ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಚಿಕ್ಕಬಳ್ಳಾಪುರದ ಗೌರಿಬಿದನೂರಿನ 36 ವರ್ಷದ ವ್ಯಕ್ತಿಗೆ ತುರ್ತು ಚಿಕಿತ್ಸೆ ಕೊಡಿಸಲು ಕುಟುಂಬಸ್ಥರು ಜಿಲ್ಲೆಯಲ್ಲಿನ ಆಸ್ಪತ್ರೆಗಳಿಗೆ ಇಡೀ ದಿನ ಅಲೆದಾಟ ನಡೆಸಿದರು. ಅಲ್ಲಿನ ವೈದ್ಯರು ಕೈಚೆಲ್ಲಿದ್ದರಿಂದ ಬೆಂಗಳೂರಿನ ಯಶವಂತಪುರದ ಖಾಸಗಿ ಆಸ್ಪತ್ರೆಗೆ ಕರೆತಂದರು. ಆದರೆ, 76 ಕಿ.ಮೀ. ದೂರ ಬರುವಷ್ಟರಲ್ಲಿ ಅವರ ಮಿದುಳು ನಿಷ್ಕ್ರಿಯವಾಗಿತ್ತು.
2022ರ ಡಿ.16ರಂದು ನಡೆದ ಈ ಪ್ರಕರಣ ಸರ್ಕಾರಿ ವೈದ್ಯಕೀಯ ವ್ಯವಸ್ಥೆಯ ವೈಫಲ್ಯಕ್ಕೆ ಉದಾಹರಣೆ. ಈಗಲೂ ಬೆಂಗಳೂರಿನ ಸುತ್ತಮುತ್ತ ಇರುವ ಜಿಲ್ಲೆಯ ಜನರು ಸಹ ಖಾಸಗಿ ಆಸ್ಪತ್ರೆಗಳನ್ನೇ ಅರಸಿ, ರಾಜಧಾನಿಯತ್ತ ಮುಖಮಾಡಬೇಕಾದ ಸ್ಥಿತಿಯಿದೆ. ಇನ್ನು ಉತ್ತರ ಕನ್ನಡದಂತಹ ಕರಾವಳಿ ಜಿಲ್ಲೆ ಮತ್ತು ಕೊಡಗು ಮತ್ತು ಚಿಕ್ಕಮಗಳೂರಿನಂತಹ ಮಲೆನಾಡಿನ ಜಿಲ್ಲೆಗಳಲ್ಲಿನ ಜನರಿಗೆ ತುರ್ತು ಚಿಕಿತ್ಸೆ ಹಾಗೂ ತೃತೀಯ ಹಂತದ ವೈದ್ಯಕೀಯ ಸೇವೆ ಪಡೆಯುವಿಕೆ ಸವಾಲಾಗಿದ್ದು, ನೂರಾರು ಕಿ.ಮೀ. ಸಾಗಬೇಕಾಗಿದೆ.
ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ, ಅಪಘಾತ, ಹೃದಯಾಘಾತದಂತಹ ತುರ್ತು ಸಂದರ್ಭದಲ್ಲಿ ಬಹುತೇಕ ಸಾಮಾನ್ಯ ಜನರು ಈಗಲೂ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಸ್ಥಿತಿಯಿದೆ. ಜಿಲ್ಲಾ ಆಸ್ಪತ್ರೆಗಳು ವೈದ್ಯಕೀಯ ಕಾಲೇಜುಗಳಾಗಿ ಮಾರ್ಪಡುತ್ತಿದ್ದರೂ ಅಗತ್ಯ ಮೂಲಸೌಕರ್ಯ, ತಜ್ಞ ವೈದ್ಯರ ಕೊರತೆಯಿಂದಾಗಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಳು ದೊರೆಯದಂತಾಗಿದೆ.
ಹೃದಯ ಹಾಗೂ ಮೂತ್ರಪಿಂಡ ಸೇರಿ ನಿರ್ದಿಷ್ಟ ಅಂಗಾಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ, ಮಕ್ಕಳು ಹಾಗೂ ತಾಯಂದಿರ ಆರೋಗ್ಯ ವೃದ್ಧಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಮತ್ತು ತಜ್ಞರನ್ನು ಒಳಗೊಂಡಿರುವ 10ಕ್ಕೂ ಅಧಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸರ್ಕಾರಿ ವ್ಯವಸ್ಥೆಯಡಿ ರಾಜ್ಯದಲ್ಲಿವೆ. ಆದರೆ, ಬಹುತೇಕ ಎಲ್ಲ ಆಸ್ಪತ್ರೆಗಳು ಬೆಂಗಳೂರು ಕೇಂದ್ರೀಕೃತವಾಗಿದ್ದು, ರಾಜ್ಯದಾದ್ಯಂತ ಈ ಆಸ್ಪತ್ರೆಗಳ ಶಾಖೆ ವಿಸ್ತರಣೆಯಾಗಿಲ್ಲ. ಹೀಗಾಗಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸೇರಿ ವಿವಿಧ ವೈದ್ಯಕೀಯ ಸಂಸ್ಥೆಗಳ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಹೊರರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆ ದಾಖಲಾತಿ, ಶಸ್ತ್ರಚಿಕಿತ್ಸೆಗೆ ತಿಂಗಳಾನುಗಟ್ಟಲೆ ಅಲೆದಾಟ ನಡೆಸಬೇಕಾಗಿದೆ.
ಹೃದ್ರೋಗ ಚಿಕಿತ್ಸೆಗೆ ಹೆಸರಾದ ಬೆಂಗಳೂರಿನಲ್ಲಿರುವ ಜಯದೇವ ಆಸ್ಪತ್ರೆಯು ಮೈಸೂರು ಹಾಗೂ ಕಲಬುರಗಿಯಲ್ಲಿ ಶಾಖೆಗಳನ್ನು ಹೊಂದಿದೆ. ಬೆಂಗಳೂರಿನ ರಾಜಾಜಿನಗರದ ಇಎಸ್ ಐಸಿ-ಎಂಎಚ್ ಆಸ್ಪತ್ರೆ, ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಘಟಕವನ್ನು ಹೊಂದಿದೆ. ಕ್ಯಾನ್ಸರ್ ಚಿಕಿತ್ಸೆಗೆ ಸ್ಥಾಪಿತವಾದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಶಾಖೆ ಕಲಬುರಗಿಯಲ್ಲಿ ಮಾತ್ರ ಇದೆ. ಮಾನಸಿಕ ಕಾಯಿಲೆಗಳ ಚಿಕಿತ್ಸೆಗೆ ಪ್ರಸಿದ್ಧಿ ಪಡೆದಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಶಾಖೆ ಧಾರವಾಡದಲ್ಲಿ ಮಾತ್ರ ಕಾಣಬಹುದು. ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಹೃದಯ ವಿಜ್ಞಾನ, ಮಾನಸಿಕ ಆರೋಗ್ಯ ವಿಜ್ಞಾನ ಸೇರಿ ವಿವಿಧ ವಿಭಾಗಗಳಿದ್ದರೂ ತಜ್ಞ ವೈದ್ಯರ ತಂಡವಿಲ್ಲ.
ಇದರಿಂದಾಗಿ ಮಹಾನಗರ ಕೇಂದ್ರಿತ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ ಖಾಸಗಿ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಗಳತ್ತ ಮುಖ ಮಾಡಬೇಕಾಗಿದೆ. ಸರ್ಕಾರಿ ಸ್ವಾಮ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಒಳರೋಗಿ ದಾಖಲಾತಿಗೆ ಕಾಯಬೇಕಾಗಿರುವುದರಿಂದ ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೇ ದಾಖಲಾಗಿ, ಲಕ್ಷಾಂತರ ರೂಪಾಯಿ ಚಿಕಿತ್ಸಾ ವೆಚ್ಚ ಭರಿಸಬೇಕಾದದ್ದು ಅನಿವಾರ್ಯವಾಗಿದೆ.
ಬೆಂಗಳೂರಿನ ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಕ್ರೀಡಾ ವೈದ್ಯಕೀಯ ವಿಭಾಗದ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಸಚಿವರ ಅಸಹಕಾರದಿಂದ ಹಲವು ಕಾರಣ ನೀಡಿ ಎರಡು ಸಲ ಮುಂದೂಡಲಾಗಿತ್ತು. ಕೊನೆಗೊಂದು ‘ಶುಭದಿನ‘ ಶಂಕುಸ್ಥಾಪನೆ ನೆರವೇರಿತು. ಇಂತಹ ಹಲವು ಉದಾಹರಣೆಗಳು ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ನಡೆದಿವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳುತ್ತವೆ.
ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಯ ಜನರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನಿರಂತರ ಹೋರಾಟ ನಡೆಸಿದರೂ ಬೇಡಿಕೆ ಈಡೇರಲಿಲ್ಲ. ಈ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿದ್ದರೂ ತಜ್ಞ ವೈದ್ಯರು, ಮೂಲಸೌಕರ್ಯ ಕೊರತೆ ಸೇರಿ ವಿವಿಧ ಕಾರಣಗಳಿಂದ ತೃತೀಯ ಹಂತದ ವೈದ್ಯಕೀಯ ಸೇವೆಗಳು ಲಭ್ಯವಾಗುತ್ತಿಲ್ಲ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರಿಂದ ಕರಾವಳಿ ಜನ ಮಣಿಪಾಲ ಇಲ್ಲವೇ ಮಂಗಳೂರಿಗೆ, ಕೊಡಗು ಮತ್ತು ಚಿಕ್ಕಮಗಳೂರಿನ ಜನ ಇತ್ತ ಮೈಸೂರು ಇಲ್ಲವೇ ಬೆಂಗಳೂರಿಗೆ ಬರಬೇಕು. ಇದರಿಂದಾಗಿ ಅದೆಷ್ಟೋ ಮಂದಿ ಆಸ್ಪತ್ರೆ ತಲುಪುವಷ್ಟರಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ದಾವಣೆಗೆರೆಯಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿ, ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಗೆ ಹಸ್ತಾಂತರಿಸುವ ಪ್ರಸ್ತಾವ ಕಳೆದ ವರ್ಷ ಸರ್ಕಾರದ ಮುಂದಿತ್ತು. ಆದರೆ, ಇದು ಸಾಕಾರವಾಗಿಲ್ಲ. ಚಿಗಟೇರಿ ಆಸ್ಪತ್ರೆಗೆ ನಿತ್ಯ 1,000ದಿಂದ 1,200ಕ್ಕೂ ಹೆಚ್ಚು ರೋಗಿಗಳು ಭೇಟಿ ನೀಡುತ್ತಿದ್ದಾರೆ. ಜಿಲ್ಲೆ ಮಾತ್ರವಲ್ಲದೇ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಯಿಂದಲೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಚಿಕಿತ್ಸಾ ಸೌಲಭ್ಯಗಳು ಇಲ್ಲ. ದಿನಕ್ಕೆ ಸಾವಿರ ರೋಗಿಗಳು ಬರುತ್ತಿದ್ದರೂ ಎಕ್ಸ್– ರೇ, ಸ್ಕ್ಯಾನಿಂಗ್ ಯಂತ್ರಗಳು ಕೇವಲ ಒಂದೊಂದು ಮಾತ್ರ ಇವೆ. 1976ರಲ್ಲಿ ನಿರ್ಮಾಣಗೊಂಡಿರುವ ಆಸ್ಪತ್ರೆ ಕಟ್ಟಡವೂ ಮುಪ್ಪಿನಾವಸ್ಥೆ ತಲುಪಿದೆ.
ಚಿತ್ರದುರ್ಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಗೊಂಡಿದೆ. ಜಿಲ್ಲಾ ಆಸ್ಪತ್ರೆಯನ್ನು ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸುವ ಪ್ರಕ್ರಿಯೆ ಶುರುವಾಗಿದೆ. ಜಿಲ್ಲಾ ಆಸ್ಪತ್ರೆಯು 600 ಹಾಸಿಗೆ ಸಾಮರ್ಥ್ಯ ಹೊಂದಿದೆ. ವೈದ್ಯಕೀಯ ಕಾಲೇಜು ಸುಪರ್ದಿಗೆ ಪಡೆದ ಬಳಿಕ 180 ಹಾಸಿಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿವೆ. ಆದರೆ ಇಲ್ಲಿ 300 ಹಾಸಿಗೆಗೆ ಸಾಕಾಗುವಷ್ಟು ವೈದ್ಯಕೀಯ ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಂಗಳೂರಿನ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆ ಮತ್ತು ಸ್ತ್ರೀರೋಗ ಚಿಕಿತ್ಸೆಗಿರುವ ಲೇಡಿ ಗೋಷನ್ ಆಸ್ಪತ್ರೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಮಾತ್ರವಲ್ಲ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ 10ಕ್ಕೂ ಹೆಚ್ಚು ಜಿಲ್ಲೆಗಳಿಂದ ಬರುವವರೇ ಹೆಚ್ಚು. ವರ್ಷಕ್ಕೆ ಸುಮಾರು 30 ಸಾವಿರ ಒಳರೋಗಿಗಳು ಮತ್ತು 3 ಲಕ್ಷದಷ್ಟು ಹೊರರೋಗಿಗಳಿಗೆ ಚಿಕಿತ್ಸೆ ನೀಡುವ ವೆನ್‌ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಕ್ಲಿನಿಕಲ್ ಸೇವೆ ಕೆಎಂಸಿ ವೈದ್ಯರಿಂದ ಸಿಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇರಲಿ, ಕನಿಷ್ಠ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯವೂ ಇಲ್ಲ. ಚಾಮರಾಜನಗರದಲ್ಲೂ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಅಲ್ಲಿನ ಜನರೂ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಾಗಿ ಒಂದೂವರೆ ಗಂಟೆ ಮೈಸೂರಿಗೆ ಪ್ರಯಾಣಿಸಬೇಕಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿಯಾದ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕಿಮ್ಸ್) ಅಧೀನದಲ್ಲಿ 2019ರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧಗೊಂಡು ವರ್ಷ ಕಳೆದರೂ ಜನರಿಗೆ ಪ್ರಯೋಜನವಾಗಿಲ್ಲ. ವೈದ್ಯಕೀಯ ಸಿಬ್ಬಂದಿ ಹಾಗೂ ಪೀಠೋಪಕರಣ ಇಲ್ಲದ ಕಾರಣ ಜನರ ನಿರೀಕ್ಷೆ ಹುಸಿಯಾಗಿದೆ. ಬಳ್ಳಾರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡದ ನಿರ್ಮಾಣ ಕಾರ್ಯ ಬಹುತೇಕ ಅಂತಿಮ ಹಂತದಲ್ಲಿದೆ. ಸಣ್ಣಪುಟ್ಟ ಕಾಮಗಾರಿಯಷ್ಟೇ ಬಾಕಿ ಉಳಿದಿದೆ. ಯೋಜನೆಗೆ ₹ 90 ಕೋಟಿ ಖರ್ಚಾಗಿದ್ದು, ಇನ್ನೂ ₹ 42 ಕೋಟಿ ಹಣ ಬಿಡುಗಡೆ ಮಾಡಬೇಕಿದೆ.
ರಾಜ್ಯದ ವೈದ್ಯಕೀಯ ಸ್ಥಿತಿಗತಿ ಬಗ್ಗೆ ಸಮಗ್ರ ವರದಿ ತಯಾರಿಸಲು ರಾಜ್ಯ ಸರ್ಕಾರ 2021ರಲ್ಲಿ ‘ಕರ್ನಾಟಕ ಹೆಲ್ತ್ ವಿಷನ್ ಗ್ರೂಪ್’ ರಚಿಸಿತ್ತು. ನಿಮ್ಹಾನ್ಸ್‌ನ ಅಂದಿನ ನಿರ್ದೇಶಕ ಡಾ.ಜಿ. ಗುರುರಾಜ್ ಇದರ ಅಧ್ಯಕ್ಷರಾಗಿದ್ದರು. ಈ ವರದಿಯಲ್ಲಿಯೂ ಸರ್ಕಾರಿ ವೈದ್ಯಕೀಯ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಹೇಳಲಾಗಿತ್ತು. ‘ಆರೋಗ್ಯ ಮೂಲಸೌಕರ್ಯವು ಜನಸಂಖ್ಯೆ ಕೇಂದ್ರೀಕೃತವಾಗಿರಬೇಕು. ಜಿಲ್ಲಾ ಮಟ್ಟದಲ್ಲಿ ತುರ್ತು ಚಿಕಿತ್ಸೆ, ಟ್ರಾಮಾ (ಅಪಘಾತ), ತೀವ್ರ ನಿಗಾ ಆರೈಕೆ ಹಾಗೂ ವೈದ್ಯಕೀಯ ತಜ್ಞರ ಸೇವೆ ಅಸಮರ್ಪಕವಾಗಿದ್ದು, ಇವುಗಳನ್ನು ಬಲಪಡಿಸಲು ಆದ್ಯತೆ ನೀಡಬೇಕು’ ಎಂದು ವರದಿಯಲ್ಲಿ ತಜ್ಞರು ತಿಳಿಸಿದ್ದರು.
ಗುತ್ತಿಗೆ ನವೀಕರಿಸದ ಸರ್ಕಾರ:
ಕೋವಿಡ್ ಕಾಣಿಸಿಕೊಂಡ ಬಳಿಕ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಗುತ್ತಿಗೆ ಆಧಾರ ಒಂದು ವರ್ಷಕ್ಕೆ ಅನ್ವಯಿಸಿದಂತೆ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಕೋವಿಡ್ ನಿಯಂತ್ರಣದ ಬಳಿಕ ಗುತ್ತಿಗೆ ನವೀಕರಿಸಿಲ್ಲ. ಇದರಿಂದಾಗಿ ವೈದ್ಯರ ಕೊರತೆ ಸಮಸ್ಯೆ ಮುಂದುವರೆದಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 6,838 ಶುಶ್ರೂಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 1,840 ಪ್ರಯೋಗಾಲಯ ತಜ್ಞರು, 477 ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, 237 ಶಸ್ತ್ರಚಿಕಿತ್ಸಕರು, 375 ಮಕ್ಕಳ ತಜ್ಞರು, 289 ದಂತ ತಜ್ಞರು, 462 ವಿಕಿರಣ ವಿಜ್ಞಾನ ತಜ್ಞರು, 1,127 ತಜ್ಞ ವೈದ್ಯರು ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಹಲವರು ಖಾಸಗಿಯಾಗಿಯೂ ಸೇವೆ ನೀಡುತ್ತಿದ್ದಾರೆ. ಇವರು ಸರ್ಕಾರಿ ವ್ಯವಸ್ಥೆಯಡಿ ಕಾಟಾಚಾರಕ್ಕೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ.
ದೇಶದಲ್ಲಿಯೇ ಅತೀ ಹೆಚ್ಚು ವೈದ್ಯಕೀಯ ಕಾಲೇಜುಗಳಿದ್ದರೂ ಇಲ್ಲಿನ ಸರ್ಕಾರಿ ಆಸ್ಪತ್ರೆಗಳು ವೈದ್ಯರ ಕೊರತೆ ಎದುರಿಸುತ್ತಿವೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಡಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಂದ ಪ್ರತಿವರ್ಷ 49 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪದವೀಧರರಾಗಿ ಹೊರಹೊಮ್ಮುತ್ತಿದ್ದಾರೆ. ಸರಾಸರಿ ಸಾವಿರ ಎಂಬಿಬಿಎಸ್ ಹಾಗೂ 2 ಸಾವಿರ ನರ್ಸಿಂಗ್ ಪದವೀಧರರು ವಾರ್ಷಿಕ ಲಭ್ಯರಾಗುತ್ತಿದ್ದಾರೆ. ಇಷ್ಟಾಗಿಯೂ ವೈದ್ಯರ ಕೊರತೆ ನಿವಾರಣೆಯಾಗಿಲ್ಲ.
ಮಂಜೂರಾದ ತಜ್ಞ ವೈದ್ಯರ ಹುದ್ದೆಗಳಲ್ಲಿ ರಾಯಚೂರು, ಕಲಬುರಗಿ, ಯಾದಗಿರಿ, ಗದಗ, ಬಾಗಲಕೋಟೆ, ಕೊಪ್ಪಳ, ಮಂಡ್ಯ, ಹಾವೇರಿ, ಹಾಸನದಲ್ಲಿ ಹೆಚ್ಚಿನ ಹುದ್ದೆಗಳು ಖಾಲಿಯಿವೆ. ದಂತವೈದ್ಯರು, ಮಕ್ಕಳ ತಜ್ಞರ ಹುದ್ದೆಗಳು ಸಹ ಬಹುತೇಕ ಜಿಲ್ಲೆಯಲ್ಲಿ ಖಾಲಿ ಉಳಿದಿವೆ.
ವಿಮೆಯಿದ್ದರೂ ಚಿಕಿತ್ಸೆಯಿಲ್ಲ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ಮಧುಮೇಹ ಮತ್ತು ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ಅಂಗಾಂಗ ಕಸಿ ಕಾರ್ಯಕ್ರಮ ಸೇರಿ ಕೇಂದ್ರ ಸರ್ಕಾರ ಪ್ರಾಯೋಜಿತ 34 ಆರೋಗ್ಯ ಕಾರ್ಯಕ್ರಮಗಳು ರಾಜ್ಯದಲ್ಲಿ ಜಾರಿಯಲ್ಲಿವೆ. ಜ್ಯೋತಿ ಸಂಜೀವಿನಿ, ಶುಚಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಆರೋಗ್ಯ ಕವಚ ಸೇರಿ ರಾಜ್ಯ ಸರ್ಕಾರ ಪ್ರಾಯೋಜಿತ 21 ಕಾರ್ಯಕ್ರಮಗಳಿವೆ. ಆದರೆ, ತುರ್ತು ಸಂದರ್ಭದಲ್ಲಿ ರೋಗಿಗಳು ಸರ್ಕಾರಿ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುವುದು ಸವಾಲಾಗಿದೆ.
ಆರೋಗ್ಯ ಭದ್ರತೆ ಒದಗಿಸುವ ಭರವಸೆಯೊಂದಿಗೆ 2018ರಲ್ಲಿ ಪ್ರಾರಂಭವಾದ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆ (ಎಬಿ–ಎಆರ್‌ಕೆ), ಐದು ವರ್ಷಗಳಾದರೂ ಜನರಿಗೆ ಭರವಸೆಯನ್ನು ಮೂಡಿಸಿಲ್ಲ. ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ವರ್ಷಕ್ಕೆ ₹ 5 ಲಕ್ಷದವರೆಗೆ ಆರೋಗ್ಯ ವಿಮೆಗೆ ಅವಕಾಶವಿದ್ದರೂ ದ್ಯಕೀಯ ಸೌಲಭ್ಯ ಪಡೆಯುವುದು ಕಷ್ಟಸಾಧ್ಯವಾಗಿದೆ.
‘ವೈದ್ಯಕೀಯ ಸೇವೆ ಬಲವರ್ಧನೆ’
ಜಿಲ್ಲಾ ಮಟ್ಟದಲ್ಲಿಯೇ ಕ್ಯಾನ್ಸರ್ ಪತ್ತೆ, ಹೃದಯಾಘಾತಕ್ಕೆ ಚಿಕಿತ್ಸೆ ಸೇರಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶ್ವಾಸಕೋಶದ ಕ್ಯಾನ್ಸರ್ ಪತ್ತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ತಪಾಸಣೆ ವ್ಯವಸ್ಥೆ ಅಳವಡಿಕೆಗೆ ಅಸ್ಟ್ರಾಜೆನಕಾ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಹಠಾತ್ ಹೃದಯಾ
ಘಾತಗಳಿಂದ ಸಂಭವಿಸುತ್ತಿರುವ ಸಾವು ತಡೆಯಲು ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಸಹಕಾರಿಯಾಗಲಿದೆ. ಈ ಯೋಜನೆ ಮೂಲಕ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲೇ ಉಚಿತವಾಗಿ ‘ಟೆನೆಕ್ಟ್ ಪ್ಲಸ್’ ಚುಚ್ಚುಮದ್ದನ್ನು ಒದಗಿಸಲಾಗುವುದು. ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
****
ಖಾಸಗಿ ಸೇವೆ ಅವಲಂಬನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ತೃತೀಯ ಹಂತದ ವೈದ್ಯಕೀಯ ವ್ಯವಸ್ಥೆಯ ಬಲವರ್ಧನೆ ಸಾಕಾರವಾಗಿಲ್ಲ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬನೆ ಹೆಚ್ಚಾಗಿದ್ದು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಅಪಘಾತ ಸೇರಿ ವಿವಿಧ ತುರ್ತು ಸಂದರ್ಭದಲ್ಲಿ ಶೇ 70ರಿಂದ ಶೇ 80 ರಷ್ಟು ಮಂದಿಗೆ ಖಾಸಗಿ ಆಸ್ಪತ್ರೆಗಳೇ ಚಿಕಿತ್ಸೆ ಒದಗಿಸುತ್ತಿವೆ. ಹೀಗಾಗಿಯೇ ರಾಜ್ಯದಲ್ಲಿ 16 ಸಾವಿರಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳು ತಲೆಯೆತ್ತಿವೆ.
ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಇಲ್ಲದಿರುವುದರಿಂದ ರೋಗಿಗಳು ಶಿಫಾರಸು ಆಧಾರದಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾಗಿದೆ. ಇದರಿಂದ ರೋಗಿಯ ಸ್ಥಿತಿ ಬಿಗಡಾಯಿಸುವ ಜತೆಗೆ ಆರ್ಥಿಕ ವೆಚ್ಚವೂ ಹೆಚ್ಚಳವಾಗುತ್ತಿದೆ.
ಕೋವಿಡ್ ಮೂರನೇ ಅಲೆ ಎದುರಿಸಲು ಚಿಕಿತ್ಸೆಗೆ ಗೊತ್ತುಪಡಿಸಲಾದ 1.94 ಲಕ್ಷ ಹಾಸಿಗೆಗಳಲ್ಲಿ ಶೇ 73.71 ರಷ್ಟು ಹಾಸಿಗೆಗಳು ಖಾಸಗಿಯವರ ನಿಯಂತ್ರಣದಲ್ಲಿಯೇ ಇತ್ತು. ಚಿಕಿತ್ಸೆಗೆ ಮೀಸಲಿರಿಸಿದ ಹಾಸಿಗೆಗಳಲ್ಲಿ 51,093 ಹಾಸಿಗೆಗಳು ಸರ್ಕಾರಿ ವ್ಯವಸ್ಥೆಯಡಿ ಇದ್ದರೆ, 1.43 ಲಕ್ಷ ಹಾಸಿಗೆಯನ್ನು ಖಾಸಗಿ ವ್ಯವಸ್ಥೆಯಡಿ ಗುರುತಿಸಲಾಗಿತ್ತು.
ಈಗಲೂ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಸುಸಜ್ಜಿತ ಪ್ರಯೋಗಾಲಯಗಳಿಲ್ಲ. ಎಕ್ಸ್–ರೇ, ಸಿಟಿ ಸ್ಕ್ಯಾನ್, ಎಂಆರ್‌ಐ ಸೇರಿ ವಿವಿಧ ಪರೀಕ್ಷೆಗಳಿಗೆ ಖಾಸಗಿ ಕೇಂದ್ರಗಳನ್ನೇ ಅವಲಂಬಿಸಬೇಕಾದ ಸ್ಥಿತಿಯಿದೆ. ಈ ಘಟಕಗಳು ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಇದ್ದರೂ ಇದರ ಲಾಭ ರೋಗಿಗಳಿಗೆ ಸಿಗುತ್ತಿಲ್ಲ. ಇದರಿಂದಾಗಿ ಸಾವಿರಾರು ರೂಪಾಯಿಯನ್ನು ಖಾಸಗಿ ಘಟಕಗಳಿಗೆ ವ್ಯಯಿಸಬೇಕಾಗಿದೆ.
‘ತುರ್ತು ನಿಗಾ ಘಟಕ ಬಲಪಡಿಸಬೇಕು’
‘ರಸ್ತೆ ಅಪಘಾತ, ಹೃದಯಾಘಾತ ಹಾಗೂ ಪಾರ್ಶ್ವವಾಯುವಿಗೆ ಒಳಗಾದಾಗ ಆದಷ್ಟು ಬೇಗ ತುರ್ತು ಚಿಕಿತ್ಸೆ ಒದಗಿಸಬೇಕಾಗುತ್ತದೆ. ಆದ್ದರಿಂದ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತುರ್ತು ನಿಗಾ ಘಟಕ ಬಲಪಡಿಸಿ, ಸೂಕ್ತವಾಗಿ ನಿರ್ವಹಣೆ ಮಾಡಬೇಕು. ಅತ್ಯಾಧುನಿಕ ಉಪಕರಣಗಳು ಇದ್ದರೂ ಅದನ್ನು ನಿರ್ವಹಿಸುವವರು ಇಲ್ಲದಿದ್ದರೆ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಅಗತ್ಯ ಪ್ರಮಾಣದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಒದಗಿಸಬೇಕು. ಕೆಲವು ವೇಳೆ ಚಿಕಿತ್ಸೆ ಫಲಕಾರಿಯಾಗದಿದ್ದರೆ ರೋಗಿಗಳ ಕಡೆಯವರು ಹಲ್ಲೆ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದಾಗಿಯೇ ಗಂಭೀರ ಸ್ಥಿತಿಯಲ್ಲಿ ಬಂದ ರೋಗಿಗಳನ್ನು ದಾಖಲಿಸಿಕೊಳ್ಳಲು ವೈದ್ಯರು ಹಿಂದೇಟು ಹಾಕುತ್ತಾರೆ. ಆದ್ದರಿಂದ ವೈದ್ಯರಿಗೆ ಸೂಕ್ತ ವಾತಾವರಣ ಕಲ್ಪಿಸಬೇಕು. ಔಷಧಗಳು ಸಮರ್ಪಕವಾಗಿ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆಗಳ ಮುಖ್ಯಸ್ಥರು ಜವಾಬ್ದಾರಿ ತೆಗೆದುಕೊಂಡು, ಗುಣಮಟ್ಟದ ಸೇವೆಗೆ ಶ್ರಮಿಸಬೇಕು.
-ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ
****
‘ಖಾಸಗಿ ಸೇವೆಗೆ ಕಡಿವಾಣ ಅಗತ್ಯ’
ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಎಲ್ಲಾ ಅವಧಿಯಲ್ಲಿ ಇರುವುದಿಲ್ಲ. 24x7 ಅವಧಿ ತಜ್ಞ ವೈದ್ಯರು ಕರ್ತವ್ಯದಲ್ಲಿ ಇರುವಂತೆ ನೋಡಿಕೊಳ್ಳಬೇಕು. ರೋಗಿಗಗಳು ಅಲೆದಾಡುವುದನ್ನು ತಪ್ಪಿಸಬೇಕು. ವೈದ್ಯರಿಗೆ ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ನೀಡುವಷ್ಟೇ ವೇತನ ನೀಡಿ, ಪ್ರೋತ್ಸಾಹಿಸಬೇಕು. ಆಗ ಕರ್ತವ್ಯದ ಅವಧಿ ಹಾಗೂ ನಂತರದ ಅವಧಿಯಲ್ಲಿ ಖಾಸಗಿ ಸೇವೆಗೆ ಕಡಿವಾಣ ಹಾಕಲು ಸಾಧ್ಯ. ಕಾರ್ಪೋರೆಟ್ ಆಸ್ಪತ್ರೆಗಳ ಲಾಬಿಗೆ ಮಣಿಯದೆ, ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಬೇಕು. ನವಜಾತ ಶಿಶುಗಳ ಐಸಿಯು, ಮಕ್ಕಳ ಐಸಿಯು ಹಾಗೂ ವೈದ್ಯಕೀಯ ಐಸಿಯು ಘಟಕಗಳನ್ನು ಬಲಪಡಿಸಿ, ಅಗತ್ಯ ವೈದ್ಯಕೀಯ ಉಪಕರಣಗಳನ್ನು ಒದಗಿಸಬೇಕು.
-ಡಾ.ಎಸ್. ಶ್ರೀನಿವಾಸ್, ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ
****
‘ಕೊರತೆ ನೀಗಿಸಲು ಸೂಕ್ತ ವೇತನ ನೀಡಿ’
ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಎಂಬಿಬಿಎಸ್ ವೈದ್ಯರಿದ್ದಾರೆ. ಆದರೆ, ಸರ್ಕಾರಿ ವ್ಯವಸ್ಥೆಯಡಿ ಸೂಕ್ತ ವೇತನ ಸಿಗದಿರುವುದರಿಂದ ಅವರು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ತೋರುತ್ತಿದ್ದಾರೆ. ವೇತನದ ಕಾರಣವೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಕೂಡ ಬಿಡುವಿನ ಅವಧಿಯಲ್ಲಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ವೈದ್ಯರಿಗೆ ಉತ್ತಮ ಸಂಬಳ ನೀಡಬೇಕು. ಅದೇ ರೀತಿ, ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ವೈದ್ಯರಿಗೆ ಅಗತ್ಯವಿರುವ ಉಪಕರಣಗಳನ್ನು ಕೂಡ ಒದಗಿಸಬೇಕು. ಕೇವಲ ಕಟ್ಟಡ ನಿರ್ಮಿಸಿದರೆ ಪ್ರಯೋಜನವಿಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕು. ಆಗ ಸರ್ಕಾರಿ ವೈದ್ಯಕೀಯ ವ್ಯವಸ್ಥೆ ಸುಧಾರಿಸುತ್ತದೆ.
-ಡಾ.ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯರು
****
‘ಮಾನವ ಸಂಪನ್ಮೂಲ ಅಗತ್ಯ’
ರಾಜ್ಯದಲ್ಲಿನ ಜಿಲ್ಲಾ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಅಗತ್ಯ ಮಾನವಸಂಪನ್ಮೂಲ ಒದಗಿಸಬೇಕು. ರಾಜ್ಯದ ಬಹುತೇಕ ಆಸ್ಪತ್ರೆಗಳು ವೈದ್ಯಕೀಯ ತಜ್ಞರ ಕೊರತೆ ಎದುರಿಸುತ್ತಿವೆ. ಕಿದ್ವಾಯಿಯಂತಹ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ವಿಭಾಗವಾರು ಆದರೂ ಪ್ರಾರಂಭಿಸಿ, ಚಿಕಿತ್ಸೆ ಒದಗಿಸಬೇಕು. ಕ್ಯಾನ್ಸರ್‌ನಂತಹ ಕಾಯಿಲೆಗೆ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದು, ಐದಾರು ತಿಂಗಳು ಇಲ್ಲಿ ಇರಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇದರಿಂದ ರೋಗಿಗಳು ಆರ್ಥಿಕವಾಗಿಯೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿಯೇ ಕ್ಯಾನ್ಸರ್ ತಪಾಸಣೆಗೆ ಕ್ರಮವಹಿಸಬೇಕು. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿದರೆ ವ್ಯಕ್ತಿಯೂ ಬೇಗ ಚೇತರಿಸಿಕೊಳ್ಳುತ್ತಾನೆ.
-ಡಾ.ಸಿ. ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿಕಟಪೂರ್ವ ನಿರ್ದೇಶಕ
****
‘ವೈದ್ಯಕೀಯ ಉಪಕರಣ ಒದಗಿಸಿ’
ಆಸ್ಪತ್ರೆಗಳಲ್ಲಿ ವೈದ್ಯರು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಅಗತ್ಯ ವೈದ್ಯಕೀಯ ಉಪಕರಣ ಹಾಗೂ ಅತ್ಯಾಧುನಿಕ ಯಂತ್ರಗಳನ್ನೂ ಒದಗಿಸಬೇಕು. ಅದರ ನಿರ್ವಹಣೆಗೂ ಕ್ರಮವಹಿಸಬೇಕು. ಕೇವಲ ಕಟ್ಟಡಗಳನ್ನು ನಿರ್ಮಿಸುವುದರಿಂದ ವೈದ್ಯಕೀಯ ವ್ಯವಸ್ಥೆ ಸುಧಾರಿಸುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅಗತ್ಯ ಸೌಲಭ್ಯ ಒದಗಿಸಬೇಕು. ಹೃದಯ ವಿಜ್ಞಾನ, ಕ್ಯಾನ್ಸರ್ ಸೇರಿ ವಿವಿಧ ಸೂಪರ್ ಸ್ಪೆಷಾಲಿಟಿಯನ್ನು ವಿಸ್ತರಿಸಬೇಕು. ಜಿಲ್ಲಾ ಆಸ್ಪತ್ರೆಗಳಲ್ಲಿ ನರರೋಗ ತಜ್ಞರು ಸೇರಿ ವಿವಿಧ ವೈದ್ಯರ ಕೊರತೆಯಿಂದ ಬೆಂಗಳೂರಿಗೆ ಶಿಫಾರಸು ಮಾಡಲಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ ವೈದ್ಯರ ನೇಮಕಾತಿಗೆ ಆದ್ಯತೆ ನೀಡಬೇಕು.
-ಡಾ.ಎಚ್.ಎಸ್. ಚಂದ್ರಶೇಖರ್, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ ಮಾಜಿ ನಿರ್ದೇಶಕ
****
ಮಾದರಿಯಾದ ‘ಜಯದೇವ’
ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೆ ಅಧಿಕ. ಇದಕ್ಕೆ ಕಾರಣ ಅಲ್ಲಿನ ವ್ಯವಸ್ಥೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ. ಆದರೆ, ಇದಕ್ಕೆ ಅಪವಾದ ಎಂಬ ರೀತಿಯಲ್ಲಿ ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಚಿಕಿತ್ಸೆಗೆ ಹೆಸರಾಗಿದೆ. ಅಮೆರಿಕದಂತಹ ಮುಂದುವರಿದ ದೇಶಗಳಿಂದಲೂ ಹೃದ್ರೋಗ ಚಿಕಿತ್ಸೆಗೆ ಇಲ್ಲಿಗೆ ಬರುತ್ತಿರುವುದು ವಿಶೇಷ. ತಾರಾ ಮೌಲ್ಯದ ಖಾಸಗಿ ಹೃದ್ರೋಗ ಆಸ್ಪತ್ರೆಗಳಲ್ಲಿ ಸಿಗುವಷ್ಟೇ ಗುಣಮಟ್ಟದ ಚಿಕಿತ್ಸೆ ಅಲ್ಲಿಗಿಂತ ಶೇ 60ರಷ್ಟು ಕಡಿಮೆ ದರದಲ್ಲಿ ಜಯದೇವದಲ್ಲಿ ಸಿಗುತ್ತಿದೆ. ಇದರಿಂದಾಗಿ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲೇ ಇದೆ.
ಈ ಸಂಸ್ಥೆಯು ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ನೇತೃತ್ವದಲ್ಲಿ ನಡೆಯುತ್ತಿದ್ದು, ‘ಚಿಕಿತ್ಸೆ ಮೊದಲು ಪಾವತಿ ನಂತರ’ ಎಂಬ ಪರಿಕಲ್ಪನೆಯಡಿ ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದೆ. ಬೆಂಗಳೂರಿನ ಜಯನಗರದಲ್ಲಿರುವ ಆಸ್ಪತ್ರೆಯು 1,050 ಹಾಸಿಗೆಗಳನ್ನು ಒಳಗೊಂಡಿದೆ. ಇದು ವಿಶ್ವದಲ್ಲೇ ಅತಿದೊಡ್ಡ ಹೃದ್ರೋಗ ಆಸ್ಪತ್ರೆಯಾಗಿದೆ. ಗುಜರಾತ್‌ನಲ್ಲಿರುವ ಯು.ಎನ್.ಮೆಹ್ತಾ ಆಸ್ಪತ್ರೆ ನಂತರದ ಸ್ಥಾನ ಹೊಂದಿದ್ದು, ಅಲ್ಲಿ ಚಿಕಿತ್ಸೆಗೆ 1,000 ಹಾಸಿಗೆಗಳು ಬಳಕೆಯಾಗುತ್ತಿವೆ. ಕಲಬುರಗಿ ಹಾಗೂ ಮೈಸೂರಿನ ಶಾಖೆಗಳ ಸೌಕರ್ಯಗಳು ಸೇರಿ ಜಯದೇವ ಸಂಸ್ಥೆಯು ಒಟ್ಟು 1,800 ಹಾಸಿಗೆಗಳನ್ನು ಹೊಂದಿದೆ.
ಪ್ರತಿ ವರ್ಷ 40 ಸಾವಿರಕ್ಕೂ ಹೆಚ್ಚು ರೋಗಿಗಳು ಜಯದೇವದಲ್ಲಿ ಆ್ಯಂಜಿಯೊಗ್ರಾಮ್, ಆ್ಯಂಜಿಯೋಪ್ಲಾಸ್ಟಿ, ಪೇಸ್‌ಮೇಕರ್ ಚಿಕಿತ್ಸೆ ಪಡೆಯುತ್ತಾರೆ. ದೇಶದಲ್ಲೇ ಅತಿ ಹೆಚ್ಚು ಕ್ಯಾಥ್‌ಲ್ಯಾಬ್ ಪ್ರಕ್ರಿಯೆಗಳನ್ನು ನಡೆಸುವ ಆಸ್ಪತ್ರೆಯಿದು. ನಿತ್ಯವೂ ಇಲ್ಲಿ 150 ರಿಂದ 175 ಆ್ಯಂಜಿಯೋಗ್ರಾಮ್ ಹಾಗೂ ಆ್ಯಂಜಿಯೊಪ್ಲಾಸ್ಟಿಗಳು, 20ಕ್ಕೂ ಹೆಚ್ಚು ತೆರೆದ ಹೃದಯದ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ.
ಕಲರ್ ಡಾಪ್ಲರ್ ಎಕೋ ಕಾರ್ಡಿಯೋಗ್ರಫಿ, 3ಡಿ ಎಕೋ, ಸ್ಟ್ರೆಸ್ ಎಕೋ, ಟಿಇಇ, ಸ್ಟ್ರೆಸ್ ಇಸಿಜಿ (ಟಿಎಂಟಿ)
ಕಾರ್ಡಿಯಾಕ್ ಕ್ಯಾತಟರೈಸೇಷನ್, ಕರೋನರಿ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ, ಸ್ಟೆಂಟಿಂಗ್, ವಾಲ್ವುಲೋಪ್ಲಾಸ್ಟಿ, ಡಿವೈಸ್ ಕ್ಲೋಷರ್ ಇತ್ಯಾದಿ ಸೌಲಭ್ಯ ಹೊಂದಿದ್ದು, ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ಅತ್ಯಾಧುನಿಕ ಸೌಲಭ್ಯ ಅಳವಡಿಸಿಕೊಂಡಿದೆ.
ಸರ್ಕಾರಿ ವೈದ್ಯಕೀಯ ವ್ಯವಸ್ಥೆ ಸುಧಾರಣೆಗೆ ತಜ್ಞರ ಸಲಹೆಗಳು
*ಖಾಸಗಿ ಆಸ್ಪತ್ರೆಗಳಂತೆ ವೈದ್ಯರಿಗೆ ಸೂಕ್ತ ವೇತನ ನೀಡಬೇಕು
*ಕೆಲಸದ ಅವಧಿ ಹಾಗೂ ನಂತರ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿನ ಸೇವೆಗೆ ಕಡಿವಾಣ ಹಾಕಬೇಕು
*ಆಸ್ಪತ್ರೆಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣ ಮತ್ತು ಸಿಬ್ಬಂದಿಗಳನ್ನು ಒದಗಿಸಿ, ಅದರ ನಿರ್ವಹಣೆ ಬಗ್ಗೆ ಸೂಕ್ತ ತರಬೇತಿ ನೀಡಬೇಕು
*ಹೊಸ ಆಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣಕ್ಕಿಂತ ಇರುವ ಆಸ್ಪತ್ರೆಗಳ ಬಲವರ್ದನೆಗೆ ಆದ್ಯತೆ ನೀಡಬೇಕು
*ಜಿಲ್ಲಾಮಟ್ಟದಲ್ಲಿ ತೀವ್ರ, ತುರ್ತು ನಿಗಾ ಘಟಕವನ್ನು ಬಲಪಡಿಸಬೇಕು
*ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು
*ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು
*ಲಂಚಕ್ಕೆ ಬೇಡಿಕೆ ಇಟ್ಟಲ್ಲಿ, ಸೇವೆಗೆ ನಿರಾಕರಿಸಿದಲ್ಲಿ ಕಾನೂನು ಅಡಿ ಕಠಿಣ ಕ್ರಮ ಕೈಗೊಳ್ಳಬೇಕು
*ಕಾರ್ಪೋರೆಟ್ ಆಸ್ಪತ್ರೆಗಳ ಲಾಬಿಗೆ ಮಣಿಯಬಾರದು
ಪೂರಕ ಮಾಹಿತಿ: ದಾವಣಗೆರೆ, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ ಬ್ಯುರೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.