ADVERTISEMENT

ಒಳನೋಟ ಪ್ರತಿಕ್ರಿಯೆಗಳು: ‘ಶಾಶ್ವತ ಪರಿಹಾರ ಕಂಡುಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 14:30 IST
Last Updated 23 ಅಕ್ಟೋಬರ್ 2022, 14:30 IST
   

‘ಹೂಳು ನಂದಿ ಬೆಟ್ಟವಾಗಲಿಲ್ಲ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ಅಕ್ಟೋಬರ್ 23) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ಶಾಶ್ವತ ಪರಿಹಾರ ಕಂಡುಕೊಳ್ಳಿ’

ಬೆಂಗಳೂರಿನ ರಾಜಕಾಲುವೆಗಳಲ್ಲಿನ ಹೂಳು ತೆಗೆಯಲು 2010–2022ರವರೆಗೆ ಬಿಬಿಎಂಪಿ ₹509 ಕೋಟಿ ಹಣ ಖರ್ಚು ಮಾಡಿದೆಯಂದು ತಿಳಿದು ಆಘಾತಾ ಉಂಟಾಯಿತು. ನೂರಾರು ಕೋಟಿ ವೆಚ್ಚ ಮಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ಆದರೆ ನಗರದ ಅನೇಕ ಬಡಾವಣೆಗಳಲ್ಲಿದ್ದ ರಾಜಕಾಲುವೆಗಳೇ ಮಾಯವಾಗಿವೆ. ಮಳೆಗಾಲದಲ್ಲಿ ರಸ್ತೆಗಳೆಲ್ಲಾ ಕೆರೆಗಳಾಗಿ ಮಾರ್ಪಡುತ್ತವೆ. ಸಾರ್ವಜನಿಕರ ತೆರಿಗೆ ಹಣ ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಿಂಗಾಪುರ, ಮಲೇಷ್ಯಾದಂತಹ ದೇಶಗಳ ತಜ್ಞರೊಂದಿಗೆ ಚರ್ಚಿಸಿ, ಮಳೆಗಾಲದಲ್ಲಿ ಉದ್ಭವವಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ADVERTISEMENT

ಡಿ. ಪ್ರಸನ್ನಕುಮಾರ್, ಬೆಂಗಳೂರು.

‘ಲೋಕಾಯುಕ್ತ ತನಿಖೆ ನಡೆಸಿ’

ರಾಜಕಾಲುವೆಗಳ ಹೂಳು ತೆಗೆದಿದ್ದರೆ ಅದು ಹೋಗುವುದಾದರೂ ಎಲ್ಲಿಗೆ ಎಂಬ ಪ್ರಶ್ನೆ ಸಹಜ. ಮಳೆಗಾಲದಲ್ಲಿ ಬೆಂಗಳೂರಿನ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ರಾಜಕಾರಣಿಗಳ ಮತ್ತು ಅಧಿಕಾರಿಗಳಿಗೆ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೂಳು ತೆಗೆಯಲು ಇದುವರೆಗೂ ಎಷ್ಟು ಅನುದಾನ ಬಳಕೆಯಾಗಿದೆ ಎಂಬುದನ್ನು ಲೋಕಾಯುಕ್ತ ತನಿಖೆ ನಡೆಸಬೇಕು.

-ಚಿ. ಉಮಾ ಶಂಕರ, ಲಕ್ಷ್ಮೀಪುರ ಬೆಂಗಳೂರು

‘ಸಾರ್ವಜನಿಕ ಕಾಮಗಾರಿಗಳಲ್ಲಿ ಅಕ್ರಮ’

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ರಾಜಕಾಲುವೆ,ಕೆರೆಗಳ ಒತ್ತುವರಿ ಆಗುತ್ತಿದ್ದರೂ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ. ಸಾರ್ವಜನಿಕ ಕಾಮಗಾರಿಗಳಲ್ಲಿ ಅಕ್ರಮಗಳು ನಡೆಯುವುದು ಸಾಮಾನ್ಯವಾಗಿದೆ. ರಾಜಕಾಲುವೆ ಹೂಳು ಎತ್ತುವ ಕಾಮಗಾರಿ ನಡೆಯುವುದ ಕಡಿಮೆ ಇದರಲ್ಲೂ ಕಮಿಷನ್ ಪಡೆಯಲಾಗಿದೆ. ಈ ಪ್ರಕರಣವನ್ನು ತನಿಖೆ ಮಾಡಬೇಕು.

ಟಿ.ಇ. ಶ್ರೀನಿವಾಸ್, ಆರ್.ಆರ್. ನಗರ

‘ಅನುದಾನ ಬಳಕೆ ತನಿಖೆಯಾಗಲಿ’

ಹೂಳು ನಂದಿ ಬೆಟ್ಟವಾಗಲಿಲ್ಲ ಎಂಬ ವರದಿ ನಮ್ಮ ಭ್ರಷ್ಟ ವ್ಯವಸ್ಥೆಗೆ ಹಿಡಿದ ದೊಡ್ಡ ಕನ್ನಡಿ. ಸರ್ಕಾರದ ಕಾಮಗಾರಿ ಅಂದರೆ ಹಣ ಕೊಳ್ಳೆ ಹೊಡೆವ ಯೋಜನೆಯಾಗಿ ಮಾರ್ಪಟ್ಟಿದೆ. ಹೂಳು ತೆಗೆದು ನೀರಿನ ಹರಿವು ಸುಗಮವಾಗಿಸಲು ವ್ಯಯ ಮಾಡಿರುವ ಅನುದಾನ ಕುರಿತು ತನಿಖೆ ನಡೆಸಬೇಕು. ಅಧಿಕಾರಿಗಳು ವಿದ್ಯಾರಣ್ಯಪುರ ಕೆರೆಯಲ್ಲಿ ತುಂಬಿರುವ ಹೂಳು ತೆಗೆಯುವ ಬದಲು ಜೊಂಡು ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಬಜೆಟ್‌ನಲ್ಲಿ ಅನುದಾನವಿಲ್ಲ ಎಂದು ಹೇಳುತ್ತಿದ್ದಾರೆ.

–ಎಚ್. ಗೋಪಾಲಕೃಷ್ಣ, ವಿದ್ಯಾರಣ್ಯಪುರ

‘ಮಳೆಯಲ್ಲಿ ಕೊಚ್ಚಿ ಹೋದ ಹಣ’

ಮಳೆಯಲ್ಲೇ ಹೂಳು ಮತ್ತು ಹಣ ಎರಡೂ ಕೊಚ್ಚಿಕೊಂಡು ಹೋಗಿದೆ. ಈ ಪ್ರಕರಣವನ್ನು ಸೂಕ್ತ ತನಿಖೆ ನಡೆಸಬೇಕು. ಇದು ಕೇವಲ ಸುದ್ದಿಗೆ ಸೀಮಿತವಾಗದಿರಲಿ, ಜನಾಕ್ರೋಶಕ್ಕೆ, ಜನಾಂದೋಲನಕ್ಕೆ ಕಾರಣವಾಗಲಿ.

–ಲೋಕೇಶ ಕೆ., ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.