ದಾವಣಗೆರೆ: ತಿರುಪತಿಯ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಲಾಡು ಸಿದ್ಧಪಡಿಸಲು ತರಿಸಿದ್ದ ತುಪ್ಪದಲ್ಲಿ ಕಲಬೆರಕೆ ಆಗಿದ್ದು ದೇಶದಾದ್ಯಂತ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಾದ್ಯಂತ ಸಂಚಲನವನ್ನೇ ಮೂಡಿಸಿದೆ.
ಆಂಧ್ರಪ್ರದೇಶದಲ್ಲಿ ಈ ಹಿಂದೆ ಅಸ್ತಿತ್ವ ದಲ್ಲಿದ್ದ ವೈಎಸ್‌ಆರ್ ಕಾಂಗ್ರೆಸ್‌ನ ಜಗನ್‌ಮೋಹನ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಲಾಡು ತಯಾರಿಕೆಗೆ ತರಿಸಿದ್ದ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಮತ್ತು ಮೀನಿನ ಎಣ್ಣೆಯ ಅಂಶಗಳು ಪತ್ತೆಯಾಗಿರುವುದನ್ನು ಗುಜರಾತ್‌ನ ಆನಂದ್‌ನಲ್ಲಿರುವ ಜಾನುವಾರು ಹಾಗೂ ಆಹಾರ ಕುರಿತ ವಿಶ್ಲೇಷಣೆ ಮತ್ತು ಕಲಿಕಾ ಕೇಂದ್ರದ ಪ್ರಯೋಗಾಲಯದ ವರದಿ ತಿಳಿಸಿದೆ.
ಆಹಾರದಲ್ಲಿ ಕಲಬೆರಕೆ ಸಾರ್ವತ್ರಿಕವಾಗಿದ್ದು, ರುಚಿ ಹೆಚ್ಚಳಕ್ಕೆ ಪೂರಕವಾದ, ವಿಷಕಾರಿ ಅಂಶಗಳಿರುವ, ನಿಷೇಧಿತ ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುವುದು ಒಂದೆಡೆಯಾದರೆ, ಲಾಭಕೋರತನವನ್ನೇ ಗುರಿಯಾಗಿಸಿಕೊಂಡು, ಶುದ್ಧವಾದ ಆಹಾರದ ಹದ ಕೆಡಿಸುತ್ತಿರುವ ಬಹುದೊಡ್ಡ ‘ಮಾಫಿಯಾ’ ಸಕ್ರಿಯವಾಗಿದೆ. ಕಲಬೆರಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದ್ದ ಆಡಳಿತ ವ್ಯವಸ್ಥೆ ನಿಷ್ಕ್ರಿಯವಾಗಿರುವುದು ಬಹಿರಂಗ ಸತ್ಯವಾಗಿದೆ.
ಹೋಟೆಲ್, ಬೀದಿಬದಿಯ ತಿಂಡಿ ಅಂಗಡಿಗಳಲ್ಲಿ ಗ್ರಾಹಕರನ್ನು ಸೆಳೆಯಲು, ಕಲಬೆರಕೆ ನಡೆಯುತ್ತದೆ. ಅದು ಆರೋಗ್ಯಕ್ಕೆ ಮಾರಕ ಎಂಬುದನ್ನರಿತು ಎಚ್ಚೆತ್ತುಕೊಂಡ ಸರ್ಕಾರಗಳು, ಕೆಲವು ನಿಷೇಧಿತ ಪದಾರ್ಥ ಬಳಸದಂತೆ ತಡೆಯಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಜಾರಿಗೆ ಆದೇಶ ನೀಡಲಾಗಿದೆ. ಹೋಟೆಲ್‌ಗಳ ಮೇಲೆ ಅಧಿಕಾರಿಗಳು ನಿಗಾ ಇರಿಸಿ, ಕಾನೂನು ಕ್ರಮ ಕೈಗೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ಅಂಥ ಪ್ರಯತ್ನ ಆಗಿದೆ ಎಂದು ಅಧಿಕಾರಿಗಳ ವಲಯ ತಿಳಿಸುತ್ತದಾದರೂ, ಸೂಕ್ತ ಕ್ರಮ ಕೈಗೊಂಡ ಬಗ್ಗೆ ಪೂರಕವಾದ ಪುರಾವೆಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.
ಬಾಳೆ, ಮಾವು, ದ್ರಾಕ್ಷಿ, ಸೇಬು ಸೇರಿದಂತೆ ನಿತ್ಯವೂ ಜನರು ಬಳಸುವ ಹಣ್ಣುಗಳು ಬೇಗನೇ ಮಾಗಲಿ ಎಂದು ಕ್ಯಾಲ್ಶಿಯಂ ಕಾರ್ಬೈಡ್ ರಾಸಾಯನಿಕವನ್ನು ಬಳಸುವುದು ಜಗಜ್ಜಾಹಿರ. ಇದರ ತಡೆಗೆ ಕ್ರಮ ಆಗದಿರುವುದು ಆರೋಗ್ಯಕ್ಕೆ ಮಾರಕವಾದ ದುಷ್ಕೃತ್ಯ ಅವ್ಯಾಹತವಾಗಿ ನಡೆಯಲು ಕಾರಣ.
ಇನ್ನು ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ, ಬೆಲ್ಲ, ರವೆ, ಅಡುಗೆ ಎಣ್ಣೆ, ಹಾಲು, ತುಪ್ಪ, ಮೊಸರು, ಮೊಟ್ಟೆ, ಮಾಂಸ, ಮೀನು, ಅಡಿಕೆ, ಮಸಾಲೆ ಮತ್ತಿತರ ಪದಾರ್ಥ ಪರಿಶುದ್ಧವಾಗಿಲ್ಲ, ಎಲ್ಲಾ ಕಡೆ ಕಲಬೆರಕೆ ಎಂಬುದು ಸಾಮಾನ್ಯ ಎಂಬಂತಾಗಿದೆ.
ಪಡಿತರ ವ್ಯವಸ್ಥೆ ಅಡಿ ಫಲಾನುಭವಿಗಳಿಗೆ ಉಚಿತವಾಗಿ ಸಿಗುವ ಅಕ್ಕಿಯನ್ನು ಖರೀದಿಸಿ ಮರು ಮಾರಾಟ ಮಾಡುವ ದೊಡ್ಡ ಜಾಲವೇ ಸಕ್ರಿಯವಾಗಿದೆ. ₹ 10ರಿಂದ ₹ 15ಕ್ಕೆ ಒಂದು ಕೆ.ಜಿ. ಅಕ್ಕಿ ಖರೀದಿಸಿ, ಪಾಲಿಶ್ ಮಾಡಿ ಅದನ್ನು ಪ್ಯಾಕ್ ಮಾಡಿ, ಸಾಗಿಸುವ ಜಾಲ ಬಹುತೇಕ ಎಲ್ಲಾ ನಗರಗಳಲ್ಲಿದೆ.
ಗ್ರಾಮ, ನಗರ ಪ್ರದೇಶಗಳಲ್ಲಿ ಪಡಿತರ ಅಕ್ಕಿ ಖರೀದಿಸಲಾಗುತ್ತದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರೈತರಿಗಾಗಿಯೇ ಇರುವ ‘ನೋಂದಣಿಯಾಗದ ಡೀಲರ್’ (ಅನ್ ರಿಜಿಸ್ಟರ್ಡ್ ಡೀಲರ್) ಎಂಬ ಹೆಸರಿನ ಬಿಲ್ ಪಡೆಯುವ (ಇದಕ್ಕಾಗಿ ನಿಗದಿಯಾಗಿರುವ ಅತ್ಯಂತ ಕಡಿಮೆ ಶುಲ್ಕವನ್ನೂ ಭರಿಸಲಾಗುತ್ತದೆ) ಮೂಲಕ ಅಕ್ರಮ ಅಕ್ಕಿಗೆ ‘ಅಧಿಕೃತತೆಯ’ ಮುದ್ರೆ ಪಡೆದು ಲಾರಿಗಳಲ್ಲಿ ತುಂಬಿ ಸಾಗಿಸಿ ಲಾಭ ಮಾಡಿಕೊಳ್ಳಲಾಗುತ್ತಿದೆ.
ಇಂಥ ಅಕ್ಕಿ ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಮತ್ತೆ ಕೇಂದ್ರ ಸರ್ಕಾರದ ಗೋದಾಮು ಸೇರಿ, ಅಲ್ಲಿಂದ ಆಯಾ ರಾಜ್ಯಗಳಿಗೆ ತಲುಪಿ ಮತ್ತೆ ಪಡಿತರ ವ್ಯವಸ್ಥೆಯಡಿ ಮತ್ತೆ ಪೂರೈಕೆಯಾಗುತ್ತಿದೆ.
ಇನ್ನು, ಸ್ಥಳೀಯವಾಗಿಯೇ ಇರುವ ಕೆಲವು ಅಕ್ಕಿ ಗಿರಣಿಗಳಲ್ಲಿ, ಈ ರೀತಿ ಅಕ್ರಮವಾಗಿ ಖರೀದಿಸಲಾದ ಪಡಿತರ ಅಕ್ಕಿಗೆ ಪಾಲಿಷ್ ಮಾಡಿ, ಅಧಿಕ ದರದ ಅಕ್ಕಿಯಲ್ಲಿ ಬೆರೆಸುವ ದಂಧೆ ನಡೆಯುತ್ತದೆ. ಇದೇ ಅಕ್ಕಿಯನ್ನು ಕೆಲವು ಕಡೆ ದೋಸೆ ಹಿಟ್ಟು ಮಾಡಲೂ ಬಳಸಲಾಗುತ್ತಿದೆ. ಗೋಧಿಯಿಂದ ಸಿದ್ಧವಾಗುವ ರವೆಯಲ್ಲಿ ಇಂಥ ಅಕ್ಕಿಯ ರವೆಯನ್ನು ಬೆರೆಸಿ ಮಾರಾಟ ಮಾಡುವ ಮೂಲಕವೂ ಲಾಭ ಮಾಡಿಕೊಳ್ಳಲಾಗುತ್ತಿದೆ. ಗೋಧಿ ರವೆಯಲ್ಲಿ ಬೆರೆಸಲಾದ ಅಕ್ಕಿ ರವೆಯ ವ್ಯತ್ಯಾಸ ಅರಿಯಲೂ ಆಗದು ಎಂಬ ಕಾರಣಕ್ಕೇ ಇಂಥ ಕಲಬೆರಕೆ ನಡೆಯುತ್ತಲೇ ಇದೆ.
ಆಹಾರದಲ್ಲಿ ಕಲಬೆರಕೆ ಆಗಿದೆಯೇ ಎಂಬುದನ್ನು ಪತ್ತೆ ಮಾಡಲು ಆರೋಗ್ಯ ಇಲಾಖೆ ಅಧೀನದಲ್ಲಿರುವ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಸಿಬ್ಬಂದಿಯು ಹೋಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ, ಪ್ರತಿ ತಿಂಗಳೂ ಆಹಾರದ 30 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂಬ ನಿಯಮವಿದೆ.
ಈ ಸಮೀಕ್ಷೆಗಳಲ್ಲಿ 25 ಸಾಮಾನ್ಯ ಹಾಗೂ 5 ಕಾನೂನುಬದ್ಧ ಸಮೀಕ್ಷೆಗಳಿದ್ದು, ಸಾಮಾನ್ಯ ಸಮೀಕ್ಷೆಯ ವೇಳೆ ಕಲಬೆರಕೆ ಪತ್ತೆಯಾದರೆ ನೋಟಿಸ್ ನೀಡಿ, ದಂಡ ವಸೂಲಿ ಮಾಡಿ ಸುಧಾರಣೆಗೆ ಅವಕಾಶ ನೀಡಲಾಗುತ್ತದೆ. ಆಗಲೂ ತಪ್ಪು ತಿದ್ದಿಕೊಳ್ಳದಿದ್ದಲ್ಲಿ ಕಾನೂನುಬದ್ಧ ಸಮೀಕ್ಷೆ ನಡೆಸಿ, ಕಲಬೆರಕೆ ಪತ್ತೆಯಾದರೆ ಪ್ರಕರಣ ದಾಖಲಿಸಲಾಗುತ್ತದೆ.ಆಹಾರ ಸಮೀಕ್ಷೆ ನಡೆಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದಾಗ ಹಾನಿಕಾರಕ ಅಂಶಗಳು ಪತ್ತೆಯಾದರೆ ಜೆಎಂಎಫ್‌ಸಿ ನ್ಯಾಯಾಲಯದ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಗರಿಷ್ಠ ₹ 5 ಲಕ್ಷ ದಂಡ ಹಾಗೂ ಕನಿಷ್ಠ 6 ತಿಂಗಳ ಜೀವಾವಧಿಯ ಜೈಲು ಶಿಕ್ಷೆ ಇದೆ. ಕಳಪೆ ಗುಣಮಟ್ಟ ಇದ್ದರೆ ಹೆಚ್ಚುವರಿ ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ದಂಡವನ್ನು ಮಾತ್ರ ವಿಧಿಸಲು ಅವಕಾಶ ಇದೆ.
ಆಹಾರದ ಮಾದರಿಗಳನ್ನು ಸಂಗ್ರಹಿಸಿದ ಅಧಿಕಾರಿಗಳು ಪ್ರಯೋಗಾಲಯಗಳಿಗೆ ಕಳುಹಿಸಿ ವರದಿ ಪಡೆಯಲು ಕನಿಷ್ಠ 1 ತಿಂಗಳು ಕಾಯಬೇಕಿದೆ. ಆಹಾರ ಕಲಬೆರಕೆ, ರಾಸಾಯನಿಕ ಪತ್ತೆ ಹಚ್ಚುವುದು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸವಾಲಾಗಿದೆ.
ಕಂದಾಯ ವಿಭಾಗಕ್ಕೆ ಒಂದರಂತೆ ರಾಜ್ಯದಲ್ಲಿ ನಾಲ್ಕು ಪ್ರಯೋಗಾಲಯಗಳಿವೆ. ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವ್ಯಾಪ್ತಿಯಲ್ಲಿ ಇವುಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ಪ್ರಯೋಗಾಲಯದ ವ್ಯಾಪ್ತಿಗೆ 12 ಜಿಲ್ಲೆಗಳು ಒಳಪಟ್ಟಿವೆ. ಎಲ್ಲ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿ ಸಕಾಲಕ್ಕೆ ವರದಿ ಪಡೆಯುವುದು ಅಸಾಧ್ಯವಾಗಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
1955ರಿಂದ 2011ರವರೆಗೆ ಆಹಾರ ಕಲಬೆರೆಕೆ ತಡೆ ಕಾಯ್ದೆ ಜಾರಿಯಲ್ಲಿತ್ತು. 2011ರಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಜಾರಿಗೆ ಬಂದಿದೆ. ಇದರಲ್ಲಿ ಕಲಬೆರಕೆ ಮಾತ್ರವಲ್ಲ ಆಹಾರದ ಸುರಕ್ಷತೆಯನ್ನು ಖಾತರಿಪಡಿಸಬೇಕಾಗುತ್ತದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇದರ ಅನುಷ್ಠಾನದ ಜವಾಬ್ದಾರಿ ನೋಡಿಕೊಳ್ಳುತ್ತದೆ. ಸ್ಥಳೀಯ ಆಡಳಿತ, ಇಲಾಖೆಯ ಅಧಿಕಾರಿಗಳು ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡಿದಲ್ಲಿ ಆಹಾರದಲ್ಲಿ ಕಲಬೆರಕೆ ನಿಯಂತ್ರಣ ಕಷ್ಟಸಾಧ್ಯವೇನಲ್ಲ.
–ಮಾಹಿತಿ: ವಿವಿಧ ಬ್ಯೂರೊಗಳಿಂದ
ರಾಜ್ಯದಲ್ಲೂ ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.ಗುಣ ಮಟ್ಟದ ಪದಾರ್ಥಗಳ ಖರೀದಿಗೆ ಜನಜಾಗೃತಿ ಮೂಡಿಸಲಾಗುತ್ತಿದೆ.ಕೆ.ಎಚ್. ಮುನಿಯಪ್ಪ, ಆಹಾರ ಸಚಿವ
ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಗುಣಮಟ್ಟ, ಶುದ್ಧತೆಯ ಬಗ್ಗೆ ನಿರಂತರ ನಿಗಾ ವಹಿಸಬೇಕು. ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಬೇಕು. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಗಳು ಖಾಲಿ ಇರುವುದರಿಂದ ಈ ಕಾರ್ಯಕ್ಕೆ ಹಿನ್ನಡೆಯಾಗಿದೆ.
ಆಹಾರ ಉತ್ಪನ್ನ ತಯಾರಿಕೆಗೆ ಪರವಾನಗಿ ನೀಡುವ ಅಧಿಕಾರ ಜಿಲ್ಲಾ ಅಂಕಿತ ಅಧಿಕಾರಿಗೆ ಇದೆ. ಆಹಾರ ಸುರಕ್ಷತಾ ಅಧಿಕಾರಿ ಹುದ್ದೆ ಖಾಲಿ ಇರುವುದರಿಂದ ಅವರ ಹೆಚ್ಚುವರಿ ಜವಾಬ್ದಾರಿಯೂ ಜಿಲ್ಲಾ ಅಂಕಿತ ಅಧಿಕಾರಿಯ ಹೆಗಲೇರಿದೆ. ತಾಲ್ಲೂಕು ಮಟ್ಟದ ಹುದ್ದೆಗಳು ಖಾಲಿ ಇರುವುದರಿಂದ ಪರವಾನಗಿ ನವೀಕರಣವೂ ವಿಳಂಬವಾಗುತ್ತಿದೆ.
‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲ ತಾಲ್ಲೂಕುಗಳ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆಗಳು ಖಾಲಿ ಇವೆ. ಜಿಲ್ಲಾ ಮಟ್ಟದ ಒಬ್ಬರು ಅಧಿಕಾರಿ (ಅಂಕಿತ ಅಧಿಕಾರಿ) ಇದ್ದು, ಅವರಿಗೆ ದಕ್ಷಿಣ ಕನ್ನಡದ ಜೊತೆಗೆ ಉಡುಪಿ ಜಿಲ್ಲೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಕನಿಷ್ಠ 5 ತಾಲ್ಲೂಕುಗಳಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಹುದ್ದೆ ಭರ್ತಿ ಮಾಡುವಂತೆ ರಾಜ್ಯ ಆಹಾರ ಸುರಕ್ಷತಾ ಆಯುಕ್ತರಿಗೆ 10ಕ್ಕೂ ಹೆಚ್ಚು ಬಾರಿ ಪತ್ರ ಬರೆದು ವಿನಂತಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಪ್ರತಿಕ್ರಿಯಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಮಂಜೂರಾತಿ ಹುದ್ದೆಗಳಿದ್ದು, ಒಬ್ಬರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ 15 ಮಂಜೂರಾತಿ ಹುದ್ದೆಗಳಿಲ್ಲಿ 10 ಖಾಲಿ ಇವೆ. ಹೊಸ ತಾಲ್ಲೂಕುಗಳಲ್ಲಿ ಈ ಹುದ್ದೆಯನ್ನು ಇನ್ನೂ ಸೃಜಿಸಿಲ್ಲ.
ರಾಜ್ಯದ ಕರಾವಳಿ ಮತ್ತಿತರ ಕಡೆ ಅಡುಗೆಗೆ ಕೊಬ್ಬರಿ ಎಣ್ಣೆಯನ್ನೇ ಪ್ರಮುಖವಾಗಿ ಬಳಸುತ್ತಾರೆ. ಇಲ್ಲಿ ತೆಂಗು ಪ್ರಮುಖ ಬೆಳೆಯಾದ್ದರಿಂದ ತೆಂಗಿನ ಎಣ್ಣೆ ತಯಾರಿಸುವ ಮಿಲ್‌ಗಳೂ ಸಾಕಷ್ಟಿವೆ. ಮಂಗಳೂರು, ಉಡುಪಿ, ಧರ್ಮಸ್ಥಳಕ್ಕೆ ಬರುವ ಪ್ರವಾಸಿಗರು ಹೆದ್ದಾರಿಯಂಚಿನಲ್ಲಿ ‘ಶುದ್ಧ ಕೊಬ್ಬರಿ ಎಣ್ಣೆ ಸಿಗುತ್ತದೆ’ ಎಂಬ ಬೋರ್ಡ್ ನೋಡಿ, ಖರೀದಿಸಿಕೊಂಡು ಹೋಗುತ್ತಾರೆ. ಜನರ ಗಮನವನ್ನು ತಕ್ಷಣಕ್ಕೆ ಸೆಳೆಯುವಂತೆ ಇಂತಹ ಅಂಗಡಿಗಳ ಎದುರು ಹಳದಿ ಬಣ್ಣದ ಕ್ಯಾನ್‌ಗಳನ್ನು ರಾಶಿಗಟ್ಟಲೆ ಕಟ್ಟಿ ತೂಗು ಹಾಕಲಾಗಿರುತ್ತದೆ.
ಇಲ್ಲಿನ ಬಹುತೇಕ ಮಿಲ್‌ಗಳಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆಯೇ ಸಿಗುತ್ತದೆ. ಆದರೆ, ಕರಾವಳಿ ಭಾಗದ ಶುದ್ಧ ಕೊಬ್ಬರಿ ಎಣ್ಣೆ ಬ್ರ್ಯಾಂಡ್ ಬಳಸಿಕೊಂಡು ಪೆಟ್ರೋಲಿಯಂ ತ್ಯಾಜ್ಯ (ಪ್ಯಾರಾಫಿನ್) ಸೇರಿಸಿರುವ ನಕಲಿ ಕೊಬ್ಬರಿ ಎಣ್ಣೆ ಮಾರಾಟ ಜಾಲವೂ ಇತ್ತೀಚಿನ ವರ್ಷಗಳಲ್ಲಿ ಸಕ್ರಿಯವಾಗಿದೆ. ಅದು ಕರಾವಳಿಯ ಗಡಿ ದಾಟಿಕೊಂಡು ಹೊರ ಜಿಲ್ಲೆ, ಹೊರರಾಜ್ಯಗಳಿಗೂ ಪೂರೈಕೆಯಾಗುತ್ತಿದೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಹೆದ್ದಾರಿ ಬದಿಯಲ್ಲಿ ನಾಯಿಕೊಡೆಗಳಂತೆ ತೆಲೆ ಎತ್ತುತ್ತಿರುವ ಶುದ್ಧ ಕೊಬ್ಬರಿ ಎಣ್ಣೆ ಮಾರಾಟ ಅಂಗಡಿಗಳತ್ತ ಜನರು ಸಂಶಯದಿಂದ ನೋಡುವಂತಾಗಿದೆ. ‘ಪ್ರವಾಸಿಗರು ಎಣ್ಣೆಯ ವಾಸನೆಯನ್ನಷ್ಟೇ ನೋಡುತ್ತಾರೆ. ಎಣ್ಣೆಯನ್ನು ಹಳದಿ ಬಣ್ಣದ ಕ್ಯಾನ್‌ಗಳಲ್ಲಿ ತುಂಬಿಸಿಟ್ಟಿರುವುದರಿಂದ ಅದರ ನೈಜ ಬಣ್ಣ ಪರೀಕ್ಷಿಸಲೂ ಆಗುವುದಿಲ್ಲ. ಒಂದು ಕೆ.ಜಿ ಕೊಬ್ಬರಿಗೆ ಸದ್ಯ ₹150ರಿಂದ ₹160ರವರೆಗೆ ದರ ಇದೆ, ಹೀಗಿರುವಾಗ ಒಂದು ಲೀಟರ್ ಶುದ್ಧ ಕೊಬ್ಬರಿ ಎಣ್ಣೆ ಹೇಗೆ ₹175 ರಿಂದ ₹180 ದರದಲ್ಲಿ ಸಿಗುತ್ತದೆ’ ಎಂದು ಪ್ರಶ್ನಿಸುತ್ತಾರೆ ಧರ್ಮಸ್ಥಳ ಸಮೀಪದ ಕೊಕ್ಕಡದ ತೆಂಗು ಬೆಳೆಗಾರರೊಬ್ಬರು.
ಅಡುಗೆ ಎಣ್ಣೆ, ಹಾಲು, ಬೆಣ್ಣೆ, ತುಪ್ಪ, ಜೇನು ತುಪ್ಪದಲ್ಲಿ ಕಲಬೆರಕೆ ಮಾಫಿಯಾ ಬೃಹತ್ ಮಟ್ಟದಲ್ಲಿ ಬೆಳೆದಿದೆ.
ಬಹುತೇಕ ನೆರೆ ರಾಜ್ಯಗಳ ಖಾಸಗಿ ಡೇರಿಗಳು 30ಕ್ಕೂ ಅಧಿಕ ಬ್ರ್ಯಾಂಡ್ ಹೆಸರಿನಲ್ಲಿ ರಾಜ್ಯದಲ್ಲಿ ಹಾಲು ಮಾರಾಟ ಮಾಡುತ್ತಿವೆ. ಅಷ್ಟು ದೂರದಿಂದ ಬರುವ ಹಾಲು ಹಾಳಾಗುವುದನ್ನು ತಪ್ಪಿಸಲು ಹೈಡ್ರೋಜನ್ ಪೆರಾಕ್ಸೈಡ್, ವಾಷಿಂಗ್ ಸೋಡಾ, ಕಾಸ್ಟಿಕ್ ಸೋಡಾ ಬೆರೆಸಲಾಗುತ್ತದೆ. ಹೆಚ್ಚಿನವರು ಎಫ್‌ಎಸ್‌ಎಸ್‌ಎಐ ಮಾನದಂಡ ಅನುಸರಿಸುತ್ತಿಲ್ಲವೆಂದು ಹಾಲು ಒಕ್ಕೂಟಗಳು ದೂರುತ್ತಿವೆ. ಕೆಎಂಎಫ್ ಈ ಹಿಂದೆ ನಡೆಸಿದ್ದ ಅಧ್ಯಯನವೊಂದರಲ್ಲಿ ಖಾಸಗಿ ಡೇರಿಗಳು ಹಾಲಿನ ಗುಣಮಟ್ಟ ಕಾಪಾಡಿಕೊಳ್ಳದಿರುವುದು ಕಂಡುಬಂದಿತ್ತು.
ರಿಸಿಮಾಲ್ಡೆಕ್ಸ್ ಮಾಲ್ಟೊಡೆಕ್ಸ್‌ಟ್ರಿನ್ (RISIMALDEX-MALTODEXTRIN) ಎಂಬ ಪುಡಿ, ಯೂರಿಯಾ, ಸೋಯಾಪುಡಿ, ಹಿಟ್ಟು, ಗೆಣಸಿನಪುಡಿಯನ್ನು ಹಾಲಿಗೆ ಬೆರೆಸುತ್ತಿರುವುದೂ ಪತ್ತೆಯಾಗಿದೆ.
ಹಾಲು ಒಕ್ಕೂಟದ ಸಂಘಗಳಲ್ಲಿ ತಿರಸ್ಕೃತಗೊಳ್ಳುವ ಗುಣಮಟ್ಟವಿಲ್ಲದ ಹಾಲನ್ನು ಖಾಸಗಿ ಡೇರಿಗಳು ಖರೀದಿಸುತ್ತವೆ. ಹಾಲಿನ ಒಕ್ಕೂಟಕ್ಕಿಂತ ಹೆಚ್ಚಿನ ದರ ಸಿಗುತ್ತದೆ ಎಂದು ಕೆಲ ಹೈನುಗಾರರು ಖಾಸಗಿ ಡೇರಿಗೆ ಹಾಲು ಹಾಕುತ್ತಾರೆ ಎನ್ನುವ ಆರೋಪವಿದೆ.
‘ಇತ್ತೀಚೆಗೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಕಂಪನಿಯೊಂದರ ತುಪ್ಪದ ಮಳಿಗೆ ಮೇಲೆ ದಾಳಿ ನಡೆಸಿ ಬೆಂಗಳೂರಿನ ಪಬ್ಲಿಕ್ ಹೆಲ್ತ್ ಇನ್‌ಸ್ಟಿಟ್ಯೂಟ್ (ಪಿಎಚ್‌ಐ) ಪ್ರಯೋಗಾಲಯದಲ್ಲಿ ಮಾದರಿ ಪರೀಕ್ಷಿಸಿದಾಗ ತುಪ್ಪ ಅಸುರಕ್ಷಿತ ಎಂಬ ವರದಿ ಬಂದಿದೆ. ಜೇನುತುಪ್ಪವನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಗುಣಮಟ್ಟವಿಲ್ಲ ಎಂಬ ವರದಿ ಬಂದಿದೆ’ ಎಂದು ಹೇಳುತ್ತಾರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಕೋಲಾರ ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಕೇಶ್ ಸಿ.
ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವುದರಿಂದ ಕ್ಯಾನ್ಸರ್, ಹೆಪಟೈಟಸ್, ಯಕೃತ್, ಮೂತ್ರಪಿಂಡ ವೈಫಲ್ಯದಂತಹ ಸಮಸ್ಯೆಗಳು ಚಿಕ್ಕ ವಯಸ್ಸಿ
ನಲ್ಲಿಯೇ ಕಾಣಿಸಿಕೊಳ್ಳಲಿದೆ.
ನಿತ್ಯ ಬಳಸುವ ಹಾಲು, ಹಣ್ಣು, ಮಸಾಲೆ ಪದಾರ್ಥಗಳು, ಹೋಟೆಲ್‌ಗಳಲ್ಲಿನ ಆಹಾರ ರುಚಿಯಾಗಿರಲು ಬಳಸುವ ರುಚಿ ವೃದ್ಧಿಸುವ ರಾಸಾಯನಿಕಗಳು ದೀರ್ಘಾವಧಿಯಲ್ಲಿ ತೊಂದರೆಯನ್ನು ಉಂಟುಮಾಡುತ್ತವೆ.
‘ಮೊಟ್ಟೆಯು ಪರಿಪೂರ್ಣ ಪೌಷ್ಟಿಕ ಆಹಾರ ಎಂದು ನಾವು ಶಿಫಾರಸು ಮಾಡುತ್ತೇವೆ. ಆದರೆ, ಕೋಳಿಗಳಿಗೆ ಇಂಜೆಕ್ಷನ್ ನೀಡುವುದರಿಂದ ಮೊಟ್ಟೆಗಳು ಗುಣಮಟ್ಟವನ್ನು ಕಳೆದು
ಕೊಳ್ಳುತ್ತವೆ. ಅರಿಶಿಣ, ಮಸಾಲೆ ಪುಡಿಗಳಲ್ಲಿ ಅಪಾಯಕಾರಿ ಸೀಸ, ಕ್ರೋಮಿಯಂನಂತಹ ಮಾರಕ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ. ಇದರಿಂದಾಗಿ ಅಕಾಲದಲ್ಲಿಯೇ ಹಲವು ರೋಗಗಳು ಕಾಡುತ್ತವೆ. ಅಂತಿಮವಾಗಿ ಕಿಡ್ನಿ ವೈಫಲ್ಯ, ಬಂಜೆತನ, ಕರುಳಿನ ಕ್ಯಾನ್ಸರ್‌ನಂತಹ ರೋಗಗಳು ಬರುತ್ತವೆ.
ಇದನ್ನು ತಡೆಯಲು ನಿಯಮಿತವಾಗಿ ಆಹಾರ ಪದಾರ್ಥ, ಹಾಲು, ಹಣ್ಣುಗಳ ಮಾದರಿ ಸಂಗ್ರಹಿಸಿ ತಪಾಸಣೆಗೆ ಒಳಪಡಿಸಬೇಕು.
ಡಾ.ಜಯರಾಜ್ ವಿ. ಬೊಮ್ಮಣ್, ಯಕೃತ್ ತಜ್ಞ, ಜಿಮ್ಸ್ ಆಸ್ಪತ್ರೆ, ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.