ADVERTISEMENT

ಒಳನೋಟ: ಪ್ಲಾಸ್ಟಿಕ್‌ ನಿರ್ಮೂಲನೆಗಿಲ್ಲ ಆಸಕ್ತಿ

ಎಗ್ಗಿಲ್ಲದೆ ನಡೆಯುತ್ತಿದೆ ಬಳಕೆ; ಬದಲಾಗಬೇಕಿದೆ ಮನೋಧೋರಣೆ: ಬೇಕಿದೆ ಇಚ್ಛಾಶಕ್ತಿ

ಜಿ.ಶಿವಕುಮಾರ
Published 11 ನವೆಂಬರ್ 2023, 23:30 IST
Last Updated 11 ನವೆಂಬರ್ 2023, 23:30 IST
<div class="paragraphs"><p>ಬೆಂಗಳೂರಿನ ಹಲಸೂರು ಕೆರೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಹಿಳೆಯರು ತೆರವುಗೊಳಿಸುತ್ತಿರುವ ದೃಶ್ಯ</p></div>

ಬೆಂಗಳೂರಿನ ಹಲಸೂರು ಕೆರೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಹಿಳೆಯರು ತೆರವುಗೊಳಿಸುತ್ತಿರುವ ದೃಶ್ಯ

   

-ಪ್ರಜಾವಾಣಿ ಸಂಗ್ರಹ ಚಿತ್ರ: ಎಂ.ಎಸ್‌.ಮಂಜುನಾಥ್‌

ದಾವಣಗೆರೆ: ಆ ಕೆಫೆಯಲ್ಲಿ ಯಾರು ಬೇಕಾದರೂ ಹೊಟ್ಟೆ ಬಿರಿಯುವಷ್ಟು ಊಟ ಮಾಡಿದರೂ ಅದಕ್ಕಾಗಿ ಹಣ ನೀಡಬೇಕಿಲ್ಲ. ಬದಲಾಗಿ 1 ಕೆ.ಜಿ. ಪ್ಲಾಸ್ಟಿಕ್‌ ತ್ಯಾಜ್ಯ ಕೊಟ್ಟರೆ ಸಾಕು!

ADVERTISEMENT

ಈ ಅಪರೂಪದ ಕೆಫೆ ಇರುವುದು ಛತ್ತೀಸಗಢದ ಅಂಬಿಕಾಪುರದಲ್ಲಿ. ದೇಶದ ಮೊದಲ ‘ಗಾರ್ಬೇಜ್‌ ಕೆಫೆ’ ಎಂಬ ಹೆಗ್ಗಳಿಕೆ ಇದರದ್ದು.

ಅಂಬಿಕಾಪುರ ನಗರಸಭೆಯು 2019ರಲ್ಲಿ ಆರಂಭಿಸಿದ್ದ ಈ ಕೆಫೆ, ನಿರ್ಗತಿಕರು ಹಾಗೂ ಚಿಂದಿ ಆಯುವವರ ಹಸಿವು ನೀಗಿಸುತ್ತಿದೆ. ಇನ್ನಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಹೆಕ್ಕಿ ತರುವುದಕ್ಕೆ ಅವರಿಗೆ ಪ್ರೇರಣೆಯನ್ನೂ ನೀಡಿದೆ. ಇದರಿಂದಾಗಿ ಪ್ಲಾಸ್ಟಿಕ್‌ ಮುಕ್ತ ನಗರದ ಕನಸನ್ನೂ ನನಸಾಗಿಸಿದೆ. ದೇಶದ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ನಾಲ್ಕು ವರ್ಷಗಳ ಹಿಂದೆ 40ನೇ ಸ್ಥಾನದಲ್ಲಿದ್ದ ಅಂಬಿಕಾಪುರ ಈಗ ನಾಲ್ಕನೇ ಸ್ಥಾನಕ್ಕೇರಿದೆ.

ಅಸ್ಸಾಂನ ರಾಜಧಾನಿ ಗುವಾಹಟಿಯ ‘ಅಕ್ಷರ’ ಶಾಲೆಯದ್ದೂ ಇಂತಹದ್ದೇ ಒಂದು ಕೌತುಕದ ಕಥೆ ಇದೆ. ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಶುರುವಾಗಿರುವ ಈ ಶಾಲೆಯಲ್ಲಿ ಪ್ರವೇಶ ಪಡೆಯಲು ಬರುವ ವಿದ್ಯಾರ್ಥಿಗಳಿಂದ ಶುಲ್ಕದ ರೂಪದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸ್ವೀಕರಿಸಲಾಗುತ್ತದೆ!

ಮೈಸೂರು ಮಹಾನಗರ ಪಾಲಿಕೆ ಕೂಡ ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿದೆ. ‘ಕಸದಿಂದ ರಸ’ ಎಂಬ ತತ್ವದಡಿ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ಗೆ ಹೊಸ ರೂಪ ನೀಡುತ್ತಿದ್ದು, ಅವು ‘ಪ್ಲಾಸ್ಟಿಕ್‌ ಟೈಲ್ಸ್‌’ ರೂಪದಲ್ಲಿ ಪಾದಚಾರಿ ಮಾರ್ಗಕ್ಕೆ ಹೊದಿಕೆಯಾಗುತ್ತಿವೆ.

ಬದಲಾವಣೆಗೆ ತುಡಿಯುತ್ತಿರುವ ಇಂತಹ ಹತ್ತು ಹಲವು ಮನಸ್ಸುಗಳು ನಮ್ಮ ನಡುವೆ ಇವೆ. ಹುಡುಕುತ್ತಾ ಹೋದರೆ ನೂರಾರು ಸ್ಫೂರ್ತಿದಾಯಕ ಕಥೆಗಳು ನಮ್ಮೆದುರು ತೆರೆದುಕೊಳ್ಳುತ್ತವೆ. ಇಷ್ಟಾದರೂ ಪ್ಲಾಸ್ಟಿಕ್‌ ತ್ಯಾಜ್ಯ ಪೆಡಂಭೂತವಾಗಿ ಕಾಡುತ್ತಲೇ ಇದೆ. 

ದಿನಸಿ ಅಂಗಡಿಗಳಲ್ಲಿ ಬೇಳೆ ಕಾಳು ಸೇರಿದಂತೆ ಇತರೆ ದವಸ ಧಾನ್ಯಗಳನ್ನು ಕಾಗದದ ‍ಪೊಟ್ಟಣಗಳಲ್ಲಿ ಕಟ್ಟಿಕೊಡುತ್ತಿದ್ದ ಕಾಲವೊಂದಿತ್ತು. ಅದು ಕ್ರಮೇಣ ಮರೆಯಾಗುತ್ತಿದೆ. ಹಳ್ಳಿ, ಪಟ್ಟಣ, ನಗರ, ಮಹಾನಗರ... ಹೀಗೆ ಎಲ್ಲೆಡೆಯೂ ಪ್ಲಾಸ್ಟಿಕ್‌ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ.

2011ರಲ್ಲಿ ಸರ್ಕಾರವು 40 ಮೈಕ್ರಾನ್‌ಗಿಂತಲೂ ತೆಳುವಾದ ಪ್ಲಾಸ್ಟಿಕ್‌ ವಸ್ತುಗಳ ಮೇಲೆ ನಿಷೇಧ ಹೇರಿತ್ತು. ನಂತರ ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಪರಿಸರ ಹಾಗೂ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಪ್ಲಾಸ್ಟಿಕ್‌ಗಳನ್ನು ನಿರ್ಬಂಧಿಸಿತ್ತು. ಶಾಂಪೂ ಬಾಟಲಿಗಳು, ಪ್ಲಾಸ್ಟಿಕ್‌ ಬಾವುಟ ಹೀಗೆ ಒಟ್ಟು 19 ಬಗೆಯ ಏಕಬಳಕೆಯ ಪ್ಲಾಸ್ಟಿಕ್‌ ಉತ್ಪನ್ನಗಳನ್ನೂ ನಿಷೇಧಿಸಿತ್ತು. ಇಷ್ಟಾದರೂ ದಿನಸಿ, ಹೂವು, ತರಕಾರಿ, ಮಾಂಸ ಮಾರಾಟದ ಅಂಗಡಿಗಳು, ಐಸ್‌ ಕ್ರೀಂ ಪಾರ್ಲರ್‌ಗಳು ಹಾಗೂ ಬೇಕರಿಗಳಲ್ಲಿ ಪ್ಲಾಸ್ಟಿಕ್‌ ಬಳಕೆ ನಿಂತಿಲ್ಲ.

ಪ್ಲಾಸ್ಟಿಕ್‌ ವಸ್ತುಗಳು ಮಣ್ಣಿನಲ್ಲಿ ಕೊಳೆಯುವುದಿಲ್ಲ. ಅವುಗಳನ್ನು ಸುಟ್ಟರೆ ‘ಡಯಾಕ್ಸಿನ್‌’ ಎಂಬ ವಿಷಪೂರಿತ ಅಂಶ ಬಿಡುಗಡೆಯಾಗುತ್ತದೆ. ಅದು ಗಾಳಿಯಲ್ಲಿ ಬೆರೆತರೆ ಉಸಿರಾಟಕ್ಕೆ ತೊಂದರೆ. ಈ ಸತ್ಯದ ಅರಿವಿದ್ದೋ ಇಲ್ಲದೆಯೋ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಮನಸೋ ಇಚ್ಛೆ ಬಳಸಲಾಗುತ್ತಿದೆ.

ಪ್ಲಾಸ್ಟಿಕ್‌ ತ್ಯಾಜ್ಯವು ಈಗ ಜಾಗತಿಕವಾಗಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಗತ್ತಿನ ಅತಿ ಎತ್ತರದ ಗಿರಿ ಶಿಖರಗಳಿಂದ ಹಿಡಿದು ಆಳ ಸಮುದ್ರದ ಒಡಲೊಳಗೂ ಸೇರಿಕೊಳ್ಳುತ್ತಿರುವ ಇದು ಜನ–ಜಾನುವಾರು ಹಾಗೂ ಸಸ್ಯ ಸಂಕುಲಕ್ಕೆ ಮಾರಕವಾಗಿದೆ. ಕಡಲ ಜೀವಿಗಳಿಗೂ ಕಂಟಕಪ್ರಾಯವಾಗಿದೆ.

‘ಡಾಲ್ಫಿನ್‌, ತಿಮಿಂಗಿಲ ಮುಂತಾದ ದೊಡ್ಡ ಕಡಲಜೀವಿಗಳು ಆಹಾರ ನುಂಗಲು ಬಾಯಿ ತೆರೆದಾಗ ಪ್ಲಾಸ್ಟಿಕ್ ತ್ಯಾಜ್ಯ ಅವುಗಳ ಹೊಟ್ಟೆ ಸೇರುತ್ತದೆ. ನಂತರ ಹೊಟ್ಟೆ ಕಟ್ಟಿದಂತಾಗಿ ಹಸಿವಾಗುವುದಿಲ್ಲ. ಕ್ರಮೇಣ ಅವು ಆಹಾರ ಸೇವಿಸದೆ ಸಾಯುತ್ತವೆ’ ಎಂದು ಸಾಗರದ ಬಗ್ಗೆ ಅಧ್ಯಯನ ನಡೆಸುತ್ತಿರುವ ಮಂಗಳೂರಿನ ತೇಜಸ್ವಿನಿ ಶೆಟ್ಟಿಗಾರ್‌ ಹೇಳುತ್ತಾರೆ.

‘ದುರಸ್ತಿ ಮತ್ತು ಸ್ಕ್ರಾಪ್ ಮಾಡುವುದಕ್ಕಾಗಿ ಬೋಟ್‌ಗಳನ್ನು ಒಡೆಯುವ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಥರ್ಮಾಕೋಲ್ ಸಿಗುತ್ತದೆ. ಬಹುತೇಕ ಕಡೆಗಳಲ್ಲಿ ಇದನ್ನು ಹಿನ್ನೀರಿಗೆ ಎಸೆಯಲಾಗುತ್ತದೆ. ಇದು ಸಮುದ್ರ ಸೇರಿ ಮೀನಿನ ಸಂತತಿಗೆ ತೊಂದರೆ ಮಾಡುತ್ತದೆ’ ಎಂದು ಮಂಗಳೂರಿನ ಪರ್ಸಿನ್ ಬೋಟ್ ಮಾಲೀಕ ಡೊನಾಲ್ಡ್ ಪಿಂಟೊ ವಾಸ್ತವದ ಚಿತ್ರಣವನ್ನು ಬಿಚ್ಚಿಡುತ್ತಾರೆ.

1950ರಲ್ಲಿ ಇಡೀ ವಿಶ್ವದಲ್ಲಿ ವಾರ್ಷಿಕ ಅಂದಾಜು 15 ಲಕ್ಷ ಟನ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತಿತ್ತು. ನಂತರ ಇದು ವರ್ಷದಿಂದ ವರ್ಷಕ್ಕೆ ಏರುಗತಿ ಪಡೆಯಿತು. ಇದರ ಪರಿಣಾಮ 2021ರ ವೇಳೆಗೆ ಉತ್ಪಾದನೆಯ ಪ್ರಮಾಣ 39 ಕೋಟಿ ಟನ್‌ಗೆ ಹೆಚ್ಚಿದೆ.

ಜಗತ್ತಿನಲ್ಲಿ ಪ್ಲಾಸ್ಟಿಕ್‌ ಉತ್ಪಾದನೆ ಹಾಗೂ ಮಾರಾಟವು ಹೀಗೆಯೇ ಮುಂದುವರಿದಿದ್ದೇ ಆದಲ್ಲಿ 2040ರ ವೇಳೆಗೆ ತ್ಯಾಜ್ಯದ ಪ್ರಮಾಣ 45 ಕೋಟಿ ಟನ್‌ಗೆ ಏರಲಿದೆ ಎಂದು ವಿಶ್ವಸಂಸ್ಥೆಯ ‘ಎನ್ವಿರಾನ್‌ಮೆಂಟ್‌ ಪ್ರೋಗ್ರಾಂ’ ಈ ವರ್ಷದ ಮೇ 16ರಂದು ಬಿಡುಗಡೆ ಮಾಡಿದ್ದ ವರದಿಯಲ್ಲಿ ಎಚ್ಚರಿಸಿದೆ.

ಜಗತ್ತಿನಲ್ಲಿ ಮರು ಬಳಕೆ ಮಾಡಲು ಸಾಧ್ಯವೇ ಇಲ್ಲದಂತಹ ಪ್ಲಾಸ್ಟಿಕ್‌ ತ್ಯಾಜ್ಯದ ಉತ್ಪಾದನೆಯಲ್ಲಿ ಭಾರತ, ಚೀನಾ, ಬ್ರೆಜಿಲ್‌, ಇಂಡೊನೇಷ್ಯಾ, ಥಾಯ್ಲೆಂಡ್‌, ರಷ್ಯಾ, ಮೆಕ್ಸಿಕೊ, ಅಮೆರಿಕ, ಸೌದಿ ಅರೇಬಿಯಾ, ಕಾಂಗೊ ಗಣರಾಜ್ಯ, ಇರಾನ್‌ ಹಾಗೂ ಕಜಕಿಸ್ತಾನ ರಾಷ್ಟ್ರಗಳ ಪಾಲು ಶೇ 52ರಷ್ಟಿದೆ ಎಂದು ಸ್ವಿಟ್ಜರ್ಲೆಂಡ್‌ನ ಅರ್ಥ್‌ ಆ್ಯಕ್ಷನ್‌ (ಎಇ) ಸಂಶೋಧನಾ ಸಂಸ್ಥೆ ಜುಲೈ 28ರಂದು ಪ್ರಕಟಿಸಿರುವ ‘2023 ಪ್ಲಾಸ್ಟಿಕ್‌ ಓವರ್‌ಶೂಟ್‌ ಡೇ’ ವರದಿಯಲ್ಲಿ ತಿಳಿಸಿದೆ. ಇದು ಆಘಾತಕಾರಿ.

ಈ ವರ್ಷದ ಜನವರಿಯಲ್ಲಿ ಪ್ರಕಟವಾಗಿದ್ದ ಮರಿಕೊ ಇನ್ನೊವೇಷನ್‌ ಫೌಂಡೇಷನ್‌ನ ವರದಿಯ ಪ್ರಕಾರ ಭಾರತದಲ್ಲಿ ವರ್ಷವೊಂದರಲ್ಲಿ ಅಂದಾಜು 34 ಲಕ್ಷ ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ಪೈಕಿ ಶೇ 30ರಷ್ಟು ಮಾತ್ರ ಮರು ಬಳಕೆಯಾಗುತ್ತಿದೆ. 2019–20ರಲ್ಲಿ ಈ ಪ್ರಮಾಣ 20 ಲಕ್ಷ ಟನ್‌ನಷ್ಟಿತ್ತು. ಕಡಿಮೆ ಪ್ಲಾಸ್ಟಿಕ್‌ ಬಳಕೆ ಮಾಡಿಯೂ ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತವೂ ಪ್ರಮುಖ ಸ್ಥಾನ ಹೊಂದಿದೆ. ದೇಶದಲ್ಲಿ ವಾರ್ಷಿಕ ಸರಾಸರಿ 3.30 ಲಕ್ಷ ಟನ್‌ನಷ್ಟು ಮೈಕ್ರೊ ಪ್ಲಾಸ್ಟಿಕ್‌ ಜಲಮೂಲಗಳಿಗೆ ಸೇರುತ್ತಿದೆ. 

ಪ್ಲಾಸ್ಟಿಕ್‌ ಉತ್ಪಾದನಾ ಕ್ಷೇತ್ರ ಈಗ ಮತ್ತಷ್ಟು ಬೃಹಾದಾಕಾರವಾಗಿ ಬೆಳೆದುನಿಂತಿದೆ. ಭಾರತದಿಂದ ವಿದೇಶಗಳಿಗೆ ಅಗಾಧ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ರಫ್ತಾಗು‌ತ್ತಿದೆ. 2027–28ರ ವೇಳೆಗೆ ಭಾರತದ ಪ್ಲಾಸ್ಟಿಕ್‌ ಉತ್ಪಾದನಾ ವಲಯದ ಮಾರುಕಟ್ಟೆ ಗಾತ್ರ ₹ 10 ಲಕ್ಷ ಕೋಟಿಗೆ ವಿಸ್ತರಣೆಯಾಗುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ಪ್ಲಾಸ್ಟಿಕ್ ಉತ್ಪಾದಕರ ಸಂಘ (ಎಐಪಿಎಂಎ) ಹೇಳಿರುವುದು ಆತಂಕಕಾರಿ.

ಕರ್ನಾಟಕಕ್ಕೂ ಕಂಟಕ: 2022ರ ಡಿಸೆಂಬರ್‌ನ ಅಂಕಿ–ಅಂಶಗಳ ಪ್ರಕಾರ ರಾಜ್ಯದಲ್ಲಿ ವಾರ್ಷಿಕ ಅಂದಾಜು 2.96 ಲಕ್ಷ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ಪೈಕಿ ಮರು ಬಳಕೆಯಾಗುತ್ತಿರುವುದು 73,000 ಟನ್‌ ಮಾತ್ರ. 50,000 ಟನ್‌ಗೂ ಅಧಿಕ ತ್ಯಾಜ್ಯವನ್ನು ಸುಡಲಾಗುತ್ತಿದೆ.

ಪ್ರತಿದಿನ 830.36 ಟನ್‌ನಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು 2022ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರವೇ ಮಾಹಿತಿ ನೀಡಿತ್ತು.  

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಸುಮಾರು 5,000 ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಶೇ 10ರಿಂದ ಶೇ 12ರಷ್ಟು ಪಾಲು ಪ್ಲಾಸ್ಟಿಕ್‌ನದ್ದು ಎಂದು ಅಂದಾಜಿಸಲಾಗಿದೆ.

ಕೊಪ್ಪಳ ತಾಲ್ಲೂಕಿನ ಹುಲಗಿಯಲ್ಲಿನ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ತೆಂಗಿನಕಾಯಿಗಳನ್ನು ಪ್ಲಾಸ್ಟಿಕ್‌ ಕವರಿನಲ್ಲಿ ಇರಿಸಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿ ಪ್ಲಾಸ್ಟಿಕ್‌ಮಯವಾಗಿದೆ. 

ಕಾಯ್ದೆಗಳಿಗೆ ಕಿಮ್ಮತ್ತಿಲ್ಲ: ರಾಜ್ಯ ಸರ್ಕಾರ 2016ರ ಮಾರ್ಚ್‌ 11ರಂದು ಹೊರಡಿಸಿದ್ದ ಅಧಿಸೂಚನೆಯ ಪ್ರಕಾರ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ತಟ್ಟೆ, ಲೋಟ, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಹಾಳೆ, ಭಿತ್ತಿಪತ್ರ, ಕ್ಲಿಂಗ್ ಫಿಲ್ಮ್ಸ್, ಥರ್ಮೋಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಿಸಿದ ವಸ್ತುಗಳ ಸಂಗ್ರಹಣೆ, ಸರಬರಾಜು, ಮಾರಾಟ ಮತ್ತು ವಿತರಣೆ ಮಾಡುವಂತಿಲ್ಲ. ಇದನ್ನು ಮೀರಿ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ತೊಡಗಿದ್ದ ಘಟಕಗಳ ವಿರುದ್ಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಸಂರಕ್ಷಣೆ ಕಾಯ್ದೆ– 1986ರ ಕಲಂ 5ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈವರೆಗೆ ಒಟ್ಟು 123 ಘಟಕಗಳನ್ನು ಮುಚ್ಚಲು ಆದೇಶಿಸಿದೆ.

ಇಷ್ಟಾದರೂ ಅಕ್ರಮವಾಗಿ ಪ್ಲಾಸ್ಟಿಕ್ ವಸ್ತು ತಯಾರಿಸುತ್ತಿರುವ ಕುರಿತ ದೂರುಗಳು ಕೇಳಿಬರುತ್ತಲೇ ಇವೆ. ಪದೇಪದೇ ನಿಯಮ ಉಲ್ಲಂಘಿಸಿದ್ದಕ್ಕಾಗಿ ಬಳ್ಳಾರಿ ಜಿಲ್ಲೆಯ 6, ವಿಜಯನಗರ ಮತ್ತು ಮೈಸೂರು ಜಿಲ್ಲೆಯ ತಲಾ 3 ಪ್ಲಾಸ್ಟಿಕ್ ತಯಾರಿಕಾ ಘಟಕಗಳ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಿಮಿನಲ್ ಮೊಕದ್ದಮೆ ಹೂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ದಾಳಿ, ದಂಡಾಸ್ತ್ರಕ್ಕೂ ಬಗ್ಗದ ಜನ: ನಿಯಮ ಉಲ್ಲಂಘಿಸುವವರಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹ 1 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ತಪ್ಪು ಮರುಕಳಿಸಿದರೆ ಶಿಕ್ಷೆಯ ಪ್ರಮಾಣವನ್ನು 7 ವರ್ಷಗಳವರೆಗೂ ವಿಸ್ತರಿಸಬಹುದು. ಹೀಗಿದ್ದರೂ ಉತ್ಪಾದಕರು ಹಾಗೂ ವ್ಯಾಪಾರಿಗಳು ಕ್ಯಾರೆ ಎನ್ನುತ್ತಿಲ್ಲ. ದಂಡ ಹಾಕುವ ನಿಯಮವು ಕೆಲ ಭ್ರಷ್ಟ ಅಧಿಕಾರಿಗಳಿಗೆ ಹಣ ಮಾಡಲು ದಾರಿ ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿ ಬರುತ್ತಿದೆ. 

ಬೆಂಗಳೂರು– ತಮಿಳುನಾಡಿನ ಗಡಿಭಾಗದಲ್ಲಿ ಪ್ಲಾಸ್ಟಿಕ್‌ ಉತ್ಪಾದನಾ ಕಾರ್ಖಾನೆಗಳಿವೆ. ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಬಂದ್‌ ಮಾಡಿಸುವಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ವಿಫಲವಾಗಿದೆ. ಈವರೆಗೆ 56,614 ಪ್ರಕರಣಗಳನ್ನು ದಾಖಲಿಸಿದ್ದು, ₹ 2.55 ಕೋಟಿ ದಂಡ ವಿಧಿಸಿರುವುದೇ ಮಂಡಳಿಯ ಸಾಧನೆಯಾಗಿದೆ. 

‘ಸ್ಥಳೀಯ ಸಂಸ್ಥೆಯ ಅಧಿಕಾರಿಗಳ ಬಳಿ ಹಣ ಖಾಲಿಯಾದಾಗ ದಾಳಿ ಮಾಡುತ್ತಾರೆ. ₹ 500 ಅಥವಾ ₹ 1,000 ಕೊಟ್ಟರೆ ತೆಗೆದುಕೊಂಡು ಹೋಗುತ್ತಾರೆ. ಮರುದಿನದಿಂದ ಯಥಾ ಪ್ರಕಾರ ಪ್ಲಾಸ್ಟಿಕ್‌ ಮಾರಾಟ ಮತ್ತು ಬಳಕೆ ಮುಂದುವರಿಯುತ್ತದೆ’ ಎಂದು ದಾವಣಗೆರೆಯ ದಿನಸಿ ಅಂಗಡಿ ಮಾಲೀಕರೊಬ್ಬರು ಹೇಳುತ್ತಾರೆ. ‘ಮೊದಲು ಉತ್ಪಾದನೆಗೆ ಕಡಿವಾಣ ಹಾಕಬೇಕು. ಆಗ ಸಹಜವಾಗಿಯೇ ಮಾರಾಟ ಮತ್ತು ಬಳಕೆ ನಿಲ್ಲುತ್ತದೆ’ ಎಂದೂ ಅವರು ಅಭಿಪ್ರಾಯಪಡುತ್ತಾರೆ. 

‘ಪ್ಲಾಸ್ಟಿಕ್‌ ಬಳಕೆ ಹಾಗೂ ಸಂಗ್ರಹ ಯಥೇಚ್ಛವಾಗಿದೆ. ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ದಾಳಿ ನಡೆಸಿದರೆ ಪ್ರಯೋಜನವಾಗುವುದಿಲ್ಲ. ಹೆಚ್ಚು ದಂಡ ವಿಧಿಸುವ ಜೊತೆಗೆ ಮಳಿಗೆ ಮುಚ್ಚುವ ಕ್ರಮಗಳಾಗಬೇಕಿದೆ’ ಎಂದೂ ಉನ್ನತ ಮಟ್ಟದ ಅಧಿಕಾರಿಗಳು ಸಲಹೆ ನೀಡುತ್ತಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಒಮ್ಮೆ ಆದೇಶ ನೀಡಿ ಸುಮ್ಮನಾಗುತ್ತಾರೆ. ಕಾನೂನು ಅನುಷ್ಠಾನದ ಅಧಿಕಾರವಿದ್ದರೂ ಅದನ್ನು ಬಳಸದೆ ಸ್ಥಳೀಯ ಸಂಸ್ಥೆಗಳಿಗೆ ಈ ಜವಾಬ್ದಾರಿಯನ್ನು ವರ್ಗಾಯಿಸುತ್ತಿದ್ದಾರೆ ಎಂಬ ಆರೋಪವೂ ನಾಗರಿಕರಿಂದ ಕೇಳಿಬರುತ್ತಿದೆ.

‘ಈಗ ಲೋಕಾಯುಕ್ತ ಬಲಗೊಂಡಿದೆ. ಪ್ಲಾಸ್ಟಿಕ್‌ ಉತ್ಪಾದನೆ ಹಾಗೂ ಮಾರಾಟಗಾರರ ವಿರುದ್ಧ ದೂರು ನೀಡುವ ಕೆಲಸ ಜನರಿಂದ ಆಗಬೇಕು. ಪ್ಲಾಸ್ಟಿಕ್‌ ಅಪಾಯದ ಕುರಿತು ಶಾಲಾ ಹಂತದಿಂದಲೇ ಮಕ್ಕಳಲ್ಲಿ ಅರಿವು ಮೂಡಿಸಬೇಕು’ ಎಂದು ದಾವಣಗೆರೆಯ ಹಾಲಿನ ವ್ಯಾಪಾರಿಯೊಬ್ಬರು ಸಲಹೆ ನೀಡುತ್ತಾರೆ.

ಕೆ–ಶೋರ್‌ ಬ್ಲೂ ಪ್ಯಾಕ್ ಯೋಜನೆಯ ನಿರೀಕ್ಷೆ: ಕರಾವಳಿ ಭಾಗದಲ್ಲಿ ಸಮುದ್ರಕ್ಕೆ ಪ್ಲಾಸ್ಟಿಕ್ ಸೇರುವುದನ್ನು ತಡೆಯಲು ಮತ್ತು ಪಶ್ಚಿಮ ಘಟ್ಟದ ಜೀವವೈವಿಧ್ಯ ಉಳಿಸುವ ಉದ್ದೇಶದಿಂದ ಜಾರಿಗೆ ತರಲು ಉದ್ದೇಶಿಸಿರುವ ಕೆ–ಶೋರ್‌ ಬ್ಲೂ ಪ್ಯಾಕ್ ಯೋಜನೆಯ ಮೇಲೆ ಪರಿಸರ ಚಿಂತಕರು ನಿರೀಕ್ಷೆಯ ಕಣ್ಣು ನೆಟ್ಟಿದ್ದಾರೆ.

₹ 840 ಕೋಟಿ ಮೊತ್ತದ ಈ ಯೋಜನೆಗಾಗಿ ರಾಜ್ಯ ಸರ್ಕಾರ ವಿಶ್ವಬ್ಯಾಂಕ್‌ನಿಂದ ಸಾಲ ಪಡೆದುಕೊಳ್ಳಲಿದೆ. ಶೇಕಡ 70ರಷ್ಟು ಹಣವನ್ನು ವಿಶ್ವಬ್ಯಾಂಕ್ ನೀಡಲಿದ್ದು ಉಳಿದ ಮೊತ್ತವನ್ನು ಸರ್ಕಾರ ಭರಿಸಬೇಕು. ರಾಜ್ಯ ಪರಿಸರ ಇಲಾಖೆಯ ಮೂಲಗಳ ಪ್ರಕಾರ ವಿಶ್ವಬ್ಯಾಂಕ್‌ನ ತಂಡವೊಂದು ಸಾಗರದೊಡಲಿನ ಅಧ್ಯಯನ ನಡೆಸಿ ಸಮಗ್ರ ಯೋಜನಾ ವರದಿ ಮಂಡಿಸಲಿದೆ. ಇದಕ್ಕೆ ತಾತ್ವಿಕ ಒಪ್ಪಿಗೆಯೂ ಸಿಕ್ಕಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆದಿರುವ 142 ಮರು ಬಳಕೆದಾರರು ಪ್ಲಾಸ್ಟಿಕ್‌ ತ್ಯಾಜ್ಯದ ಅಂತಿಮ ವಿಲೇವಾರಿ ನಡೆಸುತ್ತಿದ್ದಾರೆ. ₹ 260 ಕೋಟಿ ವೆಚ್ಚದಲ್ಲಿ ಬಿಬಿಎಂಪಿ, ಕೆಪಿಸಿಎಲ್‌ ಸಹಯೋಗದಲ್ಲಿ ಪ್ಲಾಸ್ಟಿಕ್‌ ಬಳಸಿಕೊಂಡು, 11.05 ಎಂ.ಡಬ್ಲ್ಯುವಿದ್ಯುತ್ ಉತ್ಪಾದಿಸುವ ಯೋಜನೆ ಇದೆ. ಇದು ನಿರ್ಮಾಣದ ಅಂತಿಮ ಹಂತದಲ್ಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಸ್ಥಳೀಯ ಸಂಸ್ಥೆಗಳು ವಿಫಲ?: ಪ್ಲಾಸ್ಟಿಕ್‌ಗೆ ಕಡಿವಾಣ ಹಾಕುವಲ್ಲಿ ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಆದರೆ ಅಧಿಕಾರಿಗಳು ಸರ್ವೇಸಾಧಾರಣವಾಗಿ ಇದನ್ನು ತಳ್ಳಿ ಹಾಕುತ್ತಾರೆ. 

‘ಪ್ಲಾಸ್ಟಿಕ್‌ ನಿರ್ಮೂಲನೆಗಾಗಿ ಹಲವು ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲಾಗುತ್ತಿದೆ. ಮಾರಾಟದ ಮೇಲೂ ನಿರ್ಬಂಧ ಹೇರಲಾಗಿದೆ. ದಾಳಿ ನಡೆಸಿ ಪ್ಲಾಸ್ಟಿಕ್‌ ಜಪ್ತಿ ಮಾಡಲಾಗುತ್ತಿದೆ. ಹೊರ ರಾಜ್ಯಗಳಿಂದ ಬರುವ ಪ್ಲಾಸ್ಟಿಕ್‌ ಮೇಲೆ ನಿರ್ಬಂಧ ಹೇರುವ ಅಧಿಕಾರ ನಮಗಿಲ್ಲ. ಪ್ಲಾಸ್ಟಿಕ್‌ ನಿರ್ಮೂಲನೆಯಲ್ಲಿ ನಾಗರಿಕರ ಸಹಕಾರ ತುಂಬಾ ಮುಖ್ಯ’ ಎಂದು ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎಂ.ವಿ. ಹಿರೇಮಠ ಹಾಗೂ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಕೊಮಾರನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಡಿ.ಕೇಶವಮೂರ್ತಿ ಹೇಳುತ್ತಾರೆ.

ಮೈಸೂರಿನ ಸುಯೇಜ್‌ ಫಾರಂ ಆವರಣದಲ್ಲಿ ಪೇವರ್ ಟೈಲ್ಸ್‌ ಉತ್ಪಾದನೆಗಾಗಿ ಸಂಗ್ರಹಿಸಲಾಗಿರುವ ಪ್ಲಾಸ್ಟಿಕ್‌ ತ್ಯಾಜ್ಯ–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮಂಗಳೂರಿನ ಬಂದರಿನಲ್ಲಿ ನಿರ್ವಹಣೆ ಇಲ್ಲದೆ ಸಮುದ್ರ ಸೇರುತ್ತಿರುವ ತ್ಯಾಜ್ಯ– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ಅಧಿಕಾರಿಗಳ ಜಾಣ ಕುರುಡು

‘ಪ್ಲಾಸ್ಟಿಕ್‌ ಎಲ್ಲಿ ಉತ್ಪಾದನೆಯಾಗುತ್ತದೆ ಯಾರು ಮಾಲೀಕರು ನೋಟಿಸ್‌ ನೀಡಿದ ಮೇಲೂ ಹಿಂಬಾಗಿಲಿನಿಂದ ಕಾರ್ಯಾಚರಣೆ ಮಾಡುತ್ತಿರುವವರಾರು ಎಂಬ ಎಲ್ಲ ಮಾಹಿತಿಯೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಇರುತ್ತದೆ. ಆದರೆ ಯಾರೂ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಿಲ್ಲ. ಏಕೆಂದರೆ ಅವರಿಗೆ ಬೇಕಾದ ‘ವ್ಯವಸ್ಥೆ’ ಆಗಿರುತ್ತದೆ’ ಎಂದು ಘನತ್ಯಾಜ್ಯ ನಿರ್ವಹಣೆ ತಜ್ಞ ರಾಮ್‌ಪ್ರಸಾದ್‌ ದೂರಿದರು.

‘ಪ್ಲಾಸ್ಟಿಕ್‌ ಅದರಲ್ಲೂ ಏಕಬಳಕೆ ಪ್ಲಾಸ್ಟಿಕ್‌ ಉತ್ಪಾದನೆಯನ್ನೇ ನಿಲ್ಲಿಸಬೇಕೆಂಬ ಕಾನೂನು 2016ರಲ್ಲಿ ಬಂದಿದ್ದರೂ ಏಳು ವರ್ಷಗಳಲ್ಲಿ ಕೆಲವೊಂದು ನೋಟಿಸ್‌ಗಳನ್ನು ಜಾರಿ ಮಾಡಿದ್ದು ಬಿಟ್ಟರೆ ಕಠಿಣ ಕ್ರಮ ಕೈಗೊಂಡಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಿಗೆ ಆಯಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ತಯಾರಿಸುತ್ತಿರುವವರ ಬಗ್ಗೆ ಮಾಹಿತಿ ಇದ್ದೇ ಇರುತ್ತದೆ. ಈ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೂ ನೋಟಿಸ್‌ ಕೊಟ್ಟಂತೆ ಮಾಡಿ ಸ್ಥಳೀಯ ಸಂಸ್ಥೆಗೆ ಅದನ್ನು ನಿರ್ಬಂಧಿಸುವ ಜವಾಬ್ದಾರಿ ವಹಿಸುತ್ತಾರೆ. ಆದರೆ ಕೊಡುವ ಒಂದು ನೋಟಿಸ್‌ನಿಂದ ಸಂಪೂರ್ಣ ನಿರ್ಬಂಧ ಸಾಧ್ಯವಾಗುವುದಿಲ್ಲ. ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಟ್ಟಡವನ್ನು ಜಪ್ತಿ ಮಾಡಿದರೆ ಪ್ಲಾಸ್ಟಿಕ್‌ ಉತ್ಪಾದನೆ ನಿಲ್ಲಿಸಬಹುದು. ಇಂತಹ ಒಂದು ಪ್ರಯತ್ನವೂ ನಡೆದಿಲ್ಲ’ ಎಂದು ಆರೋಪಿಸಿದರು.

‘ಪ್ಲಾಸ್ಟಿಕ್‌ ಉತ್ಪಾದನೆ ಮತ್ತು ಮಾರಾಟದ ಮಾಹಿತಿ ಏನಾದರೂ ಮಾಧ್ಯಮಗಳಲ್ಲಿ ಪ್ರಕಟವಾದರೆ ಅದು ಅಧಿಕಾರಿಗಳಿಗೆ ಲಾಭದಾಯಕ. ಅದನ್ನೇ ಮುಂದಿಟ್ಟುಕೊಂಡು ಹೋಗಿ ಮತ್ತಷ್ಟು ‘ವಸೂಲಿ’ ಮಾಡಿಕೊಂಡು ಸುಮ್ಮನಾಗುತ್ತಾರೆ. ಪ್ಲಾಸ್ಟಿಕ್‌ ಬಳಕೆ ಹಾಗೂ ತ್ಯಾಜ್ಯದಿಂದ ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಗಳಾಗುತ್ತಿವೆ. ಇದೆಲ್ಲದ್ದಕ್ಕೂ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ. ಇವರ ವಿರುದ್ಧ ಮೊದಲು ಕಾನೂನು ಕ್ರಮವಾದರೆ ಪ್ಲಾಸ್ಟಿಕ್‌ ಅನ್ನು ಮೂಲದಲ್ಲೇ ನಿರ್ಮೂಲನೆ ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.

ಮೂಲದಲ್ಲೇ ಪ್ಲಾಸ್ಟಿಕ್ ಉತ್ಪಾದನೆ ನಿಗ್ರಹಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣ ತೊಡೆದುಹಾಕಲು ಪರಿಸರ ಉಳಿಸಲು ಜಿಲ್ಲಾಡಳಿತ ಪೊಲೀಸ್ ಇಲಾಖೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಸಹಯೋಗದಲ್ಲಿ ಜಂಟಿ ಪ್ರಯತ್ನ ಮುಂದುವರಿಸಲು ತೀರ್ಮಾನಿಸಲಾಗಿದೆ.
–ಈಶ್ವರ ಖಂಡ್ರೆ, ಅರಣ್ಯ ಜೀವವಿಜ್ಞಾನ ಮತ್ತು ಪರಿಸರ ಸಚಿವ
ಪ್ಯಾಕೇಜಿಂಗ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ. ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್‌ ಪೊಟ್ಟಣಗಳಲ್ಲೇ ಆಹಾರ ಕೊಡುತ್ತಿದ್ದಾರೆ. ಅದನ್ನು ನಿರ್ಬಂಧಿಸಿದರೆ ಪ್ಲಾಸ್ಟಿಕ್‌ ಬಳಕೆ ತಾನಾಗಿಯೇ ಕಡಿಮೆಯಾಗುತ್ತದೆ.
–ವಿನಯ್‌ ಮಾಳಗೆ ಸಾಮಾಜಿಕ ಕಾರ್ಯಕರ್ತ ಬೀದರ್‌
ಪ್ಲಾಸ್ಟಿಕ್ ನಿಯಂತ್ರಣ ನಿಷೇಧ ಮಾಡುವುದು ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಕೆಲಸ ಎನ್ನುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾವಿಸಿದಂತಿದೆ. ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯದ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ.
-ಚಿದಾನಂದ, ಅಧ್ಯಕ್ಷ ಯುವ ಸಂಚಲನ ದೊಡ್ಡಬಳ್ಳಾಪುರ
ಟ್ರೋಲ್ ಬೋಟಿಂಗ್ ನಿಷೇಧದ ಬೇಡಿಕೆ ಇನ್ನೂ ಈಡೇರಿಲ್ಲ. ಟ್ರೋಲಿಂಗ್‌ನಿಂದಾಗಿ ಸಮುದ್ರದಲ್ಲಿ ಪ್ಲಾಸ್ಟಿಕ್‌ ಬಲೆಗಳ ತುಂಡುಗಳು ಉಳಿಯುತ್ತವೆ. ಆದರೂ ಯಾವುದೇ ಕ್ರಮ ಆಗುತ್ತಿಲ್ಲ.
–ಡೊನಾಲ್ಡ್‌ ಪಿಂಟೊ ಪರ್ಸಿನ್, ಬೋಟ್ ಮಾಲೀಕ, ಮಂಗಳೂರು
ಸರ್ಕಾರದ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ (ನೀರಿನ ಬಾಟಲಿ ಪ್ಲಾಸ್ಟಿಕ್‌ ಕವರ್‌) ಬಳಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಆ ಮೂಲಕ ಮಾದರಿಯಾಗಬೇಕು. ನಿಷೇಧಿತ ಪ್ಲಾಸ್ಟಿಕ್‌ ಉತ್ಪಾದನೆ ತಡೆಯಬೇಕು
–ಶಂಕರ ಕುಂಬಿ, ಪರಿಸರಾಸಕ್ತ, ಧಾರವಾಡ
ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆ ಚೀಲ ಕಾಗದದ ಚೀಲ ಅಡಿಕೆ ಹಾಳೆ ತಟ್ಟೆ ಲೋಟ ಮೊದಲಾದವನ್ನು ಬಳಸಲು ಆದ್ಯತೆ ನೀಡಬೇಕು. ಮೊದಲು ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು
–ಅಸ್ಲಾಂ ಜಹಾನ್‌ ಎಂ ಅಬ್ಬಿಹಾಳ್‌, ಪರಿಸರಾಸಕ್ತ, ಧಾರವಾಡ

ಇವುಗಳಿಗಿದೆ ವಿನಾಯಿತಿ * ಅರಣ್ಯ ಮತ್ತು ತೋಟಗಾರಿಕೆ ನರ್ಸರಿಗಳಲ್ಲಿ ಬಳಕೆ ಮಾಡುವ ಪ್ಲಾಸ್ಟಿಕ್‌ ಚೀಲ ಹಾಗೂ ಹಾಳೆಗಳು * ಹಾಲು ಹಾಗೂ ಹೈನು ಉತ್ಪನ್ನಗಳ ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್‌ * ವಿಶೇಷ ಆರ್ಥಿಕ ವಲಯದಲ್ಲಿ ರಫ್ತು ಮಾಡುವ ಉದ್ದೇಶದಿಂದ ತಯಾರಿಸುವ ಪ್ಲಾಸ್ಟಿಕ್‌ ವಸ್ತುಗಳು

1 ಕೋಟಿ ಟನ್‌– ಒಳಪುಟ ಟಾಫ್‌ಗೆ: ಪ್ರತಿ ವರ್ಷ ಸಾಗರದ ಒಡಲು ಸೇರುತ್ತಿರುವ ಪ್ಲಾಸ್ಟಿಕ್‌

19 ಕೋಟಿ ಟನ್‌: ಏಕ ಬಳಕೆಯ ಉದ್ದೇಶಕ್ಕೆಂದೇ ಪ್ರತಿ ವರ್ಷ ಉತ್ಪಾದಿಸಲಾಗುತ್ತಿರುವ ಪ್ಲಾಸ್ಟಿಕ್‌

10 ಲಕ್ಷ: ಪ್ಲಾಸ್ಟಿಕ್‌ ಮಾಲಿನ್ಯದಿಂದಾಗಿ ಪ್ರತಿ ವರ್ಷ ಸಾಯುತ್ತಿರುವ ಜಲಚರ ಜೀವಿಗಳು

18 ಕೆ.ಜಿ: ಜೀವಿತಾವಧಿಯಲ್ಲಿ ಮನುಷ್ಯರ ದೇಹ ಸೇರುತ್ತಿರುವ ಪ್ಲಾಸ್ಟಿಕ್‌ ಅಂಶದ ಪ್ರಮಾಣ

5.3 ಕೆ.ಜಿ: ಭಾರತದಲ್ಲಿ ಪ್ರತಿ ವ್ಯಕ್ತಿ ವಾರ್ಷಿಕವಾಗಿ ಬಳಕೆ ಮಾಡುತ್ತಿರುವ ಪ್ಲಾಸ್ಟಿಕ್‌ನ ಸರಾಸರಿ ಪ್ರಮಾಣ

20.9 ಕೆ.ಜಿ: ಜಾಗತಿಕ ಮಟ್ಟದಲ್ಲಿ ವ್ಯಕ್ತಿಯೊಬ್ಬ ವಾರ್ಷಿಕವಾಗಿ ಬಳಕೆ ಮಾಡುತ್ತಿರುವ ಪ್ಲಾಸ್ಟಿಕ್‌ನ ಸರಾಸರಿ ಪ್ರಮಾಣ

ಅಂಕಿ ಅಂಶಗಳ ಆಧಾರ: ಪ್ಲಾಸ್ಟಿಕ್‌ ಓಷಿಯನ್‌, ಸ್ವಿಟ್ಜರ್ಲೆಂಡ್‌ನ ಅರ್ಥ್‌ ಆ್ಯಕ್ಷನ್‌ ಸಂಶೋಧನಾ ಸಂಸ್ಥೆಯ ವರದಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ.

ಪೂರಕ ಮಾಹಿತಿ: ಆರ್‌.ಮಂಜುನಾಥ್‌, ವಿಕ್ರಂ ಕಾಂತಿಕೆರೆ, ಆರ್‌.ಜಿತೇಂದ್ರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.