ADVERTISEMENT

ಒಳನೋಟ: ಮಕ್ಕಳ ಆಯೋಗಕ್ಕಿಲ್ಲ ಸರ್ಕಾರದ ಬಲ

ಮಕ್ಕಳ ಹಕ್ಕುಗಳ ರಕ್ಷಣೆಗೆ ಇರುವ ಆಯೋಗವೇ ದುರ್ಬಲ: ₹4 ಕೋಟಿಯಿಂದ ₹1 ಕೋಟಿಗೆ ಇಳಿದ ಅನುದಾನ

ವಿಜಯಕುಮಾರ್ ಎಸ್.ಕೆ.
Published 25 ಸೆಪ್ಟೆಂಬರ್ 2021, 22:13 IST
Last Updated 25 ಸೆಪ್ಟೆಂಬರ್ 2021, 22:13 IST
.
.   

ಬೆಂಗಳೂರು: ಅನುದಾನ ಇಲ್ಲ, ಅನುಭವಿ ವಕೀಲರಿಲ್ಲ, ‌‌‌ಪೂರ್ಣಪ್ರಮಾಣದಲ್ಲಿ ಸಿಬ್ಬಂದಿ ಇಲ್ಲ, ಅಧ್ಯಕ್ಷ–ಸದಸ್ಯರಿಗೆ ಸೂಕ್ತ ಸ್ಥಾನಮಾನಗಳಿಲ್ಲ...

ಹೀಗೆ, ಇಲ್ಲಗಳ ನಡುವೆ ಮಕ್ಕಳ ಹಕ್ಕುಗಳ ರಕ್ಷಣೆಗೆ ತಿಣುಕಾಡುತ್ತಿರುವ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ದುಃಸ್ಥಿತಿ ಇದು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು 2009ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಒಬ್ಬರು ಅಧ್ಯಕ್ಷರು ಮತ್ತು ಆರು ಸದಸ್ಯರನ್ನು ಒಳಗೊಂಡ ಈ ಆಯೋಗ, ಅರೆ ನ್ಯಾಯಿಕ ಅಧಿಕಾರ ಹೊಂದಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣದಲ್ಲಿ ದೂರುಗಳನ್ನು ಪಡೆದು ಅಥವಾ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುವ ಅಧಿಕಾರ ಈ ಆಯೋಗಕ್ಕೆ ಇದೆ.

ADVERTISEMENT

ಹಕ್ಕುಗಳ ರಕ್ಷಣಾ ಆಯೋಗ ಎಂಬುದನ್ನು ಹೆಸರಿನಲ್ಲೇ ಸೂಚಿಸಿರುವ ಏಕೈಕ ಆಯೋಗ ಇದು. ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ), ಬಾಲನ್ಯಾಯ(ಜೆಜೆ) ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಗಳ ಜಾರಿ ಮತ್ತು ಮೇಲುಸ್ತುವಾರಿ ನಡೆಸುವ ಅಧಿಕಾರ ಆಯೋಗಕ್ಕಿದೆ.

ವರ್ಷದಿಂದ ವರ್ಷಕ್ಕೆ ಸಂಸ್ಥೆಯನ್ನು ಸಬಲಗೊಳಿಸುವ ಬದಲು ಸರ್ಕಾರವೇ ದುರ್ಬಲಗೊಳಿಸುತ್ತಿದೆ. ‘ಮಕ್ಕಳಿರಲಿ, ಹಕ್ಕು ಕೇಳದಿರಲಿ’ ಎಂಬ ಧೋರಣೆಯಂತೆ ಸರ್ಕಾರ ನಡೆದುಕೊಳ್ಳುತ್ತಿದೆ ಎನ್ನುತ್ತಾರೆ ಮಕ್ಕಳ ಹಕ್ಕುಗಳ ತಜ್ಞರು.

ಇತ್ತೀಚಿನ ವರ್ಷಗಳಲ್ಲಿ ಈ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ಸರ್ಕಾರ ಕಡಿಮೆ ಮಾಡಿದೆ. ನಾಲ್ಕು ವರ್ಷಗಳ ಹಿಂದೆ ₹4 ಕೋಟಿ ತನಕ ನೀಡುತ್ತಿದ್ದ ಅನುದಾನವನ್ನು ಈಗ ₹1 ಕೋಟಿಗೆ ಇಳಿಸಿದೆ. ಈ ಅನುದಾನದಲ್ಲಿ ಬಹುತೇಕ ಹಣ ಸಿಬ್ಬಂದಿ ವೇತನ ಮತ್ತು ಆಡಳಿತ ನಿರ್ವಹಣೆಗೆ ವೆಚ್ಚವಾಗುತ್ತಿದೆ. ಆಯೋಗದ ನಿಯಮಗಳ ಪ್ರಕಾರ ಹಾಕಿಕೊಂಡಿರುವ ಚಟುವಟಿಕೆಗಳನ್ನು ಮುನ್ನಡೆಸಲು ಅನುದಾನ ಸಾಕಾಗುತ್ತಿಲ್ಲ ಎಂದು ಆಯೋಗ ಹಲವು ವರ್ಷಗಳಿಂದ ಹೇಳುತ್ತಲೇ ಇದೆ. ಬಜೆಟ್‌ನಲ್ಲಿ ನಿಗದಿ ಮಾಡಿದಷ್ಟು ಅನುದಾನವನ್ನೂ ನೀಡದೆ ಮಕ್ಕಳ ಮಕ್ಕಳ ಹಕ್ಕುಗಳ ರಕ್ಷಣೆ ವಿಷಯವನ್ನು ಸರ್ಕಾರ ಕಡೆಗಣಿಸಿದೆ ಎನ್ನುತ್ತಾರೆ ಮಕ್ಕಳ ಹಕ್ಕುಗಳ ಹೋರಾಟಗಾರರು.‌

ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ನಡೆಸುವ ಸಂವಿಧಾನ ಬದ್ಧ ಸಂಸ್ಥೆಯಲ್ಲಿ ಕೇವಲ 12 ಮಂಜೂರಾತಿ ಹುದ್ದೆಗಳಿವೆ. ಅದರಲ್ಲೂ ನಾಲ್ಕು ಹುದ್ದೆಗಳು ಖಾಲಿ ಇವೆ. ವಿಷಯ ತಜ್ಞರ ಕೊರತೆ ಇದ್ದು, ಸದ್ಯ ಕೆಲವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಅತ್ಯಗತ್ಯವಾಗಿ ಬೇಕಾಗಿರುವ ನುರಿತ ವಕೀಲರ ಕೊರತೆ ಇದೆ. ಇಬ್ಬರು ಮಾತ್ರ ವಕೀಲರಿದ್ದು, ಅವರ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗುತ್ತಿದೆ.

ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತ ದೂರುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಯೋಗಕ್ಕೆ ಬರುತ್ತಿವೆ. ಕೋವಿಡ್‌ ನಂತರ ಹೊಸ, ಹೊಸ ರೀತಿಯ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ. ಅವುಗಳನ್ನು ನಿರ್ವಹಿಸಲು ವಿಷಯ ತಜ್ಞರು ಮತ್ತು ವಕೀಲರನ್ನು ಒಳಗೊಂಡು ಮಾನವ ಸಂಪನ್ಮೂಲ ಆಯೋಗದಲ್ಲಿ ಇಲ್ಲ.

‘ಅತ್ಯಂತ ಸೂಕ್ಷ್ಮ ಕಾಯ್ದೆಗಳ ಮೇಲುಸ್ತುವಾರಿಯನ್ನು ಆಯೋಗ ನೋಡಿಕೊಳ್ಳುತ್ತಿರುವ ಕಾರಣ ನುರಿತ ವಕೀಲರ ಅಗತ್ಯವಿದೆ’ ಎಂದು ಆಯೋಗದ ಮಾಜಿ ಸದಸ್ಯ ಮರಿಸ್ವಾಮಿ ಹೇಳಿದರು.

ಅಧ್ಯಕ್ಷ–ಸದಸ್ಯರ ಸೂಕ್ತ ಸ್ಥಾನಮಾನಗಳಲ್ಲಿ ಸದಸ್ಯರಿಗೆ ವೇತನ ಮತ್ತು ಸಾರಿಗೆ ವ್ಯವಸ್ಥೆ ಇಲ್ಲ. ಅನುದಾನ ಹೆಚ್ಚಳ, ಅಗತ್ಯ ಸಿಬ್ಬಂದಿ, ವಕೀಲರ ನೇಮಕ ಸೇರಿ ಆಯೋಗದ ಬಲ ಹೆಚ್ಚಿಸಿದರೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಆಯೋಗ ಇನ್ನಷ್ಟು ಸಮರ್ಥವಾಗಿ ಕೆಲಸ ಮಾಡಲು ಮತ್ತು ಹಕ್ಕುಗಳ ಉಲ್ಲಂಘನೆ ತಡೆಯಲು ಜಾಗೃತಿ ಮೂಡಿಸಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ವೈದ್ಯರ ಅಭಿಪ್ರಾಯ
‘ಅರ್ಥೈಸಿಕೊಳ್ಳುವವರು ಬೇಕು’
ವಿಭಿನ್ನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದಾಖಲಾಗುತ್ತಾರೆ. ಅವರ ಸಮಸ್ಯೆಯನ್ನು ಅರಿತು ಸೂಕ್ತ ಪರಿಹಾರ ಸೂಚಿಸಲು ನಿರ್ದಿಷ್ಟ ಕ್ಷೇತ್ರದಲ್ಲಿ ತಿಳಿವಳಿಕೆ, ಅನುಭವವುಳ್ಳ ಆಪ್ತಸಮಾಲೋಚಕರನ್ನು ನೇಮಿಸಬೇಕು. ಲೈಂಗಿಕ ಶೋಷಣೆಗೆ ಒಳಗಾದ ಮಕ್ಕಳ ನೋವು, ಆತಂಕ, ದುಗುಡವನ್ನು ಅರ್ಥ ಮಾಡಿಕೊಳ್ಳುವವರು ಬೇಕು. ಬಾಲ ಕಾರ್ಮಿಕರಾಗಲು ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ಕಳ್ಳತನಕ್ಕೆ ಇಳಿಯಲು ಕಾರಣವಾಗುವ ಅಂಶಗಳನ್ನು ಅರ್ಥೈಸಿಕೊಂಡು ಸಮಾಲೋಚನೆ ನಡೆಸುವವರು ಬೇಕು.
–ಡಾ. ರಾಜನ್‌ ದೇಶಪಾಂಡೆ,ಚಿಕ್ಕಮಕ್ಕಳ ತಜ್ಞ, ಧಾರವಾಡ

ಸಾಮಾನ್ಯ ತಜ್ಞರು ಬೇಡ
ಮಕ್ಕಳ ಆರೋಗ್ಯದ ವಿಷಯದಲ್ಲಿ ಜ್ಞಾನ ಹೊಂದಿರುವ, ತರಬೇತಿ ಹೊಂದಿರುವವರನ್ನೇ ಸಮಾಲೋಚಕರನ್ನಾಗಿ ಮಾಡಬೇಕು. ಸಾಮಾನ್ಯ ತಜ್ಞರಿಗಿಂತ ನಿರ್ದಿಷ್ಟ ಸಮಸ್ಯೆಗಳ ತಜ್ಞರನ್ನು ನೇಮಿಸುವುದು ಒಳಿತು. ಇಲ್ಲದಿದ್ದರೆ, ಅಂತಹವರಿಗೆ ನಿರ್ದಿಷ್ಟ ಸಮಸ್ಯೆಗಳ ಕುರಿತು ವಿಶೇಷ ತರಬೇತಿ ನೀಡಿ, ನೇಮಿಸಿಕೊಳ್ಳಬೇಕು.
-ಡಾ.ಪ್ರಕಾಶ ಕೆ. ವಾರಿ, ಕಿಮ್ಸ್‌,ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.