೆಯಲ್ಲಿ ನಡೆಯುತ್ತಿದ್ದ ಅವ್ಯವಹಾರ ಮತ್ತು ಅಕ್ರಮಗಳನ್ನು ತಡೆಯಲು. ಆದರೆ, ನೀಟ್ ಜಾರಿ ನಂತರವೂ ಬ್ಲಾಕಿಂಗ್ ದಂಧೆ ಜೀವಂತವಾಗಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಮನಸ್ಸು ಮಾಡಿದರೆ ಬ್ಲಾಕಿಂಗ್ ಪೀಡೆಯನ್ನು ಸಂಪೂರ್ಣವಾಗಿ ಹತ್ತಿಕ್ಕಬಹುದು ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲರೊಬ್ಬರು.
ನ್ಯಾ. ಶೈಲೇಂದ್ರ ಕುಮಾರ್ ಅವರ ಪ್ರಕಾರ, ‘ಇಂತಹ ಅಪರಾಧಗಳು ಕಾಲೇಜು ಆಡಳಿತ ಮಂಡಳಿ, ಕೆಲ ಇಲಾಖಾ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಸಹಕಾರವಿಲ್ಲದೇ ನಡೆಸಲು ಸಾಧ್ಯವೇ ಇಲ್ಲ. ಸೀಟು ಪಡೆದು, ನಂತರ ಕೊನೇ ಕ್ಷಣದಲ್ಲಿ ಹಿಂತಿರುಗಿಸಿದ ವಿದ್ಯಾರ್ಥಿಗಳ ಜಾಡು ಹಿಡಿದು ತನಿಖೆ ನಡೆಸಿದರೆ ಈ ದಂಧೆ ಸಂಪೂರ್ಣವಾಗಿ ಬೆಳಕಿಗೆ ಬರುತ್ತದೆ ಮತ್ತು ಇದರ ಹಿಂದಿರುವ ಅಪರಾಧಿಗಳನ್ನು ಹೆಡೆಮುರಿ ಕಟ್ಟಲು ಸಾಧ್ಯ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿ ಮುಖ್ಯ’.ಎನ್ನುತ್ತಾರೆ.
*
‘ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ನಡೆದಿದೆಯೇ ಎಂಬುದು ಆದಾಯ ತೆರಿಗೆ ಇಲಾಖೆ ವಿಚಾರಣೆ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ. ಸೀಟು ಬ್ಲಾಕಿಂಗ್ ಬಗ್ಗೆ ದೂರು ಆರೋಪಗಳಿದ್ದರೂ ಒಪ್ಪಂದದಲ್ಲೇ ಅವಕಾಶ ಇರುವ ಕಾರಣ ತಪ್ಪಾಗಿದೆ ಅಥವಾ ದುರ್ಬಳಕೆ ಆಗಿದೆ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ಐಟಿ ಇಲಾಖೆ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ಗೊತ್ತಾಗಬೇಕಿದೆ’
-ಡಾ. ಅಶ್ವತ್ಥನಾರಾಯಣ, ಸಚಿವರು, ವೈದ್ಯಕೀಯ ಶಿಕ್ಷಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.