ADVERTISEMENT

ಒಳನೋಟ | ಹೊಸ ತಾಲ್ಲೂಕು; ಹೆಚ್ಚಾದ ಸಂಕಷ್ಟ

ಹಳೇ ಕೇಂದ್ರಗಳಿಗೆ ತಪ್ಪದ ಅಲೆದಾಟ; ಇನ್ನೂ ಸ್ಥಳಾಂತರವಾಗದ ಕಚೇರಿಗಳು

ಆರ್.ಜಿತೇಂದ್ರ
Published 23 ಜುಲೈ 2023, 1:04 IST
Last Updated 23 ಜುಲೈ 2023, 1:04 IST
ಶಹಾಬಾದ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಪಂಚಾಯಿತಿ ಕಚೇರಿ
ಶಹಾಬಾದ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಪಂಚಾಯಿತಿ ಕಚೇರಿ   

ಮೈಸೂರು: ‘ನಮ್ಮೂರು ದೇವರಗಡ್ಡಿಗೂ ಹುಣಸಗಿಗೂ 42 ಕಿ.ಮೀ ಅಂತರ. ಹುಣಸಗಿಯು ಹೊಸ ತಾಲ್ಲೂಕಾಗಿ ಘೋಷಣೆ ಆದಾಗ ಅಲೆದಾಟ ತಪ್ಪಿತೆಂದು ಭಾವಿಸಿದ್ದೆವು. ಆದರೆ ಇಂದಿಗೂ ಅಧಿಕಾರಿಗಳ ಸಣ್ಣದೊಂದು ಸಹಿಗೆ, ಮಕ್ಕಳ ಶಿಕ್ಷಣದ ಪ್ರಮಾಣಪತ್ರಕ್ಕೆ 95 ಕಿ.ಮೀ. ದೂರದ ಸುರಪುರಕ್ಕೆ ಅಲೆಯುವುದು ತಪ್ಪಿಲ್ಲ’

ಇದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ದೇವರಗಡ್ಡಿ ಗ್ರಾಮದ ದೇವೇಂದ್ರಪ್ಪ ಅವರ ನಿರಾಸೆಯ ನುಡಿ.

ಸುರಪುರದಿಂದ ವಿಭಜನೆಗೊಂಡು ಹುಣಸಗಿ ಪಟ್ಟಣವು ಹೊಸ ತಾಲ್ಲೂಕಾಗಿ ಐದಾರು ವರ್ಷ ಕಳೆದರೂ, ಅಲ್ಲಿ ಯಾವ ಅಧಿಕಾರಿಯೂ ಇಲ್ಲ. ಕಚೇರಿಗಳೂ ಇಲ್ಲ. ಹೀಗಾಗಿ ಜನ ಸರ್ಕಾರಿ ಸೇವೆಗಳಿಗೆ ಹಳೇ ತಾಲ್ಲೂಕು ಕೇಂದ್ರವನ್ನೇ ಆಶ್ರಯಿಸಿದ್ದಾರೆ. 

ADVERTISEMENT

ರಾಯಚೂರು ಜಿಲ್ಲೆಯ ಮಸ್ಕಿ ನೂತನ ತಾಲ್ಲೂಕು ಕೇಂದ್ರದಿಂದ ಹಿರೇಕಡಬೂರು, ಹಿಲಾಲಪೂರ ಗ್ರಾಮಗಳ ಅಂತರ ನಾಲ್ಕೈದು ಕಿ.ಮೀ. ದೂರ ಮಾತ್ರ. ಆದರೂ ಈ ಗ್ರಾಮಸ್ಥರು ತಮ್ಮ ಕೆಲಸಗಳಿಗಾಗಿ ಮೂಲ ತಾಲ್ಲೂಕು ಕೇಂದ್ರವಾದ ಮಾನ್ವಿಗೆ ಬರಬೇಕು.

ಈ ಜನ ಮಾನ್ವಿಗೆ ಹೋಗಬೇಕಾದರೆ ಮಸ್ಕಿಗೆ ಬಂದು ಅಲ್ಲಿಂದ 24 ಕಿ.ಮೀ. ದೂರದ ಸಿಂಧನೂರಿಗೆ ತೆರಳಿ, ಅಲ್ಲಿಂದ ಮತ್ತೆ 50 ಕಿ.ಮೀ. ದೂರ ಕ್ರಮಿಸಬೇಕು. ಒಟ್ಟು 75–80 ಕಿ.ಮೀ ಪ್ರಯಾಣ. ಬೆಳಿಗ್ಗೆ 10ಕ್ಕೆ ಕಚೇರಿಗಳು ತೆರೆಯುವ ಹೊತ್ತಿಗೆ ತಲುಪಬೇಕೆಂದರೆ, ಬೆಳಗಿನ ಜಾವ 6ಕ್ಕೆ ಬಸ್ ಹಿಡಿಯಬೇಕು.

ರಾಜ್ಯದಲ್ಲಿ ಒಂದು ದಶಕದಲ್ಲಿ ರಚನೆಯಾದ ಅಷ್ಟೂ ಹೊಸ ತಾಲ್ಲೂಕುಗಳಿಗೆ ಸೇರಿದ ಜನರ ಸದ್ಯದ ಪರಿಸ್ಥಿತಿ ಇದು.

ಘೋಷಣೆಯಾದ ಎಷ್ಟೋ ವರ್ಷಗಳ ಬಳಿಕ ಹೊಸ ತಾಲ್ಲೂಕಿಗೊಂದು ತಹಶೀಲ್ದಾರ್‌ ಕಚೇರಿ ಬಂದಿದೆ. ಆದರೆ ಅಧಿಕಾರಿ–ಸಿಬ್ಬಂದಿಯಿಲ್ಲ. ಕಚೇರಿ ಸ್ಥಳಾಂತರಗೊಂಡರೂ ಹಳೇ ದಾಖಲೆಗಳೆಲ್ಲ ಹಳೇ ತಾಲ್ಲೂಕಿನಲ್ಲೇ ಉಳಿದುಹೋಗಿವೆ. ಜಾತಿ–ಆದಾಯ ಪ್ರಮಾಣಪತ್ರ, ಪಹಣಿ, ಆಸ್ತಿ ನೋಂದಣಿ, ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ.. ಹೀಗೆ ಯಾವುದೇ ಸೇವೆ–ಸೌಲಭ್ಯ ಆಗಬೇಕಿದ್ದರೂ, ದಾಖಲೆ ಬೇಕಿದ್ದರೂ ಹಳೇ ತಾಲ್ಲೂಕು ಕೇಂದ್ರವೇ ಗತಿ.

ಸಾರ್ವಜನಿಕರು ಸಣ್ಣ–ಪುಟ್ಟ ಸರ್ಕಾರಿ ಕೆಲಸಕ್ಕೂ 50–60 ಕಿ.ಮೀ. ದೂರದ ತಾಲ್ಲೂಕು ಕೇಂದ್ರಗಳಿಗೆ ಅಲೆಯುವುದು ತಪ್ಪಬೇಕು. ಇದ್ದಲ್ಲಿಯೇ ಸಕಲ ಸೌಕರ್ಯ ಸಿಗಬೇಕು. ಆಡಳಿತ ವಿಕೇಂದ್ರೀಕರಣ‌ವಾಗಬೇಕೆಂಬ ಆಶಯ ಇನ್ನೂ ಈಡೇರಿಲ್ಲ.

ಹೋಬಳಿ ಕೇಂದ್ರಗಳಾಗಿದ್ದ ಪಟ್ಟಣಗಳಿಗೆ ತಾಲ್ಲೂಕಿನ ಸ್ಥಾನಮಾನ ನೀಡಿದ ಸರ್ಕಾರ ಮೂಲ ಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ತಾಳಿವೆ. ಒಂದೆರಡು ಕಚೇರಿ ಬಂದದ್ದು ಬಿಟ್ಟರೆ ಹೆಚ್ಚೇನು ಬದಲಾವಣೆಯಾ‌ಗಿಲ್ಲ. ಅರ್ಧದಷ್ಟು ಕೇಂದ್ರಗಳಿಗೆ ಈಗಲೂ ವ್ಯವಸ್ಥಿತವಾದ ತಾಲ್ಲೂಕು ಕಚೇರಿಯೇ ಇಲ್ಲ. ಕೆಲವೆಡೆ ಒಂದೆರಡು ಇಲಾಖೆಗಳಷ್ಟೇ ಸ್ಥಳಾಂತರಗೊಂಡಿವೆ.

ಘೋಷಣೆಗೆ ಆಸಕ್ತಿ, ಸೌಕರ್ಯಕ್ಕೆ ನಿರಾಸಕ್ತಿ:


ರಾಜ್ಯದ ಹಲವೆಡೆ ಜನ ಹೋರಾಟ ನಡೆಸಿದ್ದರ ಫಲವಾಗಿ ಅನೇಕ ಹೊಸ ತಾಲ್ಲೂಕುಗಳು ರಚನೆಯಾದವು. ಮತ್ತೆ ಕೆಲವೆಡೆ ರಾಜಕೀಯ ಪ್ರಭಾವದಿಂದ ರಚನೆಯಾದ ತಾಲ್ಲೂಕುಗಳೇ ಹೆಚ್ಚು. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ತಾಲ್ಲೂಕುಗಳು ರಚನೆಯಾಗಿವೆ. ಜನಪ್ರತಿನಿಧಿಗಳು ತಮ್ಮ ಮತ ಕ್ಷೇತ್ರ ಹಾಗೂ ಪ್ರಭಾವ ವಲಯಕ್ಕೆ ಸೇರಿದ ಪಟ್ಟಣಗಳಿಗೆ ತಾಲ್ಲೂಕು ಸ್ಥಾನಮಾನ ದೊರಕಿಸುವಲ್ಲಿ ಯಶಸ್ಸು ಕಂಡರೂ, ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಂಪೂರ್ಣ ಸೋತಿದ್ದಾರೆ. ಹೊಸ ತಾಲೂಕು ಘೋಷಣೆ ತನಕ ಇದ್ದ ಶ್ರಮ ಹಾಗೂ ಹೆಗ್ಗಳಿಕೆ ಪಡೆದುಕೊಳ್ಳುವಲ್ಲಿ ತೋರಿದ ಆಸಕ್ತಿಯು ಸೌಲಭ್ಯ ಕಲ್ಪಿಸುವಲ್ಲಿ ತೋರಿಸಿಲ್ಲ ಎನ್ನುವುದು ಸಾರ್ವತ್ರಿಕ ಆರೋಪವಾಗಿದೆ. ಹೊಸ ತಾಲ್ಲೂಕು ರಚನೆಗೆ ಆರಂಭವಾದ ಹೋರಾಟಗಳು ಇದೀಗ ಪೂರಕ ಸೌಲಭ್ಯ ನೀಡಿ ಎಂದು ಮುಂದುವರೆದಿದೆ.

ಹೊಸ ತಾಲ್ಲೂಕುಗಳ ರಚನೆಯಲ್ಲಿ ಜಗದೀಶ ಶೆಟ್ಟರ್ ಪಾಲು ದೊಡ್ಡದಿದೆ. 2013ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ 43 ಪಟ್ಟಣಗಳಿಗೆ ನೂತನ ತಾಲ್ಲೂಕಿನ ಸ್ಥಾನಮಾನ ನೀಡಿದರು. ಆದರೆ ಅನುದಾನದ ಕೊರತೆಯಿಂದ ಕಾರ್ಯರೂಪಕ್ಕೆ ಬರಲಿಲ್ಲ. 2017-18ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ 10 ತಾಲ್ಲೂಕುಗಳನ್ನು ಸೇರಿಸಿ ಒಟ್ಟು 53 ತಾಲ್ಲೂಕುಗಳನ್ನು ಹೊಸ ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಿಸಿದ್ದರು.

2019ರಲ್ಲಿ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಮತ್ತೆ 12 ಹೊಸ ತಾಲ್ಲೂಕುಗಳು ರಚನೆಯಾದವು. ಹತ್ತಾರು ಶಾಸಕರು ತಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಹೊಸ ತಾಲ್ಲೂಕು ರಚನೆ ಮಾಡಿಸಿಕೊಂಡು ಅದರ ಶ್ರೇಯ ಪಡೆದರು.

ತಾವು ಪ್ರತಿನಿಧಿಸುತ್ತಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿಗೆ ಕುಮಾರಸ್ವಾಮಿ ಹೊಸ ತಾಲ್ಲೂಕಿನ ಸ್ಥಾನಮಾನ ನೀಡಿದರು. ಆಗಷ್ಟೇ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿದ್ದ ಹಾರೋಹಳ್ಳಿಯಲ್ಲಿ ಹೊಸ ತಾಲ್ಲೂಕು ಕಾರ್ಯರೂಪಕ್ಕೆ ಬರಲು ಐದು ವರ್ಷವೇ ಹಿಡಿದಿದೆ. ಈಗಲೂ ಅಲ್ಲಿ ತಹಶೀಲ್ದಾರ್‌ ಕಚೇರಿಯಷ್ಟೇ ಇದೆ.

ರಾಜ್ಯದಲ್ಲೇ ಅತಿ ಹೆಚ್ಚು ಹೊಸ ತಾಲ್ಲೂಕುಗಳು ವಿಜಯಪುರ ಜಿಲ್ಲೆಯಲ್ಲಿ ರಚನೆಯಾಗಿವೆ. ಜಿಲ್ಲೆಯ ಕೊಲ್ಹಾರ, ನಿಡಗುಂದಿ, ಬಬಲೇಶ್ವರ, ತಿಕೋಟಾ, ಚಡಚಣ, ತಾಳಿಕೋಟೆ ಮತ್ತು ದೇವರಹಿಪ್ಪರಗಿಯನ್ನು ಹೊಸ ತಾಲ್ಲೂಕೆಂದು 2013ರಲ್ಲಿ ಶೆಟ್ಟರ್ ಘೋಷಿಸಿದ್ದರು. ಆದರೆ ಅವು ಅಸ್ತಿತ್ವಕ್ಕೆ ಬಂದಿದ್ದು ಮಾತ್ರ 2018ರಲ್ಲಿ. ಅವುಗಳ ಸಾಲಿಗೆ 2019ರಲ್ಲಿ ಆಲಮೇಲ ಹೊಸ ತಾಲ್ಲೂಕು ಕೇಂದ್ರವಾಗಿ ಸೇರಿಕೊಂಡಿತು. ಈ ಎಂಟೂ ತಾಲ್ಲೂಕಿನಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ.

ಗಡಿ ಗುರುತು ಸ್ಪಷ್ಟವಾಗಿಲ್ಲ:


ಬಾಗಲಕೋಟೆ ಜಿಲ್ಲೆಯ ತೇರದಾಳ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕು ರಚನೆಯಾಗಿ ಹಲವಾರು ವರ್ಷಗಳಾಗಿದ್ದರೂ ಗಡಿ ನಿಗದಿಯಾಗಿಲ್ಲ. ಅದಕ್ಕಾಗಿ ಅಲ್ಲಿ ಈಗಲೂ ಹೋರಾಟ ಮುಂದುವರೆದಿದೆ.

ದಾಂಡೇಲಿಯಲ್ಲಿ ಐದು ವರ್ಷವಾದರೂ ತಹಶೀಲ್ದಾರ್ ಕಚೇರಿಯು ನಾಡಕಚೇರಿಯ ಕಟ್ಟಡದಲ್ಲಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಯು ನಗರಸಭೆ ಕಚೇರಿಯ ಕೊಠಡಿಯೊಂದರಲ್ಲಿ ನಡೆಯುತ್ತಿದೆ. ಉಳಿದ ಇಲಾಖೆಗಳಿಗೆ ಸ್ವಂತ ಕಚೇರಿಗಳಿಲ್ಲ. ತಾಲ್ಲೂಕಿನ ಗಡಿ ಗುರುತು ಪ್ರಕ್ರಿಯೆಯೂ ಖಚಿತವಾಗದೆ, ಗಡಿಭಾಗದ ಜನ ಸೌಲಭ್ಯಗಳಿಗಾಗಿ ಯಾವ ತಾಲ್ಲೂಕಿನಲ್ಲಿ ಅರ್ಜಿ ಸಲ್ಲಿಸಬೇಕೆಂಬ ಗೊಂದಲದಲ್ಲಿದ್ದಾರೆ.

ಅನುದಾನದ ಕೊರತೆ–ಬಾಡಿಗೆ ಕಟ್ಟಡವೇ ಗತಿ:


ಹೊಸ ತಾಲ್ಲೂಕುಗಳ ಅಭಿವೃದ್ಧಿಗೆ ಅನುದಾನ ನೀಡದ ಕಾರಣಕ್ಕೆ ಆಡಳಿತ ಭವನ, ಕಚೇರಿಗಳು ನಿರ್ಮಾಣವಾಗಿಲ್ಲ. ಬಹುತೇಕ ಕಡೆ ಜಾಗ ಗುರುತಿಸಿಕೊಂಡು ಅನುದಾನಕ್ಕಾಗಿ ಕಾಯಲಾಗುತ್ತಿದೆ. ಸದ್ಯ ಪಾಳು ಬಿದ್ದ ಕಟ್ಟಡಗಳನ್ನು ನವೀಕರಿಸಿ ಅವುಗಳಿಗೆ ತಹಶೀಲ್ದಾರ್‌ ಕಚೇರಿ ಎಂಬ ಬೋರ್ಡು ತೂಗು ಹಾಕಲಾಗಿದೆ. ಹೊಸದಾಗಿ ಆರಂಭವಾಗಿರುವ ಕಚೇರಿಗಳು ವಿವಿಧ ಸರ್ಕಾರಿ ಕಟ್ಟಡ ಹಾಗೂ ಖಾಸಗಿ ಕಟ್ಟಡಗಳಲ್ಲಿ ಎಲ್ಲೆಂದರಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದಿಕ್ಕಿಗೊಂದು ಕಚೇರಿಗಳಿದ್ದು, ಎಲ್ಲಿವೆ ಎಂಬುದು ಸ್ಥಳೀಯರಿಗೂ ಸರಿಯಾಗಿ ಗೊತ್ತಿಲ್ಲ.

ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕು ಅಭಿವೃದ್ಧಿಗೆ ಒಟ್ಟು ₹109 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಆದರೆ ನಯಾಪೈಸೆ ಬಿಡುಗಡೆಯಾಗಿಲ್ಲ. ಅಲ್ಲಿ ತಹಶೀಲ್ದಾರ್ ಕಚೇರಿ ಮಾತ್ರ ಬಂದಿದೆ. ಉಳಿದವು ಕನಕಪುರದಲ್ಲಿಯೇ ಉಳಿದಿವೆ. ಬಹುತೇಕ ಕಡೆಗಳಲ್ಲಿ 2–3 ಕಚೇರಿಗಳಷ್ಟೇ ಸ್ಥಳಾಂತರವಾಗಿವೆ. ಇನ್ನೂ 35–40 ಇಲಾಖೆಗಳು ಸ್ಥಳಾಂತರವಾಗಬೇಕು.

ಗದಗ ಜಿಲ್ಲೆಯ ಗಜೇಂಡ್ರಗಡ ಪಟ್ಟಣದ ಹೊರವಲಯದ ಕಾಲಕಾಲೇಶ್ವರ ರಸ್ತೆಯಲ್ಲಿರುವ ಗುಡ್ಡದ ಕೆಳಗಿನ 36 ಎಕರೆ ಪ್ರದೇಶದಲ್ಲಿ ಮಿನಿ ವಿಧಾನಸೌಧ, ಕೋರ್ಟ್ ಸೇರಿದಂತೆ ತಾಲ್ಲೂಕು ಕೇಂದ್ರದ ಎಲ್ಲ ಕಚೇರಿಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಆದರೆ ಭೌತಿಕವಾಗಿ ಯಾವುದೇ ಪ್ರಗತಿ ಆಗಿಲ್ಲ.

ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಕವಳಿಕುಪ್ಪಿಯಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ನೀರಾವರಿ ಇಲಾಖೆಯ ಕಟ್ಟಡದಲ್ಲಿಯೇ ತಹಶೀಲ್ದಾರ್‌ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿದೆ. ನೌಕರರ ಸುಮಾರು 15 ವಸತಿ ಕಟ್ಟಡಗಳಲ್ಲಿ ಉಪನೋಂದಣಿ ಕಚೇರಿ, ಶಿಶು ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಅರಣ್ಯ ಇಲಾಖೆ.. ಹೀಗೆ ಹಲವಾರು ತಾಲ್ಲೂಕು ಮಟ್ಟದ ಕಚೇರಿಗಳ ನಾಮಫಲಕಗಳನ್ನು ಮಾತ್ರ ತೂಗುಹಾಕಲಾಗಿದೆ. ಆದರೆ ಯಾವುದೂ ಕಾರ್ಯಾರಂಭ ಮಾಡಿಲ್ಲ.

ಏನೇನು ಬೇಕು?:


65 ಹೊಸ ತಾಲ್ಲೂಕು ಕೇಂದ್ರಗಳ ಪೈಕಿ ಸದ್ಯ 30 ಕೇಂದ್ರಗಳಲ್ಲಿ ಹೊಸ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಚಾಲನೆ ದೊರೆತಿರುವುದಾಗಿ ಸರ್ಕಾರದ ದಾಖಲೆಗಳು ಹೇಳುತ್ತವೆ. ಆದರೆ ಬೆರಳೆಣಿಕೆಯಷ್ಟು ಕಡೆ ಮಾತ್ರ ಕಾಮಗಾರಿಗಳು ಮುಗಿದಿವೆ.

ಜನರಿಗೆ ಮುಖ್ಯವಾಗಿ ಬೇಕಾದ ಕಂದಾಯ, ಕೃಷಿ, ತೋಟಗಾರಿಕೆ, ಆಹಾರ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆಯಂತಹ ಅತ್ಯವಶ್ಯ ಸೇವೆಗಳ ಇಲಾಖೆಗಳನ್ನಾದರೂ ಆದ್ಯತೆಯ ಮೇರೆಗೆ ಹೊಸ ತಾಲ್ಲೂಕುಗಳಿಗೆ ವರ್ಗಾಯಿಸಬೇಕು. ಸುಸಜ್ಜಿತವಾದ ತಾಲ್ಲೂಕು ಆಸ್ಪತ್ರೆ, ನ್ಯಾಯಾಲಯ, ಸಂಚಾರ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆಯಂತಹ ಮೂಲಸೌಲಭ್ಯಗಳು ತುರ್ತಾಗಿ ಬೇಕು. ‌

ಬೆಳೆದು ನಿಂತಿರುವ ಪಟ್ಟಣಗಳ ಹೃದಯ ಭಾಗದಲ್ಲಿ, ಜನರಿಗೆ ಅನುಕೂಲವಾಗುವಂಥ ಕಡೆಗಳಲ್ಲಿ ಕಚೇರಿ ಸ್ಥಾಪನೆಗೆ ಜಾಗಗಳ ಕೊರತೆ ಇದೆ. ಹಲವೆಡೆ ಹೊಸ ತಾಲ್ಲೂಕು ಕೇಂದ್ರಗಳ ಅಭಿವೃದ್ಧಿಯ ನೀಲನಕ್ಷೆಯೇ ಸಿದ್ಧವಾಗಿಲ್ಲ. ಕಚೇರಿಗಳನ್ನು ಎಲ್ಲಿ ನಿರ್ಮಿಸಬೇಕು? ಎಷ್ಟೆಲ್ಲ ಅನುದಾನ ಬೇಕೆಂಬ ಅಂದಾಜು ಆಗಬೇಕಿದೆ.

ಅಧಿಕಾರಿ–ಸಿಬ್ಬಂದಿ ಕೊರತೆ:

ಹೊಸ ತಾಲ್ಲೂಕುಗಳಿಗೆ ಸರ್ಕಾರ ತಹಶೀಲ್ದಾರ್‌ಗಳನ್ನಷ್ಟೇ ನೇಮಿಸಿದೆ. ಕೆಲವೆಡೆ ಹಳೇ ತಾಲ್ಲೂಕಿನ ತಹಶೀಲ್ದಾರರೇ ಎರಡೂ ಕಡೆ ಉಸ್ತುವಾರಿ ಇದ್ದಾರೆ. ಪ್ರತಿ ಇಲಾಖೆಗೆ ಬೇಕಾದ ಅಧಿಕಾರಿ–ಸಿಬ್ಬಂದಿ ನಿಯೋಜನೆಯೇ ಆಗಿಲ್ಲ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕು ಕೇಂದ್ರವು ಇದುವರೆಗೆ 9 ತಹಶೀಲ್ದಾರ್‌ಗಳನ್ನು ಕಂಡಿದೆ. ಅವರಲ್ಲಿ ಹೆಚ್ಚಿನವರು ದಾರ್ಶನಿಕರ ಜಯಂತಿಗಳ ಆಚರಣೆಗೆ ಸೀಮಿತರಾಗಿದ್ದಾರೆ. ತಾಲ್ಲೂಕು ಆಡಳಿತ ನಡೆಸಲು ಬೇಕಾದ ಅಧಿಕಾರಿ, ಸಿಬ್ಬಂದಿಯೇ ಇಲ್ಲ. ಎಲ್ಲಿಯೂ ಕೃಷಿ–ತೋಟಗಾರಿಕೆ, ಬಿಇಒ ಕಚೇರಿಗಳು ತೆರೆದಿಲ್ಲ.

‘ಈಗಿರುವ ತಾಲ್ಲೂಕು ಕೇಂದ್ರಗಳಲ್ಲಿಯೇ ಎಲ್ಲ ಇಲಾಖೆಗಳ‌ಲ್ಲೂ ಶೇ 30–40 ರಷ್ಟು ಸಿಬ್ಬಂದಿ ಕೊರತೆ ಇದೆ. ಒಂದೇ ಅಧಿಕಾರಿ ಎರಡೆರಡು ಕಡೆ ಉಸ್ತುವಾರಿ ಇದ್ದಾರೆ. ಗುತ್ತಿಗೆ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದೇವೆ.  ಹೊಸ ತಾಲ್ಲೂಕುಗಳಿಗೆ ಅಗತ್ಯವಿರುವಷ್ಟು ನೌಕರರು ನಮ್ಮಲ್ಲಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

‘ನಮ್ಮದೂ ಸೇರಿ ಬಹುತೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಹೊಸ ತಾಲ್ಲೂಕಿಗೆ ಇಲ್ಲಿಂದಲೇ ಕಳುಹಿಸಿದರೆ, ಇಲ್ಲಿನ ಕೆಲಸ ನಿಂತು ಬಿಡುತ್ತವೆ. ಹೊಸ ಸಿಬ್ಬಂದಿ ನೇಮಕವಾಗುವವರೆಗೆ ಹೊಸ ತಾಲ್ಲೂಕಿನಲ್ಲಿ ಕಚೇರಿ ಆರಂಭ ಕಷ್ಟ’ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು.

ಕೆಲವೆಡೆ ಅಭಿವೃದ್ಧಿ:

ಬೆರಳೆಣಿಕೆಯ ಹೊಸ ತಾಲ್ಲೂಕುಗಳು ಮಾತ್ರ ಆಡಳಿತಾತ್ಮಕವಾಗಿ ಅಭಿವೃದ್ಧಿ ಕಾಣುತ್ತಿವೆ. ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಹೊಸ ಮಿನಿ ವಿಧಾನಸೌಧ ತಲೆ ಎತ್ತಿದ್ದು, ಹತ್ತಾರು ಕಚೇರಿಗಳು ಸ್ಥಳಾಂತರಗೊಂಡಿವೆ. ಹೊಸ ಆಸ್ಪತ್ರೆ ಸಹ ನಿರ್ಮಾಣ ಆಗಿದೆ.

ನೂತನ ರಟ್ಟೀಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ದ್ವಿಪಥ ರಸ್ತೆ ನಿರ್ಮಾಣ, ಎಲ್ಲ ಗ್ರಾಮಗಳಲ್ಲಿ ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ಕುಮದ್ವತಿ ನದಿಗೆ ನಾಲ್ಕು ಕಡೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, ಅಗ್ನಿಶಾಮಕ ದಳ ಕಚೇರಿ, ನೂತನ ಕಂದಾಯ ಭವನ, ಸರ್ಕಾರಿ ಪಿ.ಯು. ಕಾಲೇಜು ಸ್ಥಾಪನೆ, ಕೋಲ್ಡ್ ಸ್ಟೋರೇಜ್ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಕಚೇರಿ ಸಂಕೀರ್ಣ ನಿರ್ಮಾಣ ಪೂರ್ಣಗೊಂಡಿದ್ದು, ಕಚೇರಿಗಳು ಕೆಲಸ ಶುರು ಮಾಡಿವೆ. ಕೋಲಾರ ಜಿಲ್ಲೆಯಲ್ಲಿ, ಆರು ವರ್ಷದ ಹಿಂದೆ ಬಂಗಾರಪೇಟೆಯಿಂದ ಬೇರ್ಪಟ್ಟು ಹೊಸ ತಾಲ್ಲೂಕಾದ ಕೆಜಿಎಫ್‌ನಲ್ಲಿ ತಾಲ್ಲೂಕು ಆಡಳಿತ ಸೌಧ, ಪೊಲೀಸ್ ಕಚೇರಿ, ಆಸ್ಪತ್ರೆ ನಿರ್ಮಾಣವಾಗಿವೆ. ಈ ಹಿಂದೆ ಇದು ಪ್ರತ್ಯೇಕ ಪೊಲೀಸ್ ಜಿಲ್ಲೆಯಾಗಿತ್ತು. ಹೀಗಾಗಿ ಇಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರವೂ ಇದೆ.

ಒಂದೆರಡು ಕಚೇರಿ ಬಂದದ್ದು ಬಿಟ್ಟರೆ ಹೊಸ ತಾಲ್ಲೂಕುಗಳಲ್ಲಿ ಬದಲಾವಣೆಯಾಗಿಲ್ಲ. ಜನ ಹಳೇ ತಾಲ್ಲೂಕು ಕೇಂದ್ರಕ್ಕೆ ಅಲೆಯುತ್ತಿದ್ದಾರೆ.
- ಡಿ.ಬಿ. ಗಂಗಪ್ಪ, ನ್ಯಾಮತಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ದಾವಣಗೆರೆ


ಇನ್ನಷ್ಟು ಹೊಸ ತಾಲ್ಲೂಕಿಗೆ ಹೋರಾಟ:

ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಸಣ್ಣ ಕಟ್ಟಡದಲ್ಲಿರುವ ತಹಶೀಲ್ದಾರ್ ಕಚೇರಿ

ಹೊಸ ತಾಲ್ಲೂಕುಗಳಿಗೆ ಮೂಲ ಸೌಕರ್ಯದ ಕೊರತೆ ಒಂದೆಡೆಯಾದರೆ, ಇನ್ನಷ್ಟು ಹೊಸ ತಾಲ್ಲೂಕುಗಳ ರಚನೆಗೆ ಜನರಿಂದ ಒತ್ತಾಯ ಕೇಳಿಬರುತ್ತಿದೆ. ಕನಕಪುರ ತಾಲ್ಲೂಕಿನ ಸಾತನೂರು, ಕೊಪ್ಪಳ ಜಿಲ್ಲೆಯ ಹನುಮಸಾಗರ.... ಹೀಗೆ ವಿವಿಧೆಡೆ ತಾಲ್ಲೂಕು ರಚನೆಗೆ ಒತ್ತಾಯಿಸಿ ಹೋರಾಟ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ವರ್ಷದಿಂದ ನಿರಂತರ ಹೋರಾಟ ನಡೆದಿದೆ. ಹಾಸನ ಜಿಲ್ಲೆಯ ಶಾಂತಿಗ್ರಾಮವನ್ನು ಹೊಸ ತಾಲ್ಲೂಕಾಗಿ ಸರ್ಕಾರ ಘೋಷಣೆ ಮಾಡಿದೆಯಾದರೂ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಅಲ್ಲಿಯೂ ಹೋರಾಟದ ಕಿಚ್ಚು ಹೊತ್ತಿಕೊಂಡಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕು ತಹಶೀಲ್ದಾರ್ ಕಚೇರಿ
ಈಗ ಮಾಡಿರುವ ತಾಲ್ಲೂಕುಗಳಿಗೆ ಮೂಲ ಸೌಕರ್ಯಗಳು ಇಲ್ಲ. ಜನ ಬೇಡಿಕೆ ಇಡುತ್ತಾರೆ ಎಂದು ತಾಲ್ಲೂಕು ಘೋಷಣೆ ಮಾಡುತ್ತಾ ಬಂದಿದ್ದೇವೆ.  ಆದರೆ ಯಾವುದೇ ಹೊಸ ತಾಲ್ಲೂಕುಗಳಿಗೂ ಮೂಲಸೌಕರ್ಯ ನೀಡಲು ಸಾಧ್ಯವಾಗಿಲ್ಲ. ಹೋಬಳಿಗಳನ್ನೂ ತಾಲ್ಲೂಕು ಮಾಡಿ ಎಂಬ ಬೇಡಿಕೆ ಬಂದರೆ ಏನು ಮಾಡಲು ಸಾಧ್ಯ? ಜನರ ಒತ್ತಡಕ್ಕೆ ಮಣಿಯದೇ ವೈಜ್ಞಾನಿಕವಾಗಿ ಮಾಡಿದರೆ ಪರವಾಗಿಲ್ಲ. ಭಾವನಾತ್ಮಕ ಕಾರಣಗಳಿಗೆ ಮಾಡಿರುವುದರಿಂದಲೇ ಸಮಸ್ಯೆ ಆಗಿದೆ. ಮುಂದೆ ಅಗತ್ಯತೆ ಆಧಾರದ ಮೇಲೆ ರಚಿಸುವುದು ಸೂಕ್ತ.
- ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಕೊರತೆಗಳ ನಡುವೆ ನಲುಗಿರುವ ಹೊಸ ತಾಲ್ಲೂಕುಗಳಿಗೆ ಸರಿಯಾಗಿ ಜೀವ ತುಂಬಬೇಕಾದ ಸವಾಲು ಹೊಸ ಸರ್ಕಾರದ ಮುಂದಿದೆ. ಹೊಸ ತಾಲ್ಲೂಕುಗಳಿಗಾಗಿ ನಡೆದಿರುವ ಹೋರಾಟವೂ ‌ಈ ಸವಾಲಿನ ಮೇಲೆ ಭಾರ ಹೊರಿಸಿದಂತಾಗಿದೆ.

ನಾಮಫಲಕಕ್ಕೆ ಸೀಮಿತಗೊಂಡ ಕೊಟ್ಟೂರು ತಾಲ್ಲೂಕು ಕೇಂದ್ರ
ಶಾಸಕರು ಮತ್ತು ಜನಪ್ರತಿನಿಧಿಗಳ ಒತ್ತಡದ ಕಾರಣ ಹೊಸ ತಾಲ್ಲೂಕುಗಳನ್ನು ಮಾಡಲಾಗಿದೆ. ತಾಲ್ಲೂಕು ಎಂದರೆ ತಹಶೀಲ್ದಾರ್‌ ನೇಮಕ ಮಾಡಿದರೆ ಮುಗಿಯುವುದಿಲ್ಲ. ತಾಲ್ಲೂಕಿಗೆ ಎಲ್ಲ ಇಲಾಖೆಗಳ ಕಚೇರಿಗಳೂ ಬರಬೇಕು.  ಎಲ್ಲಕ್ಕಿಂತ ಮುಖ್ಯವಾಗಿ ಆಡಳಿತ ಸೌಧ ನಿರ್ಮಾಣ ಆಗಬೇಕು. ಬಹುಪಾಲು ಹೊಸ ತಾಲ್ಲೂಕುಗಳಲ್ಲಿ ಆಡಳಿತಸೌಧಗಳು ಬಂದಿಲ್ಲ. ಇದರಿಂದ ಸಮಸ್ಯೆ ಆಗಿದೆ. ನಾನು ಕಂದಾಯ ಸಚಿವನಾಗಿದ್ದಾಗ 40 ಹೊಸ ಆಡಳಿತ ಸೌಧಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಆ ಕಡತ ಬಾಕಿ ಇದೆ. ಹಣಕಾಸು ಇಲಾಖೆ ಎಲ್ಲದಕ್ಕೂ ಕತ್ತರಿ ಹಾಕುತ್ತದೆ. ಇದರಿಂದ ಸಮಸ್ಯೆ ಆಗಿದೆ.
- ಆರ್.ಅಶೋಕ, ಮಾಜಿ ಕಂದಾಯ ಸಚಿವ
ವಿದ್ಯಾರ್ಥಿಗಳು ಬಿಇಒ ಕಚೇರಿಗೆ ಹೋಗಲು ಸುಮಾರು 50ರಿಂದ 70 ಕಿಮೀ ಪ್ರಯಾಣಿಸಬೇಕು. ಜಿಲ್ಲೆಯಲ್ಲಿ ಮೂರು ಹೊಸ ತಾಲ್ಲೂಕು ಮಾಡಿದ್ದಾದರೂ ಏಕೆ?
-ಬಸವರಾಜ ಚನ್ನೂರು, ಯಾದಗಿರಿ
ಐದು ವರ್ಷದ ಹೋರಾಟದಿಂದ ಸಿರವಾರ ತಾಲ್ಲೂಕಾಯಿತು. ಕೆಲ ಕಚೇರಿಗಳ ತೆರೆದು ನಾಮಫಲಕ ಹಾಕಿದ್ದು ಬಿಟ್ಟರೆ ಅಧಿಕಾರಿ ಸಿಬ್ಬಂದಿ ಇಲ್ಲ.
–ಜೆ. ದೇವರಾಜಗೌಡ, ಅಧ್ಯಕ್ಷ ಸಿರವಾರ ತಾಲ್ಲೂಕು ಹೋರಾಟ ಸಮಿತಿ ರಾಯಚೂರು
ಹೊಸ ತಾಲ್ಲೂಕು ರಚನೆಗೆ ದಶಕಗಳ ಕಾಲ ಹೋರಾಡಬೇಕಾಯಿತು. ಸೌಲಭ್ಯಗಳನ್ನು ಪಡೆಯಲು ಮತ್ತೆ ಹೋರಾಡಬೇಕು.
– ಭುಜಬಲಿ ಕೆಂಗಾಲಿ, ತೇರದಾಳ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಬಾಗಲಕೋಟೆ
ಚೇಳೂರು ತಾಲ್ಲೂಕಾದರೂ ಹೋಬಳಿಯ ಚಹರೆ ಬದಲಾಗಲಿಲ್ಲ. ನಿರ್ಲಕ್ಷ್ಯ ಮುಂದುವರಿದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ.
– ರಾಧಾಕೃಷ್ಣ, ಚೇಳೂರು ತಾಲ್ಲೂಕು ಹೋರಾಟ ಸಮಿತಿ ಮುಖಂಡ ಚಿಕ್ಕಬಳ್ಳಾಪುರ

ಎಲ್ಲೆಲ್ಲಿ ಹೊಸ ತಾಲ್ಲೂಕು?

ಜಿಲ್ಲೆ: ಹೊಸ ತಾಲ್ಲೂಕುಗಳು

ವಿಜಯಪುರ (8): ಕೊಲ್ಹಾರ, ನಿಡಗುಂದಿ, ಬಬಲೇಶ್ವರ, ತಿಕೋಟಾ, ಚಡಚಣ, ತಾಳಿಕೋಟೆ, ದೇವರಹಿಪ್ಪರಗಿ, ಆಲಮೇಲ

ಬಾಗಲಕೋಟೆ (5): ಇಳಕಲ್‌, ಗುಳೇದಗುಡ್ಡ, ತೇರದಾಳ, ರಬಕವಿ, ಬನಹಟ್ಟಿ

ಬೆಳಗಾವಿ (5): ಕಿತ್ತೂರು, ಮೂಡಲಗಿ, ಕಾಗವಾಡ, ನಿಪ್ಪಾಣಿ, ಯರಗಟ್ಟಿ

ಉತ್ತರ ಕನ್ನಡ (1): ದಾಂಡೇಲಿ

ಗದಗ (2): ಲಕ್ಷ್ಮೇಶ್ವರ, ಗಜೇಂದ್ರಗಡ

ರಾಮನಗರ (1): ಹಾರೋಹಳ್ಳಿ

ಹಾವೇರಿ (1): ರಟ್ಟೀಹಳ್ಳಿ

ವಿಜಯನಗರ (1): ಕೊಟ್ಟೂರು

ದಾವಣಗೆರೆ (1): ನ್ಯಾಮತಿ

ಚಿಕ್ಕಬಳ್ಳಾಪುರ (2): ಮಂಚೇನಹಳ್ಳಿ, ಚೇಳೂರು

ಮೈಸೂರು (2): ಸರಗೂರು, ಸಾಲಿಗ್ರಾಮ

ಕೋಲಾರ (1): ಕೆಜಿಎಫ್‌

ದಕ್ಷಿಣ ಕನ್ನಡ (4): ಮೂಲ್ಕಿ, ಮೂಡುಬಿದಿರೆ, ಕಡಬ ಹಾಗೂ ಉಳ್ಳಾಲ

ಕೊಡಗು (2): ಕುಶಾಲನಗರ, ಪೊನ್ನಂಪೇಟೆ

ಚಾಮರಾಜನಗರ (1): ಹನೂರು

ಚಿಕ್ಕಮಗಳೂರು (2): ಅಜ್ಜಂಪುರ, ಕಳಸ

ಕೊಪ್ಪಳ (3): ಕನಕಗಿರಿ, ಕಾರಟಗಿ, ಕುಕನೂರ

ಕಲಬುರಗಿ (4): ಶಹಾಬಾದ್, ಕಮಲಾಪುರ, ಕಾಳಗಿ, ಯಡ್ರಾಮಿ

ಧಾರವಾಡ (3): ಅಳ್ನಾವರ, ಅಣ್ಣಿಗೇರಿ, ಹುಬ್ಬಳ್ಳಿ ಗ್ರಾಮೀಣ

ಯಾದಗಿರಿ (3): ಗುರುಮಠಕಲ್‌, ಹುಣಸಗಿ, ವಡಗೇರಾ

ರಾಯಚೂರು (2): ಸಿರವಾರ, ಮಸ್ಕಿ

ಬೀದರ್‌ (3): ಕಮಲನಗರ, ಚಿಟಗುಪ್ಪ, ಹುಲಸೂರ

ಉಡುಪಿ(3): ಬ್ರಹ್ಮಾವರ, ಕಾಪು, ಬೈಂದೂರು

ಬಳ್ಳಾರಿ (2): ಕುರುಗೋಡು ಕಂಪ್ಲಿ

ಬೆಂಗಳೂರು ನಗರ (1): ಯಲಹಂಕ

ಹಾಸನ (1): ಶಾಂತಿಗ್ರಾಮ

ಬೇಸತ್ತ ಜನರಿಂದಲೇ ಸೌಲಭ್ಯ!
ಕೊಡಗು ಜಿಲ್ಲೆಯ ಪೊನ್ನಂಪೇಟೆ ನೂತನ ತಾಲ್ಲೂಕಾಗಿ ನಾಲ್ಕು ವರ್ಷವಾದರೂ ತಹಶೀಲ್ದಾರ್‌ ಮೂವರು ಕ್ಲರ್ಕ್‌ಗಳನ್ನು ಬಿಟ್ಟರೆ ಬೇರೆ ಸಿಬ್ಬಂದಿ ಇಲ್ಲ. ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗೆ ಸೌಕರ್ಯವಿಲ್ಲದಿರುವುದನ್ನು ಕಂಡು ಬೇಸತ್ತು ಸ್ಥಳೀಯ ಹಿರಿಯ ನಾಗರಿಕರ ವೇದಿಕೆ ಪ್ರಮುಖರೇ ₹ 2 ಲಕ್ಷ ವೆಚ್ಚದಲ್ಲಿ ಟೇಬಲ್‌ ಕಂಪ್ಯೂಟರ್‌ ಹಾಗೂ ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ.
ಸಿ.ಎಂ. ತವರಿನಲ್ಲೂ ನಿರ್ಲಕ್ಷ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನ ಸರಗೂರು ಹಾಗೂ ಸಾಲಿಗ್ರಾಮ ತಾಲ್ಲೂಕಿನಲ್ಲೂ ಜನರಿಗೆ ಹೆಚ್ಚೇನು ಪ್ರಯೋಜನವಾಗಿಲ್ಲ. ಸಾಲಿಗ್ರಾಮದಲ್ಲಿ ಆಡಳಿತ ಸೌಧಕ್ಕಾಗಿ ನೀರಾವರಿ ಇಲಾಖೆಯ 1 ಎಕರೆ 10 ಗುಂಟೆ ಜಾಗ ಗುರುತಿಸಿದ್ದು ನಿವೇಶನದ ಮೌಲ್ಯ ₹98 ಲಕ್ಷವನ್ನು ಕಂದಾಯ ಇಲಾಖೆ ಪಾವತಿಸಿದರಷ್ಟೇ ಜಾಗ ನೋಂದಣಿ ಮತ್ತು ಹಸ್ತಾಂತರ ಸಾಧ್ಯ. ಹೀಗಾಗಿ ಇಂದಿಗೂ ಸರಗೂರಿನ ಕಾಂಡಂಚಿನ ಗ್ರಾಮಗಳ ಜನ ಹಳೇ ತಾಲ್ಲೂಕು ಎಚ್.ಡಿ. ಕೋಟೆಗೆ ಅಲೆಯುತ್ತಿದ್ದಾರೆ. ಸಾಲಿಗ್ರಾಮದ ನಾಡಕಚೇರಿಯಲ್ಲಿಯೇ ತಹಶೀಲ್ದಾರ್‌ಗೆ ತಾತ್ಕಾಲಿಕವಾಗಿ ಜಾಗ ನೀಡಲಾಗಿದೆ. ಪೊಲೀಸ್‌ ಠಾಣೆ ಹಿಂಭಾಗ ಆಡಳಿತ ಸೌಧಕ್ಕೆ ಜಾಗ ಗುರುತಿಸಿದ್ದು ಪ್ರಸ್ತಾವ ಸಲ್ಲಿಕೆ ಆಗಿದೆ. ಅನುದಾನ ಇನ್ನೂ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.