ADVERTISEMENT

ಒಳನೋಟ | ಟಿಡಿಆರ್‌: ಅಕ್ರಮಗಳಿಗೆ ಕಳ್ಳ ದಾರಿ

ಪ್ರವೀಣ ಕುಮಾರ್ ಪಿ.ವಿ.
Published 21 ಆಗಸ್ಟ್ 2021, 20:30 IST
Last Updated 21 ಆಗಸ್ಟ್ 2021, 20:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಸಾರ್ವಜನಿಕ ಉದ್ದೇಶಕ್ಕೆ ಕೈಗೊಳ್ಳುವ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಸುಗಮಗೊಳಿಸಲು ಹಾಗೂ ಜಾಗ ಬಿಟ್ಟುಕೊಡುವವರಿಗೆ ಉತ್ತೇಜನ ನೀಡಲು, ‘ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು’ (ಟಿಡಿಆರ್‌) ಪ್ರಮಾಣಪತ್ರಗಳನ್ನು ಸರ್ಕಾರ ನೀಡುತ್ತಿದೆ. ‌ಟಿಡಿಆರ್‌ ನೀಡುವ ವ್ಯವಸ್ಥೆಯು ಭೂಸ್ವಾಧೀನ ಬಿಕ್ಕಟ್ಟು ಬಗೆಹರಿಸುವಲ್ಲಿ ಎಷ್ಟು ಪ್ರಯೋಜನವಾಗಿದೆಯೋ ತಿಳಿಯದು. ಜಾಗ ಬಿಟ್ಟುಕೊಟ್ಟ ಭೂಮಾಲೀಕರಿಗೆ ನಿಜಕ್ಕೂ ಇದು ವರದಾನವಾಗಿದೆಯೋ ಗೊತ್ತಿಲ್ಲ. ಆದರೆ ಕೆಲವು ಅಧಿಕಾರಿಗಳಂತೂ ಈ ವ್ಯವಸ್ಥೆಯ ಲೋಪಗಳನ್ನು ಬಳಸಿಕೊಂಡು ಅಕ್ರಮ ಹಣಗಳಿಕೆಗೆ ದಾರಿ ಮಾಡಿಕೊಂಡಿರುವುದಂತೂ ದಿಟ.

ಟಿಡಿಆರ್‌ ಅಕ್ರಮಗಳಿಗೆ ಸಂಬಂಧಿಸಿ ಬಿಬಿಎಂಪಿಯ 15 ಅಧಿಕಾರಿಗಳ ಮತ್ತು 59 ಖಾಸಗಿ ವ್ಯಕ್ತಿಗಳ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಮೂರು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನೂ ಸಲ್ಲಿಸಿದೆ. ಏಳು ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಒಟ್ಟು ₹ 150 ಕೋಟಿ ಮೌಲ್ಯದ 16 ಲಕ್ಷ ಚದರ ಅಡಿ ವಿಸ್ತೀರ್ಣದ ಟಿಡಿಆರ್‌ ನೀಡಿಕೆಯಲ್ಲಿ ಅಕ್ರಮ ನಡೆದಿರುವುದನ್ನು ಎಸಿಬಿ ಪತ್ತೆ ಮಾಡಿದೆ.

ಅಭಿವೃದ್ಧಿ ಕಾಮಗಾರಿಗಳಿಗಾಗಿ ಭೂಮಾಲೀಕರು ಬಿಟ್ಟುಕೊಟ್ಟ ಜಾಗಕ್ಕೆ ನಗದು ಪರಿಹಾರದ ಬದಲು ವರ್ಗಾಯಿಸ ಬಹುದಾದ ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರವನ್ನು (ಟಿಡಿಆರ್‌ಸಿ) ಸರ್ಕಾರ ವಿತರಿಸುತ್ತದೆ. ಜಾಗ ಬಿಟ್ಟುಕೊಟ್ಟ ಭೂಮಾಲೀಕರು ಟಿಡಿಆರ್‌ಸಿಗಳನ್ನು ಇತರರಿಗೆ ಮಾರಾಟ ಮಾಡಬಹುದು. ಬಹುಮಹಡಿ ಕಟ್ಟಡ ನಿರ್ಮಿಸುವವರು ಈ ಪ್ರಮಾಣಪತ್ರ ಲಗತ್ತಿಸಿ, ನೆಲ ಪ್ರದೇಶದ ಅನುಪಾತ (ಎಫ್‌ಎಆರ್‌) ಹೆಚ್ಚಿಸಲು ಬಳಸಬಹುದು.

ADVERTISEMENT

ಈ ವ್ಯವಸ್ಥೆಯನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧಿಕಾರಿಗಳು ದಲ್ಲಾಳಿಗಳ ಜೊತೆ ಕೋಟ್ಯಂತರ ರೂ‍ಪಾಯಿ ಅಕ್ರಮ ನಡೆಸಿದ ಹಲವು ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿವೆ. ಟಿಡಿಆರ್‌ ಕೊಡಿಸುವುದನ್ನೇ ದಂಧೆಯನ್ನಾಗಿಸಿಕೊಂಡ ಏಜೆನ್ಸಿಗಳೂ ನಗರದಲ್ಲಿ ಹುಟ್ಟಿಕೊಂಡಿವೆ.

ಅಸ್ತಿತ್ವದಲ್ಲೇ ಇಲ್ಲದ ಕಟ್ಟಡಗಳಿಗೂ ಟಿಡಿಆರ್‌ ಕೊಡಿಸುವುದು,ಕಟ್ಟಡದ ನೈಜ ವಿಸ್ತೀರ್ಣಕ್ಕಿಂತ ಪಟ್ಟು ಹೆಚ್ಚು ವಿಸ್ತೀರ್ಣಕ್ಕೆ ಟಿಡಿಆರ್‌ ನೀಡುವುದು. ಯಾರದೋ ಆಸ್ತಿಗೆ ಇನ್ಯಾರಿಗೋ ಟಿಡಿಆರ್‌ಸಿ ನೀಡುವುದು, ಆಸ್ತಿ ಮಾರಾಟವಾಗಿದ್ದರೂ ಅದನ್ನು ಖರೀದಿಸಿದವರ ಬದಲು ಮೂಲ ಮಾಲೀಕರಿಗೆ ಟಿಡಿಆರ್‌ಸಿ ಕೊಡಿಸುವುದು... ಇಂತಹ ಹತ್ತಾರು ಅಕ್ರಮಗಳಿಗೆ ರಾಜಧಾನಿ ಸಾಕ್ಷಿಯಾಗಿದೆ. ಸರ್ಕಾರದ ಆಸ್ತಿಗೂ ಟಿಡಿಆರ್‌ ನೀಡಿ, ಅದನ್ನು ಮಾರಿದ ಉದಾಹರಣೆಗಳೂ ನಗರದಲ್ಲಿವೆ.

ಎಸಿಬಿ ತನಿಖೆಯ ಕೆಲ ಪ್ರಕರಣಗಳು

*ಕೆ.ಆರ್‌. ಪುರ ಹೋಬಳಿ ಕೌದೇನಹಳ್ಳಿ ಸರ್ವೆ ನಂಬರ್‌ 132 ಅನ್ನು ರಸ್ತೆ ವಿಸ್ತರಣೆಗಾಗಿ ಬಿಬಿಎಂಪಿ ಸ್ವಾಧೀನಪಡಿಸಿಕೊಂಡಿತ್ತು. ಈ ಜಮೀನಿನ ಮಾಲೀಕರು ಕಂದಾಯ ನಿವೇಶನಗಳನ್ನು ರಚಿಸಿ ಬೇರೆಯವರಿಗೆ ಮಾರಿದ್ದರು. ಈ ಜಮೀನಿನ ಈಗಿನ ಮಾಲೀಕರ ಬದಲು ಮೂಲ ಮಾಲೀಕರ ಹೆಸರಿಗೆ ಟಿಡಿಆರ್‌ ನೀಡಲಾಗಿದೆ! ರಿಯಲ್‌ ಎಸ್ಟೇಟ್‌ ಸಂಸ್ಥೆಯೊಂದು ಮಧ್ಯವರ್ತಿಗಳ ಮೂಲಕ ಈ ಟಿಡಿಆರ್‌ಸಿಗಳನ್ನು ₹ 2.7 ಕೋಟಿಗೆ ಖರೀದಿಸಿ ಎಂಟು ಕಂಪನಿಗಳಿಗೆ ₹ 27 ಕೋಟಿಗೆ ಮಾರಿದೆ!

*ಕೌದೇನಹಳ್ಳಿ ಪ್ರಕರಣದಲ್ಲಿ ಒಂದು ಮಹಡಿ ಕಟ್ಟಡವನ್ನು ಮೂರು ಮಹಡಿ ಕಟ್ಟಡವೆಂದು ತೋರಿಸಿ ಕೆಲವು ರಿಯಲ್‌ ಎಸ್ಟೇಟ್‌ ಮಾಫಿಯಾಗಳಿಗೆ 5.65 ಲಕ್ಷ ಚದರಡಿಯಷ್ಟು ವಿಸ್ತೀರ್ಣಕ್ಕೆ ಟಿಡಿಆರ್‌ಸಿ ನೀಡಲಾಗಿದೆ.

*ಹೊರಮಾವು– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆ ಯೋಜನೆಗೆ ಗುರುತಿಸಿರುವ ಕಟ್ಟಡ ಮತ್ತು ನಿವೇಶನಗಳನ್ನು ಸ್ವಾಧೀನಪಡಿಸಿಕೊಳ್ಳದೆಯೇ ಬಿಬಿಎಂಪಿ ಅಧಿಕಾರಿಗಳು ಟಿಡಿಆರ್‌ಸಿ ವಿತರಿಸಿದ್ದಾರೆ. ಸ್ವತ್ತನ್ನು ಸ್ವಾಧೀನಕ್ಕೆ ಪಡೆದ ಬಳಿಕವಷ್ಟೇ ಟಿಡಿಆರ್‌ಸಿ ವಿತರಿಸಬೇಕೆಂಬ ನಿಯಮವನ್ನು ಗಾಳಿಗೆ ತೂರಿದ್ದಾರೆ.

*ಟಿಡಿಆರ್ ಅಕ್ರಮಕ್ಕೆ ಸಂಬಂಧಿಸಿದ 47 ಕಡತಗಳು ಬಿಬಿಎಂಪಿ ಕಚೇರಿಯಿಂದ ನಾಪತ್ತೆಯಾಗಿವೆ! ಈ ಬಗ್ಗೆ ದೂರೂ ದಾಖಲಾಗಿದೆ.

*ಚನ್ನಸಂದ್ರದಿಂದ ಹೆಣ್ಣೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಯ ಹೆಸರಿನಲ್ಲಿ ಟಿಡಿಆರ್‌ ನೀಡಲಾಗಿದೆ.

*ಮಲ್ಲೇಶ್ವರದಲ್ಲಿ ರಸ್ತೆ ವಿಸ್ತರಣೆಗೆ ಬಳಸಿಕೊಂಡಿರುವ ಸರ್ಕಾರದ ಜಮೀನಿಗೆ ಪ್ರತಿಯಾಗಿ ರಿಯಲ್‌ ಎಸ್ಟೇಟ್‌ ಕಂಪನಿಗೆ ಬಿಬಿಎಂಪಿ ಟಿಡಿಆರ್‌ಸಿ ವಿತರಿಸಿತ್ತು.

*ರಾಮನಗರ ಜಿಲ್ಲೆಯ ಕೊಡಿಯಾಲ ಕರೇನಹಳ್ಳಿಯಲ್ಲಿ ಕಸ ಸುರಿಯಲು ವಶಪಡಿಸಿಕೊಂಡ 45 ಎಕರೆ ಜಾಗಕ್ಕೆ ಪ್ರತಿಯಾಗಿ ನೀಡಿದ ಟಿಡಿಆರ್‌ಸಿಯನ್ನು ಬೆಂಗಳೂರು ನಗರದೊಳಗೆ ಬಳಸಲು ಅವಕಾಶ ಕಲ್ಪಿಸಿದ್ದ ಪ್ರಕರಣ ಚರ್ಚೆಗೆ ಗ್ರಾಸವಾಗಿತ್ತು. ಈ ಟಿಡಿಆರ್‌ಸಿಯನ್ನು ಕರೇನಹಳ್ಳಿ ಆಸುಪಾಸಿನಲ್ಲಿ ಬಳಸಿದರೆ ಅಲ್ಲಿ ಎಕರೆಗೆ ಅಂದಾಜು ₹20 ಲಕ್ಷ ಮೌಲ್ಯ ಸಿಗುತ್ತದೆ. ಅದನ್ನೇ ಸದಾಶಿವನಗರ, ಎಂ.ಜಿ.ರಸ್ತೆ, ಜಯನಗರದಂತಹ ಪ್ರದೇಶದಲ್ಲಿ ಬಳಸಿದರೆ ಅದರ ಒಟ್ಟು ಮೊತ್ತ ₹700 ಕೋಟಿಯಿಂದ ₹800 ಕೋಟಿಯಷ್ಟು ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.