ನವದೆಹಲಿ: ‘ಈಗಾಗಲೇ ಸಾವಿರ ಅಡಿ ಕೊರೆಸಿದ್ದೇನೆ. ಆದರೂ ನೀರು ಬಂದಿಲ್ಲ. ಇನ್ನೂ ಐನೂರು ಅಡಿ ಕೊರೆಸಿದರೂ ನೀರು ಸಿಗುತ್ತದೆ ಎಂಬ ಭರವಸೆ ಇಲ್ಲ. ಇನ್ನೂ ಆಳಕ್ಕೆ ಹೋದರೆ ಗಡಸು ನೀರು ಬರುತ್ತದೆ ಎನ್ನುತ್ತಿದ್ದಾರೆ. ನಾನೊಬ್ಬನೇ ಅಲ್ಲ, ನನ್ನಂತಯೇ ಹಲವರು ಸಾವಿರಾರು ಅಡಿ ಕೊಳವೆಬಾವಿ ಕೊರೆಸಿ ಕೈಸುಟ್ಟುಕೊಂಡಿದ್ದಾರೆ’ ಎಂದು ಗುಡಿಬಂಡೆ ತಾಲ್ಲೂಕು ಚೌಟತಿಮ್ಮನಹಳ್ಳಿ ಗ್ರಾಮದ ರೈತ ಸಿ.ಆರ್.ನಾರಾಯಣಸ್ವಾಮಿ ಬೇಸರದಿಂದಲೇ ಹೇಳಿದರು.
‘ನಾವು ಚಿಕ್ಕವರಿದ್ದಾಗ ಸ್ವಲ್ಪ ಅಗೆದರೂ ನೆಲದಲ್ಲಿ ನೀರು ಬರುತ್ತಿತ್ತು. ಎಂತಹ ಬೇಸಿಗೆಯಲ್ಲೂ ಕುಡಿಯುವ ನೀರಿಗೆ ತೊಂದರೆಯಾಗುತ್ತಿರಲಿಲ್ಲ. ಈಗ ನೋಡಿ, ಸಾವಿರ ಅಡಿ ಕೊರೆದರೂ ಮಣ್ಣಿನ ಧೂಳು ಹಾರುತ್ತಿದೆ. ನೀರಿನ ಪಸೆ ಕಾಣುತ್ತಿಲ್ಲ. ಭೂಮ್ತಾಯಿ ಕರುಣೆ ತೋರುತ್ತಿಲ್ಲ’ ಎಂದು ಕೊಳವೆಬಾವಿ ಸುತ್ತ ಬಿದ್ದಿದ್ದ ಬಿಳಿ ಪುಡಿ ತೋರಿಸುತ್ತ ಮಾತು ಮುಂದುವರೆಸಿದರು.
‘ನಮ್ಮ ತಾತ, ಮುತ್ತಾತಂದಿರು ಕಟ್ಟಿಸಿದ್ದ ಕೆರೆ, ಕಟ್ಟೆಗಳನ್ನು ನಾವು ಉಳಿಸಿಕೊಳ್ಳಲಿಲ್ಲ. ಕಾಡುಗಳನ್ನು ಕಾಪಾಡಿಕೊಳ್ಳಲಿಲ್ಲ. ಅವನ್ನು ಚೆನ್ನಾಗಿಟ್ಟುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದಾಗ ಮುಖದಲ್ಲಿ ವಿಷಾದವಿತ್ತು. ಇದು ಕೇವಲ ನಾರಾಯಣಸ್ವಾಮಿ ಒಬ್ಬರ ಸ್ಥಿತಿಯಲ್ಲ. ರಾಜ್ಯದ ಉಳಿದೆಡೆಯ ಕತೆ ಇದಕ್ಕಿಂತ ಭಿನ್ನವಾಗಿ ಇಲ್ಲ.
ಕರ್ನಾಟಕದಲ್ಲಿ 2022ಕ್ಕೆ ಹೋಲಿಸಿದರೆ 2023ರಲ್ಲಿ ಅಂತರ್ಜಲ ಮಟ್ಟ ಮತ್ತಷ್ಟು ಕಡಿಮೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ತುಂಬಾ ಅಪಾಯಕಾರಿ ಮಟ್ಟ ತಲುಪಿದೆ ಎಂದು ಡಿಸೆಂಬರ್‌ನಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಬಿಡುಗಡೆ ಮಾಡಿದ ವರದಿ ಮತ್ತು ಅಂಕಿ, ಅಂಶ ಹೇಳುತ್ತವೆ. ‘ಡೈನಾಮಿಕ್ ಗ್ರೌಂಡ್ ವಾಟರ್ ರಿಸೋರ್ಸಸ್ ಆಫ್ ಇಂಡಿಯಾ-2023' ವರದಿ ರಾಜ್ಯದ ಅಂತರ್ಜಲ ದುಸ್ಥಿತಿ ಮೇಲೆ ಬೆಳಕು ಚೆಲ್ಲುತ್ತದೆ.
ಸಮಾಧಾನದ ವಿಷಯ ಎಂದರೆ ಹಾಸನ ಮತ್ತು ಕೋಲಾರ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಸುಧಾರಿಸಿರುವುದು. ಇದನ್ನು ಹೊರತುಪಡಿಸಿದರೆ ಹೆಚ್ಚಿನ ಜಿಲ್ಲೆಗಳಲ್ಲಿ ಆಳದಿಂದ ಮತ್ತಷ್ಟು ಆಳಕ್ಕೆ ಕುಸಿಯುತ್ತ ಸಾಗಿದೆ. ಅಂತರ್ಜಲ ಅತಿ ಬಳಕೆ ಮಾಡುವ ತಾಲ್ಲೂಕುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದರೆ, ವ್ಯಾಪಕ ಮಳೆ ಸುರಿಯುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಮತ್ತಿತರ ಜಿಲ್ಲೆಗಳಲ್ಲಿ ಅಂತರ್ಜಲ ಕೊಳ್ಳೆ ವ್ಯಾಪಕವಾಗಿ ಏರಿಕೆಯಾಗಿದೆ.
ಏಳು ನದಿಗಳಿರುವ ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದಲ್ಲಿ ಅಂತರ್ಜಲ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ ‘ಭವಿಷ್ಯದ ಬಳಕೆಗಾಗಿ ನಿವ್ವಳ ಅಂತರ್ಜಲ ಲಭ್ಯತೆ’ ಶೂನ್ಯಕ್ಕೆ ಇಳಿದಿವೆ. ಈ ಜಿಲ್ಲೆಗಳು ಮರುಭೂಮಿ ರಾಜ್ಯವಾದ ರಾಜಸ್ಥಾನದ ಹಾದಿ ತುಳಿದಿವೆ.
ಭಾರತವು ತನ್ನ ಅಂತರ್ಜಲದಲ್ಲಿ ಶೇ 50ರಷ್ಟನ್ನು ಬಳಸುತ್ತಿದೆ. ಅದರಲ್ಲಿ ಶೇ 90ರಷ್ಟನ್ನು ಕೃಷಿಗೆ ಬಳಸಲಾಗುತ್ತಿದೆ. ಬೇರೆ ದೇಶದಲ್ಲಿ ಇದು ಶೇ 50ರಿಂದ 60ರಷ್ಟಿದೆ. ಆದರೆ ನಮ್ಮಲ್ಲಿ ನಿರ್ವಹಣೆ ಸರಿ ಇಲ್ಲ. ‘ನೀರಿನ ಉತ್ಪಾದಕತೆ’ ಬಗ್ಗೆ ಚಿಂತಿಸುತ್ತಿಲ್ಲ. ಅಂತರ್ಜಲದ ಬಳಕೆ ಮತ್ತು ಮರುಪೂರಣ ವೈಜ್ಞಾನಿಕವಾಗಿ ನಡೆಯಬೇಕು ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜಲ ಸಂಪನ್ಮೂಲ ಮತ್ತು ಪರಿಸರ ಎಂಜಿನಿಯರಿಂಗ್ ವಿಭಾಗದ ಪ್ರೊ.ಶೇಖರ್ ಮುದ್ದು.
ಅಂತರ್ಜಲಕ್ಕೆ ಕೊಳ್ಳೆ
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಬಿದ್ದ ಭಾರಿ ಮಳೆ ಮತ್ತು ಮಹಾಪೂರದಿಂದ ನದಿ, ಕೆರೆ, ಕಟ್ಟೆ ತುಂಬಿದ್ದರೂ ಅಂತರ್ಜಲ ಮಟ್ಟದಲ್ಲಿ ಭಾರಿ ಸುಧಾರಣೆಯಾಗಿಲ್ಲ. ಅತಿ ಬಳಕೆಯಿಂದ ರಾಜಧಾನಿ ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಸ್ಥಿರ ಜಲಮಟ್ಟ ಪ್ರತಿವರ್ಷ ತಳಕ್ಕೆ ಕುಸಿಯುತ್ತಿದೆ.
ವರ್ಷದಲ್ಲಿ ಸರಾಸರಿ 1,779 ಮಿ.ಮೀ. ಮಳೆಯಾಗುವ ರಾಜ್ಯ ಕರ್ನಾಟಕ. ನಮ್ಮಲ್ಲಿ ವರ್ಷಕ್ಕೆ ಸರಾಸರಿ 408 ಮಿ.ಮೀ.ನಿಂದ 5,051 ಮಿ.ಮೀ ಮಳೆಯಾಗುವ ಪ್ರದೇಶಗಳಿವೆ. ಆದರೂ ರಾಜ್ಯದ ಸ್ಥಿರ ಜಲ ಮಟ್ಟದ ಸರಾಸರಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಸಾಗಿದೆ. ಮರುಪೂರಣ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಸಿಕೊಳ್ಳುವುದೇ ಈ ಸಮಸ್ಯೆಗೆ ಮೂಲಕಾರಣ.
ಅರೆ ನೀರಾವರಿ, ನೀರಾವರಿ ಪ್ರದೇಶವೆಂಬ ವ್ಯತ್ಯಾಸವಿಲ್ಲದಂತೆ ಅಂತರ್ಜಲ ಬಳಕೆಯಾಗುತ್ತಿದೆ. ಎಲ್ಲಿಯೂ ಅಗತ್ಯಕ್ಕೆ ತಕ್ಕಂತೆ ವೈಜ್ಞಾನಿಕವಾಗಿ ಬಳಕೆಯಾಗುತ್ತಿಲ್ಲ ಎನ್ನುತ್ತಾರೆ ಮೈಸೂರಿನ ಎನ್ಐಇ ನಿವೃತ್ತ ಪ್ರಾಧ್ಯಾಪಕ ಯದುಪತಿ ಪುಟ್ಟಿ. ನೀರನ್ನು ಹಿಡಿದಿಡುವ ಇಂಗು ತಾಣಗಳಾಗಿದ್ದ ಕೆರೆಕಟ್ಟೆ ಕಡಿಮೆಯಾಗಿವೆ. ಭೂಮಿಯಿಂದ ಹೊರ ತೆಗೆದಷ್ಟೇ ಪ್ರಮಾಣದ ನೀರು ಇಂಗುವುದಕ್ಕೂ ಅವಕಾಶವಿರಬೇಕು ಎನ್ನುತ್ತಾರೆ.
‘ಕರ್ನಾಟಕದ 39,352 ಚದರ ಕಿ.ಮೀ. ಪ್ರದೇಶದಲ್ಲಿ ಅಂತರ್ಜಲದ ಅತಿಯಾದ ಬಳಕೆಯಾಗಿದೆ. 6,580 ಪ್ರದೇಶದಲ್ಲಿ ಸಮಸ್ಯೆ ಗಂಭೀರವಾಗಿದೆ. ಒಟ್ಟಾರೆಯಾಗಿ, ರಾಜ್ಯದ ಎಲ್ಲ ಕಡೆಗಳಲ್ಲಿ ಅಂತರ್ಜಲ ಬಳಸುವ ಪ್ರಮಾಣ ಗಣನೀಯವಾಗಿ ಹೆಚ್ಚಿದೆ’ ಎಂದು ರಾಜ್ಯ ಸರ್ಕಾರದ ವರದಿ ಹೇಳುತ್ತದೆ.
ಪಾತಾಳಕ್ಕೆ ಇಳಿಯುತ್ತಿರುವ ಅಂತರ್ಜಲ ಮಟ್ಟವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ, ಒಂದೇ ತಿಂಗಳ ಅವಧಿಯಲ್ಲಿ ಎರಡು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕರ್ನಾಟಕ ಸೇರಿದಂತೆ 19 ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿದೆ. ‘ಈ ದಯನೀಯ ಪರಿಸ್ಥಿತಿ ಕುರಿತು ರಾಜ್ಯಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದುರ್ದಿನಗಳನ್ನು ಎದುರಿಸಬೇಕಾದೀತು’ ಎಂದು ಚಾಟಿ ಬೀಸಿದೆ.
ಅಂತರ್ಜಲ ಅತಿ ಬಳಕೆಯ ತಾಲ್ಲೂಕುಗಳಲ್ಲಿ ಕೊಳವೆಬಾವಿ ಕೊರೆಯದಂತೆ ಸರ್ಕಾರ ನಿಷೇಧ ಹೇರಿದೆ. ನಿಷೇಧ ಹೆಸರಿಗಷ್ಟೇ. ಅಂತರ್ಜಲ ಅಭಿವೃದ್ಧಿಗಾಗಿ ಅಟಲ್ ಭೂಜಲ ಯೋಜನೆ ಜಾರಿಗೊಳಿಸಿದೆ. ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲೂ ಕೊಳವೆಬಾವಿ ತೋಡಲು ಅನುಮತಿ ಪಡೆಯಬೇಕು ಎನ್ನುವ ಕಾನೂನು ಪಾಲನೆ ಆಗುತ್ತಿಲ್ಲ.
ಈ ವರ್ಷ ಮಳೆ ಕೊರತೆ ಮತ್ತು ಬರಗಾಲದಿಂದ ನೀರಿನ ಮಟ್ಟ ಮತ್ತಷ್ಟು ಕುಸಿದಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಕೊಳವೆಬಾವಿ ಬತ್ತುತ್ತಿವೆ. ಬೇಕಾಬಿಟ್ಟಿಯಾಗಿ ಕೊಳವೆಬಾವಿ ಕೊರೆಯುವ ಪ್ರವೃತ್ತಿಗೆ ಸರ್ಕಾರ ಕಡಿವಾಣ ಹಾಕದಿರುವುದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ. 300–400 ಅಡಿಗೆ ಸಿಗುತ್ತಿದ್ದ ನೀರು ಈಗ 1,500– 2,000 ಅಡಿ ಕೊರೆದರೂ ಸಿಗುತ್ತಿಲ್ಲ. ಪ್ರತಿವರ್ಷ ಉತ್ತಮ ಮುಂಗಾರು ಮಳೆ ಆಗದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಕುಡಿವ ನೀರಿಗೆ ಭಾರಿ ಕೊರತೆ ಎದುರಾಗಲಿದೆ ಎನ್ನುತ್ತವೆ ಭೂ ಜಲ ಇಲಾಖೆ ಮೂಲಗಳು.
ಹಲವರು ಕೊಳವೆಬಾವಿಯ ನೀರು ಮಾರಾಟ ಮಾಡುತ್ತ ‘ನೀರು ಮಾರುಕಟ್ಟೆ’ಯಲ್ಲಿ ತೊಡಗಿದ್ದಾರೆ. ಹಣ ಕೊಟ್ಟರೆ ನೀರು ಸಿಗುತ್ತದೆ ಎಂಬ ಅಹಂಕಾರವೇ ಮಿತಿ ಮೀರಿದ ಬಳಕೆಗೂ ದಾರಿ ಮಾಡಿದೆ. ನಗರೀಕರಣ, ಕಾಡು ನಾಶ ಭೂಮಿ ಆಳಕ್ಕೆ ನೀರು ಇಳಿಯುವುದನ್ನು ತಡೆಯುತ್ತಿವೆ ಎನ್ನುವುದು ಸುರತ್ಕಲ್‌ನ ಎನ್ಐಟಿಕೆ ಜಲಸಂಪನ್ಮೂಲ ಮತ್ತು ಸಾಗರ ಎಂಜಿನಿಯರಿಂಗ್ ವಿಭಾಗದ ಪ್ರೊ.ಲಕ್ಷ್ಮಣ್ ನಂದಗಿರಿ ಅಭಿಪ್ರಾಯ.
ಏರಿದ ನೀರಿನ ಮಟ್ಟ: ಏತ ನೀರಾವರಿ ಯೋಜನೆ, ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಹಾಸನ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಬೆಂಗಳೂರಿನ ಕೊಳಚೆ ನೀರನ್ನು ಕೆರೆಗಳಿಗೆ ತುಂಬಿಸುವ ಕೆ.ಸಿ. ವ್ಯಾಲಿ ಯೋಜನೆ ಮತ್ತು ಎರಡು ವರ್ಷ ಸುರಿದ ಧಾರಾಕಾರ ಮಳೆಯಿಂದ ಬಯಲುಸೀಮೆಯ ಕೋಲಾರ ಜಿಲ್ಲೆಯಲ್ಲೂ ಅಂತರ್ಜಲ ಮಟ್ಟ ಸುಧಾರಿಸಿದೆ.
ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಇತ್ತೀಚಿನ ವರದಿಯ ಪ್ರಕಾರ ಹಾಸನ ಜಿಲ್ಲೆಯಲ್ಲಿ ಸರಾಸರಿ 10.33 ಮೀಟರ್ ಮತ್ತು ಕೋಲಾರದಲ್ಲಿ ಅತಿ ಹೆಚ್ಚು ಅಂದರೆ 50.12 ಮೀಟರ್‌ಗಳಷ್ಟು ಅಂತರ್ಜಲ ಹೆಚ್ಚಿದೆ. ಕೆ.ಸಿ.ವ್ಯಾಲಿ ನೀರು ಹರಿದ ಕೆರೆಗಳ ಸುತ್ತಮುತ್ತ ಕೊಳವೆ ಬಾವಿ ಕೊರೆದರೆ 250–300 ಅಡಿಗೆ ನೀರು ಸಿಗುತ್ತಿದೆ.
ಹೆಚ್ಚು ಕೆರೆ ಹೊಂದಿರುವ ಕೋಲಾರ ಜಿಲ್ಲೆಯಲ್ಲಿ 2020- 22 ಅವಧಿಯಲ್ಲಿ ಎರಡು ವರ್ಷ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದು ಬಹುತೇಕ ಜಲಾಶಯ, ಕೆರೆ, ಕಟ್ಟೆ ಕೋಡಿ ಹರಿದಿದ್ದವು. ಈಗಲೂ ಅದರಲ್ಲಿ ಹೆಚ್ಚಿನ ಕೆರೆಗಳು ತುಂಬಿವೆ. ಕೋಲಾರ ಜಿಲ್ಲೆಯ ಎರಡೂವರೆ ಸಾವಿರ ಕೆರೆಗಳ ಪೈಕಿ 139 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿದ ಮೇಲೆ ಅಂತರ್ಜಲ ವೃದ್ಧಿಯಾಗಿದೆ. ಈ ಹಿಂದೆ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿರಲಿಲ್ಲ ಎನ್ನುವುದು ಅಧಿಕಾರಿಗಳ ವಾದ.
ಇದನ್ನು ಒಪ್ಪದ ರೈತ ಮತ್ತು ನೀರಾವರಿ ಹೋರಾಟಗಾರರು ‘ಎರಡು ವರ್ಷ ಸುರಿದ ಮಳೆಯಿಂದ ಅಂತರ್ಜಲ ಹೆಚ್ಚಿದೆಯೇ ಹೊರತು ಕೆ.ಸಿ. ವ್ಯಾಲಿ ಕಾರಣ ಅಲ್ಲ’ ಎನ್ನುತ್ತಾರೆ.
‘ವಿಷ’ವಾದ ಜೀವಜಲ: ನೀರಿಗಾಗಿ ಕೊಳವೆ ಬಾವಿ ಕೊರೆಯುವುದು ಹೊಸದಲ್ಲ. ಕೊಳವೆಬಾವಿ ಆಳಕ್ಕೆ ಕೊರೆದಂತೆಲ್ಲ ಫ್ಲೋರೈಡ್ ಮತ್ತು ಆರ್ಸೆನಿಕ್‌ನಂತಹ ವಿಷಕಾರಿ ಅಂಶ ಕಂಡು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನೀರಿನಲ್ಲಿ ಅಪಾಯಕಾರಿ ರಾಸಾಯನಿಕ ಹೆಚ್ಚುತ್ತಿರುವುದರಿಂದ ಕಲ್ಯಾಣ ಕರ್ನಾಟಕದಲ್ಲಿ ಅಂತರ್ಜಲ ವಿಷವಾಗುತ್ತಿದೆ.
ರಾಜ್ಯದ 44 ತಾಲ್ಲೂಕುಗಳಲ್ಲಿ ಅಂತರ್ಜಲಕ್ಕೆ ವ್ಯಾಪಕ ಕನ್ನ ಹಾಕಿದ ಪರಿಣಾಮ ಆಳಕ್ಕೆ ಕೊರೆದಂತೆಲ್ಲ ವಿಷಕಾರಿ ಅಂಶಗಳು ನೀರಿನೊಂದಿಗೆ ಮೇಲಕ್ಕೆ ಬರುತ್ತಿವೆ. ನೀರಿನ ಗುಣಮಟ್ಟ ವಿಷಮಿಸುತ್ತಿದೆ. ಪ್ರತಿ ಲೀಟರ್ ನೀರಿನಲ್ಲಿ 1 ಪಿಪಿಎಂಗಿಂತಲೂ ಹೆಚ್ಚು ಫ್ಲೋರೈಡ್ ಇದ್ದು ಕುಡಿಯುಲು ಯೋಗ್ಯವಾಗಿಲ್ಲ.
ಭಾರತೀಯ ವಿಜ್ಞಾನ ಸಂಸ್ಥೆಯ ಜಲತಜ್ಞರು ನಡೆಸಿದ ಸಮೀಕ್ಷೆಯಲ್ಲಿ ಕೊಳವೆಬಾವಿ ನೀರು ಮತ್ತು ಜಲಮೂಲಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಯುರೇನಿಯಂ ಧಾತು ಪತ್ತೆಯಾಗಿದೆ. 13 ಜಿಲ್ಲೆಗಳ 73 ಗ್ರಾಮಗಳ ನೀರಿನಲ್ಲಿ ಯುರೇನಿಯಂ ಇದ್ದು ಕುಡಿಯಲು ಯೋಗ್ಯವಾಗಿಲ್ಲ. ಸುಮಾರು 48 ಹಳ್ಳಿಗಳಲ್ಲಿ ಯುರೇನಿಯಂ ಅಂಶ ಅಪಾಯದ ಮಟ್ಟ ಮೀರಿದ್ದು, ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಫ್ಲೋರೈಡ್ ನೀರು ಮೂಳೆ ಸವೆತ, ಹಲ್ಲು ಕಂದು, ಕೀಲು ನೋವು, ಮೊಣಕಾಲು ನೋವು ತಂದೊಡ್ಡುತ್ತಿದೆ. ಗರ್ಭಕೋಶದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಯುರೇನಿಯಂ ಕಿಡ್ನಿ ಕ್ಯಾನ್ಸರ್ ಮತ್ತು ಇತರ ಕ್ಯಾನ್ಸರ್ ಕಾಯಿಲೆಗಳಿಗೆ ದೂಡುತ್ತದೆ ಎನ್ನುತ್ತಾರೆ ರಾಯಚೂರಿನ ಮೂಳೆರೋಗ ತಜ್ಞ ಡಾ. ವಿರೂಪಾಕ್ಷ ರೆಡ್ಡಿ.
ಕೊಳವೆ ಬಾವಿಯ ನೀರಿನೊಂದಿಗೆ ಹೊರಬರುತ್ತಿರುವ ಫ್ಲೋರೈಡ್, ಆರ್ಸೆನಿಕ್ ವಿಷವಸ್ತುಗಳು ಒಡಿಸಾ, ಛತ್ತೀಸಗಡದಲ್ಲಿ ಜನರ ಮೇಲೆ ಭಯಾನಕ ಪರಿಣಾಮ ಬೀರಿವೆ. ನೀರಿನ ಸುರಕ್ಷಿತ ಗುಣಮಟ್ಟದ ಬಗ್ಗೆ ಯಾರೂ ಮಾತಾಡುತ್ತಿಲ್ಲ ಎಂದು ಸುರತ್ಕಲ್‌ನ ಎನ್ಐಟಿಕೆ ಜಲಸಂಪನ್ಮೂಲ ಮತ್ತು ಸಾಗರ ಎಂಜಿನಿಯರಿಂಗ್ ವಿಭಾಗದ ಪ್ರೊ.ಲಕ್ಷ್ಮಣ್ ನಂದಗಿರಿ ಕಳವಳ ವ್ಯಕ್ತಪಡಿಸುತ್ತಾರೆ.
‘ಅಂತರ್ಜಲದಲ್ಲಿ ಆರ್ಸೆನಿಕ್ ಮತ್ತು ಫ್ಲೋರೈಡ್‌ನಂತಹ ವಿಷಕಾರಿ ಅಂಶ ಹೆಚ್ಚಾಗುತ್ತಿವೆ. ಇದರಿಂದ ಮಾನವ ದೇಹದ ಮೇಲೆ ಗಂಭೀರ ದುಷ್ಪರಿಣಾಮವಾಗುತ್ತಿದೆ. ಕೇಂದ್ರ ಅಂತರ್ಜಲ ಮಂಡಳಿ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಕುಡಿಯುವ ನೀರಿನ ಸುರಕ್ಷತೆ ರಾಜ್ಯದ ವಿಷಯ ಎಂದು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದೆ. ತನ್ನದೇ ಆದ ಶಾಸನಬದ್ಧ ಜವಾಬ್ದಾರಿ ಹಾಗೂ ಕಟ್ಟುಪಾಡುಗಳಿಂದ ಮಂಡಳಿ ನುಣುಚಿಕೊಳ್ಳುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದೂ ಎನ್‌ಜಿಟಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಎಷ್ಟೇ ಅಂತರ್ಜಲ ಮರುಪೂರಣ ಯೋಜನೆ, ಜಾಗೃತಿ ಮೂಡಿಸಿದರೂ ನೀರಿನ ಮಹತ್ವ ಇಂದಿಗೂ ಅರಿವು ಮೂಡಿಲ್ಲ. ನೀರಿನ ಬೇಕಾಬಿಟ್ಟಿ ಬಳಕೆ ಹೆಚ್ಚಿದೆ. ಲಕ್ಷಾಂತರ ಹಣ ಖರ್ಚು ಮಾಡಿ ಸಾವಿರಾರು ಅಡಿ ಆಳ ಕೊಳವೆಬಾವಿ ಕೊರೆಸಲಾಗುತ್ತಿದೆ. ಆ ಕೊಳವೆಬಾವಿಗಳು ವಿಷದ ನೀರು ಉಗುಳುತ್ತಿವೆ.
ಹತ್ತು ವರ್ಷಗಳ ಸರಾಸರಿ ಪ್ರಮಾಣಕ್ಕೆ ಹೋಲಿಸಿದರೆ ಈ ಬಾರಿ ಅಂತರ್ಜಲದ ಪ್ರಮಾಣ ಗಮನಾರ್ಹವಾಗಿ ಇಳಿಕೆಯಾಗಿದೆ– ಕೆ.ಜಿ.ಸೌಮ್ಯಾ ಹೆಚ್ಚುವರಿ ಪ್ರಭಾರ ಹಿರಿಯ ಭೂವಿಜ್ಞಾನಿ ಅಂತರ್ಜಲ ಕಚೇರಿ ಕೊಡಗು ಜಿಲ್ಲೆ
ಅಂತರ್ಜಲವು ಸಿಕ್ಕವರಿಗೆ ಸೀರುಂಡೆ ಎಂಬಂತಾಗಿರುವುದರಿಂದಲೇ ಪಾತಾಳಕ್ಕೆ ಕುಸಿಯುತ್ತಿದೆ. ಹೀಗಿದ್ದರೂ ಅದೇ ನಮ್ಮ ಕೊನೆಯ ನೆಮ್ಮದಿಯ ತಾಣ. ಅತ್ಯಂತ ಕಡಿಮೆ ಅಂತರ್ಜಲ ಮಟ್ಟ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಆದರೆ ಅತಿವೃಷ್ಟಿಯನ್ನು ಹಿಡಿದಿಟ್ಟುಕೊಳ್ಳುವ ಮತ್ತು ಅನಾವೃಷ್ಟಿಯನ್ನು ಸಹಿಸಿಕೊಳ್ಳುವ ಯೋಜನೆಯೇ ನಮ್ಮಲ್ಲಿಲ್ಲ. ‘ಹರ್ ಘರ್ ಜಲ್’ ಎಂದು ಮನೆ ಮನೆಗೆ ನಲ್ಲಿ ಹಾಕಿಸುತ್ತಿರುವವರು ನೀರನ್ನು ಎಲ್ಲಿಂದ ತರುವುದು ಎಂದು ಯೋಚಿಸುತ್ತಿಲ್ಲ. ಅಂತರ್ಜಲ ಬಳಕೆ ನಿಯಂತ್ರಣಕ್ಕೆ ಕಾನೂನು ತರಲು ಸರ್ಕಾರಗಳು ಇಚ್ಛಾಶಕ್ತಿ ತೋರುವುದಷ್ಟೇ ಉಳಿದಿರುವ ದಾರಿ.–ಯು.ಎನ್.ರವಿಕುಮಾರ್, ಪರಿಸರ ತಜ್ಞ
ಭೂಮಿ ಮೇಲಿನ ಎಲ್ಲ ಬಗೆಯ ಜಲಮೂಲಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಅವೈಜ್ಞಾನಿಕ ಅಭಿವೃದ್ಧಿಯಿಂದ ಹಳ್ಳ ನದಿ ಜಾಲಗಳ ಕೊಂಡಿ ಕಳಚಿದ್ದು ಜಲಾನಯನ ಪ್ರದೇಶ ಕುಗ್ಗಿದೆ. ಭೂಮಿ ಮೇಲಿನ ಸ್ವಾಭಾವಿಕ ಹೊದಿಕೆ ತೆರವುಗೊಳಿಸಿ ಕಾಂಕ್ರೀಟ್ ಮುಚ್ಚಿಗೆ ಮಾಡುವುದು ಹಾಗೂ ಕಾಡು ನಾಶಗೊಳಿಸಿ ಪ್ಲಾಂಟೇಶನ್ ಬೆಳೆಸುವುದು ಅಂತರ್ಜಲ ಮರುಪೂರಣೆಗೆ ದೊಡ್ಡ ಅಡ್ಡಿ. ನೀರು ಆಳಕ್ಕಿಳಿಯುವ ಮೊದಲೇ ಬಳಕೆಯಾಗುತ್ತಿರುವುದು ಮತ್ತೊಂದು ದುರಂತ. ಜಲಾನಯನ ಪ್ರದೇಶಗಳ ರಕ್ಷಣೆಯಾಗಬೇಕು.– ಲಿಂಗರಾಜು ಎಲೆ ನದಿ ಪುನಃಶ್ಚೇತನ ತಜ್ಞ
ಅಂತರ್ಜಲ ಮಟ್ಟ ಲೆಕ್ಕಾಚಾರ ಹೇಗೆ?
ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳಲ್ಲಿ ಪ್ರತಿ ತಿಂಗಳು ಜಲಮಟ್ಟವನ್ನು ಭೂಜಲ ಇಲಾಖೆ ಮಾಪನ ಮಾಡುತ್ತದೆ. ಆಯಾ ವರ್ಷದ ಸರಾಸರಿಯ ಮಳೆಯ ಪ್ರಮಾಣ ಪರಿಗಣಿಸಿ ಅಂತರ್ಜಲ ಮಟ್ಟ ನಿರ್ಧರಿಸಲಾಗುತ್ತದೆ. ಈ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಆಧರಿಸಿ ಅಂತರ್ಜಲದ ಪ್ರಮಾಣ ಹೆಚ್ಚಿದೆಯಾ ಅಥವಾ ಕುಸಿದಿದೆಯಾ ಎಂದು ಲೆಕ್ಕಾಚಾರ ಮಾಡಲಾಗುತ್ತದೆ.
ಏಳು ನದಿಗಳನ್ನು ಹೊಂದಿರುವ ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕ ಕಲ್ಯಾಣ ಕರ್ನಾಟಕ ಮತ್ತು ಹಳೆ ಮೈಸೂರು ಭಾಗದಲ್ಲಿ ಅಂತರ್ಜಲ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಕೋಲಾರ ಯಾದಗಿರಿ ರಾಯಚೂರು ಜಿಲ್ಲೆಗಳಲ್ಲಿ ‘ಭವಿಷ್ಯದ ಬಳಕೆಗಾಗಿ ನಿವ್ವಳ ಅಂತರ್ಜಲ ಲಭ್ಯತೆ’ ಶೂನ್ಯಕ್ಕೆ ಇಳಿದಿವೆ. ಈ ಜಿಲ್ಲೆಗಳು ರಾಜಸ್ಥಾನದ ಹಾದಿ ತುಳಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.