ಬೆಂಗಳೂರು -ಮೈಸೂರು ಇನ್‌ಫ್ರಾಸ್ಟಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯಲ್ಲಿ ‘ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್’ (ನೈಸ್) ಕಂಪನಿ ನಡೆಸಿದೆ ಎನ್ನಲಾಗಿರುವ ಅಕ್ರಮಗಳ ಬಗ್ಗೆ ವರದಿ ಸಲ್ಲಿಸಲು 2013–2018ರ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯಲ್ಲಿ 2014ರಲ್ಲಿ ಸದನ ಸಮಿತಿ ರಚಿಸಲಾಯಿತು. 2016ರ ನವೆಂಬರ್‌ನಲ್ಲಿ ಈ ಸಮಿತಿಯು 350 ಪುಟಗಳ ವರದಿ ಸಲ್ಲಿಸಿತ್ತು. ಮೂಲ ಒಪ್ಪಂದದಲ್ಲಿದ್ದ 30 ಷರತ್ತುಗಳ ಪೈಕಿ 26 ಷರತ್ತುಗಳನ್ನು ನೈಸ್ ಕಂಪನಿ ಉಲ್ಲಂಘಿಸಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ: ಒಳನೋಟ| ತನಿಖಾ ವರದಿಗಳೆಂಬ ಪ್ರಹಸನ!
ಕಂಪನಿಯ ವಶದಲ್ಲಿರುವ 11,600 ಎಕರೆ ಹೆಚ್ಚುವರಿ ಜಮೀನನ್ನು ವಶಕ್ಕೆ ಪಡೆಯಬೇಕು, ಕಂಪನಿ ಅಕ್ರಮವಾಗಿ ಸಂಗ್ರಹಿಸಿರುವ ₹ 1,350 ಕೋಟಿ ಟೋಲ್ ಶುಲ್ಕವನ್ನು ಮರು ವಸೂಲಿ ಮಾಡಬೇಕೆಂಬ ಶಿಫಾರಸುಗಳು ವರದಿಯಲ್ಲಿದ್ದವು. ಹಗರಣದ ಕುರಿತು ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿತ್ತು. ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಈಗಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರತ್ತಲೂ ವರದಿ ಬೆರಳು ಮಾಡಿತ್ತು. ಪ್ರತಿಪಕ್ಷಗಳ ಪಟ್ಟಿಗೆ ಮಣಿದ ಸರ್ಕಾರ, 2016ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಸದನ ಸಮಿತಿ ವರದಿಯನ್ನು ಮಂಡಿಸಿತ್ತು. ಮುಂದೆ ಯಾವ ಕ್ರಮವೂ ಆಗಿಲ್ಲ.
2004ರಿಂದ 2014ರ ಅವಧಿಯಲ್ಲಿ ರಾಜ್ಯದಲ್ಲಿ ವಿದ್ಯುತ್ ಖರೀದಿಯ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿರುವುದು ಹಾಗೂ ದುಬಾರಿ ದರ ಪಾವತಿ ಕುರಿತು ತನಿಖೆಗಾಗಿ ಆಗಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 2014ರ ಜುಲೈನಲ್ಲಿ ಸದನ ಸಮಿತಿ ರಚಿಸಲಾಗಿತ್ತು. 2017ರ ನವೆಂಬರ್‌ನಲ್ಲಿ ಈ ಸಮಿತಿ ವರದಿ ಸಲ್ಲಿಸಿತ್ತು. ಶೋಭಾ ಕರಂದ್ಲಾಜೆ ಅವರು ಇಂಧನ ಸಚಿವರಾಗಿದ್ದ ಅವಧಿಯಲ್ಲಿ ದುಬಾರಿ ದರ ನೀಡಿದ ಪರಿಣಾಮ ವಿದ್ಯುತ್ ಖರೀದಿಯಲ್ಲಿ ₹ 1,046 ಕೋಟಿ ನಷ್ಟವಾಗಿದೆ ಎಂದು ವರದಿ ಹೇಳಿತ್ತು. ಜೆಎಸ್‌ಡಬ್ಲ್ಯೂ ಎನರ್ಜಿ ಕಂಪನಿಗೆ ಹೆಚ್ಚುವರಿಯಾಗಿ ಪಾವತಿಸಿರುವ ₹ 1,046 ಕೋಟಿಯನ್ನು ವಸೂಲಿ ಮಾಡುವಂತೆ ಶಿಫಾರಸು ಮಾಡಲಾಗಿತ್ತು. ವಿದ್ಯುತ್ ಖರೀದಿಗೆ ದೀರ್ಘಾವಧಿ ಒಪ್ಪಂದ ಮಾಡಿಕೊಳ್ಳದೇ ಅಲ್ಪಾವಧಿ ಒಪ್ಪಂದ ಮಾಡಿಕೊಂಡಿರುವುದೇ ನಷ್ಟಕ್ಕೆ ಕಾರಣ ಎಂದು ಸಮಿತಿ ಹೇಳಿತ್ತು. ಅಲ್ಪಾವಧಿ ಒಪ್ಪಂದ ಮಾಡಿಕೊಳ್ಳುವುದರ ಹಿಂದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಉದ್ದೇಶವಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಸದನದಲ್ಲಿ ವರದಿಯ ಮಂಡನೆಯೂ ಆಗಿತ್ತು. ಈವರೆಗೆ ಯಾವ ಕ್ರಮವೂ ಅನುಷ್ಠಾನಕ್ಕೆ ಬಂದಿಲ್ಲ. ಆಗ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿವೆ ಎಂದು ಗುರುತಿಸಲಾಗಿತ್ತು ಬಹುತೇಕ ಅಲ್ಪಾವಧಿ ಒಪ್ಪಂದಗಳು ಯಥಾವತ್ತಾಗಿ ಮುಂದುವರಿದಿವೆ.
ವಿದ್ಯುತ್ ಖರೀದಿ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹಧನ ನೀಡುವ ವಿಚಾರದಲ್ಲಿ 2013–18ರ ಕಾಂಗ್ರೆಸ್ ಸರ್ಕಾರ ಹಾಗೂ ನಂತರ ಬಂದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದ ಹಿಂದಿನ ಬಿಜೆಪಿ ಸರ್ಕಾರ, ಆ ಬಗ್ಗೆಯೂ ತನಿಖೆಗೆ ಮುಂದಾಗಿತ್ತು. ಆದರೆ, ಯಾವ ನಿರ್ಧಾರವೂ ಹೊರಬೀಳಲಿಲ್ಲ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಸೌರ ವಿದ್ಯುತ್ ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ವಿ. ಸುನಿಲ್ ಕುಮಾರ್ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಪ್ಪಣಿಯೊಂದನ್ನು ಸಲ್ಲಿಸಿದ್ದರು. ಆದರೆ, ಆ ಬಗ್ಗೆಯೂ ತನಿಖೆಗೆ ಆದೇಶ ಹೊರಬೀಳಲಿಲ್ಲ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 540 ಎಕರೆಯನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ರೀಡೂ’ ಹೆಸರಿನಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು ಪ್ರತಿಪಕ್ಷಗಳು 2014ರಲ್ಲಿ ಆರೋಪಿಸಿದ್ದವು. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿತ್ತು. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ನೇತೃತ್ವದಲ್ಲಿ ಆಯೋಗವೊಂದನ್ನು 2014ರ ಆಗಸ್ಟ್‌ನಲ್ಲಿ ನೇಮಿಸಲಾಗಿತ್ತು. ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 2004ರಿಂದ 2014ರವೆರೆಗೆ 983 ಎಕರೆ ವಿಸ್ತೀರ್ಣವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಟ್ಟಿರುವ ಕುರಿತು ವಿಚಾರಣೆ ನಡೆಸಿ, ವರದಿ ನೀಡುವಂತೆ ಆಯೋಗವನ್ನು ಕೋರಲಾಗಿತ್ತು. 2017ರ ಆಗಸ್ಟ್‌ನಲ್ಲಿ ಆಯೋಗವು 1,861 ಪುಟಗಳ ವರದಿಯನ್ನು ಆಯೋಗವು ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಸಿ. ಸುಭಾಶ್ಚಂದ್ರ ಕುಂಠಿಯಾ ಅವರಿಗೆ ಸಲ್ಲಿಸಿತ್ತು. ಆಯೋಗ ತಮ್ಮನ್ನು ದೋಷಮುಕ್ತಗೊಳಿಸಿ ವರದಿ ನೀಡಿದೆ ಎಂದು ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ. ‘ಸಿದ್ದರಾಮಯ್ಯ ಅವಧಿಯಲ್ಲಿ ಅಕ್ರಮವಾಗಿ ಜಮೀನು ಡಿನೋಟಿಫೈ ಮಾಡಿರುವುದು ವಿಚಾರಣೆಯಲ್ಲಿ ಸಾಬೀತಾಗಿದೆ’ ಎಂದು ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಆರೋಪಿಸುತ್ತಿವೆ. ಈಗಲೂ ಸದನದಲ್ಲಿ ಆಯೋಗದ ವರದಿ ಮಂಡನೆ ಆಗಿಲ್ಲ. ಪ್ರತಿ ಬಾರಿಯೂ ರಾಜಕೀಯ ವಾಗ್ವಾದಗಳು ನಡೆದಾಗಲೆಲ್ಲ ಕೆಂಪಣ್ಣ ಆಯೋಗದ ವರದಿಯ ವಿಚಾರ ಮುನ್ನೆಲೆಗೆ ಬಂದು ಮತ್ತೆ ಹಿಂದಕ್ಕೆ ಸರಿದು ಹೋಗುತ್ತಿದೆ.
‘ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಕೆರೆಗಳ ಜಮೀನು ಒತ್ತುವರಿಯಾಗಿರುವ ಕುರಿತು ತನಿಖೆ ನಡೆಸಲು ವಿಧಾನಸಭಾಧ್ಯಕ್ಷರಾಗಿದ್ದ ಕೆ.ಬಿ. ಕೋಳಿವಾಡ ಅಧ್ಯಕ್ಷತೆಯಲ್ಲಿ 2014ರ ಅಕ್ಟೋಬರ್ 27ರಂದು ಸದನ ಸಮಿತಿ ರಚಿಸಲಾಗಿತ್ತು. ಎರಡೂ ಜಿಲ್ಲೆಗಳಲ್ಲಿ 1,547 ಕೆರೆಗಳಿದ್ದು, ಒಟ್ಟು 57,932 ಎಕರೆ ವಿಸ್ತೀರ್ಣ ಹೊಂದಿವೆ. ಈ ಪೈಕಿ 10,785 ಎಕರೆ 35 ಗುಂಟೆಯಷ್ಟು ಕೆರೆ ಜಮೀನು ಒತ್ತುವರಿಯಾಗಿದೆ. ಒಟ್ಟು 158 ಕೆರೆಗಳು ಮಾತ್ರ ಒತ್ತುವರಿ ಆಗಿಲ್ಲ ಎಂದು ಸದನ ಸಮಿತಿ ವರದಿ ನೀಡಿತ್ತು. ಒತ್ತುವರಿಯಾಗಿರುವ ಕೆರೆಗಳ ಜಮೀನನ್ನು ವಶಕ್ಕೆ ಪಡೆದು, ಜಲಮೂಲಗಳನ್ನು ರಕ್ಷಿಸಬೇಕು. ಒತ್ತುವರಿಯಾಗಿರುವ ಜಮೀನುಗಳಲ್ಲಿ ಬಡಾವಣೆ ನಿರ್ಮಿಸಿ, ನಿವೇಶನ ಮಾರಾಟ ಮಾಡಲು, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದ ಅಧಿಕಾರಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕೆರೆಗಳ ಜಮೀನು ಒತ್ತುವರಿ ಮಾಡಿರುವವರಿಂದ ಆ ಸ್ವತ್ತಿನ ಈಗಿನ ಮಾರುಕಟ್ಟೆ ಮೌಲ್ಯವನ್ನು ವಸೂಲಿ ಮಾಡಬೇಕು. ಹಾಗೆ ಸಂಗ್ರಹಿಸಿದ ಹಣವನ್ನು ಕೆರೆಗಳ ಪುನರುಜ್ಜೀವನ ಮತ್ತು ಸಂರಕ್ಷಣೆಗಾಗಿಯೇ ಬಳಸಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ವಿಧಾನಸಭೆಯ ಅಧ್ಯಕ್ಷರೇ ನೇತೃತ್ವ ವಹಿಸಿದ್ದ ಸದನ ಸಮಿತಿ ನೀಡಿರುವ ವರದಿ ದೀರ್ಘ ನಿದ್ರಾವಸ್ಥೆಯಲ್ಲಿ ಕುಳಿತಿದೆ.
ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 2000ರಿಂದ 2010ರವರೆಗೆ ನಡೆದಿದ್ದ ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ಕುರಿತು ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತನಿಖೆ ನಡೆಸಿ, 2011ರಲ್ಲಿ ವರದಿ ನೀಡಿದ್ದರು. 617 ಅಧಿಕಾರಿಗಳು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತರ ತನಿಖಾ ವರದಿ ಹೇಳಿತ್ತು. ಆರೋಪಿತ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ಪರಿಶೀಲಿಸಿ, ಕ್ರಮಕ್ಕೆ ಶಿಫಾರಸು ಮಾಡಲು ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಪ್ರಕರಣವಾರು ಪರಿಶೀಲಿಸಿ ವರದಿ ನೀಡಿತ್ತು. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದು ಹಾಗೂ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ವ್ಯಕ್ತಿಗಳಿಂದ ನಷ್ಟ ವಸೂಲಿ ಮಾಡುವ ಕುರಿತು ಅಧ್ಯಯನ ನಡೆಸಿ, ಶಿಫಾರಸು ಮಾಡಲು ಆಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. 500ಕ್ಕೂ ಹೆಚ್ಚು ಅಧಿಕಾರಿಗಳು, ನೌಕರರ ವಿರುದ್ಧ ಕ್ರಮ ಜರುಗಿಸುವಂತೆ ಈ ಸಮಿತಿ ಶಿಫಾರಸು ಮಾಡಿತ್ತು. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಗಣಿ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ₹ 1.47 ಲಕ್ಷ ಕೋಟಿ ನಷ್ಟ ವಸೂಲಿ ಮಾಡಬೇಕೆಂಬ ಶಿಫಾರಸು ಕೂಡ ಸಮಿತಿಯ ವರದಿಯಲ್ಲಿತ್ತು. ಬೆರಳೆಣಿಕೆಯಷ್ಟು ಅಧಿಕಾರಿಗಳು, ನೌಕರರ ವಿರುದ್ಧ ಮಾತ್ರ ಕ್ರಮ ಜರುಗಿಸಲಾಗಿದೆ. ನಷ್ಟ ವಸೂಲಿಗೆ ಯಾವ ಕ್ರಮವೂ ಆಗಿಲ್ಲ.
ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 2000ರಿಂದ 2010ರವರೆಗೆ
ನಡೆದಿದ್ದ ಕಬ್ಬಿಣದ ಅದಿರಿನ ಅಕ್ರಮ ಗಣಿಗಾರಿಕೆ ಕುರಿತು ಆಗಿನ ಲೋಕಾಯುಕ್ತ ನ್ಯಾಯಮೂರ್ತಿ
ಎನ್. ಸಂತೋಷ್ ಹೆಗ್ಡೆ ತನಿಖೆ ನಡೆಸಿ, 2011ರಲ್ಲಿ ವರದಿ ನೀಡಿದ್ದರು. 617 ಅಧಿಕಾರಿಗಳು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತರ ತನಿಖಾ ವರದಿ ಹೇಳಿತ್ತು. ಆರೋಪಿತ ಅಧಿಕಾರಿಗಳ ವಿರುದ್ಧದ ಆರೋಪಗಳನ್ನು ಪರಿಶೀಲಿಸಿ, ಕ್ರಮಕ್ಕೆ ಶಿಫಾರಸು ಮಾಡಲು ಆಗಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಪ್ರಕರಣವಾರು ಪರಿಶೀಲಿಸಿ ವರದಿ ನೀಡಿತ್ತು. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದು ಹಾಗೂ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ವ್ಯಕ್ತಿಗಳಿಂದ ನಷ್ಟ ವಸೂಲಿ ಮಾಡುವ ಕುರಿತು ಅಧ್ಯಯನ ನಡೆಸಿ, ಶಿಫಾರಸು ಮಾಡಲು ಆಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. 500ಕ್ಕೂ ಹೆಚ್ಚು ಅಧಿಕಾರಿಗಳು, ನೌಕರರ ವಿರುದ್ಧ ಕ್ರಮ ಜರುಗಿಸುವಂತೆ ಈ ಸಮಿತಿ ಶಿಫಾರಸು ಮಾಡಿತ್ತು. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಗಣಿ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ₹ 1.47 ಲಕ್ಷ ಕೋಟಿ ನಷ್ಟ ವಸೂಲಿ ಮಾಡಬೇಕೆಂಬ ಶಿಫಾರಸು ಕೂಡ ಸಮಿತಿಯ ವರದಿಯಲ್ಲಿತ್ತು. ಬೆರಳೆಣಿಕೆಯಷ್ಟು ಅಧಿಕಾರಿಗಳು, ನೌಕರರ ವಿರುದ್ಧ ಮಾತ್ರ ಕ್ರಮ ಜರುಗಿಸಲಾಗಿದೆ. ನಷ್ಟ ವಸೂಲಿಗೆ ಯಾವ ಕ್ರಮವೂ ಆಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.