‘ಪತಿ ಮತ್ತು ಪತ್ನಿಯ ಬದಲಿಗೆ ಇನ್ನು ಮುಂದೆ ಸಂಗಾತಿ ಎಂಬ ಪದವನ್ನು ಬಳಸಬೇಕು’ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪು ಎಲ್‌ಜಿಬಿಟಿಕ್ವೀರ್ ಸಮುದಾಯಕ್ಕೆ ಐತಿಹಾಸಿಕ ಮೈಲಿಗಲ್ಲಾಗಿದೆ. ಈ ತೀರ್ಪಿನ ಪರಿಣಾಮದಿಂದಾಗಿ ಈಗಾಗಲೇ ಒಟ್ಟಿಗೆ ಬದುಕುತ್ತಿರುವ ಸಲಿಂಗಿಗಳು ತಮ್ಮ ಸಂಗಾತಿಯನ್ನು ‘ನಾಮಿನಿ’ಗಳಾಗಿ ಮಾಡಬಹುದಾಗಿದೆ. ಆರೋಗ್ಯ ಕ್ಷೇತ್ರದ ವಿಮಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಈ ಕಾರಣದಿಂದಾಗಿ ನವದೆಹಲಿಯಲ್ಲಿ ಎಲ್‌ಜಿಬಿಟಿಕ್ವೀರ್+ ಸಮುದಾಯ ತನ್ನ ಸಂಭ್ರಮವನ್ನು ಹಂಚಿಕೊಂಡಿದೆ.
ಮದುವೆ ಎನ್ನುವ ವ್ಯವಸ್ಥೆಯಲ್ಲಿ ಕಾನೂನಾತ್ಮಕವಾಗಿ ಪತಿ ಮತ್ತು ಪತ್ನಿಯರಿಗೆ ಕೆಲವು ಹಕ್ಕುಗಳೂ, ಕೆಲವು ಕರ್ತವ್ಯಗಳನ್ನೂ ಸೂಚಿಸಲಾಗಿದೆ. ಭಾರತೀಯ ಪಾರಂಪರಿಕ ವ್ಯವಸ್ಥೆಯಂತೆ, ಬದಲಾಗುತ್ತಿರುವ ಸಾಮಾಜಿಕ ಚಿತ್ರಣಗಳಲ್ಲಿ ‘ಜೀವನ ಸಂಗಾತಿ‘ ಎಂಬ ಪದವು ಹಲವಾರು ಸುಧಾರಣೆಗಳನ್ನು ತರುತ್ತದೆ. ಈ ಕಾರಣಕ್ಕಾಗಿಯೇ ಪರಿಣತರ, ತಜ್ಞರ ಉನ್ನತ ಸಮಿತಿಯೊಂದನ್ನು ರಚಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಜೊತೆಗೆ ವಿಶೇಷ ವಿವಾಹ ಕಾಯ್ದೆ–1954ಕ್ಕೆ ಅಗತ್ಯವಾದ ಬದಲಾವಣೆಗಳನ್ನು ತರುವಲ್ಲಿ ಶಿಫಾರಸು ಮಾಡುವಂತೆ ತಿಳಿಸಿದೆ.
ಸಲಿಂಗಿಗಳು ಒಟ್ಟಿಗೆ ಬದುಕುವಾಗ ಅನೇಕ ಅನಾನುಕೂಲಗಳನ್ನು ಎದುರಿಸಬೇಕಾಗಿದೆ.
ಗಂಡು–ಹೆಣ್ಣಿನ ವೈವಾಹಿಕ ಬಂಧನದಲ್ಲಿರುವವರಿಗೆ ಸಿಗುವ ಯಾವ ಸೌಲಭ್ಯಗಳೂ ಈ ಜೋಡಿಗಳಿಗೆ ಸಿಗುತ್ತಿರಲಿಲ್ಲ. ಯಾವುದೇ ರೀತಿಯ ವಿಮೆಯ ಸೌಲಭ್ಯಗಳೂ ದಕ್ಕುತ್ತಿರಲಿಲ್ಲ.
‘ಭಾರತವು ಸಲಿಂಗ ವಿವಾಹ, ನಾಗರಿಕ ಒಕ್ಕೂಟಗಳು ಅಥವಾ ಇತರ ರೀತಿಯ ಪಾಲುದಾರಿಕೆಗಳನ್ನು ಗುರುತಿಸುವುದಿಲ್ಲ.
1980ರ ದಶಕದ ಉತ್ತರಾರ್ಧದಿಂದ ಹಲವಾರು ಸಲಿಂಗ ದಂಪತಿಗಳು ಸಾಂಪ್ರದಾಯಿಕ ಹಿಂದೂ ಸಮಾರಂಭಗಳಲ್ಲಿ ವಿವಾಹವಾದರು; ಆದರೆ, ಈ ವಿವಾಹಗಳನ್ನು ನೋಂದಾಯಿಸಲಾಗಿಲ್ಲ. ಸುಪ್ರೀಂ ಕೋರ್ಟ್ ಆಗಸ್ಟ್ 2022ರಲ್ಲಿ ಸಲಿಂಗ ಲಿವ್-ಇನ್ ಸಂಬಂಧಗಳಲ್ಲಿ ಇರುವವರಿಗೆ ಸಾಮಾಜಿಕ ಭದ್ರತಾ ಹಕ್ಕುಗಳನ್ನು ಒದಗಿಸಿದೆ ಮತ್ತು ಸಲಿಂಗ ಜೋಡಿಯನ್ನು ‘ಕುಟುಂಬ ಘಟಕ‘ದ ಭಾಗವಾಗಿ ಗುರುತಿಸಿದೆ.
ಸುಪ್ರೀಂ ಕೋರ್ಟ್ ಅಕ್ಟೋಬರ್ 2023ರಲ್ಲಿ ಸಲಿಂಗ ವಿವಾಹ ಅಥವಾ ನಾಗರಿಕ ಸಂಘಗಳನ್ನು ಕಾನೂನು ಬದ್ಧಗೊಳಿಸಲು ನಿರಾಕರಿಸಿತು ಮತ್ತು ಈ ವಿಷಯವನ್ನು ಸಂಸತ್ತಿಗೆ ಅಥವಾ ರಾಜ್ಯ ಶಾಸಕಾಂಗಗಳಿಗೆ ನಿರ್ಧರಿಸಲು ಬಿಟ್ಟಿತು‘ ಎಂದು ಈ ವರೆಗಿನ ಬೆಳವಣಿಗೆಗಳನ್ನು ವಿವರಿಸುತ್ತಾರೆ ಹೈಕೋರ್ಟ್ ವಕೀಲೆ ಡಾ. ವಂದನಾ ರೆಡ್ಡಿ.
‘ಸಂಗಾತಿ’ ಅಥವಾ ‘ಜೀವನ ಸಂಗಾತಿ’ ಎಂಬ ಪದವಾಗಿ ಬದಲಾದ ತಕ್ಷಣವೇ ಆಗಬಹುದಾದ ಬದಲಾವಣೆಗಳೇನು? ಇವುಗಳನ್ನು ಬದಲಾವಣೆ ಎನ್ನುವ ಬದಲು ಸುಧಾರಣೆ ಎಂದೇ ಕರೆಯಬಹುದು. ವಿಮೆಯ ವ್ಯಾಪ್ತಿಗೆ ಒಳಪಡುತ್ತಾರೆ. ’ನಾಮಿನಿ‘ ಮಾಡಬಹುದು. ದತ್ತು ಪಡೆಯಬಹುದು, ಮಾನ್ಯತೆ ಪಡೆದ ಬಾಂಧವ್ಯ ಇದಾಗಬಹುದು. ಸಮಬಾಳ್ವೆ ಸಮಗ್ರವಾಗಿ ಸಿಗುವುದು.
ಸಲಿಂಗಿಗಳ ನಡುವಿನ ಮದುವೆಗೆ ಸಂಬಂಧಪಟ್ಟಂತೆ ಯಾವುದೇ ನಿರ್ದಿಷ್ಟ ಕಾನೂನು ನಮ್ಮ ದೇಶದಲ್ಲಿ ಈ ವರೆಗೂ ಜಾರಿಗೆ ಬಂದಿಲ್ಲ. ಸುಪ್ರೀಯೋ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡುವ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳನ್ನು ಉಲ್ಲೇಖಿಸುತ್ತಾ, ‘ಸಲಿಂಗಿಗಳ ವಿವಾಹವನ್ನು ಕಾನೂನಾತ್ಮಕವಾಗಿ ಪರಿಗಣಿಸಲು ಅವಕಾಶ ನೀಡಿದರೆ, ಮದುವೆಯ ಬಾಂಧವ್ಯದಿಂದ ಉಂಟಾಗುವ ಮುಂದಿನ ಸಂಬಂಧಗಳಿಗೂ ತೊಂದರೆಗಳು ಉಂಟಾಗುತ್ತವೆ ಎಂಬ ಆತಂಕದ ಭಾವನೆಯನ್ನು ವ್ಯಕ್ತಪಡಿಸಲಾಗಿದೆ’ ಎಂದು ಹೈಕೋರ್ಟ್ ವಕೀಲೆ ಕೆ.ಅಭಿನಯ ವಿವರಿಸುತ್ತಾರೆ.
ಏನಾಗಬೇಕಾಗಿದೆ?: ‘ಸುಪ್ರೀಂ ಕೋರ್ಟ್ ಎಲ್‌ಜಿಬಿಟಿಕ್ಯುಐಎ+ ಸಮುದಾಯದವರಿಗೆ ಲೈಂಗಿಕ ಸ್ವಾತಂತ್ರ್ಯ ನೀಡಿದ್ದು, ಕೆಲವು ಹಕ್ಕುಗಳನ್ನು ಕಡಿತಗೊಳಿಸಿ, ಮದುವೆಗೆ ಅಲ್ಪಮಾನ್ಯತೆ ನೀಡಿರುವುದರಿಂದ ಕೋರ್ಟಿನ ಆದೇಶ ಪೂರ್ಣ ಪ್ರಮಾಣದಲ್ಲಿ ರೂಢಿಯಲ್ಲಿ ಇರಿಸುವುದು ಕಷ್ಟವಾಗಿದ್ದು, ಇದರಿಂದ ಎಲ್‌ಜಿಬಿಟಿಕ್ಯುಐಎ+ ಸಮುದಾಯದವರಿಗೆ ಕಾನೂನಿನಡಿಯಲ್ಲಿ ಮಾನ್ಯತೆ ನೀಡುವುದಿಲ್ಲ. ಸಲಿಂಗಿಗಳಲ್ಲಿ, ಪತಿ, ಪತ್ನಿ ಎಂದು ದುಡಿಮೆಯ ಆಧಾರದ ಮೇಲೆ ಗುರುತಿಸಿಕೊಳ್ಳಲು ಸಾಧ್ಯವಿರುತ್ತದೆ. ಇಲ್ಲವೇ ಅವರನ್ನು ಜೊತೆಗಾರ ಅಥವಾ ಜೊತೆಗಾರ್ತಿ ಎಂದು ಕರೆಯಬಹುದು. ಅಂತಿಮವಾಗಿ ಈಗಿರುವ ವಿವಾಹ ಕಾಯ್ದೆಗಳಲ್ಲಿ ಸಲಿಂಗಿಗಳನ್ನೂ ಗುರುತಿಸಿ ತಿದ್ದುಪಡಿ ತರಬಹುದು ಅಥವಾ ಅವರಿಗೆ ಅನ್ವಯಿಸುವಂತೆ ಪ್ರತ್ಯೇಕವಾದ ಕಾಯ್ದೆಯನ್ನು ರೂಪಿಸುವುದು ಸೂಕ್ತ’ ಎಂಬುದು ಅಭಿನಯ ಅವರ ಅಭಿಪ್ರಾಯವಾಗಿದೆ.
ಉನ್ನತ ಸಮಿತಿಯ ಮುಂದಿರುವ ಸವಾಲುಗಳೇನು?
l ‘ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನವಾಗಿ ಬದುಕುವ ಹಕ್ಕನ್ನು ನೀಡುತ್ತಾ, ತಮ್ಮಿಚ್ಛೆಯಂತೆ ಬದುಕುವ ಸ್ವಾತಂತ್ರ್ಯವನ್ನೂ ನೀಡಿದೆ. ಸಲಿಂಗಿಗಳು ಒಟ್ಟಾಗಿ ಜೀವಿಸಲು ಇಚ್ಛಿಸಿದರೆ, ಇರಬಹುದು. ಆದರೆ, ಕಾನೂನು ಅವರನ್ನು ಮದುವೆಯ ಬಂಧನದಡಿಯಲ್ಲಿ ಗುರುತಿಸುವುದಿಲ್ಲ. ಸಲಿಂಗಿಗಳು ಒಟ್ಟಾಗಿ ಜೀವಿಸಲು ಪ್ರಾರಂಭಿಸಿದರೆ, ತನ್ನ ಜೊತೆಗಾರನನ್ನು, ಜೀವನ ಸಂಗಾತಿಯೆಂದು ಗುರುತಿಸಿಕೊಳ್ಳಲು ಇಚ್ಛಿಸಿದರೆ, ಸರ್ಕಾರ ಇಂತಹ ವಿವಾಹ ಹಾಗೂ ವಿವಾಹ ನಂತರದ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ ಹಾಗೂ ಇದರಿಂದ ಮುಂದೆ ಉಂಟಾಗಬಹುದಾದ ಕಾನೂನಿನ ತೊಡಕು ಗಳಿಗೆ ಪ್ರತ್ಯೇಕವಾದ ಕಾಯ್ದೆಯನ್ನು ರೂಪಿಸಬೇಕಾಗಿದೆ’ ಎಂಬುದನ್ನು ಅಭಿನಯ ಅವರು ಒತ್ತಿ ಹೇಳುತ್ತಾರೆ.
ವೈವಾಹಿಕ ಸ್ವರೂಪದ ನಿರ್ಧಾರ: ಜಂಟಿ ಖಾತೆಗಳನ್ನು ತೆರೆಯುವುದು, ಕೌಟುಂಬಿಕ ಪಡಿತರ ವ್ಯವಸ್ಥೆಯನ್ನು ತರುವಂಥ ಪರ್ಯಾಯ ಮಾರ್ಗಗಳ ನಂತರವೂ ಕ್ವೀರ್ ಸಮುದಾಯವು ಸಾಂಗತ್ಯದಲ್ಲಿದೆ ಅಥವಾ ಪರಸ್ಪರ ಸಹಚರಿಗಳಾಗಿದ್ದಾರೆ ಎಂಬುದನ್ನು ಗುರುತಿಸುವುದು ಹೇಗೆ? ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಬೇಕಿದೆ.
ಸ್ವಯಂ ಘೋಷಣೆಯಿಂದಲೇ ಇದು ಸಾಧ್ಯವೇ? ಅಥವಾ ಯಾವುದಾದರೂ ಸಂಸ್ಥೆಗಳು ಈ ವ್ಯವಸ್ಥೆಯನ್ನು ಮಾನ್ಯ ಮಾಡಬೇಕೆ? ಜಂಟಿ ಖಾತೆದಾರರು ಎಲ್ಲರೂ ಇಂಥ ಬಾಂಧವ್ಯದಲ್ಲಿ ಇರುವುದಿಲ್ಲ. ಬಾಂಧವ್ಯದಲ್ಲಿ ಇರುವ ಕುರಿತು ಅಧಿಕಾರಿ ವರ್ಗ ಪ್ರಮಾಣ ಪತ್ರ ನೀಡಬೇಕೇ? ಬಾಳ್ವೆಯನ್ನು ಒಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನು ಯಾವ ರೀತಿ ಸ್ಪಷ್ಟಪಡಿಸಬೇಕು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದಕ್ಕೊಂದು ಸಾಂಸ್ಥಿಕ ರೂಪ ಬೇಕಾಗಿದೆ.
ಕಾನೂನುಗಳನ್ನು ಸುಗಮವಾಗಿ ಅನುಷ್ಠಾನಕ್ಕೆ ತರಲು ಈ ಹಂತ ಅತಿ ಮುಖ್ಯವಾಗಿದೆ.
l ಕಾನೂನು ಸ್ಪಷ್ಟವಾಗಿ ಉಲ್ಲೇಖಿಸಬಹುದಾದ ಕೆಲವು ವಿಷಯ: ಇಂಥ ಒಕ್ಕೂಟಗಳಲ್ಲಿ ಯಾರು ಪಾಲುದಾರರಾಗಬಹುದು (18 ವರ್ಷ ಮೀರಿದವರು, ಯಾವುದೇ ಲಿಂಗ ತರತಮವಿಲ್ಲದೆ)
l ಇಂಥ ಒಕ್ಕೂಟಗಳ ಸ್ವರೂಪ (ಒಟ್ಟಿಗೆ ವಾಸವಾಗಿರುವುದು ಅಥವಾ ವಾಸವಾಗಿರುವ ಮನೆಯನ್ನು ಹಂಚಿಕೊಂಡಿರುವುದು, ಆರ್ಥಿಕ ಅಥವಾ ಹಣಕಾಸಿನ ಅವಲಂಬನೆ ಅಥವಾ ಪಾಲುದಾರಿಕೆ ಇವುಗಳನ್ನು ಸ್ಪಷ್ಟಪಡಿಸಬೇಕು.)
l ಇಂಥ ಒಕ್ಕೂಟ ಅಥವಾ ಬಾಂಧವ್ಯಗಳ ನೋಂದಣಿ ಅಥವಾ ಘೋಷಣೆಯ ಪ್ರಕ್ರಿಯೆಯನ್ನು ಸ್ಪಷ್ಟಪಡಿಸಬೇಕು. ಈ ಬಾಂಧವ್ಯದಲ್ಲಿ ಹಕ್ಕುಗಳ ಹರಿವನ್ನು ನಿಖರವಾಗಿ ಉಲ್ಲೇಖಿಸಬೇಕು. ದತ್ತು ಪಡೆಯುವ ಅಥವಾ ಉತ್ತರಾಧಿಕಾರದ ಹಕ್ಕು ಮುಂತಾದವುಗಳ ಕುರಿತು ಸ್ಪಷ್ಟ ನಿರೂಪಣೆ ಬೇಕು.
ಇಂಥ ಸಾಂಗತ್ಯಗಳಿಗೆ ಸಾಂಸ್ಥಿಕ ಮಾನ್ಯತೆ ಸಿಕ್ಕಾಗ ಆಗುವ ಅನುಕೂಲಗಳು: ಬಾಂಧವ್ಯದಲ್ಲಿರುವವರು ತಮ್ಮ ಸಂಗಾತಿಯನ್ನು ’ನಾಮಿನಿ‘ಯನ್ನಾಗಿ ಮಾಡಬಹುದು. ಆರೋಗ್ಯದ ಸಮಸ್ಯೆಗಳಿದ್ದಾಗ, ಸಂಕಷ್ಟದ ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಉತ್ತರದಾಯಿತ್ವ ಅವರಿಗೆ ದೊರೆಯುವುದು. ವಿಮೆ ಮಾಡುವಾಗ, ಆರೋಗ್ಯ ಸೇವೆ ಪಡೆಯುವಾಗ ಸಂಗಾತಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ದೊರೆಯುತ್ತದೆ.
ಭಾರತೀಯ ಪಾರಂಪರಿಕ ಮದುವೆ ವ್ಯವಸ್ಥೆಯಲ್ಲಿ ಈಗಲೂ ಗಂಡು–ಗಂಡು ಅಥವಾ ಹೆಣ್ಣು–ಹೆಣ್ಣು ಒಟ್ಟಿಗಿರುವುದು, ಒಟ್ಟಿಗೆ ಬಾಳುವುದು, ಬಾಳನ್ನು ಸವಿಯುವುದು, ಸವೆಸುವುದು ಎರಡೂ ಸಹಜವಾಗಿ ಸ್ವೀಕೃತವಾಗಿಲ್ಲ. ಇದೇ ಕಾರಣಕ್ಕೆ ಕ್ವೀರ್ ಸಮುದಾಯದವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂಥವರಿಗೆ ಮನೆ ಬಾಡಿಗೆ ಪಡೆಯುವುದು ಸಹ ಕಷ್ಟವಾಗುತ್ತದೆ. ಉನ್ನತ ಶಿಕ್ಷಣ, ಉದ್ಯೋಗ ಅಥವಾ ಉದ್ಯೋಗದಲ್ಲಿ ಬಡ್ತಿ ಸಹಜವಾಗಿ ಸರಳವಾಗಿ ದಕ್ಕುವುದಿಲ್ಲ. ಬಹುತೇಕರಿಗೆ ಇದೊಂದು ವಿಲಕ್ಷಣ ಕುಟುಂಬವೆನಿಸುತ್ತದೆ.
ಸಮಬಾಳ್ವೆ, ಲಿಂಗಸಮನ್ವಯ ಸಾಧಿಸಲು ಈಗಾಗಲೇ ಆಗಿರುವ ಕೆಲವು ಪ್ರಯತ್ನಗಳು ಹೀಗಿವೆ:
ಆರೋಗ್ಯ ಕ್ಷೇತ್ರದಲ್ಲಿ ಕ್ವೀರ್ ಸಮುದಾಯದವರು ಅನುಭವಿಸುತ್ತಿರುವ ತಾರತಮ್ಯ ನೀತಿಯನ್ನು ಗುರುತಿಸಿ, ಸರಿಪಡಿಸಲು ಸುಪ್ರೀಂಕೋರ್ಟ್ ಸೂಚಿಸಿದೆ. ಕ್ವೀರ್ ಸಮುದಾಯದವರು ಎಂಬ ಒಂದೇ ಒಂದು ಕಾರಣಕ್ಕೆ ಆರೋಗ್ಯ ಸೇವೆಗಳನ್ನು ನಿರಾಕರಿಸುವಂತಿಲ್ಲ. ಇದಕ್ಕೆ ಅಗತ್ಯ ಇರುವ ಎಲ್ಲ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರು ಅಥವಾ ಟ್ರಾನ್ಸ್‌ಜೆಂಡರ್ ಹಕ್ಕುಗಳ ಕಾಯ್ದೆ: ಇದು 2019ರಲ್ಲಿ ಜಾರಿಗೆ ಬಂದ ಕಾಯ್ದೆಯಾಗಿದೆ. ಈ ಕಾಯ್ದೆ ವ್ಯಾಪ್ತಿ ಅಡಿ, ಸಲಿಂಗಿ ದಂಪತಿ ಅಥವಾ ಜೋಡಿಗಳನ್ನೂ ತರಬೇಕು. ಇದು ಶಿಕ್ಷಣ, ಆರೋಗ್ಯ ಸೇವೆ, ಮನೆ, ಬ್ಯಾಂಕ್, ಉದ್ಯೋಗ ಮುಂತಾದವುಗಳಲ್ಲಿ ತಾರತಮ್ಯ ಆಗುವುದನ್ನು ತಡೆಯುತ್ತದೆ.
ಈ ಮೂಲ ಸೌಲಭ್ಯಗಳು ದೊರೆಯುವಂತೆ ಆಗಿದ್ದರೂ, ಒಂದು ಸಹಜ ಮತ್ತು ಸರಳವಾದ ಬದುಕು ಸಲಿಂಗಿ ಜೋಡಿಗಳಿಗೆ ಸಾಧ್ಯವಾಗುತ್ತಿಲ್ಲ. ಲೈಂಗಿಕತೆ, ಸಾಂಗತ್ಯ ಸಹಚಾರ್ಯಗಳ ಆಯ್ಕೆಯನ್ನು ಗೌರವಿಸುವ ಧಾರಾಳಿತನವಾಗಲಿ, ಔದಾರ್ಯವಾಗಲಿ ಇನ್ನೂ ನಮ್ಮ ಪಾರಂಪರಿಕ ವ್ಯವಸ್ಥೆಯಲ್ಲಿ ಹರಿದುಬರುತ್ತಿಲ್ಲ. ಬದಲಾವಣೆಯನ್ನು ಯಾವತ್ತಿದ್ದರೂ ಸಂಪ್ರದಾಯವಾದಿಗಳು ಒಪ್ಪುವುದಿಲ್ಲ. ಆದರೆ ಬದಲಾವಣೆಯ ಗಾಳಿ, ಸುಧಾರಣೆಯತ್ತ ಸುಳಿಯುತ್ತಿದ್ದಲ್ಲಿ, ನಿಧಾನವಾಗಿಯಾದರೂ ಈ ಬದಲಾವಣೆಯನ್ನು ಒಪ್ಪಲೇಬೇಕಾಗುತ್ತದೆ.
ಸುಪ್ರೀಂ ಕೋರ್ಟ್‌ನ ಈ ನಿರ್ದೇಶನದ ನಂತರ ಆಗಬೇಕಿರುವುದೇನು?
ತಾರತಮ್ಯ ಹೋಗಲಾಡಿಸುವ ಸಮಗ್ರವಾದ ಕಾನೂನು: ‘ಟ್ರಾನ್ಸ್‌ಜೆಂಡರ್ ಪ್ರೊಟೆಕ್ಷನ್ ಆ್ಯಕ್ಟ್’ ಕೇವಲ ಲೈಂಗಿಕ ಅಲ್ಪಸಂಖ್ಯಾತರನ್ನು ಮಾತ್ರ ಒಳಗೊಳ್ಳುತ್ತದೆ. ಇದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತಾರವಾಗಿಸಿ, ಸಲಿಂಗಿಗಳಿಗೂ ಅನ್ವಯವಾಗುವಂತೆ ಮಾಡಬೇಕು. ವರ್ಣ, ವರ್ಗಗಳ ಆಧಾರದಲ್ಲಿ ಅಷ್ಟೇ ಅಲ್ಲ, ಲಿಂಗಾಧಾರಿತ ತಾರತಮ್ಯವನ್ನೂ ಹೋಗಲಾಡಿಸುವಂತೆ ನೋಡಿಕೊಳ್ಳಬೇಕು.
ಪರಿಣಾಮಕಾರಿ ಪರಿಹಾರಗಳು: ಖಾಸಗಿ ವಲಯದಲ್ಲಿ ಆಗುವ ತರತಮಗಳಿಗೆ ಪರಿಣಾಮಕಾರಿಯಾದ ಪರಿಹಾರಗಳನ್ನು ಟ್ರಾನ್ಸ್‌ಜೆಂಡರ್ ಪ್ರೊಟೆಕ್ಷನ್ ಆ್ಯಕ್ಟ್‌ನಲ್ಲಿ ಸೂಚಿಸಿಲ್ಲ. ದೂರು ಸಲ್ಲಿಸುವ ಕಾರ್ಯವಿಧಾನವನ್ನು ಸ್ಪಷ್ಟವಾಗಿರುವಂತೆ ನೋಡಿಕೊಳ್ಳಬೇಕು. ಸೂಕ್ತ ಪರಿಹಾರ ಒದಗಿಸುವ ಅವಕಾಶಗಳನ್ನು ಸೃಷ್ಟಿಸಬೇಕು.
ಮೀಸಲಾತಿ: ಈ ಸಮುದಾಯದವರಿಗೆ ಮೀಸಲಾತಿಯನ್ನು ಘೋಷಿಸಬೇಕು. ಸಾರ್ವಜನಿಕ ಮತ್ತು ಉದ್ಯೋಗ ರಂಗದಲ್ಲಿ ಟ್ರಾನ್ಸ್ ಜೆಂಡರ್ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಮೀಸಲಾತಿ ಇರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಕ್ರಮ ಕೈಗೊಳ್ಳಬೇಕು. ಈ ಮೀಸಲಾತಿಯನ್ನು ಸಲಿಂಗಿಗಳಿಗೂ ವಿಸ್ತರಿಸಬೇಕು.
ಶಿಕ್ಷಣ: ವಿದ್ಯಾರ್ಥಿಗಳು ಅಥವಾ ವ್ಯಕ್ತಿಗಳು ತಮ್ಮನ್ನು ತಾವು ಅರಿಯಲು ಮತ್ತು ಮುಕ್ತವಾಗಿ ತಮ್ಮತನವನ್ನು ಹೇಳಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಸುರಕ್ಷಿತ ತಾಣಗಳಾಗಬೇಕು. ಲಿಂಗ ಸಂವೇದನೆಯ ತರಬೇತಿಗಳ ಮೂಲಕ ಮತ್ತು ಪಠ್ಯಕ್ರಮಗಳನ್ನು ಪರಿಷ್ಕರಿಸುವುದರ ಮೂಲಕ ಇದನ್ನು ಸಾಧಿಸಬಹುದಾಗಿದೆ. ತೀರಾ ಈಚೆಗೆ ಲೈಂಗಿಕತೆಯನ್ನು ಆಧರಿಸಿ ಹೀಗಳೆದ ಕಾರಣಕ್ಕಾಗಿಯೇ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಎಂಬ ಪ್ರಕರಣ ಕಣ್ಣ ಮುಂದಿದೆ. ಸಮಸಮಾಜದ ಕನಸು ಕಾಣುವ ಮಕ್ಕಳಲ್ಲಿ ಅವರ ವ್ಯಕ್ತಿತ್ವವನ್ನು ಕುಗ್ಗಿಸದೆ, ಸಂಕುಚಿತಗೊಳಿಸದೆ, ಹೀಗಳೆಯದೆ, ಮನುಷ್ಯನಾಗಿ ಸ್ವೀಕರಿಸುವ ಮನೋಭಾವ ಹುಟ್ಟಿಸಲು ಅಗತ್ಯವಿರುವ ಶಿಕ್ಷಣ ಮತ್ತು ಲಿಂಗ ಸಂವೇದನೆಯ ಪಾಠಗಳು ಆಗಬೇಕಿದೆ.
l ಸಲಿಂಗಿ ಮದುವೆಗೆ ಮಾನ್ಯತೆ ಹೇಗೆ?: ಸಲಿಂಗ ಜೋಡಿಗಳು ಮದುವೆ ಆಗುವುದಾದರೆ ಮಾನ್ಯತೆ ಮಾಡಬೇಕಿರುವುದು, ಸಲಿಂಗ ಸಮುದಾಯಕ್ಕೆ ಮಾಡುವ ಅತ್ಯಂತ ಮಹತ್ವದ ನ್ಯಾಯ. ಮಾನವ ಸಂಕುಲ ಹುಟ್ಟಿದಾಗಿನಿಂದಲೂ ಸಲಿಂಗ ಜೀವನವನ್ನು ಕಳಂಕ ಎಂದು ಭಾವಿಸಿ ಅವರ ಆಶಾಭಾವನೆ ಮತ್ತು ಹಕ್ಕುಗಳಿಗೆ ಘೋರ ಅನ್ಯಾಯ ಆಗಿದ್ದು, ಈಗ ಮಾನ್ಯತೆ ನೀಡುವ ಮೂಲಕ ನಾವು ಇಲ್ಲಿಯವರೆಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಡುವ ಮೊದಲ ಹೆಜ್ಜೆ ಆಗಿದೆ. ಇಲ್ಲವಾದಲ್ಲಿ, ಸಲಿಂಗ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯ ಸ್ವಾತಂತ್ರಕ್ಕೆ ಧಕ್ಕೆ ಉಂಟಾಗಿ ಅದರಿಂದ ಅಡ್ಡಪರಿಣಾಮಗಳೇ ಹೆಚ್ಚಾಗುತ್ತದೆ.
l ಉತ್ತರಾಧಿಕಾರಿಯಾಗುವ ಅಥವಾ ಉತ್ತರದಾಯಿತ್ವದ ನಿರ್ಧಾರ ಹೇಗೆ?: ಉತ್ತರಾಧಿಕಾರಿಯ ಆಯ್ಕೆಯನ್ನು ಸದ್ಯಕ್ಕೆ ಆಯಾ ಸಲಿಂಗ ಜೋಡಿಗಳ ನಿರ್ಧಾರಕ್ಕೇ ನೀಡಬೇಕು. ಸಲಿಂಗ ಜೋಡಿಗಳ ವಿವಾಹದಲ್ಲಿ ಮುಂದಾಗುವ ಉತ್ತರಾಧಿಕಾರಿ ಮತ್ತು ಉತ್ತರದಾಯಿತ್ವದ ವಿಷಯಗಳು ಸಂಕೀರ್ಣವಾಗಿದ್ದು, ಈ ಕುರಿತಾದ ನಿರ್ಧಾರದಲ್ಲಿ ನ್ಯಾಯಾಂಗದಲ್ಲಿ ನುರಿತ ಮತ್ತು ಅನುಭವಿಗಳ ಜೊತೆ ಸುಧೀರ್ಘವಾಗಿ ಚರ್ಚಿಸಿ ಆದಷ್ಟು ಬೇಗನೇ ಶಾಸನ ರಚಿಸಬೇಕು.
l ಬೇರ್ಪಡುವ ಅಥವಾ ವಿಚ್ಛೇದನಗಳಂತಹ ಪ್ರಕರಣಗಳಲ್ಲಿ ನಿರ್ವಹಣೆಯ ಕುರಿತ ಮಾನದಂಡಗಳು. ಸದ್ಯಕ್ಕೆ ನಮ್ಮಲ್ಲಿ ಪ್ರಚಲಿತದಲ್ಲಿರುವ ವಿಶೇಷ ವಿವಾಹ ಕಾಯ್ದೆಗೆ ಸೂಕ್ತ ತಿದ್ದುಪಡಿಗಳನ್ನು ಮಾಡಿ, ಆದಷ್ಟು ಬೇಗನೇ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಬೇಕು.
ಎ.ಡೆರಿಕ್ ಅನಿಲ್, ಹೈಕೋರ್ಟ್ ವಕೀಲ
ಜಗತ್ತು ಯಾವತ್ತೂ ಬಹುಸಂಖ್ಯಾತರ ಇಚ್ಛೆಯಂತೆ ರೂಢಿಯನ್ನು ಕಟ್ಟಿಕೊಳ್ಳುತ್ತದೆ. ರೂಢಿಗೆ ಹೊಂದಾಣಿಕೆಯಾಗದ ಅಲ್ಪಸಂಖ್ಯಾತರು ಯಾವತ್ತೂ ಉಸಿರು ಬಿಗಿಹಿಡಿದು ಇವರ ಮಧ್ಯೆ ಬಾಳುತ್ತಿರುತ್ತಾರೆ. ಅದೊಂದು ರೀತಿ ಕಣ್ಣಿಗೆ ಕಾಣದ ಎಲೆಮರೆಯ ಶೋಷಣೆ. ಅಂತಹವರಿಗೆ ನ್ಯಾಯವನ್ನು ದಕ್ಕಿಸಿಕೊಡುವುದು ನ್ಯಾಯಾಂಗದ ಕರ್ತವ್ಯ. ಬಹುಸಂಖ್ಯಾತರ ಹಿತವನ್ನು ಕಾಯಲು ಹೇಗೂ ಶಾಸಕಾಂಗ ಇದ್ದೇ ಇರುತ್ತದೆ. ಆ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯದ ಈ ನಿಲುವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
‘ಮದುವೆ’ ಎನ್ನುವುದು ಕೇವಲ ಗಂಡು-ಹೆಣ್ಣು ಒಟ್ಟಾಗಿ ಬಾಳಲು ಕಡ್ಡಾಯವಾಗಿ ಇರಬೇಕಾದ ಅಗತ್ಯ ಎಂಬ ಸಾಮಾಜಿಕ ವ್ಯವಸ್ಥೆಯನ್ನು ಬಹುಸಂಖ್ಯಾತರು ಮಾಡಿಕೊಂಡಿದ್ದಾರೆ. ದುರಾದೃಷ್ಟವಶಾತ್ ಈ ವ್ಯವಸ್ಥೆ ಇತ್ತೀಚಿನ ದಿನಗಳಲ್ಲಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಅದೊಂದು ಯಶಸ್ವೀ ವ್ಯವಸ್ಥೆ ಎಂದೇನೂ ಅನ್ನಿಸುತ್ತಿಲ್ಲ. ಎರಡು ಜೀವಗಳು ಕೂಡಿ ಬಾಳಲು ಲಿಂಗ, ಶಾಸ್ತ್ರ, ವಯೋಮಾನ ನಿರ್ಬಂಧಗಳ ಅವಶ್ಯಕತೆಯಿಲ್ಲ ಎಂದು ಇಂದಿನ ಜನಾಂಗ ಅರ್ಥ ಮಾಡಿಕೊಂಡಿದೆ. ಗಂಡು-ಹೆಣ್ಣು, ಗಂಡು-ಗಂಡು, ಹೆಣ್ಣು-ಹೆಣ್ಣು - ಅಥವಾ ಯಾವುದೋ ಒಂದು ಜೀವ ಮತ್ತೊಂದು ಜೀವದ ಜೊತೆ ಒಟ್ಟಾಗಿ ಬದುಕಲು ಸಾಂಗತ್ಯ ಬಯಸಿದರೆ ಅದನ್ನು ಸಮಾಜ ಗೌರವದಿಂದ ಕಾಣುವ ಅವಶ್ಯಕತೆ ಇದೆ. ಆದ್ದರಿಂದ ಜೊತೆಗಿರುವ ವ್ಯಕ್ತಿಯನ್ನು ಸಂಗಾತಿ ಎಂದು ಕರೆದರೆ ಸಾಕು. ಲಿಂಗ ಅಥವಾ ಸಂಬಂಧದಿಂದ ಗುರುತಿಸುವ ಅವಶ್ಯಕತೆಯಿಲ್ಲ.
ಸಾಂಗತ್ಯವೊಂದು ಮಾನ್ಯಗೊಂಡರೆ ಹಲವು ಅನುಕೂಲಗಳು ದಂಪತಿಗೆ ಲಭ್ಯವಾಗುತ್ತವೆ. ಕರ್ತವ್ಯಗಳ ಉತ್ತರದಾಯಿತ್ವ, ಆಸ್ತಿಯ ಹಂಚಿಕೆ, ಅನಾರೋಗ್ಯದ ಸಮಯದಲ್ಲಿ ಸಂಗಾತಿಯು ತೆಗೆದುಕೊಳ್ಳಬೇಕಾದ ನಿರ್ಧಾರಗಳು, ವಿಮೆಯ ವಿಲೇವಾರಿ - ಎಲ್ಲವೂ ಸುಲಭವಾಗುತ್ತದೆ. ಆದ್ದರಿಂದ ಜೊತೆಗೆ ಬಾಳುವ ವ್ಯಕ್ತಿಯನ್ನು ಸಂಗಾತಿ ಎಂದು ಕರೆಯೋಣ. ಬೇರೆ ವಿಶೇಷಣಗಳು ಬೇಡ.
ವಸುಧೇಂದ್ರ,ಕಥೆಗಾರ, ಆಪ್ತ ಸಮಾಲೋಚಕ
ಭಾರತದಲ್ಲಿ ಸಮಲಿಂಗಿ ಸಂಬಂಧಗಳ ಕಾನೂನು ಮಾನ್ಯತೆ ಏಕಾಂಕವಾಗಿಯೇ ಉಳಿದಿದ್ದು, ಎಲ್‌ಜಿಬಿಟಿಕ್ಯು+ ಸಮುದಾಯದ ಹಕ್ಕುಗಳನ್ನು ವಿಸ್ತರಿಸುವ ಪ್ರಗತಿಪರ ನ್ಯಾಯಾಂಗ ತೀರ್ಮಾನಗಳಿದ್ದರೂ ಕೂಡಾ ಪರ್ಯಾಪ್ತವಾಗಿಲ್ಲ. 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಮಾನವು ಸಮಲಿಂಗಿ ದಂಪತಿಗಳ ಸಮಾನತೆ, ಲೈಂಗಿಕ ಸ್ವಾಯತ್ತತೆ, ಗೌರವ, ಗೋಪ್ಯತೆಯ ಹಕ್ಕುಗಳನ್ನು ಭಾರತ ಸಂವಿಧಾನದ 14, 15, 16, 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ಒತ್ತಿ ಹೇಳಿದ್ದಾರೆ. ಎಲ್ಲರಿಗೂ ಸೇರಿದ್ದು ಎಂದು ಪರಿಗಣಿಸಲಾಗಿರುವ 1954ರ ವಿಶೇಷ ವಿವಾಹ ಕಾಯ್ದೆಯು ಸಮಲಿಂಗಿ ಮದುವೆಗಳನ್ನು ಗುರುತಿಸಲು ವಿಫಲವಾಗಿದ್ದು, ಮದುವೆ, ವಿಚ್ಛೇದನೆ, ಪೋಷಣೆ ಮತ್ತು ವಾರಸತ್ವ ಹಕ್ಕುಗಳನ್ನು ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ.
ಸಮಾನುಭೂತಿ ಮತ್ತು ವೈಯಕ್ತಿಕ ಸ್ವಾಯತ್ತತೆಯ ಮೇಲಾಗಿರುವ ಭದ್ರತೆಗಾಗಿ ಭಾರತವು ಯುಡಿಎಚ್ಆರ್ ಮತ್ತು ಐಸಿಸಿಪಿಆರ್ ಮುಂತಾದ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕಿದೆ. ಆದರೂ, ಈ ತತ್ವಗಳು ಸಮಲಿಂಗಿ ದಂಪತಿಗಳ ಸಂಬಂಧದಲ್ಲಿ ನೈಜ ರೂಪಾಂತರೀಕರಣ ಕಾಣದಿರುವುದು 1997ರ ವಿಶ್ವಕಾ ವರ್ಸಸ್ ರಾಜ್ಯ ಎಂಬ ತೀರ್ಮಾನದಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಾಂಗವು ಪ್ರಸ್ತಾಪಿಸಿರುವ ಸಂಸತ್ತಿನ ತಿದ್ದುಪಡಿಯ ಕರೆಗಳು ಸಮಾನ ಹಕ್ಕುಗಳನ್ನು ಒದಗಿಸಲು ಸಮಲಿಂಗಿ ದಂಪತಿಗಳಿಗೆ ನ್ಯಾಯಾಲಯಗಳು ಮತ್ತು ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಅನುಗುಣವಾದ ಕಾನೂನು ರೂಪುರೇಷೆ ತರುವ ಅಗತ್ಯವನ್ನು ಬಿಂಬಿಸುತ್ತದೆ.
ಎಸ್. ಸುನೀಲ್ ಕುಮಾರ್, ಹೈಕೋರ್ಟ್ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.