ಬೆಂಗಳೂರು: ರಾಜ್ಯದಲ್ಲಿ ಸುಮಾರು ಒಂದು ದಶಕದಷ್ಟು ಕಾಲ ಸ್ಥಗಿತವಾಗಿದ್ದ ಕಬ್ಬಿಣದ ಅದಿರು ಗಣಿಗಾರಿಕೆ, ಈಗ ಬಿಗಿ ಕಣ್ಗಾವಲಿನ ನಡುವೆ ಬಹುತೇಕ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಆದರೆ, ಕಬ್ಬಿಣದ ಅದಿರು ಗಣಿಗಾರಿಕೆ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಕಟ್ಟಡ ಕಲ್ಲು, ಗ್ರಾನೈಟ್ ಮತ್ತು ಮರಳು ಗಣಿಗಾರಿಕೆಯಲ್ಲಿ ಅಕ್ರಮ ಹೆಚ್ಚಿದೆ. ರಾಜ್ಯದ ಉದ್ದಗಲಕ್ಕೂ ಆರ್ಭಟಿಸುತ್ತಿರುವ ‘ಅಕ್ರಮ ಗಣಿ ಮಾಫಿಯಾ’ದ ಜತೆ ರಾಜಕೀಯ ಪ್ರಭಾವವೂ ಮೇಳೈಸಿಕೊಂಡು ಸರ್ಕಾರವನ್ನೇ ಅಸಹಾಯಕ ಸ್ಥಿತಿಗೆ ತಂದು ನಿಲ್ಲಿಸಿವೆ!
ಈ ವರ್ಷದ ಜನವರಿ 22ರ ರಾತ್ರಿ ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ಕ್ರಷರ್‌ವೊಂದಕ್ಕೆ ತಂದಿದ್ದ ಜಿಲೆಟಿನ್ ಸೇರಿದಂತೆ ಸ್ಫೋಟಕ ತುಂಬಿದ್ದ ಲಾರಿ ಸ್ಫೋಟವಾಗಿ ಆರು ಮಂದಿ ಮೃತಪಟ್ಟು, ಹಲವರು ಕಣ್ಮರೆಯಾಗಿದ್ದರು. ಫೆಬ್ರುವರಿ 21ರ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯ ನಾಗವಲ್ಲಿ ಬೆಟ್ಟದಲ್ಲಿ ಕಲ್ಲು ಗಣಿಯೊಂದರಲ್ಲಿದ್ದ ಸ್ಫೋಟಕ ಸಾಗಿಸುವಾಗ ಸಿಡಿದು ಆರು ಮಂದಿ ಸಾವಿಗೀಡಾಗಿದ್ದರು. ಆಗ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಬಿರುಸಿನ ಚರ್ಚೆ ನಡೆದಿತ್ತು. ಬಿಗಿ ಕ್ರಮಗಳ ಭರವಸೆಯ ಜತೆಗೆ ಅಲ್ಲಲ್ಲಿ ಅನುಷ್ಠಾನವೂ ಆರಂಭವಾಗಿತ್ತು.
ಆದರೆ, ಕೆಲವೇ ತಿಂಗಳುಗಳಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ಚಟುವಟಿಕೆ ಜೋರಾಗಿ ಆರ್ಭಟಿಸಲಾರಂಭಿ
ಸಿದೆ. ಮಂಡ್ಯದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆಯಿಂದ ಕೆಲವೇ ಕಿಲೋಮೀಟರ್‌ಗಳಷ್ಟು ದೂರವಿರುವ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿನ ಅಕ್ರಮಗಳ ಕುರಿತು ಸ್ಥಳೀಯ ಸಂಸದೆ ಸುಮಲತಾ ಅಂಬರೀಷ್ ಎತ್ತಿರುವ ಪ್ರಶ್ನೆಯಿಂದಾಗಿ ಮತ್ತೆ ‘ಅಕ್ರಮ ಗಣಿಗಾರಿಕೆ’ಯ ಚರ್ಚೆ ಮುನ್ನೆಲೆಗೆ ಬಂದಿದೆ.
ಜತೆಯಲ್ಲೇ ಕಲ್ಲು ಗಣಿಗಾರಿಕೆಯಲ್ಲಿನ ಹತ್ತಾರು ಬಗೆಯ ಅಕ್ರಮಗಳೂ ಸರಣಿಯೋಪಾದಿಯಲ್ಲಿ ಹೊರ ಬರಲಾಂಭಿಸಿವೆ.
ಮೇಲುಸ್ತುವಾರಿಯ ಮೂಗುದಾರ: ಸುಪ್ರೀಂಕೋರ್ಟ್ ಮಧ್ಯಪ್ರವೇಶದಿಂದ ರಾಜ್ಯದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ
2010ರಿಂದ ಸಂಪೂರ್ಣ ನಿಷೇಧವಾ ಗಿತ್ತು. ಹತ್ತು ವರ್ಷಗಳ ಬಿಡುವಿನ ನಂತರ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ‘ಎ’ ಮತ್ತು ‘ಬಿ’ ದರ್ಜೆಯ ಗಣಿಗಳಲ್ಲಿ ಬಹುತೇಕ ಪೂರ್ಣ ಪ್ರಮಾಣದಲ್ಲಿ ಗಣಿಗಾರಿಕೆ ಆರಂಭವಾಗಿದೆ.
ಸುಪ್ರೀಂಕೋರ್ಟ್ ವಾರ್ಷಿಕ 3.5 ಕೋಟಿ ಟನ್ ಮಿತಿ ವಿಧಿಸಿರುವುದರಿಂದ ನಿಯಂತ್ರಿತವಾಗಿ ಗಣಿಗಾರಿಕೆ ನಡೆಯು
ತ್ತಿದೆ. ಸುಪ್ರೀಂಕೋರ್ಟ್ ನೇಮಿಸಿರುವ ಮೇಲುಸ್ತುವಾರಿ ಸಮಿತಿಯ ಕಣ್ಗಾವಲಿ
ನಲ್ಲೇ ಗಣಿಗಾರಿಕೆ ನಡೆಯುತ್ತಿದ್ದು, ಅದಿರನ್ನು ಇ–ಹರಾಜಿನ ಮೂಲಕ ಮಾರಾಟ ಮಾಡುವ ಕೆಲಸವನ್ನೂ ಸಮಿತಿಯೇ ನಿರ್ವಹಿಸುತ್ತಿದೆ. ಸರ್ಕಾರಕ್ಕೆ ದೊರೆಯಬೇಕಾದ ರಾಜಧನ, ತೆರಿಗೆ, ಮೇಲುಸುಂಕವನ್ನು ಆರಂಭದಲ್ಲೇ ಕಡಿತ ಮಾಡಿಕೊಳ್ಳುತ್ತಿರುವುದರಿಂದ ಅಕ್ರಮಗಳಿಗೆ ಬಹುತೇಕ ಕಡಿವಾಣ ಬಿದ್ದಿದೆ.
ಕಲ್ಲು ಗಣಿಯಿಂದ ಕಂಪನ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದಲ್ಲಿ 2,353.06 ಎಕರೆ ವಿಸ್ತೀರ್ಣದ 517 ಗ್ರಾನೈಟ್ ಮತ್ತು ಆಲಂಕಾರಿಕ ಶಿಲೆಗಳ ಗಣಿ ಗುತ್ತಿಗೆಗಳನ್ನು ನೀಡಲಾಗಿದೆ. 10,567 ಎಕರೆ ಮತ್ತು 31 ಗುಂಟೆ ವಿಸ್ತೀರ್ಣದಲ್ಲಿ ಕಟ್ಟಡ ಕಲ್ಲು, ಕೆಂಪು ಕಲ್ಲು ಗಣಿಗಾರಿಕೆಗೆ 2,493 ಗುತ್ತಿಗೆಗಳನ್ನು ನೀಡಲಾಗಿದೆ.
ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ನೈಜ ವಿಸ್ತೀರ್ಣಕ್ಕೂ, ಗುತ್ತಿಗೆ ಪ್ರದೇಶಗಳಿಗೂ ಅಜಗಜಾಂತರವಿದೆ. ಕೆಲವರು ಗುತ್ತಿಗೆಯ ಹಲವು ಪಟ್ಟು ಪ್ರದೇಶಗಳಲ್ಲಿ ಸ್ಫೋಟಕ ಸಿಡಿಸಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೆ, ಕಲ್ಲುಪುಡಿ ಘಟಕಗಳ (ಕ್ರಷರ್) ಜತೆ ನಂಟು ಹೊಂದಿರುವ ಹಲವರು ಗುತ್ತಿಗೆ ಇಲ್ಲದೆ ರಾತ್ರೋರಾತ್ರಿ ಬೆಟ್ಟ, ಗುಡ್ಡಗಳನ್ನು ಕರಗಿಸುತ್ತಿದ್ದಾರೆ. 2019–20ರ ಮತ್ತು 2020–21ರ ಅವಧಿಯಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ, ಸಾಗಣೆ ಮತ್ತು ದಾಸ್ತಾನು ಆರೋಪದ ಮೇಲೆ 3,935 ಪ್ರಕರಣಗಳನ್ನು ಪತ್ತೆಮಾಡಿ, ₹ 28.20 ಕೋಟಿ ದಂಡ ವಿಧಿಸಲಾಗಿದೆ.
ಕಲ್ಲು ಗಣಿಗಳಿಗೂ, ರಾಜಕಾರಣಕ್ಕೂ ನಿಕಟ ನಂಟಿದೆ. ಸಚಿವರು, ಶಾಸಕರು, ಸಂಸದರು, ಮಾಜಿ ಸಚಿವರಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ರಾಜಕಾರಣಿಗಳು ದಿಢೀರ್ ಶ್ರೀಮಂತರಾಗಲು ಮತ್ತು ರಾಜಕಾರಣದ ಅಗತ್ಯಕ್ಕೆ ತಕ್ಕಂತೆ ‘ಆದಾಯ’ದ ಮೂಲ ಸೃಷ್ಟಿಸಿಕೊಳ್ಳಲು ಕಲ್ಲು ಗಣಿಗಾರಿಕೆಯ ಹಿಂದೆ ಬಿದ್ದಿದ್ದಾರೆ. ಎಲ್ಲ ಹಂತದ ರಾಜಕಾರಣಿಗಳೂ ‘ಅಕ್ರಮ ಗಲ್ಲು ಗಣಿ ಮಾಫಿಯಾ’ ಪರವಾಗಿ ಧ್ವನಿ ಎತ್ತುತ್ತಿರುವುದು ಈ ಜಾಲದ ಹಿಂದೆ ಬಲವಾದ ರಾಜಕೀಯ ಹಿತಾಸಕ್ತಿಗಳಿರುವುದನ್ನು ಖಾತರಿಪಡಿಸುವಂತಿದೆ.
ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ನಿಯಂತ್ರಣದ ಅಧಿಕಾರ ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಪೊಲೀಸ್, ಅರಣ್ಯ–ಹೀಗೆ ನಾನಾ ಇಲಾಖೆಗಳ ನಡುವೆ ಹರಿದು ಹಂಚಿ ಹೋಗಿರುವುದು ಬೆಟ್ಟ, ಗುಡ್ಡಗಳನ್ನು ಸ್ಫೋಟಿಸಿ ತಿಜೋರಿ ತುಂಬಿಸಿಕೊಳ್ಳುತ್ತಿರುವವರ ಪಾಲಿಗೆ ವರದಾನವಾಗಿದೆ.
ನಿಯಂತ್ರಣದ ಅನುಪಸ್ಥಿತಿ: ‘ಕಬ್ಬಿಣದ ಅದಿರು ಗಣಿಗಳಲ್ಲಿ 2010ಕ್ಕೂ ಮೊದಲು ಇದ್ದ ಸ್ಥಿತಿಯೇ ಕಲ್ಲು ಗಣಿಗಾರಿಕೆಯಲ್ಲಿ ಈಗ ಕಂಡುಬರುತ್ತಿದೆ. ಸುಪ್ರೀಂಕೋರ್ಟ್ ನೇಮಿಸಿದ್ದ ಮೇಲುಸ್ತುವಾರಿ ಸಮಿತಿಯ ಕಣ್ಗಾವಲಿನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಆರಂಭವಾದ ಬಳಿಕ ಬಹುತೇಕ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ. ಕಲ್ಲು ಗಣಿಗಾರಿಕೆ ನಿಯಂತ್ರಣಕ್ಕೂ ಅಂತಹ ವ್ಯವಸ್ಥೆ ಬಂದರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು’ ಎನ್ನುತ್ತಾರೆ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ತಂಡ ಮುಖಸ್ಥರಾಗಿದ್ದ ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ಯು.ವಿ. ಸಿಂಗ್.
ಮರಳು ನಿಕ್ಷೇಪಗಳಲ್ಲೂ ಅಕ್ರಮವೇ ಹೆಚ್ಚು
ಮರಳು ಗಣಿಗಾರಿಕೆಯಲ್ಲೂ ಸಕ್ರಮಕ್ಕಿಂತ ಅಕ್ರಮವೇ ಹೆಚ್ಚು ಎಂಬ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ. ರಾಜಕೀಯ ವ್ಯಕ್ತಿಗಳು, ಅಪರಾಧ ಹಿನ್ನೆಲೆಯ ವರೇ ಹೆಚ್ಚಾಗಿ ಮರಳು ನಿಕ್ಷೇಪ
ಗಳ ಮೇಲೆ ಹಿಡಿತ ಸಾಧಿಸಿದ್ದು, ಸರ್ಕಾರದ ಬೊಕ್ಕಸ ಸೇರಬೇ ಕಾದ ರಾಜಧನ, ತೆರಿಗೆಯನ್ನು ವಂಚಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪರವಾನಗಿ ಷರತ್ತು, ಪರಿಸರ ಸಂರಕ್ಷಣಾ ಕಾಯ್ದೆಗಳನ್ನು ಲೆಕ್ಕಿಸದೇ ಮರಳು ಸಾಗಿಸುತ್ತಿರುವುದರಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಜಲ ಮೂಲಗಳು ಅಪಾಯಕ್ಕೆ ಸಿಲುಕಿವೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದ 21 ಜಿಲ್ಲೆಗಳಲ್ಲಿ 4,733 ಎಕರೆ 49 ಗುಂಟೆ ವಿಸ್ತೀರ್ಣದಲ್ಲಿ ನದಿ ಪಾತ್ರ ಹಾಗೂ ಪಟ್ಟಾ ಜಮೀನಿನಲ್ಲಿ ಮರಳಿನ ನಿಕ್ಷೇಪಗಳಿವೆ. ಅಲ್ಲಿ ಅಂದಾಜು, 1.49 ಕೋಟಿ ಟನ್‌ಗಳಷ್ಟು ಮರಳಿನ ಲಭ್ಯತೆ ಇದೆ.
ಆದರೆ, ಇಲಾಖೆಯ ಅಂದಾಜು ಕೇವಲ ಕಡತಗಳಿಗಷ್ಟೇ ಎಂಬ ಸ್ಥಿತಿ ಇದೆ. ಹಳ್ಳ, ಕೊಳ್ಳಗಳನ್ನೂ ಬಿಡದೆ ಮರಳು ಸಾಗಿಸಲಾಗುತ್ತಿದೆ. ಪರವಾನಗಿ ನೀಡಿದ ವಿಸ್ತೀರ್ಣದ ಹತ್ತಾರು ಪಟ್ಟು ಹೆಚ್ಚುವರಿ ವಿಸ್ತೀರ್ಣದಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸಲಾಗುತ್ತಿದೆ.
ಮರಳಿನ ಅಕ್ರಮ ಗಣಿಗಾ ರಿಕೆ, ಸಾಗಣೆ ಮತ್ತು ದಾಸ್ತಾನು ಆರೋಪದಡಿ 2019–20 ಹಾಗೂ 2020–21ರಲ್ಲಿ 3,946 ಪ್ರಕರಣಗಳನ್ನು ಪತ್ತೆಮಾಡಿದ್ದು, ₹ 5.75 ಕೋಟಿ ದಂಡ ವಿಧಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಅಕ್ರಮಕ್ಕೆ ಎಂ–ಸ್ಯಾಂಡ್ ನಂಟು
ರಾಜ್ಯದಲ್ಲಿ 120ಕ್ಕೂ ಹೆಚ್ಚು ಕ್ರಷರ್‌ಗಳು ಮತ್ತು 100ಕ್ಕೂ ಹೆಚ್ಚು ಎಂ–ಸ್ಯಾಂಡ್ ಘಟಕಗಳಿವೆ. ಅವುಗಳಲ್ಲಿ ಬಹುತೇಕ ಘಟಕಗಳಿಗೆ ರಾಜಕಾರಣಿಗಳೇ ಮಾಲೀಕರು. ಉಳಿದ ಕೆಲವೆಡೆ ಬೇನಾಮಿ ಹೆಸರುಗಳಲ್ಲಿ ಘಟಕಗಳನ್ನು ತೆರೆದಿದ್ದಾರೆ.
‘ಕ್ರಷರ್ ಮತ್ತು ಎಂ–ಸ್ಯಾಂಡ್‌ಘಟಕಗಳಲ್ಲಿನ ಒಟ್ಟು ಉತ್ಪಾದನೆ ಮೇಲೆ ನಿಗಾ ಇಡುವ ವ್ಯವಸ್ಥೆಯೇಇಲ್ಲ. ಅಲ್ಲಿಗೆ ಯಾವ ಮೂಲ
ದಿಂದ ಕಲ್ಲು ಪೂರೈಸಲಾಗುತ್ತಿದೆ ಎಂಬುದನ್ನು ಪತ್ತೆ ಮಾಡಿದರೆ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸಾಧ್ಯ. ಅಲ್ಲದೇ ಸರಿ
ಯಾದ ತಪಾಸಣೆ ನಡೆಸಿದರೆ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ರಾಜಧನ, ತೆರಿಗೆ, ಮೇಲುಸುಂಕ ಸಂದಾಯವಾಗುತ್ತದೆ’ ಎನ್ನುತ್ತಾರೆ ಡಾ.ಯು.ವಿ. ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.