‘ಸಂಕಷ್ಟಕ್ಕೆ ಹಾಪ್‌ಕಾಮ್ಸ್ ಏದುಸಿರು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಫೆಬ್ರವರಿ 12) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
‘ಸ್ಥಾಪನೆಯ ಮೂಲ ಉದ್ದೇಶವೇ ಮರೆತ ಹಾಪ್‌ಕಾಮ್ಸ್’
ಹಾಪ್‌ಕಾಮ್ಸ್ ಮಳಿಗೆಗಳು ಸ್ಥಾಪನೆಯ ಮೂಲ ಉದ್ದೇಶವೇ ಮರೆತು ಹೋಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಪ್‌ಕಾಮ್ಸ್ ಮಳಿಗೆಗೆಳ ಕೊರತೆ ಎದ್ದು ಕಾಣುತ್ತದೆ. ಖಾಸಗಿ ವ್ಯಾಪಾರಸ್ಥರೊಂದಿಗೆ ಪೈಪೋಟಿಯ ಮಾಡಲು ಸೋತು ಹೋಗಿವೆ. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ, ಖರೀದಿಸಿದ ಪದಾರ್ಥಗಳಿಗೆ ಕೊಂಡೊಯ್ಯಲು ಗ್ರಾಹಕರಿಗೆ ಪೇಪರ್ ಕವರ್ ನೀಡದಿರುವುದು... ಹೀಗೆ ಹತ್ತು ಹಲವಾರು ಸಮಸ್ಯೆಗಳ ಬೀಡಾಗಿರುವ ಈ ಮಳಿಗೆಗಳ ಕಡೆಗೆ ಗ್ರಾಹಕರು ಮುಖ ಮಾಡುವುದನ್ನು ನಿರೀಕ್ಷಿಸುವುದು ಎಷ್ಟು ಸರಿ?
- ಕೆ. ಪ್ರಭಾಕರ, ಬೆಂಗಳೂರು
***
‘ಗ್ರಾಹಕರ ಆರೋಗ್ಯಯುತ, ಸತ್ವಯುತ ಕೊಂಡಿ’
ರೈತರ ಮತ್ತು ಗ್ರಾಹಕರ ಆರೋಗ್ಯಯುತ, ಸತ್ವಯುತ ಕೊಂಡಿಯೇ 'ಹಾಪ್‌ಕಾಮ್ಸ್'. ಬಹುಶಃ ಈ ಒಂದು ಅಳುಕಿನ ಅಪನಂಬಿಕೆಯಿಂದ ಕೃಷಿಕರಾಗಲಿ, ಯುವಜನತೆಯಾಗಲೀ, ಅದರಲ್ಲೂ ಯಾವುದೇ ವ್ಯಾಪಾರಸ್ಥ ಕುಟುಂಬದವರೇ ಆಗಲೀ ಆರ್ಥಿಕ ಸಂಕಷ್ಟದ ಭೀತಿಯಿಂದ ಯಾವುದೇ ಬಗೆಯ ಉದ್ಯಮ, ಖಾಸಗಿ ವ್ಯವಹಾರ ನಡೆಸಲು ಇತ್ತೀಚೆಗೆ ಹಿಂಜರಿಯುತ್ತಿದ್ದಾರೆ. ಹಾಪ್ ಕಾಮ್ಸ್ ನಂತಹ ಉದ್ಯಮ ಮಳೆ–ಬೆಳೆ ಆಧರಿಸಿದ್ದು. ತೋಟಗಾರಿಕೆ ಬೆಳೆ ಬೆಳೆಸುವ, ತೋಟಗಾರಿಕೆ ಯೋಜನೆಗಳ ಸೌಲಭ್ಯ, ಮಾರುಕಟ್ಟೆ ಮುಂತಾದ ಅಂಶಗಳ ಬಗ್ಗೆ ಸೂಕ್ತ ತರಬೇತಿ, ಕಾರ್ಯಾಗಾರ ಅಗತ್ಯವಿದೆ. ಅಂತೆಯೇ ಹಾಪ್‌ಕಾಮ್ಸ್ ಅಧಿಕಾರಿಗಳು ಕಟ್ಟುನಿಟ್ಟಾದ ಕಾಲಕಾಲದ ಪರಿಶೀಲನೆ, ವ್ಯಾಪಾರಿಗಳಿಗೆ ಕಾರ್ಯಸೂಚಿಗಳ ವೈಖರಿ, ಯೋಜನೆ, ಮಾರಾಟ ವಿಧಾನ, ಸಬ್ಸಿಡಿ, ತೆರಿಗೆ ವಿಧಾನಗಳ ಮಾಹಿತಿ, ಮಾರುಕಟ್ಟೆ ವ್ಯವಸ್ಥೆ ಮುಂತಾದವುಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕು. ಹಳ್ಳಿ ಮತ್ತು ನಗರಗಳ ನಿರುದ್ಯೋಗಿಗಳು ಮುಖ್ಯವಾಗಿ ಸರ್ಕಾರಿ ಉದ್ಯೋಗದ, ಉನ್ನತ ಖಾಸಗಿ ಹುದ್ದೆಗಳ ಮೇಲೆ ಹೆಚ್ಚು ಒಲವು ಬೆಳೆಸಿಕೊಂಡು ದೇಶಕ್ಕೆ ಹೊರೆಯಾಗುತ್ತಿರುವ ಯುವಜನತೆ, ಹಾಪ್‌ಕಾಮ್ಸ್ ಮುಂತಾದ ಉದ್ಯಮದಲ್ಲಿ ಆಸಕ್ತಿ ಹೊಂದಿ ಯಶಸ್ವಿ ಮಾರ್ಗ ಕಂಡುಕೊಳ್ಳಲು ಸರ್ಕಾರ, ಸಮಾಜ ಪ್ರೋತ್ಸಾಹಿಸಬೇಕಿದೆ. ಇನ್ನು ಸರ್ಕಾರವು ಸೂಕ್ತ ಆರ್ಥಿಕ ತಜ್ಞರು, ಅಧಿಕಾರಿಗಳು, ಜನತೆಯ ಜೊತೆಗೆ ಸಮಾವೇಶ ನಡೆಸಿ ಸೂಕ್ತ ಸಲಹೆ, ಮಾರ್ಗಸೂಚಿಗಳ ಮೂಲಕ ನಾಡಿನ ಬೃಹತ್ ಮತ್ತು ಸಣ್ಣ ಉದ್ಯಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಬೇಕಿದೆ. ಈಗಲಾದರೂ ಶರವೇಗದ ಕಾರ್ಯಗಳು, ಪರಿಹಾರಗಳು ಹಾಪ್‌ಕಾಮ್ಸ್ ಕ್ಷೇತ್ರದಲ್ಲಿ ನಡೆದು ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿಯ ಆಶಾಕಿರಣದ ಕಡೆಗೆ ನಡೆಯಲಿ.
ಮಂಜುಳಾ, ಕೋರಮಂಗಲ, ಬೆಂಗಳೂರು
==
‘ಅಸ್ತಿತ್ವ ಉಳಿಸಿಕೊಳ್ಳುವ ಸವಾಲು’
ಸರ್ಕಾರದ ಹಾಪ್‌ಕಾಮ್ಸ್ ಮಳಿಗೆಗಳಿಗೆ ಇಂದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಸರಿಯಾದ ಆಡಳಿತ, ಸಿಬ್ಬಂದಿ ಕೊರತೆ ಮುಂತಾದ ಸಮಸ್ಯೆಗಳಿಂದ ಖಾಸಗಿ ವ್ಯಾಪಾರಸ್ಥರೊಂದಿಗೆ ಪೈಪೊಟಿ ನಡೆಸಲು ಏದುಸಿರು ಬಿಡುತ್ತಿದೆ. ವಸತಿ ಶಾಲೆ, ದಾಸೋಹ ಕ್ಷೇತ್ರಗಳು, ಶಾಲೆಯ ಮಧ್ಯಾಹ್ನದ ಬಿಸಿ ಊಟಕ್ಕೆ ಹಾಗೂ ಜೈಲುಗಳ ಕೈದಿಗಳಿಗೆ ಸಾಗುಸುತ್ತಿದ್ದ ತರಕಾರಿ ಮತ್ತು ಹಣ್ಣು ಇಂದು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ರಾಜ್ಯದಲ್ಲಿ ಹಲವು ಮಳಿಗೆಗಳ ನಿರ್ಮಾಣ ಮಾಡಲು ಸರ್ಕಾರ ಹಣ ವ್ಯಯಮಾಡಿದೆ, ಆದರೆ, ಹಲವಾರು ಮಳಿಗೆಗಳು ಇಂದು ಅಂಗಡಿ ಬಾಡಿಗೆ ಕಟ್ಟಲಾಗದೆ, ನಷ್ಟ ಅನುಭವಿಸಿ ಮುಚ್ಚುತ್ತಿವೆ. ತೋಟಗಾರಿಕೆ ಮೇಲೆ ಅವಲಂಬಿತವಾಗಿರುವ ಎಷ್ಟೋ ರೈತ ಕುಟುಂಬಗಳು ಹಾಪ್‌ಕಾಮ್ಸ್ ಮುಚ್ಚಿರುವುದರಿಂದ, ಖಾಸಗಿ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ಅವರ ಬೆಳೆಗಳು ಹಾಗೂ ಹಣ್ಣು ತರಕಾರಿಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದರಿಂದ ಸರ್ಕಾರ ಪುನಃ ಹಾಪ್‌ಕಾಮ್ಸ್ ಏಳಿಗೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು.
ಮಲ್ಲಿಕಾರ್ಜುನ ಯಂಕಂಚಿ, ಆಲಗೂರ, ವಿಜಯಪುರ
***
‘ತಾಲ್ಲೂಕಿಗೊಂದು ವಿಸ್ತರಣೆಯಾಗಲಿ’
ಜಿಲ್ಲಾಮಟ್ಟದಲ್ಲಿರುವ ಹಾಪ್‌ಕಾಮ್ಸ್ ಅನ್ನು ತಾಲ್ಲೂಕು ವಲಯಕ್ಕೆ ವಿಸ್ತರಿಸುವ ಅಗತ್ಯವಿದೆ. ಏಕೆಂದರೆ ಜಿಲ್ಲಾ ಕೇಂದ್ರದಿಂದ ದೂರದಲ್ಲಿರುವ ರೈತರು ತಾವು ಬೆಳೆದ ಆಹಾರ ಧಾನ್ಯಗಳು, ತರಕಾರಿಗಳಂತಹ ವಸ್ತುಗಳನ್ನು ತಂದು ಜಿಲ್ಲಾ ಕೇಂದ್ರದ ಸಂಸ್ಥೆಗಳಲ್ಲಿ ಮಾರಾಟ ಮಾಡಲು ಕಷ್ಟ. ಸಾಗಣೆ ವೆಚ್ಚವು ರೈತರಿಗೆ ಅನಾನುಕೂಲವಾಗಿರುತ್ತದೆ. ಜೊತೆಗೆ ಈ ಹಾಪ್‌ಕಾಮ್ಸ್ ಸಂಸ್ಥೆಯ ಕುರಿತು ರೈತರಲ್ಲಿ ಮಾಹಿತಿಯ ಕೊರತೆಯಿದೆ, ಅದಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ರೈತರಿಗೆ ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ.
–ಬೀರಪ್ಪ ಡಿ.ಡಂಬಳಿ, ಕೋಹಳ್ಳಿ, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.