ADVERTISEMENT

ಒಳನೋಟ | ವಿದ್ಯುತ್‌ ಚಾಲಿತ ವಾಹನಗಳ ಬಳಕೆ: ತೊಡಕುಗಳು ಹಲವು

ಜಯಸಿಂಹ ಆರ್.
Published 10 ಅಕ್ಟೋಬರ್ 2021, 1:10 IST
Last Updated 10 ಅಕ್ಟೋಬರ್ 2021, 1:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಭಾರತದಲ್ಲಿ ಸದ್ಯ ಹಲವು ವಿದ್ಯುತ್‌ ಚಾಲಿತ ಕಾರುಗಳು ಮಾರಾಟವಾಗುತ್ತಿವೆ. ಪ್ರವೇಶಮಟ್ಟದ ವಿದ್ಯುತ್ ಚಾಲಿತ ಕಾರುಗಳು ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 80-90 ಕಿ.ಮೀ.ನಷ್ಟು ದೂರ ಕ್ರಮಿಸುವ (ರೇಂಜ್) ಸಾಮರ್ಥ್ಯ ಹೊಂದಿವೆ. ಅತ್ಯಾಧುನಿಕ ತಂತ್ರಜ್ಞಾನದ ವಿದ್ಯುತ್ ಚಾಲಿತ ಕಾರುಗಳ ರೇಂಜ್‌ 300 ಕಿ.ಮೀ.ನಿಂದ 450 ಕಿ.ಮೀ.ವರೆಗೂ ಇವೆ. ಇವುಗಳಲ್ಲಿ ಕೆಲವು ಕಾರುಗಳನ್ನಷ್ಟೇ ದೂರದ ಪ್ರಯಾಣಕ್ಕೆ ಬಳಸಲು ಸಾಧ್ಯವಾಗುತ್ತದೆ, ಅದೂ ಹೆದ್ದಾರಿ ಮಧ್ಯೆ ಚಾರ್ಜಿಂಗ್ ವ್ಯವಸ್ಥೆ ಇದ್ದರೆ ಮಾತ್ರ.

ಭಾರತದ ಹೆದ್ದಾರಿಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ ವ್ಯವಸ್ಥೆ ಇಲ್ಲವೇ ಇಲ್ಲ. ಮುಂಬೈ, ದೆಹಲಿಯಂತಹ ದೊಡ್ಡ ನಗರಗಳ ಹೊರವಲಯದಲ್ಲಿ ಕೆಲವು ಚಾರ್ಜಿಂಗ್ ಕೇಂದ್ರಗಳಿವೆ. ಬೇರೆ ನಗರಗಳಲ್ಲಿ, ನಗರದ ಪರಿಮಿತಿಯಲ್ಲಷ್ಟೇ ಚಾರ್ಜಿಂಗ್ ವ್ಯವಸ್ಥೆ ಇದೆ.

ಚಾರ್ಜಿಂಗ್ ವ್ಯವಸ್ಥೆ ಸುಧಾರಿಸಿದರೆ ವಿದ್ಯುತ್ ಚಾಲಿತ ಕಾರನ್ನು ಖರೀದಿಸಬಹುದು ಎಂದು ಗ್ರಾಹಕರು ಬಯಸುತ್ತಾರೆ. ಆದರೆ, ಕೆಲವು ಕಂಪನಿಗಳು ಚಾರ್ಜಿಂಗ್ ವ್ಯವಸ್ಥೆಯಾದರೆ ಮಾತ್ರವೇ ಮಾರುಕಟ್ಟೆಗೆ ವಿದ್ಯುತ್ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲು ಕಾದಿವೆ. ಹೀಗಾಗಿ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆಯೂ ಕಡಿಮೆ ಇದೆ, ಚಾರ್ಜಿಂಗ್ ವ್ಯವಸ್ಥೆಯೂ ಸುಧಾರಿಸುತ್ತಿಲ್ಲ. ಟಾಟಾ ಪವರ್ ಕಂಪನಿ ಮಾತ್ರ ದೇಶದ ಹಲವೆಡೆ, ಎಚ್‌ಪಿ ಪೆಟ್ರೋಲ್‌ ಬಂಕ್‌ಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ.

ADVERTISEMENT

ಹೆದ್ದಾರಿಗಳಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಹಲವು ತೊಡಕುಗಳಿವೆ. ಮನೆಗಳಲ್ಲಿಯೇ ಇಂತಹ ಕಾರುಗಳನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಲು 6-8 ಗಂಟೆ ಬೇಕಾಗುತ್ತದೆ.

ಇಷ್ಟೇ ಸಾಮರ್ಥ್ಯದ ಸಾಮಾನ್ಯ ಚಾರ್ಜಿಂಗ್‌ ಕೇಂದ್ರಗಳನ್ನು ಹೆದ್ದಾರಿಗಳಲ್ಲಿ ಸ್ಥಾಪಿಸಿದರೆ, ಅದರಿಂದ ಹೆಚ್ಚು ಪ್ರಯೋಜನವಿಲ್ಲ. ದೂರದ ಪ್ರಯಾಣ ಮಾಡುತ್ತಿರುವವರು ಚಾರ್ಜಿಂಗ್ ಮಾಡಲು 6-8 ಗಂಟೆ ದಾರಿ ಮಧ್ಯೆ ಕಾಯಲು ಸಾಧ್ಯವಿಲ್ಲ. ಅದು ಕಾರ್ಯಸಾಧುವೂ ಅಲ್ಲ.

ಇದಕ್ಕೆ ಪರಿಹಾರವೆಂದರೆ ಡಿ.ಸಿ ಫಾಸ್ಟ್‌ ಚಾರ್ಜಿಂಗ್ ಕೇಂದ್ರ. ಈಗ ಮಾರುಕಟ್ಟೆಯಲ್ಲಿರುವ ಮತ್ತು ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಇರುವ ಬಹುತೇಕ ಕಾರುಗಳು, ಫಾಸ್ಟ್‌ ಚಾರ್ಜಿಂಗ್ ಕೇಂದ್ರಗಳಲ್ಲಿ ಒಂದು ಗಂಟೆಗೆ ಗರಿಷ್ಠ ಶೇ 80ರಷ್ಟು ಚಾರ್ಜ್ ಆಗುತ್ತವೆ. ಹೋಟೆಲ್‌-ರೆಸ್ಟೋರೆಂಟ್‌ಗಳ ಬಳಿ ಇಂತಹ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದರೆ ಅನುಕೂಲವಾಗುತ್ತದೆ. ಆದರೆ, ಇಂತಹ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಬೇಕಾಗುತ್ತದೆ. ಹೀಗಾಗಿಯೇ ಇಂತಹ ಚಾರ್ಜಿಂಗ್‌ ಕೇಂದ್ರಗಳ ಸಂಖ್ಯೆ ಕಡಿಮೆ ಇದೆ.

ದೇಶದ ಎಲ್ಲಾ ಹೆದ್ದಾರಿಗಳಲ್ಲಿ ಡಿಸಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು, ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್‌ನ ಜತೆಗೆ ಯೋಜನೆ ರೂಪಿಸುತ್ತಿದೆ. ಯೋಜನೆ ಅನುಷ್ಠಾನಕ್ಕೆ ಬಂದರೆ, ಈಪರಿಸ್ಥಿತಿ ಸುಧಾರಿಸಬಹುದು. ಆದರೆ ಈಚೆಗೆ ಬೆಂಗಳೂರಿನಿಂದ ಮೈಸೂರಿಗೆ ಇವಿ ಕಾರ್‌ನಲ್ಲಿ ಹೋಗಿದ್ದ ಒಬ್ಬರು, ಮೈಸೂರಿನ ಪಬ್ಲಿಕ್ ಚಾರ್ಜಿಂಗ್‌ ಕೇಂದ್ರದಲ್ಲಿ ಸಮಸ್ಯೆ ಎದುರಿಸಿದ್ದು ವರದಿಯಾಗಿದೆ. ಚಾರ್ಜಿಂಗ್ ಕೇಂದ್ರದಲ್ಲಿ ಇವಿ ಚಾರ್ಜ್ ಆಗದೇ ಇದ್ದ ಕಾರಣ ಆ ವ್ಯಕ್ತಿ, ವಾಹನವನ್ನು ಅಲ್ಲಿಯೇ ಬಿಟ್ಟು ಬಸ್‌ನಲ್ಲಿ ವಾಪಸ್ಸಾಗಿದ್ದಾರೆ. ಇಂತಹ ಘಟನೆಗಳು ಇ.ವಿ.ಗಳ ಬಗ್ಗೆ ಜನರಲ್ಲಿ ವಿಶ್ವಾಸ ಕುಂದಿಸುತ್ತವೆ. ಚಾರ್ಜಿಂಗ್ ಕೇಂದ್ರಗಳಲ್ಲಿ ಯಾವುದೇ ರೀತಿಯ ತೊಂದರೆ ಆಗದಂತಹ ವ್ಯವಸ್ಥೆಯನ್ನು ನಿರ್ಮಿಸಬೇಕಾಗುತ್ತದೆ. ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಅವುಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಸರ್ಕಾರದ ಹೊಣೆ. ಆಗ ಮಾತ್ರ ಇವಿ ಮತ್ತು ಚಾರ್ಜಿಂಗ್ ಕೇಂದ್ರಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ.

ಭಾರತೀಯರ ಈಗಿನ ಜೀವನಶೈಲಿಗೆ ಈ ಕಾರುಗಳು ಹೊಂದಿಕೆಯಾಗುವುದಿಲ್ಲ ಎಂಬ ಅಭಿಪ್ರಾಯವಿದೆ. ಇ.ವಿ. ವಾಹನ ಹೊಂದಿರುವವರು ದಿಢೀರ್ ಪ್ರಯಾಣ/ಪ್ರವಾಸ ಯೋಜಿಸಲು ಸಾಧ್ಯವಿಲ್ಲ. ತುರ್ತು ಸಂದರ್ಭದಲ್ಲಿ ಚಾರ್ಜ್ ಇಲ್ಲದಿದ್ದರೆ ಬಳಸಲು ಸಾಧ್ಯವಿಲ್ಲ. ತುರ್ತು ಸಂದರ್ಭದಲ್ಲಿ 6-8 ಗಂಟೆ ಚಾರ್ಜ್‌ ಮಾಡುತ್ತಾ ಕೂರಲಾಗದು.ಇವುಗಳ ಬಳಕೆ ಹೆಚ್ಚಾದಂತೆ, ಸದಾ ಚಾರ್ಜ್‌ ಸ್ಥಿತಿಯಲ್ಲಿ ಇರಿಸುವ ಮತ್ತುಪ್ರಯಾಣಗಳನ್ನೂ ಪೂರ್ವಯೋಜಿತವಾಗಿ ಮಾಡುವಂತಹ ಜೀವನ ಶೈಲಿ ರೂಪಿಸಿಕೊಳ್ಳಬೇಕಾಗುತ್ತದೆ. ಇದರೊಂದಿಗೆ, ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇದ್ದರೆ, ಇವುಗಳನ್ನು ಚಾರ್ಜ್ ಮಾಡಲು ಸಾಧ್ಯವೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.