ಬೆಂಗಳೂರು: ಪರಿಶಿಷ್ಟರ ಕಲ್ಯಾಣ ‘ನಿಧಿ’ಯಡಿ 2014–15ರಿಂದ 2022–23ರ ಅವಧಿಯಲ್ಲಿ ಹಂಚಿಕೆ ಮಾಡಿದ್ದ ಅನುದಾನಕ್ಕೆ ಕತ್ತರಿ ಹಾಕಿ ಅನ್ಯ ಯೋಜನೆಗಳಿಗೆ ₹ 15,553 ಕೋಟಿಗಳನ್ನು ಬಳಸಿಕೊಂಡಿರುವುದನ್ನು ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ. ಆದರೆ, ದಲಿತಪರ ಸಂಘಟನೆಗಳ ಅಧ್ಯಯನ– ಆರೋಪದ ಪ್ರಕಾರ ಈ ಮೊತ್ತ ₹ 70 ಸಾವಿರ ಕೋಟಿಗೂ ಹೆಚ್ಚು!
ಇನ್ನು, 2023–24 ಮತ್ತು ಪ್ರಸಕ್ತ ಸಾಲಿನಲ್ಲಿ (2024–25) ಇದೇ ನಿಧಿಯಿಂದ ಒಟ್ಟು ₹ 25,396.38 ಕೋಟಿಯನ್ನು ತನ್ನ ಮಹತ್ವಾಕಾಂಕ್ಷಿ ಪಂಚ ‘ಗ್ಯಾರಂಟಿ’ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಸರ್ಕಾರ ಹಂಚಿಕೆ ಮಾಡಿದೆ.
‘ಕರ್ನಾಟಕ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಟಿಎಸ್‌ಪಿ) (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಕಾಯ್ದೆ – 2013’ರ ಪ್ರಕಾರ, ತನ್ನ ವಾರ್ಷಿಕ ಬಜೆಟ್‌ನ ಶೇ 24.10ರಷ್ಟು ಮೊತ್ತವನ್ನು ಈ ಸಮುದಾಯಗಳ ಕಲ್ಯಾಣಕ್ಕೆ ರಾಜ್ಯ ಸರ್ಕಾರ ವೆಚ್ಚ ಮಾಡಬೇಕು. ಪರಿಶಿಷ್ಟ ಜಾತಿ ಸಮುದಾಯಕ್ಕೆ ಬಜೆಟ್‌ನ ಶೇ 17.15ರಷ್ಟು, ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಶೇ 6.95ರಷ್ಟು ವಿನಿಯೋಗಿಸಬೇಕು. ಈ ಅನುದಾನವನ್ನು ಬೇರೆ ಯೋಜನೆಗಳಿಗೆ ವಿಭಜಿಸಿ, ವರ್ಗಾಯಿಸುವುದಕ್ಕೆ ಅವಕಾಶವಿಲ್ಲ ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಕಾಯ್ದೆ ಜಾರಿಗೆ ಬಂದ ಆರಂಭದಲ್ಲಿ ₹ 15,894.66 ಕೋಟಿ ಇದ್ದ ಹಂಚಿಕೆ, ಪ್ರಸಕ್ತ ಸಾಲಿನಲ್ಲಿ ₹ 39,121.37 ಕೋಟಿಗೆ ಏರಿಕೆ ಆಗಿದೆ. ವೆಚ್ಚ ಮಾಡಲು ಈ ಅನುದಾನ 34 ಇಲಾಖೆಗಳಿಗೆ ಹರಿದು ಹಂಚಿ ಹೋಗುತ್ತದೆ. ಈ ಕಾಯ್ದೆಯಡಿ 2023–24ರವರೆಗೆ ಒಟ್ಟು ₹ 2.56 ಲಕ್ಷ ಕೋಟಿ ಅನುದಾನ ನಿಗದಿಪಡಿಸಿದ್ದು, ₹ 2.41 ಲಕ್ಷ ಕೋಟಿ ಬಿಡುಗಡೆಯಾಗಿದೆ. ಆ ಪೈಕಿ, ₹ 2.41 ಲಕ್ಷ ಕೋಟಿ (ಶೇ 94.22) ವೆಚ್ಚವಾಗಿದೆ.
ಕಾಯ್ದೆಯ ಸೆಕ್ಷನ್ 7 ‘ಡಿ’ ಅಡಿಯಲ್ಲಿ ಇರುವ ‘ಪರಿಭಾವಿತ ವೆಚ್ಚ’ (ಡೀಮ್ಡ್ ಎಕ್ಸ್‌ಪೆಂಡಿಚರ್) ಅವಕಾಶವನ್ನು ‘ತಮಗಿಷ್ಟವಾದ ರೀತಿಯಲ್ಲಿ ಬಳಕೆ‘ ಮಾಡಿಕೊಂಡ ಸರ್ಕಾರಗಳು, ಪರಿಶಿಷ್ಟರ ಕಲ್ಯಾಣಕ್ಕಷ್ಟೆ ಮೀಸಲಿಡಬೇಕಾದ ಹಣದಲ್ಲಿ ದೊಡ್ಡ ಪ್ರಮಾಣವನ್ನು ಅನ್ಯ ಉದ್ದೇಶಗಳಿಗೆ ವಿನಿಯೋಗಿಸುತ್ತಲೇ ಬಂದಿವೆ. ರಸ್ತೆ ದುರಸ್ತಿ, ನೀರಾವರಿ, ಕುಡಿಯುವ ನೀರು ಪೂರೈಕೆ, ವರ್ತುಲ ರಸ್ತೆ, ಮೇಲ್ಸೇತುವೆ ಹೀಗೆ ವಿವಿಧ ಕಾಮಗಾರಿಗಳಿಗೆ ಈ ಅನುದಾನ ಬಳಕೆಯಾಗಿದೆ. ಒಂದು ವೇಳೆ ಮೂಲಸೌಕರ್ಯ ಕಾಮಗಾರಿಯನ್ನು ವಿಭಜಿಸಲು ಸಾಧ್ಯವೇ ಆಗದಿದ್ದರೆ, ಇಡೀ ಯೋಜನೆಗೆ ವೆಚ್ಚ ಮಾಡಿದ ಅನುದಾನದ ಒಂದು ಭಾಗವನ್ನು ಪರಿಶಿಷ್ಟರ ಕಲ್ಯಾಣಕ್ಕಾಗಿ ಬಳಸಲಾಗಿದೆಯೆಂದು ಪರಿಗಣಿಸಲು ಸೆಕ್ಷನ್ 7 ‘ಡಿ’ಯಲ್ಲಿ ಅವಕಾಶ ನೀಡಲಾಗಿದೆ.
‘ರಸ್ತೆಗಳು, ಸೇತುವೆಗಳಂಥ ಮೂಲಸೌಕರ್ಯಗಳನ್ನು ಪರಿಶಿಷ್ಟರೂ ಬಳಸುತ್ತಾರೆ ಎಂಬ ನೆಪ ಮುಂದಿಟ್ಟುಕೊಂಡು ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಈ ಕಾಮಗಾರಿಗಳಿಗೆ ವಿನಿಯೋಗಿಸಲು ಈ ಸೆಕ್ಷನ್‌ನಡಿ ಅವಕಾಶ ಕಲ್ಪಿಸಲಾಗಿದೆ. ಅದರರ್ಥ, ‘ಪರಿಭಾವಿತ ವೆಚ್ಚ’ ಕೂಡ ಈ ಕಾಯ್ದೆಯ ಉದ್ದೇಶಕ್ಕೆ ಪೂರಕವಾಗಿಯೇ ಇರಬೇಕು ಎನ್ನುವುದು ಆಶಯ. ಆದರೆ, ಆಡಳಿತ ಚುಕ್ಕಾಣಿ ಹಿಡಿದ ಎಲ್ಲ ಪಕ್ಷಗಳು ಈ ಸೆಕ್ಷನ್‌ನ್ನು ತಮಗೆ ಬೇಕಾದಂತೆ ಅರ್ಥೈಸಿಕೊಂಡು ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬೇಕಾಬಿಟ್ಟಿ ಬಳಸಿಕೊಂಡಿವೆ’ ಎನ್ನುವುದು ದಲಿತಪರ ಸಂಘಟನೆಗಳ ಆರೋಪ.
ಶೋಷಿತ, ಅಲಕ್ಷಿತ ಸಮುದಾಯಗಳನ್ನು ಬಡತನದ ರೇಖೆಯಿಂದ ಮೇಲಕ್ಕೆತ್ತಿ, ಅಭಿವೃದ್ಧಿ ಪಥಕ್ಕೆ ತಂದು, ಸಮಾಜದ ಮುಖ್ಯವಾಹಿನಿಯ ಜೊತೆ ಬೆರೆಯುವಂತೆ ಮಾಡುವ ಉದ್ದೇಶದಿಂದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯನ್ನು 2013ರಲ್ಲಿ ರೂಪಿಸಿದ ಶ್ರೇಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ್ದು. ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಈ ಸಮುದಾಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದನ್ನು ಈ ಕಾಯ್ದೆ ಕಡ್ಡಾಯಗೊಳಿಸಿದೆ. ಪರಿಶಿಷ್ಟ ಸಮುದಾಯದ ಜನರಿಗೆ ನೇರವಾಗಿ ಅನುಕೂಲವಾಗುವಂತಹ ಕಾರ್ಯಕ್ರಮಗಳಿಗೆ ಮಾತ್ರ ಈ ಅನುದಾನವನ್ನು ಬಳಸಬೇಕು ಎಂಬ ನಿರ್ಬಂಧವನ್ನೂ ವಿಧಿಸಲಾಗಿದೆ.
2023ರಲ್ಲಿ ಮತ್ತೆ ಅಧಿಕಾರದ ಸೂತ್ರವನ್ನು ಸಿದ್ದರಾಮಯ್ಯ ಅವರು ಕೈಗೆತ್ತಿಕೊಳ್ಳುವವರೆಗಿನ ಒಂಬತ್ತು ವರ್ಷಗಳ ಅವಧಿಯಲ್ಲಿ ಕಾಯ್ದೆಯ ಸೆಕ್ಷನ್ 7 ‘ಡಿ’ ಮುಂದಿರಿಸಿಕೊಂಡು ಅನ್ಯ ಉದ್ದೇಶಗಳಿಗೆ ಪರಿಶಿಷ್ಟರ ನಿಧಿಯನ್ನು ಸರ್ಕಾರಗಳು ಹರಿಸಿವೆ. ಎಸ್‌ಸಿ–ಎಸ್ಟಿ ಸಮುದಾಯಗಳ ವರಮಾನ ಹೆಚ್ಚಳ, ಕೌಶಲ ಅಭಿವೃದ್ಧಿಗೆ ಪೂರಕವಾದ ಹಾಗೂ ಈ ಸಮುದಾಯಗಳು ವಾಸಿಸುವ ಪ್ರದೇಶದಲ್ಲಿ ಮೂಲಸೌಕರ್ಯ ಸೃಷ್ಟಿಸಲು ನಿಗದಿಯಾದ ಯೋಜನೆಗಳಿಗೆ ‘ಪರಿಭಾವಿತ ವೆಚ್ಚ’ ಬಳಕೆ ಆಗಬೇಕಿತ್ತು. ಇತರ ಯೋಜನೆಗಳಿಗೆ ವರ್ಗಾಯಿಸುವುದಿಲ್ಲ ಎಂದು ಭರವಸೆ ನೀಡುತ್ತಲೇ, ಪರಿಶಿಷ್ಟರ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿವೆ’ ಎಂದು ದಾಖಲೆಗಳ ಸಹಿತ ಬಿ.ಆರ್. ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಧರ ಕಲಿವೀರ ದೂರುವರು.
ಕಾಯ್ದೆಯ ಸೆಕ್ಷನ್ 7ರಲ್ಲಿ ಏನಿದೆ?
ಕಾಯ್ದೆಯ ಸೆಕ್ಷನ್ 7 ‘ಎ’ ಪ್ರಕಾರ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವ್ಯಕ್ತಿ ಮತ್ತು ಕುಟುಂಬಗಳ ಕಲ್ಯಾಣಕ್ಕೆ ಬಳಸಬೇಕು. 7 ‘ಬಿ’ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ವಾಸಿಸುವ ಸ್ಥಳಗಳು, ಅಂದರೆ ಕಾಲೊನಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬೇಕು. 7 ‘ಸಿ’ ಅಡಿಯಲ್ಲಿ ಎಲ್ಲ ಜಾತಿ, ಧರ್ಮಗಳಿಗೂ ಅನ್ವಯವಾಗುವ ಆರೋಗ್ಯ, ಶಿಕ್ಷಣ ಇತ್ಯಾದಿ ಕೆಲವು ಯೋಜನೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಮಾತ್ರ ಅನುದಾನ ಬಿಡುಗಡೆ ಮಾಡಬೇಕು. ಇನ್ನು 7 ‘ಡಿ’ ಪ್ರಕಾರ, ಮೂಲಸೌಕರ್ಯ ಯೋಜನೆಗಳಲ್ಲಿ ಬಳಕೆ ಮಾಡುವ ಅನುದಾನವನ್ನು ಪರಿಶಿಷ್ಟರ ಅಭಿವೃದ್ಧಿ ಉದ್ದೇಶಕ್ಕಾಗಿಯೇ ಬಳಸಲಾಗಿದೆ ಎಂದು ‘ಪರಿಭಾವಿಸಬಹುದು‘ ಎಂದು ವ್ಯಾಖ್ಯಾನಿಸಲಾಗಿದೆ.
‘ಮೊದಲ ಎರಡು ಸೆಕ್ಷನ್‌ಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯದ ಪರವಾಗಿವೆ. ಈ ಸೆಕ್ಷನ್‌ಗಳಡಿ ವೆಚ್ಚವಾಗುವ ಅನುದಾನವು ನೇರವಾಗಿ ಪರಿಶಿಷ್ಟರಿಗೇ ತಲುಪುತ್ತವೆ. ಆದರೆ, ನಂತರದ ಎರಡು ಸೆಕ್ಷನ್‌ಗಳು ಅನುದಾನದ ದುರ್ಬಳಕೆಗೆ ದಾರಿ ಮಾಡಿಕೊಡುತ್ತಿವೆ ಎನ್ನುವುದು ದಲಿತಪರ ಸಂಘಟನೆಗಳ ಆರೋಪ. ಅದರಲ್ಲೂ 7 ‘ಡಿ’ಯ ಅಡಿಯಲ್ಲಿ ವೆಚ್ಚವಾಗುವ ಹಣ ಕಾಯ್ದೆಯ ಮೂಲ ಆಶಯಕ್ಕೇ ವಿರುದ್ಧ. ಈ ಸೆಕ್ಷನ್‌ನ ಹೆಸರಿನಲ್ಲಿ ಮೇಲ್ಸೇತುವೆ ನಿರ್ಮಾಣದಂಥ ಯೋಜನೆಗಳಿಗೆ ಎಸ್‌ಸಿ–ಎಸ್‌ಟಿ ಕಲ್ಯಾಣ ನಿಧಿಯನ್ನು ವರ್ಗಾಯಿಸಿದರೆ, ಅದು ಸರ್ಕಾರ ಅಧಿಕಾರ ದುರ್ಬಳಕೆಯಲ್ಲದೆ ಮತ್ತೇನು? ಅದೇ ಹಣವನ್ನು ಎಸ್‌ಸಿ–ಎಸ್‌ಟಿ ಸಮುದಾಯಗಳೇ ಹೆಚ್ಚಾಗಿ ವಾಸಿಸುವ ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ ಸೃಷ್ಟಿಗೆ ಬಳಸಿದ್ದರೆ ಕಾಯ್ದೆಯ ಉದ್ದೇಶ ಈಡೇರಿದಂತಾಗುತ್ತಿತ್ತು’ ಎನ್ನುವುದು ದಲಿತ ಮುಖಂಡರ ಪ್ರತಿಪಾದನೆ.
ದಲಿತ ಸಂಘಟನೆಗಳ ಪ್ರಬಲ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7 ‘ಡಿ’ ಅನ್ನು ಕೊನೆಗೂ ರದ್ದುಗೊಳಿಸಿದೆ. 2023–24ನೇ ಸಾಲಿನ ಬಜೆಟ್ ಭಾಷಣದಲ್ಲಿ ಈ ವಿಚಾರವನ್ನು ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಿ, ಕಾಯ್ದೆಯಿಂದ ಈ ಸೆಕ್ಷನ್ ತೆಗೆದು ಹಾಕಲಾಗಿದೆ. ಈ ಸಂಬಂಧ ಫೆ. 3ರಂದು ಸರ್ಕಾರ ಆದೇಶವನ್ನೂ ಹೊರಡಿಸಿದೆ. ಆದರೆ, 2023–24ನೇ ಸಾಲಿನ ಒಟ್ಟು ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದಲ್ಲಿ ‘ಗ್ಯಾರಂಟಿ’ಗಳ ಅನುಷ್ಠಾನಕ್ಕೆ ₹ 11,114 ಕೋಟಿಯನ್ನು ವರ್ಗಾಯಿಸಿದ್ದ ತನ್ನ ನಿರ್ಧಾರವನ್ನು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿತ್ತು. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ‘ಗ್ಯಾರಂಟಿ’ಗಳಿಗೆ ₹ 14,282.38 ಕೋಟಿ ಹಂಚಿಕೆ ಮಾಡಿದೆ.
ಸೆಕ್ಷನ್ 7 ‘ಸಿ’ ಅಡಿ ‘ಗ್ಯಾರಂಟಿ’?
‘ರಾಜ್ಯ ಸರ್ಕಾರದ ಐದು ‘ಗ್ಯಾರಂಟಿ’ ಯೋಜನೆಗಳು ಎಲ್ಲ ಜಾತಿ, ಎಲ್ಲ ಧರ್ಮದವರಿಗೂ ಅನ್ವಯಿಸುತ್ತದೆ. ಕಳೆದ ಎರಡು ವರ್ಷಗಳಿಂದ ಈ ‘ಗ್ಯಾರಂಟಿ’ಗಳಿಗೆ ಸರ್ಕಾರ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಬಳಸಿಕೊಂಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಜನಸಂಖ್ಯೆಗೆ ಅನುಗುಣವಾಗಿ ಮಾತ್ರ (ಸೆಕ್ಷನ್ 7 ‘ಸಿ’ ಪ್ರಕಾರ) ‘ಗ್ಯಾರಂಟಿ’ ಯೋಜನೆಗಳಿಗೆ ಅನುದಾನ ಬಿಡುಗಡೆ ಆಗಬೇಕು. ಆದರೆ, ‘ಗ್ಯಾರಂಟಿ’ ಯೋಜನೆಗಳ ಫಲಾನುಭವಿ ಪರಿಶಿಷ್ಟರ ನಿಖರ ಸಂಖ್ಯೆ ಇನ್ನೂ ಲಭ್ಯ ಇಲ್ಲ. ಹೀಗಾಗಿ, ಈ ಸೆಕ್ಷನ್‌ನಲ್ಲಿಯೂ ಅನ್ಯರಿಗೆ ಹಣ ಬಳಕೆಯಾಗುತ್ತಿದೆ. ಅಷ್ಟೇ ಅಲ್ಲ, ಇಂತಹ ಸಾಮಾನ್ಯ ಯೋಜನೆಗಳಲ್ಲಿ ಎಲ್ಲ ಜಾತಿ, ಧರ್ಮದ ಫಲಾನುಭವಿಗಳಿಗೆ ಕಾಯ್ದೆಯಡಿ ಲಭ್ಯವಿರುವ ಪರಿಶಿಷ್ಟರ ಅನುದಾನವು ದಾರಿ ತಪ್ಪಿಸಿ ವರ್ಗವಣೆ ಮಾಡಲಾಗುತ್ತಿದೆ’ ಎಂದು ದಲಿತ ಮುಖಂಡರು ಆರೋಪಿಸುತ್ತಾರೆ.
‘ಗ್ಯಾರಂಟಿ’ಗಳ ಪೈಕಿ, ‘ಗೃಹ ಜ್ಯೋತಿ’ ಯೋಜನೆಯಲ್ಲಿ (ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್) ಪರಿಶಿಷ್ಟ ಕುಟುಂಬಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ನಿಧಿಯಿಂದ ಅನುದಾನ ಬಳಸಿದರೆ, ‘ಗೃಹ ಲಕ್ಷ್ಮಿ’ ಯೋಜನೆಯಲ್ಲಿ (ಪ್ರತಿ ತಿಂಗಳು ₹ 2 ಸಾವಿರ) ಪರಿಶಿಷ್ಟ ಜಾತಿಯ 22.45 ಲಕ್ಷ ಮತ್ತು ಪರಿಶಿಷ್ಟ ಪಂಗಡದ 8.66 ಲಕ್ಷ ಮಹಿಳೆಯರಿಗೆ ಈ ನಿಧಿಯಿಂದ ಹಣ ಹಂಚಿಕೆ ಮಾಡಲಾಗಿದೆ. ‘ಶಕ್ತಿ’ (ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ) ಮತ್ತು ಅನ್ನ ಭಾಗ್ಯ (ಹೆಚ್ಚುವರಿ 5 ಕಿಲೋ ಅಕ್ಕಿಯ ಬದಲು ಕಿಲೋಗೆ ₹ 170ರಂತೆ ಫಲಾನುಭವಿ ಖಾತೆಗೆ ನೇರ ನಗದು ವರ್ಗಾವಣೆ) ಯೋಜನೆಗಳಲ್ಲಿ ಪರಿಶಿಷ್ಟರ ನಿಖರ ಅಂಕಿಅಂಶ ಲಭ್ಯ ಇಲ್ಲ. ಹೀಗಾಗಿ, ಪರಿಶಿಷ್ಟರಿಗಷ್ಟೇ ಮೀಸಲಿಟ್ಟ ಹಣ, ಈ ಎರಡೂ ಯೋಜನೆಗಳಲ್ಲಿ ಅನ್ಯರ ಪಾಲಾಗುತ್ತಿದೆ. ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವವರಿಗೆ ಜಾತಿ ನೋಡಿ ಟಿಕೆಟ್ ಕೊಡುತ್ತೀರಾ? ‘ಅನ್ನ ಭಾಗ್ಯ’ದಲ್ಲಿ ಜಾತಿ ನೋಡಿ ಅಕ್ಕಿ ಕೊಡುತ್ತೀರಾ?’ ಎನ್ನುವುದು ಪರಿಶಿಷ್ಟರ ಸಮುದಾಯದವರ ಪ್ರಶ್ನೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ಸೆಕ್ಷನ್ 7 ‘ಡಿ’ ಮತ್ತು 7 ‘ಸಿ’ ಅಡಿ ಈವರೆಗೆ ಸುಮಾರು ₹ 70 ಸಾವಿರ ಕೋಟಿ ದುರ್ಬಳಕೆ ಆಗಿದೆ ಎನ್ನುವುದು ದಲಿತ ಸಂಘಟನೆಗಳ ಆರೋಪ. ಹೀಗಾಗಿ, ಈ ಎರಡೂ ಸೆಕ್ಷನ್‌ಗಳನ್ನು ರದ್ದು ಮಾಡಬೇಕು. ಅಲಕ್ಷಿತ ಸಮುದಾಯಗಳಿಗೆ ಮೀಸಲಾಗಿದ್ದ ಕಲ್ಯಾಣ ನಿಧಿ ವರ್ಗಾವಣೆಯಲ್ಲಿ ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಅದು ಇತರ ಅಧಿಕಾರಿಗಳಿಗೂ ಪಾಠ ಆಗಬೇಕು ಎಂದು ಆಗ್ರಹಿಸಿ ಎಂದು ಈ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿವೆ.
ಅನುದಾನ ತಲುಪುತ್ತಿಲ್ಲ: ಸಮಿತಿ
ಪರಿಶಿಷ್ಟರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮೀಸಲಿಡುತ್ತಿರುವ ಅನುದಾನವು ಸಮರ್ಪಕವಾಗಿ ಈ ಸಮುದಾಯಗಳ ಜನರನ್ನು ತಲುಪುತ್ತಿಲ್ಲ ಎಂದು ವಿಧಾನಮಂಡಲದ ಎಸ್‌ಸಿ ಮತ್ತು ಎಸ್‌ಟಿ ಕಲ್ಯಾಣ ಸಮಿತಿ ಈಗಾಗಲೇ ತನ್ನ ವರದಿಯಲ್ಲಿ ಹೇಳಿದೆ. ಪರಿಶಿಷ್ಟರ ಅಭ್ಯುದಯಕ್ಕಾಗಿ ಮೀಸಲಿಡುವ ಅನುದಾನವು ಅದೇ ಉದ್ದೇಶಕ್ಕೆ ಸದ್ಬಳಕೆ ಆಗುವುದನ್ನು ಖಾತರಿಪಡಿಸಲು ಹೊಸ ವ್ಯವಸ್ಥೆಯನ್ನು ರೂಪಿಸಬೇಕು ಎಂದೂ ಶಿಫಾರಸು ಮಾಡಿದೆ.
ಸಮಿತಿಯ ಅಂದಾಜಿನ ಪ್ರಕಾರ, ರಾಜ್ಯದಲ್ಲಿ ಎಸ್‌ಸಿ ಮತ್ತು ಎಸ್‌ಸಿ ಜನರ ಒಟ್ಟು ಸಂಖ್ಯೆ 1.08 ಕೋಟಿ. 2013ರಲ್ಲಿ ಕಾಯ್ದೆ ಬಂದಂದಿನಿಂದ ಈವರೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ₹ 2.56 ಲಕ್ಷ ಕೋಟಿ ಅನುದಾನ ಒದಗಿಸಲಾಗಿದೆ. ಈ ಮೊತ್ತದಲ್ಲಿ ದೊಡ್ಡ ಪಾಲು, ನಿರ್ದಿಷ್ಟಪಡಿಸಿದ ಫಲಾನುಭವಿಗಳನ್ನು ತಲುಪಿಲ್ಲ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿಯಲ್ಲಿ ಈವರೆಗೆ ಮಾಡಿರುವ ವೆಚ್ಚ ಮತ್ತು ಈ ಯೋಜನೆಗಳಿಗೆ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಗಳಿಗೆ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಶ್ವೇತಪತ್ರ ಪ್ರಕಟಿಸಬೇಕು. ಆ ಮೂಲಕ, ಪರಿಶಿಷ್ಟರ ಅಭಿವೃದ್ಧಿಗಾಗಿ ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಟ್ಟು, ಬಳಕೆ ಮಾಡಬೇಕೆಂಬ ಕಾಯ್ದೆಯ ಅನುಷ್ಠಾನದಲ್ಲಿನ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದೂ ಹೇಳಿದೆ.
ಈ ಯೋಜನೆಗಳ ಅಡಿಯಲ್ಲಿ ಮೀಸಲಿಟ್ಟ ಅನುದಾನವನ್ನು ಅನ್ಯ ಉದ್ದೇಶಗಳಿಗೆ ವರ್ಗಾಯಿಸಲು ಅವಕಾಶ ನೀಡುವುದರಿಂದ ಶೋಷಿತ ಸಮುದಾಯಗಳ ಜನರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿ ಒದಗಿಸಿದ ಅನುದಾನವನ್ನು ಸಂಪೂರ್ಣವಾಗಿ ನಿರ್ದಿಷ್ಟ ಉದ್ದೇಶಕ್ಕಾಗಿಯೇ ಬಳಸುವುದನ್ನು ಕಡ್ಡಾಯಗೊಳಿಸಬೇಕು. ಪರಿಶಿಷ್ಟರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳಿಗೆ ಮಾತ್ರವೇ ಈ ಅನುದಾನ ಬಳಕೆಯಾಗಬೇಕು ಎಂದೂ ಸಲಹೆ ನೀಡಿದೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯಲ್ಲಿರುವ ‘ದೋಷ’ಗಳೇ ಅನ್ಯ ಉದ್ದೇಶಕ್ಕೆ ಅನುದಾನ ಬಳಕೆಗೆ ದಾರಿ ಮಾಡಿಕೊಡುತ್ತಿದೆ. ಹೀಗಾಗಿ, ಸೆಕ್ಷನ್ 7 ‘ಡಿ’ಯನ್ನು ರದ್ದುಗೊಳಿಸಿದಂತೆ, 7 ‘ಸಿ’ಯನ್ನೂ ರದ್ದುಗೊಳಿಸಬೇಕೆನ್ನುವುದು ದಲಿತಪರ ಸಂಘಟನೆಗಳ ಬೇಡಿಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ 7 ‘ಸಿ’ಯನ್ನು ತೆಗೆದು ಹಾಕುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡು, ಅನ್ಯ ಉದ್ದೇಶಕ್ಕೆ ಹಣ ಬಳಕೆ ಆಗದಂತೆ ಕಡಿವಾಣ ಹಾಕಬಹುದೇ ಎನ್ನುವ ಪ್ರಶ್ನೆಗೆ ಸಮಯ ಉತ್ತರಿಸಲಿದೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ಉದ್ದೇಶಕ್ಕೆ ಪೂರಕವಾಗಿಯೇ ಕೆಲಸ ಮಾಡಬೇಕೆಂದು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಕಾಯ್ದೆಯಲ್ಲಿದ್ದ ಸೆಕ್ಷನ್ 7 ‘ಡಿ’ ರದ್ದು ಮಾಡಿದ ರೀತಿಯಲ್ಲೇ 7 ‘ಸಿ’ ಕೂಡ ರದ್ದು ಮಾಡಬೇಕೆಂಬ ಒತ್ತಾಯವಿದೆ. ಅದರ ಸಾಧಕ– ಬಾಧಕಗಳನ್ನು ಪರಿಶೀಲಿಸಲಾಗುವುದು. 10 ವರ್ಷಗಳಲ್ಲಿ ಈ ಯೋಜನೆಯಿಂದ ಪರಿಶಿಷ್ಟ ಸಮುದಾಯದ ಮೇಲೆ ಬೀರಿರುವ ಪರಿಣಾಮ, ಯೋಜನೆಗಳು ತಲುಪಿರುವ ಪ್ರಮಾಣ ಮತ್ತು ಪರಿಶಿಷ್ಟರ ಆರ್ಥಿಕ ಸ್ಥಿತಿ ಪ್ರಗತಿ ಕುರಿತು ಮೌಲ್ಯಮಾಪನ ಮಾಡಲಾಗುವುದು.ಸಿದ್ದರಾಮಯ್ಯ, ಮುಖ್ಯಮಂತ್ರಿ
ಪರಿಶಿಷ್ಟರ ಅಭಿವೃದ್ಧಿ– ಅಭ್ಯುದಯಕ್ಕೆ ಮೀಸಲಿಟ್ಟ ಅನುದಾನವನ್ನು ‘ಗ್ಯಾರಂಟಿ’ಗಳೂ ಸೇರಿದಂತೆ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿದ ರಾಜ್ಯ ಸರ್ಕಾರ ನಡೆ ಯಾವ ಕಾರಣಕ್ಕೂ ಒಪ್ಪುವಂಥದ್ದಲ್ಲ. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ನಾವು ಈಗಾಗಲೇ ಭೇಟಿ ಮಾಡಿ ನಮ್ಮ ತೀವ್ರ ವಿರೋಧ– ಆಕ್ಷೇಪವನ್ನು ವ್ಯಕ್ತಪಡಿಸಿದ್ದೇವೆ. ನಮ್ಮನ್ನೂ ಜೊತೆಗೆ ಕರೆದೊಯ್ದು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸುವ ಭರವಸೆಯನ್ನು ಅವರು ನೀಡಿದ್ದಾರೆ. ಬದುಕಿಗೆ ನೆಲೆ ಇಲ್ಲದಿರುವ ಸಮುದಾಯಗಳ ಕಲ್ಯಾಣಕ್ಕೆ ತೆಗೆದಿಡುವ ಅನುದಾನವನ್ನು ಆ ಸಮುದಾಯಕ್ಕೆ ಮಾತ್ರ ವಿನಿಯೋಗ ಮಾಡಬೇಕುಡಿ.ಜಿ. ಸಾಗರ್, ಸಂಚಾಲಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ
ಒಂಬತ್ತು ವರ್ಷಗಳಲ್ಲಿ (2014–15ರಿಂದ 2022–23) ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನದಲ್ಲಿ ಸೆಕ್ಷನ್ 3 ‘ಡಿ’ ಅಡಿ ₹ 15555 ಕೋಟಿ ಅನ್ಯ ಉದ್ದೇಶಗಳಿಗೆ ಬಳಕೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಈ ಯೋಜನೆಯ ರಾಜ್ಯ ನಿರ್ದೇಶಕರ ಕೇಂದ್ರ ಕಚೇರಿ ತಿಳಿಸಿದೆ. ಆದರೆ ನಾನು ಮತ್ತು ನಮ್ಮ ದಲಿತ ಸಂಘಟನೆಗಳ ರಾಜ್ಯ ಮುಖಂಡರ ಅಧ್ಯಯನ ಮತ್ತು ಪರಿಶೀಲನೆಯಲ್ಲಿ ಈ ಸೆಕ್ಷನ್ ದುರ್ಬಳಕೆ ಮಾಡಿಕೊಂಡು ಸುಮಾರು ₹ 40 ಸಾವಿರ ಕೋಟಿ ಅನ್ಯ ಯೋಜನೆಗಳಿಗೆ ಬಳಕೆ ಮಾಡಿರುವುದು ಗೊತ್ತಾಗಿದೆ. ಅಲ್ಲದೆ ಸೆಕ್ಷನ್ 7 ‘ಸಿ’ ಅಡಿಯಲ್ಲಿ ಸುಮಾರು ₹ 30 ಸಾವಿರ ಕೋಟಿ ದುರ್ಬಳಕೆಯಾಗಿದೆ. ಕಾಯ್ದೆಯ ಸೆಕ್ಷನ್ 7 ‘ಡಿ’ ರದ್ದು ಮಾಡಿರುವ ಸಿದ್ದರಾಮಯ್ಯ ಸರ್ಕಾರ ಸೆಕ್ಷನ್ ‘ಸಿ’ಯನ್ನೂ ರದ್ದು ಮಾಡಬೇಕು. ಇಲ್ಲದೇ ಇದ್ದರೆ ಈ ಸೆಕ್ಷನ್ ಅಡಿ ಅನುದಾನ ದುರ್ಬಳಕೆಯಾಗುವ ಸಾಧ್ಯತೆಯಿದೆ. ಪರಿಶಿಷ್ಟರ ಅನುದಾನ ದುರ್ಬಳಕೆ ಮುಂದುವರಿಯುವುದನ್ನು ತಡೆಹಿಡಿಯಲು ಸೆಕ್ಷನ್ ‘ಸಿ’ ರದ್ದುಗೊಳಿಸುವುದೂ ಸರ್ಕಾರದ ಕರ್ತವ್ಯ.
–ಶ್ರೀಧರ ಕಲಿವೀರ ಸಂಸ್ಥಾಪಕ ರಾಜ್ಯಾಧ್ಯಕ್ಷರು ಬಿ.ಆರ್. ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟ ರಾಜ್ಯ ಸಮಿತಿ
ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುತ್ತಿರುವುದು ದಲಿತ ಸಮುದಾಯಕ್ಕೆ ರಾಜ್ಯ ಸರ್ಕಾರ ಮಾಡುತ್ತಿರುವ ಅತಿ ದೊಡ್ಡ ಅನ್ಯಾಯ. ಉಚಿತ ಎಂದು ಘೋಷಿಸಿದ ‘ಗ್ಯಾರಂಟಿ’ ಯೋಜನೆಗಳಿಗೂ ಈ ಅನುದಾನವನ್ನು ಹಂಚಿಕೆ ಮಾಡಿರುವುದು ವಂಚನೆಯಲ್ಲದೆ ಇನ್ನೇನು? ಪ್ರತಿವರ್ಷ ಈ ನಿಧಿಯನ್ನು ಎಲ್ಲ ಇಲಾಖೆಗಳಿಗೆ ಹಣ ಹಂಚುವ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯನ್ನು ನೋಡಲ್ ಏಜೆನ್ಸಿಯಾಗಿ ಮಾಡಿದೆ. ವರ್ಷಾಂತ್ಯದಲ್ಲಿ ಈ ಇಲಾಖೆಗಳು ವೆಚ್ಚ ತೋರಿಸುತ್ತವೆ. ಆದರೆ ಅದನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆಯೇ ಇಲ್ಲ. ಹಣ ದುರ್ಬಳಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಕಾಯ್ದೆಯಡಿ ಅವಕಾಶವಿದೆ. ಆದರೆ ಕೋಟಿ ಕೋಟಿ ಹಣ ದುರುಪಯೋಗ ಆಗುತ್ತಿದ್ದರೂ ಯಾರ ಮೇಲೂ ಕ್ರಮ ಆಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಶಿಕ್ಷಣ ಆರೋಗ್ಯ ಭೂಮಿ ವಸತಿ ಯೋಜನೆಗಳನ್ನು ಒದಗಿಸಿ ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶ ಈಡೇರುವುದಾದರೂ ಹೇಗೆ?
–ಮಾವಳ್ಳಿ ಶಂಕರ್ ರಾಜ್ಯ ಪ್ರಧಾನ ಸಂಚಾಲಕ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)
ಬೆಳಗಾವಿ: ‘7ಸಿ ಸೆಕ್ಷನ್ ಯೋಜನೆಯಡಿ ಎಸ್‌ಸಿಪಿ ಟಿಎಸ್‌ಪಿ ಯೋಜನೆ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡಿದ್ದು ನಿಜ’ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಎಸ್‌ಟಿಪಿ ಟಿಎಸ್‌ಪಿ ಕಾರ್ಯಕ್ರಮ ದೇಶದಲ್ಲಿಯೇ ಅತ್ಯುತ್ತಮವಾದದ್ದು. ತಳಮಟ್ಟದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆಯೇ ಮಾಡಿದ್ದರು. ಅದೇ ರೀತಿ 7ಸಿ 7ಡಿ ಸೆಕ್ಷನ್‌ಗಳನ್ನು ಹಾಕಿ ಕಾನೂನಾತ್ಮಕಗೊಳಿಸಿದ್ದಾರೆ. ವಿಶೇಷ ಸಂದರ್ಭದಲ್ಲಿ ಉತ್ತಮ ಕಾರ್ಯಗಳಿಗೆ ಆ ಅನುದಾನ ಬಳಸಬಹುದು ಎಂಬುದನ್ನು ಸೆಕ್ಷನ್ 7ಸಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದರು. ‘ಹೆಣ್ಣು ಮಕ್ಕಳು ಸದೃಢವಾಗಲಿ ಎಂಬ ಉದ್ದೇಶದಿಂದ ಗ್ಯಾರಂಟಿಗಳಿಗೆ ಈ ಅನುದಾನ ಬಳಸಿಕೊಂಡಿದೆ. ಆದರೆ ಈ ಅನುದಾನವನ್ನು ಎಸ್ಸಿ ಎಸ್ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಳ್ಳುತ್ತೇನೆ’ ಎಂದರು.
ಎಸ್‌ಸಿಎಸ್‌ಪಿ–ಟಿಎಸ್‌ಪಿ ಕಾಯ್ದೆ ನಿಯಮದಂತೆಯೇ ಹಣ ಬಳಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಲ್ಲಿನ ಪರಿಶಿಷ್ಟ ಫಲಾನುಭವಿಗಳಿಗೇ ಈ ಹಣ ವಿನಿಯೋಗವಾಗಿದೆ. ಅನುದಾನ ದುರುಪಯೋಗ ನಡೆದಿಲ್ಲ. ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿ ಅನ್ಯ ಉದ್ದೇಶಗಳಿಗೆ ಹಣ ಬಳಕೆ ಮಾಡಬಾರದು ಎನ್ನುವ ಕಾರಣಕ್ಕಾಗಿಯೇ ಕಾಯ್ದೆಯ ಸೆಕ್ಷನ್ 7 ‘ಡಿ’ಯನ್ನು ನಮ್ಮ ಸರ್ಕಾರ ರದ್ದುಪಡಿಸಿದೆ.
–ಎಚ್.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ
2023–24ನೇ ಸಾಲಿನಿಂದ ಸೆಕ್ಷನ್ 7 ‘ಡಿ’ರದ್ದಾಗಿದೆ. ಹೀಗಾಗಿ ಅನ್ಯ ಉದ್ದೇಶಕ್ಕೆ ಬಳಕೆಗೆ ಅವಕಾಶ ಇಲ್ಲ
(ಅಂಕಿಅಂಶದ ಮಾಹಿತಿ: ಸಮಾಜ ಕಲ್ಯಾಣ ಇಲಾಖೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.