ಮೈಸೂರು: ಬಳಸಿ ಬಿಸಾಡಿದ ಕವರ್, ತಿಂಡಿಗಳ ಖಾಲಿ ಪೊಟ್ಟಣ... ಹೀಗೆ ಮರು ಬಳಕೆ ಮಾಡಲಾಗದ ಪ್ಲಾಸ್ಟಿಕ್ ಇಲ್ಲಿ ಹೊಸ ರೂಪ ಪಡೆದು ಪಾದಚಾರಿ ರಸ್ತೆಗೆ ಹೊದಿಕೆಯಾಗುತ್ತಿದೆ. ‘ಪ್ಲಾಸ್ಟಿಕ್ ಟೈಲ್ಸ್’ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ.
ಮೈಸೂರು ಮಹಾನಗರ ಪಾಲಿಕೆಯು ಕಸದಿಂದ ರಸ ತತ್ವದ ಅಡಿ ಪ್ಲಾಸ್ಟಿಕ್ ಮರು ಬಳಕೆ ಮಾಡುತ್ತಿದ್ದು, ಅದಕ್ಕಾಗಿ ಇಪಿಆರ್ ಪ್ರಮಾಣಪತ್ರವನ್ನು ಪಡೆದಿದೆ. ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಸಂಬಂಧ ಜಾಗೃತ್ ಟೆಕ್ ಪ್ರೈ. ಲಿ. ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಸುಯೇಜ್ ಫಾರಂನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಜಾಗ ನೀಡಿದ್ದು, ನಿತ್ಯ 2 ಟನ್‌ನಷ್ಟು ಪ್ಲಾಸ್ಟಿಕ್ ಕಸವನ್ನು ಇಂಟರ್‌ಲಾಕಿಂಗ್ ಮಾದರಿ ಟೈಲ್ಸ್ ಆಗಿ ಪರಿವರ್ತಿಸಲಾಗುತ್ತಿದೆ.
ಮನೆಗಳಿಂದ ಕಸ ಸಂಗ್ರಹಣೆ ಮಾಡುವ ಸಂದರ್ಭವೇ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸಿ ಆಟೊಗಳ ಮೂಲಕ ಸುಯೇಜ್ ಫಾರಂನಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತರಲಾಗುತ್ತದೆ. ಅಲ್ಲಿ ಸಣ್ಣಸಣ್ಣ ತುಂಡುಗಳನ್ನಾಗಿ ವಿಭಜಿಸಿ 1.5 ಕೆ.ಜಿ. ಹಾಗೂ 2 ಕೆ.ಜಿ. ತೂಕದ ನೆಲಹಾಸುಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಪಾಲಿಕೆಯು ಈವರೆಗೆ 220 ಟನ್‌ನಷ್ಟು ಪ್ಲಾಸ್ಟಿಕ್ ಕಸವನ್ನು ಕಂಪನಿಗೆ ನೀಡಿದ್ದು, 90 ಟನ್ ಅನ್ನು ಟೈಲ್ಸ್ ಆಗಿ ಪರಿವರ್ತಿಸಲಾಗಿದೆ.
‘2 ಕೆ.ಜಿ. ತೂಕದ ಎಂ–60 ದರ್ಜೆಯ ಇಂಟರ್‌ಲಾಕಿಂಗ್ ಟೈಲ್ಸ್ ಒಂದರ ಉತ್ಪಾದನೆಗೆ ಸುಮಾರು ₹85 ವೆಚ್ಚ ಆಗುತ್ತಿದ್ದು, ಅದೇ ದರಕ್ಕೆ ಮಾರಾಟ ಮಾಡುತ್ತಿದ್ದೇವೆ. ಇದೇ ಗುಣಮಟ್ಟದ ಸಿಮೆಂಟ್ ಟೈಲ್ಸ್‌ನ ಬೆಲೆ ಮಾರುಕಟ್ಟೆಯಲ್ಲಿ ₹110–120 ಇದೆ. ಸಿಮೆಂಟ್ ಟೈಲ್ಸ್‌ನ ಆಯಸ್ಸು 20 ವರ್ಷ. ಆದರೆ ಈ ಟೈಲ್ಸ್ 500 ವರ್ಷಗಳವರೆಗೆ ಬಳಸಬಹುದಾಗಿದೆ. ಚೆನ್ನೈನ ಅನೇಕ ಕಾರ್ಪೊರೇಟ್ ಕಂಪನಿಗಳೂ ಕೊಂಡೊಯ್ಯುತ್ತಿವೆ. ಇದೇ ಮಾದರಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಿದ ಬ್ಲಾಕ್‌ಗಳನ್ನು ಬಳಸಿ ರಸ್ತೆಗಳನ್ನು ನಿರ್ಮಿಸಬಹುದು. ಸಿಮೆಂಟ್‌ಗೆ ಪರ್ಯಾಯವಾಗಿ ಬಳಸಬಹುದು’ ಎನ್ನುತ್ತಾರೆ ಜಾಗೃತ್ ಕಂಪನಿಯ ಮಾಲೀಕ ದಿನೇಶ್ ಬೋಪಣ್ಣ.
ಬೆಂಕಿ–ಬಿಸಿಲಿನಿಂದ ಹಾನಿಯಿಲ್ಲ: ‘ಏಕಬಳಕೆಯ ಪ್ಲಾಸ್ಟಿಕ್ ಆದರೆ ಸುಡುತ್ತದೆ. ಆದರೆ ಇಲ್ಲಿ 3 ಕೆ.ಜಿ.ಯಷ್ಟು ಪ್ಲಾಸ್ಟಿಕ್ ಅನ್ನು ಕಂಪ್ರೆಸ್ ಮಾಡಿ 2 ಕೆ.ಜಿ.ಗೆ ಇಳಿಸಲಾಗುತ್ತದೆ. ಹೀಗಾಗಿ ಏಕಾಏಕಿ ಬೆಂಕಿ ಬಿದ್ದರೂ ಟೈಲ್ಸ್ ಹೊತ್ತಿಕೊಳ್ಳುವುದಿಲ್ಲ. 120–150 ಡಿಗ್ರಿವರೆಗಿನ ಉಷ್ಣಾಂಶವನ್ನು ಇದು ತಡೆದುಕೊಳ್ಳುತ್ತದೆ. ಬಿಸಿ ಹೆಚ್ಚಿದಾಗಲೂ ದ್ರವ ರೂಪಕ್ಕೆ ಬರುವುದಿಲ್ಲ. 150–200 ಡಿಗ್ರಿ ಉಷ್ಣಾಂಶದಲ್ಲಿ ಮಾತ್ರ ಕರಗಲು ಆರಂಭಿಸುತ್ತದೆ’ ಎನ್ನುತ್ತಾರೆ ದಿನೇಶ್.
‘ಸದ್ಯ ನಗರಪಾಲಿಕೆಯು ನಮಗೆ ಕಾರ್ಖಾನೆಗೆ ಜಾಗ ಹಾಗೂ ನಿತ್ಯ 2 ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ನೀಡುತ್ತಿದೆ. ಈವರೆಗೆ 200 ಟನ್‌ಗೂ ಹೆಚ್ಚು ಕಸವನ್ನು ಟೈಲ್ಸ್ ಆಗಿ ಪರಿವರ್ತಿಸಿದ್ದು, ಇಂಗಾಲದ ಹೊರೆ ತಗ್ಗಿಸಿದ್ದೇವೆ. ಇದನ್ನೇ ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಇನ್ನಷ್ಟು ಲಾಭ ಕಂಡುಕೊಳ್ಳಬಹುದು’ ಎಂದು ಅವರು ಹೇಳುತ್ತಾರೆ.
‘ಮೈಸೂರು ನಗರ ವ್ಯಾಪ್ತಿಯಲ್ಲಿ ನಿತ್ಯ 300 ಆಟೊಗಳು ಮನೆಗಳಿಂದ ಕಸ ಸಂಗ್ರಹಿಸುತ್ತಿವೆ. ಪ್ರತಿ ಗಾಡಿಯಿಂದ ಕನಿಷ್ಠ 5 ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಅದನ್ನು ಉಪ ಉತ್ಪನ್ನವಾಗಿ ಪರಿವರ್ತಿಸಲಾಗುತ್ತಿದ್ದು, ಪರಿಸರದ ಸಂರಕ್ಷಣೆಯೂ ಆಗುತ್ತಿದೆ. ಈ ಹಿಂದೆ ಪ್ಲಾಸ್ಟಿಕ್‌ನಿಂದ ಶೀಟ್‌ಗಳ ನಿರ್ಮಾಣಕ್ಕೂ ಯೋಜಿಸಲಾಗಿತ್ತು. ವೆಚ್ಚ ಹೆಚ್ಚೆಂಬ ಕಾರಣಕ್ಕೆ ಕೈಬಿಡಲಾಯಿತು’ ಎನ್ನುತ್ತಾರೆ ಪಾಲಿಕೆಯ ಎಂಜಿನಿಯರ್ ಮಧುಕರ್.
ಶೀಘ್ರ ಪೇಟೆಂಟ್: ‘ನಾನು ಸಿಮೆಂಟ್ ಕೈಗಾರಿಕೆ ಕ್ಷೇತ್ರದಲ್ಲಿ 35 ವರ್ಷ ಅನುಭವ ಹೊಂದಿದವನು. 1990–2000ರ ದಶಕದಲ್ಲಿ ಭಾರತಕ್ಕೆ ಇಂಟರ್‌ಲಾಕಿಂಗ್ ಟೈಲ್ಸ್ ಪರಿಚಯ ಆದಾಗಿನಿಂದ ಅದರ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮ ಕಂಪನಿಯ ಇತರ ಇಬ್ಬರು ಪಾಲುದಾರರಾದ ಕೆ. ದಶರಥ್ ಹಾಗೂ ಸಿ. ದರ್ಶನ್ ಕೂಡ ಹೊಸ ಅನ್ವೇಷಣೆ ಕುರಿತು ಉತ್ಸುಕರಾದವರು. ಪರಿಸರಕ್ಕೆ ಧಕ್ಕೆ ಆಗದಂತೆ ನಿರ್ಮಾಣ ಕಾರ್ಯ ನಡೆಯಬೇಕು. ಇಂಗಾಲದ ಪ್ರಮಾಣ ಕಡಿಮೆ ಮಾಡಬೇಕು ಎನ್ನುವ ಆಶಯದೊಂದಿಗೆ ಈ ಪ್ರಯತ್ನಕ್ಕೆ ಕೈ ಹಾಕಿದೆವು’ ಎನ್ನುತ್ತಾರೆ ದಿನೇಶ್ ಬೋಪಣ್ಣ.
‘ಟೈಲ್ಸ್ ಮತ್ತಿತರ ಉತ್ಪನ್ನಗಳಿಗೆ ಬೇಕಾದ ಯಂತ್ರಗಳನ್ನು ನಾವೇ ವಿನ್ಯಾಸಗೊಳಿಸಿದ್ದೇವೆ. ಪ್ಲಾಸ್ಟಿಕ್‌ನಿಂದ ಟೈಲ್ಸ್ ಉತ್ಪಾದನೆಯ ಈ ಪ್ರಯತ್ನ ದೇಶದಲ್ಲೇ ಮೊದಲು. ಇದಕ್ಕೆ ಪೇಟೆಂಟ್ ಪಡೆಯುವ ಪ್ರಯತ್ನದಲ್ಲಿ ಇದ್ದೇವೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.