ಬೆಂಗಳೂರು: ಇತ್ತ ಪಠ್ಯಪುಸ್ತಕ ಪರಿಷ್ಕರಣೆ ವಿಷಯ ಬಿರುಗಾಳಿ ಎಬ್ಬಿಸಿದೆ. ಅತ್ತ ಸದ್ದಿಲ್ಲದೆ ಬಹಿರಂಗವಾದ ‘ರಾಷ್ಟ್ರೀಯ ಸಾಧನಾ ಸಮೀಕ್ಷೆ–2021’ಯ (ಎನ್‌ಎಎಸ್) ವರದಿಯಲ್ಲಿರುವ ರಾಜ್ಯದ ಶಾಲಾ ಮಕ್ಕಳಶೈಕ್ಷಣಿಕ ಗುಣಮಟ್ಟದ ಅಂಕಿ–ಅಂಶ, ಇಡೀ ವ್ಯವಸ್ಥೆ ಅಧೋಗತಿಗೆ ಇಳಿದಿರುವ ದುಃಸ್ಥಿತಿಯ ಪುಟಗಳನ್ನು ತೆರೆದಿಟ್ಟಿದೆ. ಕಲಿಸುವ ಶಿಕ್ಷಕರೂ ಕಲಿಯುವುದನ್ನು ನಿಲ್ಲಿಸಿರುವ ಚಿತ್ರಣವನ್ನು ಬಿಚ್ಚಿಟ್ಟಿದೆ!
ಅದರಲ್ಲೂ, ಕೋವಿಡ್‌ನಿಂದಾಗಿ ಶಿಕ್ಷಣ ವಲಯದಲ್ಲಿ ‘ಶೂನ್ಯ’ ಆವರಿಸಿದೆ. ಈ ಅವಧಿಯಲ್ಲಿ ಶಾಲೆಗಳ ಮುಖವನ್ನೇ ನೋಡದ, ಭೌತಿಕ ತರಗತಿಗಳಿಲ್ಲದೆಪರ್ಯಾಯ ಬೋಧನಾ ವ್ಯವಸ್ಥೆಗೆ (ಆನ್‌ಲೈನ್) ಅನಿವಾರ್ಯವಾಗಿ ಆತುಕೊಂಡ ಮಕ್ಕಳ ಶೈಕ್ಷಣಿಕ ‘ಅವಸ್ಥೆ’ ಯಾವ ಮಟ್ಟಕ್ಕೆ ಇಳಿದಿತ್ತು ಎನ್ನುವುದಕ್ಕೆ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿದ್ದ ತರಹೇವಾರಿ ಸಂದೇಶಗಳು ಪುರಾವೆಯಾಗಿದ್ದವು. ಕಲಿಕೆ ಇನ್ನೇನು ಚೇತರಿಕೆಯತ್ತ ಮರಳಿ ಮುಖಮಾಡಬೇಕು ಎನ್ನುವಷ್ಟರಲ್ಲಿ ಏನನ್ನು ಕಲಿಸಬೇಕು, ಏನನ್ನು ಕಲಿಸಬಾರದೆಂಬ ಚರ್ಚೆ ಜೋರಾಗಿದೆ.
ಕೇಂದ್ರ ಶಿಕ್ಷಣ ಇಲಾಖೆಯು 3, 5, 8 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 2021ರ ನವೆಂಬರ್‌ನಲ್ಲಿ ನಡೆಸಿದ 2020–21ನೇ ಸಾಲಿನ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಸ್ಯಾಂಪಲ್ ಸಮೀಕ್ಷೆಯಲ್ಲಿ ರಾಜ್ಯದ ಆಯ್ದ 7,210 ಶಾಲೆಗಳ 31,875 ಶಿಕ್ಷಕರು, 2,11,705 ಮಕ್ಕಳು ಭಾಗವಹಿಸಿದ್ದರು. ವರದಿಯಲ್ಲಿರುವ ಮಕ್ಕಳ ಕಲಿಕಾಮಟ್ಟ ಮತ್ತುಶಿಕ್ಷಣ– ಶಿಕ್ಷಕರ ಬೋಧನಾ ಗುಣಮಟ್ಟ, ಕೋವಿಡ್ ಸಾಂಕ್ರಾಮಿಕ ಉಂಟು ಮಾಡಿದ ಪರಿಣಾಮದ ನೋಟ ಗಾಬರಿ ಹುಟ್ಟಿಸುತ್ತದೆ.
ಹಾಗೆಂದು, ಕೋವಿಡ್‌ಗೂ ಮೊದಲು ಶೈಕ್ಷಣಿಕ ಗುಣಮಟ್ಟ ಉತ್ತಮವಿತ್ತು ಎಂದಲ್ಲ. 10ನೇ ತರಗತಿಯ ಮೆಟ್ಟಿಲು ಹತ್ತಿದ್ದ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ವಿರುದ್ಧಾರ್ಥಕ ಪದ ಬರೆಯಲು, 7ನೇ ತರಗತಿ ವಿದ್ಯಾರ್ಥಿಗಳಿಗೆ ಆಹಾರದ ಮೂಲ ಪರಿಕಲ್ಪನೆ, 4ನೇ ತರಗತಿ ಮಕ್ಕಳಿಗೆ ಕಾಡು ಪ್ರಾಣಿಗಳನ್ನೇ ಗುರುತಿಸಲು ಬರುವುದಿಲ್ಲ ಎನ್ನುವುದು ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ‘ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್’ (ಕೆಎಸ್‌ಕ್ಯೂಎಎಸಿ) ನಡೆಸಿದ್ದ ‘ಗಣತಿ ಆಧಾರಿತ ರಾಜ್ಯ ಸಾಧನಾ ಸಮೀಕ್ಷೆ–2018’ರ ವರದಿಯಲ್ಲಿತ್ತು.
ಅದಕ್ಕೂ 10 ವರ್ಷಗಳ ಹಿಂದೆ ನಡೆದ ಸಮೀಕ್ಷೆ (2008), ಶೇ 45ರಷ್ಟು ಮಕ್ಕಳಿಗೆ ಗಣಿತದಲ್ಲಿ ವ್ಯವಕಲನ ಗೊತ್ತಿಲ್ಲ, ಶೇ 33 ಮಕ್ಕಳು ಒಂದನೇ ತರಗತಿಯ ಪಠ್ಯ ಓದಲಾರರೆಂದೂ ತೋರಿಸಿತ್ತು!
ಶಿಕ್ಷಣದ ಗುಣಮಟ್ಟವು ಮೂಲಸೌಕರ್ಯ ಲಭ್ಯತೆ, ಬಳಕೆ ಮತ್ತು ವಿದ್ಯಾರ್ಥಿಗಳ ಕಲಿಕಾ ಸಾಧನೆಯೊಂದಿಗೆ ಥಳಕು ಹಾಕಿಕೊಂಡಿದೆ. ಆದರೆ, ಕಳೆದ ಐದು ವರ್ಷಗಳಲ್ಲಿ ಅದನ್ನು ಅಳೆದು, ಸುಧಾರಿಸುವ ಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿಲ್ಲ ಎನ್ನುವುದು ಸತ್ಯ.
2019–20, 2020–21, 2021–22ನೇ ಸಾಲಿನಲ್ಲಿ ಕೆಎಸ್‌ಕ್ಯೂಎಎಸಿ ಯಾವುದೇ ಸಮೀಕ್ಷೆ ಕೈಗೊಂಡಿಲ್ಲ. ಸಮೀಕ್ಷೆ ನಡೆಸುವ ಉದ್ದೇಶಕ್ಕಾಗಿ 2019–20ರಲ್ಲಿ ₹ 10 ಕೋಟಿ ಅನುದಾನವನ್ನು ಕೆಎಸ್‌ಕ್ಯೂಎಎಸಿಗೆ ರಾಜ್ಯ ಸರ್ಕಾರ ನೀಡಿತ್ತು. ಆ ಸಾಲಿನಲ್ಲಿ ಕೇಂದ್ರ ಸರ್ಕಾರ ‘ರಾಷ್ಟ್ರೀಯ ಸಾಧನಾ ಸಮೀಕ್ಷೆ’ ನಡೆಸಲಿದೆ ಎಂಬ ಕಾರಣಕ್ಕೆ ರಾಜ್ಯಮಟ್ಟದಲ್ಲಿ ಸಮೀಕ್ಷೆ ನಡೆಸುವ ಯೋಜನೆ ಕೈ ಬಿಡಲಾಗಿತ್ತು. ಆದರೆ, ಆ ಸಾಲಿನಲ್ಲಿ ಬಿಡುಗಡೆ ಯಾಗಿದ್ದ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಆಗಿದೆ. ಕೋವಿಡ್ ಕಾರಣಕ್ಕೆ ಎರಡು ವರ್ಷ (2020–21, 2021–22) ಶಾಲೆಗಳು ನಡೆದಿಲ್ಲ ವೆಂಬ ನೆಪ ಮುಂದಿಟ್ಟು ಮಕ್ಕಳ ಕಲಿಕಾ ಮಟ್ಟ ಅಳೆಯುವ ಉಸಾಬರಿಗೆ ರಾಜ್ಯ ಸರ್ಕಾರ ಹೋಗಿಲ್ಲ.
ವಿದ್ಯಾರ್ಥಿಗಳ ಸಾಧನಾ ಸಮೀಕ್ಷೆಯನ್ನು ಸಂಪೂರ್ಣವಾಗಿ ವಸ್ತುನಿಷ್ಠವಾಗಿ ಅಧ್ಯಯನ ಮಾಡಿದಾಗ ಮಕ್ಕಳು ಶಾಲೆಗಳಲ್ಲಿ ಏನನ್ನು ಕಲಿತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಸಮೀಕ್ಷೆಯಲ್ಲಿ 4ರಿಂದ 10ನೇ ತರಗತಿವರೆಗಿನ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳ ಸಾಧನೆಯನ್ನು ಬಹುಆಯ್ಕೆ ಮಾದರಿ ಪ್ರಶ್ನೆಗಳಿಗೆ ಉತ್ತರ ಪಡೆಯುವ ಮೂಲಕ ವಿಶ್ಲೇಷಿಸಲಾಗುತ್ತದೆ. ಈ ಪ್ರಶ್ನೆಗಳಿಗೆ ಮಕ್ಕಳು ನೀಡುವ ಉತ್ತರಗಳ ಆಧಾರದಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂದು ಅರ್ಥೈಸಿಕೊಳ್ಳಬಹುದು.
‘1ನೇ ತರಗತಿಯಿಂದ 9ನೆಯ ತರಗತಿಯವರೆಗೆ ಅನುತ್ತೀರ್ಣರಹಿತ ಪದ್ಧತಿಯು 10ನೇ ತರಗತಿಯ ಮಕ್ಕಳ ಕಳಪೆ ಸಾಧನೆಗೆ ಪ್ರಮುಖ ಕಾರಣ ಎನ್ನುವುದು ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ವಿಶ್ಲೇಷಿಸಿದಾಗ ಗೊತ್ತಾಗುತ್ತದೆ. ಹೇಗೂ ಪಾಸಾಗುತ್ತೇವೆ ಎಂಬ ನಂಬಿಕೆ ಮಕ್ಕಳಲ್ಲಿದೆ. ಹೀಗಾಗಿ, ಅಧ್ಯಯನದ ಬಗ್ಗೆ ಗಾಂಭೀರ್ಯ ಉಳಿದಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಅದರಲ್ಲೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ವಿದ್ಯಾರ್ಥಿಗಳೂ ಓದಲು ಬರೆಯಲು ಹಾಗೂ ಲೆಕ್ಕ ಮಾಡಲು ಅಸಮರ್ಥರಾಗಿದ್ದಾರೆ. ವರ್ಣಮಾಲೆ, ಕೂಡುವ, ಕಳೆಯುವ ಲೆಕ್ಕಗಳನ್ನು 9ನೆಯ ತರಗತಿಗೆ ಹೇಳಿ ಕೊಡಬೇಕಾದ ಪರಿಸ್ಥಿತಿ ಬಂದೊದಗಿದೆ’ ಎನ್ನುವುದು ಶಿಕ್ಷಣ ತಜ್ಞರ ವಾದ.
ರಾಜ್ಯದಲ್ಲಿ ಮೂಲಸೌಲಭ್ಯ ಕೊರತೆಯಿಂದ ಅನೇಕ ಸರ್ಕಾರಿ ಶಾಲೆಗಳು ವೆಂಟಿಲೇಟರ್ ಮೇಲಿರುವ ರೋಗಿಗಳ ಸ್ಥಿತಿಯಲ್ಲಿವೆ. ಕರ್ನಾಟಕದಲ್ಲಿ ಪ್ರತಿ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ಘೋಷಿಸಿದರೂ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಉತ್ತಮ ಕಲಿಕೆ ವ್ಯವಸ್ಥೆ, ಮೂಲಸೌಕರ್ಯದ ಕೊರತೆ ಇದೆ ಎಂದರೆ ಘೋಷಿಸಿದ ಹಣವೆಲ್ಲ ಎಲ್ಲಿ ತಲುಪಿದೆ? ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ ಎನ್ನುವುದು ಶೈಕ್ಷಣಿಕ ವಲಯದ ಒತ್ತಾಯ.
‘ಕಲಿಕಾಮಟ್ಟ ಗ್ರಹಿಸಲು ಈ ವರ್ಷ ಸಮೀಕ್ಷೆ’
ಪ್ರಸಕ್ತ ಸಾಲಿನಲ್ಲಿ (2022–23) ರಾಜ್ಯಮಟ್ಟದ ಸಾಧನಾ ಸಮೀಕ್ಷೆ ನಡೆಸುವ ಪ್ರಸ್ತಾವನ್ನು ‘ಸಮಗ್ರ ಶಿಕ್ಷಣ ಕರ್ನಾಟಕ’ (ಎಸ್‌ಎಸ್‌ಕೆ) ಮೂಲಕ ಕೇಂದ್ರ ಶಿಕ್ಷಣ ಇಲಾಖೆಯ ಯೋಜನಾ ಮಂಜೂರಾತಿ ಮಂಡಳಿಗೆ (ಪಿಎಬಿ) ಕೆಎಸ್‌ಕ್ಯೂಎಎಸಿ ಕಳುಹಿಸಿದೆ. 2021ನೇ ಸಾಲಿನಲ್ಲಿ 3, 5, 8 ಮತ್ತು 10ನೇ ತರಗತಿಯ ಮಕ್ಕಳ ರಾಷ್ಟ್ರೀಯ ಸಾಧನಾ ಸಮೀಕ್ಷೆ ನಡೆದಿರುವುದರಿಂದ ಪ್ರಸಕ್ತ ಸಾಲಿನಲ್ಲಿ (2022–23) ಒಟ್ಟು ಸರ್ಕಾರಿ ಶಾಲೆಗಳ ಪೈಕಿ ಶೇ 10ರಷ್ಟು ಶಾಲೆಗಳ (ಸುಮಾರು 4,700) ಶಾಲೆಗಳ 4, 6, 7 ಮತ್ತು 9ನೇ ತರಗತಿಯ 1.81 ಕೋಟಿ ಮಕ್ಕಳ ಸಮೀಕ್ಷೆಯನ್ನು ₹ 1.89 ಕೋಟಿ ವೆಚ್ಚದಲ್ಲಿ (ಕೇಂದ್ರದ ಅನುದಾನ) ಕೈಗೊಳ್ಳುವ ಅಂಶ ಈ ಪ್ರಸ್ತಾವದಲ್ಲಿದೆ.
ಈ ಪ್ರಸ್ತಾವಕ್ಕೆ ಪಿಎಬಿ ಅನುಮೋದನೆ ನೀಡದೇ ಇದ್ದರೆ, ಕೆಎಸ್‌ಕ್ಯೂಎಎಸಿ ಮೂಲಕ, 2018ನೇ ಸಾಲಿನಲ್ಲಿ ನಡೆದ ಸಮೀಕ್ಷೆ ಮುಂದುವರಿದ ಭಾಗವಾಗಿ, 8,9 ಮತ್ತು 10ನೇ ತರಗತಿಯ ಮಕ್ಕಳ ಕಲಿಕಾಮಟ್ಟ ಗ್ರಹಿಸಲು ಈ ವರ್ಷ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಎಸ್‌ಕ್ಯೂಎಎಸಿ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸ್ಯಾಂಪಲ್ ಸಮೀಕ್ಷೆಗೆ ಕೆಎಸ್‌ಕ್ಯೂಎಎಸಿಯಲ್ಲಿರುವ ₹ 1.50 ಕೋಟಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.