ADVERTISEMENT

ಒಳನೋಟ: ಮಕ್ಕಳ ಹಕ್ಕಿನ ರಕ್ಷಣೆಗೆ ಭಾರವಾದ ‘ಪ್ರಭಾರ’

ವಿನಾಯಕ ಭಟ್ಟ‌
Published 25 ಸೆಪ್ಟೆಂಬರ್ 2021, 22:12 IST
Last Updated 25 ಸೆಪ್ಟೆಂಬರ್ 2021, 22:12 IST
.
.   

ದಾವಣಗೆರೆ: ರಾಜ್ಯದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯವನ್ನು ಪ್ರತ್ಯೇಕವಾಗಿ ರಚಿಸಿದ್ದರೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಇನ್ನೂ ಅವಕಾಶ ಕಲ್ಪಿಸಿಲ್ಲ. ಹೀಗಾಗಿ, ಬಹುತೇಕ ಕಡೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೇ ಈ ಹುದ್ದೆಯನ್ನೂ ನಿಭಾಯಿಸುತ್ತಿದ್ದಾರೆ.

ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯ‘ಭಾರ’ದ ನಡುವೆ, ಹೆಚ್ಚುವರಿಯಾಗಿ ‘ಪ್ರಭಾರ’ದ ಜವಾಬ್ದಾರಿಯನ್ನೂ ನಿರ್ವಹಿಸಬೇಕಾಗಿರುವುದರಿಂದ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಪೂರ್ಣವಾಗಿ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಯು ಸಹಾಯಕ ನಿರ್ದೇಶಕರರಿಗೆ ಸಮಾನವಾದ ಹುದ್ದೆ. ನೇರ ನೇಮಕಾತಿಗೆ ಅವಕಾಶ ಇಲ್ಲದಿರುವುದರಿಂದ ಬಡ್ತಿ ಹೊಂದಿದವರನ್ನು ಮಾತ್ರ ಈ ಹುದ್ದೆಗೆ ನೇಮಿಸಬಹುದು. ಹೀಗಾಗಿ ಹಲವು ಜಿಲ್ಲೆಗಳಲ್ಲಿ ಖಾಲಿ ಇರುವ ಈ ಹುದ್ದೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರೇ ‘ಪ್ರಭಾರ’ ಮಕ್ಕಳ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೆಲವೆಡೆ ಮಹಿಳಾ ಸಂರಕ್ಷಣಾಧಿಕಾರಿ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಆದರೆ, ಮಕ್ಕಳ ವಿಚಾರ ಸೂಕ್ಷ್ಮವಾಗಿರುವುದರಿಂದ ಕೆಲವರು ‘ಪ್ರಭಾರ’ ವಹಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಆಗ ಅನಿವಾರ್ಯವಾಗಿ ಉಪನಿರ್ದೇಶಕರ ಹೆಗಲಿಗೇ ಈ ಜವಾಬ್ದಾರಿಯೂ ಬೀಳುತ್ತಿದೆ.

ಬಾಲ್ಯ ವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಎಚ್‌ಐವಿ ಪೀಡಿತ ಮಕ್ಕಳ ಆರೈಕೆ ಸೇರಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ತಳಮಟ್ಟದಲ್ಲಿ ಕಾರ್ಯನಿರ್ವಹಿಸಲು ಪ್ರಭಾರ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ. ಈ ಹುದ್ದೆಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವಂತಾದಾಗ ಸಂಪೂರ್ಣ ಸಮಯವನ್ನು ಮಕ್ಕಳ ಹಕ್ಕುಗಳ ರಕ್ಷಣೆಗಾಗಿಯೇ ಮೀಸಲಿಡಬಹುದಾಗಿದೆ ಎಂಬುದು ಮಕ್ಕಳ ಹಕ್ಕುಗಳ ರಕ್ಷಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ತಜ್ಞರ ಅಭಿಪ್ರಾಯ.

ಹಲವೆಡೆ ತಾಲ್ಲೂಕು ಮಟ್ಟದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳೇ ಮಕ್ಕಳ ರಕ್ಷಣಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಒತ್ತಡದ ನಡುವೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಸಕಾಲಕ್ಕೆ ಮಕ್ಕಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ರಕ್ಷಣಾ ಘಟಕಗಳಿಗೆ ಪ್ರತ್ಯೇಕವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ನೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂಬುದು ಅವರ ಸಲಹೆ.

ನಿವೃತ್ತ ಅಧಿಕಾರಿಗಳ ನೇಮಕ
ಮೂರ್ನಾಲ್ಕು ವರ್ಷಗಳ ಹಿಂದೆ ಬಹುತೇಕ ಜಿಲ್ಲೆಗಳಲ್ಲಿ ಇಲಾಖೆಯ ನಿವೃತ್ತ ಅಧಿಕಾರಿಗಳನ್ನು ಮಕ್ಕಳ ರಕ್ಷಣಾಧಿಕಾರಿಗಳನ್ನಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿತ್ತು.

ಹಣಕಾಸಿನ ವಹಿವಾಟಿನ ಅಧಿಕಾರ ಅವರಿಗೆ ಇಲ್ಲದಿರುವುದರಿಂದ ಆ ಕೆಲಸವನ್ನು ಉಪನಿರ್ದೇಶಕರೇ ನಿರ್ವಹಿಸಬೇಕಾಗುತ್ತಿತ್ತು. ನಿವೃತ್ತರನ್ನು ನೇಮಿಸಿಕೊಳ್ಳುವುದರಿಂದ ಅವರು ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡುತ್ತಿಲ್ಲ ಎಂಬ ದೂರುಗಳೂ ಕೇಳಿಬರುತ್ತಿದ್ದವು. ಹೀಗಾಗಿ, ಇದೀಗ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವುದನ್ನು ಕಡಿಮೆ ಮಾಡಲಾಗಿದೆ. ಸದ್ಯ ಬಳ್ಳಾರಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಾತ್ರ ನಿವೃತ್ತ ಅಧಿಕಾರಿಗಳೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಪ್ರತ್ಯೇಕ ಆಪ್ತಸಮಾಲೋಚಕರ ಅಗತ್ಯವಿಲ್ಲ’
ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯದಂತಹ ವಿವಿಧ ಪ್ರಕರಣಗಳಲ್ಲಿ ಮಕ್ಕಳಿಗೆ ಪ್ರತ್ಯೇಕ ಆಪ್ತಸಮಾಲೋಚಕರ ಅಗತ್ಯವಿಲ್ಲ. ಸದ್ಯ ಇರುವವರನ್ನೇ ಆಪ್ತಸಮಾಲೋಚನೆಗೆ ಬಳಸಿಕೊಳ್ಳಲಾಗುತ್ತಿದೆ. ಆಪ್ತಸಮಾಲೋಚಕರಿಗೆ ನಿರಂತರವಾಗಿ ತರಬೇತಿ ನೀಡಲಾಗುತ್ತಿದೆ.
-ಡಾ.ಹರೀಶ್ ದೇಲಂತಬೆಟ್ಟು,ಸದಸ್ಯರು, ಬಾಲ ನ್ಯಾಯಮಂಡಳಿ, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.