ಹುಬ್ಬಳ್ಳಿ: ರಾಜ್ಯ ಪ್ರವೇಶಿಸುವ ವಾಹನಗಳು ಅದರಲ್ಲೂ ಸರಕು ವಾಹನಗಳ ತಪಾಸಣೆಗಾಗಿ ಗಡಿಭಾಗಗಳಲ್ಲಿ ತೆರೆಯಲಾಗಿರುವ ಆರ್‌ಟಿಒ ಚೆಕ್‌ಪೋಸ್ಟ್‌ಗಳು, ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಜೇಬು ತುಂಬಿಸುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಲಾರಿ ಚಾಲಕರು, ಮಾಲೀಕರು ಕೂಡ ಇದಕ್ಕೆ ‘ಕೈ’ ಜೋಡಿಸಿರುವುದರಿಂದ ಯಾವುದೇ ಅಡ್ಡಿ– ಆತಂಕ ಇಲ್ಲದೇ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರತಿದಿನ ಲಕ್ಷಾಂತರ ರೂಪಾಯಿ ಹರಿದಾಡುತ್ತಿದ್ದು, ಚೆಕ್‌ಪೋಸ್ಟ್‌ಗಳು ಇಲಾಖೆ ಪಾಲಿಗೆ ಅಕ್ಷಯ ಪಾತ್ರೆಯಂತಾಗಿವೆ.
ಮಹಾರಾಷ್ಟ್ರ, ತೆಲಂಗಾಣ, ಹೈದರಾಬಾದ್, ತಮಿಳುನಾಡು ಹಾಗೂ ಕೇರಳ ಮೂಲಕ ಬರುವ ಸರಕು ವಾಹನಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಚಾಲನಾ ಪರವಾನಗಿ, ವಾಹನ ದಾಖಲೆಗಳ ತಪಾಸಣೆ, ವಾಣಿಜ್ಯ ತೆರಿಗೆ ಪಾವತಿಸಿದ ಬಿಲ್‌ಗಳು ವಾಹನದ ಕಂಡಿಷನ್, ಓವರ್‌ಲೋಡ್, ಇನ್ನಿತರ ಅಂಶಗಳ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಾರೆ. ಯಾವುದಾದರೂ ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಭಾರಿ ಪ್ರಮಾಣದ ದಂಡ ವಿಧಿಸುತ್ತಾರೆ. ಇಲ್ಲದಿದ್ದರೆ, ಹಣ ವಸೂಲಿಗೆ ಇಳಿಯುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಮಹಾರಾಷ್ಟ್ರದಿಂದ ಸೊಲ್ಲಾಪುರ ಮಾರ್ಗವಾಗಿ ಬರುವ ಸರಕು ಲಾರಿಗಳು ವಿಜಯಪುರ ಜಿಲ್ಲೆಯ ಝಳಕಿ ಚೆಕ್‌ಪೋಸ್ಟ್ ಮೂಲಕ ರಾಜ್ಯ ಪ್ರವೇಶಿಸುತ್ತವೆ. ಪ್ರತಿದಿನ ಕನಿಷ್ಠ ಒಂದೂವರೆ ಸಾವಿರ ಲಾರಿಗಳು ಸಂಚರಿಸುತ್ತವೆ. ರಾಜ್ಯದಲ್ಲಿ ಅತಿಹೆಚ್ಚು ಹಣದ ಹೊಳೆ ಹರಿಯುವುದೇ ಈ ಚೆಕ್‌ಪೋಸ್ಟ್‌ನಲ್ಲಿ. ನಿಯಮ ಉಲ್ಲಂಘನೆಯ ಪ್ರಮಾಣದ ಮೇಲೆ ಲಂಚ ವಸೂಲಿ ಮಾಡಲಾಗುತ್ತಿದೆ. ಸಣ್ಣಪುಟ್ಟ ಲೋಪಕ್ಕಾಗಿ ₹ 500-₹ 1000ವರೆಗೆ, ಲೋಪ ದೊಡ್ಡ ಪ್ರಮಾಣದ್ದಾಗಿದ್ದರೆ ₹5 ಸಾವಿರದಿಂದ ₹15 ಸಾವಿರ, ₹20 ಸಾವಿರದವರೆಗೂ ವಸೂಲಿ ಮಾಡುತ್ತಾರೆ. ರಾಜ್ಯದ ಇತರ ಚೆಕ್‌ಪೋಸ್ಟ್‌ಗಳ ಸ್ಥಿತಿಯು ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ ಎನ್ನುವುದು ಲಾರಿ ಚಾಲಕರ ಮಾತು.
ಅನಿವಾರ್ಯ: ‘ಹಣ ನೀಡದಿದ್ದರೆ ಅಧಿಕಾರಿಗಳು ಹತ್ತೆಂಟು ನಿಯಮ ಉಲ್ಲಂಘಿಸಿದ್ದಾರೆಂದು ದಂಡದ ರಸೀದಿ ಹರಿಯುತ್ತಾರೆ. ಇವು ಸುಳ್ಳೆಂದು ವಾದಿಸಲು ಕೋರ್ಟ್‌ಗೆ ಹೋಗಬೇಕಾಗುತ್ತದೆ. ಅಲ್ಲಿಯವರೆಗೆ ಲಾರಿ ವಶಕ್ಕೆ ಪಡೆಯುತ್ತಾರೆ. ಅದರಲ್ಲಿರುವ ಸರಕು ನಿಗದಿತ ಸಮಯದೊಳಗೆ ಖರೀದಿದಾರರಿಗೆ ತಲುಪಿಸಲು ಸಾಧ್ಯವಾಗುವುದಿಲ್ಲ. ಕೋರ್ಟ್‌ಗೆ ಹೋಗಿ ವಕೀಲರನ್ನು ಇಟ್ಟುಕೊಂಡು ವಾದಿಸಲು ನಮ್ಮ ಬಳಿ ಅಷ್ಟೊಂದು ಹಣವಾಗಲಿ, ಸಮಯವಾಗಲಿ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಹಣ ನೀಡಿ, ಬರುತ್ತೇವೆ’ ಎಂದು ಝಳಕಿ ಚೆಕ್‌ಪೋಸ್ಟ್ ಬಳಿ ಲಾರಿ ಚಾಲಕರೊಬ್ಬರು ಹೇಳಿದರು.
ಭಾರಿ ಲಾಬಿ: ವಿಜಯಪುರದ ಝಳಕಿ ಚೆಕ್‌ಪೋಸ್ಟ್‌ಗೆ ಬರಲು ಆರ್‌ಟಿಒ ಅಧಿಕಾರಿಗಳು ಭಾರಿ ಲಾಬಿ ನಡೆಸುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಮೇಲಧಿಕಾರಿಗಳಿಗೆ ಅಲ್ಲದೇ ರಾಜಕಾರಣಿಗಳಿಗೂ ‘ಕಪ್ಪ–ಕಾಣಿಕೆ’ ಸಂದಾಯ ಮಾಡಿ ಬರುತ್ತಾರೆ. ಇಲ್ಲಿ ಕೆಲಸ ಮಾಡಲು ಹಣ ಬಲದ ಜೊತೆ ರಾಜಕೀಯದ ಬಲವೂ ಬೇಕು. ಹೀಗೆ ಬಂದವರು, ಪ್ರತಿದಿನ ಲಕ್ಷ– ಲಕ್ಷಗಟ್ಟಲೆ ಎಣಿಸುತ್ತಾರೆ. ಇದರಲ್ಲಿ ಒಂದಿಷ್ಟು ಪಾಲು ಪೊಲೀಸರಿಗೆ ಹಾಗೂ ರಾಜಕಾರಣಿಗಳಿಗೂ ತಲುಪುತ್ತದೆ ಎನ್ನುವ ಮಾತು ಜನಜನಿತ.
***
ಟೋಕನ್ ವ್ಯವಸ್ಥೆಯೂ ಇದೆ...
ಚೆಕ್‌ಪೋಸ್ಟ್‌ಗಳಲ್ಲಿ ಹಣ ವಸೂಲಿ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ತಿಂಗಳಿಗೆ ಇಂತಿಷ್ಟು ಹಣ ಫಿಕ್ಸ್ ಮಾಡಿ ಲಾರಿ ಮಾಲೀಕರೇ ಆರ್‌ಟಿಒ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರ ಲಾರಿಗಳಿಗೆ ಟೋಕನ್ ನೀಡಲಾಗುತ್ತದೆ. ಇಂತಹ ಟೋಕನ್ ಇರುವ ಲಾರಿಗಳನ್ನು ಯಾವುದೇ ತಪಾಸಣೆಯಿಲ್ಲದೆ ಚೆಕ್‌ಪೋಸ್ಟ್‌ಗಳಲ್ಲಿ ಬಿಟ್ಟುಕಳುಹಿಸುತ್ತಾರೆ. ಟೋಕನ್ ಇಲ್ಲದ ವಾಹನಗಳಿಗೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸುತ್ತಾರೆ ಅಥವಾ ಹಣ ವಸೂಲಿ ಮಾಡಿ ಕಳುಹಿಸುತ್ತಾರೆ
ಬಿ.ಚನ್ನಾರೆಡ್ಡಿ,ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ
***
ಕಾಯಬೇಕಾದ ಅನಿವಾರ್ಯ
ಹೊರ ರಾಜ್ಯಗಳಿಗೆ ಹೋಗಲು ವಿಶೇಷ ಅನುಮತಿಯನ್ನು ಆನ್‌ಲೈನ್‌ನಲ್ಲೇ ಪಡೆಯಲು ಅವಕಾಶ ಇದೆ. ಆದರೆ, ಆ ರಾಜ್ಯಗಳ ಪೋರ್ಟಲ್‌ಗಳು ಬಂದ್ ಆಗಿದ್ದರೆ ಚೆಕ್‌ಪೋಸ್ಟ್‌ಗಳಲ್ಲಿ ಕಾಯಬೇಕಾದ ಸ್ಥಿತಿ ಮುಂದುವರಿದಿದೆ.
ಗಡಿಗಳಲ್ಲಿನ ಚೆಕ್‌ಪೋಸ್ಟ್‌ಗಳಲ್ಲೇ ಕಾದು ನಿಂತು ಶುಲ್ಕ ಪಾವತಿ ಮಾಡುವ ವ್ಯವಸ್ಥೆ ಇಂದಿಗೂ ಇದೆ. ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ 2021ರ ಸೆಪ್ಟೆಂಬರ್‌ನಲ್ಲೇ ಆದೇಶ ನೀಡಿದೆ. ಆದರೂ ಆನ್‌ಲೈನ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದರಿಂದ ಚೆಕ್‌ಪೋಸ್ಟ್‌ಗಳು ಉಳಿದುಕೊಂಡಿವೆ
–ಕೆ. ರಾಧಾಕೃಷ್ಣ ಹೊಳ್ಳ,ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.