ತುಮಕೂರು: ‘ನಮ್ಮದು ಒಂದು ಸಣ್ಣ ಶೆಡ್‌ನಲ್ಲಿ ಮನೆ ಇತ್ತು. ಯಾವಾಗ ಬೇಕಾದರೂ ಬಿದ್ದು ಹೋಗುವ ಪರಿಸ್ಥಿತಿ. 70 ಎಕರೆ ಜಮೀನು ಇದ್ದರೂ ಏನೂ ಮಾಡಲಾಗದ ಕೊರಗು. ಆಸ್ತಿವಂತರಾದರೂ ಜೇಬು ಖಾಲಿ. ಆದರೆ ಈಗ ನೋಡಿ, ಇಷ್ಟು ದೊಡ್ಡದಾದ ಮನೆ ಕಟ್ಟಿಸಿದ್ದೇನೆ. ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇನೆ, ಮದುವೆ ಮಾಡಿದ್ದೇನೆ. ಐದು ವರ್ಷಗಳಲ್ಲಿ ಎಷ್ಟೊಂದು ಸಾಧನೆ. ಕುಟುಂಬ– ಜೀವನದಲ್ಲಿ ಏನೆಲ್ಲ ಬದಲಾವಣೆಯಾಗಿದೆ....’
‘ನಮ್ಮೂರಿನಲ್ಲಿ ಸರಿಯಾದ ರಸ್ತೆಯೂ ಇರಲಿಲ್ಲ. ಗುಂಡಿ ಬಿದ್ದ, ಕಲ್ಲು ತುಂಬಿದ ರಸ್ತೆಯಲ್ಲಿ ಓಡಾಡಬೇಕಿತ್ತು. ಹೊರಗಡೆ ಹೋಗಬೇಕಿದ್ದರೆ ಯಾರನ್ನಾದರೂ ಆಶ್ರಯಿಸಬೇಕಿತ್ತು, ಇಲ್ಲವೆ ಬೆಳಗ್ಗೆ, ಸಂಜೆ ಬರುತ್ತಿದ್ದ ಬಸ್‌ಗಾಗಿ ಕಾದು ಕುಳಿತುಕೊಳ್ಳಬೇಕಿತ್ತು. ಗ್ರಾಮದ ಒಬ್ಬಿಬ್ಬರ ಬಳಿ ಬೈಕ್ ಇತ್ತು. ಈಗ ಬಳಸಮುದ್ರ ಗ್ರಾಮವೊಂದರಲ್ಲೇ 100ಕ್ಕೂ ಹೆಚ್ಚು ಬೈಕ್‌ಗಳಿವೆ. ಗರಿಗರಿ ಬಟ್ಟೆ ತೊಟ್ಟು, ಸ್ಕೂಟರ್ ಮೇಲ್ ಜಮ್ ಅಂಥ ಓಡಾಡುತ್ತಿದ್ದಾರೆ.....’
‘ಪೆಟ್ಟಿಗೆ ಅಂಗಡಿಯಲ್ಲಿ ವ್ಯಾಪಾರ ಇರಲಿಲ್ಲ, ಟೀ, ಕಾಫಿ ಕುಡಿಯಲು ಯಾರೂ ಬರುತ್ತಿರಲಿಲ್ಲ. ಈಗ ಜನ ಸಂದಣಿ ಹೆಚ್ಚಾಗಿದೆ, ಅಂಗಡಿ ಬಳಿಗೆ ಬಂದು ವ್ಯಾಪಾರ ಮಾಡುತ್ತಿದ್ದಾರೆ. ಅಂಗಡಿ, ಹೋಟೆಲ್ ಸಂಖ್ಯೆ ಹೆಚ್ಚಾಗಿವೆ. ಪೆಟ್ರೋಲ್ ಬಂಕ್ ಬಂದಿವೆ, ಮನೆ ಮುಂದೆ ಹೊಸ ಕಾರುಗಳು ನಿಂತಿವೆ. ಸೋಫಾ ಸೆಟ್, ದೊಡ್ಡ ಪರದೆಯ ಟಿ.ವಿ, ಮಿಕ್ಸಿ, ವಾಷಿಂಗ್ ಮಿಷನ್ ಹಳ್ಳಿ ಮನೆ ಸೇರಿವೆ....’
–ಹೀಗೆ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ, ಸದಾ ಬರ, ಸುಡು ಬಿಸಿಲನ್ನೇ ಹಾಸಿಹೊದ್ದು ಮಲಗಿರುವ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಹಳ್ಳಿಯ ಜನರು ತಮ್ಮದೇ ರೀತಿಯಲ್ಲಿ ಹೊಸದೊಂದು ಕಥೆಯನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಇದೇನು ಇದ್ದಕ್ಕಿದ್ದಂತೆ ನಡೆದ ಜಾದೂ ಅಲ್ಲ. ಯಾವುದೇ ಸಿನಿಮಾದ ಕಾಲ್ಪನಿಕ ದೃಶ್ಯವೂ ಅಲ್ಲ. ರೈತರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಬದಲಾವಣೆಗೆ ಕಾರಣವಾಗಿದ್ದು ಸೌರ ವಿದ್ಯುತ್ ಉತ್ಪಾದನಾ ಯೋಜನೆ.
ಪಾವಗಡ ತಾಲ್ಲೂಕಿನ ಆಂಧ್ರದ ಗಡಿ ಭಾಗವಾದ ಬಳಸಮುದ್ರ, ಕ್ಯಾತಗಾನಚೆರ್ಲು, ರಾಯಚೆರ್ಲು, ತಿರುಮಣಿ, ವಳ್ಳೂರು ಗ್ರಾಮದ ಸುತ್ತಮುತ್ತ ಸೋಲಾರ್ ಪಾರ್ಕ್ ನಿರ್ಮಾಣವಾದ ನಂತರ ಅಲ್ಲಿನ ಜನರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಜೀವನಕ್ಕೆ ಒಂದು ನೆಲೆ ಕಂಡುಕೊಳ್ಳುವತ್ತ ರೈತರು ಸಾಗಿದ್ದಾರೆ. ಬರಡು ನೆಲ, ಉಪಯೋಗಕ್ಕೆ ಬಾರದ ಭೂಮಿಯೇ ಈಗ ‘ಫಸಲು’ ಕೊಡುವ ತಾಣವಾಗಿದೆ.
ಯೋಜನೆ ಬಂದ ನಂತರ ಜನರ ಜೀವನಮಟ್ಟ ಸಾಕಷ್ಟು ಸುಧಾರಿಸಿದೆ. ಮೊದಲ ಆದ್ಯತೆಯಾಗಿ ಹೊಸದಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದಾರೆ. ಊರಿನಲ್ಲಿದ್ದ ಶಾಲೆಯಲ್ಲಿ ನಾಲ್ಕು ಅಕ್ಷರ ಕಲಿತ ನಂತರ ದುಡಿಯಲು ಕಳುಹಿಸುತ್ತಿದ್ದವರು ಈಗ, ಉನ್ನತ ಶಿಕ್ಷಣ ಕೊಡಿಸುವತ್ತ ಗಮನ ಹರಿಸಿದ್ದಾರೆ. ತುಮಕೂರು, ಬೆಂಗಳೂರಿನಂತಹ ನಗರಗಳಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಓಡಾಡಲು ಬೈಕ್ ಖರೀದಿಸಿದ್ದಾರೆ. ಯೋಜನೆಗೆ ಹೆಚ್ಚಿನ ಪ್ರಮಾಣದಲ್ಲಿ ಜಮೀನು ನೀಡಿ, ಸಾಕಷ್ಟು ಆದಾಯ ಬರುವಂತಹ ಸ್ಥಿತಿವಂತರು ಕಾರು ಖರೀದಿಸಿದ್ದಾರೆ. ಮುಂದಿನ ದಿನಗಳಲ್ಲಿ ನಗರಗಳಲ್ಲಿ ನಿವೇಶನ ಕೊಳ್ಳುವ ಲೆಕ್ಕಾಚಾರ ನಡೆಸಿದ್ದಾರೆ. ಒಟ್ಟಾರೆಯಾಗಿ ಐದು ಹಳ್ಳಿಗಳ ಜನರ ಜೀವನಮಟ್ಟ ಸುಧಾರಿಸುವಂತಾಗಿದೆ.
ಈ ಭಾಗದಲ್ಲಿ ಕಡಲೆ ಕಾಯಿ ಬಿಟ್ಟರೆ ಬೇರೆ ಯಾವ ಬೆಳೆಯೂ ಬೆಳೆಯುವುದಿಲ್ಲ. ಇದೊಂದೇ ಜೀವನಕ್ಕೆ ಆಧಾರ. ಮಳೆಯ ಕಣ್ಣಾಮುಚ್ಚಾಲೆಯಿಂದ ಬೆಳೆ ಮನೆ ಸೇರಿದ್ದು ಅಪರೂಪ. ಕೆಲವೊಮ್ಮೆ ಬಿತ್ತನೆ ಮಾಡಿದ ಕೂಲಿಯೂ ಹುಟ್ಟುವುದಿಲ್ಲ. ಬೆಳೆದ ಅಲ್ಪಸ್ವಲ್ಪ ಶೇಂಗಾ ಮಾರಾಟ ಮಾಡಿ ವರ್ಷಪೂರ್ತಿ ಜೀವನ ನಡೆಸಬೇಕು. ಬೆಳೆ ಕೈಕೊಟ್ಟರೆ ಆ ವರ್ಷ ಕೂಲಿ ಹುಡುಕಿಕೊಂಡು ಹೋಗುವುದು ಬಿಟ್ಟರೆ ಬೇರೆ ದಾರಿ ಇಲ್ಲ. ಉಪ ಕಸುಬಾಗಿ ಕುರಿ, ಮೇಕೆ ಸಾಕಾಣಿಕೆ ಮಾಡುತ್ತಾರೆ. ಇದರಲ್ಲಿ ಬರುವ ಹಣದಲ್ಲೇ ಸಂಸಾರ ಸಾಗಬೇಕು. ಮಕ್ಕಳ ಶಿಕ್ಷಣ, ಮದುವೆ ಮಾಡಲು ಸಾಲಕ್ಕೆ ಕೈಯೊಡ್ಡುವ ಪರಿಸ್ಥಿತಿ. ಆ ಸಾಲ ತೀರಿಸಲು, ಜೀವನ ನಿರ್ವಹಣೆಗಾಗಿ ಕೂಲಿ ಅರಸಿ ವಲಸೆ ಹೋಗುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ.
ಸೋಲಾರ್ ಪಾರ್ಕ್ ನಿರ್ಮಾಣವಾಗಿರುವ ನಾಗಲಮಡಿಕೆ ಹೋಬಳಿಯ ಪ್ರದೇಶ ಒಂದು ರೀತಿಯಲ್ಲಿ ಬಟಾಬಯಲಿನಂತಿದೆ. ಸುತ್ತಮುತ್ತ ಮರ ಗಿಡಗಳಿಲ್ಲದ ಬೆಟ್ಟಗುಡ್ಡ ಪ್ರದೇಶ. ನಾಲ್ಕು ಗಿಡ ಕಾಣಿಸಿದರೆ ಮರಳುಗಾಡಿನಲ್ಲಿ ಜೀವಜಲ ಕಂಡಂತಹ ಅನುಭವ. ಇಂತಹ ಬರದ ನಾಡಿನಲ್ಲಿ ದುಡಿಯುವ ಕೈಗಳಿಗೆ ಕೆಲಸವೂ ಇಲ್ಲ. ಬದುಕು ದುರ್ಬರ. ‘ಏನೂ ಇಲ್ಲದ ಜಾಗದಲ್ಲಿ ನಮ್ಮನ್ನು ಏಕೆ ಹುಟ್ಟಿಸಿದೆ?’ ಎಂದು ಹಲವರು ದೇವರಿಗೆ ಶಾಪ ಹಾಕುವುದೂ ಉಂಟು.
ಪಾವಗಡ ತಾಲ್ಲೂಕು ಶಾಶ್ವತ ಬರಪೀಡಿತ ಪ್ರದೇಶ. ಜಮೀನಿನಲ್ಲಿ ದುಡಿಮೆಯೂ ಇಲ್ಲದೆ ತುತ್ತಿನ ಚೀಲ ತುಂಬಿಸಲು ನಗರ, ಪಟ್ಟಣ ಪ್ರದೇಶದತ್ತ ವಲಸೆ ಹೋಗುವುದು ಸಾಮಾನ್ಯ. ತಾಲ್ಲೂಕಿನ ಬಹುಪಾಲು ಜನರು ಬೆಂಗಳೂರು, ಮುಂಬೈ, ಮತ್ತಿತರ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ಹೋಗಿದ್ದಾರೆ. ಈಗಲೂ ಹೋಗುತ್ತಿದ್ದಾರೆ. ಕೃಷಿಗೆ ಪರ್ಯಾಯವಾಗಿ ಕೈಗಾರಿಕೆಗಳು ಬರದಿದ್ದರೆ ಪಾವಗಡ ಭಾಗದ ಜನರ ವಲಸೆ ಮತ್ತಷ್ಟು ಹೆಚ್ಚಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ.
‘ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಕೈಬಿಟ್ಟು, ಉದ್ಯಮ ಸ್ಥಾಪಿಸಿದರೆ ಆಹಾರ ಉತ್ಪಾದನೆ ತಗ್ಗಲಿದೆ. ಇದು ಆಹಾರ ಸಮತೋಲನದ ಮೇಲೆ ಪರಿಣಾಮ ಬೀರಲಿದೆ’ ಎಂದು ಕೆಲವರು ವಾದಿಸುತ್ತಿದ್ದರು. ‘ಬೆಳೆಯನ್ನೇ ಬೆಳೆಯಲಾಗದೆ, ಬೀಳುಬಿಟ್ಟಿರುವ ಭೂಮಿಯಲ್ಲಿ ಸೋಲಾರ್ ಪಾರ್ಕ್‌ನಂತಹ ಉದ್ಯಮ ಆರಂಭವಾದರೆ ಯಾವ ಸಮಸ್ಯೆ ಆಗುತ್ತದೆ’ ಎಂದು ನೊಂದ ಜನರು ಪ್ರಶ್ನಿಸುತ್ತಾರೆ.
ರೈತರ ಹೋರಾಟದ ಫಲ: ಸೋಲಾರ್ ಪಾರ್ಕ್ ಸುಮ್ಮನೆ ರೈತರ ಹೊಲಕ್ಕೆ ಬರಲಿಲ್ಲ. ಈ ಪಾರ್ಕ್ ನಿರ್ವಾಣವಾಗಲು ರೈತರ ಹೋರಾಟದ ಫಲವೂ ಇದೆ. ತಿರುಮಣಿ ಗ್ರಾಮದ ಸಮೀಪ ವ್ಯಕ್ತಿಯೊಬ್ಬರು ಖಾಸಗಿ ಸೋಲಾರ್ ಪಾರ್ಕ್ ನಿರ್ಮಿಸಿ ವಿದ್ಯುತ್ ಉತ್ಪಾದನೆಗೆ ಕೈ ಹಾಕಿದ್ದರು. ಜಮೀನು ಬಾಡಿಗೆಗೆ ಪಡೆದುಕೊಂಡು ರೈತರಿಗೆ ಹಣ ನೀಡಲು ಆರಂಭಿಸಿದರು. ಇದನ್ನು ಕಂಡ ಅಕ್ಕಪಕ್ಕದ ಗ್ರಾಮಗಳ ರೈತರಲ್ಲೂ ಆಸೆ ಚಿಗುರೊಡೆಯಿತು. ಖಾಸಗಿ ಸಂಸ್ಥೆಗಳ ಜತೆ ನಡೆಸಿದ ಮಾತುಕತೆ ಅಷ್ಟೊಂದು ಯಶಸ್ಸು ಕಾಣಲಿಲ್ಲ.
ಬಳಸಮುದ್ರ ಗ್ರಾಮದ ಗೋವಿಂದಪ್ಪ ಮತ್ತಿತತರು ಸೇರಿಕೊಂಡು ಈ ವಿಚಾರವನ್ನು ಬೆಂಗಳೂರಿನಲ್ಲಿ ಇದ್ದ ಸಾಂಬಸದಾಶಿವರೆಡ್ಡಿ, ವೆಂಕಟರೆಡ್ಡಿ ಮೊದಲಾದ ಸ್ನೇಹಿತರ ಗಮನಕ್ಕೆ ತಂದರು. ಅದೇ ಸಮಯಕ್ಕೆ ರಾಜ್ಯ ಸರ್ಕಾರ ಸೋಲಾರ್ ಪಾರ್ಕ್ ನಿರ್ಮಾಣ ಮಾಡುವ
ಪ್ರಯತ್ನದಲ್ಲಿತ್ತು. ರೈತರು ಉತ್ಪಾದಿಸಿ ವಿದ್ಯುತ್ ನೀಡಿದರೆ ಖರೀದಿಸುವುದಾಗಿ ಸರ್ಕಾರದ ಕಡೆಯಿಂದ ಭರವಸೆ ಸಿಕ್ಕಿತು. ಸೂರ್ಯನ ಶಕ್ತಿ ಬಳಸಿ ಒಂದು ಮೆಗಾ ವಾಟ್ ವಿದ್ಯುತ್ ಉತ್ಪಾದನೆಗೆ 5 ಎಕರೆ ಜಾಗ ಬೇಕು. ಪ್ಯಾನಲ್ ಬೋರ್ಡ್ ಅಳವಡಿ, ಇತರೆ ಮೂಲ ಸೌಲಭ್ಯ ಕಲ್ಪಿಸಲು ಸುಮಾರು ₹3.50 ಕೋಟಿ ಬಂಡವಾಳ (ಈಗ ಈ ವೆಚ್ಚ ಕಡಿಮೆಯಾಗಿದೆ) ಬೇಕಿತ್ತು. ‘ಅಷ್ಟೊಂದು ದೊಡ್ಡ ಮಟ್ಟದಲ್ಲಿ ಬಂಡವಾಳ ತೊಡಗಿಸಲು ಸಾಧ್ಯವಿಲ್ಲ. ಜೀವನ ನಡೆಸುವುದೇ ಕಷ್ಟಕರವಾಗಿರುವಾಗ ಬಂಡವಾಳ ಎಲ್ಲಿಂದ ತರುವುದು’ ಎಂಬುದು ರೈತರ ಪ್ರಶ್ನೆಯಾಗಿತ್ತು. ಕೊನೆಗೆ ರೈತರ ಜತೆಗೆ ಚರ್ಚಿಸಿದ ಕೆಲವು ಮುಖಂಡರು ಜಮೀನನ್ನು ಬಾಡಿಗೆ ನೀಡುವ ಬಗ್ಗೆ ಒಮ್ಮತಕ್ಕೆ ಬಂದು, ಈ ವಿಚಾರವನ್ನು ಅಂದಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದರು.
ರೈತರು ಹಾಗೂ ಸಚಿವರ ನಡುವೆ ಮಾತುಕತೆ ನಡೆದು ಜಮೀನನ್ನು ಬಾಡಿಗೆಗೆ ಪಡೆದುಕೊಂಡು ಸೋಲಾರ್ ಘಟಕ ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಯೋಜನೆ ರೂಪುಗೊಂಡಿತು. ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ (ಕೆಎಸ್‌ಪಿಡಿಸಿ) ಮೂಲಕ ಈ ಯೋಜನೆ ಸಾಕಾರಗೊಂಡಿದ್ದು, ರೈತರ ಮುಖದಲ್ಲಿ ನಗು ತರಿಸಿದೆ.
ಬಾಡಿಗೆ ನಿಗದಿ
ಭೂಮಿ ಕೊಟ್ಟಿರುವ ರೈತರ ಜತೆಗೆ ಕೆಎಸ್‌ಪಿಡಿಸಿ ಮೂಲಕ ಒಪ್ಪಂದ ಮಾಡಿಕೊಂಡಿದ್ದು, ವರ್ಷಕ್ಕೆ ಒಮ್ಮೆ ಬಾಡಿಗೆ ಹಣ ನೀಡಲಾಗುತ್ತಿದೆ. ಆರಂಭದ ಮೊದಲ ವರ್ಷ ಎಕರೆಗೆ ಒಂದು ವರ್ಷಕ್ಕೆ ₹21 ಸಾವಿರ ಬಾಡಿಗೆ ನಿಗದಿಪಡಿಸಲಾಯಿತು. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಶೇ 5ರಷ್ಟು ಬಾಡಿಗೆ ಹೆಚ್ಚಿಸುವ ಬಗ್ಗೆ ಕರಾರು ಮಾಡಿಕೊಳ್ಳಲಾಗಿದೆ. 2016ರಲ್ಲಿ ಆರಂಭವಾದ ಯೋಜನೆಯ ಮೊದಲ ಹಂತ 2018 ಹಾಗೂ ಕೊನೆಯ ಹಂತ 2019ಕ್ಕೆ ಪೂರ್ಣಗೊಂಡಿದೆ.
ರೈತರಿಂದ ಪಡೆದುಕೊಂಡ ಜಮೀನನ್ನು ವಿದ್ಯುತ್ ಉತ್ಪಾದಿಸುವ ಖಾಸಗಿ ಕಂಪನಿಗಳಿಗೆ ಕೆಎಸ್‌ಪಿಡಿಸಿ ಮೂಲಕ ನೀಡಲಾಗಿದೆ. ಈ ಕಂಪನಿಗಳು ಪ್ರತಿ ವರ್ಷವೂ ಬಾಡಿಗೆ ಹಣವನ್ನು ಕೆಎಸ್‌ಪಿಡಿಸಿಗೆ ನೀಡುತ್ತವೆ. ಅಲ್ಲಿಂದ ಪ್ರತಿ ವರ್ಷವೂ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.
ರೈತರ ಕೈಗೆ ಸೋಲಾರ್: ರೈತರ ಜತೆಗೆ 28 ವರ್ಷಗಳ ವರೆಗೆ ಜಮೀನು ಗುತ್ತಿಗೆಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದದ ಅವಧಿ ಮುಗಿದ ನಂತರ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಗಳನ್ನು ರೈತರಿಗೆ ಬಿಟ್ಟುಕೊಡಲಾಗುತ್ತದೆ. ನಂತರದ ದಿನಗಳಲ್ಲಿ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡ ಬಹುದು. ಇಲ್ಲವೆ ಬೇರೊಂದು ಕಂಪನಿಗೆ ಮರು ಗುತ್ತಿಗೆ ನೀಡಬಹುದಾಗಿದೆ. ಆದರೆ 28 ವರ್ಷ ಮುಗಿಯುವುದರ ಒಳಗೆ ಸೋಲಾರ್ ಪ್ಯಾನಲ್‌ಗಳ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಕಡಿಮೆಯಾ ಗಿರುತ್ತದೆ. ಅಂತಹ ಸಮಯದಲ್ಲಿ ಪ್ಯಾನಲ್‌ಗಳನ್ನು ಬದಲಿಸಬೇಕಾಗುತ್ತೆ. ಆಗ ರೈತರು ಬಂಡವಾಳ ತೊಡಗಿಸಬೇಕಾಗುತ್ತದೆ. ಇಲ್ಲವೆ ಬೇರೆ ಕಂಪನಿಗಳಿಗೆ ಗುತ್ತಿಗೆ ನೀಡುವ ಅನಿವಾರ್ಯತೆ ಎದುರಾಗಲಿದೆ.
ವರ್ಷಗಳು ಕಳೆದಂತೆ ಸೋಲಾರ್ ಪ್ಯಾನಲ್ ಅಳವಡಿಸಿರುವ ಭೂ ಪ್ರದೇಶ ಫಲವತ್ತತೆ ಕಳೆದುಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಕೃಷಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಬಹುದು. ಸೋಲಾರ್ ಪ್ಯಾನಲ್ ಅಳವಡಿಸಲು ಗುಂಡಿ ತೋಡಿ, ಕಾಂಕ್ರೀಟ್ ತುಂಬಲಾಗಿದೆ. ಕಾಂಕ್ರೀಟ್ ತೆರವು ಮಾಡಲು ಇಡೀ ಭೂಮಿಯನ್ನು ಅಗೆಯಬೇಕಾಗುತ್ತದೆ. ಆಗಲೂ ದೊಡ್ಡ ಮಟ್ಟದ ವೆಚ್ಚ ಬರುತ್ತದೆ. ಇದು ಕಷ್ಟಕರ ಕೆಲಸ. ಹಾಗಾಗಿ ಮುಂದಿನ ದಿನಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡುವುದು ಬಿಟ್ಟರೆ ಬೇರೆ ದಾರಿ ಕಾಣುತ್ತಿಲ್ಲ ಎಂಬುದು ತಿರುಮಣಿ ಗ್ರಾಮದ ರೈತ ಆಂಜನೇಯ ಅವರ ಅಭಿಪ್ರಾಯವಾಗಿದೆ.
ಯೋಜನೆ ಜಾರಿಗೆ ಮುನ್ನ ಪರಿಸರ ಪ್ರಭಾವದ ಮೌಲ್ಯಮಾಪನ (ಇಐಎ) ಮಾಡಬೇಕಿತ್ತು. ನೈಸರ್ಗಿಕ ನಾಲೆ ಬದಲಾವಣೆ ಆಗಿರುವುದರಿಂದ ಅಂತರ್ಜಲದ ಮಟ್ಟ ಕುಸಿದಿದೆ. ಸೋಲಾರ್ ಪಾರ್ಕ್‌ನ ಖಾಲಿ ಜಾಗದಲ್ಲಿ ಮಿಯೋವಾಕಿ ಅರಣ್ಯ ಅಭಿವೃದ್ಧಿಪಡಿಸಬೇಕು. ಉಪಯೋಗಿಸಿದ ನಂತರ ಪ್ಯಾನೆಲ್‌ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಹವಾಮಾನ ಬದಲಾವಣೆಯ ಅಧ್ಯಯನ ಮಾಡಬೇಕು ಎಂದು ಪರಿಸರ ತಜ್ಞ ಪರಮೇಶ್ ಸೇವಾಲಾಲ್‌ಪುರ ಹೇಳುತ್ತಾರೆ.
ಬರಡು ಭೂಮಿಯೂ ದುಬಾರಿ: ಶೇಂಗಾ ಬೆಳೆಯಲೂ ಸಾಧ್ಯವಾಗದ ಜಮೀನನ್ನು ಎಕರೆಗೆ ₹25 ಸಾವಿರ ಕೊಟ್ಟು ಯಾರೂ ಕೊಂಡುಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಸೋಲಾರ್ ಘಟಕ ಆರಂಭವಾದ ನಂತರ ಭೂಮಿ ಬೆಲೆ ಗಗನಮುಖಿಯಾಗಿದೆ. ಈ ಐದು ಹಳ್ಳಿಗಳ ಸುತ್ತಮುತ್ತ ಎಕರೆ ಬೆಲೆ ₹8 ಲಕ್ಷದಿಂದ ₹10 ಲಕ್ಷದ ವರೆಗೂ ಏರಿಕೆಯಾಗಿದೆ. ರಸ್ತೆಗೆ ಹೊಂದಿಕೊಂಡಿರುವ ಜಮೀನು ಎಕರೆಗೆ ₹15 ಲಕ್ಷದ ವರೆಗೂ ಮಾರಾಟವಾಗುತ್ತಿದೆ ಎಂದು ತಿರುಮಣಿ ಗ್ರಾಮದ ರೈತ ರಾಮಲಿಂಗಪ್ಪ ಹೇಳುತ್ತಾರೆ.
ಉದ್ಯೋಗ ಲಭ್ಯ: ವಿವಿಧ ಸೋಲಾರ್ ಘಟಕಗಳಲ್ಲಿ 2,180 ಮಂದಿಗೆ ಉದ್ಯೋಗ ಲಭ್ಯವಾಗಿದೆ. ಅದರಲ್ಲಿ ಶೇ 90ರಷ್ಟು ಮಂದಿ ಸ್ಥಳೀಯರಿಗೆ ಅವಕಾಶ ಸಿಕ್ಕಿದೆ. ಪರಿಣಿತ ತಾಂತ್ರಿಕ ಸಿಬ್ಬಂದಿಯನ್ನು ಮಾತ್ರ ಹೊರಗಡೆಯಿಂದ ನೇಮಕ ಮಾಡಿಕೊಳ್ಳಲಾಗಿದೆ.
ಅಭಿವೃದ್ಧಿಗೆ ಹಣ
ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್‌ಆರ್) ಹಣ ಸಂಗ್ರಹಿಸಿ ಸ್ಥಳೀಯವಾಗಿ ಮೂಲಸೌಕರ್ಯ ಕಲ್ಪಿಸಲು ಬಳಕೆ ಮಾಡಿಕೊಳ್ಳಲಾಗಿದೆ. ಒಂದು ಮೆ.ವಾಗೆ ₹5 ಲಕ್ಷದಂತೆ ಸಿಎಸ್‌ಆರ್ ನಿಧಿಯನ್ನು ಒಂದು ಬಾರಿಗೆ ಮಾತ್ರ ಪಡೆದುಕೊಂಡಿದ್ದು, ಈವರೆಗೆ ಸುಮಾರು ₹1,200 ಕೋಟಿ ಸಂಗ್ರಹವಾಗಿದೆ. ಕೆಎಸ್‌ಪಿಡಿಸಿ ಈ ಹಣ ಸಂಗ್ರಹಿಸಿದ್ದು, ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಅನುಮೋದನೆ ನೀಡಿದ ನಂತರ ಕೆಎಸ್‌ಪಿಡಿಸಿ ಮೂಲಕ ಕಾಮಗಾರಿಗಳನ್ನು ಆರಂಭಿಸಲಾಗುತ್ತದೆ.
ಇದೇ ಹಣ ಬಳಸಿಕೊಂಡು ಐದು ಹಳ್ಳಿಗಳ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ (ಶೇ 80ರಷ್ಟು ಸ್ಥಳೀಯ, ಶೇ 20ರಷ್ಟು ಗ್ರಾಮದಿಂದ ಹೊರಗೆ). ಶಾಲಾ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಆಸ್ಪತ್ರೆಗೆ ಮೂಲ ಸೌಲಭ್ಯ ಒದಗಿಸಲು, ಕೆರೆಗಳ ಅಭಿವೃದ್ಧಿ, ಅರಣ್ಯೀಕರಣದಂತಹ ಕೆಲಸಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಕೆಎಸ್‌ಪಿಡಿಸಿ ಸ್ಥಳೀಯ ಘಟಕದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಮಹೇಶ್ ಹೇಳುತ್ತಾರೆ.
ಎಲ್ಲಾ ಯೋಜನೆಗಳು ಪೂರ್ಣಗೊಂಡರೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗಲಿದ್ದು, ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ರಾಜ್ಯದ ಬೊಕ್ಕಸ ತುಂಬಿಸಬಹುದು. ಯೋಜನೆ ವಿಸ್ತರಣೆಯಿಂದ ಬಡ ಭೂಮಾಲೀಕರ ಜೇಬು ತುಂಬುತ್ತಿದೆ.
ಶೇಂಗಾ ಬೆಳೆಯುವುದನ್ನೇ ನಿಲ್ಲಿಸಿದ್ದೆ. ಜಮೀನು ಪಾಳು ಬಿಟ್ಟಿದ್ದೆ. ಇನ್ನು ಮುಂದೆ ಕೃಷಿ ಸಾಧ್ಯವಿಲ್ಲ. ಮಾರಾಟ ಮಾಡಿ ಏನಾದರೂ ಮಾಡಬೇಕು ಎಂದು ಯೋಚಿಸಿದ್ದೆ. ಭೂಮಿ ಕೊಂಡುಕೊಳ್ಳಲೂ ಯಾರೂ ಮುಂದೆ ಬರುತ್ತಿರಲಿಲ್ಲ. ಒಳ್ಳೆ ಸಮಯದಲ್ಲಿ ಸೋಲಾರ್ ಪಾರ್ಕ್ ಬಂದು ನಮ್ಮ ಕೈ ಹಿಡಿಯಿತು-ಜಿ.ಎನ್.ಗೋವಿಂದಪ್ಪ, ಬಳಸಮುದ್ರ ಗ್ರಾಮ
ಸೋಲಾರ್ ಪಾರ್ಕ್‌ಗೆ 25 ಎಕರೆ ಜಮೀನು ಕೊಟ್ಟಿದ್ದೇನೆ. ಕೈ ತುಂಬ ಹಣ ಬರುತ್ತಿದೆ. ಇದರಿಂದ ಹೊಸದಾಗಿ ಮನೆ ಕಟ್ಟಿಸಲು ಸಾಧ್ಯವಾಯಿತು. ಮಕ್ಕಳ ಮದುವೆಗೂ ನೆರವಾಯಿತು. ನಮ್ಮ ಭಾಗದಲ್ಲಿ ಜಮೀನು ಕೊಂಡುಕೊಳ್ಳುವವರೇ ಇರಲಿಲ್ಲ. ಈಗ ಮಾರಾಟ ಮಾಡುವವರೇ ಇಲ್ಲ. ಭೂಮಿಗೆ ಬೇಡಿಕೆ ಹೆಚ್ಚಾಗಿದೆ-ಪಿ.ಕೃಷ್ಣಪ್ಪ, ವೆಂಕಟಮ್ಮನಹಳ್ಳಿ
ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ನೆರವಾಯಿತು. ಸೋಲಾರ್ ಪಾರ್ಕ್ ತರಲು ಸಾಕಷ್ಟು ಪ್ರಯತ್ನ ಮಾಡಿದ್ದಕ್ಕೂ ಫಲ ಸಿಕ್ಕಿದೆ. ಈ ಭಾಗದ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಸುಧಾರಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವಾಗಲಿದೆ-ಕೆ.ಎಂ.ಶ್ರೀನಿವಾಸುಲು, ಕ್ಯಾತಗಾನಚೆರ್ಲು
ಉತ್ತರದಲ್ಲಿ ಆರಂಭದಲ್ಲೇ ಹಿನ್ನಡೆ
ಪಾವಗಡದಲ್ಲಿ ಸೌರವಿದ್ಯುತ್ ಉತ್ಪಾದನೆ ಯಶಸ್ವಿಯಾದರೆ ಕಲಬುರಗಿ, ಬೀದರ್‌ನಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನಾ ಪಾರ್ಕ್‌ಗಳ ನಿರ್ಮಾಣಕ್ಕೆ ಆರಂಭದಲ್ಲೇ ಹಿನ್ನಡೆಯಾಗಿದೆ. ಕಲಬುರಗಿ ತಾಲ್ಲೂಕಿನ ಫರತಾಬಾದ್‌ನಲ್ಲಿ ಪಿಡಿಕೆಎಲ್‌ಗೆ ಸೇರಿದ 1,500 ಎಕರೆ ಜಾಗದಲ್ಲಿ 500 ಮೆಗಾ ವಾಟ್ ಸಾಮರ್ಥ್ಯದ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ 1,000 ಎಕರೆ ಜಮೀನನ್ನು ಜವಳಿ ಪಾರ್ಕ್‌ಗೆ ಮೀಸಲಿಟ್ಟಿದ್ದರಿಂದ ಉತ್ಪಾದನಾ ಸಾಮರ್ಥ್ಯವನ್ನು 100 ಮೆಗಾ ವಾಟ್‌ಗೆ ತಗ್ಗಿಸಲಾಗಿದೆ.
‘ರಾಜ್ಯ ಸರ್ಕಾರ ಎಕರೆಗೆ ಸುಮಾರು ₹10 ಲಕ್ಷ ಕೊಟ್ಟು ಭೂಸ್ವಾಧೀನ ಮಾಡಿಕೊಂಡಿದೆ. ಒಂದು ವಾರದಲ್ಲಿ 100 ಮೆ.ವಾ ಸಾಮರ್ಥ್ಯದ ಸೌರಶಕ್ತಿ ವಿದ್ಯುತ್ ಉತ್ಪಾದನಾ ಟೆಂಡರ್ ಕರೆಯಲಾಗುವುದು. ಉತ್ಪಾದಕರೊಂದಿಗೆ 25 ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ‘ಕ್ರೆಡಲ್’ ಅಧಿಕಾರಿ ರವೀಂದ್ರ ಕೋರಿ ಹೇಳುತ್ತಾರೆ.
ಬೀದರ್‌ನಲ್ಲೂ ಎರಡು ಸಾವಿರ ಎಕರೆ ಜಾಗದಲ್ಲಿ 500 ಮೆ.ವಾ ಉತ್ಪಾದನೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಭೂಮಿ ಕೊಡಲು ರೈತರು ಮುಂದೆ ಬರುತ್ತಿಲ್ಲ. ರಾಯಚೂರಿನ ಮಸ್ಕಿ ತಾಲ್ಲೂಕಿನ ಮೇದಿಕಿನಾಳದಲ್ಲಿ 250 ಎಕರೆ, ಡಬ್ಬೇರ ಮಡವು ಗ್ರಾಮದ ವ್ಯಾಪ್ತಿಯ ಹೊಲದ ಮಾಲೀಕರಿಂದ 30 ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಬೇವೂರು, ಕೊಪ್ಪಳ ತಾಲ್ಲೂಕಿನ ಅಳವಂಡಿ, ಕನಕಗಿರಿಯಲ್ಲಿ ಸೋಲಾರ್ ಘಟಕ ಇವೆ. ಗಾಳಿ ವಿದ್ಯುತ್ (ವಿಂಡ್ ಪವರ್) ಎಂಬ ಖಾಸಗಿ ಕಂಪನಿ ನಿರ್ವಹಣೆ ಮಾಡುತ್ತಿದೆ. ಕನಕಗಿರಿಯೊಂದರಲ್ಲಿ 100 ಎಕರೆ ಪ್ರದೇಶದಲ್ಲಿ ಉತ್ಪಾದನಾ ಘಟಕ ನಿರ್ಮಿಸಲಾಗಿದ್ದು, ಇದರಿಂದಾಗಿ ಸ್ಥಳೀಯರಿಗೆ ಒಂದಷ್ಟು ಕೆಲಸ ಲಭಿಸಿದೆ.
ದೇಶದ ಅತಿದೊಡ್ಡ ಸೋಲಾರ್ ಪಾರ್ಕ್
ಪಾವಗಡ ತಾಲ್ಲೂಕಿನ ತಿರುಮಣಿ ಸುತ್ತಮುತ್ತಲಿನ ಐದು ಗ್ರಾಮಗಳ ಬಳಿ ಸುಮಾರು 13 ಸಾವಿರ ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಸೋಲಾರ್ ಪಾರ್ಕ್ ದೇಶದ ‘ಅತಿದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕ’ ಎಂಬ ಹಿರಿಮೆಗೆ ಪಾತ್ರವಾಗಿದೆ. ಎರಡನೇ ಹಂತದ ಯೋಜನೆ ಪೂರ್ಣಗೊಂಡರೆ ಜಗತ್ತಿನಲ್ಲೇ ಅತಿ ದೊಡ್ಡ ಘಟಕವಾಗಿ ಹೊರ ಹೊಮ್ಮಲಿದೆ.
ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ (ಕೆಎಸ್‌ಪಿಡಿಸಿ) ಯೋಜನೆಯ ರೂವಾರಿ. 2019ಕ್ಕೆ ಮೊದಲ ಹಂತದ ಯೋಜನೆ ಪೂರ್ಣಗೊಂಡಿದ್ದು, ಪ್ರಸ್ತುತ 2,050 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. 50 ಬ್ಲಾಕ್‌ಗಳಲ್ಲಿ ಉತ್ಪಾದನೆ ಆರಂಭವಾಗಿದ್ದು, ಪ್ರತಿ ಬ್ಲಾಕ್‌ನಲ್ಲಿ 40 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ರಾಪ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 2,500 ಮೆಗಾ ವಾಟ್ ವಿದ್ಯುತ್ ಉತ್ಪಾದನೆಗೆ ಕಾರ್ಯ ಯೋಜನೆ ಸಿದ್ಧವಾಗಿದ್ದು, ಭೂಮಿಯನ್ನು ಗುರುತಿಸಿ, ರೈತರ ಜತೆಗೆ ಒಪ್ಪಂದ ಮಾಡಿಕೊಳ್ಳುವ ಕೆಲಸ ನಡೆದಿದೆ.
ಮೊದಲ ಹಂತದಲ್ಲಿ ಉಳಿದಿರುವ 1,200 ಎಕರೆ ಪ್ರದೇಶದಲ್ಲಿ 300 ಮೆಗಾ ವಾಟ್, ತಿರುಮಣಿ
ಗ್ರಾ.ಪಂ ವ್ಯಾಪ್ತಿಯಲ್ಲಿ 500 ಮೆಗಾ ವಾಟ್ ವಿದ್ಯುತ್ ಉತ್ಪಾದನೆಯನ್ನು ಮೂರನೇ ಹಂತದ ಯೋಜನೆಯಾಗಿ ಜಾರಿ ಮಾಡಲು ಉದ್ದೇಶಿಸಲಾಗಿದೆ. ಎಲ್ಲಾ ಯೋಜನೆಗಳು ಪೂರ್ಣಗೊಂಡರೆ ಸುಮಾರು ಆರು ಸಾವಿರ ಮೆಗಾ ವಾಟ್ ವರೆಗೂ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ. ಈಗ ಉತ್ಪಾದನೆ ಆಗುತ್ತಿರುವ 2,050 ಮೆಗಾ ವಾಟ್ ಪೈಕಿ 1,850 ಮೆಗಾ ವಾಟ್ ಅನ್ನು ರಾಜ್ಯದ ವಿವಿಧ ವಿತರಣಾ ಕಂಪನಿಗಳು ಖರೀದಿಸುತ್ತಿದ್ದು, ಉಳಿದ 200 ಮೆಗಾ ವಾಟ್ ವಿದ್ಯುತ್ ಅನ್ನು ಉತ್ತರಪ್ರದೇಶ ಸರ್ಕಾರ ಖರೀದಿಸುತ್ತಿದೆ.
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.