ಮಂಗಳೂರು: ಡಾ.ಶಿವರಾಮ ಕಾರಂತರ ಹೆಸರಿನಲ್ಲಿ ಪುತ್ತೂರಿನಲ್ಲಿ ಆರಂಭಿಸಿದ್ದ ‘ಡಾ.ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಸಮಿತಿ’ಯ ಇತ್ತೀಚಿನ ಕಾರ್ಯವೈಖರಿ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಸಮಿತಿಯ ಚಟುವಟಿಕೆಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬದಲು ಪುತ್ತೂರು ಉಪವಿಭಾಗಾಧಿಕಾರಿಯ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ. ಸಮಿತಿಯು ಒಂದಷ್ಟು ಜಾಗ, ಸ್ವಂತ ಕಟ್ಟಡ ಹಾಗೂ ಈಜುಕೊಳವನ್ನು ಹೊಂದಿರುವುದು ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದು ಇದಕ್ಕೆ ಕಾರಣ. ‘ಈ ಕಟ್ಟಡ ಹಾಗೂ ಈಜುಕೊಳದಿಂದ ಬರುವ ಆದಾಯದಿಂದ ಸಾಹಿತ್ಯಕ ಹಾಗೂ ರಂಗ ಚಟುವಟಿಕೆಗಳು ನಡೆಯುತ್ತಿವೆಯೇ ವಿನಾ ಇಲಾಖೆ ನೀಡುವ ಅನುದಾನವು ಸಿಬ್ಬಂದಿಯ ವೇತನ, ವಿದ್ಯುತ್ ಬಿಲ್, ಕಟ್ಟಡದ ನಿರ್ವಹಣೆಗೂ ಸಾಕಾಗಲಾರದು’ ಎಂಬುದನ್ನು ಅಧಿಕಾರಿಗಳೂ ಒಪ್ಪುತ್ತಾರೆ.
ಸಮಿತಿಯು ಈಚಿನ ದಿನಗಳಲ್ಲಿ ಜನರಿಂದ ದೂರವಾಗುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಕೆಲವು ಸದಸ್ಯರ ನಡವಳಿಕೆ ಕಾರಣ ಎಂದು ಸ್ಥಳೀಯರು ದೂರುತ್ತಾರೆ. ಸಾಹಿತಿಗಳು, ಚಿಂತಕರು ಟ್ರಸ್ಟ್‌ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಚಟುವಟಿಕೆಗಳು ಕುಂಠಿತವಾಗುತ್ತಿವೆ ಎನ್ನುತ್ತಾರೆ ಸ್ಥಳೀಯರು.
‘ಈಜುಕೊಳ ಇರುವುದರಿಂದ ಸಮಿತಿಯ ಆವರಣಕ್ಕೆ ಜನರು ಬರುತ್ತಿದ್ದಾರೆ. ಬರೀ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಿತಿಯು ಸೀಮಿತವಾಗಿದ್ದರೆ ಖಂಡಿತವಾಗಿಯೂ ಸ್ಥಳೀಯರ ನೆರವು ಸಿಗಲಾರದು’ ಎಂದು ಸಮಿತಿಯ ಸದಸ್ಯರೇ ಹೇಳುತ್ತಾರೆ.
ಇನ್ನೊಂದೆಡೆ, ಉಡುಪಿ ಜಿಲ್ಲೆಯ ಕೋಟದಲ್ಲಿರುವ ಶಿವರಾಮ ಕಾರಂತ ಟ್ರಸ್ಟ್, ಸತತವಾಗಿ ಚಟುವಟಿಕೆಗಳನ್ನು ನಡೆಸುತ್ತಿದೆ. ಕೋಟದ ಥೀಂ ಪಾರ್ಕ್‌ನಲ್ಲಿ ಪ್ರತಿ ತಿಂಗಳು ‘ಸಾಹಿತ್ಯ ಸಡಗರ’ ನಡೆಯುತ್ತಿವೆ.
2014ರಿಂದ ವಾರಾಂತ್ಯದ ಶಿಬಿರಗಳು ನಡೆಯುತ್ತಿದ್ದು ಮಕ್ಕಳಿಗೆ ಯಕ್ಷಗಾನ, ನೃತ್ಯ, ಭರತನಾಟ್ಯ, ಸಂಗೀತ ಹಾಗೂ ಯೋಗ ಕಲಿಸಲಾಗುತ್ತಿದೆ. ಕಾರಂತರ ಕುರಿತ ಪುಸ್ತಕಗಳನ್ನು ಮಕ್ಕಳಿಗೆ ಕೊಟ್ಟು ಚಿಣ್ಣರ ಚೇತನ, ಕಾರಂತ ಚೇತನ ಕಾರ್ಯಕ್ರಮಗಳ ಮೂಲಕ ಕಾರಂತಜ್ಜನನ್ನು ಪರಿಚಯಿಸುವ ಕಾರ್ಯ ನಡೆಯುತ್ತಿದೆ.
2005ರಿಂದ ಪ್ರತಿವರ್ಷ ಅ.1ರಿಂದ 10ವರೆಗೆ ಕಾರಂತ ಉತ್ಸವ ನಡೆಯುತ್ತದೆ. ಕಾರಂತರ ಜನ್ಮದಿನವಾದಅ.10ರಂದು ಸಾಧಕರಿಗೆ ರಾಜ್ಯಮಟ್ಟದ ಹುಟ್ಟೂರ ಪುರಸ್ಕಾರ ಪ್ರಶಸ್ತಿ ನೀಡಲಾಗುತ್ತಿದೆ. ಏಪ್ರಿಲ್ ಮೇ ತಿಂಗಳಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯುತ್ತದೆ.
ಮಾಹಿತಿ: ಬಾಲಚಂದ್ರ ಎಚ್. (ಉಡುಪಿ), ಉದಯ ಯು. (ಮಂಗಳೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.