ಬೆಂಗಳೂರು:ಜನರನ್ನು ಸೈಬರ್ ಜಾಲದೊಳಗೆ ಸಿಲುಕಿಸಿ ಹಣ ದೋಚುವ ತಂಡಗಳು ದೇಶದಾದ್ಯಂತ ಸಕ್ರಿಯವಾಗಿ ಕೆಲವು ವರ್ಷಗಳೇ ಕಳೆದಿವೆ. ಆದರೆ ಇವುಗಳ ಕೃತ್ಯಕ್ಕೆ ಲಗಾಮು ಹಾಕುವ ಕೆಲಸ ಮಾತ್ರ ಸಮರ್ಪಕವಾಗಿ ನಡೆದಿಲ್ಲ. ಪೊಲೀಸ್ ಸಿಬ್ಬಂದಿ ಹಾಗೂ ಸಂಪನ್ಮೂಲಗಳ ಕೊರತೆಯಿಂದಾಗಿ ಸೈಬರ್ ವಂಚನೆ ಪ್ರಕರಣಗಳ ತನಿಖೆ ಕುಂಠಿತವಾಗಿದೆ. ಹೆಚ್ಚಿನ ಪ್ರಕರಣಗಳ ಕಡತಗಳು ಇಂದಿಗೂ ಪೊಲೀಸ್ ಭದ್ರತಾ ಕೊಠಡಿಯಲ್ಲೇ ದೂಳು ತಿನ್ನುತ್ತಿವೆ.
ಸೈಬರ್ ವಂಚನೆ ಹೇಗೆಲ್ಲ ನಡೆಯುತ್ತದೆ, ಜನರನ್ನು ಹೇಗೆ ವಂಚನೆಯ ಜಾಲಕ್ಕೆ ಸಿಲುಕಿಸಲಾಗುತ್ತದೆ ಎಂಬ ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.
1. ಒಟಿಪಿ ವಂಚನೆ
ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡುವ ವಂಚಕರು, ಕೈವೈಸಿ ನವೀಕರಣ ಮಾಡಬೇಕೆಂದು ಹೇಳಿ ಆಧಾರ್ ಹಾಗೂ ಖಾತೆ ವಿವರ ಪಡೆಯುತ್ತಾರೆ. ಮೊಬೈಲ್‌ಗೆ ಬರುವ ಒನ್ ಟೈಂ ಪಾಸ್‌ವರ್ಡ್ (ಒಟಿಪಿ) ಪಡೆದು ವಂಚಿಸುತ್ತಾರೆ. ಜನರು, ಒಟಿಪಿಯನ್ನು ಅಪರಿಚಿತರ ಜೊತೆ ಹಂಚಿಕೊಳ್ಳಬಾರದು.
2. ಒಎಲ್‌ಎಕ್ಸ್ ಹಾಗೂ ಇತರೆ ವಸ್ತುಗಳ ಮಾರಾಟ ಜಾಲತಾಣ:
ಬಳಸಿದ ವಸ್ತುಗಳ ಮಾರಾಟ ವೇದಿಕೆಯಾದ ಒಎಲ್‌ಎಕ್ಸ್ ಜಾಲತಾಣದ ಮೂಲಕವೂ ವಂಚನೆ ಆಗುತ್ತಿದೆ. ಅದರಲ್ಲೂ ಸೇನೆ ಅಧಿಕಾರಿಗಳ ಹೆಸರಿನಲ್ಲಿ ಪೋಸ್ಟ್ ಪ್ರಕಟಿಸುವ ವಂಚಕರು, ಕಾರು ಹಾಗೂ ಇತರೆ ವಸ್ತುಗಳ ಮಾರಾಟ ಮಾಡುವುದಾಗಿ ಹೇಳಿ ಹಣ ಪಡೆದು ನಾಪತ್ತೆಯಾಗುತ್ತಿದ್ದಾರೆ.
3. ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್ ವಿಡಿಯೊ ಕರೆ
ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್, ಮೆಸೆಂಜರ್, ಡೇಟಿಂಗ್ ಆ್ಯಪ್‌ಗಳ ಮೂಲಕ ಪರಿಚಯ ಮಾಡಿಕೊಳ್ಳುವ ವಂಚಕರು, ನಿತ್ಯವೂ ಚಾಟಿಂಗ್ ಮಾಡುತ್ತಾರೆ. ಸಲುಗೆಯಿಂದ ಮಾತನಾಡಿ, ವಿಡಿಯೊ ಕರೆ ಮಾಡಿ ಲೈಂಗಿಕವಾಗಿ ಪ್ರಚೋದಿಸುತ್ತಾರೆ. ನಗ್ನ ವಿಡಿಯೊವನ್ನು ಚಿತ್ರೀಕರಿಸಿಕೊಳ್ಳುತ್ತಾರೆ. ಅದೇ ವಿಡಿಯೊ ಬಳಸಿ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಾರೆ.
4. ಡೆಬಿಟ್, ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್
ಬ್ಯಾಂಕ್‌ಗಳ ಎಟಿಎಂ ಘಟಕಗಳ ಯಂತ್ರಗಳಲ್ಲಿ ಕೀ ಪ್ಯಾಡ್ ಹಾಗೂ ರಹಸ್ಯ ಕ್ಯಾಮೆರಾ ಇರುವ ಉಪಕರಣವನ್ನು ಅಳವಡಿಸುವ ವಂಚಕರು, ಗ್ರಾಹಕರ ಕಾರ್ಡ್‌ಗಳ ಮಾಹಿತಿಯನ್ನು ಕದಿಯುತ್ತಾರೆ. ಅದರ ಮೂಲಕ ನಕಲಿ ಕಾರ್ಡ್ ತಯಾರಿಸಿ ಗ್ರಾಹಕರ ಖಾತೆಯಲ್ಲಿರುವ ಹಣ ದೋಚುತ್ತಾರೆ.
5. ಲಿಂಕ್ ಕಳುಹಿಸಿ ವಂಚನೆ
ಬಹುಮಾನ, ಉಡುಗೊರೆ... ಹೀಗೆ ನಾನಾ ಹೆಸರಿನಲ್ಲಿ ಲಿಂಕ್ (ಎಂಬೇಡೆಡ್) ಸಂದೇಶ ಕಳುಹಿಸುತ್ತಾರೆ. ಇದನ್ನು ಕ್ಲಿಕ್ ಮಾಡಿ ವೈಯಕ್ತಿಕ ಮಾಹಿತಿ ದಾಖಲಿಸಿದರೆ, ಖಾತೆಯಲ್ಲಿರುವ ಹಣವನ್ನು ವಂಚಕರು ವರ್ಗಾಯಿಸಿಕೊಳ್ಳುತ್ತಾರೆ.
6. ಉಡುಗೊರೆ ಆಮಿಷವೊಡ್ಡಿ ವಂಚನೆ
ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಯ ಮಾಡಿಕೊಳ್ಳುವ ವಂಚಕರು, ಸ್ನೇಹ ಬೆಳೆಸುತ್ತಾರೆ. ಉಡುಗೊರೆ ಕಳುಹಿಸುವುದಾಗಿ ಹೇಳುತ್ತಾರೆ. ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ವಿಮಾನ ನಿಲ್ದಾಣದಲ್ಲಿರುವ ಉಡುಗೊರೆಯನ್ನು ಮನೆಗೆ ಕಳುಹಿಸಲು ಹಣ ಪಡೆದು ನಾಪತ್ತೆಯಾಗುತ್ತಾರೆ.
7. ಹೂಡಿಕೆ, ಟ್ರೇಡಿಂಗ್ ಆ್ಯಪ್ ವಂಚನೆ
ಷೇರು ಮಾರುಕಟ್ಟೆ, ಕ್ರಿಪ್ಟೊ ಕರೆನ್ಸಿ ಹಾಗೂ ಇತರೆ ವಲಯಗಳಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭವೆಂದು ವಂಚಕರು ಆಮಿಷವೊಡ್ಡುತ್ತಾರೆ. ಇದನ್ನು ನಂಬಿ ಯಾರಾದರೂ ಹಣ ಹೂಡಿದರೆ, ಅದನ್ನು ದೋಚಿಕೊಂಡು ಆರೋಪಿಗಳು ಪರಾರಿಯಾಗುತ್ತಾರೆ.
8. ವೈವಾಹಿಕ ಜಾಲತಾಣ ವಂಚನೆ
ಮದುವೆಗೆ ವರ–ವಧು ಹುಡುಕಲು ಇಂದು ನಾನಾ ಜಾಲತಾಣಗಳಿವೆ. ಇಂಥ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವ ವಂಚಕರು, ಮದುವೆ ಸೋಗಿನಲ್ಲಿ ಜನರ ಸ್ನೇಹ ಬೆಳೆಸುತ್ತಾರೆ. ಉಡುಗೊರೆ, ಭೇಟಿ... ಹೀಗೆ ನಾನಾ ಹೆಸರಿನಲ್ಲಿ ಹಣ ಪಡೆದುಕೊಂಡು ನಾಪತ್ತೆಯಾಗುತ್ತಾರೆ.
9. ಎನಿ ಡೆಸ್ಕ್, ಟೀಮ್ ವ್ಹೀವರ್, ಕ್ವಿಕ್ ಸಪೋರ್ಟ್
ಇತ್ತೀಚಿನ ದಿನಗಳಲ್ಲಿ ವಂಚನೆಗೆಂದು ಆರೋಪಿಗಳು, ನಾನಾ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಎನಿ ಡೆಸ್ಕ್, ಟೀಮ್ ವ್ಹೀವರ್, ಕ್ವಿಕ್ ಸಪೋರ್ಟ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಹೇಳುವ ವಂಚಕರು, ಜನರ ಮೊಬೈಲ್ ವಿಂಡೊದ ಕಾರ್ಯಾಚರಣೆ ತಿಳಿದುಕೊಂಡು ಕ್ಷಣಮಾತ್ರದಲ್ಲಿ ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಾರೆ
10. ಉದ್ಯೋಗದ ಹೆಸರಿನಲ್ಲಿ ವಂಚನೆ
ಪ್ರತಿಷ್ಠಿತ ಕಂಪನಿಗಳಲ್ಲಿ ‘ನೌಕರಿ ಇದೆ’ ಎಂದು ಅಭ್ಯರ್ಥಿಗಳಿಗೆ ಸಂದೇಶ ಕಳುಹಿಸುವ ಹಾಗೂ ಕರೆ ಮಾಡುವ ವಂಚಕರು, ನೋಂದಣಿ ಹಾಗೂ ಸಂದರ್ಶನ ಶುಲ್ಕವೆಂದು ಹೇಳಿ ಹಣ ಪಡೆದು ವಂಚಿಸುತ್ತಾರೆ.
11. ಸಿಮ್ ಕಾರ್ಡ್ ಬ್ಲಾಕ್ ಆಗಿದೆ ಎಂದು ವಂಚನೆ
ಏರ್‌ಟೆಲ್, ಬಿಎಸ್‌ಎನ್‌ಎಲ್ ಹಾಗೂ ಇತರೆ ಮೊಬೈಲ್ ಸೇವಾ ಕಂಪನಿಗಳ ಹೆಸರಿನಲ್ಲಿ ಸಂದೇಶ ಹಾಗೂ ಕರೆ ಮಾಡಿ ವಂಚಿಸುವ ತಂಡಗಳಿವೆ. ಮೊಬೈಲ್ ನಂಬರ್ ನವೀಕರಣ ಹಾಗೂ ಆಧಾರ್ ಕಾರ್ಡ್ ಜೋಡಣೆ ಮಾಡಬೇಕು ಎಂಬುದಾಗಿ ಹೇಳಿ ಖಾತೆಯಲ್ಲಿರುವ ಹಣ ದೋಚುತ್ತಾರೆ.
12. ನಕಲಿ ಖಾತೆ ಸೃಷ್ಟಿಸಿ ವಂಚನೆ
ಸಿನಿಮಾ ತಾರೆಯರು, ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು, ಪೊಲೀಸರು, ಪತ್ರಕರ್ತರು.... ಸೇರಿದಂತೆ ಹಲವರ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಖಾತೆ ಸೃಷ್ಟಿ. ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟವೆಂದು ಹೇಳಿಕೊಂಡು ಖಾತೆದಾರರ ಹೆಸರಿನಲ್ಲಿ ಸ್ನೇಹಿತರಿಂದ ಹಣ ವಸೂಲಿ ಮಾಡುವ ಜಾಲವಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.