ಕಲಬುರಗಿ: ‘ದನ, ಕರುಗಳು, ರೈತರ ಹೊಲಗಳಿಗೆ ಆಸರೆಯಾಗಿದ್ದ ಕೆರೆಯಲ್ಲಿ ಹೆಚ್ಚೆಂದ್ರ ಇನ್ನೊಂದ ತಿಂಗಳ ತನಕ ನೀರು ಸಿಗಬಹುದು. ಪೂರ್ತಿ ಬತ್ತಿ ಹೋದ ಮ್ಯಾಲ ನೀರ ಕುಡಿಸಲು ದನಗಳನ್ನ ಎಲ್ಲಿಗೆ ಒಯ್ಯಬೇಕು ಅದ ಗೊತ್ತಾಗ್ತಾ ಇಲ್ರಿ. ಕಟುಕರಿಗೆ ಮಾರಾಕೂ ಮನಸ್ಸು ಬರ್ತಾ ಇಲ್ರಿ...’
ಕಲಬುರಗಿ ತಾಲ್ಲೂಕಿನ ಕುಮಸಿ ಗ್ರಾಮದ ಕೆರೆಯಂಗಳದಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತ ನಾಗನಗೌಡ ಕೋಳೂರ ಅವರ ಈ ಮಾತು ರಾಜ್ಯದ ಹಲವು ಗ್ರಾಮಗಳ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.
ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಈ ಬಾರಿ ಬರಗಾಲದ ಛಾಯೆ ಆವರಿಸಿದೆ. ಬಯಲುಸೀಮೆ ಅಷ್ಟೇ ಅಲ್ಲ; ಮಲೆನಾಡ ಸೆರಗಿನ ಜಿಲ್ಲೆಗಳಲ್ಲಿನ ಕೆರೆಗಳೂ ಬತ್ತುವ ಹಂತ ತಲುಪಿವೆ. ಗ್ರಾಮದ ಕೆರೆಗಳಿಗೆ ಕಾಯಕಲ್ಪ ನೀಡಲು ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ, ಕಾವೇರಿ, ತುಂಗಭದ್ರಾ, ಮಲಪ್ರಭಾ, ಭೀಮಾ, ಕಬಿನಿ, ವರದಾ, ಬೋರಿಹಳ್ಳ, ಬೆಣ್ಣೆತೊರಾ, ನಾಗರಾಳ ಜಲಾಶಯಗಳಿಂದ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗಳನ್ನು ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿದೆ. ಆದರೆ, ಕಳಪೆ ಸಾಮಗ್ರಿ ಬಳಕೆ, ಸಕಾಲಕ್ಕೆ ಅನುದಾನ ಬಿಡುಗಡೆಯಾಗದಿರುವುದು, ಯೋಜನೆ ಪೂರ್ಣಗೊಳಿಸುವಲ್ಲಿ ಬದ್ಧತೆಯ ಕೊರತೆಯಿಂದಾಗಿ ಹಲವೆಡೆ ಯೋಜನೆಗಳು ವಿಫಲವಾಗಿವೆ. ರಾಜ್ಯದ ಪ್ರಮುಖ ಕೆರೆಗಳನ್ನು ತುಂಬಿಸುವ ಸರ್ಕಾರದ ಆಶಯ ಪರಿಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ.
ಉದಾಹರಣೆಗೆ, ಭದ್ರಾ ಮತ್ತು ತುಂಗಾ ಜಲಾಶಯಗಳಿಂದ ನಾಲೆಗೆ ನೀರು ಹರಿಸಲು ‘ಭದ್ರಾ ಮೇಲ್ದಂಡೆ’ ಯೋಜನೆ ರೂಪಿಸಿ ಎರಡು ದಶಕಗಳೇ ಕಳೆದಿವೆ. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯ 367 ಕೆರೆಗಳ ಒಟ್ಟು ಸಾಮರ್ಥ್ಯದ ಶೇ 50ರಷ್ಟು ತುಂಬಿಸುವುದಾಗಿ ರೈತರಿಗೆ ಆಶ್ವಾಸನೆ ನೀಡಲಾಗಿತ್ತು. ತರೀಕೆರೆ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಕೆರೆಗಳಿಗೆ ಭದ್ರೆಯ ನೀರು ಹರಿಸುವ ಕಾಮಗಾರಿ ಇನ್ನೂ
ಪ್ರಗತಿಯಲ್ಲಿದೆ. ಈವರೆಗೆ ₹ 6 ಸಾವಿರ ಕೋಟಿ ಸುರಿದರೂ ಬಯಲುಸೀಮೆ ಕೆರೆಗಳಿಗೆ ನೀರು ಬಂದಿಲ್ಲ!
ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ನದಿಯಿಂದ ಏತ ನೀರಾವರಿಯ ಮೂರು ಯೋಜನೆಗಳು ಜಾರಿಗೊಂಡಿವೆ. ಅದ ರಲ್ಲಿ ಗೂಳೂರು–ಹೆಬ್ಬೂರು ಹಾಗೂ ಹೊನ್ನವಳ್ಳಿ ಯೋಜನೆ ಪೂರ್ಣಗೊಂಡಿದ್ದರೆ, ಶ್ರೀರಂಗ ಏತ ನೀರಾವರಿ ಯೋಜನೆ 8 ವರ್ಷಗಳಿಂದ ಕುಂಟುತ್ತಾ ಸಾಗಿದೆ. ಕುಣಿಗಲ್ ಹಾಗೂ ಮಾಗಡಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಶ್ರೀರಂಗ ಏತ ನೀರಾವರಿ ಯೋಜನೆ 2015ರಲ್ಲಿ ಆರಂಭವಾಗಿದ್ದು, 8 ವರ್ಷ ಕಳೆದಿದ್ದರೂ ತೆವಳುತ್ತಾ ಸಾಗಿದೆ. ಕುಣಿಗಲ್ ತಾಲ್ಲೂಕಿನ 17 ಕೆರೆ, ಮಾಗಡಿ ತಾಲ್ಲೂಕಿನ 66 ಕೆರೆ ಸೇರಿ ಒಟ್ಟು 83 ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ.
ಆಮೆ ವೇಗದ ಕೆಲಸದಿಂದ ಯೋಜನಾ ವೆಚ್ಚ ₹ 324 ಕೋಟಿಯಿಂದ ₹378 ಕೋಟಿಗೆ ಹೆಚ್ಚಳವಾಗಿದೆ. ಆರಂಭದಲ್ಲಿ ರೈತರ ಜಮೀನಿನ ಮೂಲಕ ಕೊಳವೆ ಮಾರ್ಗ ಅಳವಡಿಸಲು ಉದ್ದೇಶಿಸಲಾಗಿತ್ತು. ಕೆಲವು ಕಡೆ ಭೂಸ್ವಾಧೀನ ಪೂರ್ಣಗೊಂಡಿದ್ದರೂ ಪರಿಹಾರ ವಿತರಣೆಯಾಗಿಲ್ಲ. ಯೋಜನೆ ಕೈಗೆತ್ತಿಕೊಂಡಿರುವ ಕಾವೇರಿ ನೀರಾವರಿ ನಿಗಮ ಸಕಾಲದಲ್ಲಿ ಪರಿಹಾರ ನೀಡದಿರುವುದು ಸಹ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13 ಕೆರೆಗಳನ್ನು ಬೆಣ್ಣೆತೊರಾ ಜಲಾಶಯದಿಂದ ತುಂಬಿಸುವ ₹ 197 ಕೋಟಿ ವೆಚ್ಚದ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ ಚಾಲನೆ ನೀಡಿದ್ದರು. ಆದರೆ, ಇನ್ನೂ ಯೋಜನೆ ಪೂರ್ಣಗೊಂಡಿಲ್ಲ. ಯೋಜನೆಯಡಿ ಕೆರೆ ತುಂಬಬೇಕಿದ್ದ ಹತಗುಂದಿ, ಕುಮಸಿ, ಯಳವಂತಗಿ, ಹುಣಸಿ ಹಡಗಿಲ, ಕೆರಿಬೋಸಗಾ, ಹರಸೂರು, ಸೈಯದ್ ಚಿಂಚೋಳಿ, ಮೇಳಕುಂದಾ, ಖಾಜಾ ಕೋಟನೂರು ಗ್ರಾಮಗಳ ಕೆರೆಗಳಲ್ಲಿ ನೀರು ಬತ್ತಿ ಹೋಗುವ ಹಂತ ತಲುಪಿದೆ.
‘ತುಂಬಿಸಬೇಕಾದ ಕೆರೆಯ ಹೂಳನ್ನು ತೆಗೆಯದೇ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಯೋಜನೆಗಳು ವಿಫಲವಾಗುವ ಸಾಧ್ಯತೆಗಳೇ ಹೆಚ್ಚು. ಸರ್ಕಾರವು ಹೆಚ್ಚು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಎಚ್ಚರಿಸುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ.
ಯೋಜನೆಗಳ ಅನುಷ್ಠಾನದಲ್ಲಿ ಬದ್ಧತೆ ಕಾಣೆಯಾಗಿ ಬರೀ ತರಾತುರಿಯಲ್ಲಿ ಯೋಜನೆ ಪೂರ್ಣಗೊಳಿಸುವ ಉದ್ದೇಶವೇ ಮುನ್ನೆಲೆಗೆ ಬರುವುದರಿಂದ ಗುಣಮಟ್ಟದ ಕೆಲಸ ಆಗುತ್ತಿಲ್ಲ. ಬಹುತೇಕ ಕೆರೆಗಳು ಒತ್ತುವರಿಯಾಗಿದ್ದು, ಅವುಗಳ ಸರ್ವೆ ನಡೆಸಿ ಕೆರೆಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ನಂತರ ಹೂಳೆತ್ತಬೇಕು. ಅದರ ಮಣ್ಣನ್ನು ರೈತರಿಗೆ ನೀಡಿದರೆ ಅವರ ಹೊಲಗಳೂ ಫಲವತ್ತಾಗುತ್ತವೆ. ಹೂಳೆತ್ತಿದ ಕೆರೆಗಳಲ್ಲಿ ನೀರು ತುಂಬಿಸಿದರೆ ಅಂತರ್ಜಲ ಮಟ್ಟವೂ ಸುಧಾರಿಸುತ್ತದೆ ಎಂಬುದು ಮಾಲಿಪಾಟೀಲ ಅವರ ಆಶಯ. ಆದರೆ, ಬಹುತೇಕ ಯೋಜನೆಗಳಲ್ಲಿ ಕೆರೆ ಹೂಳೆತ್ತುವ ಪ್ರಸ್ತಾವವೇ ಇಲ್ಲ.
ವ್ಯಾಕರನಾಳ ಏತ ನೀರಾವರಿ ಯೋಜನೆಯ ಪಂಪ್‌ಸೆಟ್, ಕಾಲುವೆ ಗಳು ಮಂಗಮಾಯವಾಗಿವೆ. ಜಲದುರ್ಗ ಮತ್ತು ಗುಂತಗೋಳ ಏತ ನೀರಾವರಿ ಯೋಜನೆಗಳು ಗುತ್ತಿಗೆದಾರರಿಗೆ ವರದಾನವಾಗಿವೆ! ದೂರ ದೃಷ್ಟಿಯ ಕೊರತೆಯ ಕಾರಣಕ್ಕೆ ಯೋಜನೆ ನೆಲಕಚ್ಚಿದೆ. ಅರೆಬರೆ ಕಾಮಗಾರಿ ಯಿಂದಾಗಿ ರೈತರ ಜಮೀನುಗಳಿಗೆ ಹನಿ ನೀರು ಹರಿದಿಲ್ಲ. ಕಾಮಗಾರಿಯ ಸರಿಯಾಗಿ ಮೇಲುಸ್ತುವಾರಿ ಮಾಡದೇ ಇರುವುದೂ ಯೋಜನೆ ವೈಫಲ್ಯಕ್ಕೆ ಕಾರಣವಾಗಿದೆ.
20,235 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದ ರಾಂಪುರ ಏತ ನೀರಾವರಿ ಯೋಜನೆ 2013ರಲ್ಲಿ ಆರಂಭವಾದರೂ ಸಂತ್ರಸ್ತ ರೈತರಿಗೆ ಇನ್ನೂ ಪರಿಹಾರ ದೊರಕಿಲ್ಲ. ₹ 225 ಕೋಟಿ ಖರ್ಚು ಮಾಡಿದರೂ ಹನಿ ನೀರು ಬಂದಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಯೋಜನೆಯೇ ಬುಡಮೇಲಾಗಿದೆ. ಕಾಲುವೆ ಕಾಮಗಾರಿ ಅಪೂರ್ಣವಾಗಿವೆ. ಕಾಲುವೆಗಳಲ್ಲಿ ಅಲ್ಲಲ್ಲಿ ಹೂಳು ತುಂಬಿಕೊಂಡಿದೆ. ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಗೌಡೂರು ಗ್ರಾಮದ ರೈತರು ಹೇಳುತ್ತಾರೆ.
1999ರಲ್ಲಿ ರಾಯಚೂರು ತಾಲ್ಲೂಕಿನ ಆಯನೂರು ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ನೀರೆತ್ತಿ 208 ಎಕರೆ ಜಮೀನಿಗೆ ನೀರುಣಿಸುವ ಯೋಜನೆಯೂ ವಿಫಲವಾಗಿದೆ. ₹ 2.30 ಕೋಟಿಗೂ ಅಧಿಕ ಹಣ ಖರ್ಚು ಮಾಡಿ 2013ರಲ್ಲಿ ಕಾಮಗಾರಿ ಉದ್ಘಾಟಿಸಲಾಯಿತು. ಉದ್ಘಾಟನೆಯ ದಿನ ಹೊರಗೆ ಬಂದ ನೀರೇ ಕೊನೆಯದು. ರೈತರಿಗೆ ಯಾವುದೇ ರೀತಿಯ ಉಪಯೋಗವಾಗಿಲ್ಲ ಎಂದು ಆಯನೂರು ಗ್ರಾಮದ ಜಲಾಲಸಾಬ್ ಬೇಸರ ವ್ಯಕ್ತಪಡಿಸುತ್ತಾರೆ. ಪೈಪ್ ಲೈನ್ ಕಾಮಗಾರಿ ಅತ್ಯಂತ ಕಳಪೆಯಾಗಿದ್ದರಿಂದ ಪಂಪ್‌ಸೆಟ್ ಬಟನ್ ಒತ್ತಿದರೆ ಸಾಕು ಎಲ್ಲೆಂದರಲ್ಲಿ ಪೈಪುಗಳು ಒಡೆದು ಹೋಗುತ್ತಿವೆ. ಹೀಗಾಗಿ ನಂತರ ಯಾವುದೇ ಅಧಿಕಾರಿ, ಜನಪ್ರತಿನಿಧಿಯೂ ಇತ್ತ ಕಡೆ ಸುಳಿದಿಲ್ಲ ಎಂದು ಕುರಿ ವೀರಣ್ಣ ಮತ್ತು ಅಳ್ಳಪ್ಪ ಆಚಾರ ಬೇಸರ ವ್ಯಕ್ತಪಡಿಸುತ್ತಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಪಿ.ಕೆ. ಹಳ್ಳಿ ಏತ ನೀರಾವರಿ ಯೋಜನೆಯಡಿ 22 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಕುಂಟುತ್ತ ಸಾಗಿದೆ. ಈ ಪೈಕಿ 16 ಕೆರೆಗಳಿಗೆ ಸಂಪರ್ಕ ಸಾಧಿಸಲಾಗಿದ್ದರೂ ಈ ಬಾರಿ ಮಳೆ ಇಲ್ಲದ ಕಾರಣ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಹಗರಿಬೊಮ್ಮನಹಳ್ಳಿಯ ಐದು ಕೆರೆಗಳಲ್ಲೂ ಇದೇ ಸ್ಥಿತಿ ಇದೆ. ಕೂಡ್ಲಿಗಿಯಲ್ಲಿ 78 ಕೆರೆಗಳಿಗೆ ಸಂಪರ್ಕ ಕಾಮ ಗಾರಿ ಆರಂಭವಾಗಿದೆಯಷ್ಟೇ.
‘ದೊಡ್ಡ ಮಟ್ಟದ ಪ್ರಚಾರದೊಂದಿಗೆ ಕೆರೆ ತುಂಬಿಸುವ ಯೋಜನೆಯ ಅನುಷ್ಠಾನ ಮಾಡ್ತೀವಿ ಅಂತ ಹೇಳಿದ್ರು. ಕೆರೆಗೆ ಒಂದು ಪೈಪ್ ಹಾಕಿದ್ದು ಬಿಟ್ಟರೆ ನೀರು ಮಾತ್ರ ಬಂದೇ ಇಲ್ಲ. ಹಿಂದಿನ ಸರ್ಕಾರ ಮಾಡಿದ್ದನ್ನು ಅರ್ಧಕ್ಕೇ ಬಿಡುವ ಚಾಳಿ ರೂಢಿಯಾದರೆ ಹೇಗೆ’ ಎಂದು ಕಲಬುರಗಿ ತಾಲ್ಲೂಕಿನ ಮೇಳಕುಂದಾ ಗ್ರಾಮದ ರೈತ ಮಲ್ಲಿನಾಥ ಕೊಳ್ಳೂರ ಪ್ರಶ್ನಿಸುತ್ತಾರೆ.
ಬೆಳಗಾವಿ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಸಿಬ್ಬಂದಿ ಕೊರತೆ, ಪ್ರವಾಹ ಮತ್ತಿತರ ಕಾರಣಗಳಿಂದ ನೀರಾವರಿ ಇಲಾಖೆ ಉತ್ತರ ವಲಯದಿಂದ ಕೈಗೆತ್ತಿಕೊಂಡಿರುವ ಕೆರೆ ತುಂಬಿಸುವ ಯೋಜನೆಗಳು ನನೆಗುದಿಗೆ ಬಿದ್ದಿವೆ. 2018–19ರಲ್ಲಿ ಕೈಗೊಂಡ ಯೋಜನೆಗಳೂ ಇನ್ನೂ ಪೂರ್ಣಗೊಳ್ಳದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಉತ್ತರ ವಲಯದಲ್ಲಿ 166 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೊಳ್ಳಲಾಗಿತ್ತು. ಈ ಪೈಕಿ ಕೆಲ ಕಾಮಗಾರಿಗಳಷ್ಟೇ ಮುಗಿದಿವೆ. ₹ 100.82 ಕೋಟಿ ವೆಚ್ಚದಲ್ಲಿ ರಾಯಬಾಗ ಕ್ಷೇತ್ರದ 39 ಕೆರೆಗಳನ್ನು ತುಂಬಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಇದಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲು ತಕರಾರು ಮಾಡುತ್ತಿದ್ದಾರೆ.
‘ಸರ್ಕಾರದ ಮಾರ್ಗಸೂಚಿ ಪ್ರಕಾರ, ನಾವು ಭೂಮಿಗೆ ಪರಿಹಾರ ಕೊಡಲು ಮುಂದಾಗಿದ್ದೇವೆ. ಆದರೆ, ಅವರು ಹೆಚ್ಚಿನ ಪರಿಹಾರ ಕೋರಿ ಭೂಮಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಜಾಕ್‌ವೆಲ್ ಕಾಮಗಾರಿ ಸ್ಥಗಿತವಾಗಿದೆ. ಶೀಘ್ರ ವಿವಾದ ಬಗೆಹರಿದು ಕಾಮಗಾರಿ ಆರಂಭವಾಗಲಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
₹ 32.66 ಕೋಟಿ ವೆಚ್ಚದಲ್ಲಿ ಕೈಗೊಂಡ ಕುಡಚಿ ಕ್ಷೇತ್ರದ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರೈತರು ಅಡ್ಡಿಪಡಿಸಿದ್ದಾರೆ. ಹೆಚ್ಚಿನ ಪರಿಹಾರಕ್ಕೆ ಬೇಡಿಕೆಯಿಟ್ಟಿರುವ ಅವರು, ಭೂಮಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿ, ಯೋಜನೆ ಕುಂಟುತ್ತ ಸಾಗಿದೆ. ಪ‍್ರಸ್ತುತ ಬೇಸಿಗೆಯಲ್ಲಿ ನೀರಿಗಾಗಿ ಅಲ್ಲಿನ ಜನ ಹೆಣಗಾಡುತ್ತಿದ್ದಾರೆ.
₹ 205.32 ಕೋಟಿ ವೆಚ್ಚದಲ್ಲಿ ಚನ್ನಮ್ಮನ ಕಿತ್ತೂರು ಹಾಗೂ ಬೈಲಹೊಂಗಲ ಕ್ಷೇತ್ರದಲ್ಲಿ ಕೈಗೊಂಡಿದ್ದ 64 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ ಹಲವು ತೊಡಕು ಎದುರಾಗಿವೆ. ಹೆಡ್‌ವರ್ಕ್ ಕಾಮಗಾರಿ ಮುಗಿದಿದೆ. 201 ಕಿ.ಮೀ. ಪೈಕಿ 170 ಕಿ.ಮೀವರೆಗೆ ಕಾಮಗಾರಿಯಾಗಿದೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ತಾಂತ್ರಿಕ ಕಾರಣಗಳಿಂದಾಗಿ ಹಲವು ವರ್ಷಗಳಿಂದ ಯೋಜನೆ ನೆನಗುದಿಗೆ ಬಿದ್ದಿದೆ.
ಕಾಗವಾಡ ಕ್ಷೇತ್ರದ 23 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯದ್ದೂ ಇದೇ ಕಥೆ. ಅರಭಾವಿಯಲ್ಲಿ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇನ್ನೂ ಆರಂಭವಾಗಿಲ್ಲ. 2019ರ ಅಂತ್ಯದಲ್ಲಿ ಕಾಮಗಾರಿ ಶುರುವಾದ ‘57 ಕೆರೆಗಳ ತುಂಬಿಸುವ ಯೋಜನೆ’ಯೂ ಆಮೆಗತಿಯಲ್ಲಿ ಸಾಗಿದೆ. ದಾವಣಗೆರೆ ಜಿಲ್ಲೆಯ ಜಗಳೂರು ಮತ್ತು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ 57 ಕೆರೆ ತುಂಬಿಸುವ ಕಾಮಗಾರಿ ಇದಾಗಿದೆ. ಇದುವರೆಗೂ ಜಗಳೂರು ತಾಲ್ಲೂಕಿನ 10 ಕೆರೆಗಳಿಗೆ ಮಾತ್ರ ತುಂಗಭದ್ರಾ ನದಿಯಿಂದ ನೀರು ಹರಿದಿದೆ.
‘ಕೆರೆ ತುಂಬಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರ ಬದುಕು ಹಸನಾಗುತ್ತದೆ. ಆದರೆ, ಕೆರೆ ತುಂಬಿಸುವ ಹೆಸರಲ್ಲಿ ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಪೂರ್ಣಗೊಂಡಿಲ್ಲ. ತಾಲ್ಲೂಕಿನಲ್ಲಿ ಗುತ್ತಿಗೆದಾರರು ಕೆಲಸ ಅರ್ಧಕ್ಕೇ ಬಿಟ್ಟು ಪರಾರಿಯಾಗಿದ್ದಾರೆ. ಇದು ಪೂರ್ಣಗೊಳ್ಳಲು ಎಷ್ಟು ದಶಕ ಬೇಕೋ ಏನೋ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಅತನೂರು ಗ್ರಾಮದ ರೈತ ಲತೀಫ್ ಪಟೇಲ್. ಕೆರೆ ನೀರು ತುಂಬಿಸುವ ಯೋಜನೆ ವ್ಯಾಪ್ತಿಯ ಗ್ರಾಮಗಳ ರೈತರ ಅನಿಸಿಕೆಯೂ ಇದೇ ಆಗಿದೆ.
ಮೈಸೂರು ಜಿಲ್ಲೆಯಲ್ಲಿ 8 ಏತ ನೀರಾವರಿ ಯೋಜನೆಗಳು ಜಾರಿಯಲ್ಲಿದ್ದು, 2 ಮಾತ್ರ ಪೂರ್ಣಗೊಂಡಿವೆ. ಕಾವೇರಿ, ಕಬಿನಿ ಹಾಗೂ ನುಗು ನದಿಗಳಿಂದ ನೀರು ಪೂರೈಸುವ ಯೋಜನೆಯನ್ನು ರೂಪಿಸಲಾಗಿದೆ.
ನಂಜನಗೂಡು ತಾಲ್ಲೂಕಿನ ಬಿದರಗೂಡು ಬಳಿ ಕಬಿನಿ ನದಿಯಿಂದ ಮೈಸೂರು, ನಂಜನಗೂಡು, ಎಚ್.ಡಿ.ಕೋಟೆ ತಾಲ್ಲೂಕಿನ 23 ಕೆರೆಗಳಿಗೆ ನೀರು ಪೂರೈಸುವ ₹ 45.5 ಕೋಟಿ ವೆಚ್ಚದ ಯೋಜನೆ ಪೂರ್ಣಗೊಂಡಿದೆ.
ಕಬಿನಿ ನದಿಯಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಇಬ್ಬಜಾಲ ಬಳಿ 39 ಕೆರೆಗಳಿಗೆ ನೀರು ಪೂರೈಸಲು ₹ 68 ಕೋಟಿ ವೆಚ್ಚದ ಯೋಜನೆ, ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿಯಿಂದ 7 ಕೆರೆಗಳಿಗೆ ನೀರು ತುಂಬಿಸುವ ₹ 80 ಕೋಟಿ ವೆಚ್ಚದ ಯೋಜನೆಯೂ ಅರ್ಧದಷ್ಟು ಮಾತ್ರ ಪೂರ್ಣಗೊಂಡಿದೆ. ಕೆ.ಆರ್.ನಗರ ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ಕಾವೇರಿ ನದಿಯಿಂದ 12 ಕೆರೆಗಳಿಗೆ ನೀರು ತುಂಬಿಸುವ ₹ 15 ಕೋಟಿ ವೆಚ್ಚದ ಯೋಜನೆ ಕುಂಟುತ್ತಾ ಸಾಗಿದೆ.
ಕುಡಿಯುವ ನೀರಿಗಾಗಿ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ನುಗು ನದಿಯಿಂದ ನಂಜನಗೂಡು ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕೆರೆಗಳಿಗೆ ನೀರು ಸಾಗಿಸುವ ₹ 30 ಕೋಟಿ ವೆಚ್ಚದ ಯೋಜನೆಯೂ ತೆವಳುತ್ತಿದೆ. ಮಳೆಯಾಶ್ರಿತ ಪ್ರದೇಶದಲ್ಲಿರುವ ಹೆಡಿಯಾಲ ಸೇರಿದಂತೆ 8 ಕೆರೆಗಳು ಬಹುತೇಕ ಒಣಗಿವೆ. ಅಂತರ್ಜಲ ಮಟ್ಟವೂ ಕುಸಿದಿದೆ.
ಕೆರೆ ತುಂಬಿಸುವ ಯೋಜನೆ ಅನುಷ್ಠಾನದಲ್ಲಿ ಸರ್ಕಾರ ತೋರುವ ನಿರ್ಲಕ್ಷ್ಯದ ಬಗ್ಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಬೇಸರ ವ್ಯಕ್ತಪಡಿಸುತ್ತಾರೆ. ‘ರೈತರ ಬದುಕು ಹಸನಾಗಲು ಕೆರೆ ತುಂಬಿಸುವ ಯೋಜನೆಗಳು ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತವೆ. ಯೋಜನೆಗಳಿಗೆ ಅಗತ್ಯವಾದ ಹಣವನ್ನು ಆದ್ಯತೆಯ ಮೇಲೆ ಒದಗಿಸಿ ಕಾಲಮಿತಿಯಲ್ಲಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ಹೆಚ್ಚು ಫಸಲು ಬೆಳೆಯಲು ಸಾಧ್ಯವಾಗುತ್ತದೆ. ಚಾಮರಾಜನಗರದಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಉಳಿದ ಕಡೆ ನಡೆಯುತ್ತಿರುವ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು ಅಗತ್ಯ ಹಣಕಾಸು ಮಂಜೂರು ಮಾಡಬೇಕು’ ಎಂದು ಒತ್ತಾಯಿಸುತ್ತಾರೆ.
ಮಂಡ್ಯ ಜಿಲ್ಲೆಯ ಗ್ರಾಮೀಣ ಜನರಿಗೆ ಕುಡಿಯುವ ನೀರು, ಕೃಷಿಗೆ ನೀರೊದಗಿಸುವ ₹ 350 ಕೋಟಿ ಅಂದಾಜು ವೆಚ್ಚದ ಯೋಜನೆಗಳು ಪ್ರಗತಿಯಲ್ಲಿವೆ. ಹಲವು ಏತ ನೀರಾವರಿ ಯೋಜನೆಗಳು ವಿಫಲಗೊಂಡಿವೆ. ಲೋಕಪಾವನಿ ನದಿಯಿಂದ ನೀರೆತ್ತಿ ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ.ಹೊಸೂರು, ಅಲ್ಲಾಪಟ್ಟಣ, ಗೌಡಹಳ್ಳಿ ಸೇರಿದಂತೆ ಹಲವು ಹಳ್ಳಿಗಳಿಗೆ ನೀರೊದಗಿಸುವ ಕರಿಘಟ್ಟ ನೀರಾವರಿ ಯೋಜನೆ ಅರ್ಧ ದಶಕದ ಹಿಂದೆಯೇ ಅಂದರೆ 1978ರಲ್ಲೇ ಆರಂಭವಾಗಿತ್ತು. ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡ ಯೋಜನೆಗೆ 2012ರಲ್ಲಿ ಮರುಜೀವ ದೊರಕಿತು. ನೀರು ಹರಿವು ಆರಂಭವಾದರೂ ಇಲ್ಲಿಯವರೆಗೂ ಕಡೇಭಾಗದ ಹಳ್ಳಿ ಜನರಿಗೆ ಇನ್ನೂ ನೀರು ತಲುಪಿಲ್ಲ.
ಮದ್ದೂರು ತಾಲ್ಲೂಕು ಆತಗೂರು ಹೋಬಳಿಗೆ ನೀರು ಪೂರೈಸುವ ಏತನೀರಾವರಿ ಯೋಜನೆಗೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. 20 ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆಗೆ ಈಗ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಆದರೆ, ಇನ್ನೂ ವಿದ್ಯುತ್ ಕಾಮಗಾರಿ ಬಾಕಿ ಇರುವ ಕಾರಣ ಜನರು ನೀರು ಕಾಣಲು ಸಾಧ್ಯವಾಗಿಲ್ಲ.
ಕೆ.ಆರ್.ಪೇಟೆ ತಾಲ್ಲೂಕು ಕಟ್ಟಹಳ್ಳಿ ಏತ ನೀರಾವರಿ ಯೋಜನೆ ಜಾರಿಯಾದರೆ 46 ಕೆರೆ ತುಂಬಿಸಲು ಸಾಧ್ಯವಿದೆ. ಕಾಮಗಾರಿ ಸ್ಥಗಿತಗೊಂಡು 20 ವರ್ಷಗಳೇ ಕಳೆದಿವೆ. ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಕೆರೆಗೆ ನೀರೊದಗಿಸುವ ಯೋಜನೆ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ.
ಹಾಸನ ಜಿಲ್ಲೆಯ ತೋಟಿ ಏತ ನೀರಾವರಿ ಯೋಜನೆಗೆ ರೈತರು ಜಮೀನು ನೀಡಿದ್ದಾರೆ. ಕಾಮಗಾರಿ ನಡೆಯುತ್ತಿದೆ. ಆದರೆ, ಇದುವರೆಗೆ ಹಲವು ರೈತರಿಗೆ ಭೂಸ್ವಾಧೀನದ ಪರಿಹಾರ ನೀಡಿಲ್ಲ. ಕೂಡಲೇ ಪರಿಹಾರ ನೀಡಬೇಕು ಎನ್ನು ತ್ತಾರೆ ಗುಂಡಶೆಟ್ಟಿಹಳ್ಳಿಯ ರೈತ ನಿಂಗೇಗೌಡ.
‘ನದಿಯ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ. ಕೆರೆ, ಕಟ್ಟೆಗಳು ಒಣಗಿದರೆ
ಪ್ರಕೃತಿ ಸಂಪತ್ತು ಹಾಳಾಗುತ್ತದೆ. ಹೀಗಾಗಿ, ಅಣೆಕಟ್ಟು ಕಟ್ಟುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ನೂರಾರು ಕೆರೆ ತುಂಬಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಅಂತರ್ಜಲ ಮಟ್ಟ ಹೆಚ್ಚಿ ರೈತರ ಬದುಕು ಹಸನಾಗುತ್ತದೆ. ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ಸರ್ಕಾರಗಳನ್ನು ನೋಡಿ ಕಲಿಯಬೇಕಿರುವುದು ಸಾಕಷ್ಟಿದೆ’ ಎಂದೂ ಕುರುಬೂರು ಶಾಂತಕುಮಾರ್ ಅವರು
ಅಭಿಪ್ರಾಯಪಡುತ್ತಾರೆ.
ಪೂರಕ ಮಾಹಿತಿ:
ಮರಿಯಪ್ಪ ಕೆ.ಜೆ., ಚಂದ್ರಕಾಂತ ಮಸಾನಿ, ಆರ್. ಮಂಜುನಾಥ್, ಸತೀಶ್ ಬೆಳ್ಳಕ್ಕಿ, ಮೋಹನ್ ಸಿ. ಕುಮಾರ್, ಇಮಾಮ್ ಹುಸೇನ್ ಗೂಡೂನವರ, ರಾಮಮೂರ್ತಿ ಪಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.