ಬೀದರ್: ಇಲ್ಲಿಯ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರತಿ ವರ್ಷ 340 ವಿದ್ಯಾರ್ಥಿಗಳು ಪಶು ವೈದ್ಯರಾಗಿ ಹೊರ ಬರುತ್ತಾರೆ. ಬಹುತೇಕರು ಗ್ರಾಮೀಣ ಪ್ರದೇಶದಲ್ಲೇ ಸೇವೆ ನೀಡುತ್ತಿದ್ದಾರೆ.
ಪಶು ವೈದ್ಯಕೀಯ ಕೋರ್ಸ್‌ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ಹೆಚ್ಚು ಉದ್ಯೋಗ ಅವಕಾಶಗಳೂ ಇವೆ. ಹೀಗಾಗಿ ಒಂದು ಸೀಟು ಸಹ ಖಾಲಿ ಉಳಿಯುವುದಿಲ್ಲ.
ಪಶು ವೈದ್ಯಕೀಯ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಒಂದು ಸಾವಿರ ವಿದ್ಯಾರ್ಥಿಗಳಲ್ಲಿ 40 ವಿದ್ಯಾರ್ಥಿಗಳು ನಾಗರಿಕ ಸೇವೆಯಲ್ಲಿ ಇದ್ದಾರೆ. ಸ್ನಾತಕೋತ್ತರ ಪದವಿ ಪಡೆದವರು ಗ್ರಾಮೀಣ ಪ್ರದೇಶದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೇಕಡ 3ರಷ್ಟು ವೈದ್ಯರು ಮಾತ್ರ ವಿದೇಶಕ್ಕೆ ಹೋಗುತ್ತಾರೆ. ಬಹುತೇಕರು ಪಶು ಸಂಗೋಪನೆ ಇಲಾಖೆ, ಐಸಿಎಆರ್‌ನಲ್ಲಿ ವಿಜ್ಞಾನಿಗಳಾಗಿ, ಪಶು ವೈದ್ಯಕೀಯ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಇನ್ನು ಕೆಲವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಗುಣಮಟ್ಟದ ಪಶು ವೈದ್ಯಕೀಯ ಶಿಕ್ಷಣ ದೊರೆಯುತ್ತಿರುವ ಕಾರಣ ಇಲ್ಲಿ ಪದವಿ ಪಡೆದ ಒಬ್ಬ ಅಭ್ಯರ್ಥಿಯೂ ನಿರುದ್ಯೋಗಿಯಾಗಿ ಉಳಿದಿಲ್ಲ. ದೇಶ ವಿದೇಶಗಳಲ್ಲಿರುವ ಖಾಸಗಿ ಕಂಪನಿಗಳು ಪಶು ವೈದ್ಯರಿಗೆ ಆಕರ್ಷಕ ವೇತನ ಕೊಡುತ್ತಿವೆ. ಪದವಿ ಪಡೆದ ಕೆಲವರು ವಿದೇಶಗಳಲ್ಲಿ ಕ್ಲಿನಿಕ್‌ಗಳನ್ನು ಸಹ ಆರಂಭಿಸಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಸ್ನಾತಕೋತ್ತರ ಪದವಿ ಪಡೆದ ವೈದ್ಯರು ಸರ್ಕಾರಿ ಸೇವೆಗೆ ಬರಲು ಹಿಂದೇಟು ಹಾಕುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಪಿಎಚ್.ಡಿ ಪಡೆದವರೂ ಗ್ರಾಮೀಣ ಪ್ರದೇಶದಲ್ಲಿ ಪಶು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ನಾರಾಯಣಸ್ವಾಮಿ ಹೇಳುತ್ತಾರೆ.
ಇವುಗಳನ್ನೂ ಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.