ADVERTISEMENT

ಒಳನೋಟ | ‘ಸ್ಮಾರ್ಟ್‌’ ಆಗದ ನಗರಗಳು

ವೆಂಕಟೇಶ ಜಿ.ಎಚ್.
Published 15 ಏಪ್ರಿಲ್ 2023, 23:15 IST
Last Updated 15 ಏಪ್ರಿಲ್ 2023, 23:15 IST
   

ಶಿವಮೊಗ್ಗ: ದಾವಣಗೆರೆಯ ಮಹಾನಗರಪಾಲಿಕೆ ಎದುರಿನ ಪಾದಚಾರಿ ಮಾರ್ಗದಲ್ಲಿ ದೂಳುಹಿಡಿದು, ಕೆಟ್ಟು ನಿಂತ ಸೈಕಲ್‌ಗಳು ಸಾಲುಗಟ್ಟಿದ್ದವು. ಯಾರೋ ಆಟಿಕೆ ಸೈಕಲ್‌ಗಳ ತಂದು ಮಾರಾಟಕ್ಕಿಟ್ಟಿದ್ದಾರೆ ಅಂದುಕೊಂಡೆ. ಆದರೂ ಕುತೂಹಲ ತಾಳಲಾರದೇ ಕೆದಕಿದಾಗ ಗೊತ್ತಾಗಿದ್ದು, ಅದು ಅಲ್ಲಿನ ಸ್ಮಾರ್ಟ್ ಸಿಟಿ ಯೋಜನೆಯಡಿ ಪರಿಚಯಿಸಿದ ಬೈಸಿಕಲ್ ಶೇರಿಂಗ್ ವ್ಯವಸ್ಥೆಯ ಸೈಕಲ್‌ ಸ್ಟ್ಯಾಂಡ್ (ಡಾಕ್‌ ಸ್ಟೇಶನ್) ಎಂದು!..

ಬಿಸಿಲು, ಮಳೆ–ಗಾಳಿಗೆ ಮೈಯೊಡ್ಡಿ ನಿಂತ ಆ ಸೈಕಲ್ ಸ್ಟ್ಯಾಂಡ್‌ ಕ್ಷಣ ಹೊತ್ತು ಸ್ಮಾರ್ಟ್ ಕಲ್ಪನೆಯನ್ನೇ ಅಣಕಿಸಿದಂತೆ ತೋರಿತು. ಮಹಾನಗರ ಪಾಲಿಕೆ ಮುಂಭಾಗ ಮಾತ್ರವಲ್ಲ ಅಲ್ಲಿನ ಮೋತಿ ವೀರಪ್ಪ ಕಾಲೇಜು, ಜಯನಗರ, ಐಟಿಐ ಕಾಲೇಜು, ಲಕ್ಷ್ಮೀ ಫ್ಲೋರ್‌ ಮಿಲ್‌ ಬಳಿಯೂ ಅದೇ ಚಿತ್ರಣ. ಸೈಕಲ್‌ ಕೊಂಡು ಅವುಗಳ ನಿರ್ವಹಣೆಗೆಂದೇ ಸ್ಮಾರ್ಟ್‌ ಸಿಟಿ ಕಂಪೆನಿ ₹ 9.09 ಕೋಟಿ ಮೊತ್ತ ಖರ್ಚು ಮಾಡಿದೆ. ಅದರ ನಿರ್ವಹಣೆ ಹೊಣೆ ಮುಂಬೈನ ಕಂಪೆನಿಗೆ ಕೊಟ್ಟಿದೆ. ಆದರೆ ಸೈಕಲ್‌ಗಳು ಓಡುತ್ತಿಲ್ಲ. ಅನ್‌ಲಾಕ್ ಮಾಡದೇ ಬಹಳಷ್ಟು ತಿಂಗಳು ಕಳೆದಿದೆ. ಟೈರ್‌ಗಳಲ್ಲಿ ಗಾಳಿ ಇಲ್ಲ. ರಿಮ್‌ ತುಕ್ಕು ಹಿಡಿಯಲು ಆರಂಭವಾಗಿದೆ. ಚೈನ್‌ಗೆ ಗ್ರೀಸ್‌ ಬಿದ್ದಿಲ್ಲ. ಫೈಬರ್‌ನ ಮಡ್‌ಗಾರ್ಡ್ ಬಿಸಿಲಿಗೆ ಪುಡಿಯಾಗಿ ಉದುರಲು ಆರಂಭವಾಗಿದೆ. ಬಾರ್‌ಕೋಡ್‌ಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ ಸೈಕಲ್‌ ಬೇಕೆಂದು ಬಯಸುವವರಿಗೆ ಸಹ ಸೈಕಲ್‌ ಸಿಗುತ್ತಿಲ್ಲ. ಒಟ್ಟಾರೆ ಇಡೀ ಸೈಕಲ್ ಶೇರಿಂಗ್ ವ್ಯವಸ್ಥೆಯೇ ಹಾಳುಬಿದ್ದಿದೆ.

ದಾವಣಗೆರೆಯ ಕೊಟ್ರೇಶ್‌ ವೃತ್ತಿಯಲ್ಲಿ ಆಟೊ ಚಾಲಕ. ನಿರ್ವಹಣೆ ಖರ್ಚು ಕಮ್ಮಿ ಎಂಬ ಪ್ರಚಾರ ನಂಬಿ ತಮ್ಮಲ್ಲಿದ್ದ ಹಳೆಯ ಆಟೊ ಮಾರಾಟ ಮಾಡಿ ₹1.81 ಲಕ್ಷ ಕೊಟ್ಟು ಇ–ಆಟೊ ಖರೀದಿಸಿದ್ದರು.

ADVERTISEMENT



ಅದಕ್ಕೆ ₹72,400 ಸಹಾಯಧನ ಕೊಟ್ಟಿದ್ದ ಸ್ಮಾರ್ಟ್‌ ಸಿಟಿ ಸಂಸ್ಥೆ ಉಳಿದ ಹಣವನ್ನು ತಾನೇ ಮುಂದೆ ನಿಂತು ಬ್ಯಾಂಕ್‌ನಿಂದ ಸಾಲ ಕೊಡಿಸಿತ್ತು. ವರ್ಷ ಕಳೆಯುವುದರೊಳಗೆ ಆ ಆಟೊ ಮೂಲೆ ಸೇರಿದೆ.

‘3 ಗಂಟೆ ಚಾರ್ಜ್ ಆದರೆ ಆಟೊ 80 ಕಿ.ಮೀ ಓಡುತ್ತದೆ ಎಂದು ಸ್ಮಾರ್ಟ್‌ ಸಿಟಿಯವರು ಹೇಳಿದ್ದರು. ಅದು 35 ಕಿ.ಮೀ ಕೂಡ ಮೈಲೇಜ್ ಕೊಡುತ್ತಿಲ್ಲ. ಕಳಪೆ ಗುಣಮಟ್ಟದಿಂದಾಗಿ ಆಟೊಗಳು ಸರಿಯಾಗಿ ಓಡುವುದಿಲ್ಲ. ಸಣ್ಣ ಗುಂಡಿ ಬಂದರೂ ವಾಲುತ್ತವೆ. ಹಿಂಬದಿ ಕುಳಿತವರನ್ನು ಮೇಲಕ್ಕೆ ಎತ್ತಿ ಹಾಕುತ್ತವೆ. ಪ್ರಯಾಣಿಕರು ಇ–ಆಟೊ ಹತ್ತುತ್ತಲೇ ಇಲ್ಲ. ಒಂದು ತಿಂಗಳು ಮಾತ್ರ ಆಟೊ ಓಡಿದ್ದು, ಈಗ ಮನೆ ಮುಂದೆ ನಿಂತಿದೆ. ಸಾಲ ಒಂದು ಕಂತು ಮಾತ್ರ ಕಟ್ಟಿದ್ದೇವೆ. ಬ್ಯಾಂಕ್‌ನವರು ಪದೇ ಪದೇ ನೋಟಿಸ್‌ ಕಳುಹಿಸುತ್ತಿದ್ದಾರೆ. ಫೋನ್‌ ಮಾಡುತ್ತಾರೆ’ ಎಂದು ಕೊಟ್ರೇಶ್ ಅಳಲ ತೋಡಿಕೊಂಡರು.

‘ಇದು ನನ್ನೊಬ್ಬನ ಸಮಸ್ಯೆ ಅಲ್ಲ. ಉಳಿದ 9 ಜನ ಫಲಾನುಭವಿಗಳದ್ದು (ಆಟೊ ಚಾಲಕರು) ಇದೇ ಕಥೆ. ಸಾಲ ಕಟ್ಟಲು ಆಗುತ್ತಿಲ್ಲ. ಜೀವನಕ್ಕಾಗಿ ಬೇರೆ ಆಟೊ ಬಾಡಿಗೆ ಪಡೆದು ಓಡಿಸುತ್ತಿದ್ದೇವೆ. ಅದು ಜೀವನ ನಿರ್ವಹಣೆಗೆ ಸಾಲುತ್ತಿಲ್ಲ. ಇನ್ನು ಇ–ಆಟೋಗಾಗಿ ಪಡೆದ ಸಾಲಕ್ಕೆ ಕಂತು ಎಲ್ಲಿಂದ ಕಟ್ಟುವುದು’ ಎಂದು ಪ್ರಶ್ನಿಸುವ ಅವರು, ‘ಸ್ಮಾರ್ಟ್‌ ಸಿಟಿ ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ. ಆಟೊ ನೀಡಿದ ಕಂಪನಿಗೆ ನೋಟಿಸ್‌ ನೀಡಿದ್ದು, ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದೆ ಎನ್ನುತ್ತಾರೆ. ಎರಡು ವರ್ಷಗಳಾದರೂ ಸಮಸ್ಯೆ ಬಗೆಹರಿಸಿಲ್ಲ’ ಎಂಬುದು ಅವರ ಅಳಲು.

ಬೇಡದ ಕಡೆ ಬಸ್ ನಿಲ್ದಾಣ: ಶಿವಮೊಗ್ಗದ ರೈಲು ನಿಲ್ದಾಣದಿಂದ ಗಾಂಧಿನಗರದ ಉಷಾ ನರ್ಸಿಂಗ್‌ ಹೋಂನತ್ತ ಹೊರಟವನು ಮಳೆಗೆ ಸಿಲುಕಿ ರಕ್ಷಣೆಗೆಂದು ರಸ್ತೆ ಪಕ್ಕದ ಬಸ್‌ಸ್ಟಾಪ್‌ನಲ್ಲಿ ಆಶ್ರಯ ಪಡೆದೆ. ಸ್ಟಾಪ್ ಹೊಸದೇ ಅನ್ನಿಸಿದರೂ ಬಳಕೆಯಾಗದೇ ಪಳೆಯುಳಿಕೆಯಂತೆ ತೋರುತ್ತಿತ್ತು. ಅಲ್ಲಿ ಜನರ ಓಡಾಟವೂ ಕಾಣಸಿಕ್ಕಲಿಲ್ಲ. ಅದು ಸ್ಮಾರ್ಟ್ ಸಿಟಿ ಯೋಜನೆಯಡಿ ಕಟ್ಟಿದ್ದು ಎಂಬ ಫಲಕ ಕಾಣಸಿಕ್ಕಿತು.

ಅಚ್ಚರಿಯೆಂದರೆ ಆ ರಸ್ತೆಯಲ್ಲಿ ಸಿಟಿ ಬಸ್‌ನ ಓಡಾಟವೇ ಇಲ್ಲ. ಆದರೂ ಬಾರದ ಬಸ್‌ನ ನಿರೀಕ್ಷೆಯಲ್ಲಿ ಸ್ಟಾಪ್ ಎದ್ದುನಿಂತಿದೆ. ಬರೀ ಅಲ್ಲಿ ಮಾತ್ರವಲ್ಲ ಕುವೆಂಪು ನಗರದಲ್ಲೂ ಯಾವತ್ತೂ ಬಸ್‌ ಕಾಣದಿದ್ದರೂ ಮೂರು ಕಡೆ ಸ್ಟಾಪ್ ಸಿಂಗಾರಗೊಂಡಿವೆ. ವಿಶೇಷವೆಂದರೆ ಶಿವಮೊಗ್ಗದಲ್ಲಿ ಸ್ಮಾರ್ಟ್‌ ಸಿಟಿಯಡಿ ನಿರ್ಮಿಸಿರುವ 81 ಬಸ್‌ಸ್ಟಾಪ್‌ಗಳಲ್ಲಿ 29ಕ್ಕೆ ಮಾತ್ರ ಅನುಮತಿ ಇದೆ. ಹೊಸಮನೆ ಬಡಾವಣೆಯ ಸಮೀಪದ ತುಂಗಾ ಚಾನೆಲ್‌ ದಂಡೆ, ಗೋಪಾಳದ 100 ಅಡಿ ರಸ್ತೆಯಲ್ಲಿ ಹೀಗೆ ಬಸ್‌ ಓಡಾಡದ ಕಡೆಯಲ್ಲೆಲ್ಲ ಅನುದಾನ ಖರ್ಚು ಮಾಡಲು ಜಾಗ ಹುಡುಕಿ ಬಸ್‌ ಸ್ಟಾಪ್ ಕಟ್ಟಲಾಗಿದೆ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿತು.

ಜನರ ಸಹಭಾಗಿತ್ವದೊಂದಿಗೆ ಸ್ಥಳೀಯ ಸಂಪನ್ಮೂಲಗಳ ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿಯ ಆಶಯದೊಂದಿಗೆ ಕೇಂದ್ರ ಸರ್ಕಾರ ಸ್ಕಾರ್ಟ್ ಸಿಟಿ ಯೋಜನೆ ರೂಪಿಸಿದೆ. 2015ರಲ್ಲಿ ಈ ಯೋಜನೆ ಜಾರಿಗೊಂಡಾಗ ಜಾಗತಿಕ ದರ್ಜೆಯ ಮೂಲ ಸೌಕರ್ಯದ ಬಣ್ಣದ ಕನಸುಗಳನ್ನು ನಗರ ಪ್ರದೇಶದ ನಿವಾಸಿಗಳಲ್ಲಿ ಬಿತ್ತಲಾಗಿತ್ತು. ಆದರೆ ದಾವಣಗೆರೆಯ ಸೈಕಲ್‌ ಸ್ಟ್ಯಾಂಡ್, ಇ–ಆಟೊ, ಶಿವಮೊಗ್ಗದ ಸ್ಮಾರ್ಟ್‌ ಬಸ್‌ಸ್ಟಾಪ್‌ನ ನಿದರ್ಶನವು ಅನುಷ್ಠಾನ ಹಂತದಲ್ಲಿನ ಅದ್ವಾನಗಳಿಂದಾಗಿ ಯೋಜನೆಯ ಆಶಯವೇ ಮಣ್ಣುಪಾಲಾಗುತ್ತಿದೆ ಎನ್ನಬಹುದು.

ಯುರೋಪ್‌ನ ಸುಸಜ್ಜಿತ ನಗರಗಳಲ್ಲಿ ಪರಿಸರ ಸ್ನೇಹಿ ಸೈಕಲ್‌ ಪಥ, ಮೆಟ್ರೊ, ಟ್ರಾಂ ಇವುಗಳಿಗೆ ಪೂರಕವಾಗಿ ಇ– ಬಸ್‌, ಅಂಗವಿಕಲರ ಓಡಾಟಕ್ಕೂ ಅನುಕೂಲವಾದ ಗುಣಮಟ್ಟದ ಪಾದಚಾರಿ ಮಾರ್ಗ, ಅದರ ನಡುವೆಯೇ ಹಸಿರು ಹೊದ್ದ ಮರಗಳು, ನಗರದ ಮಧ್ಯೆ ಹರಿಯುವ ಕಲುಷಿತರಹಿತ ನದಿ, ನಡುವೆ ದೋಣಿಗಳ ಓಡಾಟ..ಹೀಗೇ ಸಂಪೂರ್ಣ ನಗರವೇ ಪರಿಸರ ಸ್ನೇಹಿಯಾಗಿರುತ್ತದೆ. ಆದರೆ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗುತ್ತಿರುವ ನಗರಗಳಲ್ಲಿ ಯೋಜನೆಗಳ ಆಯ್ಕೆ, ಜಾರಿಯಲ್ಲಿ ದೂರದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಏಳು ನಗರಗಳಲ್ಲಿ (ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು) ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಗೊಂಡಿದೆ. ಕಾಲಮಿತಿಯಂತೆ ಇದೇ ವರ್ಷ (2023) ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿದೆ. ಹೀಗಾಗಿ ಯೋಜನೆ ಅನುಷ್ಠಾನದ ಇಣುಕು ನೋಟಕ್ಕಾಗಿ ‘ಪ್ರಜಾವಾಣಿ’ ಸ್ಮಾರ್ಟ್‌ ಸಿಟಿಗಳಲ್ಲಿ ಅಡ್ಡಾಡಿದ್ದು, ಅಲ್ಲಿ ಕಂಡದ್ದು, ಕೇಳಿದ್ದು ಮಾತ್ರ ಜನರಿಂದ ದೂರುಗಳ ಸರಮಾಲೆ.

‘ನಲ್ಲಿಯಲ್ಲಿ (ನಳ) ಕಲುಷಿತ ನೀರು ಬಂದರೆ, ದಿನಗಟ್ಟಲೇ ವಿದ್ಯುತ್ ಕಡಿತಗೊಂಡರೆ, ನಗರದ ಮುಖ್ಯ ರಸ್ತೆಗಳಲ್ಲಿ ಅಪಘಾತ ಸಂಭವಿಸಿದರೆ ನಮ್ಮೂರಿನ ಜನರು ಅಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ ಅಂದುಕೊಳ್ಳುತ್ತಾರೆ’ ಎಂದು ರವೀಂದ್ರ ನಗರದಲ್ಲಿ ಎದುರಾದ ಶಿವಮೊಗ್ಗದ ನಾಗರಿಕ ವೇದಿಕೆ ಅಧ್ಯಕ್ಷ ಕೆ.ವಿ.ವಸಂತಕುಮಾರ್ ಚಟಾಕಿ ಹಾರಿಸಿದರು.

ಜನಪ್ರತಿನಿಧಿ, ಅಧಿಕಾರಿ, ಗುತ್ತಿಗೆದಾರರ ಹಿತ ಕಾಯುವ, ಅವರ ಜೇಬು ತುಂಬಿಸುವ ಉಮೇದಿಗೆ ಸ್ಮಾರ್ಟ್‌ ಸಿಟಿ ಸಿಲುಕಿದೆ ಎಂದು ಹೇಳಿದ ವಸಂತಕುಮಾರ್, ತಮ್ಮ ಆರೋಪಕ್ಕೆ ಪೂರಕವಾಗಿ ಶಿವಮೊಗ್ಗ ಜಿಲ್ಲಾಡಳಿತ, ಸ್ಮಾರ್ಟ್ ಸಿಟಿ ಸಂಸ್ಥೆಗೆ ನೀಡಿದ ದೂರುಗಳು, ಪತ್ರ ವ್ಯವಹಾರಗಳ ದೊಡ್ಡ ಕಡತವನ್ನೇ ಮುಂದಿಟ್ಟರು.

ಐಆರ್‌ಸಿ ನಿಯಮಾವಳಿ ಉಲ್ಲಂಘನೆ: ಶಿವಮೊಗ್ಗದ ರಸ್ತೆಗಳಲ್ಲಿ ಪಾದಚಾರಿ ಮಾರ್ಗ, ಒಳಚರಂಡಿ ನಿರ್ಮಿಸುವಾಗ ಇಂಡಿಯನ್ ರೋಡ್ ಕಾಂಗ್ರೆಸ್ (ಐಅರ್‌ಸಿ) ನಿಯಮಾವಳಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಅಗತ್ಯವಿಲ್ಲದಿದ್ದರೂ ಪಾದಚಾರಿ ಮಾರ್ಗ ಹಾಗೂ ಡ್ರೈನ್ ಎತ್ತರಿಸಲಾಗಿದೆ. ಐಆರ್‌ಸಿ ಮಾನದಂಡದಂತೆ ರಸ್ತೆಯಿಂದ ಕೇವಲ ಆರು ಇಂಚು ಎತ್ತರದಲ್ಲಿ ಪಾದಚಾರಿ ಮಾರ್ಗ ಇರಬೇಕು. ಆದರೆ ಇಲ್ಲಿನ ರವೀಂದ್ರ ನಗರ, ಗೋಪಾಳದ 100 ಅಡಿ ರಸ್ತೆಯಲ್ಲಿ 2ರಿಂದ 2.5 ಅಡಿ ಎತ್ತರದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಹಿರಿಯ ನಾಗರೀಕರು ಅಥವಾ ಮಕ್ಕಳು ಹೇಗೆ ಹತ್ತಬೇಕು. ಹಿರಿಯರ ಸಮಸ್ಯೆ ಇವರಿಗೆ ಹೇಗೆ ಅರ್ಥ ಮಾಡುವುದು ಎಂದು ವಸಂತ್‌ಕುಮಾರ್ ಸ್ಥಳಕ್ಕೆ ಕರೆದೊಯ್ದು ತೋರಿಸಿದರು.

ವಿಶೇಷವಾಗಿ ಶಿಲ್ಟ್ ಚೇಂಬರ್‌ಗಳಲ್ಲಿ ಒಂದು ಕಡೆಯಾದರೂ ನಿಯಮಾವಳಿ ಪ್ರಕಾರ ಕೆಲಸ ಮಾಡಿಲ್ಲ. ಮಾಡಿರುವುದು ಸಾಬೀತು ಮಾಡಿದರೆ ನಾವು (ನಾಗರಿಕ ವೇದಿಕೆ) ಹೋರಾಟ ಕೈ ಬಿಡುತ್ತೇವೆ ಎಂದು ಸವಾಲು ಹಾಕಿದ ವಸಂತ್‌ಕುಮಾರ್, ಸ್ಮಾರ್ಟ್‌ ಸಿಟಿಯವರು ಮಾಡಿಟ್ಟಿರುವ ಈ ಅದ್ವಾನ ಸರಿಪಡಿಸಲು ಪಾಲಿಕೆಯ ಬಳಿ ದುಡ್ಡು ಇಲ್ಲ. ಕೊನೆಗೆ ಜನರೇ ಅನುಭವಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು ತಮ್ಮ ತಾಳಕ್ಕೆ ಕುಣಿಯುವ ಅಧಿಕಾರಿಗಳ ಇಟ್ಟುಕೊಂಡು ಕಾಮಗಾರಿ ಮಾಡಿಸಿದ ಫಲವನ್ನು ಜನರೇ ಉಣ್ಣಬೇಕಿದೆ ಎಂದು ಆಕ್ರೋಶ ತೋಡಿಕೊಳ್ಳುತ್ತಲೇ ನಮ್ಮನ್ನು ಬೀಳ್ಕೊಟ್ಟರು.

ರವೀಂದ್ರ ನಗರ, ರಾಜೇಂದ್ರ ನಗರ, ಗಾಂಧಿನಗರ, ಡಿ.ಸಿ ಕಚೇರಿ, ಗಾಂಧಿ ಬಜಾರ್‌, ಪಾಲಿಕೆ ಆವರಣ, ವಿನೋಬ ನಗರದಲ್ಲಿ ಅಡ್ಡಾಡಿದಾಗ ಕಾಣಸಿಕ್ಕಿದ್ದು ಗುಂಡಿ ಬಿದ್ದ ರಸ್ತೆ, ಫುಟ್‌ಪಾತ್‌ನಲ್ಲಿ ಕಿತ್ತು ಬಂದ ಟೈಲ್ಸ್, ಮುರಿದುಬಿದ್ದ ತಡೆಗೋಡೆ, ಚರಂಡಿಯಲ್ಲೇ ಕುಸಿದಿದ್ದ ಕಾಂಕ್ರೀಟ್‌ನ ಮುಚ್ಚಳ, ಮತ್ತೆ ಹಳೆಯ ಸ್ಥಿತಿಗೆ ಬಂದ ಕನ್ಸರ್ವೆನ್ಸಿ, ಅರೆಬರೆ ಕಾಮಗಾರಿ, ಸ್ಮಾರ್ಟ್ ಪರಿಕಲ್ಪನೆಯನ್ನೇ ಅಣಕಿಸಿದಂತೆ ತೋರಿತು. ನಾಗರಿಕ ವೇದಿಕೆ ಆರೋಪಕ್ಕೂ ಸಾಕ್ಷ್ಯ ಸಿಕ್ಕಿತು.

ಇನ್ನು ನಗರದ ಹಸಿರೀಕರಣಕ್ಕೆ ₹ 3 ಕೋಟಿ ವೆಚ್ಚದಲ್ಲಿ (ಪ್ರತಿ ಗಿಡಕ್ಕೆ ₹ 2,900 ವೆಚ್ಚ) ಗಿಡಗಳನ್ನು ನೆಟ್ಟಿರುವುದಾಗಿ ಸ್ಮಾರ್ಟ್ ಸಿಟಿ ಹೇಳಿದರೂ ಬಹಳಷ್ಟು ಕಡೆ ಗಿಡಗಳು ನೆಟ್ಟ ದಿನದ ಫೋಟೊ ದಾಖಲೆಯಾಗಿ ಮಾತ್ರ ಕಂಡವು. ಫುಟ್‌ಪಾತ್‌, ರಸ್ತೆಯ ವಿಸ್ತೀರ್ಣವನ್ನು ನುಂಗಿದ್ದು, ಪ್ರತ್ಯೇಕ ಸೈಕಲ್ ಪಥ ನಿರ್ಮಿಸಿ ವರ್ಷವೇ ಕಳೆದರೂ ಬೈಸಿಕಲ್‌ ಶೇರಿಂಗ್‌ ವ್ಯವಸ್ಥೆ ಆರಂಭವಾಗಿಲ್ಲ. ಅಲ್ಲೀಗ ಬೀದಿ ಬದಿ ವ್ಯಾಪಾರಿಗಳು ನೆಲೆಗೊಂಡಿದ್ದಾರೆ.

ಕಾಮಗಾರಿ ಗುಣಮಟ್ಟಕ್ಕೆ ಆಕ್ಷೇಪ: ಹುಬ್ಬಳ್ಳಿ–ಧಾರವಾಡದಲ್ಲಿ ‘ಸ್ಮಾರ್ಟ್’ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸ್ವತಃ ಅಲ್ಲಿನ ಮಹಾನಗರ ಪಾಲಿಕೆ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಮಾರ್ಟ್ ಸಿಟಿ ಸಂಸ್ಥೆ ಮತ್ತು ಪಾಲಿಕೆ ಹೊರತುಪಡಿಸಿ, ಮೂರನೇ ವ್ಯಕ್ತಿ ಪರಿಶೀಲನೆ ನಡೆಸಲಿ. ನಂತರ ನಾವು (ಮಹಾನಗರ ಪಾಲಿಕೆ) ಹಸ್ತಾಂತರ ಮಾಡಿಕೊಳ್ಳಲಿ ಐಎಂಬುದು ಅವರ ಒತ್ತಾಯ. ಅದಕ್ಕೆ ಸ್ಪಂದಿಸಿದ್ದ ಪಾಲಿಕೆ ಆಡಳಿತ, ಪರಿಶೀಲನೆಗೆ ಬಿವಿಬಿ ಮತ್ತು ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ತಾಂತ್ರಿಕ ತಜ್ಞರ ಸಮಿತಿಯನ್ನು ನೇಮಿಸಿದೆ. ವಿಶೇಷವೆಂದರೆ, ಆ ಸಮಿತಿ ವರದಿ ನೀಡುವ ಮುನ್ನವೇ ಸದ್ದಿಲ್ಲದೆ ಯೋಜನೆಗಳ ಹಸ್ತಾಂತರ ಕಾರ್ಯಕ್ಕೆ ಚಾಲನೆ ದೊರೆತಿದೆ. ಸ್ಮಾರ್ಟ್‌ ಸಿಟಿ ಅಡಿ ಕ್ರೀಡಾ ಸಂಕೀರ್ಣ, ನೆಹರು ಮೈದಾನ ಅಭಿವೃದ್ಧಿ ಸೇರಿದಂತೆ ಕೆಲ ಯೋಜನೆಗಳು ಅಪೂರ್ಣವಾಗಿದ್ದರೂ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿದೆ.

‘ಕೆಲವು ಯೋಜನೆಗಳು ಡೀಮ್ಡ್ ಆಗಿ ಹಸ್ತಾಂತರ ಗೊಂಡಿವೆ. ಇನ್ನೂ ಅವುಗಳ ಜಂಟಿ ಪರಿಶೀಲನೆ ಆಗಬೇಕಿದೆ’ ಎಂದು ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಕ ಎಂ. ಹೇಳುತ್ತಾರೆ.

ಹುಬ್ಬಳ್ಳಿಯ ಹೃದಯ ಭಾಗದ ಮಹಾತ್ಮ ಗಾಂಧಿ ಉದ್ಯಾನವನ್ನು ಈ ಮೊದಲು ಪಾಲಿಕೆಯೇ ಅಭಿವೃದ್ಧಿ ಪಡಿಸಿ ನಿರ್ವಹಿಸುತ್ತಿತ್ತು. ಸ್ಮಾರ್ಟ್ ಸಿಟಿಯಡಿ ಮರು ಅಭಿವೃದ್ಧಿ ಕೈಗೆತ್ತಿಕೊಂಡರು. ಚೆನ್ನಾಗಿದ್ದ ಹಳೆಯ ಟೈಲ್ಸ್ ಕಿತ್ತು ಹೊಸದನ್ನು ಅಳವಡಿಸಿ ಒಂದಷ್ಟು ಭೌತಿಕ ಬದಲಾವಣೆ ಮಾಡಿದ್ದಾರೆ.

‘ಮರು ಅಭಿವೃದ್ಧಿ ಕಳಪೆಯಾಗಿದೆ. ಇಲ್ಲಿ ₹ 50 ಕೋಟಿ ದುಂದು ವೆಚ್ಚವಾಗಿದೆ’ ಎಂದು ಆರೋಪಿಸಿ, ಉದ್ಯಾನವನ ವೇದಿಕೆ ಸದಸ್ಯರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಅಲ್ಲದೆ, ನಗರದ ವಿವಿಧೆಡೆ ಅಳವಡಿಸಿರುವ ₹ 1.1 ಕೋಟಿ ವೆಚ್ಚದ ಇ–ಟಾಯ್ಲೆಟ್‌ ಬಳಕೆಯಾಗದೆ ತುಕ್ಕು ಹಿಡಿದಿವೆ.

ಹುಬ್ಬಳ್ಳಿಯಲ್ಲಿ ₹ 8.5 ಕೋಟಿ ವೆಚ್ಚದ ಸೈಕಲ್ ಶೇರಿಂಗ್ ಯೋಜನೆ ರೂಪಿಸಿದೆ. ಈಗಾಗಲೇ ₹ 6 ಕೋಟಿ ಕೊಟ್ಟು ಮಲೇಷ್ಯಾದಿಂದ 340 ಸೈಕಲ್‌ಗಳ ತರಿಸಲಾಗಿದೆ. 34 ಕಡೆ ನಿಲ್ದಾಣ ಸ್ಥಾಪಿಸಲಾಗಿದೆ. ಆದರೆ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಸೈಕಲ್ ಪಥ ಇದ್ದರೂ, ಅಲ್ಲಿ ಸೈಕಲ್‌ ಓಡಾಟಕ್ಕೆ ಅವಕಾಶವಿಲ್ಲ. ಹೀಗಾಗಿ ಹೆಸರಿಗೆ ಮಾತ್ರ ಸೈಕಲ್‌ ಶೇರಿಂಗ್‌ ವ್ಯವಸ್ಥೆ ಬಂದಿದೆ.

ಅರೆಬರೆ ಕಾಮಗಾರಿ..: ತುಮಕೂರು ನಗರ ಸ್ಮಾರ್ಟ್‌ ಸಿಟಿ ಯೋಜನೆಯಡಿ ಇಡೀ ರಾಜ್ಯದಲ್ಲಿಯೇ ಅತಿಹೆಚ್ಚು ಕಾಮಗಾರಿ ಪೂರ್ಣಗೊಂಡ ಶ್ರೇಯ ಹೊಂದಿದ್ದರೂ ಎಲ್ಲವೂ ದಾಖಲೆಯಲ್ಲಿ ಪೂರ್ಣಗೊಂಡಿದೆ. ಊರಲ್ಲಿ ಅಡ್ಡಾಡಿದರೆ ಕಾಮಗಾರಿ ಎಲ್ಲವೂ ಅರ್ಧಂಬರ್ಧ ಆಗಿರುವುದು ಕಾಣಸಿಗುತ್ತದೆ. ತರಾತುರಿಯಲ್ಲಿ ಉದ್ಘಾಟನೆಯೂ ನಡೆದಿದೆ. ತುಮಕೂರಿನ ಮಂಡಿಪೇಟೆ ಮುಖ್ಯ ರಸ್ತೆಯನ್ನು ಸ್ಮಾರ್ಟ್‌ ಸಿಟಿ ಅಡಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಮೂರೇ ತಿಂಗಳಿಗೆ ಅದು ಕುಸಿದಿತ್ತು. ಅದನ್ನು ಸರಿಪಡಿಸಲು ಕೊನೆಗೆ ಪಾಲಿಕೆಯಿಂದ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲಾಯಿತು.

ಬೆಳಗಾವಿಯ ಚಿದಂಬರ ನಗರದಲ್ಲಿ ಹೊಸ ಬೀದಿದೀಪಗಳ ಅಳವಡಿಸಿದ್ದರೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಜನರು ಕತ್ತಲಲ್ಲೇ ಸಂಚರಿಸುವಂತಾಗಿದೆ. ‘ಒಂದು ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ, ಮತ್ತೊಂದು ಕಾಮಗಾರಿ ಕೈಗೊಂಡಿದ್ದೇ ಈ ಎಲ್ಲ ಸಮಸ್ಯೆಗಳಿಗೂ ಮೂಲ’ ಎಂದು ಬೆಳಗಾವಿಯ ಪರಿಸರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಹೇಳುತ್ತಾರೆ.

ರಾಜಧಾನಿ ಬೆಂಗಳೂರನ್ನು ‘ಸ್ಮಾರ್ಟ್‌’ ಆಗಿಸಲು ಮೂರನೇ ಹಂತದಲ್ಲಿ ಯೋಜನೆ ಅನುಷ್ಠಾನಗೊಂಡಿದೆ. ಆದರೆ ‘ಸ್ಮಾರ್ಟ್‌’ ಆಗಿ ಕಣ್ಣಿಗೆ ಕಾಣುವಂತಹ ವಿಶೇಷಗಳೇನೂ ನಡೆದಿಲ್ಲ. ಬದಲಿಗೆ, ಅದೇ ರಸ್ತೆ, ಅದೇ ಉದ್ಯಾನಕ್ಕೆ ಅಭಿವೃದ್ಧಿಯ ಲೇಪನ ಹಚ್ಚುವುದರಲ್ಲೇ ‘ಸ್ಮಾರ್ಟ್‌ ಸಿಟಿ’ ಯೋಜನೆ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ.

‘ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌’ 30 ಕಾಮಗಾರಿಗಳನ್ನು ಈವರೆಗೆ ಪೂರ್ಣಗೊಳಿಸಿದೆ. ಮಿಕ್ಕ 14ರಲ್ಲಿ 13 ಯೋಜನೆಗಳ ಕಾಮಗಾರಿ ಸರಾಸರಿ ಶೇ 85ರಷ್ಟು ಪೂರ್ಣಗೊಂಡಿದೆ. ಒಂದು ಕಾಮಗಾರಿ ಇನ್ನೂ ಆರಂಭವೇ ಆಗಿಲ್ಲ. ನಗರದ ಎಲ್ಲ ಭಾಗಗಳ ಸುರಕ್ಷತೆಗೆ ರೂಪಿಸಿರುವ ಐಸಿಸಿಸಿ (ಇಂಟಿಗ್ರೇಟೆಡ್‌ ಕಮ್ಯಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್) ಕೂಡ ಇನ್ನೂ ಕಾರ್ಯನಿರ್ವಹಿಸಿಲ್ಲ. ರಸ್ತೆ ಕಾಮಗಾರಿ ಬಿಟ್ಟರೆ ಅತಿಹೆಚ್ಚು ಹಣ (₹113 ಕೋಟಿ) ಇದಕ್ಕೇ ವೆಚ್ಚ ಮಾಡಿರುವುದು ವಿಶೇಷ.

****

ಬೈಸಿಕಲ್‌ ಶೇರಿಂಗ್‌ ವ್ಯವಸ್ಥೆಯ ಸಂಬಂಧ ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ. ಚುನಾವಣೆ ಬಳಿಕ ವ್ಯಾಪಕ ಪ್ರಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು

-ವೀರೇಶಕುಮಾರ್‌, ದಾವಣಗೆರೆ ಸ್ಮಾರ್ಟ್‌ ಸಿಟಿ ಲಿಮಿಡೆಟ್‌ ವ್ಯವಸ್ಥಾಪಕ ನಿರ್ದೇಶಕ

****

ಯೋಜನೆಗಳ ಗುಣಮಟ್ಟದ ಪರಿಶೀಲನೆಯಾಗದೆ ಹಸ್ತಾಂತರ ಮಾಡಿಕೊಳ್ಳಲ್ಲ. ಈ ಬಗ್ಗೆ ಸಂಬಂಧಪಟ್ಟ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಿಗೆ ಪತ್ರ ಬರೆಯುವೆ

-ಈರೇಶ ಅಂಚಟಗೇರಿ, ಮೇಯರ್, ಹುಬ್ಬಳ್ಳಿ– ಧಾರವಾಡ

****


ಶಿವಮೊಗ್ಗದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದೇವೆ. ನಿಯಮ ಉಲ್ಲಂಘನೆ, ಕಾಮಗಾರಿ ವಿಳಂಬದ ಕಾರಣಕ್ಕೆ ಗುತ್ತಿಗೆದಾರರಿಂದ ₹1.20 ಕೋಟಿ ದಂಡ ವಿಧಿಸಿದ್ದೇವೆ

-ಚಿದಾನಂದ ವಠಾರೆ, ಶಿವಮೊಗ್ಗ ಸ್ಮಾರ್ಟ್ ಸಿಟಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ

****

ತುಮಕೂರಿನ ರಾಧಾಕೃಷ್ಣ ರಸ್ತೆಯ ಪಾದಚಾರಿ ಮಾರ್ಗ ಅಗೆದಿರುವುದು, ಹುಬ್ಬಳ್ಳಿಯ ಹೊಸೂರು ಬಿಆರ್‌ಟಿಎಸ್‌ ಬಳಿ ಅಳವಡಿಸಿರುವ ಇ– ಟಾಯ್ಲೆಟ್‌ಗಳು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿರುವುದು (ಬಲಚಿತ್ರ)

ಯೋಜನೆ ಅನುಷ್ಠಾನದಲ್ಲಿ ಮಾತ್ರ ಕರ್ನಾಟಕವೇ ನಂ 1

ಓರೆಕೋರೆಯ ನಡುವೆಯೂ ದೇಶದಲ್ಲಿಯೇ ಓರೆಕೋರೆಯ ನಡುವೆಯೂ ದೇಶದಲ್ಲಿಯೇ ಸ್ಮಾರ್ಟ್‌ ಸಿಟಿ ಯೋಜನೆಗಳ ಅನುಷ್ಠಾನದಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದಿದೆ.

ರಾಜ್ಯದಲ್ಲಿ ₹7892.2 ಕೋಟಿ ವೆಚ್ಚದಲ್ಲಿ 651 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಅದರಲ್ಲಿ 2023ರ ಫೆಬ್ರುವರಿ ವೇಳೆಗೆ 522 ಯೋಜನೆಗಳು ಪೂರ್ಣಗೊಂಡಿವೆ. 129 ಪ್ರಗತಿಯಲ್ಲಿವೆ. ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ತಮಿಳುನಾಡು ಇವೆ. ರಾಜ್ಯದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಕಾಮಗಾರಿ ಪೂರ್ಣಗೊಂಡಿವೆ.

ಯೋಜನೆಯ ವ್ಯಾಪ್ತಿಗೆ ಹೊಸದಾಗಿ ಮೈಸೂರು, ಬಳ್ಳಾರಿ, ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳನ್ನು ಸೇರಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಸ್ಮಾರ್ಟ್ ಸಿಟಿ ಸಂಸ್ಥೆಯ ಮೂಲಗಳು ಹೇಳುತ್ತವೆ.

****

ಹುಬ್ಬಳ್ಳಿಯ ಹೊಸೂರು ಬಿಆರ್‌ಟಿಎಸ್‌ ಬಳಿ ಅಳವಡಿಸಿರುವ ಇ– ಟಾಯ್ಲೆಟ್‌ಗಳು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿರುವುದು

ಸರ್ಕಾರಿ ಶಾಲೆ ಮಕ್ಕಳಿಗೆ 'ಸ್ಮಾರ್ಟ್' ಭಾಗ್ಯ

ಸಂಧ್ಯಾ ಹೆಗಡೆ

ಮಂಗಳೂರು: ಸರ್ಕಾರಿ ಶಾಲೆಯ ಮಕ್ಕಳು ಸ್ಮಾರ್ಟ್ ಪರದೆಗಳ ಮೂಲಕ ಪಾಠ ಕೇಳುವ ಭಾಗ್ಯವನ್ನು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಕಲ್ಪಿಸಿದೆ.

ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಎಬಿಡಿ (ಪ್ರದೇಶ ಆಧರಿತ ಅಭಿವೃದ್ಧಿ) ಪ್ರದೇಶದಲ್ಲಿರುವ 13 ಸರ್ಕಾರಿ ಶಾಲೆಗಳನ್ನು ಗುರುತಿಸಿ ಅಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್‌ಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಶಾಲೆಗಳೆಡೆಗೆ ಹೆಚ್ಚು ವಿದ್ಯಾರ್ಥಿಗಳನ್ನು ಸೆಳೆಯುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಅನುಷ್ಠಾನಗೊಳಿಸಿರುವ ಯೋಜನೆಯು ಫಲ ಕಂಡಿದೆ. ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳು, ಮಹಿಳಾ ಪಿಯು ಕಾಲೇಜುಗಳು ಸೇರಿದಂತೆ ಐದನೇ ತರಗತಿಯಿಂದ ಪಿಯುವರೆಗೆ ಕಲಿಯುತ್ತಿರುವ ಸರ್ಕಾರಿ ಶಾಲೆಗಳ ಮಕ್ಕಳು ಈಗ ಕೈಯಲ್ಲಿ ಟ್ಯಾಬ್ ಹಿಡಿದು ಸಂಭ್ರಮದಿಂದ ಪಾಠ ಕೇಳುತ್ತಾರೆ.

ಪಾಠ ಮಾಡಲು ಅನುಕೂಲವಾಗುವಂತೆ ಪರದೆ, ಸ್ಮಾರ್ಟ್‌ ಬೋರ್ಡ್‌ಗಳನ್ನು ಅಳವಡಿಸಿದ್ದು, ಅಧ್ಯಾಪಕರು ಆನ್‌ಲೈನ್‌ನಲ್ಲಿ ಕೂಡ ಪಾಠ ಮಾಡಬಹುದು. ವಿದ್ಯಾರ್ಥಿಗಳಿಗೆ ಶಿಕ್ಷಕರು ನೀಡುವ ಶಿಕ್ಷಣದ ಗುಣಮಟ್ಟ ಸಹ ಪರಿಶೀಲಿಸಬಹುದು ಎನ್ನುತ್ತಾರೆ ಶಾಲೆಯ ಮುಖ್ಯಸ್ಥರು.

‘ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮಾದರಿಯ ನೆಟ್‌ಬುಕ್ ಕೊಡುವುದಾಗಿ ಹೇಳಿದ್ದರೂ, ಎಲ್ಲರಿಗೂ ಇದು ದೊರೆತಿಲ್ಲ. ಒಂದು ತರಗತಿಯಲ್ಲಿ 8ರಿಂದ 10 ನೆಟ್‌ಬುಕ್ ಲಭ್ಯವಿದ್ದು, ಮಕ್ಕಳು ಅದನ್ನೇ ಬಳಸುತ್ತಾರೆ. ಯೋಜನೆಯಂತೆ ಎಲ್ಲರಿಗೂ ಇದು ಲಭ್ಯವಾಗಬೇಕು’ ಎಂದು ಪಾಲಕರೊಬ್ಬರು ವಿನಂತಿಸಿದರು.

ವಿದ್ಯಾರ್ಥಿಗಳು ಡಿಜಿಟಲ್ ಕಲಿಕೆಯಲ್ಲಿ ಹೆಚ್ಚು ಆಸಕ್ತರಾಗಿದ್ದಾರೆ. ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದಲ್ಲಿ ಇವುಗಳನ್ನು ಬಳಕೆ ಮಾಡಿ, ಗರಿಷ್ಠ ಪ್ರಯೋಜನ ಪಡೆಯಲು ಯೋಚಿಸಲಾಗಿದೆ ಎಂದು ಬಲ್ಮಠ ಪಿಯು ಕಾಲೇಜಿನ ಪ್ರಾಚಾರ್ಯೆ ವನಿತಾ ದೇವಾಡಿಗ ಪ್ರತಿಕ್ರಿಯಿಸಿದರು. ‘ಶಾಲೆಗಳ ಆದ್ಯತೆ ಆಧರಿಸಿ, ಒಟ್ಟು 392 ನೆಟ್‌ಬುಕ್‌ಗಳನ್ನು ನೀಡಲಾಗಿದೆ. ಸ್ಮಾರ್ಟ್‌ ಬೋರ್ಡ್, ಯುಪಿಎಸ್, ಇಂಟರ್‌ನೆಟ್ ಸಂಪರ್ಕವನ್ನು ಒದಗಿಸಿದ್ದು, ಸ್ಮಾರ್ಟ್‌ ಕ್ಲಾಸ್‌ರೂಮ್‌ಗಳ ನಿರ್ವಹಣೆಯನ್ನು ಸಹ ಸ್ಮಾರ್ಟ್ ಸಿಟಿ ಯೋಜನೆಯಡಿ ಮಾಡಲಾಗುತ್ತಿದೆ. ಶಾಲೆಯಲ್ಲಿ ಕೊಠಡಿ ನವೀಕರಣ, ಮೂಲ ಸೌಕರ್ಯ, ಕ್ರೀಡಾ ಸೌಕರ್ಯ ಹೆಚ್ಚಳಕ್ಕೂ ಆದ್ಯತೆ ನೀಡಲಾಗಿದೆ. ಸ್ಮಾರ್ಟ್‌ ಕ್ಲಾಸ್ ಪರಿಣಾಮವಾಗಿ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ’ ಎಂದು ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್‌ ಪ್ರಭ ತಿಳಿಸಿದರು.

****
ಕಾಮಗಾರಿಗಳು ಪೂರ್ಣಗೊಳ್ಳುವುದು ವಿಳಂಬವಾಗುತ್ತಿವೆ. ಸಣ್ಣ, ಪುಟ್ಟ ಕಾಮಗಾರಿಗಳಲ್ಲೂ ಕಳಪೆ ಕೆಲಸ ಆಗಿರುವುದು ಕಂಡು ಬರುತ್ತಿದೆ. ನಿರ್ವಹಣೆಯೂ ಅಸಮರ್ಪಕವಾಗಿದೆ.

-ವಿನಯ್‌ ಪ್ರಸಾದ್‌, ತುಮಕೂರು

****

ಕಾಮಗಾರಿಗಳು ಪೂರ್ಣಗೊಳ್ಳುವುದು ವಿಳಂಬವಾಗುತ್ತಿವೆ. ಸಣ್ಣ, ಪುಟ್ಟ ಕಾಮಗಾರಿಗಳಲ್ಲೂ ಕಳಪೆ ಕೆಲಸ ಆಗಿರುವುದು ಕಂಡು ಬರುತ್ತಿದೆ. ನಿರ್ವಹಣೆಯೂ ಅಸಮರ್ಪಕವಾಗಿದೆ.

-ವಿನಯ್‌ ಪ್ರಸಾದ್‌, ತುಮಕೂರು

****

ಶಿವಮೊಗ್ಗದಲ್ಲಿ ಸ್ಮಾರ್ಟ್‌ ಸಿಟಿಯಡಿ ಅಭಿವೃದ್ಧಿ ಅಂದರೆ ಕಾಂಕ್ರೀಟ್‌ ಹಾಕುವುದು, ಟೈಲ್ಸ್ ಅಳವಡಿಸುವುದು ಎಂಬಂತಾಗಿದೆ. ಯೋಜನೆಯ ಅನುಷ್ಠಾನದಲ್ಲಿ ಎಲ್ಲಿಯೂ ನಿಯಮಾವಳಿ ಪಾಲನೆ ಆಗಿಲ್ಲ.

-ಕೆ.ವಿ.ವಸಂತಕುಮಾರ್, ಅಧ್ಯಕ್ಷ, ಶಿವಮೊಗ್ಗ ನಾಗರಿಕ ವೇದಿಕೆ

****

ಪೂರಕ ಮಾಹಿತಿ: ಕೆ.ಜೆ.ಮರಿಯಪ್ಪ,
ಆರ್‌.ಮಂಜುನಾಥ, ಓದೇಶ ಸಕಲೇಶಪುರ, ಇಮಾಮ್‌ ಹುಸೇನ್ ಗೂಡುನವರ,
ಚಂದ್ರಶೇಖರ್ ಆರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.