ಕಾರವಾರ: ಪಶುಆಸ್ಪತ್ರೆಗೆ ಸುಸಜ್ಜಿತವಾದ ಕಟ್ಟಡಗಳಿವೆ. ಆದರೆ, ಅದಕ್ಕೆ ಹಾಕಿದ ಬೀಗ ತೆರೆಯಲೂ ಜನರಿಲ್ಲ. ಔಷಧ ಖರೀದಿಗೆ ಅನುದಾನವಿದೆ. ಆದರೆ, ಔಷಧ ಶಿಫಾರಸು ಮಾಡಿ ಜಾನುವಾರು ಜೀವ ಉಳಿಸಲು ವೈದ್ಯರು, ಸಿಬ್ಬಂದಿ ಇಲ್ಲ. ಇದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆಯ ಸ್ಥಿತಿ.
ಕ್ಷೀರೋದ್ಯಮವನ್ನು ‘ಕ್ರಾಂತಿ’ಯಂತೆ ಬೆಳೆಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಸರ್ಕಾರವು ಪದೇಪದೇ ಹೇಳುತ್ತಿದೆ. ಜೊತೆಗೆ ಹೈನುಗಾರರು ಮತ್ತಷ್ಟು ಸುಧಾರಿತ ತಳಿಗಳ ಜಾನುವಾರು ಸಾಕಣೆ ಮಾಡಿ ಹೆಚ್ಚು ಹಾಲು ಉತ್ಪಾದಿಸಲು ಸಲಹೆ ನೀಡುತ್ತಿದೆ. ಹಾಗಿದ್ದರೆ, ಅದಕ್ಕೆ ಪೂರಕವಾಗಿ ಬೇಕಿರುವ ವಿವಿಧ ಅಗತ್ಯ ಸೌಲಭ್ಯಗಳಿವೆಯೇ ಎಂದು ಪರಿಶೀಲಿಸಿದಾಗ ಕಾಣುವುದು ನಿರಾಸೆಯ ಚಿತ್ರಣ.
ದಕ್ಷಿಣ ಕನ್ನಡದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಿದ್ದರೆ, ತುರ್ತು ಚಿಕಿತ್ಸೆಗೆ ಏನು ಪರಿಹಾರೋ ಪಾಯ ಎಂದು ಸುಳ್ಯದ ಕೃಷಿಕ ವಿಘ್ನೇಶ್ವರ ಅವರನ್ನು ಕೇಳಿದರೆ, ‘ಪಾರಂಪರಿಕ ಔಷಧಗಳು, ರೂಢಿಗ ತವಾಗಿ ಬಂದಿರುವ ಜ್ಞಾನವೇ ಆಧಾರ. ಇಂಥ ಸಂದರ್ಭಗಳಲ್ಲಿ ಹಲವು ಆಕಳನ್ನು ಕಳೆದುಕೊಂಡಿ ದ್ದೇವೆ’ ಎಂದೂ ಹೇಳುತ್ತಾರೆ.
‘ನಾವು ಸುಮಾರು 100 ಮಲೆನಾಡು ಗಿಡ್ಡ ಆಕಳುಗಳನ್ನು ಸಾಕಿದ್ದೇವೆ. ಅವುಗಳಿಗೆ ಅನಾರೋಗ್ಯವಾದರೆ ಸಮೀಪದಲ್ಲಿ ಪಶು ಆಸ್ಪತ್ರೆಯಿಲ್ಲ. 15 ಕಿಲೋಮೀಟರ್ ದೂರದ ಹೊನ್ನಾವರಕ್ಕೆ ವಾಹನದಲ್ಲಿ ಹೇರಿಕೊಂಡು ಹೋಗುತ್ತೇವೆ. ಗ್ರಾಮೀಣ ಭಾಗದಲ್ಲಿ ಸಾಕುಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ತಜ್ಞರಿಲ್ಲ. ಮತ್ತೆಲ್ಲಿಂದಲೋ ಬರಬಹುದೇ ಎಂದು ಕಾಯುವಂತಾಗಿದೆ’ ಎಂದು ಹೊನ್ನಾವರ ತಾಲ್ಲೂಕಿನ ಕವಲಕ್ಕಿಯ ವಿನಯ ಶೆಟ್ಟಿ ಬೇಸರ ವ್ಯಕ್ತಪಡಿಸುತ್ತಾರೆ.
ವರ್ಷದಿಂದ ವರ್ಷಕ್ಕೆ ಇಳಿಕೆ
ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ನಡೆದ ಗಣತಿಯ ಪ್ರಕಾರ 3.58 ಲಕ್ಷ ಜಾನುವಾರು ಇವೆ. ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಅನುಗುಣವಾಗಿ ಪಶು ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ, ಇಲಾಖೆಯ ಪ್ರೋತ್ಸಾಹದ ಕೊರತೆಯಿಂದಾಗಿ ಉತ್ತರ ಕನ್ನಡವೊಂದರಲ್ಲೇ ಜಾನುವಾರು ಸಾಕಣೆ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇ 10ರಿಂದ ಶೇ 15ರಷ್ಟು ಇಳಿಕೆಯಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಯೊಬ್ಬರು ವಿಷಾದಿಸುತ್ತಾರೆ.
ಕಾರವಾರದಲ್ಲಿರುವ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಪಕ್ಕದಲ್ಲೇ ಇರುವ ಪಶು ಚಿಕಿತ್ಸಾಲಯದಲ್ಲಿ ವೈದ್ಯರಿಲ್ಲ. ಅಲ್ಲಿಗೆ ನೆರೆಯ ಅಂಕೋಲಾದಿಂದ ವೈದ್ಯರು ಕರೆಯ ಮೇರೆಗೆ ಭೇಟಿ ನೀಡುತ್ತಾರೆ. ಭಟ್ಕಳ, ಹಳಿಯಾಳ ಮತ್ತು ಕಾರವಾರ ತಾಲ್ಲೂಕುಗಳಲ್ಲಿ ಇಡೀ ತಾಲ್ಲೂಕಿಗೆ ಒಬ್ಬರೇ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರ ಮರೆತಿರುವುದು
*ಇಲಾಖೆಯ ಖಾಲಿ ಹುದ್ದೆಗಳಿಗೆ ಹಲವು ವರ್ಷಗಳಿಂದ ಸಿಬ್ಬಂದಿ ನೇಮಿಸಿಲ್ಲ
*ಎರಡು ವರ್ಷಗಳಿಂದ ಹೊಸ ಯೋಜನೆಗಳ ಘೋಷಣೆ ಇಲ್ಲ
*ಜಾನುವಾರುಗಳ ಆಕಸ್ಮಿಕ ಸಾವಿಗೆ ₹ 10 ಸಾವಿರ ಪರಿಹಾರ ಎರಡು ವರ್ಷಗಳಿಂದ ಮಂಜೂರಾಗಿಲ್ಲ
*ಬೇಡಿಕೆಗೆ ಅನುಗುಣವಾಗಿ ಸಂಚಾರಿ ಪಶು ಆಸ್ಪತ್ರೆಗಳ ಸಂಖ್ಯೆ ಹೆಚ್ಚಳ ಆಗಿಲ್ಲ
*ಹೊಸ ಸಿಬ್ಬಂದಿಗೆ ಕನಿಷ್ಠ ಮೂರು ವರ್ಷ ಒಂದೇ ಕಡೆ ಕರ್ತವ್ಯ ನಿರ್ವಹಿಸಲು ಸೂಚನೆ
***
ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಅನುಕೂಲವಾಗುವಂತೆ ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಹೆಚ್ಚಿಸಬೇಕು. ವಿನಯ ಶೆಟ್ಟಿ
- ಹೈನುಗಾರ ಕವಲಕ್ಕಿ, ಹೊನ್ನಾವರ
***
ಪಶು ಆಸ್ಪತ್ರೆಗಳಿಗೆ ಕಟ್ಟಡದಷ್ಟೇ ಸೂಕ್ತ ಸಿಬ್ಬಂದಿ ಇರುವುದೂ ಮುಖ್ಯ. ಸರ್ಕಾರವು ಖಾಲಿ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಬೇಕು.
- ಮಹಾಬಲೇಶ್ವರ ಭಟ್, ಹೈನುಗಾರ ಕುಚೇಗಾರ, ಕಾರವಾರ
***
ಉತ್ತರ ಕನ್ನಡದಲ್ಲಿ ಇಲಾಖೆಯ ಶೇ 20ರಷ್ಟು ಮಾತ್ರ ಸಿಬ್ಬಂದಿ ಇದ್ದಾರೆ. ಅವರೆಲ್ಲ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಜಾನುವಾರು ಆರೈಕೆಗೆ ಬದ್ಧತೆ ತೋರುತ್ತಿದ್ದಾರೆ.
- ಡಾ.ನಂದಕುಮಾರ ಪೈ, ಉಪ ನಿರ್ದೇಶಕ ಪಶುಪಾಲನೆ ಮತ್ತು ಪಶು ವೈದ್ಯ ಸೇವೆ ಇಲಾಖೆ, ಕಾರವಾರ
ಇವುಗಳನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.