ADVERTISEMENT

ಒಳನೋಟ: ಕಂದಾಯಕ್ಕೆ ಬೇಕು ‘ಚಿಕಿತ್ಸೆ’

ಚಂದ್ರಹಾಸ ಹಿರೇಮಳಲಿ
Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

‘ಮೂಡುಬಿದಿರೆಯ ಮಾಂಟ್ರಾಡಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಜಾಗದ 11–ಇ ನಕ್ಷೆ ಪಡೆಯಲು ಹತ್ತು ವರ್ಷಗಳು ಸರ್ವೆ ಇಲಾಖೆಗೆ ಅಲೆದಿದ್ದರು. ಅವರಿಗೆ ನಕ್ಷೆ ಕೊಡಿಸಲು ಲೋಕಾಯುಕ್ತರೇ ಮಧ್ಯ ಪ್ರವೇಶ ಮಾಡಬೇಕಾಯಿತು!’

–ಇದು ನಿವೇಶನ, ಜಮೀನು ಸೇರಿದಂತೆ ತಮ್ಮ ಭೂ ದಾಖಲೆಗಳನ್ನು ಪಡೆಯಲು, ಸರ್ವೆ ಕೆಲಸಗಳಿಗೆ ಜನರು ಪಡುತ್ತಿರುವ ಬವಣೆಯ ಒಂದು ಉದಾಹರಣೆಯಷ್ಟೆ.

ADVERTISEMENT

ಭೂ ಪರಿವರ್ತನೆ, ಪಕ್ಕಾ ಪೋಡಿ, ಜಮೀನು ಮಂಜೂರಾತಿಯಂತಹ ಕೆಲಸ ಗಳಿಗೆ ಲಕ್ಷದಿಂದ ಕೋಟಿಯವರೆಗೂ ‘ಕೈಬಿಸಿ’ ಮಾಡದೇ ಯಾವ ಕೆಲಸವೂ ಸಮಯಕ್ಕೆ ಸರಿಯಾಗಿ, ಸುಸೂತ್ರವಾಗಿ ನಡೆಯುವುದಿಲ್ಲ. ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆಗಳಲ್ಲಿ ಎಷ್ಟೇ ಸುಧಾರಣೆ ತಂದರೂ ಭ್ರಷ್ಟಾಚಾರ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪದಿಂದ ಮುಕ್ತವಾಗಲು ಕಂದಾಯ ಇಲಾಖೆಗೆ ಸಾಧ್ಯವಾಗಿಲ್ಲ’ ಎನ್ನುತ್ತಾರೆ ನಿವೃತ್ತ ಉಪ ವಿಭಾಗಾಧಿಕಾರಿ ರಾಜಪ್ಪ. 

ಕಂದಾಯ ಇಲಾಖೆಯಲ್ಲಿ ಸರ್ವೇಯರ್‌ಗಳ ಕೊರತೆ ಇದೆ. ಜಮೀನು ಹದ್ದುಬಸ್ತು ಮಾಡಿಸಿಕೊಳ್ಳಲು ರೈತರು ಹೆಣಗಾಡುವ ಪರಿಸ್ಥಿತಿ ಇದೆ. ಸರ್ವೆ ಶುಲ್ಕ ಕಟ್ಟಿದರೂ ಮುಗಿದ ಮೇಲೆ ಮೇಲೊಂದಿಷ್ಟು ಕೊಡುವುದು ಕಡ್ಡಾಯ ಎನ್ನುವಂತಾಗಿದೆ. ರೈತರ ಜಮೀನುಗಳ ಸರ್ವೆ, ಹದ್ದುಬಸ್ತು ಗುರುತಿಸುವುದು, ದಾಖಲೆಗಳನ್ನು ಸರಿಪಡಿಸುವ ಕೆಲಸವನ್ನು ಲಂಚದ ಹಣವಿಲ್ಲದೇ ಮಾಡಿ ಕೊಡುವುದೇ ಇಲ್ಲ. 11ಇ ನಕ್ಷೆಗೆ ಕಾಲಾವಕಾಶ ಬೇಕಾಗುತ್ತದೆ. ಆದರೆ ₹2 ಸಾವಿರದಿಂದ ₹3 ಸಾವಿರ ಕೊಟ್ಟರೆ ಬೇಗ ಕೆಲಸ ಆಗುತ್ತದೆ. ವಾಲಿಕಾರರು, ಗ್ರಾಮ ಆಡಳಿತಾಧಿಕಾರಿಗಳ ಬಳಿ ಸರ್ವೆ ಅಧಿಕಾರಿಗಳು ಅರ್ಜಿದಾರ ಹೇಗೆ ಎಂಬ ಮಾಹಿತಿ ಪಡೆದು ಹಣ ಕೀಳುವ ಉಪಾಯ ಹೂಡುತ್ತಾರೆ. ಮಧ್ಯವರ್ತಿಗಳ ಮೂಲಕ ಹೋದರೆ ಹಾಗೂ ಹಣ ನೀಡಿದರೆ ಕೆಲಸ ಬೇಗ ಆಗುತ್ತವೆ ಎನ್ನುವುದು ಹಲವು ರೈತರ ಆರೋಪ.

‘ಹದ್ದುಬಸ್ತು ಮಾಡಲು ಕೋರುವ ವರು ವಿದ್ಯಾವಂತರಾದರೆ ಅಥವಾ ರಾಜಕಾರಣಿಗಳಿದ್ದರೆ ‘ನಿಮ್ಮ ಖುಷಿ ಕೊಡಿ’ ಎಂದು ಕೇಳುತ್ತಾರೆ. ಇಲ್ಲದಿದ್ದರೆ ನೇರವಾಗಿಯೇ ₹5 ಸಾವಿರ ಪೀಕುತ್ತಾರೆ’ ಎಂದು ರೈತರು ದೂರುತ್ತಾರೆ.

ಜಮೀನುಗಳನ್ನು ಮಾರಾಟ ಮಾಡುವ ಅಥವಾ ತಮ್ಮ ಸಂಬಂಧಿಗಳಿಂದ ಪಾಲು ಪಡೆಯುವ ಹೊತ್ತಿನಲ್ಲಿ ಸರ್ವೆ ಮಾಡಿಸುವುದು ಸಾಮಾನ್ಯ. ಇದಕ್ಕಾಗಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಭರ್ತಿ ಮಾಡಿ ನಿಯಮದಂತೆ 40 ದಿನಗಳು ಕಾಯ್ದರೂ ಅತ್ತ ಕಡೆ ಸರ್ವೇಯರ್‌ಗಳು ಸುಳಿಯುವುದಿಲ್ಲ. ಮಾಮೂಲು ತಲುಪಿಸಿದ ಬಳಿಕವಷ್ಟೇ ಬರುತ್ತಾರೆ. ಅವರಿಗೆ ವಾಹನ ವ್ಯವಸ್ಥೆ, ಊಟದ ವ್ಯವಸ್ಥೆಯನ್ನೂ ನಾವೇ ಮಾಡಬೇಕು ಎಂದು ಆರೋಪಿಸುತ್ತಾರೆ ರೈತರು.

‘ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಕೆಲ ಗ್ರಾಮಗಳು ಬೇರೆ ಪಂಚಾಯಿತಿಗೆ ಹಸ್ತಾಂತರವಾದವು. ಆಗ ಆ ಗ್ರಾಮಗಳ ರೈತರ ಜಮೀನುಗಳ ಸರ್ವೆ ನಂಬರ್‌ಗಳು ಬದಲಾವಣೆಯಾದವು. ಇದಕ್ಕಾಗಿ ಸರ್ವೆ ಮಾಡಿಕೊಡಲು ಸರ್ವೇಯರ್‌ಗಳು ಹಣಕ್ಕೆ ಬೇಡಿಕೆ ಇಟ್ಟರು. ಯಾರು ಹಣ ಕೊಡುತ್ತಾರೋ ಅವರ ಜಮೀನುಗಳನ್ನು ಮಾತ್ರ ಸರ್ವೆ ಮಾಡಿದರು. ಪ್ರಕರಣ ಉಪವಿಭಾಗಾಧಿಕಾರಿಗಳ ತನಕ ಹೋದ ಬಳಿಕವೂ 400 ರೈತರ ಪೈಕಿ ಕೇವಲ 100 ರೈತರ ಸರ್ವೆಗಳು ಮುಗಿದಿವೆ’ ಎಂದು ಎಐಕೆಕೆಎಂಎಸ್ ರೈತ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣಪತರಾವ್ ಮಾನೆ ಆರೋಪಿಸುತ್ತಾರೆ.

ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಕಾಯಂ ಸರ್ವೆ ಸಿಬ್ಬಂದಿ ಕೊರತೆ ಇದೆ. ಪರವಾನಗಿ ಪಡೆದ ಖಾಸಗಿ ಸರ್ವೆಯರ್‌ಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ಹಣ ಕೊಡದೇ ಇದ್ದರೆ ಹತ್ತು ನೆಪಗಳನ್ನು ಹೇಳಿ ಸರ್ವೆ ಕಾರ್ಯವನ್ನು ಮುಂದೂಡುತ್ತಾರೆ. ಇಲ್ಲವೇ ತಪ್ಪು ವಿವರ ನಮೂದಿಸುತ್ತಾರೆ. ರೈತರು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಸ್ಥಿತಿ ನಿರ್ಮಿಸುತ್ತಾರೆ ಎನ್ನುವ ಆರೋಪಗಳಿವೆ.

‘ರೈತ ಒಂದು ಬಾರಿ ಅರ್ಜಿ ಕೊಟ್ಟರೆ ಅದೇ ಅರ್ಜಿಯಲ್ಲಿ ಸರ್ವೆ ಕಾರ್ಯ ಪರಿಪೂರ್ಣವಾಗಬೇಕು. ತಾಂತ್ರಿಕ ಕಾರಣಗಳಿಂದ ಪೂರ್ಣವಾಗದೇ ಇದ್ದರೆ ಮತ್ತೆ ಅರ್ಜಿ ಸಲ್ಲಿಸಬಾರದು ಎಂಬ ನೀತಿ ರೂಪಿಸಬೇಕು. ನೆರೆಹೊರೆಯ ರೈತರಿಗೆ, ನಿವಾಸಿಗಳಿಗೆ ಒಂದು ಬಾರಿ ನೋಟಿಸ್ ಕೊಟ್ಟು ಅವರು ಬಾರದೇ ಇದ್ದರೆ ಎರಡನೇ ಬಾರಿ ಸರ್ವೇ ಮಾಡಬೇಕು. ಒಂದು ಕ್ಲಿಷ್ಟಕರ ಸಮಸ್ಯೆ ಬಗೆಹರಿಸಿಕೊಳ್ಳಲು ಭೂದಾಖಲೆಗಳ ಉಪನಿರ್ದೇಶಕರ (ಡಿಡಿಎಲ್ಆರ್) ಕೋರ್ಟ್ ಸೇರಿದಂತೆ ಕಚೇರಿಗಳಿಗೆ ಅಲೆದರೆ ಒಂದು ತಲೆಮಾರು ಕಳೆದು ಹೋಗುತ್ತದೆ!, ಖಾತೆ ಬದಲಾವಣೆಗೆ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಕಾಯುವವರ ಸಂಖ್ಯೆ ಆಸ್ಪತ್ರೆಯಲ್ಲಿ ವೈದ್ಯರನ್ನು ಕಾಯುವವರನ್ನು ಮೀರಿಸುವಂತಿದೆ. ಇದಕ್ಕೆ ಪ್ರತಿ ಹಂತದಲ್ಲೂ ಉಸ್ತುವಾರಿ ಆಗಬೇಕು’ ಎನ್ನುತ್ತಾರೆ ರೈತ ಮುಖಂಡ ತೇಜಸ್ವಿ ಪಟೇಲ್.

‘ಕಂದಾಯ ಇಲಾಖೆಯಿಂದ ರೈತರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ರೈತರು ಹೋಗಿ ಕೇಳಿದರಷ್ಟೇ ಅರ್ಜಿ ಏನಾಗಿದೆ ಎಂದು ಗೊತ್ತಾಗುತ್ತಿದೆ. ಸಿಬ್ಬಂದಿ ಕೊರತೆಯಿಂದ ಅರ್ಜಿ ಸಲ್ಲಿಸಿದರೂ ಸರಿಯಾದ ಸಮಯಕ್ಕೆ ಕೆಲಸ ಆಗುತ್ತಿಲ್ಲ. ಸರ್ಕಾರ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಕೆಲಸ ಮಾಡಿಸಿಕೊಳ್ಳಲು ಕಂದಾಯ ಇಲಾಖೆ ತಿರುಗಿ ತಿರುಗಿ ಸಾಕಾಗ್ತದೆ’  ಎನ್ನುತ್ತಾರೆ ಚಾಮರಾಜನಗರ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ.

ಎಲ್ಲೆಡೆ ಜಾರಿಯಾಗದ ಇ–ಸ್ವತ್ತು ತಂತ್ರಾಂಶ

ಗ್ರಾಮ ಠಾಣೆಗಳ ಒಳಗಿನ ಹಾಗೂ ಹೊರಗಿನ ಜಮೀನು, ನಿವೇಶನಗಳನ್ನು ಅಳತೆ ಮಾಡಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿ, ಸಾರ್ವಜನಿಕರಿಗೆ ನಿಗದಿತ ಸಮಯಕ್ಕೆ ಸರ್ವೆ ಮಾಡಿಕೊಟ್ಟು ಖಾತೆಯ ದಾಖಲೆಗಳನ್ನು (ನಮೂನೆ 9/11 ಎ) ನೀಡಲು ಇ–ಸ್ವತ್ತು ತಂತ್ರಾಂಶ ಒಳಗೊಂಡ ದಿಶಾಂಕ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿತ್ತು. ಜನರು ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಸಿದ ತಕ್ಷಣ ದಿಶಾಂಕ್‌ ಆ್ಯಪ್‌ ಮೂಲಕ ಆಸ್ತಿಯ ಸರ್ವೆಗಾಗಿ ಕೋರಿಕೆ ಹೋಗುತ್ತದೆ. ಇದರಿಂದ ತ್ವರಿತವಾಗಿ ಕೆಲಸಗಳಾಗುತ್ತವೆ.  ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ 152 ಗ್ರಾಮ ಪಂಚಾಯಿತಿಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗಿತ್ತು. ತಾಂತ್ರಾಂಶವನ್ನು ಇನ್ನಷ್ಟು ಉನ್ನತೀಕರಿಸಿದ ನಂತರ ಉಳಿದ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಭರವಸೆಯು ಮೂರು ವರ್ಷಗಳಾದರೂ ಜಾರಿಯಾಗಿಲ್ಲ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿಯನ್ನೂ ನೀಡಿಲ್ಲ.

ಭ್ರಷ್ಟಾಚಾರಕ್ಕೆ ರಿಯಲ್‌ ಎಸ್ಟೇಟ್‌ ಕೊಡುಗೆ: ಬೆಂಗಳೂರು ಸೇರಿದಂತೆ ರಿಯಲ್‌ ಎಸ್ಟೇಟ್‌ ಉದ್ಯಮದ ಚಟುವಟಿಕೆಗಳು ಹೆಚ್ಚಾಗಿರುವ ಮೈಸೂರು, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗದಂತಹ ಪ್ರದೇಶಗಳಲ್ಲಿ ಪಕ್ಕಾ ಪೋಡಿಗೆ ಅರ್ಜಿ ಸಲ್ಲಿಸುವವರು ಜಮೀನಿನ ಮೌಲ್ಯದ ಒಂದು ಭಾಗವನ್ನೇ ಲಂಚಕ್ಕಾಗಿ ತೆಗೆದಿರಿಸಬೇಕಾದ ಸ್ಥಿತಿ ಇದೆ. ಬೆಂಗಳೂರು ಮತ್ತು ಸುತ್ತಮುತ್ತ ಪಕ್ಕಾಪೋಡಿ ಪ್ಯಾಕೇಜ್‌ ದರ ಪ್ರತಿ ಎಕರೆಗೆ ₹ 50 ಲಕ್ಷದವರೆಗೂ ಇದೆ. ಇತರ ನಗರಗಳು, ಜಿಲ್ಲಾಕೇಂದ್ರಗಳಲ್ಲೂ ಪೋಡಿಗೆ ಲಕ್ಷಗಟ್ಟಲೆ ಖರ್ಚು ಮಾಡಬೇಕಾದ ಸ್ಥಿತಿ ಇದೆ ಎಂದು ಆರೋಪಿಸುತ್ತಾರೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು.

‘ಪಕ್ಕಾಪೋಡಿ ಪ್ರಕ್ರಿಯೆ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ, ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ ಹಾಗೂ ಭೂದಾಖಲೆಗಳು ಮತ್ತು ಭೂ ಮಾಪನ ಇಲಾಖೆಯ ಅಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ. ಎಲ್ಲರಿಗೂ ಸೇರಿ ‘ಪ್ಯಾಕೇಜ್‌’ ನಿಗದಿ ಮಾಡುವ ವ್ಯವಸ್ಥೆ ಈಗ ಚಾಲ್ತಿಯಲ್ಲಿದೆ. ಪ್ರತಿ ತಾಲ್ಲೂಕು, ಜಿಲ್ಲೆ, ನಗರಗಳಿಗೆ ಅನುಗುಣವಾಗಿ ಪ್ಯಾಕೇಜ್‌ ನಿಗದಿಯಾಗಿದೆ’ ಎನ್ನುತ್ತಾರೆ ಅವರು.

ರಾಜ್ಯದಲ್ಲೀಗ ಐದು ಲಕ್ಷಕ್ಕೂ ಹೆಚ್ಚು ಪೋಡಿ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಕೆಲ ಅರ್ಜಿಗಳು ಮೂರು ವರ್ಷಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ. ಜ್ಯೇಷ್ಠತೆ ಆಧಾರದಲ್ಲಿ ಅರ್ಜಿ ವಿಲೇವಾರಿ ಆಗಬಹುದು ಎಂದು ಲಕ್ಷಾಂತರ ಮಂದಿ ಕಾಯುತ್ತಲೇ ಇದ್ದಾರೆ. ಅಧಿಕಾರಿಗಳ ‘ಬೇಡಿಕೆ’ ಪೂರೈಸಿದವರ ಅರ್ಜಿಗಳು ಬೇಗ ಮುಂದಕ್ಕೆ ಸಾಗಿ ಪಕ್ಕಾಪೋಡಿ ಮುಗಿಸಿ, ಹೊಸ ನಕ್ಷೆ ಮತ್ತು ಸರ್ವೆ ಸಂಖ್ಯೆ ಪಡೆಯುತ್ತಿವೆ.

‘ಸರ್ಕಾರದಿಂದ ಮಂಜೂರಾದ ಜಮೀನುಗಳ ಪಕ್ಕಾಪೋಡಿ ಪ್ರಕ್ರಿಯೆ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳ ಪಾಲಿಗೆ ಹುಲ್ಲುಗಾವಲು ಇದ್ದಂತೆ. ನಾಪತ್ತೆಯಾದ ದಾಖಲೆಗಳ ದೃಢೀಕರಣ ಸಮಿತಿ, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಎಲ್ಲ ಹಂತಗಳಲ್ಲೂ ‘ಗಂಟು’ ತಲುಪಿಸಿದರಷ್ಟೇ ಪೋಡಿ ಕಡತ ಕೊನೆಯ ಹಂತ ತಲುಪುವುದು’ ಎಂದು ಕಂದಾಯ ಇಲಾಖೆಯೊಳಗಿನ ಭ್ರಷ್ಟಾಚಾರದ ವಿವರ ನೀಡುತ್ತಾರೆ ಅದೇ ಇಲಾಖೆಯೊಳಗಿರುವ ಅಧಿಕಾರಿಗಳು.

ರಾಜ್ಯದ ಎರಡನೇ ಹಂತದ ನಗರಗಳು, ಜಿಲ್ಲಾ ಕೇಂದ್ರಗಳು, ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ತಾಲ್ಲೂಕು ಕೇಂದ್ರಗಳು, ಸಣ್ಣ ನಗರ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ನಿವೇಶನ, ಮನೆಗಳಿಗೆ ಬೇಡಿಕೆ ಹೆಚ್ಚಿದಂತೆ ಭೂ ಪರಿವರ್ತನೆ ಆದೇಶ ಕೋರಿದ ಅರ್ಜಿಗಳೂ ಹೆಚ್ಚುತ್ತಿವೆ. ಎಲ್ಲ ಕಡೆಗಳಲ್ಲೂ ಭೂ ಪರಿವರ್ತನೆ ಆದೇಶಕ್ಕೆ ಎಕರೆ ಲೆಕ್ಕದಲ್ಲಿ ಅಘೋಷಿತ ದರ ಪಟ್ಟಿಗಳಿವೆ. ಗ್ರಾಮ ಲೆಕ್ಕಿಗನಿಂದ ಜಿಲ್ಲಾಧಿಕಾರಿಗಳವರೆಗೆ ಎಲ್ಲರೂ ಇದರಲ್ಲಿ ಪಾಲು ಪಡೆಯುತ್ತಿದ್ದಾರೆ ಎನ್ನುವುದು ಹಲವರ ಬಲವಾದ ಆರೋಪ. 

ಪರಿಹಾರ ಒದಗಿಸದ ಸುಧಾರಣೆಗಳು: ಕಂದಾಯ ಇಲಾಖೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು, ತ್ವರಿತವಾಗಿ ಸಾರ್ವಜನಿಕರು, ರೈತರಿಗೆ ಸೇವೆಗಳು ಲಭಿಸುವಂತೆ ಮಾಡಲು ರಾಜ್ಯ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಆದರೂ, ನಿಯಮಗಳನ್ನೇ ಮುಂದಿಟ್ಟುಕೊಂಡು ಅಧಿಕಾರಿ, ನೌಕರರು ತಮ್ಮ ‘ಕೆಲಸ’ ಮಾಡಿಕೊಳ್ಳುತ್ತಿದ್ದಾರೆ.

ಗ್ರಾಮೀಣ ಜನರು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಗೆ ಸಂಬಂಧಿಸಿದ ಕಾರ್ಯಗಳಿಗೆ ಆಯಾ ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲೇ ಅರ್ಜಿ ಸಲ್ಲಿಸಲು ಈಚೆಗೆ ಕಂದಾಯ ಇಲಾಖೆ ಅವಕಾಶ ಕಲ್ಪಿಸಿದೆ. ಜಮೀನು ನಕ್ಷೆ ತ್ವರಿತವಾಗಿ ಪಡೆಯಲು ಸ್ವಾವಲಂಬಿ ಡಿಜಿಟಲೀಕರಣ ಆಕಾರ್ ಬಂದ್ ಯೋಜನೆ ರೂಪಿಸಲಾಗಿದೆ. 

ಭೂ ಪರಿವರ್ತನೆ, ತತ್ಕಾಲ್‌ ಪೋಡಿ, ಹದ್ದುಬಸ್ತು, 11–ಇ ನಕ್ಷೆ ಸೇರಿದಂತೆ ಇಲಾಖೆ ಒದಗಿಸುವ ಸೇವೆಗಳಿಗೆ ಅರ್ಜಿ ಸಲ್ಲಿಸಲು ಇದುವರೆಗೂ ಹೋಬಳಿಮಟ್ಟದ ನಾಡಕಚೇರಿ, ಇಲ್ಲವೇ ತಾಲ್ಲೂಕು ಕಚೇರಿಗಳಲ್ಲಿನ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಿಗೆ ತೆರಳಬೇಕಿತ್ತು. ಪ್ರತಿ ತಾಲ್ಲೂಕು ಸುಮಾರು 30ರಿಂದ 40 ಹಾಗೂ ಹೋಬಳಿಗಳು ಐದಾರು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದ್ದು, ಸಾವಿರಾರು ಜನರು ಸೇವೆ ಪಡೆಯಲು ಸರದಿಯಲ್ಲಿ ನಿಲ್ಲುವ ಸ್ಥಿತಿ ಇತ್ತು. ಬಾಪೂಜಿ ಕೇಂದ್ರಗಳಲ್ಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದರಿಂದ ಅನಗತ್ಯ ಅಲೆದಾಟ ತಪ್ಪಲಿದೆ. ಸಮಯ, ವೆಚ್ಚದ ಉಳಿತಾಯವಾಗಲಿದೆ ಎಂದು ಸರ್ಕಾರ ಹೇಳಿತ್ತು. ಅರ್ಜಿ ಸಲ್ಲಿಕೆ ಸುಲಭವಾದರೂ, ದಾಖಲೆ ಪಡೆಯಲು ಅಲೆದಾಟ ತಪ್ಪಿಲ್ಲ.

ಮುಖ್ಯಮಂತ್ರಿ ಎರಡು ತಿಂಗಳ ಹಿಂದೆ (ನವೆಂಬರ್‌) ನಡೆಸಿದ್ದ ಜನತಾದರ್ಶನದಲ್ಲಿ ಒಟ್ಟಾರೆ 3,812 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಹೆಚ್ಚಿನವು ಜಮೀನಿನ ಪಕ್ಕಾ ಪೋಡಿ, ಖಾತೆ ಬದಲಾವಣೆಯಂತಹ ಅಹವಾಲುಗಳಿಗೆ ಸಂಬಂಧಿಸಿದ್ದ ದೂರುಗಳು ಎನ್ನುವುದು ಕಂದಾಯ ಇಲಾಖೆಯ  ವೈಫಲ್ಯಕ್ಕೆ ಕನ್ನಡಿಯಾಗಿದೆ.  

ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಭ್ರಷ್ಟಾಚಾರ, ಇಲಾಖೆಗೆ ಅಗತ್ಯವಿರುವಷ್ಟು ಸಿಬ್ಬಂದಿ ಇಲ್ಲದಿರುವುದು ಸೇರಿ ಬೇರೆ ಬೇರೆ ಕಾರಣಗಳಿಂದ ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸಮಸ್ಯೆಗಳು ತಾಂಡವವಾಡುತ್ತಿವೆ. ಇದರಿಂದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ನಡೆಯದ ಜಂಟಿ ಸರ್ವೆ; ಸಮಸ್ಯೆ ಜೀವಂತ

ವೈಜ್ಞಾನಿಕವಾಗಿ ಸರ್ವೆ ಮಾಡಿಸಿ, ರಾಜ್ಯದಲ್ಲಿನ ಅರಣ್ಯ, ಕಂದಾಯ ಹಾಗೂ ಖಾಸಗಿ ಭೂಮಿಯ ಗಡಿಗಳನ್ನು ನಿರ್ದಿಷ್ಟವಾಗಿ ಗುರುತಿಸದೇ ಇರುವುದರಿಂದ ಹಲವು ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ.

ಡ್ರೋನ್‌ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅರಣ್ಯ ಹಾಗೂ ಕಂದಾಯ ಭೂಮಿಯ ಜಂಟಿ ಸರ್ವೆ ಕಾರ್ಯ ನಡೆಸಲಾಗುವುದು. ನಿಖರವಾಗಿ ಕಂದಾಯ, ಅರಣ್ಯ, ಖಾಸಗಿ ಭೂಮಿ ಗುರುತಿಸಲಾಗುವುದು ಎಂದು ಸರ್ಕಾರ ಹತ್ತಾರು ವರ್ಷಗಳಿಂದ ಹೇಳುತ್ತಾ ಬಂದಿದ್ದರೂ, ಇಂದಿಗೂ ಜಂಟಿ ಸರ್ವೆ ಕಾರ್ಯಗಳು ಪೂರ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗಿಲ್ಲ.

ಬಿಳಿಗಿರಿರಂಗನ ಅಭಯಾರಣ್ಯದಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೆ ಎರಡು ವರ್ಷದ ಹಿಂದೆ ನಡೆದರೂ ಒತ್ತುವರಿಯಾದ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಅರಣ್ಯ ಭೂಮಿಯನ್ನು ಇಲಾಖೆಯ ಸುಪರ್ದಿಗೆ ನೀಡಲು ಕಂದಾಯ ಇಲಾಖೆಗೆ ಸಾಧ್ಯವಾಗಿಲ್ಲ. ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿದ ರೆಸಾರ್ಟ್‌ ಮತ್ತು ಹೋಂಸ್ಟೇ ತೆರವು ಮಾಡಿ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಆದೇಶಿಸಿದೆ. ಪೋಲೀಸ್‌ ಇಲಾಖೆಯಿಂದಲೂ ಮುಖ್ಯ ಕಾರ್ಯದರ್ಶಿಗೆ ವರದಿ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಕಂದಾಯ ಇಲಾಖೆಯ ಕಾರ್ಯವೈಖರಿ.

ಜಂಟಿ ಸರ್ವೆ ಆಗದೇ ಅರಣ್ಯ ಹಾಗೂ ಕಂದಾಯ ಭೂಮಿಯ ನಿಖರ ವ್ಯಾಪ್ತಿ ನಿಗದಿಯಾಗುವುದಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಬದುಕು ಇದಕ್ಕೆ ಒಂದು ಉದಾಹರಣೆ. ಖಚಿತವಾಗಿ ಭೂ ವರ್ಗೀಕರಣ ಮಾಡದೆ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿಗೆ ತಂದ ಪರಿಣಾಮ ಗ್ರಾಮೀಣ ರೈತರು ಸಂಕಷ್ಟ ಅನುಭವಿಸಿದರು. 

ಅವೈಜ್ಞಾನಿಕ ಸರ್ವೆ ನಡೆಯದ ಅಂಶಗಳನ್ನೇ ಪ್ರಮುಖವಾಗಿ ಇಟ್ಟುಕೊಂಡು ಖಾಸಗಿ ವ್ಯಕ್ತಿಗಳು ಸಾಕಷ್ಟು ಸರ್ಕಾರಿ‌‌‌‌‌‌ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ. ಕೆಲವರು ವಾಣಿಜ್ಯ ಉದ್ದೇಶ, ವೈಯಕ್ತಿಕ ಲಾಭಕ್ಕಾಗಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ ಸುಮಾರು 75 ಸಾವಿರ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಅಕ್ರಮ ದಾಖಲೆಗಳ ಮೂಲಕ ಭೂಮಿ ಕಬಳಿಸಿದ್ದಾರೆ. ಎ.ಟಿ.ರಾಮಸ್ವಾಮಿ, ವಿ.ಬಾಲಸುಬ್ರಹ್ಮಣ್ಯನ್‌ ಸಮಿತಿಗಳು ನೀಡಿರುವ ವರದಿಯಲ್ಲೂ ಭೂ ಕಬಳಿಕೆ ಪ್ರಕರಣ ಉಲ್ಲೇಖವಾಗಿದೆ ಒತ್ತುವರಿ ಕುರಿತು ಭೂ ಆಡಿಟಿಂಗ್ ಮಾಡಲು ಕ್ರಮಕೈಗೊಳ್ಳುವಂತೆ ಸರ್ಕಾರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರೂ, ಆಡಿಟಿಂಗ್‌ ಕಾರ್ಯ ಆರಂಭವಾಗಿಲ್ಲ.

ಸ್ವಾತಂತ್ರ್ಯಾ ನಂತರ ವೈಜ್ಞಾನಿಕ ಸರ್ವೆ ನಡೆಯದ ಕಾರಣ ಆರ್‌ಟಿಸಿ, ಆಕಾರಬಂದು ವ್ಯತ್ಯಾಸಗಳು, ಬಗರ್‌ಹುಕುಂ ಅರ್ಜಿಗಳ ಇತ್ಯರ್ಥವೂ ವಿಳಂಬವಾಗಿದೆ.  

ನಗರದ ಸೆರಗಿನ ಆಸ್ತಿಗಳ ಕಬಳಿಕೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ, ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೆ ಕ್ರಮಬದ್ಧವಲ್ಲದ ಆಸ್ತಿಗಳಲ್ಲಿ ಮನೆ ಕಟ್ಟಿಕೊಂಡಿದ್ದು, 2013ಕ್ಕೂ ಮೊದಲು ಪಂಚತಂತ್ರದಲ್ಲಿ ದಾಖಲಿಸಿದ್ದರೆ ಅಂಥವರಿಗೆ ನಮೂನೆ 11 ಬಿ ಅಡಿ ಆಸ್ತಿಯ ಖಾತಾ ನೀಡಲಾಗುತ್ತದೆ. ಆದರೆ, ನಗರದ ಸೆರಗಿನ ಭೂಮಿಗೆ ಭಾರಿ ಬೇಡಿಕೆ ಇರುವ ಕಾರಣ ಪಟ್ಟಭದ್ರರು ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟ ಗ್ರಾಮ ಠಾಣಾ ವ್ಯಾಪ್ತಿಯ ಜಮೀನು, ನಿವೇಶನಗಳನ್ನು ಕಬಳಿಸುತ್ತಿದ್ದಾರೆ. ಗುಡಿಸಲು ರೀತಿ ತಾತ್ಕಾಲಿಕ ಸೂರು ಕಟ್ಟಿಕೊಂಡು ಖಾತಾ ಪಡೆದ ನಂತರ ಸಣ್ಣ ಉಗ್ರಾಣ, ವಾಣಿಜ್ಯ ಮಳಿಗೆಗಳನ್ನು ಕಟ್ಟಿಕೊಂಡು ಹಣ ಗಳಿಸುತ್ತಿದ್ದಾರೆ.

‘2013ರ ಒಳಗೆ ಪಂಚತಂತ್ರದಲ್ಲಿ ನಮೂದಾಗದಿದ್ದರೂ ಪಿಡಿಒಗಳು ಹಣ ಪಡೆದು ಖಾತೆ ನೀಡುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರು ತಿಂಗಳಲ್ಲೇ ಇಂತಹ ಹಲವು ನಿವೇಶನಗಳಿಗೆ ನಿಯಮ ಉಲ್ಲಂಘಿಸಿ ನಗರ ಪ್ರದೇಶದ ಪಟ್ಟಭದ್ರರಿಗೆ ಖಾತೆ ನೀಡಲಾಗಿದೆ’ ಎನ್ನುತ್ತಾರೆ ಪುರದಾಳು ಗ್ರಾಮದ ರಾಜಪ್ಪ.

ಭೌತಿಕ ಕಡತಗಳ ನಿರ್ವಹಣೆ ಸ್ಥಗಿತ: ಕೃಷ್ಣ ಬೈರೇಗೌಡ

ಕಂದಾಯ ಸೇವೆಗಳಲ್ಲಿನ ವಿಳಂಬ ತಪ್ಪಿಸಲು, ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಅರ್ಜಿಗಳ ಜ್ಯೇಷ್ಠತೆಯ ಆಧಾರದಲ್ಲಿ ಪಾರದರ್ಶಕವಾಗಿ ಕೆಲಸಗಳನ್ನು ಮಾಡಿಕೊಡಲು ಅರ್ಜಿಗಳ ಸ್ವೀಕಾರ, ಕಡತಗಳ ನಿರ್ವಹಣೆ, ವಿಲೇವಾರಿ ಪ್ರಕ್ರಿಯೆಯನ್ನು ಫೆ.1ರಿಂದ ಇ–ಆಫೀಸ್‌ ತಂತ್ರಾಂಶದ ಮೂಲಕವೇ ನಿರ್ವಹಣೆ ಮಾಡಲಾಗುತ್ತದೆ. ಭೌತಿಕ ಕಡತಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎನ್ನುತ್ತಾರೆ ಕಂದಾಯ ಸಚಿವ ಕೃಷ್ಣ ಬೈರೇಗೌಡ.

ಇ–ಆಫೀಸ್‌ ತಂತ್ರಾಂಶ ಬಳಕೆ ಮಾಡದೇ, ಭೌತಿಕ ಕಡತಗಳನ್ನು ಬಳಸುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾ ಗುವುದು. ನೋಟಿಸ್‌ ನೀಡಲಾಗುವುದು. ಈಗಾಗಲೇ ಬಾಕಿ ಇರುವ ಎಲ್ಲ ಕಡತಗಳ ಸ್ಕ್ಯಾನಿಂಗ್‌ ಮತ್ತು ಡಿಜಿಟಲೀಕರಣ ಕಾರ್ಯ ನಡೆಯುತ್ತಿದೆ. ಇಲಾಖೆಯ ಪೋರ್ಟಲ್‌ನಿಂದ ದಾಖಲೆಗಳನ್ನು ಸಾರ್ವಜನಿಕರು ನೇರವಾಗಿ ಪಡೆ ಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಕಂದಾಯ ಪದಗಳ ಅರ್ಥ

* ಖಾತೆ: ಆಸ್ತಿಗೊಂದು ಸಂಖ್ಯೆ ನೀಡಿ ದಾಖಲಿಸುವುದೇ ಖಾತೆ

* 11 ಎ: ಆಸ್ತಿಯ ಕರನಿರ್ಧರಣಾ ವಿವರ ಹೇಳುವ ನಮೂನೆ

* 11 ಬಿ: ಗ್ರಾಮದ ವ್ಯಾಪ್ತಿಯಲ್ಲಿನ ಕ್ರಮಬದ್ದವಲ್ಲದ ಆಸ್ತಿಗಳ ವಿವರದ ನಮೂನೆ. 11 ಬಿ ದಾಖಲೆ ನೀಡಿದರೆ ಆ ಸ್ವತ್ತನ್ನು ಫಲಾನುಭವಿ ಅನುಭವಿಸಬಹುದು 11 ಎ ರೀತಿ ಮಾರಾಟ ಮಾಡಲು ಆಗದು.

* ಇ–ಸ್ವತ್ತು: ಆಸ್ತಿಗಳನ್ನು ಗಣಕಯಂತ್ರ ತಂತ್ರಾಂಶ ಮುಖೇನ ನಿಗದಿತ ನಮೂನೆಯಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಡಿಜಿಟಲ್‌ ಸಹಿಯೊಂದಿಗೆ ವಿತರಿಸುದು.

* ಮೋಜಿಣಿ (ಸರ್ವೆ): ಆಸ್ತಿಗಳನ್ನು ಹಿಂದಿನ ದಾಖಲೆಗಳ ಆಧಾರದಲ್ಲಿ ನಿಖರವಾಗಿ ಅಳತೆ ಮಾಡುವ ವಿಧಾನ.

* ಪೋಡಿ: ಒಂದೇ ಸರ್ವೇ ನಂಬರ್‌ನಲ್ಲಿ ಮಂಜೂರಾದ ಜಮೀನುಗಳನ್ನು ಪ್ರತ್ಯೇಕಗೊಳಿಸುವುದು   

* ಪಕ್ಕಾಪೋಡಿ: ಪೋಡಿ ಮೂಲಕ ಪ್ರತ್ಯೇಕಗೊಳಿಸಿದ ಸ್ವತ್ತುಗಳಿಗೆ ನಕ್ಷೆ ಸಿದ್ಧಗೊಳಿಸಿದ ನಂತರ ಅದೇ ಸರ್ವೆ ನಂಬರ್‌ನಡಿ ಉಪ ಸಂಖ್ಯೆಗಳನ್ನು ನೀಡಿ ಆರ್‌ಟಿಸಿ ದಾಖಲೆಗಳಲ್ಲಿ (ಪಹಣಿ) ನಮೂದಿಸುವುದು.

* ಆಕಾರ್‌ಬಂದ್‌: ಪಕ್ಕಪೋಡಿ ಮಾಡುವಾಗಲೇ ಪ್ರತಿಯೊಂದು ಜಮೀನಿನ ಅಳತೆ ನಿಗದಿ ಮಾಡಿ ನಾಲ್ಕು ದಿಕ್ಕುಗಳಲ್ಲಿ ಇರುವ ಇತರೆ ಸ್ವತ್ತುಗಳನ್ನು ವಿವರ ಒಳಗೊಂಡ ನಕ್ಷೆಯೇ ಆಕಾರ್‌ಬಂದ್‌.

ರೈತರು ಜಮೀನು ಸರ್ವೆ ಮಾಡಿಸಬೇಕೆಂದರೆ ಸರ್ವೆ ಕಚೇರಿಗೆ ತಿಂಗಳಾನುಗಟ್ಟಲೇ ಅಲೆದಾಡಬೇಕಾಗುತ್ತಿದೆ. ಲಂಚ ಕೊಡದೇ ಇದ್ದರೆ ರೈತರನ್ನು ಮಾತನಾಡಿಸುವುದೂ ಇಲ್ಲ. ಸರ್ವೇಯರ್‌ಗಳ ಕೊರತೆಯ ನೆಪ ಹೇಳಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಾರೆ. ಅವರಿಗೆ ‘ಪ್ರಸಾದ’ ಮುಟ್ಟಿಸಿದರಷ್ಟೇ ಕೆಲಸಗಳು ಆಗುತ್ತವೆ. ಯಾವ ಸರ್ಕಾರ ಬಂದರೂ ಈ ಇಲಾಖೆ ಮಾತ್ರ ಬದಲಾಗುವುದಿಲ್ಲ.
–ಭೀಮಾಶಂಕರ ಮಾಡಿಯಾಳ, ಮುಖಂಡ, ಅಖಿಲ ಭಾರತ ಕಿಸಾನ್ ಸಭಾ, ಕಲಬುರಗಿ
ತಾಲ್ಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ. ಒಂದು ಸರ್ವೆ ನಂಬರ್‌ನಲ್ಲಿ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕ (ಪೋಡಿ) ಮಾಡಲು ರೈತರಿಂದ ದುಪ್ಪಟ್ಟು ಹಣಕ್ಕೆ ಬೇಡಿಕೆ ಇಡಲಾಗುತ್ತದೆ. ಜಿಲ್ಲಾವಾರು ತಹಶೀಲ್ದಾರ್‌ಗೆ ಹೆಚ್ಚಿನ ಅಧಿಕಾರ ನೀಡಬೇಕು. ಇಲ್ಲಿ ಸರ್ವೆ ಕಾರ್ಯಕ್ಕೆ ಸಿಬ್ಬಂದಿ ನೇಮಕ ಆಗದ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ.
– ಎಚ್.ಆರ್.ಬಸವರಾಜಪ್ಪ, ರೈತ ಸಂಘ ರಾಜ್ಯ ಘಟಕ ಅಧ್ಯಕ್ಷ
ರೈತರಿಗೆ ಕಂದಾಯ ಇಲಾಖೆ ಕುರಿತ ಕಾನೂನು ತಿಳಿವಳಿಕೆ ಕಡಿಮೆ ಇದೆ. ಇದನ್ನು ದುಷ್ಟಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇಲ್ಲಿ ಬಗೆಹರಿಸಬಹುದಾದ ತೊಡಕುಗಳು ಸಾಕಷ್ಟಿವೆ. ಸರ್ಕಾರ ಇದನ್ನು ಬಗೆಹರಿಸುವತ್ತ ಹೆಜ್ಜೆ ಇಡಬೇಕು.
– ಕೆ.ಟಿ.ಗಂಗಾಧರ್, ರೈತ ಸಂಘ ರಾಜ್ಯ ಅಧ್ಯಕ್ಷ
ಕಂದಾಯ ಇಲಾಖೆ ಎಂದರೆ ಜನರನ್ನು ಸತಾಯಿಸುವ ಇಲಾಖೆ ಎಂದೇ ಕುಖ್ಯಾತಿ ಪಡೆದಿದೆ. ರೈತರಿಗೆ ಅಗತ್ಯದ ಕೆಲಸಗಳನ್ನು ಮಾಡಿಸಿಕೊಳ್ಳಲು ಕಷ್ಟವಾಗುತ್ತಿದೆ. ಆರ್‌ಟಿಸಿ ನೋಂದಣಿ, ಖಾತೆ ಬದಲಾವಣೆ ಮುಂತಾದ ಕೆಲಸಗಳು ಇದ್ದರೆ ದಿನಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲೆದಾಡಿ ಸುಸ್ತಾಗಿರುತ್ತಾರೆ.
–ಎಂ.ಸುಬ್ರಹ್ಮಣ್ಯ ಭಟ್‌, ರೈತ ಸಂಘದ ಬಂಟ್ವಾಳ ತಾಲ್ಲೂಕು ಘಟಕದ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.