ADVERTISEMENT

ಕ್ರೀಡಾ ಹಬ್‌ಗೂ ಕವಿದಿದೆ ಮಬ್ಬು

ಕೋರಮಂಗಲ ಸ್ಟೇಡಿಯಂ ಸ್ಪರ್ಧೆಗಳಿಗಷ್ಟೇ ಸೀಮಿತ l ಕಂಠೀರವ ಕ್ರೀಡಾಂಗಣದ ಮೇಲೆ ಹೆಚ್ಚಿನ ಒತ್ತಡ

ವಿಕ್ರಂ ಕಾಂತಿಕೆರೆ
Published 8 ಜೂನ್ 2019, 19:45 IST
Last Updated 8 ಜೂನ್ 2019, 19:45 IST
ಸ್ಪರ್ಧೆಗಷ್ಟೇ ಸೀಮಿತವಾಗಿರುವ ಕೋರಮಂಗಲ ಒಳಾಂಗಣ ಕ್ರೀಡಾಂಗಣ
ಸ್ಪರ್ಧೆಗಷ್ಟೇ ಸೀಮಿತವಾಗಿರುವ ಕೋರಮಂಗಲ ಒಳಾಂಗಣ ಕ್ರೀಡಾಂಗಣ   

ಬೆಂಗಳೂರು: ಡಿಸೆಂಬರ್ 2015. ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೊ ಕುಸ್ತಿ ಲೀಗ್‌ನ ಪಂದ್ಯಗಳು ನಡೆದ ಸಂದರ್ಭ. ಕ್ರೀಡಾಂಗಣದ ನಿರ್ವಹಣೆಯಲ್ಲಿ ಆಗಿರುವ ಲೋಪಗಳು ಆಗ ‘ದುರ್ವಾಸನೆ’ ಬೀರಿದ್ದವು. ಮುಖ್ಯವಾಗಿ ಶೌಚಾಲಯದ ಸಮಸ್ಯೆ ಸಾರ್ವಜನಿಕರನ್ನು ಕಾಡಿತ್ತು. ಕುಸ್ತಿಪಟುಗಳಿಗೆ ತಾತ್ಕಾಲಿಕ ಶೌಚಾಲಯ ನಿರ್ಮಿಸಿ ಸಂಘಟಕರು ಕೈತೊಳೆದುಕೊಂಡರು. ಆದರೆ ಪ್ರೇಕ್ಷಕರು ಕಿಬ್ಬೊಟ್ಟೆ ಕಟ್ಟಿಕೊಂಡೇ ಸ್ಪರ್ಧೆ ವೀಕ್ಷಿಸಬೇಕಾದ ದು:ಸ್ಥಿತಿ ನಿರ್ಮಾಣವಾಗಿತ್ತು.

ಇದಾಗಿ ಎರಡು ವರ್ಷಗಳ ನಂತರ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ (ಪಿಬಿಎಲ್) ಪಂದ್ಯಗಳಿಗೆ ಕೋರಮಂಗಲ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಕುಸ್ತಿ ಸಂದರ್ಭದಲ್ಲಿ ಹೋಗಿದ್ದ ಮಾನ ಕ್ರೀಡಾ ಆಡಳಿತಗಾರರಿಗೆ ಮತ್ತೆ ನೆನಪಾದದ್ದು ಪಿಬಿಎಲ್ ಸಂದರ್ಭದಲ್ಲಿ. ತರಾತುರಿಯಲ್ಲಿ ‘ಸ್ವಚ್ಛತಾ ಅಭಿಯಾನ’ ಮಾಡಿ ಅವರು ಮಾನಹಾನಿಯಿಂದ ಬಚಾವಾದರು.

ಇದೇ ಸಂದರ್ಭದಲ್ಲಿ, ಇತ್ತ ಕಂಠೀರವ ಕ್ರೀಡಾಂಗಣದಲ್ಲೂ ನಿರ್ವಹಣೆಯಲ್ಲಿ ಆಗಿರುವ ದೋಷಗಳು ಕಣ್ಣಿಗೆ ರಾಚಿದವು. ಮಳೆಗಾಲದಲ್ಲಿ ನಡೆದ ಏಷ್ಯನ್ ಫುಟ್‌ಬಾಲ್ ಫೆಡರೇಷನ್‌ನ ಅರ್ಹತಾ ಸುತ್ತಿನ ಪಂದ್ಯಗಳ ಸಂದರ್ಭದಲ್ಲಿ ಗ್ಯಾಲರಿಗಳ ಚಾವಣಿಯಿಂದ ಜಿನುಗುತ್ತಿದ್ದ ನೀರು ಪ್ರೇಕ್ಷಕರ ಬಟ್ಟೆಗಳನ್ನು ಮಾತ್ರವಲ್ಲ, ಪತ್ರಕರ್ತರ ಲ್ಯಾಪ್‌ಟಾಪ್‌ಗಳನ್ನೂ ಹಾಳುಗೆಡವಿದ್ದವು.

ADVERTISEMENT

ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯಗಳು ನಡೆಯುವಾಗ ಶೌಚಾಲಯದ ಸಮಸ್ಯೆಗಳು ಕಾಡಿದ್ದವು. ಈಗ ಈ ತೊಂದರೆಗಳಿಗೆ ಪರಿಹಾರ ಸಿಕ್ಕಿದೆ. ಆದರೆ ಸಿಂಥೆಟಿಕ್ ಟ್ರ್ಯಾಕ್‌ನ ನಿರ್ವಹಣೆ ಹಳಿ ತಪ್ಪಿದ್ದರಿಂದ ಅಥ್ಲೀಟ್‌ಗಳ ಕೋಪಕ್ಕೂ ಕ್ರೀಡಾಪ್ರೇಮಿಗಳ ಶಾಪಕ್ಕೂ ಕ್ರೀಡಾ ಇಲಾಖೆ ಗುರಿಯಾಗಿದೆ.

ರಾಷ್ಟ್ರದ ಕ್ರೀಡಾ ಹಬ್ ಎಂದೇ ಗುರುತಿಸಲಾಗಿರುವ ಉದ್ಯಾನ ನಗರಿಯೂ ಕ್ರೀಡಾ ಸೌಲಭ್ಯಗಳ ಕೊರತೆಯಿಂದ ದೂರ ಉಳಿದಿಲ್ಲ ಎಂಬುದು ಗುಟ್ಟಿನ ವಿಷಯವೇನಲ್ಲ. ಪ್ರತಿ ಬಾರಿ ಬಜೆಟ್‌ನಲ್ಲಿ ಕ್ರೀಡೆಗೆ ತೆಗೆದಿಡುವ ಕೋಟ್ಯಂತರ ರೂಪಾಯಿ ಮೊತ್ತದಲ್ಲಿ ಬಹುಪಾಲು ಬೆಂಗಳೂರಿನ ಕ್ರೀಡಾ ಅಭಿವೃದ್ಧಿಗೆ ಮೀಸಲಿರುತ್ತದೆ. ಆದರೆ ಉದ್ದೇಶಿತ ಗುರಿ ತಲುಪಲು ಆಗುತ್ತಿಲ್ಲ ಎಂಬ ಕೊರಗು ಕ್ರೀಡಾ ವಲಯವನ್ನು ಸದಾ ಕಾಡುತ್ತಿದೆ.

ಒತ್ತಡ?: ಉತ್ತಮ ಕ್ರೀಡಾ ವಾತಾವರಣ ಇರುವುದರಿಂದ ಬೆಂಗಳೂರಿನಲ್ಲಿ ಕ್ರೀಡೆಗೆ ಬೇಡಿಕೆ ಹೆಚ್ಚು ಇದೆ. ಈ ಅತಿ ಉತ್ಸಾಹವೇ ಇಲ್ಲಿ ಸಮಸ್ಯೆಗಳು ತಲೆದೋರಲು ಕಾರಣ ಎಂಬುದು ಅಧಿಕಾರಿಗಳ ಅಂಬೋಣ. ಇದನ್ನು ಸರ್ಕಾರದ ಗಮನಕ್ಕೆ ತಂದು, ಪರಿಹಾರ ಮಾರ್ಗವನ್ನೂ ಕಂಡುಕೊಳ್ಳಲಾಗಿದೆ.

‘ನಿರ್ವಹಣೆ ಎಂದಾಕ್ಷಣ ಕೇವಲ ಶೌಚಾಲಯ ಗಳೇ ಹೆಚ್ಚಿನವರ ಗಮನಕ್ಕೆ ಬರುತ್ತವೆ. ಕಂಠೀರವ ಮತ್ತು ಕೋರಮಂಗಲ ಕ್ರೀಡಾಂಗಣಗಳಲ್ಲಿರುವ ಶೌಚಾಲಯಗಳನ್ನು ಈಗ ಸರಿಯಾಗಿ ನಿರ್ವಹಿಸಲಾಗುತ್ತಿದೆ. ಸಾಕಷ್ಟು ಮಾನವಶಕ್ತಿ ಇರುವುದರಿಂದ ಇತರ ಕೆಲಸಗಳೂ ಸುಸೂತ್ರವಾಗಿ ನಡೆಯುತ್ತಿವೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಆದರೆ ಕೋಚ್‌ಗಳು ಮತ್ತು ಕ್ರೀಡಾಪಟುಗಳ ಪ್ರಕಾರ ನಿರ್ವಹಣೆಯ ಕೊರತೆಯೇ ಸಮಸ್ಯೆಗಳಿಗೆ ಮೂಲ ಕಾರಣ. ಕೋರಮಂಗಲ ಕ್ರೀಡಾಂಗಣದಲ್ಲಿ ಅಭ್ಯಾಸ, ತರಬೇತಿ ಇತ್ಯಾದಿ ನಡೆಯುವುದೇ ಇಲ್ಲ. ಅಂತರರಾಷ್ಟ್ರೀಯ-ರಾಷ್ಟ್ರೀಯ ಸ್ಪರ್ಧೆಗಳು ಇದ್ದಾಗ ಮಾತ್ರ ಅಲ್ಲಿನ ಅಂಗಣಗಳನ್ನು ಬಳಸಲಾಗುತ್ತದೆ. ಉಳಿದ ಸಮಯದಲ್ಲಿ ಅತ್ತ ತಿರುಗಿ ನೋಡುವವರೂ ಇಲ್ಲ. ಹೀಗಾಗಿ ತೊಂದರೆಯಾಗುತ್ತದೆ ಎಂಬುದು ಅವರ ವಿಶ್ಲೇಷಣೆ. ಅಯಾ ಕ್ರೀಡೆಗೆ ಸಂಬಂಧಪಟ್ಟ ಸಂಸ್ಥೆಗಳ ಪೈಕಿ ಹೆಚ್ಚಿನವು ಕ್ರೀಡಾಂಗಣಗಳ ಬಗ್ಗೆ ಕಾಳಜಿ ವಹಿಸದೇ ಇರುವುದು ಕೂಡ ಸಮಸ್ಯೆಗಳು ಉಲ್ಬಣಿಸಲು ಕಾರಣವಾಗಿವೆ ಎಂದೂ ಕೆಲವರು ಅಭಿಪ್ರಾಯಪಡುತ್ತಾರೆ.

ಸದ್ಯದಲ್ಲೇ: ಕಳೆದ ಬಾರಿ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಮೂರು ಕ್ರೀಡಾಂಗಣಳ ನಿರ್ಮಾಣ ಕಾರ್ಯ ಬೆಂಗಳೂರು ನಗರದಲ್ಲಿ ಸದ್ಯದಲ್ಲೇ ಆರಂಭವಾಗಲಿದೆ. ದೇವನಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಮತ್ತು ತಾವರೆಕರೆಯಲ್ಲಿ ₹ 20 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿತ್ತು. ‘ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ಸಿಗುವುದೊಂದೇ ಬಾಕಿ ಇದ್ದು ಆ ಕಾರ್ಯ ಆದ ಕೂಡಲೇ ಕಾಮಗಾರಿ ಆರಂಭವಾಗಲಿದೆ. ಇಲ್ಲಿ ಏಳು ಬಗೆಯ ಕ್ರೀಡೆಗಳ ಅಭ್ಯಾಸಕ್ಕೆ ಅವಕಾಶವಿದೆ. ಕಂಠೀರವ ಕ್ರೀಡಾಂಗಣದ ಮೇಲಿನ ಒತ್ತಡ ಕಡಿಮೆ ಮಾಡಲು ಇದು ನೆರವಾಗಲಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ತಿಳಿಸಿದರು.

‘ಕಂಠೀರವ ಒಳಾಂಗಣ ಸುಸಜ್ಜಿತವಾಗಿದ್ದು ಅಂತರರಾಷ್ಟ್ರೀಯ ಮಟ್ಟದ ಯಾವುದೇ ಸ್ಪರ್ಧೆ ನಡೆಸಲು ತೊಂದರೆ ಇಲ್ಲ. ಹೊರಾಂಗಣ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ನವೀಕರಣಕ್ಕೆ ಟೆಂಡರ್ ಆಗಿದೆ. ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‌ಷಿಪ್ ವೇಳೆ ಸುಸಜ್ಜಿತ ಟ್ರ್ಯಾಕ್ ಕಂಗೊಳಿಸಲಿದೆ’ ಎಂದು ಶ್ರೀನಿವಾಸ್ ಭರವಸೆ ನೀಡಿದರು.

ವಿದ್ಯಾನಗರ ಕ್ರೀಡಾಶಾಲೆ ಮಾದರಿ

ಕಂಠೀರವ ಕ್ರೀಡಾಂಗಣದ ಕಿತ್ತು ಹೋದ ಟ್ರ್ಯಾಕ್ ನಲ್ಲಿ ರಾಜ್ಯ ಕ್ರೀಡಾಕೂಟ ಮತ್ತು ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಕೂಟ ಸಂಘಟಿಸುವ ‘ಸವಾಲು’ ಎದುರಾದಾಗ ಕ್ರೀಡಾ ಅಧಿಕಾರಿಗಳಿಗೆ ಭರವಸೆಯ ಬೆಳಕಾಗಿ ಮೂಡಿದ್ದು ನಗರದ ಉತ್ತರ ಭಾಗದಲ್ಲಿರುವ ವಿದ್ಯಾನಗರ ಕ್ರೀಡಾ ಶಾಲೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಇಲ್ಲಿ ಅಥ್ಲೆಟಿಕ್ ಟ್ರ್ಯಾಕ್ ಮತ್ತು ಫೀಲ್ಡ್ ಅನ್ನು ಉತ್ತಮ ರೀತಿಯಲ್ಲಿನಿರ್ವಹಿಸಲಾಗಿದೆ. ಹೀಗಾಗಿ ರಾಷ್ಟ್ರಮಟ್ಟದ ಕೂಟಗಳನ್ನು ಏರ್ಪಡಿಸುವುದು ಕಷ್ಟಕರವಲ್ಲ. ಕಂಠೀರವ ಕ್ರೀಡಾಂಗಣದ ಟ್ರ್ಯಾಕ್ ಗೆ ಜೀವ ತುಂಬಲು ಇನ್ನೂ ಕಾಲಾವಕಾಶ ಬೇಕು. ಆದ್ದರಿಂದ ಈಗಲೂ ವಿದ್ಯಾನಗರ ಶಾಲೆಯ ಅಂಗಣ ಸಂಘಟಕರಲ್ಲಿ ನಿರೀಕ್ಷೆಗಳನ್ನು ಮೂಡಿಸಿದೆ.

***
ಹೆಚ್ಚು ಸೌಲಭ್ಯಗಳನ್ನು ಒದಗಿಸಲು ಇಲಾಖೆ ಸದಾ ಹಾತೊರೆಯುತ್ತಿದೆ. ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದು ಖುಷಿ ತಂದಿದೆ; ಉತ್ಸಾಹವನ್ನೂ ಹೆಚ್ಚಿಸಿದೆ.
ಕೆ.ಶ್ರೀನಿವಾಸ್ , ಕ್ರೀಡಾ ಇಲಾಖೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.