ADVERTISEMENT

ಒಳನೋಟ: ತೆರಿಗೆ ವಸೂಲಿಗೆ ‘ಬರ’

ಸೂರ್ಯನಾರಾಯಣ ವಿ.
Published 18 ಮೇ 2024, 23:47 IST
Last Updated 18 ಮೇ 2024, 23:47 IST
<div class="paragraphs"><p>ತೆರಿಗೆ ವಸೂಲಿ</p></div>

ತೆರಿಗೆ ವಸೂಲಿ

   

ಎಐ ಚಿತ್ರ: ಕಣಕಾಲಮಠ

ಚಾಮರಾಜನಗರ: ‘ಪ್ರತಿ ವರ್ಷ ಆಸ್ತಿ ತೆರಿಗೆ ಕಟ್ಟೋದು ಮಾಲೀಕರ ಜವಾಬ್ದಾರಿ. ಆದರೆ, ಸ್ವಯಂಪ್ರೇರಿತರಾಗಿ ಕಟ್ಟೋರು ಕಡಿಮೆ. ನೆಪ ಹುಡುಕುವವರು, ಜಾಣ ಮರೆವು ತೋರುವವರೇ ಹೆಚ್ಚು. ಇ–ಸ್ವತ್ತು, ಖಾತೆ ಬದಲಾವಣೆ, ಕೃಷಿ ಸಾಲ ಸೇರಿದಂತೆ ಸರ್ಕಾರದ ಸೌಲಭ್ಯಗಳು, ಪ್ರಮಾಣ ಪತ್ರ ಪಡೆಯಲು ಆಸ್ತಿ ತೆರಿಗೆ ಕಟ್ಟಿರಲೇ
ಬೇಕೆಂಬ ಕಾರಣಕ್ಕೇ ಹೆಚ್ಚಿನವರು ಕಟ್ಟುತ್ತಾರೆ. ಆದರೆ, ಹಳೆ ಬಾಕಿ ಕಟ್ಟೋದೇ ಇಲ್ಲ‌!’

ADVERTISEMENT

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಂಚಾಯಿತಿ ಅಭಿವೃದ್ಧಿ
ಅಧಿಕಾರಿಯೊಬ್ಬರು, ಆಸ್ತಿ ತೆರಿಗೆ ಪಾವತಿ ಕುರಿತು ಜನರ ಮನಸ್ಥಿತಿಯ ಬಗ್ಗೆ ಹೀಗೆ ಕನ್ನಡಿ ಹಿಡಿಯುತ್ತಾರೆ.

‘ಈ ಬಾರಿ ಬರಗಾಲ ಎಂದು ತೆರಿಗೆ ವಸೂಲಿಯ ಗುರಿ ಸಾಧನೆಯಾಗಿಲ್ಲ. ಬರಗಾಲದಿಂದ ತೀರಾ ಬಡವರಿಗೆ ಸಮಸ್ಯೆಯಾಗಬಹುದು. ಆದರೆ ಬಹುತೇಕರಿಗೆ ಸಮಸ್ಯೆ ಇಲ್ಲ. ಹಳ್ಳಿಗಳಲ್ಲಿ ತೆರಿಗೆ ಹೆಚ್ಚಿರುವುದಿಲ್ಲ. ವಾಣಿಜ್ಯ ಉದ್ದೇಶದ ಆಸ್ತಿಗಳನ್ನು ಬಿಟ್ಟು ಉಳಿದ ಆಸ್ತಿ ತೆರಿಗೆ ₹500ಕ್ಕಿಂತ ಹೆಚ್ಚಾಗುವುದಿಲ್ಲ. ತಿಂಗಳಿಗೆ ಮೊಬೈಲ್‌ ಇಂಟರ್‌ನೆಟ್‌ಗೆ ₹200ರಿಂದ ₹500ರವರೆಗೂ ಖರ್ಚು ಮಾಡುವಾಗ, ಕೆಲವು ನೂರು ರೂಪಾಯಿ ತೆರಿಗೆ ಕಟ್ಟಲು ಕಷ್ಟವೇ’ ಎಂಬುದು ಅವರ ಪ್ರಶ್ನೆ.

ಚಾಮರಾಜನಗರ ಜಿಲ್ಲೆಯಲ್ಲಿ 130 ಗ್ರಾಮ ಪಂಚಾಯಿತಿಗಳಿವೆ. 2023–24ನೇ ಸಾಲಿಗೆ ₹18.06 ಕೋಟಿ ತೆರಿಗೆ ಸಂಗ್ರಹ ಗುರಿಯಿತ್ತು. ಆದರೆ, ₹6.89 ಕೋಟಿ ಮಾತ್ರ ವಸೂಲಾಗಿದೆ. ಶೇಕಡವಾರು ಸಾಧನೆ 38.16. ಕಳೆದ ವರ್ಷದ ಬಾಕಿ ಸೇರಿದಂತೆ ಇನ್ನೂ ₹48 ಸಂಗ್ರಹಕ್ಕೆ ಬಾಕಿ ಇದೆ. ವರ್ಷದಿಂದ ವರ್ಷಕ್ಕೆ ಹಿಂಬಾಕಿ ಮೊತ್ತ ಹಿಗ್ಗುತ್ತಲೇ ಇದೆ.ನಿರೀಕ್ಷಿತ ಗುರಿ ಸಾಧನೆಯಾಗದೆ, ಪಂಚಾಯಿತಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂಬ ಪಂಚಾಯತ್‌ ರಾಜ್‌ ವ್ಯವಸ್ಥೆಯ ಆಶಯಕ್ಕೂ ಹಿನ್ನ

ಇದು ಚಾಮರಾಜನಗರ ಜಿಲ್ಲೆಯೊಂದರ ಕಥೆಯಲ್ಲ, ರಾಜ್ಯದ ಎಲ್ಲ ಜಿಲ್ಲೆಗಳದ್ದೂ ಇದೇ ಕಥೆ. 2023–24ನೇ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳ 5,949 ಗ್ರಾಮ ಪಂಚಾಯಿತಿಗಳಲ್ಲಿ ₹1,459.33 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿತ್ತು. ಆರ್ಥಿಕ ವರ್ಷಾಂತ್ಯಕ್ಕೆ ₹767.30 ಕೋಟಿ ಮಾತ್ರ ವಸೂಲಾಗಿದೆ. ಅಂದರೆ ಶೇ 52.58 ಅಷ್ಟೇ. 10 ಜಿಲ್ಲೆಗಳಲ್ಲಿ ಮಾತ್ರ ತೆರಿಗೆ ಸಂಗ್ರಹ ಅರ್ಧಕ್ಕಿಂತ ಹೆಚ್ಚಿದೆ. 

‘ಗುರಿ ಸಾಧನೆಯಾಗದಿರುವುದಕ್ಕೆ ಬರಗಾಲವೇ ಕಾರಣ’ ಎಂಬುದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮಜಾಯಿಷಿ. ಈ ವರ್ಷದ ಮಟ್ಟಿಗೆ ಇದನ್ನು ಒಪ್ಪಬಹುದಾದರೂ, ಕಾರಣ ಪೂರ್ತಿ ನಿಜವಲ್ಲ. ಬರವಿರಲಿ ಅಥವಾ ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬಂದರೂ ತೆರಿಗೆ ವಸೂಲಾತಿ ಗುರಿ ಮುಟ್ಟುತ್ತಿಲ್ಲ!

2023–24ನೇ ಆರ್ಥಿಕ ವರ್ಷ ಆರಂಭಕ್ಕೂ ಮುನ್ನ ವಸೂಲಾತಿಗೆ ಬಾಕಿ ಇದ್ದ ತೆರಿಗೆ ಮೊತ್ತ ₹2,101.03 ಕೋಟಿ! ಕಳೆದ ವರ್ಷದ ಬಾಕಿ ₹692.03 ಕೋಟಿ ಸೇರಿದಂತೆ,  ಪಂಚಾಯಿತಿಗಳು ವಸೂಲಾತಿಗೆ ಉಳಿಸಿಕೊಂಡಿರುವ ತೆರಿಗೆ ಮೊತ್ತ ₹2,793.06 ಕೋಟಿ.

ಉತ್ತರ ಕನ್ನಡ ಜಿಲ್ಲೆ ತೆರಿಗೆ ಸಂಗ್ರಹದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ರಾಮನಗರ ಜಿಲ್ಲೆ ಎರಡನೇ ಸ್ಥಾನ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲೇ ಅತಿ ಹೆಚ್ಚು ಪಂಚಾಯಿತಿಗಳುಳ್ಳ ಬೆಳಗಾವಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.  ಯಾದಗಿರಿ ಜಿಲ್ಲೆಯು ಕೊನೆಯಿಂದ ಎರಡನೇ ಸ್ಥಾನದಲ್ಲಿ, ಧಾರವಾಡ ಮೂರನೇ ಸ್ಥಾನದಲ್ಲಿದೆ. 

ವಿಜಯನಗರ, ಹಾವೇರಿ, ಬೀದರ್‌, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಕಲಬುರ್ಗಿ, ಮಂಡ್ಯ, ಚಾಮರಾಜನಗರ, ದಾವಣಗೆರೆ, ಕೊಪ್ಪಳ, ಹಾಸನ, ಮೈಸೂರು ಹಾಗು ಕೋಲಾರ ಜಿಲ್ಲೆಯ ಸಾಧನೆ ಶೇ 50ರ ಒಳಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ರಾಯಚೂರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಕೊಡಗು, ಉಡುಪಿ ಹಾಗೂ ಬೆಂಗಳೂರು ಜಿಲ್ಲೆಯಲ್ಲಿ ಶೇ 50 ದಾಟಿದೆ. ಇದು ಕೊಂಚ ಸಮಾಧಾನಕರ.

ಕಾರಣಗಳೇನು?

ಬರ, ತೆರಿಗೆ ಪರಿಷ್ಕರಣೆ: ‘ಬರಗಾಲದೊಂದಿಗೆ, ಕಳೆದ ವರ್ಷ ರಾಜ್ಯದಾದ್ಯಂತ ಗ್ರಾಮೀಣ ಮಟ್ಟದ ಆಸ್ತಿ ತೆರಿಗೆ ಪರಿಷ್ಕರಿಸಿರುವು‌ದು ಕೂಡ ವ್ಯತಿರಿಕ್ತ ಪರಿಣಾಮ ಬೀರಿದೆ’ ಎನ್ನುತ್ತಾರೆ ಅಧಿಕಾರಿಗಳು. ಪರಿಷ್ಕರಣೆಯಿಂದಾಗಿ ವಾರ್ಷಿಕ ಸಂಗ್ರಹ ಗುರಿ ಹೆಚ್ಚಾಗಿದ್ದು, ಕೆಲವು ಜಿಲ್ಲೆಗಳಲ್ಲಿ ದುಪ್ಪಟ್ಟಾಗಿದೆ.  

ಬೆಳಗಾವಿ ಜಿಲ್ಲೆಯಲ್ಲಿ ಗುರಿಯ ಮೊತ್ತ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ₹30 ಕೋಟಿ ಗುರಿಯಿತ್ತು. ಅದರಲ್ಲಿ ₹26 ಕೋಟಿಗೂ ಅಧಿಕ ಸಂಗ್ರಹಿಸಲಾಗಿದೆ. ತೆರಿಗೆ ಪರಿಷ್ಕರಣೆಯಾಗಿರುವುದರಿಂದ, ಜಿಲ್ಲೆಯ ಆಸ್ತಿ ತೆರಿಗೆ ಮೊತ್ತ ಬರೋಬ್ಬರಿ ₹115.80 ಕೋಟಿಗೆ ಏರಿದೆ!

‘ಈ ಬಾರಿ ಜಿಲ್ಲೆಯ ಎಲ್ಲ 15 ತಾಲ್ಲೂಕುಗಳಲ್ಲೂ ಬರಗಾಲ ಬಂದಿದ್ದು, ಜನರ ಕೈಯಲ್ಲಿ ದುಡ್ಡಿಲ್ಲದಿರುವುದರಿಂದ ತೆರಿಗೆ ಸಂಗ್ರಹಕ್ಕೆ ಹಿನ್ನಡೆ ಉಂಟಾಗಿದೆ’ ಎನ್ನುತ್ತಾರೆ ಅಧಿಕಾರಿಗಳು. 

‘506 ಪಂಚಾಯಿತಿಗಳುಳ್ಳ ಬೆಳಗಾವಿ ಜಿಲ್ಲೆಯ ವ್ಯಾಪ್ತಿ ರಾಜ್ಯದಲ್ಲೇ ಅತಿ ದೊಡ್ಡದು. ಪ್ರಸಕ್ತ ಸಾಲಿನ ಗುರಿಯಲ್ಲಿ ₹26.5 ಕೋಟಿ ಸಂಗ್ರಹಿಸಲಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಕಡಿಮೆ. ಮೊತ್ತ ಗಮನಿಸಿದರೆ ಸಾಧನೆಯೇ. ಸೂಕ್ತ ರೀತಿಯಲ್ಲಿ ಸಂಗ್ರಹಿಸಿದ್ದೇವೆ’ ಎಂಬುದು ಜಿಪಂ ಸಿಇಓ ರಾಹುಲ್‌ ಶಿಂಧೆ ಅವರ ಪ್ರತಿಪಾದನೆ.

ಕಲ್ಯಾಣ ಕರ್ನಾಟಕದಲ್ಲಿ...

ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲೂ ಬರಗಾಲದ ಜೊತೆಗೆ ತೆರಿಗೆ ಹೆಚ್ಚಳವೂ ತೆರಿಗೆ ಆದಾಯ ಕುಸಿತಕ್ಕೆ ಕಾರಣವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 261 ಗ್ರಾಮ ಪಂಚಾಯಿತಿಗಳಿದ್ದು, 2023–24ನೇ ಸಾಲಿಗೆ ₹29.80 ಕೋಟಿ ಗುರಿ ಪೈಕಿ ₹11.03 ಕೋಟಿ ಸಂಗ್ರಹಿಸಲಾಗಿದ್ದು, ಅಂದರೆ ಬರೀ ಶೇ 37.46ರಷ್ಟು ಗುರಿ ಸಾಧಿಸಲಾಗಿದೆ. 2022–23ನೇ ಸಾಲಿಗೆ ಹೋಲಿಸಿದರೆ, ಈ ಸಾಲಿನಲ್ಲಿ ತೆರಿಗೆಯನ್ನು ಶೇ 120ರಷ್ಟು ಹೆಚ್ಚಿಸಲಾಗಿದೆ. ತೆರಿಗೆ ಸಂಗ್ರಹ ಕುಸಿಯಲು ಇದೂ ಒಂದು ಕಾರಣ. ಕಲ್ಯಾಣ ಭಾಗದ ಇತರೆ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ.

ತಾಂತ್ರಿಕ ಸಮಸ್ಯೆ: ತಾಂತ್ರಿಕ ಸಮಸ್ಯೆಯೂ ವಸೂಲಾತಿ ಮೇಲೆ ಪ್ರಭಾವ ಬೀರುತ್ತಿದೆ. ಆನ್‌ಲೈನ್‌ನಲ್ಲೂ ತೆರಿಗೆ ಪಾವತಿಸಬಹುದು. ಆದರೆ ನೆಟ್‌ವರ್ಕ್‌ ಸಮಸ್ಯೆ ಕಾಡುತ್ತದೆ. ಇ–ತೆರಿಗೆ ವ್ಯವಸ್ಥೆ ಕೆಲಸ ಮಾಡದ ಸಂದರ್ಭಗಳೂ ಇವೆ.

‘ಸಿಬ್ಬಂದಿ ಕೊರತೆ ಮತ್ತು ಮನೆಗಳು ಹೆಚ್ಚಾಗಿರುವುದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬೀರಿದೆ. ಸಾಫ್ಟ್‌ವೇರ್ ಅಪ್‌ಡೇಟ್ ಆಗಿದ್ದರೂ ಒಟ್ಟಾರೆ ವ್ಯವಸ್ಥೆ ಅಪ್‌ಡೇಟ್ ಆಗದೇ ಇರುವುದರಿಂದ ತೆರಿಗೆ ಸಂಗ್ರಹದಲ್ಲಿ ಏರಿಳಿತ ಕಂಡುಬರುತ್ತಿದೆ’ ಎನ್ನುತ್ತಾರೆ ಸಿಬ್ಬಂದಿ. 

‘ಆಸ್ತಿಗಳ ವಿವರ ಆನ್‌ಲೈನ್‌ನಲ್ಲಿ ನೋಂದಣಿಯಾಗದ ಕಡೆ ಹಳೆಯ ಪದ್ಧತಿಯಂತೆಯೇ ತೆರಿಗೆ ವಸೂಲು ಮಾಡಲಾಗುತ್ತಿದೆ. ಅವು ತಕ್ಷಣಕ್ಕೆ ಆನ್‌ಲೈನ್‌ನಲ್ಲಿ ದಾಖಲಾಗುವುದಿಲ್ಲ. ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ತೆರಿಗೆ ಕಟ್ಟಿಸಿಕೊಂಡಿದ್ದರೂ, ಡಿಜಿಟಲ್‌ ವ್ಯವಸ್ಥೆಯಲ್ಲಿ ಬಾಕಿ ಎಂದೇ ತೋರಿಸುತ್ತದೆ’ ಎನ್ನುತ್ತಾರೆ ಅಭಿವೃದ್ಧಿ ಅಧಿಕಾರಿಗಳು.

ಬಿಲ್‌ ಕಲೆಕ್ಟರ್‌ಗಳ ನಿರ್ಲಕ್ಷ್ಯ: ‘ಆಸ್ತಿ ತೆರಿಗೆ ಸೇರಿದಂತೆ ವಿವಿಧ ಶುಲ್ಕಗಳನ್ನು ಸಂಗ್ರಹಿಸಲೆಂದೇ ಇರುವ ಬಿಲ್‌ ಕಲೆಕ್ಟರ್‌ಗಳ ನಿರ್ಲಕ್ಷ್ಯವೂ ತೆರಿಗೆ ಸಂಗ್ರಹ ನಿರೀಕ್ಷೆಯಂತೆ ಆಗದಿರಲು ಪ್ರಮುಖ ಕಾರಣ’ ಎನ್ನುತ್ತಾರೆ ಅಧಿಕಾರಿಗಳು.

‘ಸ್ಥಳೀಯರಾಗಿರುವ ಬಹುತೇಕ ಬಿಲ್‌ ಕಲೆಕ್ಟರ್‌ಗಳಿಗೆ ಆಸ್ತಿ ಮಾಲೀಕರ ಪರಿಚಯ, ಬಾಂಧವ್ಯ ಚೆನ್ನಾಗಿರುತ್ತದೆ. ಮನಸ್ಸು ಮಾಡಿದರೆ ಪೂರ್ಣ ತೆರಿಗೆ ಸಂಗ್ರಹಿಸಬಹುದು. ಆದರೆ, ಬಾಕಿ ಉಳಿಸಿಕೊಂಡವರ ಬೆನ್ನುಹತ್ತಿ ತೆರಿಗೆ ಸಂಗ್ರಹಿಸುವುದಿಲ್ಲ’ ಎಂಬುದು ಪಿಡಿಒಗಳ ಆರೋಪ.

‘ಬಿಲ್‌ಕಲೆಕ್ಟರ್‌ಗಳಿಗೆ ಜಿಲ್ಲಾ ಪಂಚಾಯಿತಿಗಳು ಹೊಣೆಗಾರಿಕೆ ನಿಗದಿ ಪಡಿಸಿಲ್ಲ. ತೆರಿಗೆ ವಸೂಲಿ ಗುರಿಯನ್ನೂ ನೀಡಿಲ್ಲ. ಅಧಿಕಾರಿಗಳು ಪಿಡಿಒಗಳನ್ನೇ ಉತ್ತರದಾಯಿಗಳನ್ನಾಗಿಸುತ್ತಿದ್ದಾರೆ. ಬಹುತೇಕ ಪಿಡಿಒಗಳು ಅನ್ಯಸ್ಥಳದವರು. ಸ್ಥಳೀಯರೇ ಆಗಿರುವ ಕಾರ್ಯದರ್ಶಿಗಳು, ಬಿಲ್‌ ಕಲೆಕ್ಟರ್‌ಗಳು, ಡಾಟಾ ಎಂಟ್ರಿ ಆಪರೇಟರ್‌ಗಳು, ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳ ನಡುವೆ ಸಾಮರಸ್ಯವಿರುವುದಿಲ್ಲ. ಇದು ತೆರಿಗೆ ಸಂಗ್ರಹ ಸೇರಿದಂತೆ ಪಂಚಾಯಿತಿಯ ಒಟ್ಟಾರೆ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ’ ಎಂಬುದು ಪಂಚಾಯಿತಿಗಳ ರಾಜಕೀಯ ಬಲ್ಲ ಹಿರಿಯ ಅಧಿಕಾರಿಗಳ ವಿಶ್ಲೇಷಣೆ.

ಆರ್ಥಿಕ ಶಿಸ್ತಿರದ ಬಿಲ್‌ ಕಲೆಕ್ಟರ್‌ಗಳು ಮಾಲೀಕರಿಂದ ತೆರಿಗೆ ವಸೂಲಿ ಮಾಡಿ, ದಾಖಲೆಯಲ್ಲಿ ನಮೂದಿಸದ ಸಾಧ್ಯತೆಗಳೂ ಇರುತ್ತವೆ. ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣಗಳು ರಾಜ್ಯದಾದ್ಯಂತ ‌ವರದಿಯಾಗುತ್ತಿರುತ್ತವೆ.

ಹೆಚ್ಚಿದ ಒತ್ತಡ: ಸಿಬ್ಬಂದಿ ಕೊರತೆಯೂ ತೆರಿಗೆ ಸಂಗ್ರಹ ಕುಸಿಯಲು ಮತ್ತೊಂದು ಕಾರಣ.

‘ದೊಡ್ಡ ಪಂಚಾಯಿತಿಗಳಲ್ಲೂ ಒಬ್ಬಿಬ್ಬರು ಬಿಲ್‌ ಕಲೆಕ್ಟರ್‌ಗಳೇ ಎಲ್ಲ ಶುಲ್ಕಗಳನ್ನು ಸಂಗ್ರಹಿಸಬೇಕು. ಹಿಗ್ಗಿದ ಗ್ರಾಮ ವ್ಯಾಪ್ತಿ ಮತ್ತು ಮನೆಗಳ ಹೆಚ್ಚಳಕ್ಕೆ ತಕ್ಕಂತೆ ಬಿಲ್‌ ಕಲೆಕ್ಟರ್‌ಗಳ ನೇಮಕವಾಗದೆ, ಹಾಲಿ ಸಿಬ್ಬಂದಿ ಮೇಲೆ ಹೆಚ್ಚು ಒತ್ತಡವಿದೆ. ಬರ, ನೆರೆ, ಕೋವಿಡ್‌ ಸಂದರ್ಭದಲ್ಲಿ ಜನರೂ ತೆರಿಗೆ ಕಟ್ಟುವುದಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಅವರು. 

ಜವಾಬ್ದಾರಿ ಮರೆಯುವ ಜನ:

ಬಿಲ್‌ ಕಲೆಕ್ಟರ್‌ಗಳು ಕೇಳಿದಾಗಲೂ ಆಸ್ತಿ ಮಾಲೀಕರು ತೆರಿಗೆ ಪಾವತಿಸದ ಸನ್ನಿವೇಶಗಳೂ ಇವೆ. ‌‘ಸರ್ಕಾರದ ಸೌಲಭ್ಯ ಪಡೆಯಲು ಆಸ್ತಿ ತೆರಿಗೆ ಪಾವತಿ ಕಡ್ಡಾಯವಾಗಿರುವುದರಿಂದ ಹೆಚ್ಚಿನವರು ಪಾವತಿಸುತ್ತಾರೆ. ‌ಬಡ, ಮಧ್ಯಮ ವರ್ಗದವರು ಪಾವತಿಸಿದರೆ, ಶ್ರೀಮಂತರೇ ಹೆಚ್ಚು ಬಾಕಿ ಉಳಿಸಿಕೊಂಡಿದ್ದಾರೆ. ತಗಾದೆ ನೋಟಿಸ್‌ ಕೊಟ್ಟರೂ ಸ್ಪಂದಿಸುವುದಿಲ್ಲ. ಪ್ರಭಾವ ಬಳಸಿ ಪಾರಾಗಲೆತ್ನಿಸುತ್ತಾರೆ’ ಎಂಬುದು ಬಹುತೇಕ ಪಂಚಾಯಿತಿ ಮಟ್ಟದ ಅಧಿಕಾರಿಗಳ ಆರೋಪ.

‘ತೆರಿಗೆ ಪಾವತಿಯ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದರೂ, ಗುರಿ ತಲುಪಲಾಗುತ್ತಿಲ್ಲ. ಈ ವರ್ಷ ಬರ ಇರುವ ಕಾರಣಕ್ಕೆ ಆಸ್ತಿ ಮಾಲೀಕರು ಪಾವತಿ ಮಾಡಿಲ್ಲ’ ಎಂಬುದು ಎಲ್ಲ ಜಿಲ್ಲೆಗಳ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರ ಹೇಳಿಕೆ.

ಅಭಿವೃದ್ಧಿಗೆ ಹೊಡೆತ

ಸಮರ್ಪಕ ತೆರಿಗೆ ಸಂಗ್ರಹವಿಲ್ಲದೆ, ಸಂಪನ್ಮೂಲ ಕ್ರೋಡೀಕರಣವಾಗದೇ ಆರ್ಥಿಕವಾಗಿ ಸ್ವಾವಲಂಬನೆಯ ಯತ್ನಕ್ಕೂ ಹಿನ್ನಡೆಯಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಅನುದಾನವನ್ನೇ ಕಾಯಬೇಕಾಗಿದೆ. ಸಂಗ್ರಹವಾಗಿರುವ ಆಸ್ತಿ ತೆರಿಗೆಯಲ್ಲಿ ಶೇ 40ರಷ್ಟು ವೇತನಕ್ಕೆ, ಶೇ 25ರಷ್ಟು ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ, ಶೇ 5ರಷ್ಟು ಅಂಗವಿಕಲರಿಗೆ ಹಾಗೂ ಉಳಿದದ್ದನ್ನು ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕೆಂಬ ನಿಯಮವಿದೆ.  

‘ತೆರಿಗೆ ಸಂಗ್ರಹ ಕಡಿಮೆಯಾದರೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುವುದಿಲ್ಲ. ರಾಜ್ಯ ಸರ್ಕಾರದಿಂದ 15ನೇ ಹಣಕಾಸು ಯೋಜನೆ ಅನುದಾನ ಬರುತ್ತದೆ. ವೇತನ ಪಾವತಿಗೂ ಅನುದಾನ ಬರುತ್ತದೆ’ ಎಂಬುದು ಪಂಚಾಯಿತಿ ಅಧಿಕಾರಿಗಳ ಹೇಳಿಕೆ. 

ರಾಜ್ಯದ ಗ್ರಾಮ ಪಂಚಾಯಿತಿಗಳು ವಿದ್ಯುತ್‌ ಕಂಪನಿಗಳಿಗೆ ₹3,700 ಕೋಟಿಗೂ ಹೆಚ್ಚು ಶುಲ್ಕ ಬಾಕಿ ಇರಿಸಿಕೊಂಡಿವೆ. ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕೆಲಸಗಳು ಅನುದಾನ ಬಂದರಷ್ಟೇ ಸಾಧ್ಯವೆಂಬ ಸನ್ನಿವೇಶವಿದೆ. ಸಣ್ಣ ದುರಸ್ತಿಗಳಿಗೂ ಕೆಲವು ‍ಪಂಚಾಯಿತಿಯಲ್ಲಿ ಸಂಪನ್ಮೂಲವಿಲ್ಲ.

ರಾಜ್ಯದ ಅಲ್ಲಲ್ಲಿ, ತೆರಿಗೆ ಸಂಗ್ರಹದ ಗುರಿ ಸಾಧಿಸಲು ಮಾದರಿ ಪ್ರಯೋಗಗಳು ನಡೆದಿವೆ. ‘ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸಿದ ಬಿಲ್‌ ಕಲೆಕ್ಟರ್‌, ಪಿಡಿಒ, ನೀರುಗಂಟಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಹೀಗಾಗಿ ಈ ಬಾರಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.  

‘ಐದಾರು ವರ್ಷಗಳ ಹಿಂದಿನ ಅವಧಿಗೆ ಹೋಲಿಸಿದರೆ, ಈಗ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ. ಮುಂದಿನ ವರ್ಷಗಳಲ್ಲಿ ಸಾಧನೆಯ ಪ್ರಮಾಣ ಇನ್ನಷ್ಟು ಹೆಚ್ಚಳವಾಗಲಿದೆ’ ಎಂಬ ಆಶಾಭಾವನೆ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿದೆ.

ತೆರಿಗೆ ಪಾವತಿ ಕುರಿತು ಜಿಲ್ಲಾ ಪಂಚಾಯಿತಿಗಳು ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡರೂ ಜನರಲ್ಲಿ ದೊಡ್ಡಮಟ್ಟದಲ್ಲಿ ಅರಿವು ಮೂಡುತ್ತಿಲ್ಲ. ಅಭಿಯಾನಗಳು ಪರಿಣಾಮಕಾರಿಯಾಗಿ ನಡೆದ ಜಿಲ್ಲೆಗಳಲ್ಲಿ ತೆರಿಗೆ ವಸೂಲಾತಿಯಲ್ಲಿ ಸುಧಾರಣೆಯಾಗಿದೆ. ಆದರೆ, ಪೂರ್ಣ ಯಶಸ್ಸು ಸಿಕ್ಕಿಲ್ಲ. 

ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಶಿಫಾರಸು

ಈ ಮಧ್ಯೆ ‘ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಐದನೇ ಹಣಕಾಸು ಆಯೋಗ ಇತ್ತೀಚೆಗೆ ಶಿಫಾರಸು ಮಾಡಿದೆ.  ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ 2.25 ಕೋಟಿ ಸ್ವತ್ತುಗಳ ಪೈಕಿ ಅರ್ಧದಷ್ಟು ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದಿಲ್ಲ. ವೈಜ್ಞಾನಿಕವಾಗಿ ತೆರಿಗೆ ಸಂಗ್ರಹಿಸಲು ಸರ್ಕಾರ ಪಂಚತಂತ್ರ 2. ತಂತ್ರಾಂಶವನ್ನೂ ಅಭಿವೃದ್ಧಿ ಪಡಿಸಿದೆ.  ‘ಗ್ರಾಮ‌ಗಳು ಈಗ ಹಳೆಯ ಗ್ರಾಮ ಠಾಣಾ ವ್ಯಾಪ್ತಿಯನ್ನೂ ಮೀರಿ ಅಭಿವೃದ್ಧಿ ಹೊಂದಿವೆ. ಆ ಆಸ್ತಿಗಳನ್ನೆಲ್ಲ ತೆರಿಗೆ ವ್ಯಾಪ್ತಿಗೆ ಸೇರಿಸಬೇಕು. ಅವುಗಳಿಗೂ ತೆರಿಗೆ ವಿಧಿಸಿದರೆ ಪಂಚಾಯಿತಿಗಳ ಆದಾಯ ಹೆಚ್ಚಾಗುತ್ತದೆ’ ಎಂದು ಆಯೋಗ ಅಭಿಪ್ರಾಯಪಟ್ಟಿದೆ. 

ಉತ್ತರ ಕನ್ನಡ ಮುಂಚೂಣಿಯಲ್ಲಿ

ಭೌಗೋಳಿಕವಾಗಿ ದೊಡ್ಡದಾದ ಗುಡ್ಡಗಾಡು ಪ್ರದೇಶವುಳ್ಳ ಉತ್ತರ ಕನ್ನಡದಲ್ಲಿ 229 ಗ್ರಾಮ ಪಂಚಾಯಿತಿಗಳಿವೆ. ಪಂಚಾಯಿತಿ ಕಚೇರಿಯಿಂದ 35 ಕಿ.ಮೀ ದೂರವಿರುವ ಗ್ರಾಮಗಳೂ ಸಾಕಷ್ಟಿವೆ. ಕಚೇರಿ ಕೆಲಸಕ್ಕೆ ಬರುವವರೇ ಕಡಿಮೆ. ಭೇಟಿ ಕೊಡುವುದು ಅಧಿಕಾರಿಗಳಿಗೆ ಕಷ್ಟಕರ ಎನ್ನಿಸುವಂಥ ಸ್ಥಳಗಳೂ ಇವೆ. ಹಾಗಿದ್ದರೂ ತೆರಿಗೆ ಸಂಗ್ರಹದಲ್ಲಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳು ಉತ್ತಮ ಸಾಧನೆ ಪ್ರದರ್ಶಿಸಿವೆ. ‘ತೆರಿಗೆ ಸಂಗ್ರಹಣೆಗೆ ಮನೆ ಭೇಟಿಯ ಬದಲು ಜನ ಕಚೇರಿ ಕೆಲಸಕ್ಕೆ ಬಂದಾಗಲೇ ತೆರಿಗೆ ಪಾವತಿಸುವಂತೆ ತಿಳಿಸುತ್ತಿದ್ದೆವು. ಗ್ರಾಮಸಭೆಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿತ್ತು. ಹೀಗಾಗಿ ಜನ ತೆರಿಗೆಯನ್ನು ಸಕಾಲಕ್ಕೆ ಪಾವತಿಸಿದ್ದಾರೆ’ ಎನ್ನುತ್ತಾರೆ ಪಿಡಿಒ ಒಬ್ಬರು. ‘ತೆರಿಗೆ ಸಂಗ್ರಹದಲ್ಲಿ ಜನವರಿವರೆಗೂ ಪಂಚಾಯಿತಿಗಳು ಹಿಂದೆ ಇದ್ದವು. ಪಿಡಿಒಗಳ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ವಿವಿಧ ಸಭೆ ಚರ್ಚೆಗಳ ಸಂದರ್ಭದಲ್ಲಿಯೂ ತೆರಿಗೆ ಸಂಗ್ರಹದ ಪ್ರಗತಿಯ ಕುರಿತು ಮಾಹಿತಿ ಪಡೆಯಲಾಗುತ್ತಿತ್ತು. ಹೀಗಾಗಿ ಪಿಡಿಒ ಹಾಗೂ ಸಿಬ್ಬಂದಿ ಗಣನೀಯ ಸಾಧನೆ ಮಾಡಿದರು’ ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂಡು ಪ್ರತಿಕ್ರಿಯಿಸಿದರು.

- ಸ್ವಾವಲಂಬನೆಯತ್ತ ಕೊಪ್ಪಳ ದಿಟ್ಟ ಹೆಜ್ಜೆ

ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಹಾಗೂ ಸಿಬ್ಬಂದಿ ವೇತನಕ್ಕೆ ಭವಿಷ್ಯದಲ್ಲಿ ಹಣಕಾಸು ಹೊಂದಿಸಿಕೊಳ್ಳಲು ಸ್ವಾಲವಂಬನೆಯತ್ತ ದಿಟ್ಟಹೆಜ್ಜೆ ಇರಿಸಿವೆ. ಕೊಪ್ಪಳ ತಾಲ್ಲೂಕಿನ ಲೇಬಗೇರಿ ಮತ್ತು ಕಾರಟಗಿ ತಾಲ್ಲೂಕಿನ ಬೆನ್ನೂರು ಸೇರಿದಂತೆ ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಸ ತೆರಿಗೆ ಆರಂಭಿಸಲಾಗಿದೆ. ಕಸ ವಿಲೇವಾರಿ ಮಾಡುವವರು ಪ್ರತಿ ಮನೆಯಿಂದ ಒಂದು ದಿನಕ್ಕೆ ₹1 ಸಂಗ್ರಹಿಸುತ್ತಿದ್ದಾರೆ. ಕಸದ ಆಧಾರದ ಮೇಲೆ ಹೋಟೆಲ್‌ಗಳಿಂದಲೂ ಕಸತೆರಿಗೆ ಸಂಗ್ರಹಿಸಿ ಅದನ್ನು ಕಸ ವಿಲೇವಾರಿ ಸಿಬ್ಬಂದಿಯ ವೇತನಕ್ಕೆ ಬಳಸಲಾಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಜಿಲ್ಲೆಯಲ್ಲಿ ಹೊಸ ಪ್ರಯೋಗ ಆರಂಭಿಸಲಾಗಿದ್ದು ಕಸ ಸಂಗ್ರಹದಿಂದ ದೊಡ್ಡಮಟ್ಟದಲ್ಲಿ ಆದಾಯ ಬರುತ್ತಿಲ್ಲ. ಆದ್ದರಿಂದ ಜಿಲ್ಲಾ ಪಂಚಾಯಿತಿಯೇ ಕಸ ಸಂಗ್ರಹ ಮಾಡುವವರಿಗೆ ವಾರ್ಷಿಕ ವೇತನಕ್ಕೆ ಅನುದಾನ ಮೀಸಲಿಟ್ಟಿದೆ. ಮುಂದಿನ ವರ್ಷದ ವೇಳೆಗೆ ಕಸ ಸಂಗ್ರಹದ ಹಣ ಬರುವ ಗುರಿಯನ್ನು ಜಿಲ್ಲಾ ಪಂಚಾಯಿತಿ ಹೊಂದಿದೆ. ಸಂಗ್ರಹವಾಗುವ ಪ್ಲಾಸ್ಟಿಕ್‌ ಸೇರಿದಂತೆ ಇತರ ತ್ಯಾಜ್ಯವನ್ನು ಸಂಸ್ಕರಿಸಿ ಮಾರಾಟ ಮಾಡಿ ಪಡೆಯುವ ಆದಾಯವನ್ನೇ ಆಯಾ ಗ್ರಾಮ ಪಂಚಾಯಿತಿಯೇ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಮಹಿಳೆಯರಾದರೆ ಮುತುವರ್ಜಿಯಿಂದ ಕಸ ಸಂಗ್ರಹಿಸುತ್ತಾರೆಂಬ ಕಾರಣಕ್ಕೆ ಜಿಲ್ಲೆಯ 171 ಮಹಿಳೆಯರಿಗೆ ಕಸ ವಿಲೇವಾರಿ ವಾಹನಗಳ ಚಾಲನಾ ತರಬೇತಿ ನೀಡಲಾಗಿದೆ. ಅದರಲ್ಲಿ ಕೆಲ ಮಹಿಳೆಯರು ವಾಹನ ಚಲಾಯಿಸುತ್ತಿದ್ದಾರೆ. ‘ಕಸ ಸಂಗ್ರಹದಿಂದ ಬರುವ ಆದಾಯವನ್ನೇ ವಾಹನ ಚಾಲನೆ ಸಿಬ್ಬಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಬಳಸಲು ಉದ್ದೇಶಿಸಲಾಗಿದೆ. ಈ ಯೋಜನೆ ಗ್ರಾ.ಪಂ.ಗಳ ಸ್ವಾವಲಂಬನೆಗೆ ಪೂರಕವಾಗಲಿದೆ’ ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆ ತಿಳಿಸಿದರು. 

ಗ್ರಾಮ ಪಂಚಾಯಿತಿಗಳ ತೆರಿಗೆಯನ್ನು ವಸೂಲಿ ಮಾಡಲು ಇದೇ ಮೊದಲ ಬಾರಿಗೆ ಬ್ಯಾಂಕ್‌ ಜೊತೆಗೆ ಒಪ್ಪಂದ ಮಾಡಿಕೊಂಡು ಪಿಒಎಸ್ ಮಷಿನ್‌ಗಳನ್ನು ಉಪಯೋಗಿಸಲಾಗುತ್ತಿದೆ. ಇದರಿಂದಾಗಿ ಸುಮಾರು ₹ 500 ಕೋಟಿ ಹೆಚ್ಚುವರಿ ತೆರಿಗೆ ಮೊತ್ತ ಸಂಗ್ರಹವಾಗಿದೆ.
ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ
ನಿರಂತರ ಅಭಿಯಾನದ ಕಾರಣ ತೆರಿಗೆ ಸಂಗ್ರಹ ಉತ್ತಮವಾಗಿದೆ. ಬರ ಇಲ್ಲದಿದ್ದರೆ ಹೆಚ್ಚು ಸಂಗ್ರಹವಾಗುತ್ತಿತ್ತು. ಬಾಕಿ ಮೊತ್ತದ ವಸೂಲಿಗೂ ಯತ್ನ ನಡೆದಿದೆ
–ರಾಹುಲ್‌ ಶರಣಪ್ಪ ಸಂಕನೂರ ಸಿಇಒ ಜಿಲ್ಲಾ ಪಂಚಾಯಿತಿ ಬಳ್ಳಾರಿ
ತಾಂತ್ರಿಕ ಸಮಸ್ಯೆಯಿಂದ ತೆರಿಗೆ ಸಂಗ್ರಹದಲ್ಲಿ ಏರುಪೇರಾಗಿದೆ. ಕೆಲವೆಡೆ ಸಂಪೂರ್ಣ ಸಂಗ್ರಹವಾಗಿದ್ದರೂ ಕಂಪ್ಯೂಟರ್‌ನಲ್ಲಿ ಅಪ್‌ಡೇಟ್ ಆಗುತ್ತಿಲ್ಲ.
ವಿಶ್ವನಾಥ ಬೈಲಮೂಲೆ ಪಿಡಿಒ ಅನಂತಾಡಿ ಗ್ರಾ.ಪಂ. ದಕ್ಷಿಣ ಕನ್ನಡ
ಕೆಲವು ಪಂಚಾಯಿತಿಗಳಲ್ಲಿ ತೆರಿಗೆ ಪರಿಷ್ಕರಣೆಯಾಗಿದೆ. ಇನ್ನೂ ಕೆಲವೆಡೆ ಮಾಡಿಲ್ಲ. ಇದರಿಂದಾಗಿ ಸಂಗ್ರಹದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ.
ಸುರೇಶ್ ಇಟ್ನಾಳ್ ಸಿಇಒ ಜಿಲ್ಲಾ ಪಂಚಾಯಿತಿ ದಾವಣಗೆರೆ
ಈ ವರ್ಷ ಬರವಿದೆ. ಜನರಲ್ಲಿ ಹಣವಿಲ್ಲ. ತೆರಿಗೆ ಪಾವತಿಸಲು ಆಸಕ್ತಿ ತೋರಿಲ್ಲ. ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ
ವಿನಾಯಕ ಪ್ರಕಾಶ ಧನಿಗೊಂಡ ಅಧ್ಯಕ್ಷ ಹಿರೆ ಹೊನ್ನಳ್ಳಿ ಗ್ರಾ.ಪಂ. ಕಲಘಟಗಿ ತಾಲ್ಲೂಕು ಧಾರವಾಡ ಜಿಲ್ಲೆ

ಪೂರಕ ಮಾಹಿತಿ: ಕೆ.ಜೆ.ಮರಿಯಪ್ಪ, ಬಷೀರ ಅಹ್ಮದ್‌ ನಗಾರಿ, ವಿಕ್ರಂ ಕಾಂತಿಕೆರೆ, ಡಿ.ಕೆ.ಬಸವರಾಜು, ಗಣಪತಿ ಹೆಗಡೆ, ಕೆ.ಎಸ್‌.ಗಿರೀಶ, ಸಂತೋಷ್‌ ಚಿನಗುಡಿ, ಪ್ರಮೋದ್‌ ಮತ್ತು ಜಿಲ್ಲಾ ವರದಿಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.