ಮೊಬೈಲ್ ವ್ಯಸನಿಗಳು ದಿನಕ್ಕೆ 70 ರಿಂದ 80 ಕ್ಕೂ ಹೆಚ್ಚು ಬಾರಿ ಮೊಬೈಲ್ ನೋಡುತ್ತಾರೆ. ವೃತ್ತಿಪರ ವಿಷಯಗಳನ್ನು ಬಿಟ್ಟು ರಂಜನೆ ಅಥವಾ ಇತರ ಉದ್ದೇಶಗಳಿಗೇ ಮಗ್ನರಾದರೆ ಅದನ್ನು ವ್ಯಸನವೆಂದೇ ಪರಿಣಿಸಲಾಗುತ್ತದೆ. ಅದರಲ್ಲಿ ಕೆಲವು ವರ್ಗೀಕರಣಗಳಿದ್ದು, ಅವು ಹೀಗಿವೆ...
ಝೀರೊ ಇನ್‌ಬಾಕ್ಸ್ ಸಿಂಡ್ರೋಮ್: ಈ ಲಕ್ಷಣ ಹೊಂದಿರುವವರು ತಮ್ಮ ಇ–ಮೇಲ್, ವಾಟ್ಸ್ ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಬಂದಿರುವುದನ್ನೆಲ್ಲ ನೋಡಲೇಬೇಕು ಎಂಬ ಮನೋಭಾವ ಹೊಂದಿರುತ್ತಾರೆ. ಪ್ರತಿಯೊಂದನ್ನೂ ತಪ್ಪದೇ ನೋಡುತ್ತಾರೆ. ಎಲ್ಲಿದ್ದರೂ, ಹೇಗಿದ್ದರೂ ಅಗತ್ಯವಿರಲಿ ಬಿಡಲಿ ಪದೇ ಪದೇ ಮೊಬೈಲ್ ನೋಡುತ್ತಲೇ ಇರುತ್ತಾರೆ.
ಫ್ಯಾಂಟಮ್ ವೈಬ್ರೇಷನ್ ಸಿಂಡ್ರೋಮ್: ಸಾಮಾನ್ಯವಾಗಿ ಯುವಕರು ಮತ್ತು ವಯಸ್ಕರು ತಮ್ಮದೇ ಆದ ವಿಶಾಲ ಆನ್‌ಲೈನ್ ಸ್ನೇಹಿತರ ಬಳಗವನ್ನು ಹೊಂದಿರುತ್ತಾರೆ. ಹೀಗಾಗಿ ಯಾರಾದರೂ ತಮಗೆ ಕರೆ ಮಾಡಬಹುದು ಅಥವಾ ಸಂದೇಶ ಕಳಿಸಬಹುದು ಎಂಬ ಹುಸಿ ನಿರೀಕ್ಷೆಯಲ್ಲಿ ಇರುತ್ತಾರೆ. ತಮ್ಮ ಫೋನ್ ರಿಂಗಣಿಸುತ್ತಿದೆ ಅಥವಾ ವೈಬ್ರೇಷನ್ ಆಗುತ್ತಿದೆ ಎಂದು ಭ್ರಮೆಗೆ ಒಳಗಾಗುತ್ತಾರೆ. ವಾಸ್ತವದಲ್ಲಿ ಫೋನ್ ವೈಬ್ರೇಷನ್ ಆಗುತ್ತಿರುವುದಿಲ್ಲ. ಸದಾ ಹುಸಿ ನಿರೀಕ್ಷೆಯಲ್ಲಿ ಇರುವುದರಿಂದ ಪದೇ ಪದೇ ಮೊಬೈಲ್ ಬಳಕೆ ಮಾಡುತ್ತಲೇ ಇರುತ್ತಾರೆ.
ಲೈಕ್ ಸಿಂಡ್ರೋಮ್: ಇದರಲ್ಲಿ ಸದಾ ಲೈಕ್‌ಗಳ ನಿರೀಕ್ಷೆಯಲ್ಲಿ ಇರುತ್ತಾರೆ. ಕೆಲವರು ಫೇಸ್‌ಬುಕ್, ವಾಟ್ಸ್‌ಆ್ಯಪ್, ಟಿಕ್‌ಟಾಕ್, ಇನ್‌ಸ್ಟಾಗ್ರಾಂ ಮೂಲಕ ನೂರಾರು ಗೆಳೆಯರನ್ನು ಸಂಪಾದಿಸಿರುತ್ತಾರೆ. ಅದರಲ್ಲಿ ನಿಜವಾದ ಗೆಳೆಯರು ಒಬ್ಬರೊ ಇಬ್ಬರೊ ಇರುತ್ತಾರೆ. ಆದರೆ, ಅದನ್ನು ಮರೆ ಮಾಚುವ ಅವರು ನೂರಾರು ಗೆಳೆಯರು ಇದ್ದಾರೆ ಎಂಬುದನ್ನು ಹೇಳಿಕೊಳ್ಳುವುದೇ ಅವರಿಗೆ ಹೆಗ್ಗಳಿಕೆ ಎನಿಸುತ್ತದೆ. ಸೋಷಿಯಲ್ ಬ್ರೇನ್ ಹೈಪೋಥಿಸಿಸ್ ಮೂಲಕ ಈ ವಿದ್ಯಮಾನ ವಿಶ್ಲೇಷಣೆಗೆ ಒಳಪಡಿಸಿದಾಗ, ಸೋಷಿಯಲ್ ಮೀಡಿಯಾದ ಸ್ನೇಹಿತರು ಎಲ್ಲ ಕಾಲಕ್ಕೂ ನೆರವಿಗೆ ಬರುವುದಿಲ್ಲ. ಮೊದಲ ಐದು ಆಪ್ತ ಗೆಳೆಯರು ಮಾತ್ರ ನೆರವಿಗೆ ಬರುತ್ತಾರೆ. ಆ ಬಳಿಕ 15 ಮಂದಿ ಉತ್ತಮ ಗೆಳೆಯರು, ಅಗತ್ಯವಿದ್ದಾಗ ಅವರೂ ನೆರವಿಗೆ ಬರಬಹುದು. ಆ ನಂತರದ 50 ಮಂದಿ ಬರೀ ಗೆಳೆಯರು. ನೆರವಿಗೆ ಬಂದರೂ ಬರಬಹುದು ಇಲ್ಲದಿದ್ದರೆ ಇಲ್ಲ. ಇವರ್‍ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ತಾನು ತುಂಬಾ ಜನರ ಸಂಪರ್ಕದಲ್ಲಿ ಇದ್ದೇನೆ ಎಂದು ಭಾವಿಸಿ ‘ಪ್ರಖ್ಯಾತ’ ನೆಂಬ ಭ್ರಮೆಯಲ್ಲಿ ಇರುತ್ತಾರೆ. ಹೀಗಾಗಿ ಬಹಳ ಕಾಲ ಸಾಮಾಜಿಕ ಜಾಲತಾಣದಲ್ಲೇ ಸಮಯ ಕಳೆಯುತ್ತಾರೆ.
ಸೆಲ್ಫಿಟಿಸ್: ಸೆಲ್ಫಿ ತೆಗೆದುಕೊಳ್ಳುವ ಅಭ್ಯಾಸ ಎಲ್ಲ ವಯೋಮಾನದವರಲ್ಲೂ ಇದೆ. ಸೆಲ್ಫಿ ತೆಗೆದುಕೊಳ್ಳುವುದು ಒಂದು ಗೀಳಾಗಿ ಪರಿವರ್ತನೆಗೊಂಡರೆ ಅದಕ್ಕೆ ಸೆಲ್ಫಿಟಿಸ್ ಎನ್ನಲಾಗುತ್ತದೆ. ಅಮೆರಿಕನ್ ಸೈಕಿಯಾಟ್ರಿಕ್ ಅಸೋಷಿಯೇಷನ್ ಇದಕ್ಕೊಂದು ಮಾನದಂಡ ರೂಪಿಸಿದೆ. ಆ ಪ್ರಕಾರ, ದಿನಕ್ಕೆ ಒಂದು ಅಥವಾ ಎರಡು ಸೆಲ್ಫಿ ತೆಗೆದುಕೊಂಡರೆ ಅದು ಸಹಜ ನಡವಳಿಕೆ. 3ರಿಂದ 4 ಸೆಲ್ಫಿಗಳನ್ನು ತೆಗೆದುಕೊಂಡರೆ ತೀವ್ರ ಸ್ವರೂಪದ ಸಮಸ್ಯೆ, 5ಕ್ಕೂ ಹೆಚ್ಚು ಸೆಲ್ಫಿಗಳನ್ನು ತೆಗೆದುಕೊಂಡರೆ ದೀರ್ಘಾವಧಿ ಸಮಸ್ಯೆ ಎಂದು ಪರಿಗಣಿಸಲಾಗುತ್ತದೆ. ಹೆಚ್ಚು ಸೆಲ್ಫಿ ತೆಗೆದಷ್ಟೂ ಭುಜದ ಮೇಲೆ ಒತ್ತಡ ಬೀಳಲಾರಂಭಿಸುತ್ತದೆ.
ಏಕಾಗ್ರತೆಗೆ ಭಂಗ: ವಿದ್ಯಾರ್ಥಿಗಳು ಪಾಠ ಓದುವಾಗ ಪದೇ ಪದೇ ಮೊಬೈಲ್‌ನಲ್ಲಿ ವಾಟ್ಸ್ ಆ್ಯಪ್ ಅಥವಾ ಇನ್ನೇನಾದರೂ ನೋಡುತ್ತಲೇ ಇರುತ್ತಾರೆ. ಇದರಿಂದ ಅವರ ಗಮನ ಬೇರೆಡೆ ಹೋಗುತ್ತದೆ. ಮತ್ತೆ ಓದಿನಲ್ಲಿ ಮಗ್ನ ಆಗಬೇಕಾದರೆ 2.5 ನಿಮಿಷಗಳು ಬೇಕಾಗುತ್ತವೆ. ಪುಸ್ತಕ ಹಿಡಿದಾಕ್ಷಣ ಏಕಾಗ್ರತೆ ಬರುವುದಿಲ್ಲ. ಪದೇ ಪದೇ ನೋಡುವುದರಿಂದ ಓದಿದ್ದು ಮನಸ್ಸಿನಲ್ಲಿ ದಾಖಲಾಗುವುದಿಲ್ಲ. ಒಂದು ಗಂಟೆ ಓದಿದ್ದರೂ ಓದಿದ್ದು ಮನಸ್ಸಿನ ಆಳಕ್ಕೆ ಇಳಿದಿರುವುದಿಲ್ಲ.
ಬಿಎಸ್‌ಎನ್‌ಎಲ್ ಮದ್ದು
‘ಬಿಎಸ್‌ಎನ್‌ಎಲ್ ಬ್ರಾಡ್ ಬ್ಯಾಂಡ್ ತುಂಬಾ ನಿಧಾನ ಎಂಬ ದೂರು ಸಾಮಾನ್ಯ. ಮನೋವಿಜ್ಞಾನಿಗಳ ಪ್ರಕಾರ ಇದು ಆರೋಗ್ಯಕರ. ಏಕೆಂದರೆ, ಮಂದಗತಿಯ ಬಿಎಸ್‌ಎನ್‌ಎಲ್ ಬಳಕೆಯಿಂದಾಗಿ ಮಕ್ಕಳು ಮೊಬೈಲ್‌ನಲ್ಲೇ ಮುಳುಗುವುದಕ್ಕೆ ಕಡಿವಾಣ ಬೀಳುತ್ತದೆ. ಸಾಮಾನ್ಯವಾಗಿ ಮಕ್ಕಳು ಹೈಸ್ಪೀಡ್ ಡೇಟಾ ಬಯಸುತ್ತಾರೆ. ಬಿಎಸ್‌ಎನ್‌ಎಲ್ ಬಳಸುವುದರಿಂದ ಅದು ಸಾಧ್ಯವಾಗುವುದಿಲ್ಲ’ ಎಂದು ಡಾ. ಮನೋಜ್ ಕುಮಾರ್ ಶರ್ಮಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.