ನವದೆಹಲಿ:ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (ಎಎಪಿ) ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೆಹಲಿಯ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಗಮನಾರ್ಹ ಸುಧಾರಣೆ ಕಂಡಿದೆ. ಮೂಲಸೌಲಭ್ಯ ಮತ್ತು ಕಲಿಕಾ ಗುಣಮಟ್ಟದ ಸುಧಾರಣೆಯಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಬಿಹಾರ, ಛತ್ತೀಸಗಡ, ಜಾರ್ಖಂಡ್, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳ ವಲಸಿಗರೇ ದೆಹಲಿಯಲ್ಲಿ ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದು, ಹೆಚ್ಚಿನವರು ಅಸಂಘಟಿತ ಕಾರ್ಮಿಕರಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಈ ಕಾರ್ಮಿಕರ ಮಕ್ಕಳಿಗೆ ಸುಲಭವಾಗಿ, ಸಮರ್ಪಕ ಶಿಕ್ಷಣ ದೊರಯಲಿ ಎಂಬ ಉದ್ದೇಶದಿಂದಲೇ ಸರ್ಕಾರ ಆದ್ಯತೆ ಮೇರೆಗೆ ಈ ಶಾಲೆಗಳನ್ನು ಅಭಿವೃದ್ಧಿಪಡಿಸಿದೆ.
ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟದ ಸುಧಾರಣೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಹಾಗಾಗಿ ಶಾಲೆಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ಕಾರಣ ಬಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಮೊಟಕುಗೊಳ್ಳುತ್ತಿತ್ತು. ಕೆಲವು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸುಲಭದಲ್ಲೇ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ಶೇ 95ರಷ್ಟು ಪಾಲಕರು ಸಂತುಷ್ಟರಾಗಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ದೆಹಲಿ ಸರ್ಕಾರ ಆದ್ಯತಾ ಪಟ್ಟಿಯಲ್ಲಿ ಸೇರಿಸಿದ್ದು, ಒಟ್ಟು ಬಜೆಟ್‌ನ ಶೇಕಡ 25ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದೆ.
ಸರ್ಕಾರಿ ಶಾಲೆಗಳೂ ಸ್ಮಾರ್ಟ್!:ಪ್ರತಿ ಶಾಲೆಯಲ್ಲೂ ಸ್ಮಾರ್ಟ್ ತರಗತಿ, ಉತ್ತಮ ಪೀಠೋಪಕರಣ, ಸಭಾಭವನ, ಸುಸಜ್ಜಿತ ಪ್ರಯೋಗಾಲಯ, ಆಟದ ಮೈದಾನ, ನೈತಿಕ ಶಿಕ್ಷಣ, ಪಠ್ಯೇತರ ಚಟುವಟಿಕೆಗೂ ಗಮನಹರಿಸಿ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಕರ್ನಾಟಕದ ವಿವಿಧೆಡೆ ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿರುವುದು ಕಂಡುಬರುತ್ತಿದ್ದರೆ, ದೆಹಲಿ ಸರ್ಕಾರವು ಆಯ್ದ ಪ್ರದೇಶಗಳಲ್ಲಿ ಹೊಸದಾಗಿ 55 ಶಾಲೆ ಆರಂಭಿಸುವ ಯೋಜನೆಯನ್ನು ಕಳೆದ ವರ್ಷವೇ ರೂಪಿಸಿದೆ. ಈಗಾಗಲೇ 25 ಹೊಸ ಶಾಲೆಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, 30 ಶಾಲೆಗಳ ಕಾಮಗಾರಿ ಪ್ರಗತಿಯಲ್ಲಿದೆ.
ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಕೊರತೆಯಿಂದ ದೆಹಲಿಯ ಮೂರು ಮಹಾನಗರ ಪಾಲಿಕೆಗಳ (ಇವು ದೆಹಲಿ ಸರ್ಕಾರದ ವ್ಯಾಪ್ತಿಯ ಶಾಲೆಗಳಲ್ಲ) 109 ಶಾಲೆಗಳನ್ನು ಕಳೆದ ಎಂಟು ವರ್ಷದಲ್ಲಿ ಮುಚ್ಚಲಾಗಿದೆ. ಆ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1.40 ಲಕ್ಷ ವಿದ್ಯಾರ್ಥಿಗಳು ದೆಹಲಿ ಸರ್ಕಾರದ ವ್ಯಾಪ್ತಿಯ ಶಾಲೆಗಳಿಗೆ ಪ್ರವೇಶ ಪಡೆದಿದ್ದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಅಸ್ತಿತ್ವದಲ್ಲಿರುವ ಶಾಲೆಗಳಲ್ಲಿ ಒಟ್ಟು 20,800 ಹೊಸ ಕೊಠಡಿಗಳನ್ನು ನಿರ್ಮಿಸುವ ಗುರಿ ಸರ್ಕಾರದ್ದಾಗಿದೆ. ಈ ಪೈಕಿ 8,095 ಕೊಠಡಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇನ್ನೂ 12,762 ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಮಧ್ಯಮ, ಮೇಲ್ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನೂ ಸರ್ಕಾರಿ ಶಾಲೆಗಳತ್ತ ಆಕರ್ಷಿಸಲು ಪೌಷ್ಟಿಕ ಆಹಾರ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡ ಲಾಗಿದೆ. ಸ್ವಚ್ಛತೆ, ವೈದ್ಯಕೀಯ ವ್ಯವಸ್ಥೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಆಕರ್ಷಕ ಸಮವಸ್ತ್ರ, ಬ್ಯಾಗ್, ಶೂ, ಗುರುತಿನ ಚೀಟಿ ವಿತರಣೆ ಮೂಲಕ ವಿದ್ಯಾರ್ಥಿಗಳಲ್ಲಿ ‘ನಾವು ಯಾರಿಗೇನು ಕಡಿಮೆ’ ಎಂಬ ಭಾವ ಮೂಡಿಸಲಾಗಿದೆ.
ಪ್ರತಿ ಸರ್ಕಾರಿ ಶಾಲೆಗಳಲ್ಲಿಯೂ ನರ್ಸರಿ, ಕೆ.ಜಿ. ತರಗತಿ ಆರಂಭಿಸಲಾಗುತ್ತಿದೆ. ನರ್ಸರಿ, ಕೆ.ಜಿ. ಮತ್ತು 1ನೇ ತರಗತಿಗೆ ಪ್ರವೇಶ ಪಡೆಯಲು ತೀವ್ರ ಸ್ಪರ್ಧೆ ಇದೆ. ಪ್ರವೇಶ ಕೋರಿ ಹೆಚ್ಚು ಅರ್ಜಿ ಬರುತ್ತಿರುವುದರಿಂದ ಲಾಟರಿ ಮೂಲಕ ಪ್ರವೇಶವನ್ನು ನಿರ್ಧರಿಸಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ
ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಜೆಇಇ ಮತ್ತು ನೀಟ್‌ನಲ್ಲೂ ಉತ್ತಮ ಸಂಖ್ಯೆಯಲ್ಲಿ ತೇರ್ಗಡೆ ಹೊಂದುತ್ತಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುತ್ತಿರುವುದು ಮತ್ತುಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುತ್ತಿರುವುದು ಸರ್ಕಾರಿ ಶಾಲೆಗಳ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.
ಕಲಿಕಾ ಮಟ್ಟದ ಸುಧಾರಣೆಗಾಗಿ ಸರ್ಕಾರಿ ಶಾಲೆಯ ಶಿಕ್ಷಕರಿಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹಾಗೂ ದೇಶ– ವಿದೇಶಗಳಿಗೆ ವಿಶೇಷ ತರಬೇತಿ ಪಡೆಯಲು ಪ್ರೇರೇಪಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.