ADVERTISEMENT

ಒಳನೋಟ: ಇಳಿಯಲಿಲ್ಲ ಬೆಲೆ ಏರಲಿಲ್ಲ ಮನೆ

ಪ್ರಮೋದ
Published 12 ಜೂನ್ 2021, 19:31 IST
Last Updated 12 ಜೂನ್ 2021, 19:31 IST
ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಹುಬ್ಬಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಅರ್ಧದಲ್ಲಿ ನಿಂತಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಹುಬ್ಬಳ್ಳಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಅರ್ಧದಲ್ಲಿ ನಿಂತಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಸ್ವಂತ ಸೂರಿನ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ, ಬಾಡಿಗೆಯ ಭಾರ ಇಳಿಯಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಜನರ ಆಸೆಗೆ ಲಾಕ್‌ಡೌನ್‌ ಬಿಸಿತುಪ್ಪದಂತೆ ಪರಿಣಮಿಸಿದೆ.

ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಚಾರ ರದ್ದಾದ ಕಾರಣ ಒಂದೆಡೆ ಕಾರ್ಮಿಕರ ಕೊರತೆ ಕಾಡಿದರೆ, ಮತ್ತೊಂದೆಡೆ ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆ ಮನೆ ಕಟ್ಟಿಸುವವರನ್ನು ಹೈರಾಣಾಗಿಸಿದೆ. ಮನೆ ಕಟ್ಟಲು ಲಾಕ್‌ಡೌನ್‌ಗಿಂತ ಮೊದಲೇ ಗುತ್ತಿಗೆ ಪಡೆದವರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಹಲವು ಮನೆಗಳ ಕಾಮಗಾರಿ ಅರ್ಧದಲ್ಲಿಯೇ ನಿಂತಿದೆ. ಕಬ್ಬಿಣ, ಸಿಮೆಂಟ್‌, ವಿದ್ಯುತ್ ಪರಿಕರ, ಇಟ್ಟಿಗೆ, ಪ್ಲಂಬಿಂಗ್ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ.

ಲಾಕ್‌ಡೌನ್‌ ಪೂರ್ವದಲ್ಲಿ ಹುಬ್ಬಳ್ಳಿಯಂಥ ವಾಣಿಜ್ಯ ನಗರಿಯಲ್ಲಿ 50 ಕೆ.ಜಿ.ಯ ಒಂದು ಚೀಲ ಸಿಮೆಂಟ್‌ ಬೆಲೆ ಕನಿಷ್ಠ ₹ 320ರಿಂದ ಗರಿಷ್ಠ ₹ 350 ಇತ್ತು. ಈಗ ₹ 400ರಿಂದ ₹ 420ಕ್ಕೆ ಏರಿಕೆಯಾಗಿದೆ. ಒಂದು ಕೆ.ಜಿ. ಸ್ಟೀಲ್‌ಗೆ ಮೊದಲಿದ್ದ ಬೆಲೆ ₹ 37. ಈಗ ಬೆಲೆ ದುಪ್ಪಟ್ಟಾಗಿದೆ.

ADVERTISEMENT

ದೊಡ್ಡ ಕಟ್ಟಡಗಳನ್ನು ಕಟ್ಟುವವರು ಬ್ರ್ಯಾಂಡೆಡ್‌ ಕಂಪನಿಗಳ ಸ್ಟೀಲ್‌ ಸಾಮಗ್ರಿಗಳನ್ನೇ ಬಳಸಬೇಕು ಎನ್ನುವ ಬೇಡಿಕೆ ಮುಂದಿಡುತ್ತಾರೆ. ಹೀಗಾಗಿ ನಿಗದಿತ ಸಮಯದಲ್ಲಿ ಸರಕು ಸಿಗುವುದು ಕಷ್ಟ. ಸಿಕ್ಕರೂ ಬೆಲೆ ಹೆಚ್ಚು ಎನ್ನುತ್ತಾರೆ ಗುತ್ತಿಗೆದಾರರು.

ಮೊದಲು 30X40 ಜಾಗದಲ್ಲಿ ₹ 20 ಲಕ್ಷದಲ್ಲಿ ಮನೆ ಕಟ್ಟಬಹುದಾಗಿತ್ತು. ಈಗ ಇದಕ್ಕೆ ಐದು ಲಕ್ಷ ಹೆಚ್ಚುವರಿಯಾಗಿ ಹಣ ಖರ್ಚು ಮಾಡಬೇಕಾಗಿದೆ ಎಂದು ಹುಬ್ಬಳ್ಳಿಯ ಗುತ್ತಿಗೆದಾರ ಸುಮಿತ್‌ ಹೇಳುತ್ತಾರೆ.

ದುಪ್ಪಟ್ಟು ಹಣ: ನಲ್ಲಿ ಮುರಿದಿದೆ, ಸಿಂಕ್‌, ಬೇಸನ್‌ ಬದಲಿಸಬೇಕಾಗಿದೆ. ಮುರಿದು ಹೋದ ಅಡುಗೆ ಮನೆ ಕೊಳವೆ ಹಾಕಬೇಕಿದೆ... ಹೀಗೆ ಸಣ್ಣಪುಟ್ಟ ರಿಪೇರಿ ಕೆಲಸಗಳಿಗೂ ಜನ ದುಪ್ಪಟ್ಟು ಹಣ ವೆಚ್ಚ ಮಾಡಬೇಕಾಗಿದೆ.

ಸಾಮಗ್ರಿಗಳ ಕೊರತೆ ಇದಕ್ಕೆ ಮುಖ್ಯ ಕಾರಣವಾದರೆ, ಸಣ್ಣ ವಸ್ತುಗಳಿಂದಲೇ ವ್ಯಾಪಾರಿಗಳಿಗೆ ಹೆಚ್ಚು ಲಾಭ ಸಿಗುವುದು ಇನ್ನೊಂದು ಕಾರಣ.

‘ಸಗಟು ಮಾರುಕಟ್ಟೆಯಲ್ಲಿ ಮನೆಯ ಸಣ್ಣಪುಟ್ಟ ರಿಪೇರಿ ಸಾಮಗ್ರಿಗಳಿಗೆ ಶೇ 30ರಷ್ಟು ರಿಯಾಯಿತಿ ನಮಗೆ ಸಿಗುತ್ತಿತ್ತು. ಇದರಲ್ಲಿ ಶೇ 20ರಷ್ಟು ಗ್ರಾಹಕರಿಗೇ ನೀಡುತ್ತಿದ್ದೆವು. ಈಗ ಬೆಲೆ ಏರಿಕೆಯಿಂದಾಗಿ ಶೇ 20ರಷ್ಟು ಮಾತ್ರ ರಿಯಾಯಿತಿ ನಮಗೆ ಸಿಗುತ್ತಿದೆ. ಇದರಿಂದಾಗಿ ಗ್ರಾಹಕರು ಮೊದಲಿಗಿಂತಲೂ ಹೆಚ್ಚು ಬೆಲೆ ಕೊಟ್ಟು ಸಾಮಗ್ರಿ ಖರೀದಿಸಬೇಕಾಗಿದೆ’ ಎನ್ನುತ್ತಾರೆ ಹುಬ್ಬಳ್ಳಿಯ ವೆಂಕಟೇಶ್ವರ ಟ್ರೇಡರ್ಸ್‌ನ ಮಾಲೀಕ ವಿನಾಯಕ ಹೊಸಮನಿ.

* ದಿನಸಿ ಬೆಲೆ ಏರಿಕೆ ಜೊತೆಗೆ ಲಾಕ್‌ಡೌನ್‌ ಕೂಡ ಆಗಿದೆ. ಹೀಗಿರುವಾಗ ಮನೆ ಬಾಡಿಗೆಯನ್ನೂ ಕಟ್ಟಿಕೊಂಡು ಹೇಗೆ ಜೀವನ ನಡೆಸಬೇಕು ಎಂಬುದೇ ಬಡವರಿಗೆ ಗೊತ್ತಾಗುತ್ತಿಲ್ಲ.

- ಜಯಾ, ಗೃಹಿಣಿ, ದಾವಣಗೆರೆ

* ದಿನಸಿ ಬೆಲೆ ಗಗನಕ್ಕೇರಿದೆ. ಕಾಳು, ಬೇಳೆ ಖರೀದಿಸಲು ಆಗುತ್ತಿಲ್ಲ. ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕುವ ಮೂಲಕ ಜನಸಾಮಾನ್ಯರ ಬದುಕಿಗೆ ಆಸರೆಯಾಗಬೇಕು.

-ಭಾರತಿ ರಾಮಕೃಷ್ಣ, ಗೃಹಿಣಿ, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.