ADVERTISEMENT

ರಾಕ್ಷಸರೂಪಿ ಪ್ಲಾಸ್ಟಿಕ್‌ಗೆ ನಿಷೇಧವೆಂಬ ಮೊಂಡು ಅಸ್ತ್ರ

ಎಸ್.ರವಿಪ್ರಕಾಶ್
Published 18 ಮೇ 2019, 20:01 IST
Last Updated 18 ಮೇ 2019, 20:01 IST
   

ಬೆಂಗಳೂರು : ಪ್ಲಾಸ್ಟಿಕ್‌ ಈಗ ಸರ್ವಾಂತರ್ಯಾಮಿ. ಆಕಾಶ, ಭೂಮಿ, ಸಾಗರದ ಒಡಲು ಹೀಗೆ ಎಲ್ಲೆಡೆ ರಾಕ್ಷಸ ರೂಪಿಯಾಗಿ ವ್ಯಾಪಿಸಿದೆ. ಇದರ ನಾಶ ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ವಿಶ್ವ ಬಂದಿದೆ. ಇದರ ಸೃಷ್ಟಿ ನಿಲ್ಲಿಸುವುದಷ್ಟೇ ಪರಿಹಾರ. ಭೌತಿಕವಾಗಿ ಇದು ಬಹಳಷ್ಟು ಹಾನಿ ಮಾಡುವುದರ ಜತೆಗೆ, ಸಕಲ ಜೀವಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಮಾನವರಲ್ಲಿ ಮಕ್ಕಳಾಗದೇ ಇರುವುದಕ್ಕೂ ಪ್ಲಾಸ್ಟಿಕ್‌ನಲ್ಲಿರುವಥಾಲೆಟ್ಸ್‌( phthalates) ಎಂಬ ರಾಸಾಯನಿಕ ಕಾರಣ.ಪುರುಷರಲ್ಲಿನ ಸಂತಾನ ಶಕ್ತಿ ಹೀನತೆಗೂ ನೇರ ಸಂಬಂಧವಿದೆ. ಗರ್ಭ ಕಟ್ಟುವ ಸಂದರ್ಭದಲ್ಲೇ ಈ ರಾಸಾಯನಿಕವು ಪ್ರಭಾವ ಬಿರುತ್ತದೆ. ಇಷ್ಟೆಲ್ಲ ಘೋರ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿದ್ದರು. ಸರ್ಕಾರವಾಗಲಿ, ಸಾರ್ವಜನಿಕರಾಗಲಿ ಎಚ್ಚೆತ್ತುಕೊಳ್ಳುತ್ತಿಲ್ಲ.

ಪ್ಲಾಸ್ಟಿಕ್‌ ಮೇಲೆ ನಿಷೇಧವಿದೆ. ಆದರೆ, ಸಾಮಾಜಿಕ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್‌ ಹಾಸು ಹೊಕ್ಕಾಗಿದೆ.ಪೆಟ್ರೋಲಿಯಂ ಆಧಾರಿತ ಪ್ಲಾಸ್ಟಿಕ್‌ ಅಲ್ಲದೆ ಕಾರ್ನ್‌(ಜೋಳ) ಬಳಸಿ ತಯಾರಿಸುವ ಜೈವಿಕ ಮಿಶ್ರಣದ ಪಾಲಿಥಿನ್‌ ಚೀಲಗಳ ಬಳಕೆಯ ಮೇಲೂ ನಿಷೇಧ ವಿಧಿಸಲಾಗಿದೆ. ವಿಚಿತ್ರವೆಂದರೆ, ಈ ನಿಷೇಧ ಕಾಗದದಲ್ಲಿ ಉಳಿದಿದೆ. ಪೆಟ್ರೋಲಿಯಂ ಮೂಲದ‍ಪ್ಲಾಸ್ಟಿಕ್‌ ಅನ್ನು ಯಾವುದೇ ಭಯವಿಲ್ಲದೆ, ವ್ಯಾಪಕವಾಗಿ ಬಳಸಲಾಗುತ್ತಿದೆ. ಪೆಟ್ರೋಲಿಯಂ ಆಧಾರಿತ ಪ್ಲಾಸ್ಟಿಕ್‌ ಮೇಲೆ ನಿಷೇಧ ಹೇರಿದ ಬಳಿಕ ಜೋಳದ ಗಂಜಿ ಅಥವಾ ಪಿಷ್ಟವನ್ನು (ಸ್ಟಾರ್ಚ್‌) ಬಳಸಿ ಪಾಲಿಥಿನ್‌ ಚೀಲಗಳ ತಯಾರಿಕೆ ಆರಂಭಿಸಲಾಯಿತು.

ಜೈವಿಕವಾಗಿ ಕರಗಬಲ್ಲ ಚೀಲಗಳು ಎಂಬ ಕಾರಣಕ್ಕೆ ಪರಿಸರವಾದಿಗಳಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತು. ಆದರೆ, ಇವುಗಳೂ ಮಣ್ಣಿನಲ್ಲಿ ಕರಗುವುದಿಲ್ಲ ಎಂಬುದನ್ನು ಪತ್ತೆ ಹಚ್ಚಲಾಯಿತು. ಆ ಬಳಿಕ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗೆಯ ಚೀಲಗಳನ್ನು ನಿಷೇಧಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದೆ.

ADVERTISEMENT

2016 (ಮಾರ್ಚ್‌ 11) ರಲ್ಲಿ ರಾಜ್ಯ ಸರ್ಕಾರ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆ ನಿಷೇಧಿಸಿ ಅಧಿಸೂಚನೆ ಹೊರಡಿಸಿತು. ಅದರ ಪ್ರಕಾರ, ರಾಜ್ಯದಲ್ಲಿ ಪ್ಲಾಸ್ಟಿಕ್‌ ಕೈಚೀಲ, ಬ್ಯಾನರ್‌ಗಳು, ಫ್ಲೆಕ್ಸ್‌, ಪ್ಲಾಸ್ಟಿಕ್‌ ಬಾವುಟಗಳು, ಪ್ಲಾಸ್ಟಿಕ್‌ ಕಪ್‌ಗಳು, ಪ್ಲಾಸ್ಟಿಕ್‌ ಚಮಚಗಳು, ಪ್ಲೇಟ್‌, ಕ್ಲಿಂಗ್‌ ಫಿಲಂ, ಪ್ಲಾಸ್ಟಿಕ್‌ ಶೀಟ್‌ ತಯಾರಿಸುವುದು, ಸಂಗ್ರಹಿಸುವುದು ಮತ್ತು ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಅವುಗಳು ಎಷ್ಟೇ ತೆಳ್ಳಗಿರಲಿ, ಬಳಸುವಂತಿಲ್ಲ. ಥರ್ಮಾಕೋಲ್‌ ಬಳಸಿ ಮಾಡಿದರೂ ಅವುಗಳನ್ನು ಬಳಸುವಂತಿಲ್ಲ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ವಾಣಿಜ್ಯ ತೆರಿಗೆ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಕಾನೂನು ಮತ್ತು ಮಾಪನ ಇಲಾಖೆ ನಿಷೇಧವನ್ನು ಜಾರಿ ಮಾಡುವ ಮತ್ತು ಆ ಕುರಿತು ಅರಿವು ಮೂಡಿಸುವ ಏಜೆನ್ಸಿಗಳೆಂದು ಗುರುತಿಸಲಾಗಿತ್ತು.

ತಯಾರಿಕೆ, ಸಂಗ್ರಹ ಮತ್ತು ಬಳಕೆ ಅಪರಾಧ ಇದಕ್ಕೆ ₹ 5 ಲಕ್ಷದವರೆಗೆ ದಂಡ ವಿಧಿಸಬಹುದು. ಇದನ್ನು ಮಾಡಬೇಕಾದ ಸ್ಥಳೀಯ ಆಡಳಿತಗಳು ಬಳಕೆದಾರರ ಮೇಲೆ ದಂಡ ವಿಧಿಸದ ಹೊರತು ಬದಲಾವಣೆ ಅಸಾಧ್ಯ. ಅಂಗಡಿ ಪ್ಲಾಸ್ಟಿಕ್‌ ತೆಗೆದುಕೊಂಡರೆ ಶಿಕ್ಷೆ ಎಂಬ ಭಯ ಇದ್ದರಷ್ಟೇ ಪರಿಸ್ಥಿತಿ ಸುಧಾರಣೆ ಆಗಬಹುದು. ಇಲ್ಲವಾದರೆ ಎಷ್ಟೇ ಕಾನೂನು ತಂದರೂ ಪ್ರಯೋಜನ ಆಗುವುದಿಲ್ಲ ಎನ್ನುತ್ತಾರೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು.

ಪ್ಲಾಸ್ಟಿಕ್‌ ಚೀಲಗಳ ತಯಾರಿ ಮತ್ತು ವಿತರಣೆ ಮೂಲ ಪತ್ತೆ ಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಆಡಳಿತಗಳಿಗೆ ಪ್ರತ್ಯೇಕ ಅಧಿಕಾರಗಳಿವೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಸಹಕಾರ ಮುಖ್ಯ. ಪ್ಲಾಸ್ಟಿಕ್ ಅನ್ನು ಯಾವುದೇ ವಸ್ತುವಿನೊಂದಿಗೆ ಖರೀದಿಸುವುದಿಲ್ಲ ಎಂಬ ಗಟ್ಟಿ ನಿರ್ಧಾರ ತೆಗೆದುಕೊಂಡರೆ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಬೀಳುತ್ತದೆ. ಬದಲಿಯಾಗಿ ಬಟ್ಟೆ ಅಥವಾ ನೈಸರ್ಗಿಕ ನಾರಿನ ಚೀಲಗಳನ್ನು ಬಳಸಬೇಕು. ಕಾಗದದಿಂದ ಮಾಡಿದ ಪೊಟ್ಟಣಗಳ ಬಳಕೆ ಜಾರಿಗೆ ತರಬೇಕು.

ಸದ್ಯ ಬಳಕೆ ಆಗುತ್ತಿರುವ ಪ್ಲಾಸ್ಟಿಕ್‌ ಜೈವಿಕ ಮೂಲದ್ದು ಹೌದೋ, ಅಲ್ಲವೋ ಎಂಬುದನ್ನು ಪತ್ತೆ ಹಚ್ಚುವ ವ್ಯವಸ್ಥೆ ರಾಜ್ಯದಲ್ಲಿ ಇಲ್ಲ. ಚೆನ್ನೈನ ‘ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಸ್ಟಿಕ್‌ ಟೆಕ್ನಾಲಜಿ’ಗೇ ಕಳುಹಿಸಬೇಕು.ಈ ಸಮಸ್ಯೆಯ ಹಿನ್ನೆಲೆಯಲ್ಲಿ ಜೈವಿಕವಾಗಿ ಕರಗಬಲ್ಲ ಪಾಲಿಥಿನ್‌ ಚೀಲಗಳನ್ನು ತಯಾರಿಸುವ 22 ಉತ್ಪಾದಕರು ತಾವು ತಯಾರಿಸಿದ ಜೈವಿಕವಾಗಿ ಕರಗಬಲ್ಲ ಚೀಲಗಳ ಮೇಲೆ ‘ಕ್ಯೂ ಆರ್‌ ಕೋಡ್‌’ ಮುದ್ರಿಸುತ್ತಿದ್ದಾರೆ. ತಯಾರಕರು ಯಾರು ಎಂಬುದು ಸೇರಿದಂತೆ ಕೆಲ ಮಾಹಿತಿಗಳನ್ನು ‘ಕ್ಯೂ ಆರ್‌ ಕೋಡ್’ ಒಳಗೊಂಡಿರುತ್ತದೆ. ಗ್ರಾಹಕರು ಕೋಡ್‌ ಇರುವುದನ್ನು ಖಚಿತಪಡಿಸಿಕೊಂಡ ಬಳಿಕವೇ ಖರೀದಿಸಬೇಕು. ಇದರಿಂದ ನಕಲಿ ಉತ್ಪನ್ನಗಳನ್ನು ತಡೆಗಟ್ಟಬಹುದು.

ರಾಜಧಾನಿ ಕೊಡುಗೆ ಹೆಚ್ಚು

ಅಧ್ಯಯನವೊಂದರ ಪ್ರಕಾರ, ಬೆಂಗಳೂರು ನಗರದಲ್ಲಿ ಪ್ರತಿ ದಿನ 4000 ಮೆಟ್ರಿಕ್‌ ಟನ್‌ ಕಸ ಉತ್ಪಾದನೆ ಆಗುತ್ತದೆ. ಅದರಲ್ಲಿ ಶೇ 40 ಎಂದರೆ, 1600 ಟನ್‌ ಒಣಕಸ. ಇದರಲ್ಲಿ ಶೇ 20 ರಷ್ಟು ಎಂದರೆ 400 ಟನ್‌ ಕಡಿಮೆ ಕ್ಯಾಲರಿ ಪ್ಲಾಸ್ಟಿಕ್‌ ಸೇರಿದೆ. ಇದು ನಗರದಲ್ಲಿ ಭಾರಿ ಸಮಸ್ಯೆಗೆ ಕಾರಣವಾಗಿದೆ.

ಕಾನೂನು ಏನು ಹೇಳುತ್ತದೆ...?

ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್‌ 5 ರ ಅನ್ವಯ ಎಷ್ಟೇ ದಪ್ಪ/ತೆಳು ಪ್ಲಾಸ್ಟಿಕ್‌ ಚೀಲಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್‌ ಚೀಲಗಳು, ಬ್ಯಾನರ್‌, ಬಂಟಿಂಗ್‌, ಫ್ಲೆಕ್ಸ್‌, ಕಟ್ಲೆರಿ ಮತ್ತು ಶೀಟ್‌ಗಳ ಉತ್ಪಾದನೆ ನಿಷೇಧಿಸಲಾಗಿದೆ.

ಕಂಟೇನರ್‌ಗಳೂ ನಿಷೇಧ?

ಹೊಟೇಲು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸೆಲ್‌ಗೆ ಪ್ಲಾಸ್ಟಿಕ್‌ ಕಂಟೇನರ್‌ಗಳನ್ನು ಬಳಸಲಾಗುತ್ತಿದೆ. ಇದರಲ್ಲಿ ಬಿಸಿ ಬಿಸಿಯಾದ ಆಹಾರ ಪದಾರ್ಥಗಳನ್ನು ಇಟ್ಟು ಪ್ಯಾಕ್‌ ಮಾಡುವುದರಿಂದ ವಿಷಕಾರಿ ರಾಸಾಯನಿಕಗಳು ಆಹಾರದೊಳಗೆ ಸೇರುತ್ತವೆ. ಆದ್ದರಿಂದ ಇವುಗಳನ್ನು ನಿಷೇಧಿಸಲು ಬಿಬಿಎಂಪಿ ತೀರ್ಮಾನಿಸಿದೆ. ಈ ಸಂಬಂಧ ವೈಜ್ಞಾನಿಕ ಜರ್ನಲ್‌ಗಳಲ್ಲಿ ಬಂದಿರುವ ಅಧ್ಯಯನಗಳ ವರದಿಯನ್ನು ಮುಂದಿಟ್ಟು ಸರ್ಕಾರದಿಂದ ಒಪ್ಪಿಗೆ ಪಡೆಯಲಾಗುವುದು. ಇದರ ಬದಲಿಗೆ ಮರುಬಳಕೆ ಮಾಡಬಹುದಾದ ಕಂಟೇನರ್‌ಗಳನ್ನು ಬಳಸಲು ಉತ್ತೇಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಕರೂಪದ ನಿಯಮ ಬೇಕು

‘ಪ್ಲಾಸ್ಟಿಕ್‌ ನಿಷೇಧಕ್ಕೆ ಸಂಬಂಧಿಸಿದಂತೆ ದಕ್ಷಿಣದ ರಾಜ್ಯಗಳಲ್ಲಿ ಬೇರೆ ಬೇರೆ ನಿಯಮ ಜಾರಿಯಲ್ಲಿವೆ. ಇದು ಸಮಸ್ಯೆಗೆ ಪ್ರಮುಖ ಕಾರಣ. ನಮ್ಮಲ್ಲಿ ಯಾವುದಕ್ಕೆ ನಿಷೇಧವಿದೆಯೋ ಅವುಗಳಿಗೆ ತಮಿಳುನಾಡಿನಲ್ಲಿ ನಿಷೇಧವಿಲ್ಲ. ಅಲ್ಲಿ ಅವುಗಳನ್ನು ತಯಾರಿಸಿ ರಾಜ್ಯಕ್ಕೆ ತಂದು ಸುರಿಯಲಾಗುತ್ತದೆ. ಎಷ್ಟೇ ಕಣ್ಗಾವಲು ಇಟ್ಟರೂ ಕಳ್ಳ ಮಾರ್ಗದಲ್ಲಿ ತರುತ್ತಾರೆ. ಇದನ್ನು ಸರಿಪಡಿಸಬೇಕಾದರೆ, ಎಲ್ಲ ರಾಜ್ಯಗಳಿಗೂ ಅನ್ವಯ ಆಗುವಂತೆ ಏಕರೂಪ ನಿಯಮ ಜಾರಿಗೆ ತರಬೇಕು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಒಂದೇ ಸಲಕ್ಕೆ ಸಂಪೂರ್ಣ ನಿಷೇಧ ಕಷ್ಟ. ಹಂತಗಳಲ್ಲಿ ಗುರಿ ಸಾಧಿಸಬಹುದು. ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ವಿನಾಯ್ತಿ ಇದೆ. ಕೆಲವರು ಇದನ್ನು ದುರ್ಬಳಕೆ ಮಾಡಿ ಇತರೆ ಪದಾರ್ಥಗಳಿಗೂ ಬಳಕೆ ಮಾಡುತ್ತಿದ್ದಾರೆ’

– ಜಯರಾಮ್‌, ಅಧ್ಯಕ್ಷ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ

***

ಆಹಾರ ಪದಾರ್ಥಗಳ ಕಂಟೇನರ್‌ಗಳೂ ನಿಷೇಧ

ರಾಜ್ಯದಲ್ಲಿ ಸಾಕಷ್ಟು ಹೊಟೇಲು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸೆಲ್‌ಗೆ ಪ್ಲಾಸ್ಟಿಕ್‌ ಕಂಟೇನರ್‌ಗಳನ್ನು ಬಳಸಲಾಗುತ್ತಿದೆ. ಇದರಲ್ಲಿ ಬಿಸಿ ಬಿಸಿಯಾದ ಆಹಾರ ಪದಾರ್ಥಗಳನ್ನು ಇಟ್ಟು ಪ್ಯಾಕ್‌ ಮಾಡುವುದರಿಂದ ವಿಷಕಾರಿ ರಾಸಾಯನಿಕಗಳು ಆಹಾರದೊಳಗೆ ಸೇರುತ್ತವೆ. ಆದ್ದರಿಂದ ಇವುಗಳನ್ನು ನಿಷೇಧಿಸಲು ಬಿಬಿಎಂಪಿ ತೀರ್ಮಾನಿಸಿದೆ. ಈ ಸಂಬಂಧ ವೈಜ್ಞಾನಿಕ ಜರ್ನಲ್‌ಗಳಲ್ಲಿ ಬಂದಿರುವ ಅಧ್ಯಯನಗಳ ವರದಿಯನ್ನು ಮುಂದಿಟ್ಟು ಸರ್ಕಾರದಿಂದ ಒಪ್ಪಿಗೆ ಪಡೆಯಲಾಗುವುದು. ಇದರ ಬದಲಿಗೆ ಮರುಬಳಕೆ ಮಾಡಬಹುದಾದ ಕಂಟೇನರ್‌ಗಳನ್ನು ಬಳಸಲು ಉತ್ತೇಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಪ್ಲಾಸ್ಟಿಕ್‌ ನಿಷೇಧ

l ಪ್ಲಾಸ್ಟಿಕ್‌ ನಿಷೇಧ ಮಾಡಿದ ಮೊದಲ ರಾಜ್ಯ ಹಿಮಾಚಲ ಪ್ರದೇಶ. 2009 ರಲ್ಲಿ ಶಾಪಿಂಗ್‌ ಉದ್ದೇಶದ ಪ್ಲಾಸ್ಟಿಕ್‌ ಮತ್ತು ಪಾಲಿಥಿನ್ ಚೀಲಗಳನ್ನು ನಿಷೇಧಿಸಿತು.

l ಎಲ್ಲ ಬಗೆಯ ಪ್ಲಾಸ್ಟಿಕ್‌ ಉತ್ಪಾದನೆ, ವಿತರಣೆ ಮತ್ತು ಬಳಕೆಯ ಮೇಲೆ ನಿಷೇಧ ಹೇರಿದ ರಾಜ್ಯ ಕರ್ನಾಟಕ. 2016 ರಲ್ಲಿ ನಿಷೇಧ ವಿಧಿಸಲಾಯಿತು.

l ದೇಶದ ರಾಜಧಾನಿ ದೆಹಲಿಯಲ್ಲಿ 2017 ರಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಚೀಲಗಳು, ಕಟ್ಲೆರಿ, ಕಪ್‌ಗಳು, ಪ್ಲೇಟ್‌ಗಳು ಮತ್ತು ಇತರ ಒಂದು ಬಾರಿ ಬಳಸುವ ವಸ್ತುಗಳ ಮೇಲೆ ನಿಷೇಧ ವಿಧಿಸಲಾಇತು.

l ಗೋವಾ ಮತ್ತು ಗುಜರಾತ್‌ಗಳಲ್ಲಿ ಧಾರ್ಮಿಕ, ಐತಿಹಾಸಿಕ ಮತ್ತು ನಿಸರ್ಗ ತಾಣಗಳ ಸುತ್ತಮುತ್ತ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಯಿತು.

l ಬಿಹಾರ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಉತ್ತರಾಖಂಡ್ ರಾಜ್ಯಗಳೂ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿವೆ.

l ಬಿಹಾರದ ಪ್ರಮುಖ ನಗರಗಳಲ್ಲಿ ಎಲ್ಲ ಬಗೆಯ ಪ್ಲಾಸ್ಟಿಕ್‌ಗಳ ಉತ್ಪಾದನೆ, ಆಮದು, ಸಂಗ್ರಹ, ವಿತರಣೆ ಮತ್ತು ಸಾಗಣೆ ಮೇಲೆ ನಿಷೇಧ ವಿಧಿಸಲಾಗಿದೆ. ಇಡೀ ರಾಜ್ಯದಲ್ಲಿ ಎಲ್ಲ ರೀತಿಯ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಕ್ಯಾರಿ ಬ್ಯಾಗ್‌ಗಳನ್ನು ಸಂಗ್ರಹಿಸಿಡುವುದು, ವಸ್ತುಗಳ ಜತೆ ಕಟ್ಟಿಕೊಡುವಂತಿಲ್ಲ. ಆಹಾರ ಮತ್ತು ಆಹಾರವಲ್ಲದ ವಸ್ತುಗಳನ್ನು ಕಟ್ಟಿಕೊಡುವಂತಿಲ್ಲ. ಆದರೆ, ವೈದ್ಯಕೀಯ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿಗೆ 50 ಮೈಕ್ರಾನ್‌ಗಿಂತ ಹೆಚ್ಚು ದಪ್ಪದ ಪ್ಲಾಸ್ಟಿಕ್‌ ಬಳಕೆಗೆ ಅನುಮತಿ ಇದೆ.

l ಮಹಾರಾಷ್ಟ್ರದಲ್ಲಿ ಎಲ್ಲ ರೀತಿಯ ಪ್ಲಾಸ್ಟಿಕ್‌ ಉತ್ಪನ್ನಗಳ ಜತೆಗೆ ಥರ್ಮಾಕೋಲ್‌ ಬಳಸುವುದನ್ನೂ ನೀಷೇಧಿಸಲಾಗಿದೆ. ಅಲಂಕಾರಿಕ ಉದ್ದೇಶಕ್ಕೂ ಥರ್ಮಾಕೋಲ್‌ ಬಳಸುವಂತಿಲ್ಲ.

l ಒಡಿಶಾದ ಆರು ನಗರಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಬೆಹ್ರಾಂಪುರ,ಭುವನೇಶ್ವರ, ಕಟಕ್‌, ರೂರ್ಕೆಲಾ, ಪುರಿ ಮತ್ತು ಸಂಭಲ್‌ಪುರಗಳಲ್ಲಿ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಆಹಾರ ಪದಾರ್ಥಗಳ ಪ್ಯಾಕೇಜಿಂಗ್‌, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಮತ್ತು ಖಾದ್ಯ ತೈಲಗಳ ಪ್ಯಾಕೇಜಿಂಗ್‌ಗೆ ಬಳಸುವಂತಿಲ್ಲ. ಇಲ್ಲಿ ಪಾಲಿಥಿನ್‌ ಬಳಕೆಯ ಮೇಲೆ ನಿಷೇಧವಿಲ್ಲ.

l ತಮಿಳುನಾಡಿನಲ್ಲಿ ಇದೇ ವರ್ಷದ ಜನವರಿ 1 ರಿಂದ ಪ್ಲಾಸ್ಟಿಕ್‌ ಬಳಕೆಯ ಮೇಲೆ ನಿಷೇಧ ವಿಧಿಸಲಾಗಿದೆ. ಕ್ಯಾರಿ ಬ್ಯಾಗ್‌, ಪ್ಲಾಸ್ಟಿಕ್‌ ಪ್ಲೇಟ್‌, ಕಪ್‌ಗಳು, ಬಾವುಟಗಳು ಮತ್ತು ಸ್ಯಾಚೆಟ್‌ಗಳನ್ನು ನಿಷೇಧಿಸ ಲಾಗಿದೆ. ಆದರೆ, ಹಾಲು, ಮೊಸರು, ಎಣ್ಣೆ ಮತ್ತು ಔಷಧಗಳ ಪ್ಯಾಕಿಂಗ್‌ಗೆ ಪ್ಲಾಸ್ಟಿಕ್‌ ಬಳಕೆಯ ಮೇಲೆ ನಿಷೇಧವಿಲ್ಲ.

ಇವನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.